ಯಾಕಾಯಿತು ನಿನ್ನ ಪರಿಚಯ ... ಅರೆಕಾಲದ ಖುಷಿಗಾಗಿ ...
ನನ್ನದೇ ಆದ ಪ್ರಪಂಚ . ತುಂಬಿ ತುಳುಕವ ಖುಷಿ. ನಕ್ಕಷ್ಟು ಇಮ್ಮಡಿಯಲ್ಲಿ ನಗು. ಅಲ್ಲಿ ನಾನು. ನನ್ನದೊಂದು ದೊಡ್ಡ ಅವಕಾಶ . ಯಾರಿಗೂ ಸೋತಿದ್ದಿಲ್ಲ , ಬಗ್ಗಿದ್ದಿಲ್ಲ. ನಡೆದಿದ್ದೇ ದಾರಿ. ಕಂಡಷ್ಟೂ ನನ್ನದೇ. ಪುಟಿಪುಟಿಯುವ ಜೀವ ಸೆಲೆಯಲ್ಲಿ ಆರಾಮಾಗಿದ್ದೆ ನಾನು...
ನಿನ್ನ ಅಸ್ತಿತ್ವ ಗೊತ್ತಾದಾಗ ...
ನನ್ನ ಪ್ರಪಂಚದ ಬಹು ಭಾಗ ನೀನಾದೆ.ನಿನ್ನಿಂದ ಬೆಳಗು.. ನಿನ್ನೊಂದಿಗೆ ಮುಗಿವ ಇರುಳು. ನಿನ್ನವೇ ಮಾತುಗಳು.. ನೀ ಕೊಟ್ಟರೆ ಮಾತ್ರ ಅಲ್ಲಿ ಮೌನಕ್ಕೆ ಆಸ್ಪದ . ನಿನಗಾಗಿ ಇಲ್ಲದ ಛಲ .. ಎಲ್ಲ ಗೆಲ್ಲಬಲ್ಲೆ ಎಂಬ ಹಂಬಲ. ಪ್ರಪಂಚ ಎದುರಾದರೂ ನಿನ್ನ ಜೊತೆಯಿದೆ ಎಂಬ ಬೆಂಬಲ. ಖುಷಿಯಾಗಿದ್ದೆ ನಾನು ...
ನಿನ್ನ ಅಸ್ತಿತ್ವ ಇದ್ದೂ ಇಲ್ಲದಂತಾದಾಗ ...
ನನ್ನ ಪ್ರಪಂಚವೇ ಖಾಲಿಯಾದಂತೆ ಭಾಸ. ತುಂಬಿಕೊಂಡಿದ್ದ ಖುಷಿಯೀಗ ತೂತು ಮಡಿಕೆಯಲ್ಲಿನ ನೀರು. ಸಂಜೆಗಳಿಗೆಲ್ಲ ಮೌನದ ಹೊದಿಕೆ. ಕಂಡ ಕನಸುಗಳೆಲ್ಲ ಕಾದ ಗಾಜಿನಂತೆ. ಕಣ್ಣೀರಿಗೂ ಹೊರಬರಲು ಭಯ. ಬೊಗಸೆಯೊಡ್ಡಿಯೂ ಗೊತ್ತಿಲ್ಲದ ನಾನು ಎರಡೂ ತೋಳು ಚಾಚಿ ನಿಂತಿದ್ದೆ ನಿನ್ನ ಮುಂದೆ. ಸೋಲೇ ಗೊತ್ತಿಲ್ಲದ ನಾನೆಂಬ ನಾನು ಸೋತಿದ್ದೆ ..
ನಿನ್ನ ಅಸ್ತಿತ್ವವೇ ಇಲ್ಲದಂತಾದಾಗ ...
ನಾನೇ ಕುಸಿದಂಥ ಭಾವ . ನನ್ನ ಪ್ರಪಂಚ ಖಾಲಿ ಖಾಲಿ. ಕಣ್ಣೀರು ಖಾಲಿಯಾಯ್ತಾ? ಗೊತ್ತಿಲ್ಲ . ಅಳು ಬರಲೇ ಇಲ್ಲ. ಮಾತಿದೆಯಾ? ಗೊತ್ತಿಲ್ಲ . ಮೌನ ಸಹನೀಯ. ಬಡಿಯುತ್ತಿರುವ ಹೃದಯ ಬಂಡೆಯಾಗಿದೆ. ಹೆಪ್ಪುಗಟ್ಟಿದ ಹನಿಗಳದು ಹೊರಬಲಾರೆನೆಂಬ ಮುಷ್ಕರ. ಮುಚ್ಚ್ಹಿದ ಕತ್ತಲ ಬಾಗಿಲಾಚೆಗೊಂದು ಬೆಳಕಿರಬಹುದಾ ? ಆ ಬೆಳಕಿನಲ್ಲಿ ನೀನಿರಬಹುದಾ ? ಎಂಬ ಭ್ರಮೆಯಲ್ಲಿ ಸತ್ತು ಬದುಕುತ್ತಿದ್ದೇನೆ; ಕನಸುಗಳು ಉಸಿರಾಡುತ್ತಿವೆಯಲ್ಲ....