ಖುಷಿಯಾಗುತ್ತಿದೆ . ಗೆಳೆಯ ಗೆಳತಿಯರೆಲ್ಲ ಹೊಸ ಬಾಳಿಗೆ ಅಡಿ ಇಡುತ್ತಿದ್ದಾರೆ . ನವೆಂಬರ್ 28 ರಿಂದ ಡಿಸೆಂಬರ್ 18 ರವರೆಗಿನ ಸರಿ ಸುಮಾರು 7 ರಿಂದ 8 invitation card ಗಳು ನನ್ನ ಕೈಲಿವೆ . ಮದುವೆಯೆಂದರೆ ... ಅಂತ ಶುರು ಮಾಡಿ ಅದರ ಆದಿ ಅಂತ್ಯದವರೆಗೆ ಬರೆದು ಇತಿಶ್ರೀ ಹಾಡಿ ಎಲ್ಲರನ್ನು bore ಹೊಡೆಸಲಾರೆ .
"ಪ್ರತಿದಿನವೂ ಹೊಸ ಕುತೂಹಲಗಳೊಂದಿಗೆ ಶುರುವಾಗಿ , ನಾಳೆಯೆಡೆಗೊಂದಿಷ್ಟು ಕುತೂಹಲ , ಕನಸುಗಳನ್ನು ಕೊಡುತ್ತಾ ಸಶೇಷವಾಗಲಿ ಬದುಕು .. "
ಗೆಳತಿ ಮಮತಾಳ ಮದುವೆ ಕರೆಯೋಲೆಗಾಗಿ ಒಂದೆರಡು ಸಾಲುಗಳನ್ನು ಗೀಚಿದ್ದೆ. ಅದರೊಂದಿಗೆ ಎಲ್ಲ ಗೆಳೆಯ ಗೆಳತಿಯರಿಗೂ , ಅವರೊಡನಾಡಿಯಾಗಿ , ಜೀವನಾಡಿಗಳಾಗಿ ಬರುವವರಿಗೂ ನನ್ನ ಪುಟ್ಟದೊಂದು ಹಾರೈಕೆಯಿದೆ
ಎದೆಯೆತ್ತರಕ್ಕೆ ಬೆಳೆದ ಮಗಳು ತೊಡೆಯೇರಿ
ಕುಳಿತಿರಲು ಹೊಸ ಬಾಳ ಪಯಣಕ್ಕೆ "ನಾಂದಿ"
ಮಂಟಪದಿ ಅಂತರಪಟ ಸರಿಯೇ "ಮಾಲೆ"ಗಳು
ಬದಲಾಗಲು ಭಾವದಲ್ಲೂ ಬದಲಾವಣೆ ..
"ತಾಳಿ" ತಾಳ್ಮೆಗೆ ಸಂಕೇತವಾದರೆ "ಪಾಣಿಗ್ರಹಣ"ದಿ
ಜೊತೆಯಿರುವ ಭರವಸೆ ...
ಲೆಕ್ಕಕ್ಕೆ ಏಳಾದರೂ ಲೆಕ್ಕವಿರದಷ್ಟು ಹೆಜ್ಜೆಗಳಿಗೆ
"ಸಪ್ತಪದಿ"ಯ ಮುನ್ನುಡಿ ..
ಹೊಸ ಸಂಸ್ಕಾರಕ್ಕೆ "ಅಗ್ನಿಸಾಕ್ಷಿ "
"ವರಪೂಜೆ" ಯಲ್ಲಿ ಅಳಿಯ ದೇವರಾದರೆ
ಗೃಹಲಕ್ಷ್ಮಿಯಾಗಿ "ವಧುಪ್ರವೇಶ" ..
ಅಕ್ಷತೆಯೊಂದಿಗೆ ಅಕ್ಷಯವಾಗಲಿ ಬದುಕು .. ಜೀವನದಿಯಾಗಲಿ ಪ್ರೀತಿ ..