ನಿನ್ನದೇ ಚಿತ್ರ ತೂಗು ಹಾಕಿದ ಹೃದಯದ ತೀರಾ ಒಳಕೋಣೆಗೆ ಕದವಿಕ್ಕಿ ಬರುತ್ತೇನಾದರೂ ಬೀಗ ಹಾಕಲು ಯಾಕೋ ಮನಸ್ಸಾಗುವುದಿಲ್ಲ. ಯಾಕೆಂದರೆ ನಿನ್ನ ನೆನಪುಗಳು ಬಂದಾಗ ಬೀಗ ತೆಗೆಯುವಷ್ಟೂ ತಾಳ್ಮೆಯಿರುವುದಿಲ್ಲ ನನ್ನಲ್ಲಿ. ಅಷ್ಟು ಧಾವಂತದಲ್ಲಿರುತ್ತೇನೆ ನಿನ್ನ ಮುಂದೆ ಮಂಡಿಯೂರಲು. ನೀನೊಂಥರ "ಗೆಳೆಯಾ ಎಂದರೆ ಅದಕೂ ಹತ್ತಿರ .. ಇನಿಯಾ ಎಂದರೆ ಅದಕೂ ಎತ್ತರ" .. ನಿನ್ನನ್ನು ಸಂಬೋಧಿಸಲು ಶಬ್ದಗಳಿಲ್ಲ, ಹಾಗಾಗಿ ಸಂಬಂಧಕ್ಕೊಂದು ಹೆಸರಿಡದೆಯೇ ಹಾಗೆ ಇದೆ.
ನಿನ್ನ ಪರಿಚಯ ಆಕಸ್ಮಿಕವೇನಲ್ಲ. ಕ್ಲಾಸ್ ಮೇಟ್ ಗಳಾಗಿದ್ದವರು ನಾವು. ಆದರೆ ಖಂಡಿತ ನಿನ್ನ ಮುಖ ಪರಿಚಯವಿರಲಿಲ್ಲ, ಯಾಕೆಂದರೆ ನೀ ಕ್ಲಾಸ್ ಕಡೆ ಮುಖ ಹಾಕಿದವನೇ ಅಲ್ಲವಲ್ಲ. ಅವತ್ತೊಂದಿನ ಯಾವುದೋ ಕಾದಂಬರಿ ಓದುತ್ತಾ ಕುಳಿತವಳ ಬಳಿ ಬಂದವನು, ನಾನು "ಪಿಆರ್" , ಶ್ರೀ ಮತ್ತು ಜಾನು ನಿನ್ನ ಬಗ್ಗೆ ಹೇಳ್ತಾ ಇರ್ತಾರೆ, ಅಂತ ಎದುರು ಬಂದಿದ್ದೆ. ನಿನ್ನ ಬಗ್ಗೆ ನನಗೂ ಕೇಳಿ ಗೊತ್ತಿತ್ತು ಆದ್ದರಿಂದ ನಾನು .. ಎಂದು ಶುರು ಮಾಡುವ ಮೊದಲೇ ನೀನೇ " ದೇವಯಾನಿ " ಎಂದಿದ್ದೆ. ನನ್ನ ಹೆಸರು ಅದಲ್ಲ ಎಂದವಳಿಗೆ " ನಿನ್ನ ಕಿವಿ ಜುಮುಕಿ , ಕೆನ್ನೆ ತಾಕುವ ಕೂದಲುಗಳಿವೆಯಲ್ಲ ತುಂಬಾ ಇಷ್ಟವಾಯ್ತು ನಂಗೆ, ಅದ್ಯಾಕೋ ಯಯಾತಿಯಲ್ಲಿನ ದೇವಯಾನಿ ನೆನಪಾದಳು. ಇನ್ನೊಂದು ಏನು ಗೊತ್ತಾ ನನ್ನಮ್ಮನ ಹೆಸರು ಬಿಟ್ಟರೆ ಜಗತ್ತಿನಲ್ಲಿ ನಾನಿಷ್ಟ ಪಟ್ಟ ಇನ್ನೊಂದು ಹೆಸರು ದೇವಯಾನಿ. ನಿನ್ನ ನಿಜ ಹೆಸರು ಗೊತ್ತಿದ್ದರೂ ನಾ ನಿನಗೆ ದೇವಯಾನಿ ಎಂದೇ ಕರೆಯುತ್ತೇನೆ" ಎಂದಿದ್ದೆ. ಅವತ್ತಿನಿಂದ ನಿನಗೆ ನಾ ದೇವಯಾನಿಯೇ ಆಗಿದ್ದೆ. ಆದರೆ ನಾವಿಬ್ಬರೇ ಇದ್ದಾಗ ಮತ್ತು ಮೆಸೇಜ್ ಗಳಲ್ಲಿ ಮಾತ್ರ ನೀ ಹಾಗೆ ಕರೆಯುತ್ತಿದುದು. ಎಲ್ಲರೆದುರು ಎಲ್ಲರಂತೆ ನಿನಗೂ "ಚಂದು " ನಾನು. ಆಮೇಲೆ ಜಾನು , ಶ್ರೀ, ನಾನು , ರಾಘು, ವಸು, ನೀನು, ಪ್ರವಿ ಎಲ್ಲ ಒಂದು ಗ್ರೂಪ್ ಆಗಿಬಿಟ್ಟಿದ್ವಿ. ಕಾಲೇಜ್ ಕಾರಿಡಾರ್ ನಲ್ಲಿ ಕಾಣದೇ ಇದ್ದ ನೀವೆಲ್ಲ ಕಾಲೇಜ್ ಗೆ ಬರುತ್ತಿದ್ದೀರಿ. " ಮಗಾ ಎಗ್ಸಾಮ್ ಮಾತ್ರ ಅಟೆಂಡ್ ಮಾಡ್ತಾ ಇದ್ದ ನೀನು ಈಗೇನೋ ಇಷ್ಟೊಂದು ಕಾಲೇಜ್ ಕಡೆ ಬರ್ತೀಯ " ಅಂತಾ ರಾಘು ಕೇಳಿದರೆ "ದೇವಯಾನಿಗಾಗಿ " ಅಂತ ನೀ ತಣ್ಣಗೆ ಉತ್ತರಿಸಿದ್ದರೆ ಹಾವು ತುಳಿದಂತಾಗಿತ್ತು ನಂಗೆ. ಗಾಬರಿಯಲ್ಲಿ ನಿನ್ನ ಕಡೆ ನೋಡಿದರೆ ನಿನ್ನ ತುಂಟ ಕಣ್ಣುಗಳು ನನ್ನ ನೋಡಿ ನಗುತ್ತಿದ್ದವು. ನಮ್ಮನೆಲ್ಲ ನಿಮ್ಮ ಮನೆಗೆ ಕರೆದುಕೊಂಡು ಹೋದಾಗಲೂ ಅಷ್ಟೇ, ಎಲ್ಲರನ್ನೂ ನೀನೇ ಪರಿಚಯಿಸಿದ್ದರೂ, ನಿನ್ನಮ್ಮ ನನ್ನ ನೋಡಿದವರೇ ಚಂದು ಅಲ್ವಾ ಗೊತ್ತು ಬಿಡು ಅಂದಾಗ ಗಾಬರಿಯಾಗಿತ್ತು ನಂಗೆ. ನೀ ಎಲ್ಲರಿಗೂ ಮನೆ ತೋರಿಸುತ್ತಿದ್ದರೆ ನಿಮ್ಮಮ್ಮ ನನ್ನನ್ನು ಅವರ ಕೋಣೆಗೆ ಕರೆದೊಯ್ದಿದ್ದರು. ಅಲ್ಲಿ ಗೋಡೆಗಿದ್ದ ನನ್ನದೇ ದೊಡ್ಡ ಫೋಟೋ ನಗುತ್ತಾ ನನ್ನನ್ನು ಸ್ವಾಗತಿಸಿದರೆ ವಿಸ್ಮಿತಳಾಗಿದ್ದೆ ನಾನು. ಅದು ಯಾವಾಗ ತೆಗೆದಿದ್ದು ಎಂದು ನಾನು ಯೋಚಿಸುತ್ತಿದ್ದರೆ ನಿಮ್ಮಮ್ಮ " ನನ್ನ ಮಗ ಇಷ್ಟ ಪಟ್ಟ ಹುಡುಗಿ ನೀನು , ನೀವಿಬ್ಬರೂ ಸೇರುವ ದಾರಿಯೇ ದೂರವಿದೆ, ಸೇರಿದ ಮೇಲೆಯೂ ನಡೆವ ದಾರಿ ಇನ್ನೂ ದೂರದ್ದು. ಸಂಯಮವಿರಲಿ, ಎಚ್ಚರವಿರಲಿ" ಎಂದರು. ನಿನ್ನಮ್ಮನ ಮಾತಿನಲ್ಲಿ ಪ್ರೀತಿಯ ಜೊತೆಗೆ ಎಚ್ಚರಿಕೆಯೂ ಇತ್ತು.
ನೀನು ಯಾವತ್ತೂ ನೀನಾಗೆ ಪ್ರೀತಿ ಎಂದು ಬಂದವನಲ್ಲ. ನೀನಾಗಿಯೇ ಯಾವತ್ತೂ ಪ್ರೀತಿಯನ್ನೂ ಹೇಳಿಕೊಳ್ಳಲೂ ಇಲ್ಲ. ಏಕಾಂತದಲ್ಲಿ ಮಾತಿಗೆ ಕರೆಯಲಿಲ್ಲ. ಏಕಾಂತದಲ್ಲಿ ಸಿಕ್ಕಾಗಲೂ ಕಾಡಲೂ ಇಲ್ಲ. ಶಟಲ್ ಆಡುವಾಗ ಎಲ್ಲರೆದುರೇ ದೇವಯಾನಿಯ ಬಗೆಗೆ ಕನಸುಗಳ ತೆರೆದಿಡುವಾಗ ಮನಸ್ಸೆಂಬೋ ನವಿಲು ಗರಿ ಬಿಚ್ಚಿ ಕುಣಿಯುತ್ತಿತ್ತು. ಆದರೆ ತೋರಿಸಿಕೊಳ್ಳುವಂತಿರಲಿಲ್ಲ. ಪ್ರೀತಿ , ಪ್ರತಿಷ್ಠೆಯ ನಡುವಿನ ಜೂಜಾಟದಲ್ಲಿ ಪ್ರೀತಿಗೆ ಸೋಲು ಎಂಬುದು ಚೆನ್ನಾಗಿ ಗೊತ್ತಿತ್ತು ನನಗೆ. ನನಗಿಂತಲೂ ಗಟ್ಟಿಯಾದ ಕನಸುಗಳು ನಿನಗಿದ್ದಾಗ ಅದನ್ನೆಲ್ಲ ಹಾಳು ಮಾಡುವ ಮನಸ್ಸಿರಲಿಲ್ಲ. ಅದಕ್ಕಾಗಿ ಉತ್ತರದ ವಿಷಯದಲ್ಲಿ ನಾ ಮೌನಿಯಾಗಿದ್ದೆ. ನೀನು ಕೂಡ ಎಂದಿಗೂ ಉತ್ತರ ಕೊಡು ಎನ್ನುವಂತೆ ನನ್ನ ಕೇಳಿರಲೇ ಇಲ್ಲ. ಕಾಲೇಜ್ ಮುಗಿಯಿತು. ಹೈಯರ್ ಸ್ಟಡಿಸ್ ಗಾಗಿ ಡೆಲ್ಲಿಗೆ ಹೋಗುವಾಗ ಮಾತ್ರ ನೀ ನನ್ನ ಕೇಳಿದ್ದೆ " ಏನು ಯೋಚಿಸಿದ್ದೀಯ ?" ಎಂದು. ಆ ಮುಸ್ಸಂಜೆಯಲ್ಲಿ ಸುಮ್ಮನೆ ನಿನ್ನ ಕೈ ಅದುಮಿ ಬಸ್ಸಿಂದ ಇಳಿದು ಬಂದವಳಲ್ಲಿ ಯಾವ ಭಾವನೆಗಳಿದ್ದವೋ ಇಂದಿಗೂ ಗೊತ್ತಿಲ್ಲ. ಅದನ್ನು ನೀನೇನೆಂದು ಅರ್ಥೈಸಿಕೊಂಡೆಯೋ ಅದೂ ಗೊತ್ತಿಲ್ಲ. ನಾನು ನನ್ನದೇ ಆದ ಹುಡುಕಾಟಗಳಲ್ಲಿ ಕಳೆದು ಹೋದರೆ ನೀ ನಿನ್ನ ಕನಸುಗಳಲ್ಲಿ ಕಳೆದು ಹೋದೆ. ಅದೆಷ್ಟೋ ತಿಂಗಳುಗಳು ಮಾತುಗಳಿಲ್ಲದೆ ಕಳೆದುಹೋಗಿದ್ದವು. ಅಪರೂಪಕ್ಕೆಲ್ಲೋ ಮಾಡುವ ಕಾಲ್ ನಲ್ಲೂ ಕೂಡಾ ನಮ್ಮ ನಮ್ಮ ಕೆಲಸ , ಓದಿನ ಬಗ್ಗೆ ಮಾತುಗಳಿರುತ್ತಿದ್ದವು. ಈ ಹುಡುಗ "ದೇವಯಾನಿ" ಯನ್ನು ಮರೆತಿದ್ದಾನೆ ಎಂದುಕೊಂಡಿದ್ದೆ. ಆದರೆ ಕೊನೇ ಭೇಟಿಯಲ್ಲಿ ನೀನು " ಇನ್ನೊಂದೇ ಹೆಜ್ಜೆ ಕಣೆ ಗುರಿಗೆ, ಆಮೇಲೆ ಬಂದು ನನ್ನ ದೇವಯಾನಿಯನ್ನು ಕರೆದುಕೊಂಡು ಹೋಗುತ್ತೇನೆ " ಎಂದಾಗ ಅದೆಂಥ ಹುಚ್ಚು ಪ್ರೀತಿಯೋ ಹುಡುಗಾ ನಿನ್ನದು ಎನಿಸಿತ್ತು. ಆದರೆ ವಿಧಿ ಬೇರೆಯದಿತ್ತು ಬಿಡು. ವಾಪಸ್ ಹೋದವನು accident ಗೆ ಬಲಿಯಾಗಿದ್ದೆ. ಬರುತ್ತೇನೆ ಎಂದು ಹೇಳಿ ಹೋದವನು ಮರಳಿ ಬಾರದ ಲೋಕಕ್ಕೆ ಹೋಗಿದ್ದೆ. ಸೇರುವ ಮೊದಲೇ ದಾರಿ ಮುರಿದು ಬಿದ್ದಿತ್ತು.
ನಿನ್ನ ಸಾವಿನ ಸುದ್ದಿಯನ್ನು ಕೇಳಿದವಳು, ಅಮೇಲೇನನ್ನೂ ಯಾರ ಬಳಿಯೂ ಕೇಳಿಲ್ಲ. ನಿನ್ನ ಸಾವನ್ನು ಒಪ್ಪಿಕೊಳ್ಳಲು ಆಗಲೇ ಇಲ್ಲ ನನ್ನಿಂದ. ಜಾನು , ಶ್ರೀ,ರಾಘು, ವಸು, ಪ್ರವಿ ನಿನ್ನ ನೆನಪು ಮಾಡಿಕೊಳ್ಳುತ್ತಾರೆ. ಆಗೆಲ್ಲ ನನಗೆ ಅಪರಾಧಿ ಪ್ರಜ್ಞೆ ಕಾಡುತ್ತೆ. ಆಗಲೇ ಒಪ್ಪಿಕೊಂಡು ಬಿಡಬೇಕಿತ್ತಾ ಎನಿಸುತ್ತದೆ. ಒಂದು ವೇಳೆ ಒಪ್ಪಿಕೊಂಡಿದ್ದರೆ ಇವತ್ತಿಗೆ ನನ್ನ ಬದುಕು ಏನಾಗುತ್ತಿತ್ತು ಎಂದು ಯೋಚನೆ ಬಂದರೆ ಸ್ವಾರ್ಥಿಯಾಗುತ್ತೇನೆ ನಾನು ಎನಿಸುತ್ತೆ. ಆದರೆ ಒಪ್ಪಿಕೊಂಡರೂ ಒಪ್ಪಿಕೊಳ್ಳದಿದ್ದರೂ ಅದು ವಾಸ್ತವ. ಮೊನ್ನೆ ನಿಮ್ಮ ಮನೆಗೆ ಹೋಗಿದ್ದೆ. " ಮುಕ್ತಾ ಮೇಡಂ ಮನೆ ಖಾಲಿ ಮಾಡಿದ್ದಾರಂತೆ, ಅಲ್ಲಿ ಬೇರೆ ಯಾರೋ ಬಾಡಿಗೆಗಿದ್ದಾರಂತೆ " ಅಂತ ವಸು ಹೇಳಿದ್ದರೂ ಆ ಮನೆಯ ಬಾಗಿಲು ಬಡಿದಿದ್ದೆ. ನಿಮ್ಮಮ್ಮನೆ ಬಾಗಿಲು ತೆಗೆದಾಗ ಖುಷಿಯಾಯ್ತು. ಅವತ್ತಿನದೇ ಪ್ರೀತಿಯಲ್ಲಿ ಬರಮಾಡಿಕೊಂಡರು. ನಿನ್ನ ಬಾಸ್ಕೆಟ್ ಬಾಲ್, ಸ್ಕೇಟಿಂಗ್ ಷೂಸ್, ಬುಕ್ಸ್ , ಬ್ಯಾಗ್ ಎಲ್ಲವು ಅದರದರದೇ ಸ್ಥಾನಗಳಲ್ಲಿದ್ದವು. ಗೋಡೆಯಲ್ಲಿ ನನ್ನ ಫೋಟೋ ಹಾಗೆಯೇ ನಗುತ್ತಿತ್ತು. ಅದರ ಎದುರಿನ ಗೋಡೆಯಲ್ಲಿ ನಿನ್ನ ಮೂರು ಫೋಟೋಗಳು ನನ್ನನ್ನು ನೋಡುತ್ತಿರುವಂತೆ. ಅಲ್ಲಿ ನೋಡಿದವರಿಗೆ ನೀನಿಲ್ಲ ಎಂದು ಅನಿಸಲು ಸಾದ್ಯವೇ ಇರಲಿಲ್ಲ. ಅಲ್ಲಿ ನಿನ್ನ ಅಸ್ತಿತ್ವ ನಿರಂತರ ಅನಿಸಿತು. ನಾವು ಮಾತನಾಡಿದೆವು ಎನ್ನುವುದಕ್ಕಿಂತ ತುಂಬಾ ಹೊತ್ತು ಮೌನದಿಂದ ಇದ್ದೆವು ಅಂದರೆ ಸರಿ ಆಗುತ್ತೆ. ಹೊರಡುವ ಮುಂಚೆ ನನ್ನ ಫೋಟೋ ತೋರಿಸಿ ನಿನ್ನ ಅಮ್ಮನನ್ನು ಕೇಳಿದೆ "ಈ ಫೋಟೋ ತೆಗೆದುಕೊಂಡು ಹೋಗಲಾ? ನಾನು" ಅಂತ. ಅದಕ್ಕೆ ಅವರು ನಿನ್ನ ಫೋಟೋಗಳನ್ನು ತೋರಿಸಿ "ಆ ಫೋಟೋಗಳಲ್ಲಿ ಬೇಕಾದರೆ ಒಂದನ್ನು ತೆಗೆದುಕೋ. ಈ ಫೋಟೋ ನನ್ನ ಸೋಸೆಯದು, ಕೊಡೋಲ್ಲ " ಎಂದರು. ಓಡಿ ಹೋಗಿ ನಿಮ್ಮಮ್ಮನನ್ನು ತಬ್ಬಿಕೊಂಡೆ. ಅವರೂ ನನ್ನನ್ನು ಬಿಗಿಯಾಗಿ ತಬ್ಬಿಕೊಂಡರು. ಆ ಅಪ್ಪುಗೆಯಲ್ಲಿ ಬಹಳ ಮಾತುಗಳಿದ್ದವು. ಕೆಲವಷ್ಟು ಅರ್ಥವಾದವು, ಕೆಲವು ಆಗಲಿಲ್ಲ. ಅದರಲ್ಲಿ ನಿನಗೆ ಹೇಳಬೇಕಾಗಿದ್ದ ಮಾತುಗಳೆಷ್ಟಿದ್ದವೋ ???
******************************************************************
ಸಂಭ್ರಮದ ಎರಡು ವಸಂತಗಳು ಸಂಧ್ಯೆಯಂಗಳದಲ್ಲಿ ...
ಎಲ್ಲರ ಪ್ರೀತಿಗೆ ಋಣಿ ...
ಪ್ರೀತಿಯಿಂದ .... ಸಂಧ್ಯೆ ....