ಎದೆಯಂಗಳದಿ ನಿನ್ನ
ನೆನಪ ಕೊಳವ
ಕದಡುವ ಶಕ್ತಿ ಇರುವುದು
ಹೊರಗಡೆ ಸುರಿವ
ತುಂತುರು ಮಳೆಗೆ ಮಾತ್ರ ...
ಸಣ್ಣ ಸೋನೆ ಮಳೆ ನಿನ್ನ ನೆನಪ ದೀಪ ಹಚ್ಚುತ್ತದೆ. ಮೋಡದ ಮರೆಯ ರಾಜಕುಮಾರ ನೀನು. ಮೋಡ ನೋಡಲು ಹೋಗುತ್ತೇನೆಂದು ಅಮ್ಮನಿಗೆ ಹೇಳಿ ಊರಂಚಿನ ಗುಡ್ಡದಲ್ಲಿ ನಿನ್ನ ಭೇಟಿಯಾದ ದಿನಗಳು ಮತ್ತೆ ಬರಲಾರವಲ್ಲ. ಮುಗಿಲ ಮಾರಿಗ ರಾಗ ರತಿಯಾ ನಂಜ ಏರಿತ್ತ... ಎಂದು ನಾ ಹಾಡುವಾಗ ನನ್ನ ಮಡಿಲಲ್ಲಿ ಮಲಗಿ ನೀ ನನ್ನ ಕಿವಿ ಜುಮುಕಿಯೊಂದಿಗೆ ಆಡಿದ ದಿನಗಳು ನೆನಪುಗಳಲ್ಲಿ ಸೇರಿ ಹೋಗಿವೆ. ಯಾವುದೋ ಪರಿಸ್ಥಿತಿಯ ನೆಪ ಹೇಳಿ ನೀ ನನ್ನ ತೊರೆದು ಹೋದಾಗ ಪ್ರೀತಿ ಬೂದಿಯಾಗಿತ್ತು. ತೊರೆದು ಹೋಗದಿರು ಜೋಗಿ .. ಎಂದು ಕೊನೆಯ ಬಾರಿ ನಿನ್ನಹೆಗಲು ತಬ್ಬಿ ಹಾಡಿದ ಗಂಟಲು ಮೌನವಾಗಿದೆ. ದಿಬ್ಬದಂಚಲ್ಲಿ ನಿಂತರೆ ಮೋಡಗಳು ನಿನ್ನ ಸುದ್ದಿ ಹೇಳುವುದಿಲ್ಲ. ಇತ್ತೀಚಿಗೆ ಎಡವದಂತೆ ನಡೆಯುವುದನ್ನು ಕಲಿತಿದ್ದೇನೆ. ಎಡವಿದರೆ ಕೈ ಹಿಡಿಯಲು ನೀನಿಲ್ಲವಲ್ಲ. ಮೊನ್ನೆ ಮಳೆಯಲ್ಲಿ ನೆನೆಯುತ್ತಿದ್ದಾಗಲೂ ಊಹುಮ್ ನಿನ್ನ ನೆನಪಾಗಲೇ ಇಲ್ಲ. ಬಹುಶಃ ನೀ ಬದಲಾದಂತೆ ಇತ್ತೀಚಿಗೆ ನಾನೂ ಬದಲಾದಂತಿದೆ. ಬತ್ತಿ ಹೋದ ನಿನ್ನ ನೆನಪುಗಳು ನನ್ನನ್ನು ಗಟ್ಟಿಗೊಳಿಸಿದಂತಿದೆ.
ಇಷ್ಟು ಬರೆದು ಅವನಾಡಿದ ಜುಮುಕಿ ಮತ್ತು ಮುಗಿಲ ಮಾರಿಗ ರಾಗ ರತಿಯಾ ಹಾಡು ಬರೆದ ಹಾಳೆಯನ್ನು ಎಂದೋ ಮುಚ್ಚಿಟ್ಟಿದ್ದೆ. ಆದರೆ ಅದನ್ನು ನೀನು ಓದಿದ್ದೆ ಎಂಬುದನ್ನು ನೀನೇ ಮಡಚಿಟ್ಟ ಹಾಳೆಯ ಮಡಿಕೆಗಳು ಹೇಳುತ್ತಿದ್ದವು. "ಹೆಣ್ಣು ಪ್ರೀತಿಯ ವಿಷಯದಲ್ಲಿ ಸತ್ಯ ಹೇಳಬೇಕಂತೆ. ಗಂಡು ಸುಳ್ಳು ಹೇಳಬೇಕಂತೆ " ಅಂತ ಎಲ್ಲೋ ಕೇಳಿದ್ದೆ. ಹೇಳಿರದ ಸತ್ಯವೊಂದು ನಿನಗೆ ಗೊತ್ತಾಗಿತ್ತು. ತಪ್ಪು ಮಾಡಿಬಿಟ್ಟೆ ಅಂತ ಅನಿಸಲೇ ಇಲ್ಲ. ಸತ್ಯ,ಸುಳ್ಳನ್ನು ಮೀರಿದ ಒಂದು ನಂಬಿಕೆ ಕೈ ಹಿಡಿದಿತ್ತು. ಅವತ್ತಿನ ರಾತ್ರಿಯೇ ಅನ್ನಿಸಿತ್ತು ನಾಳೆ ಎಲ್ಲವೂ ಮೊದಲಿನಂತೆ ಇರುವುದಿಲ್ಲ ಎಂದು.
ಮರುದಿನದ ಬೆಳಗು ಬದಲಾಗಿತ್ತು. ನೀನೂ ಬದಲಾಗಿಬಿಟ್ಟಿದ್ದೆ. ಅದೆಷ್ಟು ಪ್ರೀತಿಸತೊಡಗಿಬಿಟ್ಟೆ ಆ ಹುಡುಗನೊಂದಿಗೆ ಜಿದ್ದಿಗೆ ಬಿದ್ದವನಂತೆ. ನನಗೆ,ನನ್ನ ಹಾಡುಗಳಿಗೆ ಮತ್ತೆ ಜೀವಕೊಟ್ಟೆ. ಮುಂಜಾನೆಯ , ಮದ್ಯಾಹ್ನದ , ಮುಸ್ಸಂಜೆಯ ರಾಗಗಳನ್ನು ಪೀಡಿಸಿ ಪೀಡಿಸಿ ರೆಕಾರ್ಡ್ ಮಾಡಿಸಿಕೊಂಡೆ. ಅದೆಷ್ಟೋ ರಾಗಗಳು ಸರಿರಾತ್ರಿಗಳಲ್ಲಿ ಸರಿದು ಹೋದವು. ಪಿಸುಮಾತುಗಳಾದವು. ಅದೆಷ್ಟೋ ಹಾಡುಗಳನ್ನು ನಿನಗಾಗಿಯೇ ಕಲಿತು ಹಾಡಿದೆ. ನನ್ನೊಳಗೊಂದು ಸಂಗೀತ ಬದುಕಾಗಿ ಜೀವತಳೆದು ನಿನ್ನ ಹೆಸರಿಟ್ಟುಕೊಂಡು ಬಿಟ್ಟಿತ್ತು. ನನಗೆ ನೀನಾಗುತ್ತಾ ಹೋದೆ. ನನ್ನೊಳಗೊಂದಾಗುತ್ತಾ ಹೋದೆ.
ಬೆಳಿಗ್ಗೆ ಎದ್ದರೆ ಬೆರಳ ತುದಿಯ
ನೆನಪು ನೀನು ...
ಕಣ್ಣುಮುಚ್ಚಿದರೆ ರೆಪ್ಪೆಯಂಚಿನ
ಕನಸು ನೀನು ..
ಎದೆ ಬಾಗಿಲ ರಂಗವಲ್ಲಿ ನೀನು ..
ಸೆರಗ ತುದಿಯ ನಾಚಿಕೆಯ
ಚಿತ್ತಾರ ನೀನು ...
ನೀನು ಮನದ ಮುಗಿಲ ತುಂಬಾ
ಬರೀ ನೀನು ...
ನಿನಗೆ ಸತ್ಯ ಗೊತ್ತಾದ ನಿರಾಳತೆಗೋ ಏನೋ ಆ ಹುಡುಗ ಕನಸಿಗೆ ಬರುವುದನ್ನು ನಿಲ್ಲಿಸಿಬಿಟ್ಟ ..!! ಮನಸ ಕಾಡುವುದನ್ನೂ ... ಅಲ್ಲೆಲ್ಲಾ ನೀನೇ ಆವರಿಸಿಕೊಳ್ಳುತ್ತಾ ಹೋದೆ. ಹೌದು ! ಮತ್ತೆ ಪ್ರೀತಿಯಾಗಿತ್ತು ನನಗೆ. ಮತ್ತೊಂದು ಹೊಸ ಕನಸು..
ಪ್ರೀತಿಯೆಂದರೆ ಏನೆಲ್ಲಾ ..
ಪ್ರೀತಿಯೆಂದರೆ ಏನೂ ಇಲ್ಲಾ ..
ಪ್ರೀತಿಯೊಳಗಡೆ ಏನಿಲ್ಲಾ ..
ಪ್ರೀತಿಯಿಂದಲೇ ಎಲ್ಲಾ ..
ಈ ಪ್ರೀತಿಗೆ ಹುಡುಕಿದಷ್ಟೂ
ಹೊಸ ಅರ್ಥಗಳಲ್ಲ ...
ಹೌದು ಹೊಸ ಹೊಸ ಅರ್ಥಗಳು ಪ್ರೀತಿಗೆ. ಬದುಕಲ್ಲಿ ಪ್ರೀತಿ ಒಮ್ಮೆ ಮಾತ್ರ ಆಗುತ್ತದೆ ಎಂಬುದು ಸುಳ್ಳಾ ? ಗೊತ್ತಿಲ್ಲ. ನಾನಂತೂ ಮತ್ತೆ ಘಾಡವಾಗಿ ಪ್ರೀತಿಸತೊಡಗಿದ್ದೆ. ಮನುಷ್ಯ ತಾನು ಕೊನೆವರೆಗೂ ಉಳಿಸಿಕೊಂಡಿದ್ದಕ್ಕೆ ಮಾತ್ರ ಪ್ರೀತಿ ಎಂದು ಹೆಸರಿಟ್ಟುಕೊಳ್ಳುತ್ತಾನೆ. ಅರ್ಧಕ್ಕೆ ಸತ್ತವುಗಳಿಗೆಲ್ಲ ತನ್ನ ದೌರ್ಬಲ್ಯ ದಾಟುವುದಕ್ಕಾಗಿ attraction, infatuation, one side love, wrong choice ಎಂಬೆಲ್ಲ ಹೆಸರಿಟ್ಟುಕೊಳ್ಳುತ್ತಾನೆ ಎನಿಸುತ್ತದೆ. ಅಮರ ಪ್ರೆಮಿಗಳೆನಿಸಿಕೊಂಡವರೆಲ್ಲ ಒಟ್ಟಿಗೆ ಸತ್ತರು.ಅದಕ್ಕಾಗಿಯೇ ಅವರ ಪ್ರೀತಿಗೆ "ಅಮರ ಪ್ರೀತಿ " ಎಂದು ಹೆಸರಾಯಿತೇನೋ. ಅವರಲ್ಲೂ ಒಬ್ಬರು ಸತ್ತು ಇನ್ನೊಬ್ಬರುಳಿದಿದ್ದರೆ ಆ ಪ್ರೀತಿ ಕೂಡ ,ಮೇಲಿನ ಯಾವುದಾದರೂ ಹೆಸರಿಟ್ಟುಕೊಂಡು ಸತ್ತು ಹೋಗುತ್ತಿತ್ತೇನೋ. ಪ್ರೀತಿಯ ಬಗೆಗೆ ಏನೇ ಗೊಂದಲಗಳಿದ್ದರೂ ನನಗಂತೂ ಮತ್ತೆ ಪ್ರೀತಿಯಾಗಿದೆ. ನಾನು ಸುಖಿ. ಉಳಿಸಿಕೊಳ್ಳಲಾಗದ ಕಾರಣಕ್ಕೆ ಹಳೆಯ ಪ್ರೀತಿಗೆ ಬೇರೇನೋ ಹೆಸರು ಕೊಡಲು ನಾನು ಸಿದ್ದಳಿಲ್ಲ. ಅವನೊಂದಿಗಿನ ಪಯಣಕ್ಕೋ , ಅವನಿಂದ ನಿನ್ನೆಡೆಗಿನ ಪಯಣಕ್ಕೋ ಹೆಸರು ಕೊಡುವ ಅಥವಾ ಹೆಸರಿಡುವ ಯಾವ ವ್ಯವಧಾನವೂ ಈಗ ಇಲ್ಲ ನನ್ನಲ್ಲಿ. ಈಗಿರುವುದು ನಿನ್ನ ಪ್ರೀತಿ ಮಾತ್ರ. ಆ ಪ್ರೀತಿ ಹೆಸರು ಬೇಡುತ್ತಿಲ್ಲ.
ನನ್ನೊಳಗಿನ ನಿನ್ನ ಪ್ರೀತಿಯನ್ನು ಉಳಿಸಿಕೊಳ್ಳಬೇಕಿದೆ. ಅತ್ತೆ ಮಾವರಿಗೆ ಕಾಣದಂತೆ ಅಡುಗೆ ಮನೆಯಲ್ಲಿ ನಿನಗೆ ಕದ್ದು ಕೊಡುವ ಮುತ್ತಲ್ಲಿನ ಪ್ರೀತಿ.. ಮುತ್ತಿನ ಲೆಕ್ಕ ತಪ್ಪಿದೆ ಎಂದು ಜಗಳ ಆಡುವ ಹುಸಿಮುನಿಸಲ್ಲಿನ ಪ್ರೀತಿ... ನೀ ಆಫೀಸ್ ಗೆ ಹೊರಡುವ ಮುನ್ನ ,
ನೀ ಬರುವ ದಾರಿಯಲ್ಲಿ
ಹಗಲು ತಂಪಾಗಿ ...
ಬೇಲಿಗಳ ಸಾಲಿನಲ್ಲಿ
ಹಸುರು ಕೆಂಪಾಗಿ ..
ಪಯಣ ಮುಗಿಯುವ ತನಕ ..
ಎಳೆಬಿಸಿಲ ಮಣಿಕನಕ
ಸಾಲು ಮರಗಳ ಮೇಲೆ
ಸೊಬಗ ಸುರಿದಿರಲಿ ..
ಎಂಬ ಕೆ ಎಸ್ ಏನ್ ಕವನ ಗೀಚಿದ ಹಾಳೆಯನ್ನು ನಿನ್ನ ಕಿಸೆಯಲ್ಲಿಟ್ಟು, ನಿನ್ನೆದೆಗೆ ಒರಗಿ I Love You ಎಂದುಸುರುವ ಪ್ರೀತಿ. ಆಫೀಸ್ ನಿಂದ ಬಂದು fresh up ಆಗಲು ಕೋಣೆಗೆ ಹೋಗುವ ಮುನ್ನ "ನೀನೊಮ್ಮೆ ಬಾರೆ " ಎಂದು ಕಣ್ಣಲ್ಲೇ ಕರೆಯುವ ಆ ನಿನ್ನ ಪ್ರೀತಿ ಈ ಎಲ್ಲವನ್ನೂ ಹೀಗೆ ಹೀಗೆ ಉಳಿಸಿಕೊಳ್ಳಬೇಕಿದೆ. ಅಂದ ಹಾಗೆ ಹುಡುಗಾ ಇತ್ತೀಚೀಗೆ ಕನಸಿಗೆ ಬರುವುದನ್ನೇಕೇ ನಿಲ್ಲಿಸಿದ್ದೀಯಾ ?
ಪಕ್ಕದಲ್ಲೇ ಮಲಗಿರುತ್ತೀಯ
ಎಂದ ಮಾತ್ರಕ್ಕೆ
ಕನಸಿಗೆ ಬರಲು ನಿನಗೇಕೆ ಮುನಿಸು ?
ಕನಸಲ್ಲೂ ನಿನ್ನ ಜೋತೆಗಿರಬೇಕೆಂಬ ..
ಕನಸಲ್ಲೂ ನಿನ್ನ ಕಳೆದುಕೊಳ್ಳಲೊಲ್ಲದ..
ಹಠಮಾರಿ ಮಗು ನನ್ನ ಮನಸ್ಸು ...
(೧೪-೦೨-೨೦೧೪ ರ ಅವಧಿಯಲ್ಲಿ ಪ್ರಕಟವಾಗಿತ್ತು. Thank you ಅವಧಿ ..)