ಪ್ರೀತಿಯೆಂದರೆ ಏನೆಲ್ಲಾ...
ಪ್ರೀತಿಯೆಂದರೆ ಏನೂ ಇಲ್ಲಾ ...
ಪ್ರೀತಿಯೋಳಗಡೆ ಏನಿಲ್ಲ..??
ಪ್ರೀತಿಯಿಂದಲೇ ಎಲ್ಲ ...
ಈ ಪ್ರೀತಿಗೆ ಹುಡುಕಿದಷ್ಟೂ ಹೊಸ ಅರ್ಥಗಳಲ್ಲ..??
ಪ್ರೀತಿ ,ಸ್ನೇಹ , ಶಾಂತಿ ಶಬ್ದಗಳನ್ನು ಸೋದರಿಕೆಯ ಸಂಬಂಧದಂತೆ ಬಳಸುತ್ತಾರೆ .ಆದರೂ ಪ್ರೀತಿಗಾಗಿ ಯುದ್ಧಗಳಾಗುತ್ತವೆ. ಶಾಂತಿ ಕದಡುತ್ತವೆ. ರಕ್ತಪಾತಗಳಾಗುತ್ತವೆ . ಪ್ರೀತಿ ಸಂಬಂಧಗಳನ್ನು ಬೆಸೆಯುತ್ತದೆ ಅಂತಾರೆ ಅದರೂ ರಕ್ತ ಸಂಬಂಧಗಳನ್ನು ಕಳೆದುಕೊಳ್ಳುತ್ತಾರೆ.
ಕಾಮವೆಂಬುದು ಪ್ರೀತಿಯ ಉತ್ತುಂಗತೆ ಅಂತಾರೆ. ಆದರೆ ಅತ್ಯಾಚಾರದಂತಹ ಕೃತ್ಯಗಳಲ್ಲಿ ಪ್ರೀತಿಯ ಲವಲೇಶವೂ ಕಾಣದಿರುವಾಗ ಉತ್ತುಂಗತೆಯ ಪ್ರಶ್ನೆ ಎಲ್ಲಿ ಬಂತು ? ಅಂತಹ ಮೃಗೀಯ ಕೃತ್ಯಗಳಲ್ಲಿ ದೈವಿಕತೆಯನ್ನು ಹುಡುಕಲು ಸಾಧ್ಯವಾ? ಪ್ರೀತಿ ದೈವವೆಂದರೆ ನಂಬಬೇಕಾ ?
ಪ್ರೀತಿ ಸರ್ವವ್ಯಾಪಿ ಅಂತಾರೆ. ಆದ್ರೆ ಪ್ರೀತಿಗೆ ಚೌಕಟ್ಟು ಹಾಕಿಟ್ಟುಕೊಳ್ಳೋಕೆ ನೋಡ್ತಾರೆ.
ಪ್ರೀತಿನಾ ಪ್ರೀತಿಯಿಂದ ಪ್ರೀತ್ಸಿ ಅನ್ನೋರೆಲ್ಲ ಆಮೇಲೆ ಪ್ರೀತಿನಾ ಅಧಿಕಾರದಿಂದ ಪ್ರೀತಿಸುತ್ತಾರೆ.
ನಿಸ್ವಾರ್ಥ ಪ್ರೀತಿ ಅನ್ನೋರೆಲ್ಲ ಪ್ರೀತಿಸುತ್ತಾ ಸ್ವಾರ್ಥಿಗಳಾಗಿ ಬಿಡ್ತಾರೆ.
ಪ್ರೀತಿ ಪವಿತ್ರ .. ಪ್ರೀತಿ ಪಾವನ ಅಂತಾರೆ.. ಆದರೂ ಪಾರ್ಕ್ ಗಳಲ್ಲಿ ಅಸಭ್ಯವಾಗಿ ಪ್ರೀತಿಯ ಮಾನ ತೆಗೆಯುತ್ತಾರೆ.
ನಿನ್ನೆ ತಾನೇ ಪ್ರೀತಿಯ ಹಬ್ಬ ಮುಗಿದಿದೆ. ಪ್ರೀತಿಸುವವರಿಗೆ ಪ್ರತಿದಿನವೂ ಪ್ರೇಮಿಗಳ ದಿನವೇ ಎಂದರೂ ಅದೇನೋ ಒಂದು ಸಣ್ಣ ಆನಂದ ಎಲ್ಲಿಂದಲೋ ಮೈ ತಾಕಿರುತ್ತದೆ ಫೆಬ್ರವರಿ ೧೪ ರಂದು. ಇದು ನಮ್ಮ ಆಚರಣೆಯಲ್ಲ , ಇದು ಸರಿಯಲ್ಲ ಎಂದು ಯಾರೇನೇ , ಎಷ್ಟೇ ಬಾಯಿ ಬಡಿದು ಕೊಂಡರೂ ಪ್ರೀತಿಯ ಸಂಭ್ರಮಕ್ಕೇನೂ ಕೊರತೆ ಇಲ್ಲ. ಧರಿಸುವ ಉಡುಪುಗಳ ಬಣ್ಣಗಳಿಗೆಲ್ಲ ಒಂದೊಂದು ಅರ್ಥ.ಅಲ್ಲಲ್ಲೇ ರೇಗಿಸುವ ಗೆಳತಿಯರ ಗುಂಪು. ಅದೆಷ್ಟು ಸಂಭ್ರಮದ ಹೊಳಪು ಕಣ್ಣಲ್ಲಿ. ಮನದಲ್ಲಿ , ಪ್ರೀತಿ ಸಿಕ್ಕ ಖುಷಿ , ಪ್ರೀತಿ ಉಳಿದ ಖುಷಿ , ಮುನಿಸು ಮರೆತು ಒಂದಾದ ಖುಷಿ. ಅಬ್ಬಾ ..!! ಪ್ರೀತಿಯೆಂದರೇ ಖುಷಿ ..
ನಿನ್ನೆ ಎಂದಿನಂತೆ ಆಫೀಸ್ ಮುಗಿದು ಪಿ ಜಿ ಸೇರಿದರೆ ಒಬ್ಬೊಬ್ಬರದು ಒಂದೊಂದು ಭಾವ, ಸಂತೋಷ , ದುಃಖ ಎಲ್ಲವು ಸಿಕ್ಕಿದ್ದು. ಅವನ ಮೊದಲ ಉಡುಗೊರೆ ಇದು ಎಂದು ಕಣ್ಣು ಮಿಟುಕಿಸಿದ್ದು ಒಬ್ಬಳಾದರೆ, stupid ನೋಡು ನಂಗಿಷ್ಟ ಆಗದೆ ಇರೋ ಕಲರ್ ಡ್ರೆಸ್ ಕೊಟ್ಟಿದಾನೆ ಕೋತಿ ಅಂತ ಪ್ರೀತಿಯ ಕಂಪ್ಲೇಂಟ್ ಇನ್ನೊಬ್ಬಳ ಕಡೆಯಿಂದ. ಅದರೂ ಅವನಿಗಾಗಿ ಇದನ್ನ ಹಾಕೊಳ್ತೀನಿ.ಅವನಿಗಾಗಿ ಬದಲಾಗೊದ್ರಲ್ಲೇ ಖುಷಿ ಇದೆ ಅಂತ ಡ್ರೆಸ್ ಹಾಕಿಕೊಂಡು ಕನ್ನಡಿ ಮುಂದೆ..:) break up ಅಂತ mood upset ಆಗಿ ಕಣ್ಣಲ್ಲಿ ನೀರು ತುಂಬಿ ಕೊಂಡವಳೊಬ್ಬಳಾದರೆ, ಅಪ್ಪ ಅಮ್ಮನ ಒಪ್ಪಿಗೆಯ ಮುದ್ರೆ ಬಿತ್ತು ಕಣೆ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಅಪ್ಪಿಕೊಂಡಿದ್ದು ಇನ್ನೊಬ್ಬಳು. " ನೀರು ತುಂಬಿರುವ ಎಲ್ಲಾ ಕಣ್ಣುಗಳೂ ಪ್ರೀತಿ ಮುರಿದ ದುಃಖದಲ್ಲಿವೆ ಎಂದು ಭಾವಿಸಬೇಡ ; ಆ ಪ್ರೀತಿ ಸಿಕ್ಕಿರಲೂ ಬಹುದು " ಎಂದು ಎಲ್ಲೋ ಓದಿದ ನೆನಪು ಬಂತು. ದೂರದಲ್ಲಿನ ಪತಿ ಕಳಿಸಿದ ಟೆಡ್ಡಿ , ಚಾಕೊಲೇಟ್ ಖುಷಿ ಕೊಟ್ಟರೂ ಅವರು ಇದ್ದರೆ ಜೊತೆಗೆ it will be more romantic ಎನ್ನುತ್ತಾ ಮಿಸ್ ಮಾಡಿಕೊಳ್ಳುತ್ತಿದವಳು ಇನ್ನೊಬ್ಬಳು. ಅವನಿಗೆ ಓಕೆ ಅಂದೆ, ಪಾಪಿ ಕೊನೆಗೂ ಸೋಲೋ ಹಾಗೆ ಮಾಡಿಬಿಟ್ಟ , ಛೇ ನಂಗೆ ಇದು ಬೇಡವಾಗಿತ್ತು ಕಣೆ ಅಂತಾಳೆ ಮತ್ತೊಬ್ಬ ಗೆಳತಿ. ಬೇಡವೆಂದರೆ ಬಿಡೆ ಅಂದರೆ , ಹೋಗೆ ನೀ ಪ್ರೀತಿ ಮಾಡು ಗೊತ್ತಾಗತ್ತೆ ಅಂತ ಗುರ್ ಅನ್ನೋದು ಬೇರೆ. ಇನ್ನು single ಆಗಿದ್ದವರಿಗಂತೂ ಎಷ್ಟು proposals ಬಂತು ?? ಯಾರು rose ಕೊಟ್ಟಿಲ್ಲವಾ ?? are you still single ?? ಅಂತಾ ಕಣ್ಣರಳಿಸುತ್ತಾ questions ಗಳ ಸುರಿಮಳೆ.
ಲವ್ ಅಂದ್ರೆ ಬರಿ ಹುಡುಗ ಹುಡುಗಿ ನಡುವೆ ಮಾತ್ರಾನ ? ಎಷ್ಟು ಜನ ಅಪ್ಪ ಅಮ್ಮಂಗೆ, freinds ಗೆ,ಅಣ್ಣ , ಅಕ್ಕ ,ತಮ್ಮ, ತಂಗಿಗೆ wish ಮಾಡಿದ್ರಿ ಅಂತ ಇನ್ನೊಬ್ಬಳ ಪ್ರಶ್ನೆ. its all over buddy .. cheer up .. ನಾವೆಲ್ಲಾ ಇದೀವಿ. ತಪ್ಪು ಯಾರದೇ ಇದ್ರೂ ಆ ಪ್ರೀತಿ ಉಳಿಸಿಕೊಳ್ಳೋಕೆ ಇಬ್ಬರಿಂದಾನು ಆಗಿಲ್ಲ ಅಂದಮೇಲೆ ಕಣ್ಣೀರು ಹಾಕೊದೇಕೆ ಎಂಬ ಸಾಂತ್ವನದ ಮಾತುಗಳು. ಒಂದೇ ದಿನದಲ್ಲಿ ಎಷ್ಟೆಲ್ಲಾ ಭಾವ ಭಂಗಿಗಳನ್ನ ನೋಡಿದ್ದು . ಒಂದು colorful day ಬಣ್ಣ ಬಣ್ಣಗಳಲ್ಲಿ ಮುಗಿದ್ದು ನಿಜ ಎನಿಸಿತು .