Thursday, 16 October 2014

ಇಡಿಯಾದದ್ದು ಒಡೆದು ಹಿಡಿಹಿಡಿಯಾಗಿ...

ಮಿಡ್ಲ್ ಸ್ಕೂಲ್ ದಿನಗಳವು. ಅವನ ಕಣ್ಣುಗಳು ಬಹಳ ಇಷ್ಟವಾಗಿ ಬಿಟ್ಟಿದ್ದವು. ನೋಟಕ್ಕೆ ಪ್ರತಿ ನೋಟ , ಕಳ್ಳ ಸನ್ನೆಗಳಲ್ಲಿ ಹತ್ತಿರವಾಗಿ ಬಿಟ್ಟಿದ್ದೆವು. ಮಕ್ಕಳೆಲ್ಲಾದರೂ ಹಾದಿ ತಪ್ಪಿ ಬಿಟ್ಟರೆ ಎಂಬ ಕಾರಣದಿಂದ ಹಾಕಿದ ಪಾಲಕರ ಸರ್ಪಗಾವಲಿನಿಂದಾಗಿ ಪ್ರಯಾಸವಾಗಿ, ಭೇಟಿಯಾಗಬೇಕಿತ್ತು. ಯಾರಾದರೂ ನೋಡಿದರೆ, ಮನೆಯಲ್ಲಿ ಹೇಳಿಬಿಟ್ಟರೆ .. ಎಂಬ ಭಯ ಕಾಡುತ್ತಿತ್ತು. ಆ ಭಯದ ಭೇಟಿಗಳಲ್ಲೂ ಹಿತವಿರುತ್ತಿತ್ತು. ಪ್ರತಿ ಸಲವೂ ಮನೆಯವರನ್ನು ಗೆದ್ದೆನೆಂಬ ಅಹಂ ಭಾವವಿರುತ್ತಿತ್ತು.


ಪ್ರೇಮ ಪತ್ರಗಳ ವಿನಿಮಯ, ಸಣ್ಣ ಪುಟ್ಟ ಗಿಫ್ಟ್ ಗಳ ವಿನಿಮಯವೂ ನಡೆದಿತ್ತು. ಅವನು ಮುದ್ದಿಸಿದ್ದು , ಮುತ್ತಿಟ್ಟಿದ್ದೆಲ್ಲ ಪ್ರಥಮ ರೋಮಾಂಚನಗಳು. ಎಸ್ ಎಲ್ ಸಿಮುಗಿಸಿ ಬೇರೆ ಊರಿಗೆ ಹೊರಟವನು ಕೂಡ ಕತ್ತಿಗೆ ಮುತ್ತಿಕ್ಕಿ "ನೋಡು ನಾ ಕೊಟ್ಟ ಗಿಫ್ಟ್ ಮತ್ತು ಪತ್ರಗಳನ್ನೆಲ್ಲ ಜೋಪಾನವಾಗಿಟ್ಟುಕೋ. ನೀನೆ ನನ್ನ ಜೀವ" ಅಂತ ಹೇಳಿ ಹೊರಟಿದ್ದ . ಅದಾಗಿ ಮೂರು ವರುಷಗಳು ಅವನ ಪತ್ತೆಯಿಲ್ಲ. ಕಾಲೇಜಿನ ದಿನಗಳು. ಹೊಸ ಹೊಸ ಪರಿಚಯಗಳು. ಅದೆಷ್ಟೋ ಜನ ಪರಿಚಿತರಾದರೂ ಅವನು ಮಾತ್ರ ಮನಸಿನಿಂದ ದೂರವಾಗಿರಲೇ ಇಲ್ಲ. ಅದ್ಯಾವುದೋ ಹುಡುಗನ ಮೇಲೆ ಆ ಕ್ಷಣಕ್ಕೊಂದು ವಿನಾಕಾರಣದ ಆಕರ್ಷಣೆ ಮೊಳಕೆಯೊಡೆದರೂ, ಅದು ಕ್ಷಣಿಕವೇ ಆಗಿರುತ್ತಿತ್ತು. ಮನಸ್ಸಿನಲ್ಲಿ ಅವನೊಬ್ಬನಿಗೆ ಜಾಗವಿತ್ತು. ನನ್ನೊಳಗಿನ ಕೋಟೆಯಲ್ಲಿ ಅವನನ್ನು ಭದ್ರವಾಗಿರಿಸಿಕೊಂಡಿದ್ದೆ. ಯಾರನ್ನೂ ಗೆಳೆಯರನ್ನಾಗಿಸಿಕೊಳ್ಳಲಿಲ್ಲ. ಇದ್ದ ಹುಡುಗಿಯರು ಕೂಡ ಹಾಯ್ .. ಬಾಯ್ ಎನ್ನುವಂತೆ ಗೆಳತಿಯರಾಗಿದ್ದರು. ಅವನ ಪತ್ರಗಳು , ಗಿಫ್ಟ್ ಗಳ ಜೊತೆ ಅವನಿಗಾಗಿ ಕಾಯುತ್ತಿದ್ದವಳಿಗೆ ಅವೊತ್ತೊಂದು ದಿನ ಬಂತು ಒಂದು ಪತ್ರ. ಅವನದೇ ಪತ್ರಗಳಲ್ಲೇ ಉಸಿರಾಡಿಕೊಂಡಿದ್ದವಳಿಗೆ ಅವನ ಕೈ ಬರಹ ತಿಳಿಯದೇ ಇರಲಿಲ್ಲ. ಅಪ್ಪ ಅಮ್ಮಂದಿರ ಅನುಮಾನದ ದೃಷ್ಟಿ ನನಗಲ್ಲವೆಂಬಂತೆ ಓಡಿ ಹೋಗಿ ಬಾಗಿಲು ಹಾಕಿಕೊಂಡು ಓದಿದ್ದೆ . ಕುಶಲೋಪರಿಗಳ ಮಾತುಗಳಾದ ಮೇಲೆ ಊರಿಗೆ ಬಂದಿದ್ದೇನೆ. ನನಗಿರುವ ಏಕೈಕ ಸ್ನೇಹಿತೆ ನೀನು ಹಾಗಾಗಿ ನಿನ್ನನ್ನು ಭೇಟಿಯಾಗಬೇಕೆಂದು ಬರೆದಿದ್ದನ್ನು ಓದಿದಾಗ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂಥಹ ಖುಷಿ. ಅಲ್ಲಿ ಬರೆದಿದ್ದ "ಏಕೈಕ ಸ್ನೇಹಿತೆ " ಎಂಬ ಮಾತು ಖುಷಿ ಕೊಡುತ್ತಿತ್ತು.


ಹಳೆಯ ಸವಿಗಳ ಮೆಲಕು ಹಾಕುತ್ತಾ , ಅವನಲ್ಲಿಗೆ ಹೋದಾಗ ಯಾಕೋ ಹೃದಯ ಕಂಪಿಸುತ್ತಿತ್ತು. ನನ್ನೆಲ್ಲ ಖುಷಿಗಳೊಂದಿಗೆ , ಅವನ ಹಳೆಯ ಪತ್ರಗಳು , ಗಿಫ್ಟ್ ಗಳು ,ಅವನಿಗೆಂದೇ ಬರೆದ, ಪೋಸ್ಟ್ ಮಾಡದ ಪತ್ರಗಳು ,ಅವನಿಗಾಗಿ ತೆಗೆದುಕೊಂಡಿದ್ದ ಬರ್ತ್ ಡೇ ಗಿಫ್ಟ್ ಎಲ್ಲವನ್ನೂ ಅವನೆದುರು ಹರಡಿದಾಗ ಪುಟ್ಟ ಮಗುವೆಂಬಂತೆ ನೋಡಿದ್ದ ಅವನು ."ನೋಡು ಎಲ್ಲ ಎಷ್ಟು ಜೋಪಾನವಾಗಿಟ್ಟಿದ್ದೀನಿ, ನಿನ್ನನ್ನು ನನ್ನೆದೆಯಲ್ಲೇ ಹೀಗೆ ಜೋಪಾನ ಮಾಡುತ್ತೀನಿ, ಐ ಲವ್ ಯು ಕಣೋ" ಎಂದೆ. " ಸಿಲ್ಲಿ ಗರ್ಲ್ ಇದನ್ನೆಲ್ಲಾ ಇನ್ನೂ ಇಟ್ಕೊಂಡಿದೀಯಾ ? ಏನು ಬೆಲೆ ಬಾಳುತ್ತವೆ ಇವೆಲ್ಲ , ಗುಜರಿಗೆ ಹಾಕೊದಲ್ಲವಾ "ಎನ್ನುವ ಮಾತುಗಳು ಅವನ ಬಾಯಿಂದಲೇ ಬಂದದ್ದು ಎಂದು ಅರ್ಥಮಾಡಿಕೊಳ್ಳಲು ತುಂಬಾ ಕ್ಷಣಗಳೇ ಹಿಡಿದವು. ಸಣ್ಣಗೆ ಕಂಪಿಸುತ್ತಾ " ಅಲ್ಲ ಕಣೋ , ಅವತ್ತಿನ ಪ್ರೀತಿ , ನೀ ಮುದ್ದಿಸಿದ್ದು , ಮುತ್ತಿಟ್ಟಿದ್ದು ಇದಕ್ಕೆಲ್ಲ ಏನರ್ಥ ?"ಎಂದು ಮುಗ್ದತೆಯಿಂದ ಕೇಳಿದ್ದೆ .ಅದಕ್ಕೆ ಅವನು " ಯಾವ ಕಾಲದಲ್ಲಿದೀಯಾ ತಾಯಿ , ಅದೆಲ್ಲ ಆ ಏಜ್ ನ ಅಟ್ರ್ಯಾ ಕ್ಷನ್ ಅಷ್ಟೇ, ಗರ್ಲ್ಸ್ ತುಂಬಾ ಜನ ಫ್ರೆಂಡ್ಸ್ ಆಗಬಹುದು, ಆದ್ರೆ ಎಲ್ಲಾರು ಗರ್ಲ್ ಫ್ರೆಂಡ್ ಆಗೋದಿಕ್ಕೆ ಚಾನ್ಸ್ ಇಲ್ಲ .ಸುಮ್ನೆ ಈ ಪ್ರೀತಿ ಪ್ರೇಮ ಅಂತೆಲ್ಲ ತಲೆ ಕೆಡಿಸಿಕೊಳ್ಳಬೇಡ. ಓದಿನ ಕಡೆ ಗಮನ ಹರಿಸು. ನೀ ನನ್ ಫ್ರೆಂಡ್ ಅಷ್ಟೇ ಕಣೆ , ಯು ಆರ್ ಮೈ ಫ್ರೆಂಡ್ , ಅಂಡ್ ಫ್ರೆಂಡ್ ಓನ್ಲಿ " ಎಂದುಮಾತು ಮುಗಿಸಿದ್ದ.


ಇಡಿಯಾದ ಪ್ರೀತಿ ಹಿಡಿ ಹಿಡಿಯಾಗಿ ಒಡೆದಿತ್ತು . ಅಂದಿನಿಂದ ಚೂರಾದ ಪ್ರತಿ ಹೃದಯದ ತುಂಡಿನಲ್ಲೂ ಒಬ್ಬೊಬ್ಬ ಹುಡುಗರು ಕಾಣತೊಡಗಿದರು ಒಡೆದ ಕನ್ನಡಿಯಚೂರುಗಳಲ್ಲಿ ಮೂಡುವ ಪ್ರತಿಬಿಂಬಗಳಂತೆ.ಪ್ರತಿಯೋಬ್ಬನನ್ನು ಪ್ರೀತಿಸಿದೆ. ಪ್ರತಿಯೊಬ್ಬನಿಗೂ ಅವನಿಗಂದ ಪ್ರೀತಿಯ ಮಾತುಗಳನ್ನೇ ಹೇಳಿದೆ. ಪ್ರತಿಯೊಬ್ಬರೂ ಅವನಂದ ಪ್ರೀತಿಯ ಮಾತುಗಳನ್ನೇ ಆಡಿದರು ..!! ಬೇಜಾರಾದಾಗೆಲ್ಲ ಬದಲಾಯಿಸಿದೆ ಹುಡುಗರನ್ನು ಬಟ್ಟೆ ಬದಲಾಯಿಸಿದಂತೆ. ಮೊಬೈಲ್ ಕಂಪನಿಗಳೆಲ್ಲ ನನ್ನಿಂದಲೇ ಉಸಿರಾಡಿಕೊಂಡಿವೆಯೇನೋ ಅನಿಸುತ್ತೆ. ಅದೆಷ್ಟೋ ಸಿಮ್ ಗಳು ಬದಲಾದವು ಹುಡುಗರು ಬದಲಾದಂತೆ. ಅದೆಷ್ಟೋ ಸಿಮ್ ಗಳು ಮುರಿದುಹೋದವು ಪ್ರೀತಿ ಮುರಿದು ಹೋದಂತೆ. ಹಪಹಪಿಸುತ್ತಿರುತ್ತದೆ ಮನಸ್ಸು ಮತ್ತೊಬ್ಬ ಹುಡುಗನಿಗಾಗಿ ಅವನ ಮೇಲೆ ಸೇಡು ತೀರಿಸಿಕೊಳ್ಳಲು. ಸ್ವಲ್ಪ ಪ್ರೀತಿ ತೋರಿಸುವ , ಸ್ವಲ್ಪ ಕೇರ್ ಮಾಡುವ ಹುಡುಗ ಸಿಕ್ಕರೂ ಸಾಕು ಪ್ರೀತಿಯಾಗಿ ಬದಲಾಯಿಸಿಕೊಳ್ಳುತ್ತಿದ್ದೆ ನಾನು. ಮೊದಮೊದಲು ನನ್ನ ಬಗೆಗೆ ಗೆಳತಿಯರು, ಓರಗೆಯ ಹುಡುಗಿಯರೆಲ್ಲ ಆಡಿಕೊಳ್ಳುವಾಗ ತುಂಬಾ ಬೇಸರವಾಗುತ್ತಿತ್ತು. ಆಮೇಲಾಮೇಲೆ ಎಲ್ಲವೂ ಮಾಮೂಲಿ ಅನ್ನಿಸತೊಡಗಿತ್ತು. " ಈ ವಾರ ಯಾವ ಹುಡುಗನ ಬೈಕಿನ ಬ್ಯಾಕ್ ಸೀಟ್ ಮೇಲೆ ಹೆಸರಿದೆಯೇ ಹುಡುಗಿ ?" ಅಂತ ಕಣ್ಣರಳಿಸಿ ಯಾರಾದರೂ ಗೆಳತಿಯರು ಕೇಳಿದರೆ wait and watch ಎಂದು ಕಣ್ಣು ಹೊಡೆದು ಬರುತ್ತಿದ್ದೆ. ಅದೆಷ್ಟೋ ಅಪರಿಚಿತರು ಪರಿಚಿತರಾದರು. ಅದೆಷ್ಟೋ ನಿರ್ಜನ ಪ್ರದೇಶಗಳು ಆಪ್ತವಾದವು. ಊರೂರು ಸುತ್ತಿದೆ. ಮುಖವೇ ನೋಡಿರದೆ ಇದ್ದ ಯಾವುದೋ ಹುಡುಗನಿಗಾಗಿ ಅವನೂರಿನವರೆಗೆ ಅಲೆದೆ. ಸ್ನಾನದ ಮನೆಯ ಮಂದ ಬೆಳಕಿನಲ್ಲಿ ಮೈ ಮೇಲಿನ ಕಲೆಗಳನ್ನು ಎಣಿಸತೊಡಗಿದೆ. ಎಲ್ಲರಲ್ಲೂ ಅವನೇ ಕಾಣುತ್ತಿದ್ದ. ಗಾಯದ ಮೇಲೆ ಬರೆ ಎಳೆಯುವಂಥವರೇ ಸಿಕ್ಕರಾ ? ಅಥವಾ ನಾನೇ ಅಂಥವರನ್ನು ಹುಡುಕಿಕೊಂಡು ಹೊರಟೇನಾ ? ಗೊತ್ತಿಲ್ಲ. ಮನಸ್ಸೆಂಬ ಮಾಯಾ ಕುದುರೆ ಲಂಗು ಲಗಾಮಿಲ್ಲದೆ ಓಡುತ್ತಿತ್ತು . ಸಂಬಂಧಗಳನ್ನು ಉಳಿಸಿಕೊಳ್ಳುವ ಭರದಲ್ಲಿ ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತಿದ್ದೆ, ಅವು ಉಸಿರು ಕಟ್ಟಿ ಸತ್ತು ಹೋಗುತ್ತಿದ್ದವು. ಸಡಿಲ ಬಿಟ್ಟ ಸಂಬಂಧಗಳೆಲ್ಲ ಗಾಳಿಗೆ ಹರವಿ ಬಿಟ್ಟ ಕೂದಲುಗಳಂತೆ ಸಿಕ್ಕು ಸಿಕ್ಕು.. ಹಿಡಿತದ ಹದ ಕೊನೆಗೂ ಸಿಕ್ಕಿಲ್ಲ. ಅಪ್ಪ ಅಮ್ಮನಕಣ್ಣಲ್ಲಿ ವಿಲ್ಲನ್ ನಾನು. ಗೆಳತಿಯರ ಸರ್ಕಲ್ ನಲ್ಲಿ ಚೆಲ್ಲು .. ಸುತ್ತಲಿನವರ ದೃಷ್ಟಿಯಲ್ಲಿ ನಡತೆ ಸರಿಯಿಲ್ಲದ ಹುಡುಗಿ. ಮೊದಲು ಅಮ್ಮನ ಬೈಗುಳ , ಅಪ್ಪನ ನೋಟಗಳೆಲ್ಲ ಭಯ ಹುಟ್ಟಿಸುತ್ತಿದ್ದವು. ಈಗ ಅಪ್ಪ ಅಮ್ಮನ ಬುದ್ಧ್ಹಿಮಾತುಗಳನ್ನೂ ಕೇಳದ ಮಟ್ಟಕ್ಕೆ ಬೆಳೆದು ನಿಂತು ಬಿಟ್ಟೆ. ಈಗೀಗ ಅವರ ಮೌನ ಕೂಡಾ ನನ್ನಲ್ಲಿ ಭಯ ಹುಟ್ಟಿಸುವುದಿಲ್ಲ. ಅವರೆಲ್ಲರ ತಿರಸ್ಕಾರದ ನೋಟಗಳ ಮೆಟ್ಟಿ ನಿಲ್ಲಲು ಬೇಕು ಹುಡುಗನೊಬ್ಬನ ತೆಕ್ಕೆ.ಸಿಗುವ ಯಾರೋ ಒಬ್ಬನ ಜೊತೆ ಹ್ಯಾಂಗ್ ಔಟ್ .

ಮನೆಯಲ್ಲಿ ಮದುವೆ ಮಾಡಿ ಕೈ ತೊಳೆದುಕೊಳ್ಳುವ ತವಕ. ಯೋಗ್ಯ ವರನಿಗಾಗಿ ಹುಡುಕಾಟ. ಅಲ್ಯಾವುದೋ ಹುಡುಗನ ಜೊತೆ ಮದುವೆ ಮಾತುಕಥೆಗಳು ನಡೆಯುತ್ತಿದ್ದರೆ ನಾನಿಲ್ಯಾರದೋ ತೋಳತೆಕ್ಕೆಯಲ್ಲಿ ಬಂಧಿಯಾಗಿರುತ್ತೇನೆ. ರೂಪಕ್ಕೆ ಮರುಳಾದವ ಯಾರೋ ಒಬ್ಬ ನೋಡಲು ಬರುತ್ತಾನೆ. ಅವನ ಮುಂದೆ ಎಲ್ಲವನ್ನೂ ಹೇಳಿಕೊಳ್ಳುತ್ತೇನೆ. ಮನೆಗೆ ಹೋಗಿ ಉತ್ತರ ತಿಳಿಸುತ್ತೇನೆ ಎನ್ನುವವರ ಉತ್ತರ ಏನಾಗಿರುತ್ತದೆ ಎಂಬುದು ನನಗೂ ಗೊತ್ತಿರುತ್ತದೆ ; ಅಪ್ಪ ಅಮ್ಮನಿಗೂ ಕೂಡ. ಆಗ ಮನೆ ಅಸಹನೀಯವಾಗಿರುತ್ತದೆ. ಮನೆಯಲ್ಲಿನ ನಿಶ್ಯಬ್ದ, ಮೌನದ ಪೊರೆಯೊಳಗಿನ ಅವರ ಸಿಟ್ಟು , ಅಸಮಾಧಾನದ ನಿಟ್ಟುಸಿರು ಎಲ್ಲವನ್ನೂ ಎದುರಿಸಲಾರದೆ ಕೋಣೆಯ ಕದವಿಕ್ಕಿ ಬಿಕ್ಕುತ್ತೇನೆ.ಮತ್ತೆ ಶುರುವಾಗುತ್ತದೆ ಮನೆಯಲ್ಲಿ ಹುಡುಕಾಟ ಯೋಗ್ಯ ವರನಿಗಾಗಿ, ನಾನೂ ಯಾರೋ ಒಬ್ಬನ ತೋಳಲ್ಲಿ ಬಂಧಿಯಾಗಿ , ಕತ್ತಿನ ಇಳಿಜಾರಲ್ಲಿ ಅವನಿಡುವ ಮುತ್ತುಗಳ ಎಣಿಸುತ್ತ ಕೂತಿರುತ್ತೇನೆ. ಅದ್ಯಾವುದೋ ದೂರದ ಗುಡ್ಡದ ಮರೆಯಲ್ಲಿ.. ಅದೊಂದು ಮುಸ್ಸಂಜೆಯಲ್ಲಿ .. 


                                                    -ಕನ್ನಿಕೆಯ ಡೈರಿಯ ಪುಟಗಳಿಂದ ....


(ಈ ಲೇಖನ ಮಾರ್ಚ್ ೨೨ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು )