Tuesday, 13 October 2015

ಅದೇ ಪ್ರೀತಿ ... ಬೇರೆ ರೀತಿ ..


"ಏನಂತಾರೆ ಆ ಮನೆಯ ದೊಡ್ಡವರು ?" ಅಂದ ಅಪ್ಪನ ಧ್ವನಿಯಲ್ಲಿ ಸ್ವಲ್ಪ ಅಸಮಾಧಾನವಿತ್ತು.
"ಮೊದಲಿನಂತಿಲ್ಲ ಮೆತ್ತಗಾಗಿದ್ದಾರೆ, ಕಾಲ ಬದಲಾಗಿದೆ ಅಲ್ಲವಾ. ನಮ್ಮ ಪ್ರೇಮವನ್ನು ಒಪ್ಪಿಕೊಂಡವರು ಇವರನ್ನು ಒಪ್ಪಿಕೊಳ್ಳೋದು ಕಷ್ಟವಲ್ಲ ಅಲ್ಲವ" ಅಂದೆ.
"ಮಗನ ವಿಷಯದಲ್ಲಿ ಮೆತ್ತಗಾದವರು ತಮ್ಮನ ವಿಷಯದಲ್ಲೂ ಹೀಗೆ ನಡೆದುಕೊಂಡಿದ್ದರೆ ಈ ಮದುವೆ ಹದಿನೈದು ಇಪ್ಪತ್ತು ವರ್ಷಗಳ ಮೊದಲೇ ನಡೆದಿರುತ್ತಿತ್ತು" ಅಂದರು.
"ಆಗ ಅಷ್ಟೆಲ್ಲ ಮದುವೆಗೆ ಓಡಾಡಿದವರು ನೀವು . ಈಗ ಯಾಕೆ ಈ ಬಿಗುಮಾನ ಅಪ್ಪಾ ".
" ಆವಾಗ ನನ್ನ ಅಣ್ಣನ ಮಗಳ ಭವಿಷ್ಯ ಮಾತ್ರ ಕಣ್ಣು ಮುಂದಿತ್ತು. , ಈಗ ನನ್ನ ಮಗಳ ಬದುಕು ಕಣ್ಣಮುಂದೆ ಇದೆ. ಈ ಮದುವೆ ಮಾಡಿಸಿ ಅವರ ಕಣ್ಣಲ್ಲಿ ನೀನು ಸಣ್ಣವಳಾಗಬಾರದು. ಮೆಟ್ಟಿದ ಮನೆಯಲ್ಲಿ ನಿನ್ನ ಸ್ಥಾನ ಸ್ವಲ್ಪವೂ ಕದಲಬಾರದು. " ಅವರ ಆತಂಕ ನನಗೆ ಅರ್ಥವಾಗುತ್ತಿತ್ತು .
ಸುಮ್ಮನೆ ಭುಜದ ಮೇಲೆ ಕೈ ಇಟ್ಟೆ . ಅಪ್ಪನಿಗೆ ಅದು ಹೊಸದೇನಲ್ಲ. " ಏನು ಮಾಡ್ತೀರೋ ಮಾಡಿ, ನಿನ್ನ ಗಂಡನೇ ನಿನ್ನ ಬೆನ್ನ ಹಿಂದೆ ನಿಂತಿರುವಾಗ ನಾನೇನು ಹೇಳಲಿ ? " ಎನ್ನುತ್ತಾ ಬಾಲ್ಕನಿಯಿಂದ ಇಳಿದು ಹೋದರು.

ಅಲ್ಲಿಂದ ಶಾಲೆಯ ಬಯಲು ಚೆನ್ನಾಗಿ ಕಾಣುತ್ತಿತ್ತು. ಅದೇ ಶಾಲೆಯಲ್ಲಿ ನಾನು ಪ್ರಣವ್ ಕಲಿತಿದ್ದು . ಎದುಬದುರು ನಿಂತು ನಮಸ್ತೇ ಶಾರದಾ ದೇವಿ ... ಎಂದು ಪ್ರಾರ್ಥನೆ ಹೇಳುವಾಗಲೋ , ಅಥವಾ ಮಗ್ಗಿ ಹೇಳುವಾಗ ಅವನು ಕೈ ಸನ್ನೆ ಮಾಡಿ ಅಂಕೆಗಳನ್ನು ತೋರಿಸುತ್ತಿದ್ದಾಗಲೋ ಯಾವಾಗ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೇ ಎನ್ನುವುದು ನೆನಪಿಲ್ಲ, ಆದರೆ ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ಅವನೆಡೆಗೊಂದು ಆತ್ಮೀಯತೆ ಬೆಳೆದುಬಿಟ್ಟಿತ್ತು ನಾವು ಬೆಳೆದಂತೆಲ್ಲ ಅದೂ ಸ್ನೇಹವಾಗಿ ಬೆಳೆದು ಪ್ರೀತಿಯಾಗಿ ಬದಲಾಗಿತ್ತು. ಅದೇ ಊರಿನಲ್ಲೆ ಅವನು ಕೆಲಸ ಹಿಡಿದ ಮೇಲಂತೂ ಮದುವೆಯ ಮಾತುಗಳನ್ನಾಡುವುದು ಮಾತ್ರ ಉಳಿದಿದ್ದು ಎಂದು ಇಬ್ಬರೂ ತೀರ್ಮಾನಿಸಿದ್ದೆವು. ಚಿಕ್ಕ ಊರಲ್ಲಿ ಪ್ರೀತಿಯ ಗುಲ್ಲು ಏಳಬಾರದೆಂಬ ಕಾರಣಕ್ಕೆ ಓದುವ ನೆಪದಲ್ಲಿ ಲೈಬ್ರೇರಿಯನ್ನು ನಮ್ಮ ಭೇಟಿಯ ತಾಣವನ್ನಾಗಿ ಮಾಡಿಕೊಂಡಾಗಿತ್ತು. ಆದರೆ ಇದು ಅದೇ ಲೈಬ್ರೆರಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಅಕ್ಕನಿಗೆ ಹೇಗೋ ತಿಳಿದು ಬಿಟ್ಟಿತ್ತು .

"ಪ್ರೀತಿಸ್ತಾ ಇದೀಯಾ ಆ ದೊಡ್ಮನೆ ಹುಡುಗನನ್ನ ?" ಅಕ್ಕನ ನೇರವಾದ ಪ್ರಶ್ನೆ. ಅಕ್ಕ ಎಂದರೆ ನನಗಿಂತ ಹದಿನೈದು ವರ್ಷಕ್ಕೆ ದೊಡ್ಡವಳು. ಅಮ್ಮನಷ್ಟೇ ಗೌರವಿಸುತ್ತಿದ್ದ ಅವಳಿಗೆ ಸುಳ್ಳು ಹೇಳಲು ಸಾದ್ಯವಿರಲಿಲ್ಲ ." ಹೌದು "ಎಂದೆ. "ಆ ಮನೆಯ ಗೋಡೆಗಳಲ್ಲಿ ಭಗ್ನ ಪ್ರೇಮದ ಚಿತ್ತಾರಗಳೇ ಜಾಸ್ತಿ, ನನ್ನಂತೆ ಆಗಬಾರದು ನಿನಗೆ. "ಅಂದ ಅಕ್ಕನ ಮಾತುಗಳು ಅನಿರೀಕ್ಷಿತವಾಗಿದ್ದವು . ಅಕ್ಕನ ಹಿಂದೊಂದು ಮುರಿದು ಹೋದ ಪ್ರೇಮದ ಕಥೆ ಇರಬಹುದೆಂದು ಊಹಿಸಿರಲೇ ಇಲ್ಲ. ಅವಳು ಮದುವೆಯಾಗಿಲ್ಲ ಎಂದಷ್ಟೇ ಗೊತ್ತಿತ್ತೇ ವಿನಃ ಯಾಕೆ ಏನು ಅಂತ ಕೇಳಿರಲೇ ಇಲ್ಲ. ಅಷ್ಟು ನನ್ನ ಬದುಕಿನಲ್ಲೇ ಕಳೆದುಹೋಗಿದ್ದೆ ಅನಿಸಿತು . ಅವಳೇ ಮುಂದುವರೆಸಿದಳು " ನಾನು ಮತ್ತು ಆ ಮನೆಯ ಚಂದ್ರು ಅಂದರೆ ಈಗ ನೀನು ಪ್ರೀತಿಸುತ್ತಿರುವ ಹುಡುಗನ ಚಿಕ್ಕಪ್ಪ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದೆವು. ಹಳ್ಳಿಯ ಶುದ್ಧ ಗಾಳಿಯಲ್ಲಿ ಪ್ರೀತಿಯ ಸುದ್ದಿ ಬಹುಬೇಗ ಹರಡಿತು , ಆದರೆ ಮನೆಯ ಮನಸ್ಸುಗಳನ್ನು ಮಲಿನಗೊಳಿಸಿದ್ದು ವಿಪರ್ಯಾಸ. ವಿರೋಧವಿತ್ತು ಅವರ ಮನೆಯಲ್ಲಿ , ನಾನು ಹೇಗೋ ಮನೆಯವರನ್ನು ಒಪ್ಪಿಸಿದ್ದೆ . ನಿನ್ನ ಅಪ್ಪ ಅಂದರೆ ನನ್ನ ಚಿಕ್ಕಪ್ಪ ಬಹಳ ಪ್ರಯತ್ನ ಪಟ್ಟರು ಈ ಮದುವೆ ನಡೆಸಲು ,ಆದರೆ ಪ್ರಯತ್ನಗಳೆಲ್ಲ ವ್ಯರ್ಥವಾದವು. ಓಡಿ ಹೋಗುವ ಮನಸ್ಸಿರಲಿಲ್ಲ. ಸಾಯುವ ಮನಸ್ಸು ನಮಗೆ ಬರುವ ಮೊದಲೇ ಪ್ರೀತಿ ಸತ್ತು ಹೋಗಿತ್ತು ಅವನ ಅಪ್ಪನ ಸಾವಿನೊಡನೆ . ಕನಸುಗಳ ಕಟ್ಟಿಟ್ಟು ಜೀವಚ್ಛವವಾಗಿ ಬಿಟ್ಟೆವು. ಹಾಗೆಯೇ ಬದುಕುತ್ತಿದ್ದೇವೆ ಇಂದಿಗೂ. "ನನ್ನ ಕಣ್ಣಲ್ಲಿ ನೀರಿತ್ತು . ಅವಳಲ್ಲಿ ಉಳಿದಿದ್ದು ನಿಟ್ಟುಸಿರ ಮೌನ . ಮುಖದಲ್ಲಿ ಮಾತ್ರ ಎಂದಿನ ನಿರ್ಲಿಪ್ತತೆ . ಹಾಗೆ ಸರಿದು ಹೋಗಿತ್ತು ಅದೊಂದು ಸಂಜೆ.

ಆದರೆ ನಮ್ಮ ಪ್ರೀತಿಗೆ , ಮದುವೆಗೆ ಯಾವುದೇ ಅಡೆತಡೆಗಳು ಬರಲಿಲ್ಲ . ಏಕೆಂದರೆ ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವಲ್ಲ. ಎಲ್ಲರೂ ನನ್ನನ್ನು, ಅವನನ್ನು ಖುಷಿಯಿಂದ ಒಪ್ಪಿಕೊಂಡರು . ಮದುವೆ ನನ್ನದೇ ಆದರೂ ಕಾಡಿದ್ದು ಮಾತ್ರ ಆಗಾಗ ಸಂಧಿಸುತ್ತಿದ್ದ ಅವರಿಬ್ಬರ ಯಾತನಾದಾಯಕ ನೋಟಗಳು. ಅವತ್ತೇ ಅಗ್ನಿಸಾಕ್ಷಿಯಾಗಿ ನಿರ್ಧರಿಸಿದ್ದೆ ಅಕ್ಕನಿಗೆ ಅವಳ ಪ್ರೀತಿಯನ್ನು ದೊರಕಿಸಿಕೊಡಬೇಕೆಂದು. ಮನೆಗೆ ಬಂದ ಮೇಲೆ ಪ್ರಣವ್ ಗು ಹೇಳಿ ಅವನನ್ನು ಒಪ್ಪಿಸಿದ್ದೆ . ಮನೆಯಲ್ಲೂ ಪ್ರಸ್ತಾಪಿಸಿದ್ದೆ. "ನಿಮ್ಮ ಪ್ರೀತಿಯನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ , ಆದರೆ ಈಗಿನ ಒಬ್ಬರೇ ಮಕ್ಕಳ ಕಾಲದಲ್ಲಿ ನಿಮ್ಮನ್ನು ಕಳೆದುಕೊಳ್ಳುವ ಮನಸ್ಸಿಲ್ಲದೇ ಒಪ್ಪಿಗೆ ಕೊಟ್ಟಿದ್ದು, ಇಷ್ಟರಲ್ಲೇ ಇದ್ದರೆ ಒಳ್ಳೆಯದು ಎಂದು ಮಾವ ಅಬ್ಬರಿಸಿದ್ದರು . " ಮದುವೆಯಾದ ತಕ್ಷಣ ಮನೆ ಒಡೆಯು ಬೇಕೆಂದು ನೋಡುವ ಹೆಣ್ಣುಗಳ ನಡುವೆ ಮನೆಯಲ್ಲಿ ಸಂತೋಷದ ದೀಪ ಹಚ್ಚಲು ನೋಡುತ್ತಿದ್ದಾಳೆ ಒಪ್ಪಿಗೆ ಕೊಡಿ " ಎಂದು ಅತ್ತೆ ಕೇಳಿಕೊಂಡಿದ್ದು ಮಾವನ ಕಿವಿಗೆ ಬಿದ್ದಿರಲಿಲ್ಲ . ಆದರೆ ನನಗೆ ವಿಶ್ವಾಸವಿತ್ತು ಮಾವನನ್ನು ಒಪ್ಪಿಸಿಯೇ ಒಪ್ಪಿಸುತ್ತೆನೆಂದು. ಪ್ರಾಮಾಣಿಕ ಪ್ರಯತ್ನಗಳನ್ನು ಬಿಟ್ಟಿರಲಿಲ್ಲ. ಅದಾದ ಆರು ತಿಂಗಳ ನಂತರ " ಅವರವರ ಒಂಟಿತನದ ಕೋಟೆಯನ್ನು ಭೇದಿಸಿ ಸಂತೋಷವಾಗಿ ಇರುತ್ತರಾದರೆ ನನ್ನದೇನಿದೆ ? ಅಪ್ಪನನ್ನು ನೋಡಿ ಮಾತನಾಡುತ್ತೇನೆ" ಎಂದಿದ್ದರು ಮಾವ. ಆಕಾಶವೇ ಕೈ ಗೆ ಸಿಕ್ಕಷ್ಟು ಸಂಭ್ರಮ . ಮುಂದಿನದ್ದೆಲ್ಲ ಹೂವೆತ್ತಿದಷ್ಟೇ ಸರಾಗವಾಗಿ ನಡೆದಿತ್ತು . ನಾಡಿದ್ದು ಬೆಳಗಾದರೆ ಅಕ್ಕನ ಮದುವೆಯ ಸಂಭ್ರಮ ಎಂದುಕೊಳ್ಳುತ್ತಿದ್ದೆ . ಕೆಳಗಡೆಯಿಂದ ಪುಟ್ಟಿ ಕೂಗುತ್ತಿದ್ದಳು . "ಏನೇ ?" ಎಂದೇ . "ನೋಡು ಚಿಕ್ಕಮ್ಮ ಮೆಹಂದಿ ಹಾಕಿಸಿಕೊಳ್ಳೋಲ್ಲ ಅನ್ನುತ್ತಿದ್ದಾರೆ" ಎಂದು ಮುಖ ಊದಿಸಿಕೊಂಡಳು .

ಏನಾಯ್ತೆ ಅಕ್ಕಾ ? ಅಂದೆ . ಅದಕ್ಕವಳು ನೋಡು ಸುರಭಿ " ನನಗೀಗ ನಲವತ್ತೇಳು , ಈ ವಯಸ್ಸಿನಲ್ಲಿ ಮದುವೆ ಎಂಬುದೇ ಒಂಥರಾ ಮುಜುಗರದ ವಿಷಯ ಅನಿಸುತ್ತೆ. ಅಂಥದ್ದರಲ್ಲಿ ಎಳೆ ವಯಸ್ಸಿನವರಂತೆ ಇದೆಲ್ಲ ಬೇಕಾ ಅಂತ ಅನಿಸ್ತಿದೆ. ನಾಚಿಕೆಯಾಗ್ತಿದೆ ಕಣೆ " ಅಂದಳು
ಹದಿನೆಂಟರ ಪ್ರೀತಿ .. ಇಪ್ಪತ್ತೆರಡರ ನಾಚಿಕೆ ಈಗಲೂ ಜೀವಂತವಾಗಿದೆ ಅಂದರೆ ಮದರಂಗಿಯೂ ಬೇಕು ಅಕ್ಕಾ ಕೈ ನೀಡೆ ಅಂದೆ. ಅವಳ ಕೈಯಲ್ಲಿ ಮದರಂಗಿ ಮುಂದಿನ ಬದುಕಿನ ಚಿತ್ತಾರವಾಗಿ ಬಣ್ಣ ತುಂಬಿಕೊಳ್ಳುತ್ತಿತ್ತು.