ನಿನ್ನಿರುವ ಚಿಗುರ ಹೊದ್ದುಕೊಂಡಂತೆ
ನನ್ನೂರ ಹಸಿರು..
ನೊರೆ ಹಾಲ ಜೊಲ್ಲು ಸುರಿಸಿ
ಕುಣಿವ ಕರುವಿಗೂ ಇಡಬೇಕೆನಿಸುತ್ತಿದೆ
ನಿನ್ನ ಹೆಸರು..
ಇದು ಬೆಳಿಗ್ಗೆ ಬಸ್ ಇಳಿದು ಊರ ದಾರಿ ಹಿಡಿದು ಮನೆಯಂಗಳದಿ ಕುಣಿವ ಕರು ನೋಡಿದ ಕೂಡಲೇ ನೆನಪಾಗಿದ್ದು. ಹಿಡಿವ ಪ್ರಯತ್ನಕ್ಕೆ ಸಿಗದ ಕರುವನ್ನು ಅಪ್ಪ ಎತ್ತಿಕೊಂಡು ಬಂದರು. ಮೆತ್ತನೆಯ ಮೈ ಸವರಿದರೆ ನಿನ್ನದೇ ಬೆಚ್ಚನೆಯ ಸ್ಪರ್ಶ ನೆನಪಾಗಿದ್ದು. " ಮೊನ್ನೆ ಹುಟ್ಟಿದ್ದು, ನೀ ಬಂದ ಮೇಲೆ ಹೆಸರಿಡುವ ಎಂದಿದ್ದೆ ಅಮ್ಮನಿಗೆ. ಇದಕ್ಕೊಂದು ಹೆಸರು ಹೇಳು ಎಂದ ಅಪ್ಪ ನಾ ಚಿಕ್ಕವಳಿದ್ದಾಗ ಎತ್ತಿಕೊಂಡಂತೆ ಎತ್ತಿಕೊಂಡಿದ್ದರು ಆ ಕರುವನ್ನು." ಮೂನ್ " ಅಂತಾ ಇಟ್ರೆ ಓಕೆ ನಾ ಎಂದ ಅಣ್ಣನ ರಟ್ಟೆ ಚಿವುಟಿ ಒಳಗೆ ಹೋದ ಅತ್ತಿಗೆಯನ್ನು , ಅಣ್ಣನ ತುಂಟ ನಗೆಯನ್ನು ಗಮನಿಸದೇ ಇರಲಾಗಲಿಲ್ಲ. ಅಣ್ಣನಿಗೆ ಗೊತ್ತಾಗಿದೆ ಎನ್ನುವ ದುಗುಡದ ಜೊತೆಜೊತೆಗೆ ಸಮಾಧಾನವೂ ಆಯ್ತು. ಅರ್ಥವಾಗದೇ ನಿಂತ ಅಪ್ಪನಿಗೆ ಚಂದು ಎಂದೆ. "ಚಂದು ಬುಡ್ಡಾ ಅಕ್ಕ ಬಂದಿದಾಳೆ, ಇನ್ನಷ್ಟು ದಿನ ಅವಳೇ ನಿನಗೆ ಜಾಯಿ ಕುಡಿಸೋದು. ಕೈ ಕಚ್ಚಬಾರದು ಅವಳದ್ದು " ಎಂದು ಮುದ್ದಿಸುತ್ತಾ ಅಪ್ಪ ಕರುವನ್ನು ಕೊಟ್ಟಿಗೆಗೆ ತೆಗೆದುಕೊಂಡು ಹೋಗುತ್ತಿದ್ದರೆ ಹೆಸರು ಅರ್ಥ ಮಾಡಿಸಿದಷ್ಟು ಸುಲಭವಲ್ಲ ಹೊಸ ಬಂಧದ ಬಗೆಗೆ ತಿಳಿಸುವುದು ಎನಿಸಿತು. ನಿಂತಲ್ಲೆ ನಡುಗಿದೆ. ಅಣ್ಣ ಬೆನ್ನಿಗೆ ಕೈ ಹಾಕಿ ಒಳಕರೆದುಕೊಂಡು ಬಂದ.
ಕ್ಷಮಿಸು ಹೊರಡುವ ಮೊದಲೇ ಮಾತಾಗಿತ್ತಲ್ಲ ನಿನ್ನ ನೆನಪಿಸಿಕೊಳ್ಳಬಾರದೆಂದು. ಏನು ಮಾಡಲಿ ಉಸಿರಾಟದಷ್ಟೇ ಸರಾಗ ನೀನು. ಎನಾಗಿರಬಹುದಲ್ಲಿ ಅಬ್ಬಬ್ಬಾ ಎಂದರೆ ನಿನಗೆ ಬಿಕ್ಕಳಿಕೆ ಬಂದಿರಬಹುದು. ನಿಮ್ಮನೆಯ ಬೀದಿ ಕೊನೆಯಲ್ಲಿ ಹೋಗುತ್ತಿರುವ ಹುಡುಗಿ ನನ್ನಂತೆ ಭಾಸವಾಗಿ ನೀ ಕೆಮ್ಮಿರಬಹುದು. ನಿನ್ನ ಕೆಮ್ಮಿನ ಸದ್ದಿಗೆ ನಾನಲ್ಲದ ಅವಳು ತಿರುಗಿದರೆ ನೀ ತಲೆ ಕೆದರಿಕೊಳ್ಳುತ್ತಾ ಪೆಚ್ಚುನಗೆ ನಕ್ಕಿರಬಹುದು. ಆ ನಗೆಯೂ ಚಂದವೇ.. ದೃಷ್ಟಿಯಾದೀತು.
ಅಣ್ಣನ ಜೊತೆ ಎಂಟು ದಿನದ ಅದ್ಯಾವುದೋ ಕ್ಯಾಂಪ್ ಗೆ ಮನೆಗೆ ಬಂದವ ಎಲ್ಲರನ್ನೂ ಇಂಪ್ರೆಸ್ ಮಾಡಿಬಿಟ್ಟಿದ್ದೆಯಲ್ಲ.ನೀವೆಲ್ಲ ಸೇರಿ ದೇವಿ ಎಂದು ನನಗೆ ರೇಗಿಸುತ್ತಿದ್ದಿರೆ ನಾ ಮುಖ ಊದಿಸಿಕೊಂಡು ತಿರುಗುತ್ತಿದ್ದೆ. ಆದರೆ ಅದೊಂದು ದಿನ ಕಾಗದದ ಹೃದಯವನ್ನು ಪಾದದ ಮೇಲಿಟ್ಟು " ಹೃದಯವನ್ನು ಪಾದದ ಮೇಲಿಟ್ಟಾಗಿದೆ ಮುಂದಿನದು ದೇವಿ ಚಿತ್ತ" ಎಂದಾಗ ಮಾತ್ರ ದೇವಿ ಎನ್ನುವ ಶಬ್ದ ಖುಷಿಕೊಟ್ಟಿತ್ತು. ನಿನಗೆ ಗೊತ್ತಿಲ್ಲದೇ ಆ ಹೃದಯವನ್ನು ಜೋಪಾನವಾಗಿಟ್ಟಿದ್ದೆ. ಮತ್ತು ನಿನ್ನೆದೆರು ಅದೇ ಥರದ ಬೇರೆ ಹೃದಯವನ್ನು ಮಾಡಿ ಬೆಂಕಿಗೆ ಹಾಕಿದ್ದೆ. ಅದಾದಮೇಲೆ ನನ್ನ ಡಾನ್ಸ್ ಕ್ಲಾಸ್ ಮತ್ತು ನಿನ್ನ ಸ್ಪೋರ್ಟ್ಸ್ ಕ್ಲಬ್ ಒಂದೇ ಕಡೆಯಾದಾಗ ಹತ್ತು ನಿಮಿಷದ ಪೆಟ್ಟಿಅಂಗಡಿ ಟೀ ಗೆ ಗೆಳೆಯನಾದೆ. ಸುಮಾರು ಆರು ತಿಂಗಳ ನಂತರವಿರಬೇಕು ಅಲ್ಲವಾ ಕಾಗದದ ಹೃದಯವನ್ನು ನಿನಗೆ ವಾಪಸ್ ಕೊಟ್ಟಿದ್ದೆ. ನೀ ಎದೆಯಲ್ಲೇ ಕೂರಿಸಿಕೊಂಡುಬಿಟ್ಟೆ. ಅಲ್ಲಿ ಶುರುವಾಗಿತ್ತು ಪ್ರೀತಿ. ನಮ್ಮ ಅಣ್ಣಂದಿರ ಗೆಳೆತನದಿಂದ ಶುರುವಾದ ಪ್ರೀತಿಯನ್ನು ಅವರಿಗೂ ಗೊತ್ತಿಲ್ಲದಂತೆ ಕಾಪಾಡಿಕೊಂಡು ಬಂದಿದ್ದಕ್ಕೆ ಹೆಮ್ಮೆ ಪಡಬೇಕೋ ಇಲ್ಲವೋ ತಿಳಿಯುತ್ತಿಲ್ಲ.
ನಂಗೊತ್ತು ನೀ ಮೌನದಲೆ ನನ್ನ ಕಂಡುಕೊಂಡರೆ ನಾ ಸದ್ದಿನಲೇ ನಿನ್ನ ಹುಡುಕುತ್ತೇನೆ. ಬೆಳಗಿನ ಕಾವಳದ ಪಳ ಪಳದಲ್ಲೂ ನನ್ನ ಕಾಣುವ ನಿನ್ನನ್ನು, ನಾ ನಿಗಿ ನಿಗಿ ಕೆಂಡದ ಬುರುಬುರು ಸದ್ದು ಮಾಡುವ ಬೆಂಕಿಯ ಸದ್ದಲ್ಲಿ ಕಂಡುಕೊಳ್ಳುತ್ತೇನೆ. ಮತ್ತು ಬೆಚ್ಚಗಾಗುತ್ತೇನೆ. ನಿನಗಲ್ಲಿ ಬೆಳಗಿನ ಟೀ ಯಲ್ಲಿ , ಧ್ಯಾನ ಮಂಟಪದ ತಣ್ಣನೆಯ ಕಂಬಗಳಲ್ಲಿ, ಕಲ್ಯಾಣಿಯ ಶಾಂತ ನೀರಲ್ಲಿ ನನ್ನದೇ ನೆನಪಾಗಿರುತ್ತೆ ಅಲ್ಲವಾ. ನೆನಪು ಮಾಡಿಕೊಳ್ಳೋದು ಬೇಡ ಎಂದಷ್ಟು ಸುಲಭವಲ್ಲ ಅದರಂತೆ ನಡೆಯೋದು ; ಬೆಳಿಗ್ಗೆ ತಾಗಿದ ಎಳೆ ಬಿಸಿಲ ಕೋಲಲ್ಲಿ , ಮಧ್ಯಾನ್ಹ ದ ಸ್ನಾನದಲ್ಲಿ ಸುರುವಿಕೊಂಡ ಬಿಸಿ ನೀರ ಹಿತದಲ್ಲಿ ನೀನೆ ಇದ್ದೆ. ಅಷ್ಟೇ ಏಕೆ ಸಂಜೆ ಅಮ್ಮ ....
ಎಣ್ಣೆ ಬತ್ತಿ ಸೇರಿದರೇನೇ ದೀಪ
ಎಂದಳು ಜೋಡಿ ದೀಪಗಳ ಬೆಳಗುತ್ತಾ ...
ನಾನು ಮುಗುಳುನಕ್ಕೆ
ನಾನು ನೀನು ಬೆರೆತರೇನೇ ಪ್ರೀತಿ
ಎಂದ ನಿನ್ನ ಜೋಡಿ ಕಣ್ಣುಗಳ
ನೆನಪಿಸಿಕೊಳ್ಳುತ್ತಾ...
ಊಟ ಮಾಡಿ ಹೊಡಸಲ ಬೆಂಕಿಯ ಸುತ್ತು ಕುಳಿತು ಮನೆಯವರೆಲ್ಲ ಮದುವೆಯ ವಿಷಯ ಮಾತನಾಡುತ್ತಾ ಈ ಕಾರ್ತಿಕದಲ್ಲಾದ್ರು ನೋಡಬಹುದಿತ್ತು ಎನ್ನುತ್ತಿದ್ದರೆ , ನಾನು ಮೊನ್ನೆ ನೀ ಕಳಿಸಿದ " ಇಬ್ಬನಿಯು ಸುಡುತಿಹುದು ತಂಗಾಳಿ ನಗುತಿಹುದು ಇನ್ನೆಷ್ಟು ಚಳಿಗಾಲ ಕಾಯೋದೇ ಹುಡುಗಿ " ಸಾಲುಗಳನ್ನು ಓದಿ ನಗುತ್ತಿದ್ದೆ. ನಾವು ಮಾತನಾಡುತ್ತೇವೆ ಎಂದು ಅತ್ತಿಗೆ ಮಾಡಿದ ಸನ್ನೆಗೆ ಸದ್ದಿಲ್ಲದೇ ಅಲ್ಲಿಂದ ಎದ್ದು ಬಂದಿದ್ದೇನೆ. ಮನದೊಳಗಿನ ದುಗುಡ ಇಷ್ಟೆಲ್ಲ ಬರೆಸಿತು. ಇನ್ನು ಬಾಗಿಲ ಬಳಿಯಲ್ಲಿ ಅಪ್ಪ ಬಂದು ನಿಂತು ಮುಗುಳುನಕ್ಕರೆ ನನಗೇನೋ ಸಮಾಧಾನ.