Tuesday, 25 March 2014

ಕೊಂಡಿ ತಪ್ಪಿದ ಗೆಜ್ಜೆ ....

"ಅಯ್ಯೋ ಚುಕ್ಕಿ ತಪ್ಪಿತಲ್ಲೆ " ಅಂದೆ  ಪಾವನಿಗೆ. ಒರೆಸೋ ಬಟ್ಟೆ ತರಲು ಒಳಗೆ ಹೋದಳು ಮದುಮಗಳು. "ಏನೂ ಮಾಡೋದು ಹೇಳು ಸಾಲು ತಪ್ಪಿಸಿದವಳು ನೀನೆ. ಹಿರಿಯರ ಮಾತು ಕೇಳಿ ಮದುವೆಯಾಗಿದ್ದರೆ ಈಗ ನಿನ್ನ ಮದುವೆಯಾಗಬೇಕಿತ್ತು.  ತಂಗಿ ಮದುವೆಗೆ ಬರುವಂತಾಯಿತಲ್ಲೇ " ಎಂದ ಅಜ್ಜಿಯ ಮಾತುಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ, ಹೇಗೆ ಚುಕ್ಕಿ ತಪ್ಪಿದೆ ? ಅಂತ ಯೋಚಿಸತೊಡಗಿದ್ದೆ. ಮನಸ್ಸೆಲ್ಲ ನಿನ್ನ ಕಡೆಗೆ ಹರಿದಿತ್ತು. ಬದುಕ ದಿಕ್ಕನ್ನೇ ತಪ್ಪಿಸಿ ನಡೆದವನ ನೆನಪು ರಂಗೋಲಿಯ ಚುಕ್ಕಿ ತಪ್ಪಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ ಬಿಡು. ಅಜ್ಜಿ  ಹೊರಹಾಕಿದ್ದು ತನ್ನೊಳಗಿನ ನೋವನ್ನಾ? ಅಥವಾ  ಆಡಿದ್ದು ಕುಹಕವಾ ?  ಯೋಚಿಸುವ ಗೊಡವೆಗೆ ಹೋಗದೆ, ಕಣ್ಣಂಚಿನ ನೀರ ತಡೆದುಕೊಂಡು ರಂಗೋಲಿ  ಬಿಡಿಸಿ  ಬಂದಿದ್ದೆ. 

ಬೆಳೆದಿದ್ದು, ಓದಿದ್ದು , ಕೆಲಸ ಹಿಡಿದಿದ್ದು ಎಲ್ಲವೂ ಹೊರಗಡೆಯೇ ಆದ್ದರಿಂದ ನನಗೂ ಊರಿಗೂ ನೆಂಟಸ್ತನದ ನಂಟು. ಈಗಲೂ ಮನೆಗೆ ಬಂದರೆ ನೆಂಟರಂತೆ ನೋಡಿಕೊಳ್ಳುತ್ತಾರೆ, ಮನೆಯವಳಂತೆ ಅಲ್ಲ, ಅಥವಾ ಬಂದು ಹೋಗುವ ನಾಲ್ಕು ದಿನಗಳಲ್ಲಿ ನಾನೇ ಹಾಗಿರುತ್ತೇನೋ ಏನೋ. ಆದರೆ ಪಾವನಿ ಹಾಗಲ್ಲ. ಆಕೆ ಮೊದಲಿಂದಲೂ ಮನೆಗುಬ್ಬಿ. ಹಾಗಾಗಿ ಆಕೆ ಮನೆ ಮಗಳು. ಅವತ್ತು ಚಿಕ್ಕಮ್ಮ ಫೋನ್ ಮಾಡಿ "ಮಗಳೇ ಪಾವನಿಗೆ ಒಳ್ಳೆ ಕಡೆಯ ಸಂಬಂಧ ಕೂಡಿ ಬಂದಿದೆ. ಮದುವೆ ಮಾಡಬಹುದಾ ?" ಎಂದಾಗ ಸಂತೋಷದಿಂದಲೇ "ಇದ್ರಲ್ಲಿ ಕೇಳೋದೇನಿದೆ ಚಿಕ್ಕಮ್ಮ, ಮದುವೆ ಮಾಡಿ. ನಾನಂತೂ ಸಹಾಯ ಮಾಡ್ತೀನಿ " ಅಂತ ಹೇಳಿದ್ದೆ. ಆದರೆ ಚಿಕ್ಕಮ್ಮ ಅವರ ಮಗಳ ಮದುವೆ ನಿಶ್ಚಯಕ್ಕೆ ನನಗೇಕೆ importance  ಕೊಟ್ಟಿದ್ದು ಎಂಬುದು ಅರ್ಥವಾಗಿದ್ದು ಊರಿಗೆ ಬಂದಮೇಲೆಯೇ. "ಅಕ್ಕನ ಬಿಟ್ಟು ತಂಗಿಗೆ  ಮದುವೆ ಮಾಡ್ತಾರ ? " "ನಿಮ್ಮ ಮಗಳೇ ದೊಡ್ದವಳಲ್ಲವಾ ? ಅವಳ ಮದುವೆ  ಯಾವಾಗ ? " ಅಂತ ಎಲ್ಲರೂ  ಅಮ್ಮನನ್ನು ಕೇಳುವಾಗ, ಅಮ್ಮ ಮಾತನಾಡಲಾಗದೆ ತಡವರಿಸುವಾಗ ಕಷ್ಟವಾಗತೊಡಗಿತ್ತು. "ಅಲ್ಲವೇ ನೀ ಯಾವಾಗ ಮದುವೆಯಾಗೋದು ? ಓದು ,ಕೆಲಸ ಎಲ್ಲ ಆದಂತೆ ಆ ವಯಸ್ಸಿಗೆ ಮದುವೆಯೂ ಆಗಿಬಿಡಬೇಕು. ಯಾರನ್ನಾದರೂ ಪ್ರೀತಿಸಿದ್ದೀಯ ? ಅದೂ ಬೇರೆ ಜಾತಿಯವನನ್ನಾ ? " ಅಂತೆಲ್ಲ ಬಂಧುಗಳು ಕೇಳುವಾಗ, "ಯಾವ ಕೆಲಸಕ್ಕೂ ಮುಂದಾಗಿ ಹೋಗಬೇಡ, ಇಂಥ ಮಾತುಗಳನ್ನೆಲ್ಲ ಕೇಳಬೇಕಾಗುತ್ತದೆ " ಎಂದು ಅಮ್ಮ ಮರುಗುತ್ತಿದ್ದಾಗೆಲ್ಲ  " ಹೌದು ಪ್ರೀತಿಸಿದ್ದೆ, ಇವತ್ತು  ಅದೇ ಹುಡುಗ ನನ್ನ ತಂಗಿಯನ್ನೇ ಮದುವೆಯಾಗುತ್ತಿದ್ದಾನೆ. ತಂಗಿಯ  ರಟ್ಟೆ ಹಿಡಿದು ಎಬ್ಬಿಸಿ, ಅವನೆದುರು ಹಸೆಮಣೆಯಲ್ಲಿ ಕುಳಿತು ತಾಳಿ ಕಟ್ಟಿಸಿಕೊಳ್ಳಲಾ ? " ಎಂದು ಕೂಗಿ ಕೇಳುವ ಮನಸ್ಸಾಗುತ್ತಿತ್ತು. ಆದರೂ ತಡೆ ಹಿಡಿದಿದ್ದೆ. ಮಗಳೇ ಎನ್ನುವ ಚಿಕ್ಕಮ್ಮನ ಪ್ರೀತಿ. ಮದುವೆಯೆಂದು ಪಾವನಿಯ ಕಣ್ಣಲ್ಲಿನ ಹೊಳಪು, ನನ್ನನ್ನು ಕಟ್ಟಿ ಹಾಕಿದ್ದವು. 

ಅವತ್ತು ಪಾವನಿ " ನೋಡೇ ಅಕ್ಕಾ , ನನ್ನ ಹುಡುಗಾ  ಹೇಗಿದ್ದಾನೆ ಹೇಳು? " ಎಂದು ನಿನ್ನ ಫೋಟೋವನ್ನು ಕೈಲಿಟ್ಟಾಗ  ಎಚ್ಚರತಪ್ಪಿ ಬಿದಿದ್ದೆ. ಎಚ್ಚರ ಬಂದಾಗ " ಹೇಗಿದ್ದಾನೆ ಹೇಳು ? ಅಂದ್ರೆ ಎಚ್ಚರ ತಪ್ತಿಯಲ್ಲ " ಅಂತ ಪಾವನಿ ಕೆನ್ನೆಯುಬ್ಬಿಸಿದರೆ " ನಿನ್ನ ಹುಡುಗ ಎಚ್ಚರ ತಪ್ಪುವಂತೆ ಇದ್ದಾನೆ, ಜೋಪಾನವಾಗಿಟ್ಟುಕೋ " ಅಂತ ಕೆನ್ನೆ ಹಿಂಡಿ ಕಳಿಸಿದ್ದೆ ಅವಳನ್ನು. ಆಮೇಲೆ ಯಥಾ ಪ್ರಕಾರ ನಿನ್ನ  ಪ್ರೀತಿಸಿದ ನೆನಪುಗಳು.. ಎಲ್ಲ ಪ್ರೇಮ ಕಥೆಗಳಿಗಿಂತ ಭಿನ್ನವೇನಿಲ್ಲ. ಪ್ರೀತಿಯಿಂದ ನೀ ನುಣುಚಿಕೊಳ್ಳಲು ಕೊಟ್ಟ ಕಾರಣವೂ ಭಿನ್ನವೇನಲ್ಲ. ಯು ಕೆ ಗೆ ಹೋಗಿ  ಬಂದವ ಕಣ್ಣು ತಪ್ಪಿಸಿ ಓಡಾಡತೊಡಗಿದ್ದೆ. ನಿಲ್ಲಿಸಿ ಕೇಳಿದವಳಿಗೆ " ನೋಡು   ಅಲ್ಲಿ ಹೋಗಿ ಬಂದವನಿಗೆ ಕರಿಯರ್ ಎಷ್ಟು important  ಎಂದು ಅರ್ಥವಾಗಿದೆ. ಮತ್ತೆ ಮನೆಯಲ್ಲೂ  ಅಮ್ಮನಿಗೆ ತಾನೇ ನೋಡಿದ ಹುಡುಗಿಯನ್ನು ಮಗ ಮದುವೆಯಾಗಬೇಕು ಇದೆ. ಅವರ ಮಾತು ಮೀರುವುದು ಸಾದ್ಯವಿಲ್ಲ. ಕಾಲ ಮಿಂಚಿಲ್ಲ, ಜೀವನ ಇನ್ನೂ ಇದೆ.  ಬೇರೆಯಾಗಿ ಬದುಕೋಣ " ಅಂತ ತಾವರೆ ಎಲೆಯ ಮೇಲಿನ ನೀರ ಹನಿಯಂತೆ ಜಾರಿಕೊಂಡು ಬಿಟ್ಟಿದ್ದೆ. ನೀ ಕೊಟ್ಟ ಪುಟಾಣಿ ಮಗುವಿನ ಕಾಲುಗೆಜ್ಜೆಯೊಂದು ನನ್ನ ಬಳಿಯಿತ್ತು. ಇನ್ನೊಂದು ಬಹುಶಃ ನಿನ್ನ ಬಳಿಯೇ ಇತ್ತೋ ಏನೋ. ಕಾಲಿಗೆ ಹಾಕಲು ಬಾರದ ಅದನ್ನು ಬಳೆಯಂತೆ  ನನ್ನ ಕೈಗೆ ಹಾಕಿಕೊಂಡು ಖುಷಿ ಪಡುತ್ತಿದ್ದೆ ಯಾವಾಗಲೂ... 

ನಿನ್ನ ಮದುವೆಯ ದಿನ  ಕೂಡ ಅದೇ ಗೆಜ್ಜೆಯನ್ನು ಕೈ ಗೆ ಹಾಕಿಕೊಂಡಿದ್ದೆ. " ಇದೇನೆ  ಕಾಲು ಗೆಜ್ಜೆನಾ ಕೈಗೆ ಹಾಕಿಕೊಂಡಿದ್ದೀಯ ಮ್ಯಾಚ್ ಆಗ್ತಿಲ್ಲ " ಅಂತ ಯಾರೇ ಹೇಳಿದರೂ ತೆಗೆಯುವ ಮನಸ್ಸಾಗಿರಲಿಲ್ಲ. " ಮದುವೆ ಗಂಡಿಗೆ ದೃಷ್ಟಿ ಬೊಟ್ಟು ಇಡಬೇಕಂತೆ. ಚೂರು ಸಹಾಯ ಮಾಡ್ತೀರ ? " ಅಂತ ನಿನ್ನ ಗೆಳೆಯ ನನ್ನನ್ನೇ ಕೇಳಿಕೊಂಡು ಬಂದಿದ್ದ. ಅದೇ  ಗೆಜ್ಜೆ ಹಾಕಿಕೊಂಡ ಕೈಯಲ್ಲೇ  ನಿನಗೊಂದು ದೃಷ್ಟಿ ಬೊಟ್ಟಿಟ್ಟು ನಕ್ಕಿದ್ದೆ.  " ಒಂದು ಸಹಾಯ ಮಾಡ್ತೀಯ ? ದಯವಿಟ್ಟು ತಾಳಿ ಕಟ್ಟುವಾಗ ಎದುರು ಕುಳಿತಿರಬೇಡ, ನಂಗೆ ಕಸಿವಿಯಾಗುತ್ತೆ, ಪಾಪಪ್ರಜ್ಞೆ ಕಾಡುತ್ತೆ " ಅಂತ ನನ್ನೆದುರು ಪಿಸುಗುಟ್ಟಿದ್ದೆ ಅಲ್ಲವಾ ? ತಾಳಿ ಕಟ್ಟುವಾಗ ಎದುರಿನಲ್ಲೇ ಇದ್ದೇನಲ್ಲ ನಾನು. ಒಂದು ಗಂಟು, ಉಹೂನ್ ಎರಡನೇ ಗಂಟು ಹಾಕುವಾಗಲೂ ನಿನ್ನ ಕಣ್ಣಲ್ಲಿ ಯಾವುದೇ ಕಸಿವಿಸಿ ಇರಲಿಲ್ಲ, ಯಾವ ಪಾಪಪ್ರಜ್ಞೆಯೂ ಇರಲಿಲ್ಲ ..!! ಪಾಪಪ್ರಜ್ಞೆ  ಕಾಡಿದ್ದು ನನಗೆ, ಪಾಪಿಯೇನಿಸಿಕೊಂಡಿದ್ದು  ನಾನು.. ಅಲ್ಲಿರಲಾರದೆ  ಓಡಿ ಬಂದು ದೇವಸ್ಥಾನದ ಮುಂದಿನ ಕಲ್ಯಾಣಿಯ ಪೌಳಿಯ ಮೇಲೆ ಕುಳಿತಿದ್ದೆ. ಗೆಜ್ಜೆಯನ್ನು ಬೀಸಿ ನೀರಿಗೆಸೆಯುವ ಮನಸ್ಸಾಗಿತ್ತು. ಆದರೆ ನೀರು ನನ್ನನ್ನೇ ಕರೆಯುವಂತೆ ಭಾಸವಾಗುತ್ತಿತ್ತು. ನಿಧಾನವಾಗಿ ಒಂದೊಂದೇ ಮೆಟ್ಟಿಲಿಳಿಯ ತೊಡಗಿದ್ದೆ. ನೀರೂ ಮೇಲೇರುತ್ತಿತ್ತು. ನೀರೊಳಗಿನ ಐದನೆಯದೋ ಆರನೆಯದೋ ಮೆಟ್ಟಿಲಲ್ಲಿದ್ದಾಗ ಗೆಜ್ಜೆಯ ಕೊಂಡಿ ತಪ್ಪಿತ್ತು. ಕೈಯಿಂದ ಜಾರಿ ನೀರೊಳಗೆ ಬೀಳುತ್ತಿದ್ದ ಗೆಜ್ಜೆ ಹಿಡಿಯಲು  ಬಾಗಿದ್ದೆ, ಕಾಲು  ತಪ್ಪಿತ್ತು.  "ಅವನಿ ಅಲ್ಲಿ ಯಾಕಮ್ಮ ಹೋದೆ ? ವಾಪಸ್ ಬಾ . ಅಯ್ಯೋ  ಮುಳುಗುತ್ತಿದ್ದಾಳೆ, ಈಜು  ಬರುತ್ತೆ ನಿನಗೆ ಕಾಲು  ಬಡಿಯೇ "  ಎಂದೆಲ್ಲ  ಮನೆಯವರೆಲ್ಲ ಹೇಳುತ್ತಿದುದು ಕ್ಷೀಣವಾಗುತ್ತ  ಕೊನೆಗೊಮ್ಮೆ  ನಿಂತೇ ಹೋಯಿತು. 
***********************************************************************
ಬೆಳಕಿಗೆ ಕಣ್ಣ ಹೊಂದಿಸಿಕೊಂಡು ಸುತ್ತ ನೋಡಿದೆ.  ಆಸ್ಪತ್ರೆಯ ವಾತಾವರಣ ಎಂದು ಗೊತ್ತಾಗಲು ಬಹಳ ಸಮಯ ಹಿಡಿಯಲಿಲ್ಲ. "ಮನೆಯಲ್ಲಿನ ಮದುವೆ ಹೇಗೆ ಆಯ್ತೋ,ಹೇಗೆ ಹೋಯ್ತೋ  ಗೊತ್ತಿಲ್ಲ. ಅಲ್ಲಿ ನೀರ  ಹತ್ತಿರ ಯಾಕೆ ಹೋಗಬೇಕಿತ್ತು. ಅಂತೂ ಕಣ್ಣು ಬಿಟ್ಟೆಯಲ್ಲ ತಾಯಿ" ಅಂತಾ ಅಜ್ಜಿ ಸಮಾಧಾನ ಮಾಡಿಕೊಳ್ಳುತ್ತಿದ್ದಾಳೆ.  ಸಾವ ಬಯಸಿ ಹೊರಟವಳನ್ನು ಬದುಕು ಪ್ರೀತಿಸತೊಡಗಿತ್ತು. ಬದುಕಿಸಿಕೊಂಡಿದೆ. ಸಾವ ಕದ ತಟ್ಟಿ ಬಂದವಳಿಗೆ ಬದುಕಿನ ಮೇಲೆ ಅಪರಿಮಿತವಾಗಿ ಪ್ರೀತಿ ಹುಟ್ಟಿದೆ. " ಹುಡುಗಾ ನಿನ್ನನ್ನೂ, ಪಾವನಿಯನ್ನು ಒಂದು ದಿನ ಮನೆಗೆ ಕರೆಯುತ್ತೇನೆ.  ತಪ್ಪದೇ ಬನ್ನಿ. ಹಾಂ  ನಮ್ಮ ಮನೆಗೆ ಬರಲು ನೀನೇನೂ ಮುಜುಗರ ಪಟ್ಟುಕೊಳ್ಳಬೇಕಾಗಿಲ್ಲ. ತಾಂಬೂಲ, ಹಣ್ಣುಗಳನ್ನು ನಿಮ್ಮ ಮುಂದೆ ಇಟ್ಟಂತೆ ಹಳೆಯ ಪ್ರೀತಿಯನ್ನು ಸಹ  ಪಕ್ಕದಲ್ಲಿ ಕರೆದು ಕೂರಿಸಿಕೊಳ್ಳುವುದಿಲ್ಲ. ಯಾಕೆಂದರೆ ಕೊಂಡಿ ತಪ್ಪಿ ಕಲ್ಯಾಣಿಯ ತಳ ಸೇರಿದ ಗೆಜ್ಜೆ ಮತ್ತೆಂದೂ ಸದ್ದು ಮಾಡುವುದಿಲ್ಲ...   

Saturday, 22 February 2014

’ಪಕ್ಕದಲ್ಲೇ ಮಲಗಿದ್ದರೆ, ಕನಸಿಗೆ ಬರಬಾರದೆ?’

ಎದೆಯಂಗಳದಿ  ನಿನ್ನ 
ನೆನಪ ಕೊಳವ 
ಕದಡುವ ಶಕ್ತಿ ಇರುವುದು 
ಹೊರಗಡೆ ಸುರಿವ 
ತುಂತುರು ಮಳೆಗೆ ಮಾತ್ರ ... 

ಸಣ್ಣ ಸೋನೆ ಮಳೆ ನಿನ್ನ ನೆನಪ ದೀಪ ಹಚ್ಚುತ್ತದೆ. ಮೋಡದ ಮರೆಯ ರಾಜಕುಮಾರ ನೀನು. ಮೋಡ ನೋಡಲು ಹೋಗುತ್ತೇನೆಂದು ಅಮ್ಮನಿಗೆ ಹೇಳಿ ಊರಂಚಿನ ಗುಡ್ಡದಲ್ಲಿ ನಿನ್ನ ಭೇಟಿಯಾದ ದಿನಗಳು ಮತ್ತೆ ಬರಲಾರವಲ್ಲ. ಮುಗಿಲ ಮಾರಿಗ ರಾಗ ರತಿಯಾ ನಂಜ ಏರಿತ್ತ...  ಎಂದು ನಾ ಹಾಡುವಾಗ ನನ್ನ ಮಡಿಲಲ್ಲಿ ಮಲಗಿ ನೀ ನನ್ನ ಕಿವಿ   ಜುಮುಕಿಯೊಂದಿಗೆ ಆಡಿದ ದಿನಗಳು ನೆನಪುಗಳಲ್ಲಿ ಸೇರಿ ಹೋಗಿವೆ. ಯಾವುದೋ ಪರಿಸ್ಥಿತಿಯ ನೆಪ ಹೇಳಿ ನೀ ನನ್ನ ತೊರೆದು ಹೋದಾಗ ಪ್ರೀತಿ ಬೂದಿಯಾಗಿತ್ತು. ತೊರೆದು ಹೋಗದಿರು ಜೋಗಿ .. ಎಂದು ಕೊನೆಯ ಬಾರಿ ನಿನ್ನಹೆಗಲು ತಬ್ಬಿ   ಹಾಡಿದ ಗಂಟಲು ಮೌನವಾಗಿದೆ. ದಿಬ್ಬದಂಚಲ್ಲಿ ನಿಂತರೆ ಮೋಡಗಳು ನಿನ್ನ ಸುದ್ದಿ ಹೇಳುವುದಿಲ್ಲ. ಇತ್ತೀಚಿಗೆ ಎಡವದಂತೆ ನಡೆಯುವುದನ್ನು ಕಲಿತಿದ್ದೇನೆ. ಎಡವಿದರೆ ಕೈ ಹಿಡಿಯಲು ನೀನಿಲ್ಲವಲ್ಲ. ಮೊನ್ನೆ ಮಳೆಯಲ್ಲಿ ನೆನೆಯುತ್ತಿದ್ದಾಗಲೂ ಊಹುಮ್  ನಿನ್ನ ನೆನಪಾಗಲೇ ಇಲ್ಲ. ಬಹುಶಃ ನೀ ಬದಲಾದಂತೆ ಇತ್ತೀಚಿಗೆ  ನಾನೂ ಬದಲಾದಂತಿದೆ. ಬತ್ತಿ ಹೋದ ನಿನ್ನ ನೆನಪುಗಳು ನನ್ನನ್ನು ಗಟ್ಟಿಗೊಳಿಸಿದಂತಿದೆ. 

ಇಷ್ಟು ಬರೆದು ಅವನಾಡಿದ ಜುಮುಕಿ ಮತ್ತು  ಮುಗಿಲ ಮಾರಿಗ ರಾಗ ರತಿಯಾ  ಹಾಡು ಬರೆದ ಹಾಳೆಯನ್ನು ಎಂದೋ ಮುಚ್ಚಿಟ್ಟಿದ್ದೆ. ಆದರೆ ಅದನ್ನು ನೀನು ಓದಿದ್ದೆ ಎಂಬುದನ್ನು ನೀನೇ ಮಡಚಿಟ್ಟ ಹಾಳೆಯ ಮಡಿಕೆಗಳು ಹೇಳುತ್ತಿದ್ದವು. "ಹೆಣ್ಣು ಪ್ರೀತಿಯ ವಿಷಯದಲ್ಲಿ ಸತ್ಯ ಹೇಳಬೇಕಂತೆ. ಗಂಡು ಸುಳ್ಳು ಹೇಳಬೇಕಂತೆ " ಅಂತ ಎಲ್ಲೋ ಕೇಳಿದ್ದೆ. ಹೇಳಿರದ ಸತ್ಯವೊಂದು ನಿನಗೆ ಗೊತ್ತಾಗಿತ್ತು. ತಪ್ಪು ಮಾಡಿಬಿಟ್ಟೆ ಅಂತ ಅನಿಸಲೇ ಇಲ್ಲ. ಸತ್ಯ,ಸುಳ್ಳನ್ನು ಮೀರಿದ ಒಂದು ನಂಬಿಕೆ ಕೈ ಹಿಡಿದಿತ್ತು. ಅವತ್ತಿನ ರಾತ್ರಿಯೇ ಅನ್ನಿಸಿತ್ತು ನಾಳೆ ಎಲ್ಲವೂ ಮೊದಲಿನಂತೆ ಇರುವುದಿಲ್ಲ ಎಂದು. 

ಮರುದಿನದ ಬೆಳಗು ಬದಲಾಗಿತ್ತು. ನೀನೂ  ಬದಲಾಗಿಬಿಟ್ಟಿದ್ದೆ. ಅದೆಷ್ಟು ಪ್ರೀತಿಸತೊಡಗಿಬಿಟ್ಟೆ ಆ ಹುಡುಗನೊಂದಿಗೆ ಜಿದ್ದಿಗೆ ಬಿದ್ದವನಂತೆ. ನನಗೆ,ನನ್ನ ಹಾಡುಗಳಿಗೆ ಮತ್ತೆ ಜೀವಕೊಟ್ಟೆ. ಮುಂಜಾನೆಯ , ಮದ್ಯಾಹ್ನದ , ಮುಸ್ಸಂಜೆಯ ರಾಗಗಳನ್ನು ಪೀಡಿಸಿ ಪೀಡಿಸಿ ರೆಕಾರ್ಡ್ ಮಾಡಿಸಿಕೊಂಡೆ. ಅದೆಷ್ಟೋ ರಾಗಗಳು ಸರಿರಾತ್ರಿಗಳಲ್ಲಿ ಸರಿದು ಹೋದವು. ಪಿಸುಮಾತುಗಳಾದವು. ಅದೆಷ್ಟೋ ಹಾಡುಗಳನ್ನು ನಿನಗಾಗಿಯೇ ಕಲಿತು ಹಾಡಿದೆ. ನನ್ನೊಳಗೊಂದು ಸಂಗೀತ ಬದುಕಾಗಿ ಜೀವತಳೆದು ನಿನ್ನ ಹೆಸರಿಟ್ಟುಕೊಂಡು ಬಿಟ್ಟಿತ್ತು. ನನಗೆ ನೀನಾಗುತ್ತಾ ಹೋದೆ.  ನನ್ನೊಳಗೊಂದಾಗುತ್ತಾ ಹೋದೆ. 

ಬೆಳಿಗ್ಗೆ ಎದ್ದರೆ ಬೆರಳ ತುದಿಯ 
ನೆನಪು ನೀನು ... 
ಕಣ್ಣುಮುಚ್ಚಿದರೆ  ರೆಪ್ಪೆಯಂಚಿನ 
ಕನಸು ನೀನು .. 
ಎದೆ ಬಾಗಿಲ ರಂಗವಲ್ಲಿ ನೀನು .. 
ಸೆರಗ ತುದಿಯ ನಾಚಿಕೆಯ 
ಚಿತ್ತಾರ ನೀನು ... 
ನೀನು ಮನದ ಮುಗಿಲ ತುಂಬಾ 
ಬರೀ ನೀನು ... 

ನಿನಗೆ ಸತ್ಯ ಗೊತ್ತಾದ ನಿರಾಳತೆಗೋ ಏನೋ ಆ ಹುಡುಗ ಕನಸಿಗೆ ಬರುವುದನ್ನು ನಿಲ್ಲಿಸಿಬಿಟ್ಟ ..!!  ಮನಸ ಕಾಡುವುದನ್ನೂ ...  ಅಲ್ಲೆಲ್ಲಾ ನೀನೇ ಆವರಿಸಿಕೊಳ್ಳುತ್ತಾ ಹೋದೆ. ಹೌದು ! ಮತ್ತೆ ಪ್ರೀತಿಯಾಗಿತ್ತು ನನಗೆ. ಮತ್ತೊಂದು ಹೊಸ ಕನಸು.. 

ಪ್ರೀತಿಯೆಂದರೆ ಏನೆಲ್ಲಾ .. 
ಪ್ರೀತಿಯೆಂದರೆ ಏನೂ ಇಲ್ಲಾ .. 
ಪ್ರೀತಿಯೊಳಗಡೆ ಏನಿಲ್ಲಾ .. 
ಪ್ರೀತಿಯಿಂದಲೇ ಎಲ್ಲಾ .. 
ಈ ಪ್ರೀತಿಗೆ ಹುಡುಕಿದಷ್ಟೂ 
ಹೊಸ ಅರ್ಥಗಳಲ್ಲ ... 

ಹೌದು ಹೊಸ ಹೊಸ ಅರ್ಥಗಳು ಪ್ರೀತಿಗೆ. ಬದುಕಲ್ಲಿ ಪ್ರೀತಿ ಒಮ್ಮೆ ಮಾತ್ರ ಆಗುತ್ತದೆ ಎಂಬುದು ಸುಳ್ಳಾ ? ಗೊತ್ತಿಲ್ಲ. ನಾನಂತೂ ಮತ್ತೆ ಘಾಡವಾಗಿ ಪ್ರೀತಿಸತೊಡಗಿದ್ದೆ. ಮನುಷ್ಯ ತಾನು ಕೊನೆವರೆಗೂ ಉಳಿಸಿಕೊಂಡಿದ್ದಕ್ಕೆ ಮಾತ್ರ ಪ್ರೀತಿ ಎಂದು ಹೆಸರಿಟ್ಟುಕೊಳ್ಳುತ್ತಾನೆ. ಅರ್ಧಕ್ಕೆ ಸತ್ತವುಗಳಿಗೆಲ್ಲ ತನ್ನ ದೌರ್ಬಲ್ಯ ದಾಟುವುದಕ್ಕಾಗಿ attraction, infatuation, one side love, wrong choice ಎಂಬೆಲ್ಲ ಹೆಸರಿಟ್ಟುಕೊಳ್ಳುತ್ತಾನೆ ಎನಿಸುತ್ತದೆ. ಅಮರ ಪ್ರೆಮಿಗಳೆನಿಸಿಕೊಂಡವರೆಲ್ಲ ಒಟ್ಟಿಗೆ ಸತ್ತರು.ಅದಕ್ಕಾಗಿಯೇ ಅವರ ಪ್ರೀತಿಗೆ "ಅಮರ ಪ್ರೀತಿ " ಎಂದು ಹೆಸರಾಯಿತೇನೋ. ಅವರಲ್ಲೂ ಒಬ್ಬರು ಸತ್ತು ಇನ್ನೊಬ್ಬರುಳಿದಿದ್ದರೆ ಆ ಪ್ರೀತಿ ಕೂಡ ,ಮೇಲಿನ ಯಾವುದಾದರೂ ಹೆಸರಿಟ್ಟುಕೊಂಡು ಸತ್ತು ಹೋಗುತ್ತಿತ್ತೇನೋ. ಪ್ರೀತಿಯ ಬಗೆಗೆ ಏನೇ ಗೊಂದಲಗಳಿದ್ದರೂ ನನಗಂತೂ ಮತ್ತೆ ಪ್ರೀತಿಯಾಗಿದೆ. ನಾನು ಸುಖಿ. ಉಳಿಸಿಕೊಳ್ಳಲಾಗದ ಕಾರಣಕ್ಕೆ ಹಳೆಯ ಪ್ರೀತಿಗೆ ಬೇರೇನೋ ಹೆಸರು ಕೊಡಲು ನಾನು ಸಿದ್ದಳಿಲ್ಲ. ಅವನೊಂದಿಗಿನ ಪಯಣಕ್ಕೋ , ಅವನಿಂದ ನಿನ್ನೆಡೆಗಿನ ಪಯಣಕ್ಕೋ ಹೆಸರು ಕೊಡುವ ಅಥವಾ ಹೆಸರಿಡುವ ಯಾವ ವ್ಯವಧಾನವೂ ಈಗ ಇಲ್ಲ ನನ್ನಲ್ಲಿ. ಈಗಿರುವುದು ನಿನ್ನ ಪ್ರೀತಿ ಮಾತ್ರ. ಆ ಪ್ರೀತಿ ಹೆಸರು ಬೇಡುತ್ತಿಲ್ಲ.

ನನ್ನೊಳಗಿನ ನಿನ್ನ  ಪ್ರೀತಿಯನ್ನು ಉಳಿಸಿಕೊಳ್ಳಬೇಕಿದೆ. ಅತ್ತೆ ಮಾವರಿಗೆ ಕಾಣದಂತೆ ಅಡುಗೆ ಮನೆಯಲ್ಲಿ ನಿನಗೆ ಕದ್ದು ಕೊಡುವ ಮುತ್ತಲ್ಲಿನ ಪ್ರೀತಿ.. ಮುತ್ತಿನ ಲೆಕ್ಕ ತಪ್ಪಿದೆ ಎಂದು ಜಗಳ ಆಡುವ ಹುಸಿಮುನಿಸಲ್ಲಿನ ಪ್ರೀತಿ...  ನೀ  ಆಫೀಸ್ ಗೆ ಹೊರಡುವ ಮುನ್ನ , 

ನೀ ಬರುವ ದಾರಿಯಲ್ಲಿ 
ಹಗಲು ತಂಪಾಗಿ ... 
ಬೇಲಿಗಳ ಸಾಲಿನಲ್ಲಿ 
ಹಸುರು ಕೆಂಪಾಗಿ .. 
ಪಯಣ ಮುಗಿಯುವ ತನಕ .. 
ಎಳೆಬಿಸಿಲ ಮಣಿಕನಕ 
ಸಾಲು ಮರಗಳ ಮೇಲೆ 
ಸೊಬಗ ಸುರಿದಿರಲಿ .. 

ಎಂಬ ಕೆ ಎಸ್ ಏನ್ ಕವನ ಗೀಚಿದ ಹಾಳೆಯನ್ನು ನಿನ್ನ ಕಿಸೆಯಲ್ಲಿಟ್ಟು, ನಿನ್ನೆದೆಗೆ ಒರಗಿ I Love You ಎಂದುಸುರುವ ಪ್ರೀತಿ. ಆಫೀಸ್ ನಿಂದ ಬಂದು fresh  up  ಆಗಲು ಕೋಣೆಗೆ ಹೋಗುವ ಮುನ್ನ "ನೀನೊಮ್ಮೆ ಬಾರೆ " ಎಂದು ಕಣ್ಣಲ್ಲೇ ಕರೆಯುವ ಆ ನಿನ್ನ ಪ್ರೀತಿ ಈ ಎಲ್ಲವನ್ನೂ ಹೀಗೆ ಹೀಗೆ ಉಳಿಸಿಕೊಳ್ಳಬೇಕಿದೆ. ಅಂದ ಹಾಗೆ ಹುಡುಗಾ ಇತ್ತೀಚೀಗೆ ಕನಸಿಗೆ ಬರುವುದನ್ನೇಕೇ ನಿಲ್ಲಿಸಿದ್ದೀಯಾ ?

ಪಕ್ಕದಲ್ಲೇ ಮಲಗಿರುತ್ತೀಯ 
ಎಂದ ಮಾತ್ರಕ್ಕೆ 
ಕನಸಿಗೆ ಬರಲು ನಿನಗೇಕೆ ಮುನಿಸು ? 
ಕನಸಲ್ಲೂ ನಿನ್ನ ಜೋತೆಗಿರಬೇಕೆಂಬ .. 
ಕನಸಲ್ಲೂ ನಿನ್ನ ಕಳೆದುಕೊಳ್ಳಲೊಲ್ಲದ..  
ಹಠಮಾರಿ ಮಗು ನನ್ನ ಮನಸ್ಸು ... 


(೧೪-೦೨-೨೦೧೪ ರ ಅವಧಿಯಲ್ಲಿ ಪ್ರಕಟವಾಗಿತ್ತು. Thank you  ಅವಧಿ ..) 

Tuesday, 28 January 2014

ದೇವಯಾನಿ...



ನಿನ್ನದೇ ಚಿತ್ರ ತೂಗು ಹಾಕಿದ ಹೃದಯದ ತೀರಾ ಒಳಕೋಣೆಗೆ  ಕದವಿಕ್ಕಿ ಬರುತ್ತೇನಾದರೂ ಬೀಗ ಹಾಕಲು ಯಾಕೋ ಮನಸ್ಸಾಗುವುದಿಲ್ಲ. ಯಾಕೆಂದರೆ ನಿನ್ನ ನೆನಪುಗಳು ಬಂದಾಗ ಬೀಗ ತೆಗೆಯುವಷ್ಟೂ ತಾಳ್ಮೆಯಿರುವುದಿಲ್ಲ ನನ್ನಲ್ಲಿ. ಅಷ್ಟು ಧಾವಂತದಲ್ಲಿರುತ್ತೇನೆ ನಿನ್ನ ಮುಂದೆ ಮಂಡಿಯೂರಲು. ನೀನೊಂಥರ "ಗೆಳೆಯಾ ಎಂದರೆ ಅದಕೂ ಹತ್ತಿರ .. ಇನಿಯಾ ಎಂದರೆ ಅದಕೂ ಎತ್ತರ" .. ನಿನ್ನನ್ನು ಸಂಬೋಧಿಸಲು ಶಬ್ದಗಳಿಲ್ಲ, ಹಾಗಾಗಿ ಸಂಬಂಧಕ್ಕೊಂದು ಹೆಸರಿಡದೆಯೇ ಹಾಗೆ ಇದೆ.

ನಿನ್ನ ಪರಿಚಯ ಆಕಸ್ಮಿಕವೇನಲ್ಲ. ಕ್ಲಾಸ್ ಮೇಟ್ ಗಳಾಗಿದ್ದವರು ನಾವು. ಆದರೆ ಖಂಡಿತ ನಿನ್ನ ಮುಖ ಪರಿಚಯವಿರಲಿಲ್ಲ, ಯಾಕೆಂದರೆ ನೀ ಕ್ಲಾಸ್ ಕಡೆ ಮುಖ ಹಾಕಿದವನೇ ಅಲ್ಲವಲ್ಲ.  ಅವತ್ತೊಂದಿನ  ಯಾವುದೋ ಕಾದಂಬರಿ ಓದುತ್ತಾ ಕುಳಿತವಳ ಬಳಿ ಬಂದವನು, ನಾನು "ಪಿಆರ್" , ಶ್ರೀ ಮತ್ತು ಜಾನು ನಿನ್ನ ಬಗ್ಗೆ ಹೇಳ್ತಾ ಇರ್ತಾರೆ, ಅಂತ ಎದುರು ಬಂದಿದ್ದೆ. ನಿನ್ನ ಬಗ್ಗೆ ನನಗೂ ಕೇಳಿ ಗೊತ್ತಿತ್ತು ಆದ್ದರಿಂದ ನಾನು .. ಎಂದು ಶುರು ಮಾಡುವ ಮೊದಲೇ ನೀನೇ " ದೇವಯಾನಿ " ಎಂದಿದ್ದೆ. ನನ್ನ ಹೆಸರು ಅದಲ್ಲ ಎಂದವಳಿಗೆ  " ನಿನ್ನ ಕಿವಿ ಜುಮುಕಿ , ಕೆನ್ನೆ ತಾಕುವ ಕೂದಲುಗಳಿವೆಯಲ್ಲ ತುಂಬಾ ಇಷ್ಟವಾಯ್ತು ನಂಗೆ, ಅದ್ಯಾಕೋ ಯಯಾತಿಯಲ್ಲಿನ ದೇವಯಾನಿ ನೆನಪಾದಳು. ಇನ್ನೊಂದು ಏನು ಗೊತ್ತಾ ನನ್ನಮ್ಮನ ಹೆಸರು ಬಿಟ್ಟರೆ ಜಗತ್ತಿನಲ್ಲಿ ನಾನಿಷ್ಟ ಪಟ್ಟ ಇನ್ನೊಂದು ಹೆಸರು ದೇವಯಾನಿ. ನಿನ್ನ ನಿಜ ಹೆಸರು ಗೊತ್ತಿದ್ದರೂ ನಾ ನಿನಗೆ ದೇವಯಾನಿ ಎಂದೇ ಕರೆಯುತ್ತೇನೆ" ಎಂದಿದ್ದೆ. ಅವತ್ತಿನಿಂದ ನಿನಗೆ ನಾ ದೇವಯಾನಿಯೇ ಆಗಿದ್ದೆ. ಆದರೆ ನಾವಿಬ್ಬರೇ ಇದ್ದಾಗ ಮತ್ತು ಮೆಸೇಜ್ ಗಳಲ್ಲಿ ಮಾತ್ರ ನೀ ಹಾಗೆ ಕರೆಯುತ್ತಿದುದು. ಎಲ್ಲರೆದುರು ಎಲ್ಲರಂತೆ ನಿನಗೂ "ಚಂದು " ನಾನು. ಆಮೇಲೆ ಜಾನು , ಶ್ರೀ, ನಾನು , ರಾಘು, ವಸು, ನೀನು, ಪ್ರವಿ ಎಲ್ಲ ಒಂದು ಗ್ರೂಪ್ ಆಗಿಬಿಟ್ಟಿದ್ವಿ. ಕಾಲೇಜ್ ಕಾರಿಡಾರ್ ನಲ್ಲಿ ಕಾಣದೇ ಇದ್ದ ನೀವೆಲ್ಲ ಕಾಲೇಜ್ ಗೆ ಬರುತ್ತಿದ್ದೀರಿ. " ಮಗಾ ಎಗ್ಸಾಮ್ ಮಾತ್ರ ಅಟೆಂಡ್ ಮಾಡ್ತಾ ಇದ್ದ ನೀನು ಈಗೇನೋ ಇಷ್ಟೊಂದು ಕಾಲೇಜ್ ಕಡೆ ಬರ್ತೀಯ " ಅಂತಾ ರಾಘು ಕೇಳಿದರೆ "ದೇವಯಾನಿಗಾಗಿ " ಅಂತ ನೀ ತಣ್ಣಗೆ ಉತ್ತರಿಸಿದ್ದರೆ ಹಾವು ತುಳಿದಂತಾಗಿತ್ತು ನಂಗೆ. ಗಾಬರಿಯಲ್ಲಿ ನಿನ್ನ ಕಡೆ ನೋಡಿದರೆ ನಿನ್ನ ತುಂಟ ಕಣ್ಣುಗಳು ನನ್ನ ನೋಡಿ ನಗುತ್ತಿದ್ದವು. ನಮ್ಮನೆಲ್ಲ ನಿಮ್ಮ ಮನೆಗೆ ಕರೆದುಕೊಂಡು ಹೋದಾಗಲೂ ಅಷ್ಟೇ, ಎಲ್ಲರನ್ನೂ ನೀನೇ ಪರಿಚಯಿಸಿದ್ದರೂ, ನಿನ್ನಮ್ಮ ನನ್ನ ನೋಡಿದವರೇ ಚಂದು ಅಲ್ವಾ  ಗೊತ್ತು ಬಿಡು ಅಂದಾಗ  ಗಾಬರಿಯಾಗಿತ್ತು ನಂಗೆ. ನೀ ಎಲ್ಲರಿಗೂ ಮನೆ ತೋರಿಸುತ್ತಿದ್ದರೆ ನಿಮ್ಮಮ್ಮ ನನ್ನನ್ನು ಅವರ ಕೋಣೆಗೆ ಕರೆದೊಯ್ದಿದ್ದರು. ಅಲ್ಲಿ ಗೋಡೆಗಿದ್ದ ನನ್ನದೇ ದೊಡ್ಡ  ಫೋಟೋ ನಗುತ್ತಾ ನನ್ನನ್ನು ಸ್ವಾಗತಿಸಿದರೆ ವಿಸ್ಮಿತಳಾಗಿದ್ದೆ ನಾನು. ಅದು ಯಾವಾಗ ತೆಗೆದಿದ್ದು ಎಂದು ನಾನು ಯೋಚಿಸುತ್ತಿದ್ದರೆ ನಿಮ್ಮಮ್ಮ  " ನನ್ನ ಮಗ ಇಷ್ಟ ಪಟ್ಟ ಹುಡುಗಿ ನೀನು , ನೀವಿಬ್ಬರೂ ಸೇರುವ ದಾರಿಯೇ ದೂರವಿದೆ, ಸೇರಿದ ಮೇಲೆಯೂ ನಡೆವ ದಾರಿ ಇನ್ನೂ ದೂರದ್ದು. ಸಂಯಮವಿರಲಿ, ಎಚ್ಚರವಿರಲಿ" ಎಂದರು.  ನಿನ್ನಮ್ಮನ ಮಾತಿನಲ್ಲಿ ಪ್ರೀತಿಯ ಜೊತೆಗೆ ಎಚ್ಚರಿಕೆಯೂ ಇತ್ತು. 

ನೀನು ಯಾವತ್ತೂ ನೀನಾಗೆ ಪ್ರೀತಿ ಎಂದು ಬಂದವನಲ್ಲ. ನೀನಾಗಿಯೇ ಯಾವತ್ತೂ  ಪ್ರೀತಿಯನ್ನೂ ಹೇಳಿಕೊಳ್ಳಲೂ ಇಲ್ಲ. ಏಕಾಂತದಲ್ಲಿ ಮಾತಿಗೆ ಕರೆಯಲಿಲ್ಲ. ಏಕಾಂತದಲ್ಲಿ ಸಿಕ್ಕಾಗಲೂ ಕಾಡಲೂ ಇಲ್ಲ. ಶಟಲ್ ಆಡುವಾಗ ಎಲ್ಲರೆದುರೇ ದೇವಯಾನಿಯ ಬಗೆಗೆ ಕನಸುಗಳ ತೆರೆದಿಡುವಾಗ ಮನಸ್ಸೆಂಬೋ  ನವಿಲು ಗರಿ ಬಿಚ್ಚಿ ಕುಣಿಯುತ್ತಿತ್ತು. ಆದರೆ ತೋರಿಸಿಕೊಳ್ಳುವಂತಿರಲಿಲ್ಲ. ಪ್ರೀತಿ , ಪ್ರತಿಷ್ಠೆಯ ನಡುವಿನ ಜೂಜಾಟದಲ್ಲಿ ಪ್ರೀತಿಗೆ ಸೋಲು ಎಂಬುದು ಚೆನ್ನಾಗಿ ಗೊತ್ತಿತ್ತು ನನಗೆ. ನನಗಿಂತಲೂ ಗಟ್ಟಿಯಾದ  ಕನಸುಗಳು ನಿನಗಿದ್ದಾಗ ಅದನ್ನೆಲ್ಲ ಹಾಳು ಮಾಡುವ ಮನಸ್ಸಿರಲಿಲ್ಲ. ಅದಕ್ಕಾಗಿ  ಉತ್ತರದ ವಿಷಯದಲ್ಲಿ ನಾ ಮೌನಿಯಾಗಿದ್ದೆ. ನೀನು ಕೂಡ ಎಂದಿಗೂ ಉತ್ತರ ಕೊಡು ಎನ್ನುವಂತೆ ನನ್ನ ಕೇಳಿರಲೇ ಇಲ್ಲ. ಕಾಲೇಜ್ ಮುಗಿಯಿತು.  ಹೈಯರ್ ಸ್ಟಡಿಸ್ ಗಾಗಿ ಡೆಲ್ಲಿಗೆ ಹೋಗುವಾಗ ಮಾತ್ರ ನೀ ನನ್ನ ಕೇಳಿದ್ದೆ " ಏನು ಯೋಚಿಸಿದ್ದೀಯ ?" ಎಂದು. ಆ ಮುಸ್ಸಂಜೆಯಲ್ಲಿ ಸುಮ್ಮನೆ ನಿನ್ನ ಕೈ ಅದುಮಿ ಬಸ್ಸಿಂದ ಇಳಿದು ಬಂದವಳಲ್ಲಿ ಯಾವ ಭಾವನೆಗಳಿದ್ದವೋ ಇಂದಿಗೂ ಗೊತ್ತಿಲ್ಲ. ಅದನ್ನು ನೀನೇನೆಂದು ಅರ್ಥೈಸಿಕೊಂಡೆಯೋ ಅದೂ ಗೊತ್ತಿಲ್ಲ. ನಾನು ನನ್ನದೇ ಆದ ಹುಡುಕಾಟಗಳಲ್ಲಿ ಕಳೆದು ಹೋದರೆ ನೀ ನಿನ್ನ ಕನಸುಗಳಲ್ಲಿ ಕಳೆದು ಹೋದೆ. ಅದೆಷ್ಟೋ ತಿಂಗಳುಗಳು ಮಾತುಗಳಿಲ್ಲದೆ ಕಳೆದುಹೋಗಿದ್ದವು. ಅಪರೂಪಕ್ಕೆಲ್ಲೋ  ಮಾಡುವ ಕಾಲ್ ನಲ್ಲೂ ಕೂಡಾ ನಮ್ಮ ನಮ್ಮ ಕೆಲಸ , ಓದಿನ ಬಗ್ಗೆ ಮಾತುಗಳಿರುತ್ತಿದ್ದವು. ಈ ಹುಡುಗ "ದೇವಯಾನಿ" ಯನ್ನು ಮರೆತಿದ್ದಾನೆ ಎಂದುಕೊಂಡಿದ್ದೆ. ಆದರೆ ಕೊನೇ ಭೇಟಿಯಲ್ಲಿ ನೀನು " ಇನ್ನೊಂದೇ ಹೆಜ್ಜೆ ಕಣೆ ಗುರಿಗೆ, ಆಮೇಲೆ ಬಂದು ನನ್ನ ದೇವಯಾನಿಯನ್ನು ಕರೆದುಕೊಂಡು ಹೋಗುತ್ತೇನೆ " ಎಂದಾಗ ಅದೆಂಥ ಹುಚ್ಚು ಪ್ರೀತಿಯೋ ಹುಡುಗಾ ನಿನ್ನದು ಎನಿಸಿತ್ತು. ಆದರೆ ವಿಧಿ ಬೇರೆಯದಿತ್ತು ಬಿಡು. ವಾಪಸ್ ಹೋದವನು accident ಗೆ ಬಲಿಯಾಗಿದ್ದೆ. ಬರುತ್ತೇನೆ ಎಂದು ಹೇಳಿ ಹೋದವನು ಮರಳಿ ಬಾರದ ಲೋಕಕ್ಕೆ ಹೋಗಿದ್ದೆ. ಸೇರುವ ಮೊದಲೇ ದಾರಿ  ಮುರಿದು ಬಿದ್ದಿತ್ತು.  



ನಿನ್ನ ಸಾವಿನ ಸುದ್ದಿಯನ್ನು ಕೇಳಿದವಳು, ಅಮೇಲೇನನ್ನೂ ಯಾರ ಬಳಿಯೂ ಕೇಳಿಲ್ಲ. ನಿನ್ನ ಸಾವನ್ನು ಒಪ್ಪಿಕೊಳ್ಳಲು ಆಗಲೇ ಇಲ್ಲ ನನ್ನಿಂದ.  ಜಾನು , ಶ್ರೀ,ರಾಘು, ವಸು, ಪ್ರವಿ ನಿನ್ನ ನೆನಪು ಮಾಡಿಕೊಳ್ಳುತ್ತಾರೆ. ಆಗೆಲ್ಲ ನನಗೆ ಅಪರಾಧಿ ಪ್ರಜ್ಞೆ ಕಾಡುತ್ತೆ. ಆಗಲೇ ಒಪ್ಪಿಕೊಂಡು ಬಿಡಬೇಕಿತ್ತಾ ಎನಿಸುತ್ತದೆ. ಒಂದು ವೇಳೆ ಒಪ್ಪಿಕೊಂಡಿದ್ದರೆ ಇವತ್ತಿಗೆ ನನ್ನ ಬದುಕು ಏನಾಗುತ್ತಿತ್ತು ಎಂದು ಯೋಚನೆ ಬಂದರೆ ಸ್ವಾರ್ಥಿಯಾಗುತ್ತೇನೆ ನಾನು ಎನಿಸುತ್ತೆ. ಆದರೆ ಒಪ್ಪಿಕೊಂಡರೂ ಒಪ್ಪಿಕೊಳ್ಳದಿದ್ದರೂ ಅದು ವಾಸ್ತವ. ಮೊನ್ನೆ ನಿಮ್ಮ ಮನೆಗೆ ಹೋಗಿದ್ದೆ. " ಮುಕ್ತಾ ಮೇಡಂ ಮನೆ ಖಾಲಿ ಮಾಡಿದ್ದಾರಂತೆ, ಅಲ್ಲಿ ಬೇರೆ ಯಾರೋ ಬಾಡಿಗೆಗಿದ್ದಾರಂತೆ " ಅಂತ ವಸು ಹೇಳಿದ್ದರೂ ಆ ಮನೆಯ ಬಾಗಿಲು ಬಡಿದಿದ್ದೆ. ನಿಮ್ಮಮ್ಮನೆ ಬಾಗಿಲು ತೆಗೆದಾಗ ಖುಷಿಯಾಯ್ತು. ಅವತ್ತಿನದೇ ಪ್ರೀತಿಯಲ್ಲಿ ಬರಮಾಡಿಕೊಂಡರು. ನಿನ್ನ ಬಾಸ್ಕೆಟ್ ಬಾಲ್, ಸ್ಕೇಟಿಂಗ್ ಷೂಸ್, ಬುಕ್ಸ್ , ಬ್ಯಾಗ್ ಎಲ್ಲವು ಅದರದರದೇ ಸ್ಥಾನಗಳಲ್ಲಿದ್ದವು. ಗೋಡೆಯಲ್ಲಿ ನನ್ನ ಫೋಟೋ ಹಾಗೆಯೇ ನಗುತ್ತಿತ್ತು. ಅದರ ಎದುರಿನ ಗೋಡೆಯಲ್ಲಿ ನಿನ್ನ ಮೂರು ಫೋಟೋಗಳು ನನ್ನನ್ನು ನೋಡುತ್ತಿರುವಂತೆ.  ಅಲ್ಲಿ ನೋಡಿದವರಿಗೆ ನೀನಿಲ್ಲ ಎಂದು ಅನಿಸಲು ಸಾದ್ಯವೇ ಇರಲಿಲ್ಲ. ಅಲ್ಲಿ ನಿನ್ನ ಅಸ್ತಿತ್ವ  ನಿರಂತರ ಅನಿಸಿತು. ನಾವು ಮಾತನಾಡಿದೆವು ಎನ್ನುವುದಕ್ಕಿಂತ ತುಂಬಾ ಹೊತ್ತು ಮೌನದಿಂದ ಇದ್ದೆವು ಅಂದರೆ ಸರಿ ಆಗುತ್ತೆ. ಹೊರಡುವ ಮುಂಚೆ ನನ್ನ ಫೋಟೋ ತೋರಿಸಿ ನಿನ್ನ ಅಮ್ಮನನ್ನು ಕೇಳಿದೆ "ಈ ಫೋಟೋ ತೆಗೆದುಕೊಂಡು ಹೋಗಲಾ? ನಾನು"  ಅಂತ. ಅದಕ್ಕೆ ಅವರು ನಿನ್ನ ಫೋಟೋಗಳನ್ನು ತೋರಿಸಿ "ಆ ಫೋಟೋಗಳಲ್ಲಿ ಬೇಕಾದರೆ ಒಂದನ್ನು ತೆಗೆದುಕೋ. ಈ ಫೋಟೋ ನನ್ನ ಸೋಸೆಯದು, ಕೊಡೋಲ್ಲ " ಎಂದರು. ಓಡಿ ಹೋಗಿ ನಿಮ್ಮಮ್ಮನನ್ನು ತಬ್ಬಿಕೊಂಡೆ. ಅವರೂ ನನ್ನನ್ನು ಬಿಗಿಯಾಗಿ ತಬ್ಬಿಕೊಂಡರು. ಆ ಅಪ್ಪುಗೆಯಲ್ಲಿ ಬಹಳ ಮಾತುಗಳಿದ್ದವು. ಕೆಲವಷ್ಟು ಅರ್ಥವಾದವು, ಕೆಲವು ಆಗಲಿಲ್ಲ. ಅದರಲ್ಲಿ ನಿನಗೆ ಹೇಳಬೇಕಾಗಿದ್ದ ಮಾತುಗಳೆಷ್ಟಿದ್ದವೋ ???    

******************************************************************
ಸಂಭ್ರಮದ  ಎರಡು ವಸಂತಗಳು ಸಂಧ್ಯೆಯಂಗಳದಲ್ಲಿ ... 
ಎಲ್ಲರ ಪ್ರೀತಿಗೆ ಋಣಿ ... 

ಪ್ರೀತಿಯಿಂದ ....  ಸಂಧ್ಯೆ .... 

        

Tuesday, 7 January 2014

ಬೆಳ್ಳಿತಾರೆ ....


ಥತ್ ಈ ಟ್ರಾಫಿಕ್ ದಾಟಿ ಆ ಕಡೆಯ ಆಫೀಸ್ ಹೋಗಬೇಕೆಂದರೆ ಹಿಂಸೆ ಅನ್ನುತ್ತಾ ರಸ್ತೆ ದಾಟಲೋ ಬೇಡವೋ ಅಂತ ನೋಡುತ್ತಿದ್ದೆ. ಅಷ್ಟರಲ್ಲಾಗಲೇ ಎರಡೋ ಮೂರೋ ಆಟೋದವರು  ಎದುರು ತಂದು ನಿಲ್ಲಿಸಿ ಬರುತ್ತೀನಾ ? ಎಂಬಂತೆ ಮುಖ ನೋಡಿದ್ದರು. ನಾವೇ ಕರೆದರೆ ಬರೋಲ್ಲ ಅನ್ನೋರು ರಸ್ತೆ ದಾಟೋವಾಗ ಅಡ್ಡ ಬರ್ತಾರಪ್ಪ ಅಂತ ಬೈಕೊತಿದ್ದೆ. ಅದೆಲ್ಲಿಂದ ಬಂದನೋ ಈ ಹುಡುಗ. ನಾ ನೋಡುತ್ತಿದ್ದಂತೆ ನನ್ನ ಕೈ ಹಿಡಿದು ಎಳೆದುಕೊಂಡು ರಸ್ತೆ ದಾಟಿಸಿಬಿಟ್ಟ .. !! ಬಾಯಿಗೆ ಬಂದಂತೆ ಬಯ್ಯ ಬೇಕೆಂದುಕೊಂಡವಳಿಗೆ ಬರುತ್ತಿದ್ದ ಏದುಸುರಿಗೆ ಮಾತನಾಡಲು ಆಗುತ್ತಿರಲಿಲ್ಲ. ಆತನೇ ಕೇಳಿದ "ನಿಮ್ಮನ್ನ ಡೈಲಿ ಬಸ್ಸಲ್ಲಿ ನೋಡುತ್ತೇನೆ, ಇಲ್ಲೇ ಹತ್ರ ಎಲ್ಲಾದ್ರು ವರ್ಕ್ ಮಾಡ್ತೀರಾ ? " ಹೌದು ಎಂಬಂತೆ ತಲೆಯಾಡಿಸಿದೆ. " ನನ್ನದು ಇಲ್ಲಿಯೇ ಕಾಲೇಜ್. ಇಬ್ಬರೂ ದಿನಾ ಒಂದೇ ಸ್ಟಾಪ್ ಲ್ಲೇ ಬಸ್ ಹತ್ತೋದು. ಬನ್ನಿ ಹೋಗೋಣ" ಅಂದ. ಕುಶಲವೇ ಕ್ಷೇಮವೇ ಎಲ್ಲ ವಿನಿಮಯವಾದಂತೆಲ್ಲ ಬಸ್ ಇಳಿದು ಆಫೀಸ್ ಗೆ ಹೋಗುವ ಒಂದೈದು ನಿಮಿಷದ ದಾರಿಗೆ ಆ ಹುಡುಗ ಗೆಳೆಯನಾದ. ನನ್ನ ಆಫೀಸ್ ಮತ್ತು ಅವನ ಕಾಲೇಜ್ ಗೆ ಕವಲೊಡೆಯುವ ದಾರಿಯವರೆಗೂ ಆತ ಜೊತೆ ನನಗೆ. ಇಬ್ಬರೂ ಒಂದೇ ಸ್ಟಾಪ್ ನಲ್ಲೆ ಹತ್ತುತ್ತೇವೆ ಆದರೂ ಹತ್ತುವ ಜಾಗದಲ್ಲಿ, ಬಸ್ಸಿನಲ್ಲೆಲ್ಲ ತೀರ ಅಪರಿಚಿತರಂತೆ ಇರುವ ನಾವು ಆಫೀಸ್ ದಾರಿಯಲ್ಲಿ ಮಾತ್ರ ಹುಟ್ಟಾಪರಿಚಿತರಂತೆ .. !! 

ಒಂದೊಂದು ದಿನ ಬೇಗ ಬಸ್ ಹೋದರೆ ಅಲ್ಲೇ ರಸ್ತೆ ಪಕ್ಕದ ಕಟ್ಟೆ ಮೇಲೆ ಕುಳಿತು ಒಂದೇ ಇಯರ್ ಫೋನ್ ನ ಇಬ್ಬರೂ ಕಿವಿಗೆ ಸಿಕ್ಕಿಸಿಕೊಂಡು ಎಫ್ ಎಮ್ ಕೇಳುವ ಮಜವೇ ಬೇರೆ. "ಅದೇನೂ ಬೀಟ್ ಸಾಂಗ್ ಅಂತಾ ಸಾಯ್ತೀಯ ಇರು ಕನ್ನಡ ಕೇಳೋಣ" ಅಂದ್ರೆ " ಲೇ ಸುಮ್ನೆ ಇರೆ, ರಚನಾ ಅಂತೆ, ಸ್ಮಿತಾ ಅಂತೆ, ಅವರ ಭಾಷಣ ಕೇಳ್ತಾ ಕಾಲ ತಳ್ತೀಯ. ಸಾಂಗ್ ಕೇಳೋಕೆ ಬಿಡಲ್ಲ ನೀನು" ಅಂತ ಅವನ ಜಗಳ. "ಅಡ್ವರ್ಟೈಸ್ ಮೆಂಟ್ ನೂ ಭಕ್ತಿಂದ ಕೇಳೋ ಮೆಂಟಲ್ ಗಳಿರ್ತಾರೆ ಅಂತ ನಿನ್ನ ನೋಡೇ ಗೊತ್ತಾಗಿದ್ದು" ಅಂತ ನಾನು ಕಾಲೆಳದರೆ " ನಿನಗೇನ್ ಗೊತ್ತು ವೀಕ್ ಎಂಡ್ ಪ್ಲಾನ್ ಮಾಡಬಹುದು ಗೊತ್ತಾ ? ರಿಲಾಯನ್ಸ್ ಲಿ, ವುಡ್ ಲ್ಯಾಂಡ್ ಲಿ ಆಫರ್ ಇದೆ ಅಂತಾ, ಪ್ಯಾಲೇಸ್ ಗ್ರೌಂಡ್ ಎಕ್ಸಿಬಿಷನ್ ಬಗ್ಗೆ ನಿಂಗೆ ಹೇಳಿದ್ದು ನಾವೇ ಮ್ಯಾಡಂ ಅದೂ ಈ ಎಫ್ ಎಮ್ ಅಡ್ವರ್ಟೈಸ್ ಮೆಂಟೇಮಾ " ಅಂತ ಹುಬ್ಬು ಹಾರಿಸೋದು ಅವನು. ಇಷ್ಟೆಲ್ಲಾ ಆಗೋ ಹೊತ್ತಿಗೆ ಇಬ್ಬರ ಕಿವಿಯಿಂದಲೂ ಸ್ಪೀಕರ್ ಗಳು ಕೆಳಗೆ ಬಿದ್ದು ಎಫ್ ಎಮ್ ಅನಾಥವಾಗಿ ಕೂಗುತ್ತಿರುತ್ತದೆ. ಅಯ್ಯೋ ಪಾಪಿ ಆಗಲೇ ಟೈಮ್ ಆಯ್ತು ಅಂತ ನಾನು ಹೊರಟಾಗಿರುತ್ತದೆ.
ಇಷ್ಟು ಮಾತ್ರದ ದೂರವನ್ನು ಅಷ್ಟೆನಿಸುವಂತೆ ನಿಧಾನಕ್ಕೆ ಹೆಜ್ಜೆ ಹಾಕಿ ನಡೆಯಲು ನಮ್ಮಿಬ್ಬರಿಗೂ ಇಷ್ಟ. ಒಂದೊಂದು ದಿನ ಎಲ್ಲ ತಮಾಷೆಯಂತೆ ತೋರುತ್ತಾ ಮಾತನಾಡುವ ನಾವು ಕೆಲವೊಮ್ಮೆ ಸಿಕ್ಕಾಪಟೆ ಸಿರಿಯಸ್ ಆಗಿ ಬಿಡ್ತೀವಿ. ಅವತ್ತು ಹಾಗೆಯೇ ಅವನೇ ಕೇಳಿದ್ದ " ಅಲ್ಲ ಕಣೆ ಇಲ್ಲಿ ಇಷ್ಟೊಂದು ಬಸ್ ಓಡಾಡುತ್ತವೆ. ಎಲ್ಲಾ ಬಸ್ ಗಳೂ ಒಂದೇ ಬಣ್ಣ. ಆದ್ರೆ ನಾವು ಬರೋ ಬಸ್ ನೋಡು ಎಷ್ಟೊಂದು ಬಣ್ಣಗಳಿವೆ " " ಹೌದು ಕಣೋ ಬದುಕಿಗೇ ಸಾವಿರ ಬಣ್ಣವಂತೆ, ಇನ್ನು ನಾವ್ ಬರೋ ಬಸ್ಸಿಗೆ ಅಷ್ಟು ಬಣ್ಣಗಳಿರೋದು ಆಶ್ಚರ್ಯನಾ ? " ಅಂದೆ. "ಬದುಕು ಅನ್ನೋದನ್ನ ಅಷ್ಟು ಪ್ರೀತಿಸ್ತೀಯಲ್ಲ ನೀನು . ಬದುಕು ನಿನಗೆ ಬೇಕಾಗಿದ್ದೆಲ್ಲವನ್ನೂ ಕೊಟ್ಟಿದೆಯಾ ?" "ಬದುಕು ಸಾಕಷ್ಟು ಕೊಟ್ಟಿದೆ, ನನಗೆ ಬೇಕಾದ್ದನ್ನು ನಾನಾರಿಸಿಕೊಂಡಿದ್ದೇನೆ" ಅಂದೆ ನಗುತ್ತಾ. " ಬೇಕಾದವರನ್ನೂ ?" ಅಂತ ಬಂದ ಪ್ರಶ್ನೆಗೆ ಏನು ಹೇಳಬೇಕೋ ಅರ್ಥವಾಗದೆ " ಅದು ಕೊಟ್ಟಿಲ್ಲ, ನಾನೂ ಕೇಳಿಲ್ಲ " ಅಂದುಬಿಟ್ಟೆ. ಅಲ್ಲಿಗೆ ದಾರಿ ಕವಲಾಗಿತ್ತು. ಬೈ ಎನ್ನುತ್ತಾ ಕೈ ಬೀಸಿ ಹೋದವನನ್ನು ನೋಡುತ್ತಿದ್ದವಳು ಮನಸ್ಸನ್ನೋದುವ ಶಕ್ತಿಯೇನಾದರೂ ಇದೆಯಾ ಈ ಹುಡುಗನಿಗೆ ಎಂದು ವಿಸ್ಮಿತಳಾಗಿದ್ದೆ.
ಹೀಗೆ ಗಲಾಟೆ, ಸೀರಿಯಸ್ ಗಳ ನಡುವೆ ದಿನ ಕಳೆಯುತ್ತಿದೆ. ನಾವು ಹೋಗುವ ದಾರಿಯಲ್ಲಿ ಯಾವಾಗಲೂ ಕಪ್ಪು ಕಾರೊಂದು ನಿಂತಿರುತ್ತದೆ. ಇಷ್ಟು ದಿನ ಅದರ ಬಗ್ಗೆ ಗಮನವಿರದಿದ್ದರೂ ಸುಮಾರು ತಿಂಗಳ ಹಿಂದೆ ಕಪ್ಪು ಕಾರಿನ ಹತ್ತಿರ ಬಂದರೆ ಹುಡುಗ ನಿಧಾನ ಬರ್ತೀನಿ ನೀ ಮುಂದೆ ಹೋಗು ಎನ್ನುತ್ತಾನೆ. ನಾನೂ ಯಾವತ್ತು ಹಿಂದೆ ತಿರುಗಿ ನೋಡಿಲ್ಲ. ಹಾಗೆ ನೋಡಿದರೆ ಅವನ ಮೇಲಿನ ನಂಬಿಕೆಗೆ ದ್ರೋಹ ಬಗೆದಂತೆ ಅನಿಸುತ್ತೆ ನಂಗೆ. ಆದರೆ ದಾರಿಯುದ್ದಕ್ಕೂ ಅವನನ್ನು ಮಿಸ್ ಮಾಡಿಕೊಳ್ಳುತ್ತೇನೆ, ಅವನ ಕಾಲೇಜ್ ಇರದಿದ್ದಾಗ ಅವನನ್ನು ಮಿಸ್ ಮಾಡಿಕೊಂಡಂತೆ. ಕಾಲೇಜ್ ಇಲ್ಲದಿದ್ದರೂ ಅವತ್ತು ಅವನ ಬಸ್ಸಲ್ಲಿ ಕಂಡಾಗ ಆಶ್ಚರ್ಯವಾಯ್ತು. ಇಳಿದು ಒಟ್ಟಿಗೆ ಹೋಗುವಾಗ ಕಪ್ಪು ಕಾರಿಗಿಂತಲೂ ಮೊದಲೇ ನನ್ನ ನಿಲ್ಲಿಸಿ ಇಲ್ಲೇ ಕುಳಿತುಕೊಳ್ಳೋಣ ಎಂದವನು ನನ್ನ ಕೈ ಹಿಡಿದುಕೊಂಡು " ಜೀವನದಲ್ಲಿ ಕೆಲವೊಮ್ಮೆ ಏನೂ ಅಲ್ಲದವರು ಇಷ್ಟು ಹತ್ತಿರವಾಗುತ್ತಾರೆ ಅಂತ ಗೊತ್ತಾಗೊಲ್ಲ. ನಿನ್ನ ಕಂಡರೆ ಇಷ್ಟ ನಂಗೆ. ನಿನ್ನನ್ನಲ್ಲದೇ ಇನ್ಯಾರನ್ನೂ ನಂಬೋದು ಕಷ್ಟ ನಂಗೆ. ಅದಕ್ಕೆ ನಿನಗೆ ಹೇಳ್ತಿದೀನಿ. ಅವಳು ನನ್ನ ಗೆಳತಿ. ಇತ್ತೀಚಿಗೆ ತುಂಬಾ ಹಚ್ಚಿಕೊಂಡು ಬಿಟ್ಟೆ ಅವಳನ್ನ. ಪ್ರೀತಿಯಲ್ಲಿದೀನಿ ಕಣೆ ನಾನು. ಅವಳನ್ನು ತುಂಬಾ ಪ್ರೀತಿಸ್ತೀನಿ. ಎಲ್ಲವನ್ನೂ ಹೇಳಿಬಿಟ್ಟೆ ನಿನ್ನೆ ಅವಳಿಗೆ..!! ಈಗ ಭಯವಾಗುತ್ತಿದೆ. ಕಪ್ಪು ಕಾರಿನ ಪಕ್ಕ ಯಾವತ್ತೂ ಅವಳು ನನಗಾಗಿ ಕಾಯುತ್ತಾಳೆ. ಅದಕ್ಕಾಗಿಯೆ ಅಲ್ಲಿಂದ ನಾನು ನಿಧಾನವಾಗಿ ಬರ್ತೀನಿ." ಅಂತ. ಅವಳೊಂದಿಗಿನ ಮುಂದಿನ ಬದುಕಿನ ಕನಸನ್ನೆಲ್ಲ ಬಿಚ್ಚಿಟ್ಟರೆ ಅವನ ಕಣ್ಣ ಹೊಳಪಿಗೆ ಮರುಳಾಗಿ ಬಿಟ್ಟಿದ್ದೆ. ಖುಷಿಯನ್ನೆಲ್ಲ ತಂದು ಮಡಿಲೊಳಗೆ ಸುರಿದಂತಾಗಿತ್ತು. ಯಾಕೋ ಕಾಲೇಜ್ ಮುಗಿಸಿ ಸೆಟ್ಲ್ ಆಗು ಆಮೇಲೆ ಈ ಪ್ರೀತಿ ಪ್ರೇಮ ಎಲ್ಲ ಅಂತಾ ಲೆಕ್ಚರ್ ಕೊಡೊ ಮನಸ್ಸು ಬರಲೇ ಇಲ್ಲ. "ಆಲ್ ದಿ ಬೆಸ್ಟ್, ಎಲ್ಲ ಒಳ್ಳೆದಾಗುತ್ತೆ" ಅಂತ ಹೇಳಿ ಬಂದುಬಿಟ್ಟಿದ್ದೆ. 


ಫೋಟೋ: ರಂಜಿತಾ ಹೆಗಡೆ. 

ಈಗ ಆ ಹುಡುಗನಿಗೆ ಕಪ್ಪು ಕಾರಿನ ಪಕ್ಕದ ಬೆಳ್ಳಿ ತಾರೆಯೊಬ್ಬಳು ಸಿಕ್ಕಿದ್ದಾಳೆ. ಆಕೆಯದೊಂದು ಮಲ್ಲಿಗೆಯಂಥ ಮುಗುಳ್ನಗೆ ಕಾಯುತ್ತಿರುತ್ತದೆ. ನೀ ಮುಂದೆ ಹೋಗು ಎಂದು ಗೋಗರೆದರೂ ಕೇಳದೆ ಅವರ ಹಿಂದೆ ಅವರಿಗಿಂತ ನಿಧಾನ ಹೆಜ್ಜೆ ಹಾಕುತ್ತಾ ಅವರನ್ನು ನೋಡುತ್ತಾ ಹೋಗುವಲ್ಲಿ ಖುಷಿಯಿದೆ. ಜಗಳ ಕಾಯುತ್ತ ಕೈ ಕೈ ಹಿಡಿದು ಹೋಗುವ ಅವರನ್ನು ನೋಡಿದರೆ ಅಕಸ್ಮಾತ್ ಆಗಿ ನಿನ್ನ ಕೈ ಬೆರಳುಗಳ ನಡುವೆ ಸಿಕ್ಕಿಕೊಂಡ ನನ್ನ ಕಿರುಬೆರಳನ್ನು ಬಿಡಿಸಿಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡದೆ ನಿನ್ನೊಂದಿಗೆ ಅಷ್ಟು ದೂರ ಹೆಜ್ಜೆ ಹಾಕಿದ ನೆನಪಾಗುತ್ತದೆ.


ಕಣ್ಣೊಳಗೊಂದು ದೀಪದ ಮಿನುಗು, ತುಟಿಯಂಚಲ್ಲೊಂದು ಸಣ್ಣ ಕಿರುನಗೆ..

Sunday, 1 December 2013

ಆತ್ಮೀಯವೆನ್ನಿಸುವ ಎಲ್ಲ ಭಾವಗಳೂ ಪ್ರೀತಿಯೇ ಆಗಿರಬೇಕು ಎಂದೇನೂ ಇಲ್ಲ ಅಲ್ಲವಾ.

ಸಂಡೆ ಟೆಡ್ಡಿ ಬೇರ್  ತೊಳೆದಿಟ್ಟು ಬಂದವಳು ಮೊಬೈಲ್ ನೋಡಿದರೆ same  unknown number ನಿಂದ ಎರಡು ಮಿಸ್ಸಡ್ ಕಾಲ್ ಇತ್ತು. "ಕಾಲ್  ಮಿಸ್ಸಾಯ್ತಲ್ಲೇ" ಅಂತ ಅವಳ ಮುಖ ನೋಡಿದೆ. "ಬೇಡ ಕಣೆ ಈಗ ತಾನೆ ಟೆಡ್ಡಿ ಬೇರ್  ತೊಳೆದಿಟ್ಟು ಬಂದಿದ್ದೀಯಾ ಹುಷಾರು" ಎಂದು ಕಣ್ಣು ಮಿಟುಕಿಸಿ ಬೈ ಎಂದು ಹೊರಟಳು ಸಂಡೆ ಸುತ್ತಾಟಕ್ಕೆ. ನನ್ನ ಮನಸ್ಯಾಕೋ ಹಿಂದೆ ಸುತ್ತ ತೊಡಗಿತ್ತು. ಅವತ್ತು ಎಲ್ಲೋ ಬಿಸಾಕಿದ್ದ ಮೊಬೈಲ್ ಗೆ  ನಿನ್ನ ನಂಬರ್ ನಿಂದ ಬಂದ ಕಾಲ್ ನೋಡಿ ನಾನೇ ವಾಪಸ್ ಮಾಡಿದ್ದೆ. ಅಲ್ಲಿವರಿಗೂ ನಿನ್ನ ನಂಬರ್ ನನಗೆ unknown ಆಗಿತ್ತು. "ಬೈ ಮಿಸ್ಟೇಕ್ ಡಯಲ್ ಆಗಿದೆ" ಎಂದವನಿಗೆ, ಇಟ್ಸ್ ಓಕೆ ಎಂದು ಕಟ್ ಮಾಡಿದ್ದೆ.  so  sweet voice  ಎಂದು ಬಂದ ಮೆಸೇಜ್ ಗೆ thanks ಎಂದೆ. ಅನ್ಲಿಮಿಟೆಡ್ ಫ್ರೀ   ಮೆಸೇಜ್ ಗಳು ಒಂದಕ್ಕೊಂದು  ಕೊಂಡಿಯಾಗುತ್ತ ಹೋಗಿ ಒಂದು ಗೆಳೆತನ ರೂಪುಗೊಂಡು ಬಿಟ್ಟಿತ್ತು. ನಿನ್ನ ಹೆಸರು unknown  ಎಂದೇ save  ಆಗಿತ್ತು. ಇವತ್ತಿಗೂ ಹಾಗೆ ಇದೆ ಕೂಡಾ. 

ನಿನ್ನ ಮೊದಲ ಭೇಟಿಯೂ ಅಷ್ಟೇ, ಐದು ನಿಮಿಷ ಕಣೆ ಬಂದೆ ಇಲ್ಲೇ ಎಲ್ಲೋ ಇದಾನಂತೆ ಅಂತ ಫ್ರೆಂಡ್ ಗೆ ಹೇಳಿ ಬಂದವಳನ್ನು ಊರು ಸುತ್ತಲು ಕರೆದುಕೊಂಡು ಹೋಗಿದ್ದೆ ನೀನು. ನಿನ್ನೊಂದಿಗಿನ ಮಾತುಗಳಲ್ಲಿ, ನೀ ಕೊಟ್ಟ ಕಂಫರ್ಟಬಲ್ ಫೀಲಿಂಗ್ ನಲ್ಲಿ  ಫ್ರೆಂಡ್ ಮತ್ತು ಸಮಯದ ನೆನಪೇ ಇಲ್ಲದೆ ಅನಾಮತ್ತು ನಾಲಕ್ಕು ತಾಸು ಕಳೆದಿದ್ದೆ ನಿನ್ನೊಂದಿಗೆ. ವಾಪಸ್ ಬಂದವಳನ್ನು ಏನಮ್ಮಾ  ಎನ್ನುತ್ತಾ ಹುಬ್ಬುಹಾರಿಸಿ ಕೇಳಿದ ಅವಳಿಗೆ he is a good guy  ಎಂದಷ್ಟೇ ಹೇಳಿದ್ದೆ ನಾನು. ನಿನ್ನ  ಕೆಲಸ ಗಳೆಲ್ಲ ಮುಗಿದು ನೀ ಫೋನ್ ಮಾಡುತ್ತಿದುದ್ದೆ ಹತ್ತು ಗಂಟೆಯ ನಂತರ. ಆಮೇಲೆ ಹನ್ನೆರಡು ಗಂಟೆಯವರೆಗೂ ಮಾತಾನಾಡುತ್ತಿದ್ದೆವು ನಾವು. ಪ್ರತಿದಿನದ ದಿನಚರಿಯಾಗಿತ್ತು. ವಿಷಯಗಳ ಕೊರತೆಯೇ ಇರಲಿಲ್ಲ ಇಬ್ಬರ ನಡುವೆ. ಗೆಳೆತನ ಗಾಢವಾಗಿತ್ತು ಎಂಬುದಕ್ಕೆ ಮತ್ತೇನೂ ಸಾಕ್ಷಿ ಬೇಕಿಲ್ಲ  ಅಲ್ಲವಾ. "ಜಸ್ಟ್ ಹೊರಟೆ ಆಫೀಸ್ ಇಂದ, ಐಸ್ ಕ್ರೀಂ ತಿನ್ನೋಣಾ ಅನಿಸ್ತಿದೆ ಕಣೋ" ಎಂದರೆ, "ಸ್ವಲ್ಪ ಅರ್ಜೆಂಟ್ ಇದೆ ಕಣೆ ಆಮೇಲೆ ಮಾಡ್ತೀನಿ" ಎಂದು ಸಡನ್ ಆಗಿ ಫೋನ್ ಕಟ್ ಮಾಡಿದವನು, ನಾ ನನ್ನ ಸ್ಟಾಪ್ ನಲ್ಲಿ ಇಳಿಯುವ ಹೊತ್ತಿಗೆ ಅಲ್ಲೇ ಇದ್ದು, "ನಡಿ ಯಾವ ಐಸ್ ಕ್ರೀಮ್ ತಿಂತಿಯಾ ?" ಅಂತ ಕೇಳಿ surprise  ಕೊಟ್ಟಿದ್ದು ಇನ್ನೂ ನೆನಪಿದೆ. "ಆಫೀಸ್ ಕೆಳಗಡೆ ಇದ್ದೇನೆ ಬೇಗ ಬಾ "ಎಂದವನು, ನನ್ನನ್ನು ದೇವಸ್ತಾನದ ಬಾಗಿಲಿಗೆ ಕರೆದುಕೊಂಡು ಹೋಗಿ ನಿಲ್ಲಿಸಿ, "ನಿನ್ನ ಜೊತೆ ದೇವಸ್ತಾನಕ್ಕೆ ಬರಬೇಕು ಅನ್ನಿಸ್ತು ಕರೆದುಕೊಂಡು ಬಂದೆ. ದೇವಸ್ತಾನಕ್ಕೆ ಬರುವಂತೆ ಇದ್ದೀಯಾ ತಾನೇ ?" ಎಂದು ಕಣ್ಣು ಮಿಟುಕಿಸಿದ್ದೆ.  ನನ್ನ ಹುಟ್ಟುಹಬ್ಬದ ದಿನ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ನನ್ನೊಂದಿಗೆ ಕಳೆದದ್ದು, ನೀ ಕೊಂಡ ಫ್ಲಾಟ್  ನಲ್ಲಿ ಪುಟ್ಟ ಕೇಕ್ ನೊಂದಿಗೆ ನೀನೊಬ್ಬನೇ ಸೆಲೆಬ್ರೇಟ್ ಮಾಡಿದ್ದು. ಉಡುಗೊರೆಯಾಗಿ ನೀ ಕೊಟ್ಟ ಟೆಡ್ಡಿ ಬೇರ್, ಚೆಂದದೊಂದು ಪಿಲ್ಲೋ  ಇದೆಲ್ಲ ನೆನಪುಗಳು ಇನ್ನು ಹಸಿ ಹಸಿ. ನಮ್ಮಿಬ್ಬರಲ್ಲಿ  ಮುಚ್ಚುಮರೆಯಿರಲಿಲ್ಲ. ಎಲ್ಲ ವಿಷಯಗಳು ಗೊತ್ತಿರುತ್ತಿದ್ದವು. ನಿನ್ನ ತೋಳು ತಬ್ಬಿ ಬಿಕ್ಕಿದ ದಿನಗಳು ಬಹಳವಿದ್ದವು. ಅದೇನೋ ಕಾರಣಕ್ಕೆ ತುಂಬಾ ಬೇಜಾರಾಗಿ ನನ್ನ ಮಡಿಲಲ್ಲಿ ನೀ ತಲೆಯಿಟ್ಟು ಅತ್ತಿದ್ದು ಇನ್ನು ನೆನಪಿದೆ. 

ಸಾಮಾನ್ಯವಾಗಿ ಟೆಡ್ಡಿ , ಹೂ ಇದೆಲ್ಲ ಗಿಫ್ಟ್ ಕೊಡುವವನು ಪ್ರೇಮಿ ಎಂಬುದು ಜನಜನಿತ. ನಮ್ಮಿಬ್ಬರದು ಪ್ರೀತಿ ಎಂದೇ ನಮ್ಮಿಬ್ಬರ ಜೊತೆಯಲ್ಲಿದ್ದವರು ಭಾವಿಸಿದ್ದರು.ನಾವು ಹಾಗೆಯೇ ಇದ್ದೆವು ಬಿಡು. ಎಲ್ಲೆಂದರಲ್ಲಿ ಜೊತೆಯಾಗಿ ತಿರುಗಿದ್ದೇವೆ. ಎಷ್ಟೋ ಪರಿಚಯಸ್ತರ ಕಣ್ಣಿಗೆ ಬಿದ್ದಿದ್ದೇವೆ. ಆದರೆ ನಮ್ಮಲ್ಲಿ ಭಾವನೆಗಳೇಕೆ ಬದಲಾಗಲಿಲ್ಲವೋ ಗೊತ್ತಿಲ್ಲ. ನೀ ಕೊಡಿಸಿದ ಟೆಡ್ಡಿ ಅಪ್ಪಿ ಮಲಗುವಾಗ, ಆ ದಿಂಬಿಗೆ ಒರಗಿ ಕೂರುವಾಗ ಭಾವನೆಗಳು ಬದಲಾಗಲೇ ಇಲ್ಲ. ಬದಲಾಗಿದ್ದರೆ ಇಷ್ಟು ಹೊತ್ತಿಗೆ ನಾ ನಿನ್ನ  ಹೆಂಡತಿಯಾಗಿರುತ್ತಿದ್ದೆ ಎಂದು ನೆನೆಸಿಕೊಂಡರೆ ನಗು ಬರುತ್ತದೆ. ನಿನ್ನದೊಂದು ನೋಟ, ಸ್ಪರ್ಶ ಕೂಡಾ ಹಾಗಿರಲಿಲ್ಲ. "ಮನೆಗೆ ಹೋದರೆ ಮದುವೆಯ ಮಾತು ಎತ್ತುತ್ತಾರೆ. ನನಗೆ ಈ ಮದುವೆಯ ಮಾತೆ ಇಷ್ಟ ಆಗೋಲ್ಲಾ" ಎನ್ನುತ್ತಿದ್ದವನ convince ಮಾಡಿ ಊರಿಗೆ ಕಳಿಸುವಲ್ಲಿ ಸಾಕೋ ಸಾಕಾಗಿತ್ತು.  ನೀ ಹೋದ ಹದಿನೈದು ದಿನಗಳಲ್ಲಿ ಎಷ್ಟು ಮಿಸ್ ಮಾಡಿಕೊಂಡಿದ್ದೆ ಗೊತ್ತಾ. ಒಂದೊಂದು ದಿನಗಳು ಎಷ್ಟು ಕಷ್ಟಪಟ್ಟಿದ್ದೆ. ನಿನ್ನ ಕಂಡಾಗ ಮತ್ತೆ ಮನಸ್ಸಿಗೆ ರೆಕ್ಕೆ ಬಂದಷ್ಟೇ ಖುಷಿ . ವಾಪಾಸ್ ಬಂದವನು "ಮದುವೆಯಾಗಬಾರದು ಎಂದುಕೊಂಡವನನ್ನು ಹಾಳು ಮಾಡಿದ ಪಾಪಿ ಕಣೆ ನೀನು. ನಿನ್ನ next birthday  ದಿನ ನನ್ನ ಮದುವೆ" ಎಂದು ಕಾಫಿ ಡೇ ಯಲ್ಲಿ ಕೂರಿಸಿಕೊಂಡು ಹೇಳಿದ್ದೆಯಲ್ಲ. ತುಂಬಾ ಸಂತಸಗೊಂಡಿದ್ದೆ ನಾನು. ನಿನ್ನೊಡನೆ ಶಾಪಿಂಗ್ ಗೆಲ್ಲ ಓಡಾಡಿದವಳಿಗೆ, ನಿನ್ನ  ಮದುವೆಗೆ ಬರಲಾಗಲಿಲ್ಲ. ಮದುವೆಯ ಗಡಿಬಿಡಿಯಲ್ಲಿದ್ದರೂ ಗೆಳೆಯರಲ್ಲಿ ಹೇಳಿ ನನ್ನಿಷ್ಟವಾದ ಪುಸ್ತಕಗಳು ಮತ್ತು ಒಂದು ದೊಡ್ಡ ಬೊಕ್ಕೆ ನನ್ನ ಹುಟ್ಟುಹಬ್ಬದ ದಿನ  ನನಗೆ ತಲುಪುವಂತೆ ಮಾಡಿದ್ದೆ ನೀನು. ಅವತ್ತು ಖುಷಿಯಿಂದ ಕಣ್ಣಲ್ಲಿ ನೀರು ಬಂದಿತ್ತು. 

ಇವತ್ತಿಗೆ ಹೆಚ್ಚು ಕಡಿಮೆ ಮೂರು ವರ್ಷಗಳಾದವು ನಿನ್ನ ಮದುವೆಯಾಗಿ. ಚಂದದ ಸಂಸಾರ. ಇವತ್ತಿಗೂ ನಿನ್ನ ಖುಷಿಯಲ್ಲಿ ನನಗೊಂದು ಪಾಲಿದೆ. ನಿನ್ನ ನೆನಪುಗಳೇ ಹಾಗೆ ನೋಡು ಟೆಡ್ಡಿ ಬೇರ್ ನಿಂದ ತೆಗೆದಿಟ್ಟ ಹತ್ತಿಯಂತೆ, ಹರಡಿಕೊಂಡು ಬಿಡುತ್ತವೆ. ನಿನ್ನ ಎಲ್ಲ ನೆನಪು ಮಾಡಿಕೊಳ್ಳುತ್ತಲೇ ಒಣಗಿದ್ದ ಟೆಡ್ಡಿ ಗೆ ಹತ್ತಿ ತುಂಬಿ ಹೊಲಿದ್ದಿದ್ದಾಯ್ತು.ನಿನ್ನ ನೆನಪುಗಳನ್ನು ಜೋಪಾನವಾಗಿ ಎತ್ತಿಟ್ಟಿದ್ದಾಯ್ತು.ಆತ್ಮೀಯವೆನ್ನಿಸುವ ಎಲ್ಲ ಭಾವಗಳೂ ಪ್ರೀತಿಯೇ ಆಗಿರಬೇಕು ಎಂದೇನೂ ಇಲ್ಲ ಅಲ್ಲವಾ. ಇವತ್ತಿಗೂ ನೀ ಕೊಟ್ಟ ಟೆಡ್ಡಿ ಯನ್ನೇ ತಬ್ಬಿ ಮಲಗುತ್ತೇನೆ ಯಾವತ್ತಿನಂತೆ... 

Friday, 8 November 2013

ನಿನ್ನದೇ ರಕ್ತವಿದು ಹರಿಯುತ್ತಿದೆ ಧಮನಿಗಳಲ್ಲಿ...


ಈ ಹಾಳು ಊರು ಏನೆಲ್ಲಾ ಅನಿಸುವಂತೆ ಮಾಡಿ ಬಿಡುತ್ತದೆ ಗೊತ್ತಾ . ನಿನ್ನ ಮಡಿಲಲ್ಲಿ  ಮಲಗಿ ಬಿಕ್ಕಿ ಬಿಕ್ಕಿ ಅಳಬೇಕು ಎನಿಸುವಷ್ಟು ಒಂಟಿಯೆನಿಸುವಂತೆ ಮಾಡಿ ಬಿಡುತ್ತದೆ. ಯಾವ ಖುಷಿಯ ತುದಿಯಲ್ಲಿದ್ದರೂ ಹೇಳಿಕೊಳ್ಳಲು ನೀನೇ  ಬೇಕಿರುತ್ತದೆ. ಆದರೆ ನೀ ದೂರ ದೂರ. ಎಷ್ಟೋ ಸಲ ಯೋಚನೆಗೆ ಬೀಳುತ್ತೇನೆ.  ಹಿಂಗೆಲ್ಲ ಯಾಕೆ ಅನಿಸುತ್ತೆ ಅಂತ. ಅಲ್ಲಿದ್ದಾಗ ಯಾಕೆ ಅನಿಸ್ತಾ ಇರಲಿಲ್ಲ ಅಂತ. ಅಲ್ಲೇ ನಿನ್ನ ಜೊತೆಯೇ ಇದಿದ್ರೆ ಬಹುಶಃ ಒಂಟಿ ಅನ್ನೋ ಭಾವ ಬೆಳೆಯೋದಕ್ಕೆ ನೀ ಅವಕಾಶನೆ  ಕೊಡ್ತಾ ಇರಲಿಲ್ಲ.  ಯಾವಾಗಲೂ ಜೊತೆಲ್ಲೇ ಇದ್ದೀನಿ ಅನ್ನೋ ಫೀಲ್ ಕೊಡ್ತೀಯ. ಅಂಗಳದ ತುದಿಯಿಂದ ಹಿಡಿದು ಹಿತ್ತಲ ಮನೆಯ ಬಾಗಿಲವರೆಗೂ ಎಲ್ಲೇ ಹೋದರೂ ನಿನ್ನ ಹಿಂದೆಯೇ ಸುತ್ತುತ್ತಿದ್ದೆ ನಾನು.   ಅದಕ್ಕೆ ಅಲ್ಲಿದ್ದಾಗ ಯಾವತ್ತೂ  ನಿನ್ನ ಮಡಿಲಲ್ಲಿ ಮಲಗಬೇಕು ಅಂತಾ  ಅನ್ನಿಸ್ತಾನೆ ಇರಲಿಲ್ಲ. ಇನ್ನು ಅಳಬೇಕು ಅನಿಸಿದ್ದಂತೂ ದೂರದ ಮಾತೇ. ಅತ್ತಿದ್ದಿದ್ದರೂ ಅದು ನಿನ್ನಿಂದಲೇ, ನೀ ಬೈದಿದ್ದಕ್ಕೆನೆ.. ( ಪ್ರೀತಿಯ ಆರೋಪ ಇದು .. ಇದಕ್ಕೆ ಗುರ್ರ್ ಅನ್ನೋ ಅವಶ್ಯಕತೆಯಿಲ್ಲ ಮತ್ತೆ .. ) 

 ಪ್ರೀತಿಯಲ್ಲಿ ಪಾಲು ಹಂಚಲು ಹೇಳಿಕೊಟ್ಟಿದ್ಯಾರೆ ನಿನಗೆ . ಪ್ರತಿಯೊಬ್ಬರಿಗೂ ಪಾಲಿದೆ ನಿನ್ನ ಪ್ರೀತಿಯಲ್ಲಿ. ಪ್ರತಿಯೊಬ್ಬರಿಗೂ ದೊಡ್ಡ ಪಾಲಿನ ಪ್ರೀತಿ ತನಗೇ ಅನ್ನಿಸುವಂತೆ ಪ್ರೀತಿ ಕೊಡುತ್ತೀಯಲ್ಲ. ನಂಗ್ಯಾವತ್ತು ಅನಿಸುತ್ತೆ   ನೀ ಬಹುಶಃ ನನ್ನನ್ನೇ ಜಾಸ್ತಿ ಮುದ್ದು ಮಾಡ್ತೀಯ ಅಂತ, ಆದರೆ ತಮ್ಮ, ಮತ್ತು ಅಕ್ಕನ್ನ ಕೇಳಿ ನೋಡು ಅವರೂ ಹಿಂಗೆ ಹೇಳ್ತಾರೆ. ಅದ್ಹೇಗೆ ಸಾಧ್ಯ ನಿಂಗೆ. ಮಲ್ಟಿ ರೋಲ್ ಪ್ಲೇ ಮಾಡೋ ನಿನ್ನ ಬಗ್ಗೆ ಏನು  ಹೇಳಲಿ ಹೇಳು. ಚಿಕ್ಕವರಿರುವಾಗ ಅದೊಂದು ಮಾಮೂಲು ಪ್ರಶ್ನೆ ಇರುತ್ತಲ್ಲ ನೀನೇನಾಗ್ತೀಯ ಮುಂದೆ ಅಂತಾ? ಆ ಪ್ರಶ್ನೆ ಕೇಳಿದವರಿಗೆಲ್ಲ ಏನೇನೋ  ಉತ್ತರ ಕೊಟ್ಟಿದ್ದೇನೆ ಬಿಡು. ಟೀಚರ್, ಡಾಕ್ಟರ್, ಟೈಲರ್, ಫ್ಯಾಶನ್ ಡಿಸೈನರ್, ಫ್ರೆಂಡ್, ಅಗ್ರಿಯಲ್ಲಿ ಪಿಎಚ್ಡಿ, ಹೋಟೆಲ್ ಮ್ಯಾನೇಜ್ ಮೆಂಟ್, ಹೀಗೆ ಉದ್ದದ ಪಟ್ಟಿಯಿದೆ.. (ಆದ್ರೆ ಇವತ್ತಿಗೆ ನಾ ಅದ್ಯಾವುದೂ ಆಗಿಲ್ಲ ಬಿಡು...  ) ಆದರೆ ನೀನೋ ಇದೆಲ್ಲ ಆಗ್ತೀಯ, ಹುಶಾರಿಲ್ಲದಿದ್ರೆ ಡಾಕ್ಟರ್, ಡ್ರೆಸ್ ಸ್ಟಿಚ್ ಆಗಬೇಕಾ ?ಟೈಲರ್, ಡ್ರೆಸ್ ಸೆಲೆಕ್ಟ್ ಮಾಡುವಾಗೆಲ್ಲ ನೀ ನನ್ನ ಡಿಸೈನರ್, ಗಾರ್ಡೆನಿಂಗ್ ಅಂತ ಬಂದ್ರೆ ಪಿಎಚ್ಡಿ ಮಾಡಿದ್ದೂ ಸುಳ್ಳಲ್ಲ ಅನಿಸುತ್ತೆ, ಇನ್ನು ನಿನ್ನ ಕೈ ಅಡುಗೆಯ ಬಗ್ಗೆ ಏನು ಹೇಳಲಿ ನಾನು? ಅದೆಲ್ಲಿಂದ ಸಿಕ್ಕ ಒಳ್ಳೆಯ ಗೆಳತಿಯೋ ನೀನು.ಯಾರಿಗೋ ಕಾಂಪ್ಲಿಮೆಂಟ್ ಕೊಡ್ತೀವಿ, ಅದೆಷ್ಟು ಕಾಮೆಂಟ್ ಮಾಡ್ತೀವಿ , ಓವರ್ ಕಾಮೆಂಟ್ ಆದ್ರೆ ಕಿವಿ ಹಿಂಡಿ ತಿದ್ದುವವಳು  ನೀನು. ಒಮ್ಮೊಮ್ಮೆ ನಂಗೆ ಡೌಟ್ ಬರುತ್ತೆ ಅಮ್ಮ ನೀನಾ? ಅಥವಾ ನಾನಾ ? ಅಂತ. ಶಾಲೆಯಲ್ಲಿ, ಹೈ ಸ್ಕೂಲ್ ನಲ್ಲಿ , ಕಾಲೇಜ್ ನಲ್ಲಿ ಪ್ರತಿ ವಿಷಯಕ್ಕೂ ಬೇರೆ ಬೇರೆ ಶಿಕ್ಷಕರಿದ್ರು, ಆದ್ರೆ ಮನೆಯಲ್ಲಿ ಮಾತ್ರ ಕನ್ನಡದಿಂದ ಹಿಡಿದು ಸ್ಟ್ಯಾಟಿಸ್ಟಿಕ್ ವರೆಗೆ ನೀನೋಬ್ಳೆ ಟೀಚರ್. ಅಕಾಡೆಮಿಕ್ ಮಾತ್ರವಲ್ಲ ಜೀವನಕ್ಕೂ ನೀನೆ ಶಿಕ್ಷಕಿ.. ಈಗನಿಸುತ್ತೆ ಥತ್ ಆಗಲೇ ಗೊತ್ತಿದ್ರೆ ಏನಾಗ್ತೀಯ ಅಂತ ಕೇಳಿದವರಿಗೆಲ್ಲ " ಅಮ್ಮ "ನಾಗ್ತೀನಿ ಅಂದಿದ್ರೆ ಚೆನ್ನಾಗಿರೋದು ಅಂತಾ. ಇದು ನಿನ್ನೊಬ್ಬಳ ಕಥೆಯಲ್ಲ. ಎಲ್ಲರ ಅಮ್ಮಂದಿರ ಕಥೆ. ಎಲ್ಲರ ಅಮ್ಮಂದಿರೂ ಹೀಗೆ ಇರುತ್ತಾರೆ ಆಲ್ವಾ ? 

ನಂಗೊತ್ತು ನನಗೆ ನಿನ್ನ ಹೋಲಿಕೆ ಜಾಸ್ತಿ ಅಂತ. ಎಲ್ಲೇ ನಾನು ಹೋದರೂ  ಯಾರೋ ದೂರದ ಸಂಬಂಧಿಕರೋ ಅಥವಾ ಎಲ್ಲೋ ಕಂಡ ನಿನ್ನ ಹಳೆ ಕ್ಲಾಸ್ ಮೇಟ್ ಗಳೋ ನನ್ನ ಹತ್ತಿರ ನೀನು ಇವಳ   ಮಗಳಲ್ಲವೇನೆ? ನೋಡಿದ್ರೆ ಗೊತ್ತಾಗುತ್ತೆ  ಎನ್ನುವಾಗ ಎಷ್ಟು ಖುಷಿ ಗೊತ್ತ. ಹೈಸ್ಕೂಲ್ ನ ಮೊದಲ ದಿನವೇ ನನ್ನ ನೋಡಿದ ಶಿಕ್ಷಕರೋಬ್ಬರು  ನಾನು ನಿನ್ನ ಮಗಳೆಂದು ಗುರುತಿಸಿದಾಗಿನ ಖುಷಿಯನ್ನು ಓಡಿ ಬಂದು ನಿನಗೊಪ್ಪಿಸಿದ್ದೆ ನೆನಪಿದ್ಯಾ ? ಆಮೇಲೆ ಅಲ್ಲಿದ್ದ ಮೂರು ವರ್ಷಗಳೂ ಎಲ್ಲರೂ ನನ್ನನ್ನು  ನಿನ್ನ ಹೆಸರಿಂದಲೇ ನನ್ನ ಕರೆದರಲ್ಲ. ಎಷ್ಟು ಖುಷಿಯಿತ್ತು ಗೊತ್ತಾ. ಹೋಲಿಕೆ ನಿನ್ನದೇನೆ ಆದರೆ ನಿನ್ನಂತೆ ನಾನಾಗಲಾರೆ.  ನಿನ್ನ ಭೂಮಿಯಂಥ ತಾಳ್ಮೆ ನನಗೊಂದು ಮಣ್ಣ ಕಣದಷ್ಟು ಇಲ್ಲ... 

ನಿನ್ನದೇ ಹೋಲಿಕೆಯಿದೆ ರೂಪದಲ್ಲಿ.. 
ನಿನ್ನದೇ ರಕ್ತವಿದು ಹರಿಯುತ್ತಿದೆ ಧಮನಿಗಳಲ್ಲಿ... 
ನೀನೇ ಕೊಟ್ಟ ಜೀವಕಣಗಳಿವೆ ನನ್ನ ಉಸಿರಲ್ಲಿ.. 
ಆದರೂ ನಾ ನಿನ್ನಂತೆ ಅಲ್ಲ .. 
ನಿನ್ನಂತೆ ಆಗಬೇಕೆಂಬ ಹಂಬಲವೂ ಇಲ್ಲ .. 
ಆದರೆ ನೀ ನನ್ನ ಅಮ್ಮನೆಂಬ ಹೆಮ್ಮೆಯಿದೆ ನನಗೆ .. 

Wednesday, 16 October 2013

ತೋಚಿದ್ದು.... ಗೀಚಿದ್ದು....




ಕಣ್ಣಂಚುಗಳು 
ಮಾತನಾಡಲು ಕಲಿತಾಗಿಂದ 
ಬಚ್ಚಿಟ್ಟ ಭಾವಗಳ್ಯಾಕೋ 
ಗುಟ್ಟಾಗಿ ಉಳಿದಂತಿಲ್ಲ .. 
ನಿಂತಲ್ಲಿ ನಿಲ್ಲಲೊಲ್ಲದ 
ಮನದಲ್ಲೀಗ ಮೊದಲ ಒಲವ 
ಒಳಹರಿವ ಪುಳಕ 
******************************

ಅದೇನೋ ಬೆಳಗಿಂದಲೂ 
ನಿನ್ನ ನೆನಪು...
ಮೈ ಮನಗಳ ಸುತ್ತಿಕೊಂಡಿದೆ ...
ಆಗ ತಾನೇ ಆಕಳಿಸಿ...
ಎದ್ದ ಬೆಕ್ಕು ಹಾಲಿಗಾಗಿ ..
ಮನೆಯೊಡತಿಯ ಕಾಲು ಸುತ್ತುವಂತೆ ...
***********************************

ರಚ್ಚೆ ಹಿಡಿಯುವ ಮೊದಲೇ 
ರಮಿಸುವ ಅಮ್ಮನಂಥಹ 
ಮನಸ್ಸು ನಿನ್ನದು ... 
ಬರಿ ಪ್ರೀತಿಯೊಂದಿದ್ದರೆ 
ಪ್ರೇಮಿಗಳಿಗೂ ಅವಮಾನವಂತೆ.. 
ಮುನಿಸಿಗೂ ಅವಕಾಶವಿರಲಿ 
ಮಹರಾಯ ... !! 
*******************************

ಚೂರು ಹೃದಯ ಬಡಿತ 
ತಪ್ಪಿದ್ದರೂ ಪ್ರೀತಿಯಾಗಿಬಿಡುತ್ತಿತ್ತು 
ಎಂದವನಿಗೆ ಗೊತ್ತಾಗದಂತೆ .. 
ಹೃದಯ ಬಡಿತ ತಪ್ಪಲಿ ದೇವರೇ 
ಎಂದು ಬೇಡುವಾಗ 
ಹುಚ್ಚು ಮನಕೆ ಯಾಕೋ 
ಕಾಲುಂಗುರದ ಬಯಕೆ ...
*********************************


ನೀ ನನ್ನಲ್ಲಿ ಕನಸುಗಳ 
ಹುಟ್ಟಿಸಿರಲಿಲ್ಲ ... 
ಕನಸು ಕಟ್ಟುವ ಕಲೆ ಮಾತ್ರ 
ಹೇಳಿಕೊಟ್ಟಿದ್ದೆ .. 
ಕಟ್ಟುತ್ತಾ ಹೋದ ಕನಸೊಂದು 
ನಿನ್ನದೇ ರೂಪತಳೆಯಿತು .. 
ಕೊನೆಗೂ ನೀ ನನ್ನ 
ಕನಸಾಗಿಯೇ ಉಳಿದುಬಿಟ್ಟೆ ...
******************************

ದುಃಖದ ಕಟ್ಟೆಯೊಡೆಯುವ ಮುನ್ನ 
ಮನಸ್ಸಿಗೇಕೋ ಚಿಟ್ಟೆಯಾಗುವ 
ಹಂಬಲವಿತ್ತು .... 
ಎಳೆ ಎಳೆಯಾಗಿ ಬಣ್ಣ 
ತುಂಬಿಕೊಂಡ ಚಿಟ್ಟೆಯದೀಗ 
ದುಃಖ ಗೆದ್ದ ಸಂಭ್ರಮ .... 
*******************************

ಅವನು ಗೆದ್ದು ಸಂಭ್ರಮಿಸಿದ 
ನಗುವಿನಲ್ಲೆಲ್ಲ ... 
ಅವಳ ಸತ್ತ ಕನಸುಗಳ 
ವಿಷಾದದ ಗೆರೆಯಿತ್ತು ... 
******************************

ನಗೆಮಲ್ಲಿಗೆಯಿವಳು .. 
ಕಣ್ತುಂಬಿ ಬರುವಂತೆ ನಕ್ಕವಳು .. 
ಮನ ತುಂಬಿ ನಗಿಸುವವಳು .. 
ತನ್ನೊಳಗಿನ ನಗು 
ಕೊಂದು ಹೋದವನನ್ನೂ 
ಮುಗುಳುನಗೆಯಲ್ಲೇ 
ಕ್ಷಮಿಸಿಬಿಟ್ಟವಳು ... 
****************************

ಮತ್ತೆ ನಿನ್ನ ನೆನಪುಗಳು
ಚಿಗುರತೊಡಗಿದ್ದವು ..ಚಿವುಟಿಬಿಟ್ಟೆ .... 
ಇಷ್ಟು ದಿನ ಅವುಗಳ ಅಸ್ತಿತ್ವವೇ 
ಇಲ್ಲದಂತೆ ಬದುಕಿದವಳಿಗೆ ,
ಈಗ ಕಾಲಿಗೆ ತಡವುವಂತೆ 
ಅವು ಮತ್ತೆ ಚಿಗುರುವುದು 
ಬೇಕಾಗಿರಲಿಲ್ಲ.. 
******************************