Tuesday, 14 December 2021

ಹೇರ್ ಕಟ್ಟೂ..‌ ಹಾಲು ಹಲ್ಲೂ ..‌ ಟೂತ್ ಫೇರಿಯೂ..

 

ಮಗಳ ಕೂದಲು ತುಂಬಾ ಉದ್ದ ಗಿಡ್ಡ ಬೆಳೆದಿದ್ದರಿಂದ ಕಟ್ ಮಾಡಿಸಬೇಕೆಂದು ನಿನ್ನೆ ಬ್ಯೂಟಿ ಪಾರ್ಲರ್ ಗೆ ಕರೆದುಕೊಂಡು ಹೋಗಿದ್ದೆ.  ಒಂದೇ ಅಳತೆ ಕಟ್ ಮಾಡುವಾಗ ತುಸು ಜಾಸ್ತಿಯೇ ಆಯಿತು. ಮೊದಲೆ ಕಟಿಂಗ್ ಬೇಡ ಎನ್ನುತ್ತಿದ್ದ ಅವಳ ಮುಖಭಾವ ಬದಲಾದ ಕೂಡಲೆ ನಾನು ಮತ್ತು ಬ್ಯುಟಿಷಿಯನ್ ಇಬ್ಬರೂ ' ಮತ್ತೆ ಬೆಳೆಯುತ್ತೆ , ಇನ್ನು ದಪ್ಪ ಕೂದಲು ಬರುತ್ತೆ ಎಂದೆಲ್ಲ  ಸಮಾಧಾನ ಮಾಡಿದ್ದಾಯ್ತು . ಆದರೆ ಆ ಸಮಾಧಾನವೆಲ್ಲ ಪಾರ್ಲರಿನ ಒಳಗಷ್ಟೆ.  ರಸ್ತೆಯಲ್ಲಿ ಬರುವಾಗ ಇವಳದ್ದೊಂದೆ ರಾಗ .. ನಂಗೆ ಇಷ್ಟು ಗಿಡ್ಡ ಕೂದಲು ಬೇಡದಾಗಿತ್ತು .... ನಾನು ಸಮಾಧಾನ ಮಾಡುತ್ತಾ , ಪಾರ್ಲರಿನಲ್ಲಿ ಹೇಳಿದ್ದನ್ನೆ ಮತ್ತೆ ಮತ್ತೆ ಹೇಳುತ್ತಾ ಬಂದೆ. ಮನೆ ಹತ್ತಿರ ಬಂದಂತೆ ಸ್ವರವೂ ದೊಡ್ಡದಾಗಿ ಅಪ್ಪನ ಕಂಡೊಡನೆ ಅಳುವಾಗಿ ಬದಲಾಗಿ ಸ್ವಲ್ಪ ದೊಡ್ಡ ರಾದ್ಧಾಂತವೇ ಅಯ್ತು ! ಅಪ್ಪನೂ ಚಿಕ್ಕದಾಗಿ ಮುದ್ದಾಗಿ ಕಾಣ್ತಾ ಇದ್ದೆ ,ಮತ್ತೆ ಕೂದಲು ಬರ್ತು ಎಂದೆಲ್ಲ ನಂಬಿಸಿದ್ದಾಯ್ತು . ಅಂತೂ ಸಮಾಧಾನವಾಗಿ ಸ್ನಾನಕ್ಕೆ ಹೋದರೆ , ಹಲ್ಲು ತಿಕ್ಕುವಾಗ ಇಷ್ಟು ದಿನ ಅಲುಗಾಡುತ್ತಿದ್ದ ಹಾಲು ಹಲ್ಲು ಕೈ ಗೆ ಬಂತು . ಮೊದಲ ಹಲ್ಲು ..!! ತುದಿಗೊಂಚೂರು ರಕ್ತ ..! ಅಷ್ಟೇ .... ಮತ್ತೆ ಶುರು ರಗಳೆ ‌. ನನ್ನ ಹಲ್ಲು ಬಿದ್ದೋತು ಎಂದು ಜೋರಾಗಿ ಅಳು ...

ಗಿಡ್ಡ ಕೂದಲು ಮರೆತು ಹೋಯ್ತು .. ಅದರ ಜಾಗಕ್ಕೆ ಹಲ್ಲು ..

ಎಲ್ಲಾರಿಗೂ ಬೀಳ್ತು ಹಲ್ಲು , ಹೊಸ ಗಟ್ಟಿ ಹಲ್ಲು ಬರ್ತು .. ಎಲ್ಲ ಮಕ್ಕಳಿಗು ಹಲ್ಲು ಬಿದ್ರೆ ಖುಷಿ ಆಗ್ತು .( ದೇವಾರಾಣೆ ಗೊತ್ತಿಲ್ಲ !) ಅಣ್ಣ ಹಲ್ಲು ಬಿದ್ರೆ ಖುಷಿ ಪಡತ್ನಡ ಎಂದೆಲ್ಲ  ಬಾಯಿಗೆ ಬಂದಿದ್ದು ,ನೆನಪಾಗಿದ್ದೆಲ್ಲ ಹೇಳಿ ಸಮಾಧಾನ ಮಡೋ ಹೊತ್ತಿಗೆ ಸಾಕಾಗಿ ಹೋಯ್ತು . ಅಂತೂ ಸ್ನಾನ ಮಾಡಿಸಿ ರೆಡಿ ಮಾಡಿ ಕನ್ನಡಿ ನೋಡ್ಕ ಹೇಳಿ ನಾನು ಸ್ನಾನಕ್ಕೆ ಹೋದೆ . ಕನ್ನಡಿ ನೋಡು ಹೇಳಿ ದೊಡ್ಡ ತಪ್ಪು ಮಾಡಿದ್ದೆ ! ಸ್ವಲ್ಪ ಹೊತ್ತಿಗೆ ಬಾತ್ ರೂಮ್ ಬಾಗಿಲು ಬಡಿಯುತ್ತಾ ದೊಡ್ಡ ಅಳು ... ನಾ ಚಂದನೇ ಕಾಣ್ತಾ ಇಲ್ಲೆ .. ಉದ್ದ ಕೂದಲು ಇದ್ದಿದ್ರಾದ್ರು ಚೊಲೊ ಕಾಣ್ತಿದ್ನೇನೋ ಈಗ ಚಂದಾ ಕಾಣ್ತಾ ಇಲ್ಲೆ ...
ಹಲ್ಲು ಬಿದ್ದ ನೋವು ಹೋಗಿ ಚಂದದ ವಿಷಯವಾಗಿತ್ತು
ಹೊಸ ಹಲ್ಲು ಬಂದಮೇಲೆ ಸರಿ ಆಗ್ತು , ಈಗಲೂ ನೀ ಚಂದ ಇದ್ದೆ ,ಗಿಡ್ಡ ಕೂದಲಾಗಿದ್ದಕ್ಕೆ ಇನ್ನೂ ಚಂದ ಅಂತೆಲ್ಲ ಒಳಗಿಂದಲೆ ಸಮಾಧಾನ ಹೇಳಿದ್ದಾಯ್ತು . ಸ್ನಾನ ಮುಗಿಸಿ ಬರುವ ಹೊತ್ತಿಗೆ ನಿಶ್ಯಬ್ದ . ಮಗಳು ಕಾರ್ಟೂನ್  ನೋಡುತ್ತಿದ್ದಳು . ಸಮಾಧಾನವಾಯ್ತು .

ಅರ್ಧಗಂಟೆಗೆ ಹಾಜರ್" ಅಮ್ಮ ನಂಗೆ ಇವತ್ತು ಮಲಗಲೆ ಪಿಲ್ಲೋ ಬೇಕು" . "ಎಂತಕ್ಕೆ?"." ಹಲ್ಲು  ಪಿಲ್ಲೋ ಅಡಿಗೆ ಇಟ್ಗ ಮಲಗಲೆ . ಟೂತ್ ಫ಼ೇರಿ ಬಂದು ತಗಹೋಗ್ತು".

ಟೂತ್ ಫ಼ೇರಿ ಎಂಟ್ರಿ ...

ಈ  ಅಭ್ಯಾಸವಿಲ್ಲದ ಕಾರಣ , " ನೋಡು ನಮ್ಮನೆಗೆ ಬಾಲ್ಕನಿ ಇಲ್ಲದ್ದಕ್ಕೆ ಟೂತ್ ಫ಼ೇರಿ ಗೆ ಬರಲಾಗ್ತಿಲ್ಲೆ , ನೀ ಹಂಗಾಗಿ ಎದುರುಗಡೆ ಇರ ತೆಂಗಿರದ ಕೇಳಗೆ ಹಾಕಿಕ್ಕೆ ಬಾ . ಅದು ಅಲ್ಲಿಂದ ತಗಂಡು ಹೋಗ್ತು ಹೇಳಿ ತೆಂಗಿನಮರದಡಿ ಹಾಕಿಸಿದ್ದಾಯ್ತು .
ಅಲ್ಲಿಗೆ ಎಲ್ಲಾ ಮುಗಿಯಿತು ಎಂದುಕೊಂಡರೆ ಅದು ಮುಕ್ತಾಯವಲ್ಲ ಸಷೇಶ ಎಂದು ಗೊತ್ತಾಗಿದ್ದು ರಾತ್ರಿ ಹನ್ನೆರಡೂವರೆಯಲ್ಲಿ  ಮಗಳು  ಎಬ್ಬಿಸಿ  ಅಮ್ಮಾ ಬ್ಯಾಟರಿ ತಗ ಹೊರಗೆ ಹೋಪನ ಎಂದಾಗ ‌! ಎಂತಕ್ಕೆ ಎಂದೆ ಅರೆಬರೆ ಸಿಟ್ಟಲ್ಲಿ . "ಟೂತ್ ಫ಼ೇರಿ ಹಲ್ಲು ತಗಂಡು ಒಂದು  ಕಾಯಿನ್ ಇಟ್ಟಿಕೆ ಹೋಗ್ತು ಅದನ್ನ ಯಾರಾದ್ರು ಕದ್ಕ ನೆಡದ್ರೆ ... ಹೋಗಿ ತಗಬರನ ಬಾ" .. ಇಲ್ಲೆಲ್ಲ ಅದು  ಕಾಯಿನ್ ಇಡ್ತಿಲ್ಲೆ  ಅದರ ಬದಲು ನಿಂಗೆ ಸ್ಟ್ರಾಂಗ್  , ವೈಟ್ ಹಲ್ಲು ಕೊಡ್ತು ಮಲಗು ಈಗ ಅಂತಾ ಮಲಗಿಸಿದೆ .

ಬೆಳಗ್ಗೆ ಎದ್ದಕೂಡಲೆ "ಅಮ್ಮಾ  ಬಾಗ್ಲು ತೆಕ್ಕೊಡು , ಹಲ್ಲು ತಗಂಡು ಹೋಜ ನೋಡವು". ಇಲ್ಲದ ಟೂತ್ ಫ಼ೇರಿ ಹಲ್ಲು ತೆಗೆದುಕೊಂಡು ಹೋಗುವುದಾದರೂ ಹೇಗೆ .?ಇದು ಮತ್ತೊಂದು ಹಟಕ್ಕೆ ನಾಂದಿ ಎಂದುಕೊಂಡು  Safer side ಗೆ ನಾನೆ ಕತೆ ಕಟ್ಟಿದೆ .."ಅದೆಂತಾ ಒಂದೆ ಹಲ್ಲಿಗೆ ಹೇಳಿ ಬರಲಾಗ್ತ ?ರಾಶಿ ಮಕ್ಕಳ  ಹಲ್ಲು ಬಿದ್ದಾಗ ಬರ್ತನ ಈಗ ಹಲ್ಲು  ಅಲ್ಲೇ ಇದ್ರೆ ನೀ ಅಳಲಾಗ , ಬೇಜಾರ್ ಮಾಡ್ಕಳಲಾಗ ,ಅದು ಇನ್ನೊಂದಿನ ಬಂದು ತಗ ಹೋಗ್ತು" ಹೇಳಿ ಸಮಾಧಾನ ಮಾಡುತ್ತಲೆ ಬಾಗಿಲು ತೆಗೆದೆ . 
ಹೋಗಿ ನೋಡಿದರೆ ಹಲ್ಲು ಅಲ್ಲಿಲ್ಲ .. ನನ್ನ ಥರಾನೆ ನಿನ್ನೆ ರಾಶಿಜನಕ್ಕೆ ಹಲ್ಲು ಬಿದ್ದಿದ್ದೆ ಎಂದು ಮಗಳು ಸಮಾಧಾನಗೊಂಡಳು ಎಂಬಲ್ಲಿಗೆ ಮೊದಲ ಹಲ್ಲಿನ ಕತೆ ಮುಕ್ತಾಯ ..
-ಸಂಧ್ಯೆ ..
14-12-2021

Saturday, 2 March 2019

ಲೆಕ್ಕ !!

ದ್ವಾಪರದಿ ಹದಿನಾರು ಸಾವಿರವಂತೆ..
ಈಗೆಷ್ಟು ಗೋಪಿಕೆಯರೋ ..
ರಾಧೆಯರೋ  ...
ಅಂದಾಜಿಹುದೇ ಮಾಧವಾ...

ಕೊಳಲ ದನಿ ಕೇಳುತ್ತಾ
ಹೆರಳು ಹೆಣೆದು ಮುಡಿಗಿಷ್ಟು
ಮಲ್ಲಿಗೆಯಿಟ್ಟು ಕನ್ನಡಿಯಲ್ಲೇ
ನಿನ್ನ ಧೇನಿಸಿಕೊಂಡವರೆಷ್ಟೋ....

ಪುಸ್ತಕದ ಹಾಳೆಯಲ್ಲಿನ
ನವಿಲುಗರಿಯ ಸೋಕಿಸಿಕೊಂಡು
ನಿನ್ನದೇ ಸ್ಪರ್ಶವೆಂದು ನವಿರಾದವರೆಷ್ಟೋ...

ಗೋಕುಲಾಷ್ಟಮಿಯ ದಿನದಿ
ನಿನಗಿಷ್ಟು ಬೆಣ್ಣೆಯಿಟ್ಟು
ಸಂಭ್ರಮಿಸಿದವರೆಷ್ಟೋ..
ಗೋವ ಕಣ್ಣಲಿ ನಿನ್ನ ಕಂಡು
ಪುಳಕಗೊಂಡವರೆಷ್ಟೋ...

ಕರಿಮೋಡದಂಥ ಪಾದವ
ಎದೆಯಲ್ಲೇ ಅಚ್ಚೊತ್ತಿಕೊಂಡು
 ಪ್ರೀತಿ ಮಳೆಯಲ್ಲಿ  ವಿರಹದುರಿಯ
ಹರಿದುಕೊಂಡವರೆಷ್ಟೋ..

ನೀಲವರ್ಣದ ಚಿತ್ರ ರಚಿಸಿ
ನವಿಲುಗರಿ ತೊಡಿಸಿ
ಕೊಳಲ  ಪಿಡಿದ ಕೈ
ಪಕ್ಕದಲೇ ಗೋವ ಮೂಡಿಸಿ
ಕೃಷ್ಣನೆಂದು ಪೂಜಿಸಿದವರೆಷ್ಟೋ...

ದ್ವಾಪರದಿಂದ ಕಲಿಯವರೆಗೂ
ತಿರುಗಿನೋಡೋಮ್ಮೆ ನೀನು
ಸಿಗಬಹುದು ಲೆಕ್ಕಕ್ಕಿನ್ನಷ್ಟು ಸಾವಿರ..
ಮುರಳಿ ಹಿಡಿದು ಮರಳಿ
ಬಂದೊಮ್ಮೆ ನೋಡು
ಹರಿದುಬಂದೀತು ಬೃಂದಾವನಕೆ
ಗೋಪಿಕೆಯರ ಸಾಗರ...

Thursday, 15 November 2018

ಒಲವು


ನಿನ್ನಿರುವ ಚಿಗುರ ಹೊದ್ದುಕೊಂಡಂತೆ 
ನನ್ನೂರ ಹಸಿರು..
ನೊರೆ ಹಾಲ ಜೊಲ್ಲು ಸುರಿಸಿ 
ಕುಣಿವ ಕರುವಿಗೂ ಇಡಬೇಕೆನಿಸುತ್ತಿದೆ 
ನಿನ್ನ ಹೆಸರು..

ಇದು ಬೆಳಿಗ್ಗೆ ಬಸ್ ಇಳಿದು ಊರ ದಾರಿ ಹಿಡಿದು  ಮನೆಯಂಗಳದಿ ಕುಣಿವ ಕರು ನೋಡಿದ ಕೂಡಲೇ ನೆನಪಾಗಿದ್ದು. ಹಿಡಿವ ಪ್ರಯತ್ನಕ್ಕೆ ಸಿಗದ ಕರುವನ್ನು ಅಪ್ಪ ಎತ್ತಿಕೊಂಡು ಬಂದರು. ಮೆತ್ತನೆಯ ಮೈ ಸವರಿದರೆ ನಿನ್ನದೇ ಬೆಚ್ಚನೆಯ ಸ್ಪರ್ಶ ನೆನಪಾಗಿದ್ದು. " ಮೊನ್ನೆ ಹುಟ್ಟಿದ್ದು, ನೀ ಬಂದ ಮೇಲೆ ಹೆಸರಿಡುವ ಎಂದಿದ್ದೆ ಅಮ್ಮನಿಗೆ. ಇದಕ್ಕೊಂದು ಹೆಸರು ಹೇಳು ಎಂದ ಅಪ್ಪ ನಾ ಚಿಕ್ಕವಳಿದ್ದಾಗ ಎತ್ತಿಕೊಂಡಂತೆ ಎತ್ತಿಕೊಂಡಿದ್ದರು ಆ ಕರುವನ್ನು." ಮೂನ್ "  ಅಂತಾ ಇಟ್ರೆ ಓಕೆ ನಾ ಎಂದ ಅಣ್ಣನ ರಟ್ಟೆ ಚಿವುಟಿ ಒಳಗೆ ಹೋದ ಅತ್ತಿಗೆಯನ್ನು , ಅಣ್ಣನ ತುಂಟ ನಗೆಯನ್ನು ಗಮನಿಸದೇ ಇರಲಾಗಲಿಲ್ಲ. ಅಣ್ಣನಿಗೆ ಗೊತ್ತಾಗಿದೆ ಎನ್ನುವ ದುಗುಡದ ಜೊತೆಜೊತೆಗೆ ಸಮಾಧಾನವೂ ಆಯ್ತು. ಅರ್ಥವಾಗದೇ ನಿಂತ ಅಪ್ಪನಿಗೆ ಚಂದು ಎಂದೆ. "ಚಂದು ಬುಡ್ಡಾ ಅಕ್ಕ ಬಂದಿದಾಳೆ, ಇನ್ನಷ್ಟು ದಿನ ಅವಳೇ ನಿನಗೆ ಜಾಯಿ ಕುಡಿಸೋದು. ಕೈ ಕಚ್ಚಬಾರದು ಅವಳದ್ದು " ಎಂದು ಮುದ್ದಿಸುತ್ತಾ  ಅಪ್ಪ ಕರುವನ್ನು ಕೊಟ್ಟಿಗೆಗೆ ತೆಗೆದುಕೊಂಡು ಹೋಗುತ್ತಿದ್ದರೆ ಹೆಸರು ಅರ್ಥ ಮಾಡಿಸಿದಷ್ಟು ಸುಲಭವಲ್ಲ ಹೊಸ ಬಂಧದ ಬಗೆಗೆ ತಿಳಿಸುವುದು ಎನಿಸಿತು. ನಿಂತಲ್ಲೆ ನಡುಗಿದೆ. ಅಣ್ಣ ಬೆನ್ನಿಗೆ ಕೈ ಹಾಕಿ ಒಳಕರೆದುಕೊಂಡು ಬಂದ. 

ಕ್ಷಮಿಸು ಹೊರಡುವ ಮೊದಲೇ ಮಾತಾಗಿತ್ತಲ್ಲ ನಿನ್ನ ನೆನಪಿಸಿಕೊಳ್ಳಬಾರದೆಂದು. ಏನು ಮಾಡಲಿ ಉಸಿರಾಟದಷ್ಟೇ ಸರಾಗ ನೀನು. ಎನಾಗಿರಬಹುದಲ್ಲಿ ಅಬ್ಬಬ್ಬಾ ಎಂದರೆ ನಿನಗೆ ಬಿಕ್ಕಳಿಕೆ ಬಂದಿರಬಹುದು. ನಿಮ್ಮನೆಯ ಬೀದಿ ಕೊನೆಯಲ್ಲಿ ಹೋಗುತ್ತಿರುವ ಹುಡುಗಿ ನನ್ನಂತೆ ಭಾಸವಾಗಿ ನೀ ಕೆಮ್ಮಿರಬಹುದು. ನಿನ್ನ ಕೆಮ್ಮಿನ ಸದ್ದಿಗೆ ನಾನಲ್ಲದ ಅವಳು ತಿರುಗಿದರೆ ನೀ ತಲೆ ಕೆದರಿಕೊಳ್ಳುತ್ತಾ ಪೆಚ್ಚುನಗೆ ನಕ್ಕಿರಬಹುದು. ಆ ನಗೆಯೂ ಚಂದವೇ.. ದೃಷ್ಟಿಯಾದೀತು.

ಅಣ್ಣನ ಜೊತೆ ಎಂಟು ದಿನದ ಅದ್ಯಾವುದೋ ಕ್ಯಾಂಪ್ ಗೆ ಮನೆಗೆ ಬಂದವ ಎಲ್ಲರನ್ನೂ ಇಂಪ್ರೆಸ್ ಮಾಡಿಬಿಟ್ಟಿದ್ದೆಯಲ್ಲ.ನೀವೆಲ್ಲ ಸೇರಿ  ದೇವಿ ಎಂದು ನನಗೆ ರೇಗಿಸುತ್ತಿದ್ದಿರೆ ನಾ ಮುಖ ಊದಿಸಿಕೊಂಡು ತಿರುಗುತ್ತಿದ್ದೆ. ಆದರೆ ಅದೊಂದು ದಿನ ಕಾಗದದ   ಹೃದಯವನ್ನು ಪಾದದ ಮೇಲಿಟ್ಟು " ಹೃದಯವನ್ನು ಪಾದದ ಮೇಲಿಟ್ಟಾಗಿದೆ ಮುಂದಿನದು ದೇವಿ ಚಿತ್ತ" ಎಂದಾಗ ಮಾತ್ರ ದೇವಿ ಎನ್ನುವ ಶಬ್ದ ಖುಷಿಕೊಟ್ಟಿತ್ತು.  ನಿನಗೆ ಗೊತ್ತಿಲ್ಲದೇ ಆ ಹೃದಯವನ್ನು ಜೋಪಾನವಾಗಿಟ್ಟಿದ್ದೆ. ಮತ್ತು ನಿನ್ನೆದೆರು ಅದೇ ಥರದ ಬೇರೆ ಹೃದಯವನ್ನು ಮಾಡಿ ಬೆಂಕಿಗೆ ಹಾಕಿದ್ದೆ. ಅದಾದಮೇಲೆ ನನ್ನ ಡಾನ್ಸ್ ಕ್ಲಾಸ್ ಮತ್ತು ನಿ‌ನ್ನ ಸ್ಪೋರ್ಟ್ಸ್ ಕ್ಲಬ್  ಒಂದೇ ಕಡೆಯಾದಾಗ ಹತ್ತು ನಿಮಿಷದ ಪೆಟ್ಟಿಅಂಗಡಿ ಟೀ ಗೆ ಗೆಳೆಯನಾದೆ.  ಸುಮಾರು ಆರು ತಿಂಗಳ ನಂತರವಿರಬೇಕು ಅಲ್ಲವಾ ಕಾಗದದ ಹೃದಯವನ್ನು ನಿನಗೆ ವಾಪಸ್ ಕೊಟ್ಟಿದ್ದೆ. ನೀ ಎದೆಯಲ್ಲೇ ಕೂರಿಸಿಕೊಂಡುಬಿಟ್ಟೆ. ಅಲ್ಲಿ ಶುರುವಾಗಿತ್ತು ಪ್ರೀತಿ.  ನಮ್ಮ ಅಣ್ಣಂದಿರ ಗೆಳೆತನದಿಂದ ಶುರುವಾದ ಪ್ರೀತಿಯನ್ನು ಅವರಿಗೂ ಗೊತ್ತಿಲ್ಲದಂತೆ ಕಾಪಾಡಿಕೊಂಡು ಬಂದಿದ್ದಕ್ಕೆ ಹೆಮ್ಮೆ ಪಡಬೇಕೋ  ಇಲ್ಲವೋ ತಿಳಿಯುತ್ತಿಲ್ಲ. 

ನಂಗೊತ್ತು ನೀ ಮೌನದಲೆ ನನ್ನ ಕಂಡುಕೊಂಡರೆ ನಾ ಸದ್ದಿನಲೇ ನಿನ್ನ ಹುಡುಕುತ್ತೇನೆ.  ಬೆಳಗಿನ ಕಾವಳದ ಪಳ ಪಳದಲ್ಲೂ ನನ್ನ ಕಾಣುವ ನಿನ್ನನ್ನು, ನಾ ನಿಗಿ ನಿಗಿ ಕೆಂಡದ ಬುರುಬುರು ಸದ್ದು ಮಾಡುವ ಬೆಂಕಿಯ ಸದ್ದಲ್ಲಿ ಕಂಡುಕೊಳ್ಳುತ್ತೇನೆ. ಮತ್ತು ಬೆಚ್ಚಗಾಗುತ್ತೇನೆ. ನಿನಗಲ್ಲಿ ಬೆಳಗಿನ ಟೀ ಯಲ್ಲಿ , ಧ್ಯಾನ ಮಂಟಪದ ತಣ್ಣನೆಯ ಕಂಬಗಳಲ್ಲಿ,  ಕಲ್ಯಾಣಿಯ ಶಾಂತ ನೀರಲ್ಲಿ ನನ್ನದೇ ನೆನಪಾಗಿರುತ್ತೆ ಅಲ್ಲವಾ. ನೆನಪು ಮಾಡಿಕೊಳ್ಳೋದು ಬೇಡ ಎಂದಷ್ಟು ಸುಲಭವಲ್ಲ ಅದರಂತೆ ನಡೆಯೋದು ;  ಬೆಳಿಗ್ಗೆ ತಾಗಿದ ಎಳೆ ಬಿಸಿಲ ಕೋಲಲ್ಲಿ , ಮಧ್ಯಾನ್ಹ ದ ಸ್ನಾನದಲ್ಲಿ ಸುರುವಿಕೊಂಡ ಬಿಸಿ ನೀರ  ಹಿತದಲ್ಲಿ  ನೀನೆ ಇದ್ದೆ. ಅಷ್ಟೇ ಏಕೆ ಸಂಜೆ  ಅಮ್ಮ ...‌.

ಎಣ್ಣೆ ಬತ್ತಿ  ಸೇರಿದರೇನೇ ದೀಪ
ಎಂದಳು  ಜೋಡಿ ದೀಪಗಳ ಬೆಳಗುತ್ತಾ ...
ನಾನು  ಮುಗುಳುನಕ್ಕೆ 
ನಾನು ನೀನು ಬೆರೆತರೇನೇ ಪ್ರೀತಿ 
ಎಂದ ನಿನ್ನ ಜೋಡಿ ಕಣ್ಣುಗಳ 
ನೆನಪಿಸಿಕೊಳ್ಳುತ್ತಾ... 

ಊಟ ಮಾಡಿ ಹೊಡಸಲ ಬೆಂಕಿಯ ಸುತ್ತು ಕುಳಿತು ಮನೆಯವರೆಲ್ಲ ಮದುವೆಯ ವಿಷಯ ಮಾತನಾಡುತ್ತಾ ಈ ಕಾರ್ತಿಕದಲ್ಲಾದ್ರು ನೋಡಬಹುದಿತ್ತು ಎನ್ನುತ್ತಿದ್ದರೆ , ನಾನು ಮೊನ್ನೆ ನೀ ಕಳಿಸಿದ " ಇಬ್ಬನಿಯು ಸುಡುತಿಹುದು ತಂಗಾಳಿ ನಗುತಿಹುದು ಇನ್ನೆಷ್ಟು ಚಳಿಗಾಲ ಕಾಯೋದೇ ಹುಡುಗಿ " ಸಾಲುಗಳನ್ನು ಓದಿ ನಗುತ್ತಿದ್ದೆ.  ನಾವು ಮಾತನಾಡುತ್ತೇವೆ ಎಂದು ಅತ್ತಿಗೆ ಮಾಡಿದ ಸನ್ನೆಗೆ ಸದ್ದಿಲ್ಲದೇ ಅಲ್ಲಿಂದ ಎದ್ದು ಬಂದಿದ್ದೇನೆ. ಮನದೊಳಗಿನ ದುಗುಡ ಇಷ್ಟೆಲ್ಲ ಬರೆಸಿತು. ಇನ್ನು ಬಾಗಿಲ ಬಳಿಯಲ್ಲಿ ಅಪ್ಪ ಬಂದು ನಿಂತು ಮುಗುಳುನಕ್ಕರೆ ನನಗೇನೋ ಸಮಾಧಾನ. 

Monday, 29 October 2018

ಬೆಲೆ....

ನಾನಲ್ಲಿ ಹೋದಾಗ ಅವಳು ಇಲ್ಲದ ಕಾಲಿನ ಮುಂದೆ ಚಾಕ್ ಪೀಸ್ ನಿಂದ ಕಾಲಿನ ಚಿತ್ರ ಬರೆದು ಕುಳಿತುಕೊಂಡಿದ್ದಳು ಎನ್ನುತ್ತಾ  ಕಾಫಿ ಹೀರಿದ ಸ್ಥವಿರ.

ಎಷ್ಟೊತ್ತಿಗೆ  ಏನು ತಗೋತೀಯಾ ಅಂದಾಗೆಲ್ಲಾ ಮಗಾ ಹಾಟ್ ಇರಲಿ ಅಂತಾ ಆಲ್ಕೋಹಾಲ್ ಕ್ಯಾಬಿನ್ ಕಡೆಗೆ ಕೈ ತೋರಿಸುತ್ತಿದ್ದವನು ಇವನೇನಾ ಅನ್ನುತ್ತಾ ಹುಬ್ಬೇರಿಸಿದ ವರುಣ್ ಅವನ ಕೈ ಲಿದ್ದ ಕಾಫಿ ಕಪ್ ನೋಡುತ್ತಾ.

ವಿಚಿತ್ರ ಹುಡುಗಿ , ನಾನವಳನ್ನು ಮೊದಲ ಬಾರಿ ನೋಡಿದ್ದು  ಒಂದು accident ನಲ್ಲಿ . ಆ ಕಣ್ಣುಗಳನ್ನು ಮರೆಯೋಕೆ ಆಗದೆ ಅವಳಲ್ಲಿಗೆ ಹೋಗಿದ್ದೆ.   ಆ ಕಣ್ಣಗಳು ಅದೆಷ್ಟು ಹುಚ್ಚು ಹಿಡಿಸಿದ್ದವು ಎಂದರೆ, ಮದುವೆ ಆಗ್ತೀರಾ ಅಂದಿದ್ದೆ. ಶ್ರೀಮಂತರರಿಗೆಲ್ಲ ಕೈ ಕಾಲಿಲ್ಲದವರನ್ನು ಮದುವೆಯಾಗುವುದು ಚಾರಿಟಿ ಪ್ರೆಸ್ಟೀಜ್ ಅಡಿಯಲ್ಲಿ ಬರುತ್ತಾ ? ಅವನ್ಯಾವನೋ ಕುಡಿದು ಕಾರು ಹತ್ತಿಸಿ ಪ್ರಾಣ ತೆಗೆದು, ಹೋದ ಜೀವಕ್ಕೆ ದುಡ್ಡಲ್ಲಿ ಬೆಲೆ ಕಟ್ಟಿ ಆರಾಮಾಗಿ ಓಡಾಡುತ್ತಾನೆ. ನೀನಿಗ ಮದುವೆಯಾಗಿ ದೊಡ್ಡವನಾಗಹೊರಟಿದ್ದೀಯಾ,  ಅಂದಳು. ಅವಳ ಮಾತು ಮತ್ತು ದೃಷ್ಟಿಯ ತೀಕ್ಷ್ಣತೆಗೆ ಅಲ್ಲಿರಲಾರದೆ ಹೊರಬಂದೆ‌.

ಕಣ್ಣಸನ್ನೆಯಲ್ಲಿ ನೂರು ಹುಡುಗಿಯರನ್ನು ಬೀಳಿಸಿಕೊಳ್ಳಬಲ್ಲ ತಾಕತ್ತಿರುವ, ಅವನಾಡಿಸುವ ದುಡ್ಡಿನ ಕಂತೆಗೆ ಹಿಂದೆ ಬರುವ ಹುಡುಗಿಯರಿರುವ ದ ರಿಚ್ , ರಾಯಲ್ ,ಗ್ರೇಟ್‌ ಸ್ಥವಿರ ಎನ್ನುವ ಹುಡುಗ ಒಬ್ಬ ಕುಂಟಿಯನ್ನು ಮದುವೆಯಾಗಲು ಹೊರಟಿದ್ದನಾ ಎನ್ನುವ ಆಶ್ಚರ್ಯ ವರುಣ್ ಮುಖದ ಮೇಲಿತ್ತು.

ಸ್ಥವಿರ ಮುಂದುವರೆಸಿದ, ಹೊರಬಂದವನಿಗೆ ಅವಳಮ್ಮ "ಇದೇನೋ ಪ್ರಾಜೆಕ್ಟ್  ಅಂತಾ ಓಡಾಡುತ್ತಿದ್ದಳು . ಗೆಳೆಯರ ಜೊತೆ ಸೇರಿ ವೆಡ್ಡಿಂಗ್ ಪ್ಲಾನಿಂಗ್ , ಇವೆಂಟ್ ಮ್ಯಾನೇಜ್ಮೆಂಟ್ ನ ಬ್ಯುಸಿನೆಸ್ ಮಾಡಬೇಕೆಂದು ಅಂದುಕೊಂಡಿದ್ದಳು. ಅಷ್ಟರಲ್ಲಿ ಹೀಗೆ" .. . ಎನ್ನುತ್ತಾ  ಅವರಿಂದ ಮುಂದೆ  ಮಾತನಾಡಲಾಗಲಿಲ್ಲ. 

ಮನೆಗೆ ಬಂದವನೇ ಅವಳ ಪ್ರಾಜೆಕ್ಟ್ ಡೀಟೇಲ್ಸ್ ಸ್ಟಡಿ ಮಾಡಿ ಅವಳ ಗೆಳೆಯರನ್ನೆಲ್ಲ ಸೇರಿಸಿದೆ . ಅವಳದ್ದೇ ಆದ ಕಂಪನಿಯನ್ನು ಸ್ಟಾರ್ಟ್ ಮಾಡಿಸಿದೆ.  ಅವಳನ್ನು ಇಲ್ಲಿಗೆ ಬರುವಂತೆ ಮಾಡಿದೆ. ನಿಧಾನ ಕಂಪನಿ ಹೆಸರು , ಹಣ ಗಳಿಸಿತು. ಅವಳೆಂಥವಳೆಂದರೆ  ನನ್ನ ಹಣ ಸಹಾಯವನ್ನು ಒಂದು ಪೈಸೆ ಬಿಡದೆ ವಾಪಸ್ ಮಾಡಿದಳು.
ಏನೋ ಹೇಳಬೇಕೆಂದು ಬಾಯಿತೆರೆದ ವರುಣ್ ಗೆ ,

ಮೊದಲು ಎಲ್ಲವನ್ನು ಕೇಳು ಎನ್ನುವಂತೆ ಸನ್ನೆ ಮಾಡಿ ಸ್ಥವಿರ ಮತ್ತೆ ಮುಂದುವರೆಸಿದ..
ಮತ್ತೆ ಮಂಡಿಯೂರಿದ್ದೆ ಅವಳ ಮುಂದೆ ಬೊಗಸೆಯೊಡ್ಡಿ ಪ್ರೀತಿಗಾಗಿ.  ಆದರೆ ಅವಳು , ನಿಮ್ಮನ್ನ , ನಿಮ್ಮ ಪ್ರೀತಿಯನ್ನ ಒಪ್ಪಿಕೊಳ್ಳಬೇಕು ಎಂದುಕೊಂಡಾಗೆಲ್ಲ ಇದೇ ಅಡ್ಡಿ ಬರುತ್ತೆ ನೋಡಿ ಅಂದಳು ವಾಕಿಂಗ್ ಸ್ಟಿಕ್ ನೋಡುತ್ತಾ...  ಮಾತನಾಡುತ್ತಿದ್ದ ಸ್ಥವಿರನ ಗಂಟಲು ಕಟ್ಟಿದ್ದು ವರುಣ್ ಗಮನಕ್ಕೆ ಬಂತು..

"ನೀ ಹೇಗೆ ಇಷ್ಟೆಲ್ಲ ಬದಲಾದೆ ? ಅದೂ ಯಕಶ್ಚಿತ್ ಯಾವುದೋ ಆ್ಯಕ್ಸಿಡೆಂಟ್ ನಲ್ಲಿ ಭೇಟಿಯಾದ ಹುಡುಗಿಗಾಗಿ, ಕುಂಟಿಗಾಗಿ, ಇದು ಸಿಲ್ಲಿ ಅನ್ನಿಸ್ತಿಲ್ವಾ ನಿಂಗೆ "ಎಂದ ವರುಣ್  ಮಾತಿಗೆ ಸ್ಥವಿರ "ಇಲ್ಲ"ಎಂದು ಕಿರುಚಿದ್ದು ಆ ಮನೆಯ ಹಾಲ್ ನಲ್ಲಿ ಪ್ರತಿಧ್ವನಿಸಿತ್ತು.

" ಅವತ್ತು ಕುಡಿದ ಮತ್ತಿನಲ್ಲಿ ಆ ಆ್ಯಕ್ಸಿಡೆಂಟ್ ಮಾಡಿದ್ದು ನಾನೇ, ಕಾಲು ಕಳೆದುಕೊಂಡಿದ್ದು ಅವಳು"

ಈ ಮಾತನ್ನು ಕೇಳಿ ಉಗುಳು ನುಂಗಿಕೊಂಡ ವರುಣ್, ಹಾವು ಮೆಟ್ಟಿ ಬೆಚ್ಚಿಬಿದ್ದಂತಾಗಿದ್ದ.
"ಶ್ರೀಮಂತಿಕೆ, ಬುದ್ಧಿವಂತಿಕೆ, ಸೌಂದರ್ಯ ಎಲ್ಲ ಸೇರಿದಾಗ ಸ್ವಲ್ಪ ಹೆಚ್ಚಿನದೇ ಉಡಾಫೆ ಪೊಗರಿರುವುದು ತಪ್ಪಲ್ಲ ಎನಿಸಿತ್ತು , ಆದರೆ ಅದೆಲ್ಲ ಈಮಟ್ಟಕ್ಕೆ ಒಬ್ಬರ ಜೀವ ತೆಗೆಯುವ ಮಟ್ಟಕ್ಕೆ ನಿನ್ನ ತಳ್ಳಬಹುದು ಅಂತಾ ಗೊತ್ತಿರಲಿಲ್ಲ" ಕಣೋ ..

"ನನಗೂ ಗೊತ್ತಿರಲಿಲ್ಲ " ಎಂದು ವರುಣ್ ನ ತಬ್ಬಿಕೊಂಡ ಸ್ಥವಿರನ ಕಣ್ಣಲ್ಲಿ ನೀರಿತ್ತು. "ಸರಿ ಮಾಡಿಕೊಳ್ಳುವುದಕ್ಕೆ ಒಂದೇ ಒಂದು ಅವಕಾಶಕ್ಕೆ ಕಾಯುತ್ತಿದ್ದೀನಿ , ಅವಳನ್ನ ನೋಡುವಾಗೆಲ್ಲಾ  ಚೂರಿ ಇರಿದಂತಾಗುತ್ತೆ.  ಒಪ್ಪದ ಅವಳು ಮಾತ್ರ ತಣ್ಣನೆ ಕಣ್ಣುಗಳ ಕೊಲೆಗಾರ್ತಿ"....
***********
ಟೆರೆಸ್ ಗಾರ್ಡೆನ್ ನಲ್ಲಿ ಕಾಫಿ ಕುಡಿಯುತ್ತಾ ಕುಳಿತಿದ್ದಳು ಹರಿಣಿ.

 "ನಾನು ವರುಣ್ , ಸ್ಥವಿರನ ಬೆಸ್ಟ್ ಪ್ರೆಂಡ್ " ಪರಿಚಯ ಮಾಡಿಕೊಂಡ ವರುಣ್‌ .

ನಾನು ಹರಿಣಿ ..   ಸ್ಥವಿರ ಹೇಳಿರಬೇಕಲ್ಲ ಎಂದು ನಕ್ಕಳು..

ಥ್ಯಾಂಕ್ಸ್ ನಿಮಗೆ ,   ಅವನಲ್ಲಿನ ಬದಲಾವಣೆಗೆ... ಇವತ್ತು ನೋಡಿ  ನನ್ನ ಇಲ್ಲಿ ಬಿಟ್ಟು ಮೀಟಿಂಗ್ ಅಂತಾ ಹೋಗಿಬಿಟ್ಟ, ಒಂದಷ್ಟು ಜವಾಬ್ದಾರಿ , ಸಹನೆ , ಇನ್ನೊಬ್ಬರಿಗೆ ಸಹಾಯ ಮಾಡುವ ಒಳ್ಳೆತನ ಎಲ್ಲಾ ಬಂದಿದೆ.

ನಕ್ಕಳು ಅವಳು..

ಅವನ ಒಳ್ಳೆತನವನ್ನೂ ನೀವು ಒಪ್ಪಿಕೊಂಡಿದ್ದರೆ....  ಮಾತು ಮುಂದುವರೆಸ ಬೇಕಾ ಬೇಡವಾ ಎಂಬಂತೆ

ಹರಿಣಿಯ ಮುಖ ನೋಡಿವನಿಗೆ ಅವಳ ಮುಖದಿಂದ ನಗು ಮಾಯವಾಗಿದ್ದು ಸ್ಪಷ್ಟವಾಗಿತ್ತು.

ಸಹಾಯಕ್ಕೆ ಬದಲಾಗಿ ಪ್ರೀತಿಯನ್ನು ಒಪ್ಪಿಕೋ ಅಂತಾ ಹೇಳ್ತಿದೀರಾ ಅಲ್ಲವಾ..

ಹಾಗಲ್ಲ ಅವನು ನಿಮಗೋಸ್ಕರ, ನಿಮ್ಮಿಂದ ಬದಲಾಗಿದ್ದಾನೆ ....

ಅವರ "ಈ ಬದಲಾವಣೆಗಾಗಿ ನಾನು ತೆತ್ತ ಬೆಲೆ ನನ್ನ ಕಾಲು ವರುಣ್", ಸಹಾಯಕ್ಕೆ  ಕೃತಜ್ಞತೆಯಿದೆ, ಆದರೆ ಕೆಲ ಗಾಯಗಳೂ ಯಾವತ್ತೂ ವಾಸಿಯಾಗಲ್ಲ ಮನಸಿನ ಮೇಲಾದವುಗಳು. "ಅವತ್ತಿನ ಆ ರಾತ್ರಿಯಲ್ಲಿ , ಜಜ್ಜಿ ಅಪ್ಪಚ್ಚಿಯಾದ ಕಾಲು,  ದೂರ ಕಾರು ನಿಲ್ಲಿಸಿ , ಇಳಿದು ಒಮ್ಮೆ ನೋಡಿದ ಅವನ ಮುಖ, ಅವನೆಸೆದು ಹೋದ ದುಡ್ಡಿನ ಕಂತೆ ... ಇದೆಲ್ಲ ಇವತ್ತಿಗೂ ನನಗೆ ನಿತ್ಯವೂ ಬೀಳುವ ಕನಸಿನ ಭಾಗಗಳು"...
"ಎಲ್ಲ ತಪ್ಪುಗಳಿಗೂ ಶಿಕ್ಷೆಯಾಗಬಾರದು ಎಂದಾದರೆ , ಎಲ್ಲ ತಪ್ಪುಗಳಿಗೂ ಕ್ಷಮೆಯೂ ಇರುವುದಿಲ್ಲ" ಅಲ್ಲವಾ .

ಜೀವನ ಪರ್ಯಂತ ಶಿಕ್ಷಿಸಹೋರಟಿದ್ದೀರಾ?  ಅವನೆದುರೇ ಇದ್ದು ಕಾಡುವ ಬದಲು ದೂರ ಮರೆಯಾಗಿಬಿಡಬಹುದಲ್ಲ.

ಮದುವೆಯಾದರೆ ಎಲ್ಲಾ ಪೂರ್ಣವಾಗಲ್ಲ , ಮತ್ತಷ್ಟು ಛೇದವೇ,  ನಾನು ದಕ್ಕಿದ ಖುಷಿಗೆ ಮತ್ತೆ ಕುಡಿತ, ಮತ್ತೆ  ಡ್ರೈವಿಂಗ್ , ನಾನೇ ಅವನ ಗುರಿಯಾಗಿರುವಾಗ ನನ್ನ  ತಲುಪಿದ ಖುಷಿಗೆ ಮತ್ತೆ ಉಢಾಫೆ ಎಲ್ಲವೂ  ಮರುಕಳಿಸುತ್ತವೆ. ನಾನವನನ್ನು ಅರ್ಥಮಾಡಿಕೊಂಡಿದ್ದೇನೆ.. ಈಗ ನೀವೆಂದ ಬದಲಾವಣೆಗಳೆಲ್ಲ ಮತ್ತೆ ಮೊದಲ ಬಿಂದುವಿಗೆ ಮುಟ್ಟುತ್ತೆ ವರುಣ್ .   ನನ್ನಿರುವು, ನನ್ನೆಡೆಗಿನ ಪ್ರೀತಿ ಅವನನ್ನು ಸದಾ ಜಾಗೃತವಾಗಿಡುತ್ತದೆಯೆಂದಾದರೆ ಹಾಗೆ ಇರಲಿ...

ಇದು ಶಿಕ್ಷೆಯಲ್ಲ .. ನಿಮ್ಮ ಗೆಳೆಯನ ರಕ್ಷಣೆಗೆ ನಿಂತಿದ್ದೇನೆಂದುಕೊಳ್ಳಿ..

ಮೊದಲು ಪೋಣಿಸಿದ್ದು ಕೆಲವು ಸುಳ್ಳುಗಳು,  ಅವನೆಡೆಗಿನ ಪ್ರೀತಿಯೇ ಇದನ್ನೆಲ್ಲ ಮಾಡಿಸುತ್ತಿರುವುದು. ಎಂದು ಮನಸಿನಲ್ಲೆ ಅಂದುಕೊಳ್ಳುತ್ತಿದ್ದರೂ ಕೊನೆಯ ವಾಕ್ಯ ಹರಿಣಿಯ ಬಾಯಿಂದ ಅಪ್ರಯತ್ನವಾಗಿ ಹೊರಬಂದು ಬಿಟ್ಟಿತ್ತು.
ಅವನಿಗೆ  ಕೇಳಿಸಿತಾ ಎಂದು ತಟ್ಟನೆ ತಿರುಗಿದಳು ..

ಕೊನೆಯ ಮಾತು ತನಗೇ ಕೇಳಿಸಲೇ ಇಲ್ಲವಂಬಂತೆ ಅವಳಿಗೆ ಬೆನ್ನು ಹಾಕಿ ಹೊರಟಿದ್ದ ವರುಣ್. ಅವನಿಗೆ ಅವಳ ಪ್ರೀತಿ ಅರ್ಥವಾಗಿತ್ತು, ಮತ್ತೂ ತಾನು ಅದನ್ನೆಂದೂ ಸ್ಥವಿರನಿಗೆ ಹೇಳಲಾರೆ ಎಂದು ನಿರ್ಧರಿಸುತ್ತಲೇ ಮೆಟ್ಟಿಲಿಳಿಯತೊಡಗಿದ..

ಇತ್ತ ಮನದಲ್ಲಿ ಮೂಡುತ್ತಿದ್ದ ಸ್ಥವಿರನ ಚಿತ್ರವನ್ನು ಅಳಿಸುವಂತೆ ತಲೆಕೊಡವುತ್ತಾ ವಾಕಿಂಗ್ ಸ್ಟಿಕ್ ಹಿಡಿದು ಎದ್ದು ನಿಂತಳು ಹರಿಣಿ.

Tuesday, 26 September 2017

ಪಾರೋತಿ


"ಏನು ಪುಟ್ಟಮ್ಮ ಇಲ್ಲಿ ಕುಳಿತಿದ್ದೀರಿ, ಮಳೆ ನೋಡುಕಾ" ಎನ್ನುತ್ತಾ ಸುಟ್ಟ ಹಲಸಿನ ಹಪ್ಪಳ ಹಿಡಿದು ಪಾರೋತಿ  ಬಾಲ್ಕನಿಗೆ ಬಂದಾಗ ನಾ ಮಳೆ ದಿಟ್ಟಿಸುತ್ತಿದ್ದೆ. 

"ಕುಳಿತು ನೋಡುವಂಥ ಒಂದೇ ಒಂದು ಮಳೆ ಬರಲಿಲ್ಲ ನೋಡು" ಎಂದೆ. 

"ಮಳೆ ಏನು ನೋಡುದು, ಮಕಾ ಮುಸುಡಿ ಇಲ್ಲದೇ ಸುರಿತದೆ. ಅದ್ರಾಗ್ ಏನ್ ಚಂದವೋ ನಾ ಕಾಣೆ" ಎಂದಳು. 

ಹಾಗಲ್ವೆ ಮಳೆ ಅಂದ್ರೆ ಖುಷಿ ಅಲ್ವೇನೆ . ಈಗ ನಂಗೆ ನೋಡು ಮಳೆ ಅಂದ್ರೆ ಎಷ್ಟೆಲ್ಲ ನೆನಪು ಬರುತ್ತೆ ಗೊತ್ತಾ?    ಅಂದೆ . ಮಳೆ ಎಂದರೆ ಪ್ರಾಣ ಬಿಡುವ ನಾನು ಅವಳುತ್ತರಕ್ಕೂ ಕಾಯದೇ ನೆನಪಿಗೆ ಜಾರಿ ಬಿಟ್ಟೆ. 

ಅಪ್ಪ ಅಮ್ಮನಿಂದ ದೂರವಿರುತ್ತಿದ್ದ ನನಗೆ ಕೆಲವೊಮ್ಮೆ ಒಂಟಿತನ ಕಾಡುತ್ತಿತ್ತು‌. ಆಗೆಲ್ಲ ಕಿಟಕಿಯ ಪಕ್ಕ ಕುಳಿತು ಆಗಸ ನೋಡುತ್ತಿದ್ದೆ. ಆಗಿಂದಲೇ ನನಗೆ ಮಳೆ ಆತ್ಮೀಯವಾಗಿದ್ದು. ಉದ್ದ ಜಡೆ ಜೋರು ಮಳೆಗೆ ಒದ್ದೆಯಾದಾಗೆಲ್ಲ ಹೊಡಸಲ ಬೆಂಕಿಯಲ್ಲಿ  ಕೂದಲು ಒಣಗಿಸೋ ಸಂಭ್ರಮ.ಆಗೆಲ್ಲ ಕೂದಲಿಗೆ ಬೆಂಕಿಕಿಡಿ ತಾಗದಂತೆ ಅಜ್ಜಿ ಪಕ್ಕದಲ್ಲಿ ಕುಳಿತುಕೊಂಡು ನೋಡಿಕೊಳ್ಳುತ್ತಿದ್ದಳು. ಸಂಜೆಯಾದರೆ ಸುಟ್ಟ ಹಲಸಿನ ಹಪ್ಪಳದ ಜೊತೆ ಅದೇ ಹೊಡಸಲ ಮುಂದೆ ಕುಳಿತು ಅದೇಷ್ಟು ಭೂತ, ವರ್ತಮಾನದ ಕತೆಗಳಿಗೆ ಕಿವಿಯಾಗುತ್ತಿದ್ದೆವು ಗೊತ್ತಾ.? ಹುಟ್ಟಿದ ಭವಿಷ್ಯದ ಕನಸುಗಳೆಷ್ಟೋ.. ಅದೇ ಬೆಂಕಿಯಲ್ಲಿ ಕರಗಿದವಕ್ಕೂ ಲೆಕ್ಕವಿಲ್ಲ ಬಿಡು. ನೆನಪುಗಳು ಮತ್ತಷ್ಟು ಮತ್ತಷ್ಟುಮುತ್ತಿಕೊಳ್ಳುವ ಮೊದಲೇ  ನನ್ನದೇ ಲಹರಿಯಲ್ಲಿ  ಅವಳಸ್ತಿತ್ವವನ್ನೂ ಮರೆತು ಮಾತನಾಡುತ್ತಿದ್ದವಳು ಪಕ್ಕನೆ ತಿರುಗಿ ನಿಂಗೇನೂ ನೆನಪುಗಳಿಲ್ಲವ  ನಿಮ್ಮೂರ ಮಳೆ ಜೊತೆ? ಎಂದು ಕೇಳಿದೆ. 

"ಏನು ನೆನಪಾಗಬೇಕು ಹೇಳಿ. ಮಳೆ ಬಂದರೆ ತುಂಬಿ ಹರಿಯೋ ತುಂಗೆ. ಮನೆ ಸುತ್ತೆಲ್ಲ ನೀರು ತುಂಬಿ ದ್ವೀಪವಾಗಿಬಿಡ್ತಿತ್ತು.  ಅದ್ ಬಿಟ್ರೆ ತುಂಗೆಯಲ್ಲಿ ಕೊಚ್ಚಿ ಹೋದ ಅಪ್ಪ ಅಮ್ಮ. ಕೊನೆಯ ಸಾರಿ ಎಂಬಂತೆ ದಡಕ್ಕೆಳೆಯಲು ಪ್ರಯತ್ನಿಸಿದಾಗ ಸಿಕ್ಕ ಅಮ್ಮನ ಸೀರೆ" ಎಂದಳು. ಧ್ವನಿಯಲ್ಲಿ ಸ್ವಲ್ಪವೂ ಏರಿಳಿತವಿರಲಿಲ್ಲ !

 ನನಗೆ ಪಿಚ್ಚೆನಿಸಿ ಮಾತು ಬದಲಾಯಿಸಲು "ಈ ಊರಿನ ಮಳೆ ಜೊತೆ ? " ಎಂದು ಕೇಳಿಬಿಟ್ಟೆ. 

"ಅವ ಸಿಕ್ಕಿದ್ದು ಇಂಥದ್ದೇ ಒಂದು ಮಳೆಗಾಲದಲ್ಲಿ.. ಅವ ನನ್ನ ತೊರೆದು ತೋದದ್ದೂ ಇಂಥದೇ ಮಳೆಗಾಲದಲ್ಲೇ " ಎಂದು ಖಾಲಿಯಾದ ಬಟ್ಟಲ ತೆಗೆದುಕೊಂಡು ಸರಸರನೆ ಮೆಟ್ಟಿಲಿಳಿದು ಹೋದಳು. ಅವಳ ಮುಖವನ್ನೊಮ್ಮೆ ಓದಬೇಕೆಂದುಕೊಂಡವಳಿಗೆ ಮಬ್ಬು ಬೆಳಕಲ್ಲಿ ಕಂಡಿದ್ದು ಅವಳ ಬೆನ್ನ ಮೇಲಿದ್ದ ಬರೆ.. ಮನಸ್ಸೀಗ ಮಳೆ ತೋಯಿಸಿದ ಕೆರೆಯಾಗಿತ್ತು. ಪಾರೋತಿ ತುಂಬಿಕೊಂಡಿದ್ದಳು. 

ಈ ಪಾರೋತಿ ಶೃಂಗೇರಿ ಕಡೆಯವಳು. ಇಲ್ಲಿನ ಶಂಕ್ರನನ್ನು ಮದುವೆಯಾಗಿ ಈ ಊರಿಗೆ ಬಂದವಳು ಇಲ್ಲಿನ ನಡೆ ನುಡಿಯನ್ನೂ ಅದೆಷ್ಟು ಬೇಗ ಕಲಿತಿದ್ದಳೆಂದರೆ ನಮ್ಮೂರಿನ ಮಗಳೇ ಆಗಿಬಿಟ್ಟಿದ್ದಾಳೆ.  ಸ್ವಂತ ಜಮೀನಿನಲ್ಲಿ ಬೆಳೆ ತೆಗೆಯುತ್ತಾ, ಅವರಿವರ ಮನೆ ಕೊಟ್ಟೆ ಕೊನೆ,ಮದ್ದು ಮಾಡುತ್ತಾ, ಜೇನು ಕೀಳುತ್ತಾ ಇದ್ದೊಂದು ಅಜ್ಜಿ ಯನ್ನೂ ಹೆಂಡತಿಯನ್ನೂ ನೆಮ್ಮದಿಯಿಂದ ಸಾಕುತ್ತಾ ನಾಲ್ಕು ಜನ ಮೆಚ್ಚುವಂತೆ ಸಂಸಾರ ಮಾಡುತ್ತಿದ್ದ ಶಂಕ್ರ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ.ತಿಂಗಳುಗಳು ಕಳೆದರೂ ಶಂಕ್ರ ಪತ್ತೆಯಾಗದಿದ್ದಾಗ, ಅವರಿವರ ಕಾಡಿಬೇಡಿ ಒಂದು ಹೊಲಿಗೆ ಅಂಗಡಿ ಹಾಕಿಸಿಕೊಂಡು, ಸಂಸಾರವನ್ನು ತನ್ನ ಹೆಗಲಿಗೆ ತೆಗೆದುಕೊಂಡಿದ್ದಳು. ಆದರೆ ಆ ಅಜ್ಜಿ ಅದೊಂದು ದಿನ ನನ್ನ ಕನಸಲ್ಲಿ ಮೊಮ್ಮಗ ಕಂಡಿದ್ದ, ಅವನು ಬದುಕಿಲ್ಲ, ನೀ ಮುತ್ತೈದೆಯಾಗಿರಬಾರದು ಎಂದು ಯಾರು ಹೇಳಿದರೂ ಕೇಳದೆ ಪಾರೋತಿಯ ಕುಂಕುಮ, ಬಳೆ, ಹೂವುಗಳ ತೆಗೆಸಿಬಿಟ್ಟಳು. ಅವಳ ಕಣ್ಣಿಗೆ ಕಾಣದಂತೆ ಒಂದೆರಡುಬಾರಿ ಸಿಂಗರಿಸಿಕೊಂಡಿದ್ದು ಗೊತ್ತಾಗಿ ಮುದುಕಿ ಇವಳ ಬೆನ್ನಿಗೆ ಬರೆ ಎಳೆದಿದ್ದಳು.  ನಾನೊಮ್ಮೆ ಇವಳನ್ನು ಕೇಳಿದ್ದೆ "ಅಜ್ಜಿ ಹೇಳಿದ್ದು ನಿನಗೂ ನಿಜ ಅನಿಸುತ್ತಾ ?"ಅದಕ್ಕವಳು "ಇಲ್ಲ ಅದ್ರೆ ಅವಳನ್ನು ಖುಷಿಯಿಂದ ಇಡಬೇಕು ನೀನು ಅಂತ ಶಂಕ್ರ ಮಾತು ತಗಂಡಾನೆ. ಪುಟ್ಟಮ್ಮ ನಂಗೆ ನಿಮ್ ಥರ ಪ್ರೀತಿ ಪ್ರೇಮ ಅಂತ ದೊಡ್ಡ ದೊಡ್ಡ ಮಾತೆಲ್ಲ ಆಡಾಕೆ ಬರುದಿಲ್ಲ. ಆದ್ರೆ ಮದ್ವೆ ಆದ ಸುರುವಲ್ಲಿ ಶಂಕ್ರ ನಂಗೆ ನಿಮ್ಮನೆ ಟೆರ್ರೆಸ್ ಮೇಲೆ ಕುಂತು ನಕ್ಷತ್ರ ನೋಡುದು ಕಲ್ಸಿಕೊಟ್ಟಿದ್ದ. ಈಗಲೂ ಬೇಸರ ಆದಾಗೆಲ್ಲ ನಕ್ಷತ್ರ ನೋಡ್ತೆ. ಆಗೆಲ್ಲ  ನಂಗೆ ಅಲ್ಲೆಲ್ಲೋ ಶಂಕ್ರನೂ ನನ್ಹಾಂಗೆ ಇದೇ ನಕ್ಷತ್ರ ನೋಡ್ತಿದ್ದಾ ಈಗ ಅನ್ನಿಸ್ತದೆ. ನಂಗೆ ಹಾಂಗೆ ಅನ್ನಿಸ್ದೆ ಇದ್ದ ದಿನ ನಾನು ಅಜ್ಜಿ ಹೇಳಿದ್ದನ್ನ ಒಪ್ಪಿಕೊಳ್ತೀನಿ. ಅಲ್ಲಿವರೆಗೂ ಅವಳ ಸಮಾಧಾನಕ್ಕೆ ಇದೆಲ್ಲ. ಮನಸಲ್ಲಿ ನಾ ಇನ್ನೂ ಮುತ್ತೈದೆನೆಯಾ" ಎಂದಿದ್ದಳು."ಇಂದೋ ನಾಳೆ ಉದರೋ ಆ ಮುದುಕಿಗಾಗಿ ಗೇಯೋ ಬದಲು ಆ ಪುಟ್ಟಣ್ಣನ ಕಟ್ಟಿಕೊಂಡು ಚಂದ ಸಂಸಾರ ಮಾಡಬಹುದಿತ್ತು"  ಎಂದು ಅತ್ತೆ  ಆಗಾಗ ಇವಳ ನೋಡಿ ಹಲುಬುತ್ತಾರೆ.  ಪಾರೋತಿ ಮಾತ್ರ ನಿರ್ಲಿಪ್ತೆ. ಪಾರೋತಿಯ ಮಾತುಗಳ ನೆನಪಾಗಿ "ಭೂರಮೆ ಕಾಯುತ್ತಿದ್ದಾಳೆ ಬಾರೋ ಮಳೆರಾಯ" ಎಂದು ಆಗಸವನ್ನು ಬೇಡಿಕೊಂಡು ಒಳಬಂದೆ.

ಬೇಡಿಕೊಂಡಿದ್ದೇ ನಿಜವಾಗುವಂತೆ ಮಳೆ ಭಯಂಕರವಾಗಿ ಶುರುವಾಗಿತ್ತು. ಗುಡುಗು, ಮಿಂಚು , ಸಿಡಿಲ ಅಬ್ಬರಕ್ಕೆ ಮಳೆ ಬೇಕೆಂದವಳೂ ಕೂಡ ಭಯಗೊಂಡಿದ್ದೆ. ಅತ್ತೆ ಬಂದು ನನ್ನ ಪಕ್ಕದಲ್ಲೆ ಮಲಗಿದ್ದರು. 

ಬೆಳಿಗ್ಗೆ ಏಳೋ ಹೊತ್ತಿಗೆ ಮಳೆಯ ಆರ್ಭಟ ಕಡಿಮೆಯಾಗಿದ್ದರೂ ಅನಾಹುತಕ್ಕೇನೂ ಕಡಿಮೆಯಿರಲಿಲ್ಲ.  ಎದ್ದವಳು  ಎಂದಿನಂತೆ ಪಾರೋತಿಯ ಮನೆ ಕಡೆ ನೋಡಿದೆ. ತುಂಬಾ ಜನ ಸೇರಿದ್ದರೂ ಸ್ಮಶಾನ ಮೌನವಿತ್ತು. ಅತ್ತೆಯ ಮುಖ ನೋಡಿದೆ, " ನಿನ್ನೆಯ ಗಾಳಿ ಮಳೆಗೆ ನಮ್ಮೂರಿಗೆ ಬರುತ್ತಿದ್ದ ಬಸ್ಸಿನ ಮೇಲೆ ಮರ ಬಿದ್ದು ನಾಲ್ಕು ಜನ ಸತ್ತರಂತೆ. ಅವರಲ್ಲಿ ಶಂಕ್ರನೂ ಒಬ್ಬ. ಊರ ಬಿಟ್ಟು  ಎಲ್ಲೆಲ್ಲೋ ಅಲೆದವನ ಸಾವು ಮಾತ್ರ ಊರ ಬಾಗಿಲಲ್ಲೇ ಬರೆದಿತ್ತು ನೋಡು. ಪಾಪ  ಆ ಹೆಣ್ಣು ಜೀವ " ಎಂದರು. 

ಕೈ ಕಾಲು ಸಣ್ಣಗೆ ನಡುಗುತ್ತಿದ್ದರೂ ಪಾರೋತಿಯ ಮನೆಯಂಗಳಕ್ಕೆ ಬಂದೆ. ನನ್ನ ಕಂಡವಳೇ ಓಡಿ ಬಂದು ತಬ್ಬಿಕೊಂಡಳು. " ಮನಸ್ಸಿನಲ್ಲಿ ಮುತ್ತೈದೆಯೇ ಎಂದವಳು ಹಾಗೆಯೇ ಬದುಕಿಬಿಡುತ್ತಿದ್ದಳು. ನೀ ಬರಲೇ ಬಾರದಿತ್ತು ಹಾಗೆಯೇ ಶಂಕ್ರನೂ " ಎಂದು ಮೊದಲ ಬಾರಿಗೆ ಮಳೆಯನ್ನು ಶಪಿಸುತ್ತಿದ್ದೆ.  ನನ್ನ ಮನಸ್ಸನ್ನು ಓದಿದವಳಂತೆ " ಇಷ್ಟು ದಿನ ಇದ್ದೂ ಇಲ್ಲದಂತೆ ಬದುಕಲಿಲ್ಲವ. ಈಗ ಇಲ್ಲವೇ ಇಲ್ಲ ಎಂದುಕೊಂಡು ಬದುಕುವುದು ಕಷ್ಟವಲ್ಲ ಪುಟ್ಟಮ್ಮ . ಎಲ್ಲ ಕೆಲಸಕ್ಕೂ ನಾನೇ ಮುಂದಾಗಬೇಕು ಈಗ, ಸಂಜೆ ದುಃಖ ಕರಗಿಸಿಕೊಳ್ಳುಕೆ ಹೆಗಲು ಕೊಡಿ ಸಾಕು" ಎಂದವಳು ಮರೆಯಾದಳು.

ಆಗಸ ಹರಿದಂತೆ ಮುಸಲಧಾರೆ ಮತ್ತೆ ಶುರುವಾಯ್ತು. ಶಂಕ್ರನ ಹೆಣ, ಸುತ್ತ ನೆರೆದ ಮಂದಿ, ಗೋಳಾಡುವ ಮುದುಕಿ ಎಲ್ಲರೂ ಮಸುಕು ಮಸುಕು... ಪಾರೋತಿಯ ಚಿತ್ರ ಮಾತ್ರ ಮನಸ್ಸಿನಲ್ಲಿ ನಿಚ್ಛಳ...

Monday, 14 August 2017

ಮೇಘಶ್ಯಾಮ


ಗೊಲ್ಲನೆಂಬರು.. ನಲ್ಲನೆಂಬರು..
ನಾ ನೀಲ ವರ್ಣದವ  ಮೇಘಶ್ಯಾಮ..
ಬಾಲನಿನ್ನೂ ನಿನ್ನ ಮಗ
ಹೊಡೆಯದಿರೆ ಅಮ್ಮಾ....
 ಜೇನ ತೆಗೆಯುವವ ಕೈ ನೆಕ್ಕದೆ ಇದ್ದಾನೇನೆ ?
ಗೋ ಮಾತೆಯ ಕಾಯ್ವವ ನಾ ಕದ್ದು ಹಾಲು
ಕುಡಿದರೆ ತಪ್ಪೇನೆ ?

ಅಟ್ಟಾಡಿಸಿ ಕೋಲ ತೆಗೆದುಕೊಂಡು
ಓಡಿಸಬೇಡ ಮಹರಾಯ್ತಿ..
ದೊಡ್ಡವನಾದಂತೆ ತುಂಟಾಟಕ್ಕಿಲ್ಲವೇ ರಿಯಾಯಿತಿ..
ನಿನಗೆ ಚಾಡಿ ಹೇಳಿದವರೇ
ಸುಮ್ಮಗೆ ಕರೆದು ಕೊಡುವರು
ನೀನೆ ಕೇಳು ತಿಳೀದೀತು ನಿಜಾಯತಿ..

ಹೊಡೆದಂತೆ ನಟಿಸಿ, ಕೋಲ ಒಲೆಗೆಸೆದು..
ದೃಷ್ಟಿ ತೆಗೆದು, ನೆಟಿಕೆ ಮುರಿದು
ಮಡಿಲಲ್ಲಿ ಕೂರಿಸಿಕೊಂಡು ನೊರೆ ಹಾಲ
ಕೊಡುವವಳು ನೀ ಕ್ಷಮಾಯಾಧರಿತ್ರಿ..
ಮಡಿಲ ತುಂಬಿ ನೊರೆ ಮೀಸೆಯಡಿಯಲ್ಲಿ
ನಗುವ ನಾ ಜಗನ್ನಾಟಕ ಸೂತ್ರಧಾರಿ

Sunday, 5 February 2017

ಹಾರ್ಟ್ ಬೀಟ್....:)



ಬಹಳ ದಿನಗಳ ಮೇಲೆ ನಾನು.. ಅವಳು.. ಮತ್ತು ಕಾಫಿ...

ಏನಾದರೂ ಹೇಳು..

ಏನ್ ಹೇಳ್ಲಿ...

ಅವನ ಬಗ್ಗೆ ಹೇಳು...

ಅವನು...

ನಾನು ಕೇಳಿದ ಮೊದಲ ಹಾರ್ಟ್ ಬೀಟ್ ಅವನದ್ದೇ... ಹೌದು ಅವತ್ತು ಅದೇನೋ ಓದುತ್ತಿದ್ದವನು ನನ್ನನ್ನು ಎದೆಗೊರಗಿಸಿಕೊಂಡಿದ್ದ..... ಡಬ್ ಡಬ್.. ಊಮ್ ಮ್ ಮ್.. ಲಬ್ ಡಬ್ ಊಹು ಆ ಸದ್ದೇ ಬೇರೆ.. ಜೀವನದಲ್ಲೇ ಮೊದಲಬಾರಿ ಕೇಳಿದ್ದೆ..!! ಬಹಳ ಖುಷಿಯಾಯ್ತು.,. ಮತ್ತೆ ಮತ್ತೆ ಕೇಳಿದೆ.. ಇದೇನ್ ನೀನು ಚೆಲ್ ಚಲ್ಲಾಗಿ ಆಡಿದ್ದು ಅನ್ನಬೇಡ ಮತ್ತೆ.. ಮೊದಲ ಸಲ ಅದೇನೋ ಹೊಸದನ್ನು ಕಂಡ ಮಗುವಾಗಿತ್ತು ಮನಸ್ಸು. ಕುತೂಹಲಕ್ಕೆ ಮತ್ತೆ ಮತ್ತೆ ಕೇಳಿದ್ದು.. ಅವ ಮಾತ್ರ ನನ್ನ ದುಪ್ಪಟ್ಟಾದ ಅಂಚು ಕೂಡ ಹಿಡಿಯಲಿಲ್ಲ.. ನಸುನಗುತ್ತ ಓದುತ್ತಲೇ ಇದ್ದ.. ಋಷಿಯಂತೆ.. ಅವತ್ತು ಅಷ್ಟುದ್ದದ ಬಟ್ಟಾ ಬಯಲಿನಂಥ ಜಗುಲಿಯಲ್ಲಿ.. ಮಟಮಟ ಮಧ್ಯಾಹ್ನದಲ್ಲಿ ನಮಗಾಗಿ ಅಂಥದೊಂದು ಏಕಾಂತ ಅದ್ಹೇಗೆ ಹುಟ್ಟಿತ್ತೋ ಇಂದಿಗೂ ಕಾಣೆ.. ಮನೆಗೆ ಬಂದ ಮೇಲೂ ಮನಸ್ಸು ಕೇಳುತ್ತಿತ್ತು ಅವನನ್ನು ಏನಂತ ಕರೆಯಲೇ ಎಂದು...


ಬೀದಿಯ ಮಕ್ಕಳೆಲ್ಲ ಅವನಿಗೆ ಅಂಕಲ್ ಎನ್ನುತ್ತಿದ್ದರು. ನಾನೂ ಅವರೊಂದಿಗೆ ಆಡುವಾಗ ಅಂಕಲ್ ಬಾಲ್ ಪ್ಲೀಸ್.,. ಎಂದರೆ ಕಣ್ಣಲ್ಲೊಂದು ಅಸಹನೆ... ಬಾಲ್ ಕೊಡದೆ ಒಳಗೆ ಹೋಗುತ್ತಿದ್ದ.. ಹಿಂಬಾಲಿಸಿ ಹೋದರೆ.. ಕಿವಿ ಹಿಂಡಿ ,ಸಾರಿ ಹೇಳಿಸಿ ಬಾಲ್ ಕೊಡೊಹೊತ್ತಿಗೆ ಮಕ್ಕಳು ಬಾಲ್ ಮರೆತು ಬೇರೆ ಆಟಕ್ಕೆ ತೊಡಗುತ್ತಿದ್ದವು .ನಾನೋ ಮಕ್ಕಳನ್ನೇ ಮರೆತಿರುತ್ತಿದ್ದೆ.


ರಸ್ತೆಯಲ್ಲಿ ಹೋಗುತ್ತಿದ್ದಾಗ ಅದ್ಯಾರೋ ಬೇಕಂತಲೇ ಎಲ್ಲಿಗೋ ಕೈ ತಾಕಿಸಿ, ಕಣ್ಣುಹೊಡೆದು ಹೋಗಿರುತ್ತಾನೆ. ಇದನ್ನೆಲ್ಲ ಅವನಿಗೆ ಹೇಳಿದರೆ " ಕೈ ಹಿಡಿದು ನಿಲ್ಲಿಸಿ ಕಪಾಳಕ್ಕೆರಡು ಬಾರಿಸಿ ಬರಬೇಕಿತ್ತು. ಮುಂದೇನಾದರೂ ಆದರೆ ನಾನ್ ನೋಡಿಕೊಳ್ತಿದ್ದೆ" ಎನ್ನುವಾಗ ಅಣ್ಣ ಅವನು. ಆದರೆ ಹಾಗೆ ಕರೆಯಲು ಮನಸ್ಸೇ ಬಾರದು. ಎದುರುಮನೆಯ ಕಾಲೇಜುಹುಡುಗಿ ಅವನಿಗೆ ಅಣ್ಣಾ ಎಂದರೆ ನನಗೇನೋ ಸಮಾಧಾನ.


ಅದೆಲ್ಲ ಆವಾಗ.. ಈಗಿಂದು ಹೇಳು....


ಈಗ.,.

ಅಮ್ಮ ಅವನನ್ನು ಮಗನೆಂದಾಗ, ಅಪ್ಪ ಅವನನ್ನೇ ಆದರಿಸಿದಾಗ, ತಂಗಿ ಅವನನ್ನೇ ವಿಚಾರಿಸಿದಾಗ ನನ್ನವರನ್ನೇ ನನ್ನಿಂದ ದೂರ ಮಾಡಿದ ದುಷ್ಟ ಅವನು..


ಅವನಮ್ಮ ನನ್ನನ್ನು ಸೊಸೆ ಮುದ್ದು ಎನ್ನುವಾಗ, ಆ ಮನೆಯ ದೊಡ್ಡಪಾಲಿನ ಪ್ರೀತಿ ನನ್ನದಾದಾಗ, ಪ್ರತಿಯೊಂದು ಪ್ರಥಮಗಳೂ ನನಗಾಗೇ ಮೀಸಲಿರುವಾಗ, ಎಲ್ಲರೂ ನನ್ನನ್ನೇ ಮುದ್ದುಗರೆವಾಗ ದೂರ ನಿಂತು ನನ್ನನ್ನೇ ನೋಡೋವಾಗ ಇಷ್ಟ ಅವನು..


ತಿಂಗಳ ನೋವಲ್ಲಿ ಹೊಟ್ಟೆನೋವೆಂದರೆ ಕಷಾಯ ಮಾಡಿ ಕುಡಿಸಿ, ಕಿಪ್ಪೊಟ್ಟೆ ನೀವಿ.. ಅಂಗಾಲಿಗೆ ಎಣ್ಣೆ ಸವರಿ ನೆತ್ತಿ ತಟ್ಟಿ ಮಲಗಿಸುವಾಗ ಅಮ್ಮ ಅವನು...


ಗೊತ್ತಿಲ್ಲದೆ ತಪ್ಪಾದಾಗ, ತಪ್ಪು ಅಂತ ಗೊತ್ತಿದ್ದೂ ಮಾಡಿದ ಹುಂಬತನದ ಕೆಲಸಗಳಿಗೆ ಪಟ್ಟಾಗಿ ಕೂತು ಬುದ್ಧಿ ಹೇಳೊ ಅಪ್ಪ ಅವನು...


ಸೋತು ನಿಂತಾಗ, ನೊಂದಾಗ, ಇನ್ನು ಆಗೊಲ್ಲ ಎಂದು ಕುಸಿದು ಕುಳಿತಾಗ, ಕಣ್ಣಂಚಲ್ಲಿ ನೀರಿದ್ದಾಗ " ನಾನಿದ್ದೇನೆ" ಎನ್ನುವ ಭರವಸೆ ಅವನು...


ಮುಡಿಗಿಷ್ಟು ಹೂವಿಟ್ಟು ಗಲ್ಲ ಸವರಿ ಬೆಲ್ಲ ಕೇಳುವವನು.. ಕತ್ತಿನ ಸುತ್ತ ಮುತ್ತಿನ ಸರ.. ತೋಳಬಂದಿಯಾಗುವವ ನಲ್ಲ ಅವನು..


ಊಮ್ ಇಷ್ಟೆಲ್ಲ ಆಯ್ತು ... ಇನ್ನೇನು ಇಲ್ವಾ ಅಂತ ಕಣ್ಣು ಮಿಟುಕಿಸಿದಳು..


ಅವಳಿಂಗಿತ ಅರ್ಥವಾಗಿ ಅಂಗಾಂಗಗಳಲೆಲ್ಲ ಸಣ್ಣ ಕಂಪನ.. ಬೆನ್ನಹುರಿಯಾಳದಲೆಲ್ಲೋ ಛಳಕು... ನಸು ನಾಚುತ್ತಲೇ ಅದೇನೊ ಹೇಳಲೆಂದು ಬಾಯಿ ತೆರೆದವಳು ಹಿಂದೆ ತಿರುಗಿದೆ.. ಉಸಿರು ತಾಕುವ ಸನಿಹದಲ್ಲಿ ಅವನು.. "ನನ್ನ ನಗು ನೀನು" ಎನ್ನುತ್ತಾ ತೋಳಲ್ಲಿ ಬಳಸಿದ..

ಅವಳು ನಾಚಿ ನೀರಾಗಿ ಮರೆಯಾದಳು...


ಮತ್ತೀಗ,....


ನಾನು... ಅವನು... ಮತ್ತೊಂದು ಏಕಾಂತ....

ತುರ್ತಾಗಿ ಮತ್ತೊಮ್ಮೆ ನಾನು ಹಾರ್ಟ್ ಬೀಟ್ ಕೇಳಬೇಕು...,. :)