Sunday, 5 August 2012

ಈ ಸುಧೀರ್ಘ ಮೌನಕ್ಕಾಗಿ ಒಂದು ಕೋಳಿ ಜಗಳವಾಗಬೇಕಿದೆ.



ಮತ್ತೆ ನಿನ್ನ ನೆನಪಾಗುತ್ತಿದೆ. ನೆನಪಿಗೊಂದು ಕಾರಣ ಬೇಕಲ್ಲ. ನಾಳೆ ಬೆಳಗಾದರೆ ನನ್ನ ಹುಟ್ಟುಹಬ್ಬ. ಹ್ಯಾಪಿ ಬರ್ತ್ ಡೇ. ಅಂತ ಹೇಳಿ ಒಂದು ದೊಡ್ಡ ಬೊಕ್ಕೆ , ಒಂದು ದೊಡ್ಡ ಬಾಕ್ಸ್ ಚಾಕಲೇಟ್ ಬಂದು ನಾಳೆಗೆ ಒಂದು ವರ್ಷ . ನೀ ನನಗೆ ಪ್ರತಿ ವರ್ಷ ಕೊಟ್ಟಿದ್ದು ಅದೇ ಅಲ್ಲವೇ. ಯಾಕೆಂದರೆ ನಿನಗೆ ಗೊತ್ತಿತ್ತು  ನನಗೆ ಕೆಂಪು ಗುಲಾಬಿ  ಮತ್ತು ಚಾಕಲೇಟ್ ತುಂಬಾ ಇಷ್ಟ ಅಂತ. ಯಾವ ಗೆಳೆಯನು ಅತ್ಯಂತ ಶ್ರದ್ಧೆಯಿಂದ ಪ್ರತಿ ಭೇಟಿಯಲ್ಲೂ ಇದನ್ನೆಲ್ಲಾ ತಂದು ಕೊಡಲಾರನೇನೋ.(ಅಭಿ ಕೂಡ ತಂದು ಕೊಡುವುದಿಲ್ಲ ) . ಆದರೆ ನೀ ತಂದು ಕೊಡುತ್ತಿದ್ದೆ ಗೆಳತಿಯಾಗಿ." ಅಯ್ಯೋ public ಲಿ ಕೆಂಪು ಗುಲಾಬಿ , ಚಾಕಲೇಟ್ ಅಂತ ಕೊಡಬೇಡ ಅಂತ ಹೇಳೇ ಅವಳಿಗೆ , ಇಬ್ಬರು ಹುಡುಗಿಯರು ನೀವು, ಜನ ತಪ್ಪು ತಿಳಿತಾರೆ",ಅಂತ ಯಾವಾಗಲು ತಮಾಷೆ ಮಾಡುತ್ತಿದ್ದ ಅಭಿಷೇಕ್ . "ನಿನಗೇನು ಗೊತ್ತು ನಮ್ಮಿಬ್ಬರ Friendship. ನೀ ಸುಮ್ಮನಿರು" ಎನ್ನುತ್ತಿದ್ದೆ. 


ಆಕಸ್ಮಿಕವಾಗಿ ಪರಿಚಯವಾಗಿ ಆತ್ಮಿಯರಾದವರು ನಾವು. ವಾರಕ್ಕೊಮ್ಮೆ  ಭೇಟಿಯಾದರೆ ಆ ವಾರದ ಎಲ್ಲ ಘಟನೆಗಳ ಪೋಸ್ಟ್ ಮಾರ್ಟಂ ನಡೆದಿರುತ್ತಿತ್ತು ಇಬ್ಬರ ಮಾತುಗಳಲ್ಲಿ. ಕೆಲವೊಮ್ಮೆ ಮಾತಿಗಿಂತ ನಗುವಿನದೆ ಜಾತ್ರೆಯಾದರೆ , ಕೆಲವೊಮ್ಮೆ  ನೋವುಗಳದೇ ಯಾತ್ರೆ ಇರುತ್ತಿತ್ತು. ಆದರೆ ಎರಡಕ್ಕೂ ಸರಿಯಾಗಿ ಹೆಗಲು ನೀಡಿದ್ದೆವಲ್ಲೇ ನಾವು. ನೀ ಬಿಡಿಸುವ ಚಂದದ ಚಿತ್ರಗಳು, ನೀ ಹಾಕುವ ಮೆಹೆಂದಿ ನನಗಿಷ್ಟವಾದರೆ , ನಾ ಗೀಚುವ ಕವನಗಳ, ಲೇಖನಗಳ ಮೊದಲ ಓದುಗಳು ನೀನಾಗಿದ್ದೆ. ನಾ ಮೆಹಿಂದಿ ಹಾಕಿಸಿಕೊಂಡು ಸಂಭ್ರಮಿಸಿದರೆ ನೀ ನನ್ನ ಕವನಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ. ನಿನ್ನ ಪ್ರತಿ ಭೇಟಿಯಲ್ಲೂ ನಾ ಹಗುರಾಗುತ್ತಿದ್ದೆ ಅಥವಾ ಉತ್ಸಾಹ ತುಂಬಿಕೊಳ್ಳುತ್ತಿದ್ದೆ. ಪ್ರತಿ ಭೇಟಿಯ ನಂತರವೂ ಕೈಲಿರುತ್ತಿದ್ದ ಚಾಕಲೇಟ್ ಮತ್ತು ಮುಡಿಯಲ್ಲಿರುತ್ತಿದ್ದ ಕೆಂಪು ಗುಲಾಬಿ ನಮ್ಮಿಬ್ಬರ ಭೇಟಿಯ ಸಾಕ್ಷಿ  ಹೇಳುತ್ತಿದ್ದವು. ಅವಳಿಗೆ ಸಿಕ್ಕಿ ಬಂದೆಯಾ ಎಂಬ room mates  ಅಥವಾ ಅಭಿಯ ಪ್ರಶ್ನೆಗೆ ನನ್ನ ಮುಗುಳ್ನಗೆ ಅಥವಾ ನಿನ್ನ ಮೆಹೆಂದಿಗಳೇ ಉತ್ತರವಾಗಿರುತ್ತಿತ್ತು. 

  ಮನೆಯವರೆಲ್ಲ ಅಭಿಯೊಂದಿಗೆ ಮದುವೆ ಫಿಕ್ಸ್ ಮಾಡಿದ್ದಾರೆ ನನಗು ಒಪ್ಪಿಗೆಯಾಗಿದೆ ಎಂದಾಗಾ ನೀ ಚಿಕ್ಕ ಮಗುವಿನಂತೆ ಕುಣಿದು ಸಂಭ್ರಮಿಸಿದ್ದು ಇನ್ನು ಕಣ್ಣ ಮುಂದೆ ಹಾಗೆ ಇದೆ ಕಣೆ. "ನಿನ್ನನ್ನೂ ರಾಜಕುಮಾರಿ ಥರ ರೆಡಿ ಮಾಡ್ತೀನಿ ಕಣೆ. ನಾನೇ ಮೆಹೆಂದಿ ಹಾಕಿ ಕೊಡ್ತೀನಿ" ಅಂತೆಲ್ಲ ನೀ ಖುಷಿ ಪಟ್ಟಿದ್ದು ಅಚ್ಚೊತ್ತಿದೆ. "ಹೌದು ನನ್ನಿಂದ ಕಾಡಿ ಬೇಡಿ ಬರೆಸಿಕೊಂಡ  ೨ ಲವ್ ಲೆಟರ್ಸ್ ಏನಾಯಿತೇ" ಎಂದಾಗ "ಕೊಡುವವರಿಗೆ ಕೊಟ್ಟಾಗಿದೆ , ಉತ್ತರಕ್ಕಾಗಿ ಕಾಯ್ತಾ ಇದ್ದೀನಿ" ಎಂದೂ ಹುಬ್ಬು ಹಾರಿಸಿದ್ದು ನೆನಪಿದೆ ಕಣೆ. ಆದರೆ ಒಂದು ವರ್ಷ, ಒಂದೇ ವರ್ಷದಲ್ಲಿ ಏನೆಲ್ಲಾ ಆಗಿ ಹೋಯಿತು ಅಲ್ಲವಾ. ಎಲ್ಲಿ ಕಳೆದು ಹೋದೆ ನೀನು ?? ಅಥವಾ ನಾನೇ ಕಳೆದುಕೊಂಡೆನಾ.??  

ಅವತ್ತು ನನ್ನ ಹುಟ್ಟಿದ ದಿನ ಬೊಕ್ಕೆ ಮತ್ತು ಚಾಕಲೇಟ್ ಜೊತೆಗೆ ಬಂದು ವಿಶ್ ಮಾಡಿ "ಸಂಜೆ ಸಿಗೋಣ ಒಂದು ಲವ್ ಲೆಟರ್ ಬರೆದು ಕೊಡಬೇಕು ನೀನು" ಎಂದವಳಿಗೆ ಇಲ್ಲ ಕಣೆ ಅಭಿ ಸಿಗುತ್ತೇನೆ ಎಂದಿದ್ದಾನೆ ಎಂದಿದ್ದೆ. ಅದಕ್ಕೆ" ಸರಿ ನಾಳೆ ಲೆಟರ್ ರೆಡಿ ಮಾಡಿಕೊಂಡು ಮೀಟ್ ಮಾಡು" ಎಂದೂ ಕೆನ್ನೆ ಹಿಂಡಿ ಹೋಗಿದ್ದೆ ನೀನು. ಅಂದು ಸಂಜೆ ನನ್ನ ಅಭಿಷೇಕ್ ಜೊತೆ ನೋಡಿಯು ನೋದದವಳಂತೆ ಹೋಗಿದ್ದು ನೀನು. ಯಾಕೆ ಹಾಗೆ ಮಾಡಿದೆ ಎಂದೂ ಕೇಳಲು ರಾತ್ರಿ ಕಾಲ್ ಮಾಡಿದರೆ no answer  ಎಂಬ ರೆಕಾರ್ಡೆಡ್ ಮಂತ್ರ. ಮೆಸೇಜ್ ಮಾಡಿದರು ನಿನ್ನಿಂದ ಉತ್ತರವೇ ಇಲ್ಲ. ಮರುದಿನ ನಿನಗಾಗಿ ಲೆಟರ್ ಹಿಡಿದು ಕಾದವಳಿಗೆ ನಿನ್ನ ಸುಳಿವಿಲ್ಲ.  ಆಮೇಲೆ ಎರಡು  ದಿನದ ನಂತರ ಸ್ವಿಚ್ ಆಫ್  ಎನ್ನುತ್ತಿದ್ದ ನಿನ್ನ ನಂಬರ್ ಕೊನೆಗೆ ನಾಟ್  ಇನ್ ಯುಸ್ ಎಂದೂ ಬರತೊಡಗಿತ್ತು. ನಿನ್ನ ಹಾಸ್ಟೆಲ್ ಬಳಿ ಹೋದರೆ ಖಾಲಿ ಮಾಡಿದ್ದಾರೆ ಎಂಬ ಉತ್ತರ.  ಅವತ್ತಿನಿಂದ ನಿನಗಾಗಿ ಹುಡುಕಿದ್ದೇನೆ, ಹುಡುಕುತ್ತಲೇ ಇದ್ದೇನೆ."ಸಿಗುತ್ತಾಳೆ ಬಿಡು, ಮತ್ತೆ ಬರ್ತಾಳೆ ಕಣೆ, ನಿನ್ನ ತುಂಬಾ ಹಚ್ಚಿಕೊಂಡಿದ್ದಳು ಅವಳು" ಎನ್ನುವ ಯಾರ ಸಮಾಧಾನದ ಮಾತುಗಳಿಗೂ ನಿನ್ನನು ಮರೆಸುವ ಅಥವಾ ನನ್ನ ನೋವನ್ನು ಕಡಿಮೆ ಮಾಡುವ ಶಕ್ತಿ ಇಲ್ಲ. ಆದರೆ ನೀನು ಮಾತ್ರ ನನ್ನನ್ನ ಮರೆತು ಅದ್ಹೇಗೆ ಇದ್ದೀಯ ಅನ್ನೋ ಪ್ರಶ್ನೆ ನನ್ನಲ್ಲಿದೆ ಕಣೆ. 

ಹತ್ತು  ಹೊನ್ನು ಕಟ್ಟುವಲ್ಲಿ  ಕಟ್ಟಬೇಕಾದ ಒಂದು ಮುತ್ತು ಕಣೆ ನನ್ನ ಅಭಿಷೇಕ. ಆದರೆ ಅಂತ ಹುಡುಗನ ತೋಳಿಗೂ ನಿನ್ನ ಮತ್ತು ನಿನ್ನ ಸ್ನೇಹ ಮರೆಸುವ ಶಕ್ತಿಯಿಲ್ಲ. ನನಗೆ ಸ್ನೇಹಕ್ಕೆ ನೀನೆ ಬೇಕು ಕಣೆ. ಹಂಚಿಕೊಳ್ಳುವ ನಗು ಬೇಕಾದಷ್ಟಿದೆ. ನಿನಗೆ ಹೊರಿಸುವ ನೋವಿನ ಮೂಟೆಯಿದೆ. ರಂಗು ಕಳೆದು ಕೊಂಡ ಕೈಗೆ ನಿನ್ನಿಂದ ಮೆಹೆಂದಿ ಹಾಕಿಸಿಕೊಳ್ಳಬೇಕಾಗಿದೆ. ನಿನಗೆಂದೇ ಬರೆದಿಟ್ಟ ಲವ್ ಲೆಟರ್ಸ್ ರಾಶಿಯಿದೆ. ಮತ್ತು ಈ ಸುಧೀರ್ಘ ಮೌನಕ್ಕಾಗಿ ಒಂದು ಕೋಳಿ ಜಗಳವಾಗಬೇಕಿದೆ. ಪ್ಲೀಸ್ ಮತ್ತೆ ಬಾ ನನ್ನ ಜೀವನದಲ್ಲಿ.. ಸ್ನೇಹವೆಂಬುದು ಅರ್ಥ ಕಳೆದುಕೊಳ್ಳುವುದರೊಳಗಾಗಿ... 

ಗೋಡೆಯ ಗಡಿಯಾರ ಹನ್ನೆರಡು ಗಂಟೆ ತೋರಿಸುತ್ತಿದೆ. ಕೈ ಯಾಕೋ ಬಿಸಿ ಬಿಸಿ ಎನ್ನಿಸುತ್ತಿದೆ. ನಿನ್ನ ನೆನಪಿನಲ್ಲಿ ಬಂದ ಕಣ್ಣಿರು ಜಾರಿರಬೇಕು. ಮೊಬೈಲ್ ರಿಂಗ್ ಆಗುತ್ತಿದೆ. ಕಾಲ್ ಅಭಿಷೆಕನಿದಿರಬೇಕು. 

ಅದರೂ ಮನಸ್ಸು ಮಾತ್ರ ನಿನ್ನ ಕೆಂಪು ಗುಲಾಬಿ ಬೋಕ್ಕೆಗಾಗಿ.. ಚಾಕಲೇಟ್ ಬಾಕ್ಸ್ ಗಾಗಿ  ಕಾಯುತ್ತಿದೆ ಕಣೆ...


12 comments:

  1. ಸುಂದರ...ಅತಿ ಸುಂದರ..ಭಾವನೆಗಳ ತಾಕಲಾಟ, ಸಣ್ಣತನ, ದೊಡ್ಡತನ, ಎಲ್ಲವನ್ನು ಹರಡಿ ಹರಡಿದ ಭಾವಾಂಗಳ ಚಂದವಾಗಿ ಕಾಣುತಿದೆ..ಒಳ್ಳೆ ಸ್ನೇಹಿತನ/ಳ ಒಂದು ಹುಸು ಮುನಿಸು ಇಲ್ಲದೆ ಹೋದರೆ ಅದು ಶಾಶ್ವತ ಗೆಳೆತನ ಆಗುವುದಿಲ್ಲ ಅಂತ ಓದಿದ ನೆನಪು..
    ನಿಮ್ಮ ಲೇಖನದ ಓಘ ಇಷ್ಟವಾಯಿತು...ತುಂಬಾ ಮನೋಜ್ಞವಾಗಿ ವಿಸ್ತರಿಸಿದ್ದೀರ ಸಂಧ್ಯಾ...

    ReplyDelete
  2. ಸ್ನೇಹದ ಬಗೆಗಿನ ಲೇಖನ ಅತ್ಯದ್ಭುತವಾಗಿದೆ, ನಿಜವಾಗಿಯೂ ಅಂತರಂಗದ ಒಳಮನಸ್ಸನ್ನು ತಾಕುವಂತಿದೆ . ತುಂಬಾ ಮನೋಜ್ಞವಾಗಿದೆ ನಿನ್ನ ಲೇಖನ .ಓದಿ ಕುಷಿಯಾಯಿತು...

    ReplyDelete
  3. ಒಳ್ಳೆಯ ಲೇಖನ ಸಂಧ್ಯಾ ಅವರೇ. ಗೆಳೆತನದ ಬಗೆಗೆ ಮನಮುಟ್ಟುವಂತಿದೆ.

    ReplyDelete
    Replies
    1. ಧನ್ಯವಾದಗಳು ಶ್ರೀಕಾಂತ್ ಅಣ್ಣ, ನಿಮ್ಮ ಪ್ರೀತಿಯ ಹುಡುಗ, ಬದರಿ ಸರ್

      Delete
  4. ಚನ್ನಾಗಿದೆ.. ಭಾವನೆಗಳ ಮಹಾಪೂರ..:)

    ReplyDelete
  5. ಕೈ ಜಾರಿದ ಸ್ನೇಹವನ್ನು, ಅದರ ಆಳವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಿರಿ...
    ನಿಮ್ಮ ಸ್ನೇಹ ಮತ್ತೇ ನಿಮ್ಮದಾಗಲಿ....
    ಚಂದದ ಬರಹ....

    ReplyDelete
  6. ಅಭಿ ಸಿಕ್ದಾಗ ಹೇಳ್ತಿ .. ಎಂತಕ್ಕೆ ಈ ಸ್ನೇಹಿತರನ್ನ ದೂರ ಮಾಡಿದೆ ಹೇಳಿ ... ಹಾಗೆ ನಿನ್ ಫ್ರೆಂಡ್ ಗು ಹೇಳಕ್ಕು .. ಅಭಿಗಿಂತ ನಿನ್ನೇ ಜಾಸ್ತಿ ಪ್ರೀತಿ ಮಾಡ್ತ ಹೇಳಿ .... ಚೆನ್ನಾಗಿದ್ದು :) :)

    ReplyDelete
    Replies
    1. ಥ್ಯಾಂಕ್ಯು ಪ್ರವೀಣ್ .. ಅಭಿ ನಿನಗೆ ಸಿಕ್ಕಿರೆ ನನಗೂ ಹೇಳು.. ನಾನು ಮೀಟ್ ಮಾಡವು ಆ ಕಾಲ್ಪನಿಕ ಪಾತ್ರನಾ..:)

      Delete
  7. ಯಾರ್ಯಾರ ಋಣವು ಎಲ್ಲಿಹುದೋ
    ಪ್ರತಿಯೊಂದು ಅಕ್ಕಿಯ ಕಾಳಿನಲೂ
    ತಿನ್ನೋರ ಹೆಸರು ಕೆತ್ತಿದೆಯೋ

    ಎಂತದ್ದೋ ಸುಳಿವನ್ನ ಕೊಟ್ಟೂ ಬಿಡದೆ , ಬಿಟ್ಟೂ ಕೊಡದೆ ಮುಗಿದ ಲೇಖನ. ಒಳ್ಳೆ ಬರಹ .

    ReplyDelete