Monday, 10 September 2012

ಇದೆಲ್ಲ ಪ್ರೀತಿನಾ ??




ನಂಗೆ ಎಲ್ಲಿಲ್ಲದ ಸಿಟ್ಟು ಬಂದಿತ್ತು. ಬಂದಿತ್ತು ಏನು .. ಈಗಲೂ ಇದೆ. ಅಲ್ಲ ಮದ್ಯ ರಸ್ತೆಯಲ್ಲಿ ಅಷ್ಟೊಂದು ಸೀನ್ ಕ್ರಿಯೇಟ್ ಮಾಡೋ ಅವಶ್ಯಕತೆ ಇತ್ತಾ??  ನನ್ನ ದುಪ್ಪಟ್ಟಾ  ಗಾಳಿಯಲ್ಲಿ ಹಾರಿ ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಚಕ್ರಕ್ಕೆ ಸಿಲುಕಿದರೆ ಅದರಲ್ಲಿ ಬೈಕ್ ಸವಾರನ ತಪ್ಪೆನಿತ್ತು ಹೇಳು. ಸುಮ್ಮನೆ ಅವನ ಬೈಕ್ ಎಳೆದು ಹಿಡಿದು ನಿಲ್ಲಿಸಿ , ಕತ್ತಿನ ಪಟ್ಟಿ ಹಿಡಿದು ಜಗಳ ಆಡುವಂತದ್ದೇನಿತ್ತು?  ಅದಕ್ಕಿಂತ ಬೇಜಾರಾಗಿದ್ದು ಆ ಬೈಕ್ ನ ಎಳೆದು ನಿಲ್ಲಿಸುವ ಭರದಲ್ಲಿ ಅದೇನೋ ತಗುಲಿಸಿಕೊಂಡು ಕೈ ಗೆ ಗಾಯ ಮಾಡಿಕೊಂಡೆಯಲ್ಲ  ಅದು. ತುಂಬಾ ನೋವಾಗುತ್ತಿರಬೇಕು ಅಲ್ಲವಾ..?? ಮನೆಗೆ ಬಂದು ಇದೆಲ್ಲವನ್ನೂ ಅಮ್ಮನಿಗೆ ಒಪ್ಪಿಸಿದರೆ "ಅದು ಪ್ರೀತಿ ಕಣೆ , ಅವನು ನಿನ್ನ ಪ್ರೀತಿಸ್ತಾಯಿದಾನೆ" ಅಂತ ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಮಾತನಾಡುತ್ತಾಳೆ. ನೋಡು ಪುಟ್ಟಿ ಬರೀ ತರ್ಲೆ , ತಂಟೆ, ನಗು, ತುಂಟಾಟ ಅಂತ ಜೀವನಾನ ಸೀರಿಯಸ್ ಆಗಿ ತಗೊಳದೆ ಇರೊ ನೀನು ಬದುಕಿನ ಸೂಕ್ಷ್ಮತೆಗಳನ್ನು  ಅರ್ಥ ಮಾಡಿಕೊಂಡಿಲ್ಲ. ಪ್ರತಿ ಸಂಬಂಧಗಳಲ್ಲೂ ಅದರದೇ ಆದ ಸೂಕ್ಷ್ಮತೆಗಳಿರುತ್ತವೆ. ನೀನು ಸೂಕ್ಷ್ಮತೆಗಳನ್ನ ಅರ್ಥ ಮಾಡ್ಕೋ ಅಂತ ತಲೆ ನೇವರಿಸಿ ಕಾಫಿ ಕೊಟ್ಟು  ಒಳಗೆ ಹೋದಳು.

ಈಗ ಗೊಂದಲಕ್ಕೆ ಬಿದ್ದಿದ್ದೇನೆ ಮಾರಾಯ . ಇದೆಲ್ಲ ಪ್ರೀತಿನಾ ? ಈ ಮಹಾನ್ ಮೂಡಿ, ಕೋಪಿಷ್ಟೇ, ಜಗಳಗಂಟಿನಾ ಯಾವತ್ತಿಗೂ ನಗು ಮತ್ತು ಸಹನೆಯಿಂದ ಸಹಿಕೊಳ್ತಿಯಲ್ಲ ಅದು ಪ್ರೀತಿನಾ? ತುಂಬಾ ಮಾತಾಡಬೇಕು ಕಣೋ ಅಂತಾ ವಾಕಿಂಗ್ ಕರ್ಕೊಂಡ್ ಹೋಗಿ, ನಿನಗೆ ಚೂರೂ ಮಾತನಾಡಲು ಅವಕಾಶ ಕೊಡದೆ ಪಟ ಪಟಾಂತ ಮಾತಾಡ್ತಾ ಇದ್ರೆ, ಮುಖದಲ್ಲೊಂದು ಸಣ್ಣ ನಗು ಇಟ್ಕೊಂಡು ಸುಮ್ಮನೆ ಕೇಳ್ತಾ ಇರ್ತಿಯಲ್ಲ ಅದು ಪ್ರೀತಿನಾ? ನಂಗೆ ಮಾತಾಡೋ ಮೂಡ್ ಇಲ್ಲ ಅಂತ ಸುಮ್ನೆ ನಡಿತಾ ಇದ್ರೆ ನಮ್ಮಿಬ್ಬರ ಹೃದಯ ಬಡಿತಗಳಷ್ಟೇ ಕೇಳೋ ಅಷ್ಟು ಸೈಲೆಂಟ್ ಆಗಿ ಹೆಜ್ಜೆ ಹಾಕ್ತಿಯಲ್ಲ ನಂಜೊತೆ, ಆ ಹೆಜ್ಜೆಗಳಲ್ಲಿ ಇರೋದು ಪ್ರೀತಿನಾ? 

ಮಾತು - ಮೌನದಲ್ಲಿ ಜೊತೆ ಅಗ್ತಿಯಲ್ಲ ಇದು ಪ್ರೀತಿನಾ?

ನನ್ನ ಸಂತೋಷಗಳಿಗೆ ಜೋತೆಯಾಗ್ತಿಯಲ್ಲ. ಅದು ಪ್ರೀತಿನಾ? ನನ್ನ ಹಾಡುಗಳಿಗೆ ಕಿವಿಯಾಗ್ತಿಯಲ್ಲ ಅದು ಪ್ರೀತಿನಾ ? ಯಾವುದಾದರೂ ಕಾಂಪಿಟಿಶನ್ ಲಿ ಫಸ್ಟ್ ಬಂದ್ರೆ ನನಗಿಂತ ಜಾಸ್ತಿ ಖುಷಿ ಪಡ್ತಿಯಲ್ಲ. ಆ ಖುಷಿಯಲ್ಲಿರೋದು ಪ್ರೀತಿನಾ? ನೆಚ್ಚ್ಚಿನ ಗೆಳತಿ ನಮ್ಮನ್ನೆಲ್ಲ ಬಿಟ್ಟು ಹೋದಾಗ, ನಿನ್ನ ಹೆಗಲ ಮೇಲೆ ತಲೆಯಿಟ್ಟು ಬಿಕ್ಕಳಿಸಿದಾಗ, ಹೊದೊರೆಲ್ಲ ಬರಲ್ಲ. ನಾವೆಲ್ಲಾ ಇಲ್ವಾ ಜೊತೆಗೆ ಅಂತಾ ಬೆನ್ನ ಮೇಲೆ ಕೈ ಇಟ್ಟೆಯಲ್ಲ, ಆ ಸ್ಪರ್ಶದಲ್ಲಿದ್ದುದು ಪ್ರೀತಿನಾ? 

ನಗು - ಅಳು ಎರಡಲ್ಲೂ ಇರ್ತಿಯಲ್ಲ ಅದು ಪ್ರೀತಿನಾ?? 

ಎಲ್ಲರಲ್ಲೂ ಜಗಳ ಆಡಿಕೊಂಡು, ಏನೋ  ತರ್ಲೆ ಮಾಡಿಕೊಂಡು ಬಂದ್ರೆ ಅವಳ ಪರವಾಗಿ ನಾನು  ಸಾರೀ ಕೇಳ್ತೀನಿ, ಅವಳ ಮನೆಲ್ಲಿ ಕಂಪ್ಲೈಂಟ್ ಮಾಡ್ಬೇಡಿ ಅಂತಾ ಹೇಳಿ, ಮನೆಯವರಿಂದ ಬೈಗುಳ ತಪ್ಪಿಸ್ತಿಯಲ್ಲ ಅದು ಪ್ರೀತಿನಾ?? ವಿಪರೀತ ಜ್ವರ ಬಂದು ಆಸ್ಪತ್ರೆಗೆ ಅಡ್ಮಿಟ್  ಅದಾಗ, ನಾಳೆ ಹೊತ್ತಿಗೆ ಸರಿ ಅಗ್ತಿಯಾ ಅಂತಾ ಹಣೆ ಸವರಿ, ನಾಳೆ ಮಳೆ ಬಂದ್ರೆ  ನೆನೆದುಕೊಂಡು ಬರೋವಾಗಾ ಐಸ್ ಕ್ರೀಮ್ ತಿಂದ್ಕೊಂಡು ಬರೋಣ ಅಂತಾ , ಅಮ್ಮಂಗು ಕೇಳಿಸದಷ್ಟು ಸಣ್ಣಕೆ ಪಿಸುಗುಟ್ಟಿ ಕಣ್ಣು ಹೊಡೆದು ಹೋಗಿದ್ಯಲ್ಲ , ಆ ಕಣ್ಣೋಟದಲ್ಲಿ ಇದ್ದಿದ್ದು ಪ್ರೀತಿನಾ ?

ತರ್ಲೆಗಳಲ್ಲೂ ಪಾಲು ಕೇಳೋ ನಿಂದು ಪ್ರೀತಿನಾ??

ಹೆಣ್ಣು ಮಕ್ಕಳು ಹೂ ಮುಡ್ಕೊಂದ್ರೆ ಚೆಂದ ಅಂತಾ ಹೂವಿನಂಗಡಿ ಕಂಡಾಗ ಹೂ ಕೊಡ್ಸ್ತಿಯಲ್ಲ ಅದು ಪ್ರೀತಿನಾ? ಬರ್ತ್ ಡೆ ಗೆ ಬೆಲೆ ಕಟ್ಟೋಕೆ ಆಗದೆ ಇರೋ ಗಿಫ್ಟ್ ಕೊಡೊ ಅಂದಾಗ  ಕುಂಕುಮ ತುಂಬಿದ ಭರಣಿ ಕೊಟ್ಟು  ಬೆಲೆ ಕಟ್ಟು ನೋಡೋಣಾ  ಹುಬ್ಬು ಹಾರಿಸಿದ್ದೆ. ಅದರ ತುಂಬಾ ತುಂಬಿದ್ದು ಪ್ರೀತಿನಾ? ಕಣ್ಣೆದುರಿಗೆ ಇಲ್ಲಾ ಅಂದ್ರು ಕಣ್ಣಂಚಿನಲ್ಲಿ ಇಟ್ಕೊಂಡು ಜೋಪಾನ ಮಾಡ್ತಿಯಲ್ಲ ಇದು ಪ್ರೀತಿನಾ?

ಒಳ್ಳೆ ಗೆಳೆಯ ಅಂತ ಅನಿಸಿಕೊಳ್ತಿಯಲ್ಲ ಇದು ಪ್ರೀತಿನಾ?

  ಪಾಪ ಕೈ ಗಾಯ ತುಂಬಾ ನೋವಾಗ್ತಿರಬೇಕು ಫೋನ್ ಮಾಡಿ ಕೇಳೋಣವಾ ಅನಿಸ್ತಾಯಿದೆ. ಆದ್ರೂ ತಪ್ಪು ನಿಂದೆ. ಅದಕ್ಕೆ  "ಸಾರೀ ಕಣೆ " ಅಂತ ಒಂದು ಮಸ್ಸೇಜ್ ಮಾಡಲಿ ಅಂತ ಮೊಬೈಲ್ ಬೀಪ್  ಗಾಗಿ   ಹುಸಿ ಮುನಿಸಿನಿಂದಾ ಕಾಯ್ತಾ ಇದಿನಲ್ಲ ಇದು ಪ್ರೀತಿನಾ ??

ಮತ್ತೆ ಇದನ್ನೆಲ್ಲಾ ನಿನಗೇ ಹೇಳಬೇಕು ಅನಿಸ್ತಾಯಿದೆ ಇದೆಲ್ಲ ಪ್ರೀತಿನಾ ??


( ಇದು 14/08/2012 ರ ವಿಕೆ ಯಲ್ಲಿ ಪ್ರಕಟವಾದ ಬರಹ )

18 comments:

  1. ಎಷ್ಟು ಚಂದದ ದಂದ್ವಗಳು ಸಂಧ್ಯಾ?
    ಈ ದಂದ್ವಗಳಲ್ಲೇ ಪ್ರೀತಿಯ ಆರಂಭನಾ?
    ಒಬ್ಬ ಒಳ್ಳೆಯ ಸ್ನೇಹಿತ ಒಳ್ಳೆಯ ಲೈಫ್ ಪಾರ್ಟ್ನೆರ್ ಆಗುತ್ತಾನಂತೆ... ನಿಮ್ಮ ಗೆಳಯನ ಭಾವಗಳು ಪ್ರೀತಿಯದ್ದಾ ಸ್ನೇಹಾದ್ದ ತಿಳಿಯದ್ದಿದ್ದರೂ ಒಳ್ಳೆಯ ಮನಸ್ಸಿನ ಹುಡುಗ ಎಂಬುದಂತೂ ತಿಳಿಯುತ್ತದೆ...
    ಚಂದದ ಬರಹ... ನನಗೆ ತುಂಬಾ ಇಷ್ಟ ಆಯಿತು...

    ReplyDelete
    Replies
    1. ಹೌದಲ್ವ .. ಪ್ರೀತಿಯ ದ್ವಂದ್ವ ಗಳೆಲ್ಲ ಚಂದವೇ..
      ಥ್ಯಾಂಕ್ಯು ....

      Delete
  2. ಅರ್ಥವಾಗದ್ದು ಗೋಚರವಾಗೋಲ್ಲ..ಗೋಚರವಾಗಿದ್ದು ಅರ್ಥವಾಗೋಲ್ಲ..ಸ್ನೇಹಾನ..ಪ್ರೀತೀನಾ..ಅಂದಾಗ ಅದರ ನಡುವಿನ ಎಳೆ ತುಂಬಾ ತೆಳು..SP ತುಂಬಾ ಸುಂದರವಾದ ಲೇಖನ..!

    ReplyDelete
    Replies
    1. ಸ್ನೇಹ ಮತ್ತು ಪ್ರೀತಿಯ ನಡುವಿನ ಗೆರೆ ತುಂಬಾ ತೆಳು.. ಪ್ರೀತಿ ಹುಟ್ಟುವುದು ಅಥವಾ ಸ್ನೇಹ ಸಾಯುವುದು ಎರಡೂ ಆ ಗೆರೆಯ ವಾಲುವಿಕೆಯಲ್ಲೇ ಇದೆ ..
      ಥ್ಯಾಂಕ್ಯು ಅಣ್ಣಯ್ಯ ..

      Delete
  3. ಇಂತಹ ದ್ವಂದ್ವಗಳಲ್ಲೇ ಒಲುಮೆಯ ಸಿರಿ ಅಡಗಿದೆ ಮರಿ.

    ಪ್ರೀತಿಯೆಂಬುದು
    ಉತ್ತರವಿಲ್ಲದ ಪ್ರಶ್ನೆ
    ಅದು ಭಾಷೆ ಇಲ್ಲದ
    ತೊದಲು ನುಡಿ...

    ReplyDelete
    Replies
    1. ನಿಜ ಬದರಿ ಸರ್.
      ಪ್ರತಿಕ್ರಿಯೆಗಾಗಿ ಧನ್ಯವಾದ

      Delete
  4. ಸ್ಂದ್ಯಾ... ಜೀವನ ಇರುವಿದೇ ಹಾಗೆ.. ನಮ್ಮ ನಡೆಯೂ ಹಾಗೆ - ಒಳಿತು-ಕೆಡಕು; ಮೇಲು-ಕೀಳು, ದ್ವೇಷ-ಪ್ರೀತಿ...ಎಲ್ಲವನ್ನೂ ಸರಿದೂಗಿಸಿಕೊಂಡು ನಡೆದಾಗ ಮುಂದೆ ಸಾಗ್ತೀವಿ ಇಲ್ಲಾಂದ್ರೆ ಇದ್ದಲ್ಲೇ ಒದ್ದಾಟ... ಬಹಳ ಸುಂದರ ಮಂಥಿತ ಲೇಖನ...

    ReplyDelete
  5. ಪ್ರೀತಿ ಯಾಕೆ, ಹೇಗೆ ಎಂಬುದೇ ಅರ್ಥವಾಗೋಲ್ಲ... ಲೇಖನ ಚೆನ್ನಾಗಿದೆ ಸಂಧ್ಯ

    ReplyDelete
  6. ತುಂಬಾ ಚೆನ್ನಾಗಿದೆ...

    ಇಷ್ಟವಾದವರ ಭಾವದ ಜೊತೆ...
    ಇರುವುದೇ ಪ್ರೀತಿ...

    ಚಂದದ ಬರವಣಿಗೆ... ಮುಂದುವರೆಯಲಿ....

    ReplyDelete
  7. ಸಿಹಿಯಾದ ಬರಹ.
    ಸ್ವರ್ಣಾ

    ReplyDelete
  8. nice 1 how u manage to portray ur feelings so nicely good one

    ReplyDelete
  9. ಇಷ್ಟೆಲ್ಲಾ ಅನುಭವಿಸದ ಮೇಲೂ ನಿಮಗೆ ಸಂದೇಹಾ ನ ??? ಹೌದು ರಿ ಇದೇ ಪ್ರೀತಿ ಅನ್ಸುತ್ತೆ ನಂಗೆ ....ಸುಂದರ ಬರಹ....ಸೊಗಸಾದ ನಿರೂಪಣೆ...

    ReplyDelete
    Replies
    1. ಅಶೋಕ್ ಸರ್ ಅನುಭವ ನನ್ನದಲ್ಲ..!! ಇದು ಕಲ್ಪನೆಯಷ್ಟೇ...
      ಧನ್ಯವಾದ ಪ್ರತಿಕ್ರಿಯೆಗೆ..

      Delete
  10. ಸಂಧ್ಯಾ...
    ಇದನ್ನು ವಿಜಯಕರ್ನಾಟಕದಲ್ಲಿ ಓದಿದ್ದೆ. ಇದೆಲ್ಲವನ್ನು ಅನುಭವವನ್ನು ಬರೆಯುವ ಅವಶ್ಯಕತೆ ಏನಿತ್ತು...ಪ್ರೀತಿ ಇಲ್ಲದಿದ್ದಲ್ಲಿ ನೀನು ಬರೆಯುತ್ತಿರಲೇ ಇಲ್ಲ ತಾನೆ...ಅಂದ ಮೇಲೆ ಇದು ಖಂಡಿತ ಪ್ರೀತಿ....ಕಲ್ಪನೆಯದ್ದು ಆದರೂ
    ಓದಿಸಿಕೊಂಡು ಹೋಗುವ ಬರಹಕ್ಕಾಗಿ ಧನ್ಯವಾದಗಳು.

    ReplyDelete