Wednesday, 3 October 2012

ಮಟಿರಿಯಲಿಸ್ಟಿಕ್ ಜೀವನ , ಅದನ್ನೇ ಪ್ರೀತಿಸಬೇಕು





ಬಾಲ್ಕನಿಯಲ್ಲಿ  ನಿಂತಿದ್ದೆ.  ಏನು ಅಮ್ಮಾವ್ರು ದಿನಾ ೧೦ ಗಂಟೆಗೆ ಇಲ್ಲೇ ಇರ್ತಿರಲ್ಲ? ಮೊಬೈಲ್ ಕೂಡ ರೂಮಲ್ಲೇ ಬಿಟ್ಟು ಬರ್ತೀಯ. ಇಲ್ಲೇನು ಮಾಡ್ತಿಯ ಅಂತ ಕೇಳುತ್ತ ರೂಂ ಮೆಟ್ ಬಂದಳು. ಪಕ್ಕದ ಮನೆಯ ಟೆರ್ರೆಸ್ ಕಡೆ ಕೈ ತೋರಿಸಿದೆ. ಪುಟ್ಟ ಮಗು ಗಲ್ಲಕ್ಕೆ ಕೈ ಕೊಟ್ಟು ಕುಳಿತಿತ್ತು.  ಅಲ್ಲೇನು ಮಾಡ್ತಿದೆ ಅದು ಎಂದಳು. ಸುಮ್ನೆ ನೋಡು ಎಂದೇ. ಆ ಮಗು ಆಕಾಶ ನೋಡ್ತಾ, ಅಲ್ಲೇ ಇರೋ ಬಾಲ್ ಆಡುತ್ತ, ಪಕ್ಕದಲ್ಲಿರೋ ಜೋಕಾಲಿಯಲ್ಲಿ ಜೀಕುತ್ತ  , ಆಗಾಗ ರೋಡ್ ಕಡೆ ನೋಡುತ್ತಾ  ಏನೋ ಪದ್ಯಗಳನ್ನು ಹೇಳುತ್ತಾ ಇತ್ತು. ಇಬ್ಬರೂ ನೋಡುತ್ತಾ ಇದ್ದೆವು. ದಿನಾ ಹೀಗೆ ಆಡುತ್ತೆ ಕಣೆ ಇದು. ನೋಡೋಕೆ ಮಜಾ, ಅದಿಕ್ಕೆ ಇಲ್ಲಿರ್ತೀನಿ ಅಂದೆ. ಮಾತಾಡಿಸೇ ಅಂದಳು. ಹಾಯ್ ಪುಟ್ಟ ಅಂದೆ. ಹೆದರಿ ಕೆಳಗೆ ಹೋಗುತ್ತೆ ಮಗು ಅಂದುಕೊಂಡೆವು , ಬದಲಾಗಿ ಆ ಕಡೆಯಿಂದ ಏನು? ಎಂದು ಉತ್ತರ ಬಂತು. ಇಲ್ಲೇನು ಮಾಡ್ತಿದ್ದೀಯ ಕೇಳಿದೆ. ಅಮ್ಮನಿಗೆ ಕಾಯ್ತಾ ಇದ್ದೀನಿ , ಅಮ್ಮಾ ಬರ್ತಾಳೆ ಈಗಾ ಎಂದಿತು ಪಾಪು. ಎಲ್ಲಿ ಎಂದು ಇವಳು ಕೇಳಿದಳು. ಮಗು ರೋಡಿನ ಕಡೆಗೆ ಕೈ ತೋರಿತು.ನೀವೇನು ಮಾಡ್ತಿದ್ದೀರ ? ನಿಮ್ಮ ಅಮ್ಮನು ಬರ್ತಾರ? ಎಂದ ಮಗುವಿನ ಮುಗ್ದ ಪ್ರಶ್ನೆಗೆ ಉತ್ತರ ಹೊಳೆಯಲಿಲ್ಲ ಇಬ್ಬರಿಗೂ. ಆಗ ಸುಮಾರು ೧೧.೩೦. ಮನೆಯ ಎದುರು ಒಂದು ಕ್ಯಾಬ್ ಬಂದು ನಿಂತಿತು.  ಅಮ್ಮಾ ಬಂತು , ಅಮ್ಮಾ ಬಂತು ಎಂದು ಮಗು  ಖುಷಿ ಪಟ್ಟು ನಲಿಯುತ್ತಿತ್ತು. ಅದರಿಂದ ಇಳಿದ ಮಹಿಳೆ ನೇರವಾಗಿ ಬಾಲ್ಕನಿಗೆ ಬಂದು ಮಗುವನ್ನು ಅಪ್ಪಿ ಮುದ್ದಾಡಿ ಕರೆದುಕೊಂಡು ಹೋದಳು. 

ನೋಡಿದ್ಯ ಮಗು ಎಷ್ಟೊಂದು ಅಮ್ಮನಿಗಾಗಿ ಹಂಬಲಿಸುತ್ತೆ, ಇಷ್ಟು ಪುಟಾಣಿ ಮಕ್ಕಳನ್ನು ಬಿಟ್ಟು ಅದು ಹೇಗೆ ಕೆಲಸಕ್ಕೆ ಹೋಗ್ತಾರೋ ಏನೋ ಎಂದೆ.  ಅದಿಕ್ಕೆ ಇವಳು ಪಾಪ ಆ ತಾಯಿಯು ಆಫಿಸಿನಲ್ಲಿ ಮಗುವಿಗಾಗಿ  ಅದೆಷ್ಟು ಹಂಬಲಿಸಿದ್ದಾಳೋ ಏನು ಗೊತ್ತು. ಇಲ್ಲಿನ ಅನಿವಾರ್ಯತೆಗಳಿಗಾಗಿ, ಜೀವನ ಶೈಲಿಗಾಗಿ ದುಡಿಯಲೇ ಬೇಕಲ್ಲವಾ?? ಎಂದಳು. ಹ್ಮ್ಮ್ ಈ ಹೊತ್ತಿನಲ್ಲಿ ಬಂದು ಮಗುವಿನ ನಗು ನೋಡಿ ಸುಸ್ತು ಕಳೆದುಕೊಳ್ಳುವ ಅಮ್ಮಂದಿರಿರುವಂತೆ, ನಿದ್ದೆ ಮಾಡುತ್ತಿರುವ ಪುಟ್ಟ ಮಗುವಿನ ಹಣೆಗೆ ತುಟಿಯೊತ್ತಿ ಈಗ ಕೆಲಸಕ್ಕೆ ಹೊರಡುವ ಅಮ್ಮಂದಿರು ಇರುತ್ತಾರೆ ಎಂದೆ.  ಹೌದಮ್ಮ ಇದು ಬೆಂಗಳೂರು,  ಇಲ್ಲಿ  ಯಾವುದಕ್ಕೂ ಆದಿ ಅಂತ್ಯಗಳಿಲ್ಲ. ಇಲ್ಲಿ ಎಲ್ಲವೂ ನಿರಂತರವೇ.ಇಲ್ಲಿ ೨೪/೭ ಬಾಗಿಲು ಮುಚ್ಚದ, ಲೈಟ್ ಆಫ್ ಆಗದ ಕಂಪೆನಿಗಳೂ  ಇವೆ.ಎಲ್ಲವೂ ಯಾಂತ್ರಿಕ, ಎಲ್ಲವು ಶಿಫ್ಟ್ ಗಳಂತೆ, ಊಟ, ತಿಂಡಿ, ನಿದ್ದೆ ಎಲ್ಲವೂ,  ಕೊನೆಗೆ ದಿನ ರಾತ್ರಿಗಳು ಕೂಡ..  ಮಟಿರಿಯಲಿಸ್ಟಿಕ್ ಜೀವನ, ಅದನ್ನೇ ಪ್ರೀತಿಸಬೇಕು ಎಂದಳು. ಹೌದಲ್ವ ಅಂದೆ. ನೋಡು ಯಾರಿಗೆ ಯಾವ ಶಿಫ್ಟೋ ಏನೋ ನಮಗಂತೂ ಮಲಗೋ ಶಿಫ್ಟ್,ಅವಾಗಲೇ ಹನ್ನೆರಡುವರೆ ಬಾ ಮಲಗೋಣ ಎನ್ನುತ್ತಾ ಎಳೆದುಕೊಂಡು ಬಂದಳು. 

 ಬಂದು ಮಲಗಿದವಳಿಗೇಕೋ ನಿದ್ದೆ ಬರಲಿಲ್ಲ. ನಮ್ಮಲ್ಲಿ ಮುಸ್ಸಂಜೆಯಾದರೆ ಸಾಕು ಕತ್ತಲಾಯಿತು ಬಾಗಿಲು ಹಾಕು, ದೇವರಿಗೆ ದೀಪ ಹಚ್ಚು ಎನ್ನುತ್ತಾರೆ. ದೀಪ ಹಚ್ಚಿ ಬಂದು ಮತ್ತೊಮ್ಮೆ ಬಾಗಿಲೆಲ್ಲ ಭದ್ರವಾ ಎಂದು ನೋಡುವಷ್ಟರಲ್ಲಿ ಕತ್ತಲು  ಗವ್ವನೆ ಕವಿದಿರುತ್ತದೆ  ಹೆದರಿಸುವಷ್ಟು. ಆದರೆ ಇಲ್ಲಿ ಕತ್ತಲನ್ನೇ ನಾಚಿಸುವಷ್ಟು ದೀಪಗಳ ಸಾಲು. ಆಗಸದಲ್ಲಿ ನಕ್ಷತ್ರ ಕಂಡರೆ ಮಾತ್ರ ರಾತ್ರಿಯಿರಬೇಕು ಎಂದುಕೊಳ್ಳುವಷ್ಟು. ಆ ದೂರದ ಅಪಾರ್ಟ್ಮೆಂಟ್ ನಲ್ಲಿ ಕಾಣುವ ಲೈಟ್ ಗಳೆಲ್ಲ ಆರುವುದೇ ಇಲ್ಲವೇನೋ. ನಮ್ಮಲ್ಲಿ ಕತ್ತಲಾದರೆ ದಿನ ಮುಗಿಯಿತು.ಬೆಳಗಿನ ಸುಸ್ತೆಲ್ಲ ಕಳೆದುಕೊಳ್ಳಲೊಂದು ರಾತ್ರಿ   . ನಾಳೆ ಮತ್ತದೇ ದಿನ, ದುಡಿತ, ಆದರೆ ಇಲ್ಲಿ ಹಾಗಲ್ಲ ಹಗಲಿರುಳು ದುಡಿತವೇ, ದಿನರಾತ್ರಿಯ ವಿಂಗಡನೆಯೇ ಇಲ್ಲ  ಎಂದುಕೊಳ್ಳುತ್ತಿರುವಾಗಲೇ ಆ ಅಪರಾತ್ರಿಯಲ್ಲಿ ಕೆಳಗೆ ಬಂದು ನಿಂತ ಯಾವುದೋ ವಾಹನದಿಂದ ಚಂದಿರನನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು.. ಎಂಬ ಕನ್ನಡ ಹಾಡೊಂದು ಮೊಳಗುತ್ತಿತ್ತು. ಎಲ್ಲರನ್ನು ಸೇಫ್ ಆಗಿ ಮನೆಗೆ ಬಿಟ್ಟು ಬಂದ ಕ್ಯಾಬ್ ಡ್ರೈವರ್ ಸ್ವಲ್ಪ ಹೊತ್ತು ಹಾಡು ಕೇಳಿ ಮಲಗುತ್ತಾನೆ. ಇಲ್ಲಿಗೆ ಇವನ ದಿನ ಮುಗಿಯಿತು ಎಂದುಕೊಂಡೆ. ಹೊರಗಡೆ ಹೆಜ್ಜೆ ಸದ್ದು, ಇದು ಮೇಲಿನ ಮನೆಯ ಪೇಪರ್ ಏಜೆನ್ಸಿ ನಡೆಸುತ್ತಿರುವ ಹುಡುಗರದ್ದು,  ಪೇಪರ್ ಗಾಡಿ ಬರುವ ಹೊತ್ತು, ಜೊತೆಯಲ್ಲೇ ಪಕ್ಕದ ರೂಂ ನಿಂದ ಅಲರಾಂ ಶಬ್ದ. ಆ ಹುಡುಗಿಗೆ ಬೆಳಗ್ಗೆ ೫ ಗಂಟೆಗೆ ಲಾಗಿನ್. ಅವಳು ಸ್ವಲ್ಪ ಹೊತ್ತಿನಲ್ಲೇ ಹೊರಡುತ್ತಾಳೆ. ಆ ಡ್ರೈವರ್ ಕೆಲಸ ಮುಗಿಸಿ ಮಲಗುವ ಹೊತ್ತಿಗೆ, ಇವರೆಲ್ಲರಿಗೆ ಮತ್ತೆ  ದಿನದ  ಪ್ರಾರಂಭ. ರೂಂ ಮೆಟ್ ಹೇಳಿದಂತೆ  ಎಲ್ಲ ಇಲ್ಲಿ ನಿರಂತರವೇ ಎಂದುಕೊಳ್ಳುತ್ತ ಕತ್ತಲಲ್ಲೂ ಅವಳೆಡೆಗೆ ನೋಡಿದೆ. 

ಆಗಲೇ ದೂರದ ಮಸೀದಿಯ ಮೈಕಿನಲ್ಲಿ ಪ್ರಾರ್ಥನೆ ಕೇಳತೊಡಗಿತ್ತು.  ಇನ್ನು ಹೂವು ,ತರಕಾರಿ ಮಾರುವವರಿಗೆಲ್ಲ ದಿನ ಪ್ರಾರಂಭವಾಗುತ್ತದೆ. ಮತ್ತೊಂದು ಹೊಸ ದಿನ ಎಂದುಕೊಳ್ಳುವಷ್ಟರಲ್ಲಿ  ಪಕ್ಕದ ಗುಡಿಯ ಘಂಟೆ ಮೊಳಗಿತ್ತು, ಜೊತೆಗೆ ಸುಪ್ರಭಾತವೂ ಕೂಡ.ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಎದುರು ಮನೆ ಆಂಟಿ ಚಂದದ ರಂಗೋಲಿ ಹಾಕಲು ಬರುತ್ತಾಳೆ ಎಂದುಕೊಳ್ಳುತ್ತ ಮಗ್ಗುಲು ಬದಲಾಯಿಸುವ ಹೊತ್ತಿಗೆ ಮತ್ತೊಂದು ಬೆಳಗು ನಿಧಾನವಾಗಿ ತೆರೆದುಕೊಳ್ಳತೊಡಗಿತ್ತು.

(ಇದು ಸೆಪ್ಟೆಂಬರ್ 25 ರ ಲವಲವಿಕೆಯಲ್ಲಿ  ಪ್ರಕಟವಾದ ಲೇಖನ )

13 comments:

  1. ಜೀವನದ ಪಯಣದಲ್ಲಿ ಓಡುತ್ತಾ, ಜೀಕುತ್ತ, ತೆವಳುತ್ತ ಸಾಗಿ..ಒಮ್ಮೆ ಹಿಂತಿರುಗಿ ನೋಡಿದಾಗ ನಾವು ಪಡೆದಿದ್ದೇನು, ಕಳೆದುದ್ದೇನು...ಹೀಗೆ ಯೋಚನಾ ಲಹರಿ ಸಾಗುತ್ತ ಇರುತ್ತೆ..ಮಾನವ ವಿಕಸಿತವಾದ ಹಾಗೆ..ರೆಕ್ಕೆ ಮೂಡಿ ಸಂಬಂಧಗಳನ್ನ ಕಳಚಿಕೊಲ್ಲುತ್ತಾನೇನೋ ಅನ್ನುವ ಒಂದು ನಿರ್ವಿಕಾರ ಭಾವ ಮೂಡುತ್ತೆ..ಬರಿ ದುಡಿತವೆ..ಇಲ್ಲ ಅದಕ್ಕೂ ಮೀರಿದ ಭಾವನಾತ್ಮಕ ಪ್ರಪಂಚ ಇದೆಯಾ ಇನ್ನು ಗೊಂದಲ ಕಾಡುತ್ತದೆ..
    ಸುಮಧುರ ಲೇಖನ ಎಸ್.ಪಿ. ತುಂಬಾ ಖುಷಿಯಾಯಿತು...ಮತ್ತು ಅಭಿನಂದನೆಗಳು ಲವಲವಿಕೆಯಲ್ಲಿ ಪ್ರಕಟವಾಗಿದ್ದಕ್ಕೆ

    ReplyDelete
  2. ಮಕ್ಕಳನ್ನು ಬಿಟ್ಟು ಹೋಗುವ ತಾಯಂದಿರಲ್ಲೂ ನಾನೂ ಒಬ್ಬಳು... : ಬದುಕು ಬದಲಾವಣೆಗಳನ್ನು ಬೆಳೆಸುತ್ತಲೇ ಬಂದಿದೆ, ಹೆಣ್ಣು ಕೆಲಸ ಮಾಡುವ ಅವಶ್ಯಕತೆ ಜೊತೆಗೆ ತನ್ನತನವನ್ನು ರೂಢಿಸಿಕೊಳ್ಳುವ ನಿಟ್ಟಿನೆಡೆ ಸಾಗಿದ್ದಾಳೆ. ಭಾವನಾತ್ಮಕ ಲೇಖನ.......ಚೆನ್ನಾಗಿದೆ ಲೇಖನ.

    ReplyDelete
    Replies
    1. ಹೌದು ಸುಗುಣಕ್ಕ.. ಬದುಕು ಬದಲಾಗುತ್ತ ಎಲ್ಲವನ್ನು ಕಲಿಸುತ್ತದೆ. ಮಹಿಳೆ ತನ್ನತನವನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲವೇ.
      ಧನ್ಯವಾದ..

      Delete
  3. ಹೌದು.. ಇಲ್ಲಿ ಎಲ್ಲಾ ಇದೆ.. ನೆಮ್ಮದಿ ಒಂದು ಬಿಟ್ಟು...

    ಒಳ್ಳೆಯ ಬರಹ...

    ReplyDelete
    Replies
    1. ಒತ್ತಡದ ಬದುಕಿನ ನಡುವೆಯೂ ನೆಮ್ಮದಿಯನ್ನು ಹುಡುಕಿಕೊಳ್ಳಲೇ ಬೇಕಿದೆ
      ಧನ್ಯವಾದ ಶಿವಪ್ರಕಾಶ್ ಸರ್

      Delete
  4. ಛಂಧ ಇದ್ದು ಲೇಖನ ಸಂಧ್ಯಕ್ಕಾ....ಸಧ್ಯಕ್ಕೆ ನಾನಿನ್ನೂ ಕಲಿತಾ ಇದ್ದಿ..ಇದೆಲ್ಲರ ಅನುಭವ ಕೇಳಿ ಗೊತ್ತು ಅಷ್ಟೇ....ಬರೆದ ರೀತಿ ಇಷ್ಟ ಆತು..ಬರಿತಾ ಇರು :)..
    ನಮಸ್ತೆ...

    ReplyDelete
  5. ಸಂದ್ಯ಻ಅವರೆ,ಮಹಾನಗರದ ನೋವಿನ ಮೊಗದ ಸ್ವರೂಪವನ್ನು ತುಂಬಾ ಮನಮುಟ್ಟುವಂತೆ ಬರೆದಿದ್ದೀರಿ.ಇದು ಕಠೋರ ವಾಸ್ತವ.ಅನಿವಾರ್ಯವಾಗಿ ಮಕ್ಕಳನ್ನು ಬಿಟ್ಟು ಹೋಗುವ ಮಾತೆಯರ ಮನ ನೋಯದಿರಲಿ.ಕಾಲಕ್ಕೆ ತಕ್ಕಂತೆ ಬದುಕಬೇಕಲ್ಲಾ....

    ReplyDelete
    Replies
    1. Thank you Nanda Hegde.

      ಅಂತದ್ದೊಂದು ಕಠೋರ ವಾಸ್ತವದಲ್ಲಿ ಬದುಕುವ ಅನಿವಾರ್ಯತೆ ಇಲ್ಲಿನ ಬದುಕಿಗಿದೆ..

      Delete
  6. ತುಂಬಾ ಚೆನ್ನಾಗಿದೆ .. ಇತ್ತೀಚಿನ ಬದಲಾದ ಬದುಕಿನ ರೀತಿಯನ್ನು ಸೂಕ್ಷ್ಮ ರೀತಿಯಲ್ಲಿ ಚಿತ್ರಿಸಿದ್ದಿಯಾ :-)

    ReplyDelete