Wednesday, 19 December 2012

ನೀ ಬಂದ ದಿನ ಅದರಲ್ಲೊಂದು ಚಂದದ ಹೂ ಅರಳಿರುತ್ತದೆ.. ನಮ್ಮ ಪ್ರೀತಿಗಾಗಿ...



ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ.... ಎಂಬ ಬೇಂದ್ರೆಯವರ ಹಾಡು ಕೇಳುತ್ತಾ ಸಮುದ್ರಕ್ಕೆ ಮುಖ ಮಾಡಿ  ನಿಂತಿದ್ದೆ ಈ  ಸಂಜೆ. ನಿನಗಿಷ್ಟ ಆ ಹಾಡು .. ಆ ಕಾರಣಕ್ಕೆ ಅದು ನನಗೂ ಇಷ್ಟ.. ನಿನ್ನೊಂದಿಗಿನ ಬೆಚ್ಚನೆಯ, ಚುಚ್ಚುವ , ಕಾಡುವ ನೆನಪುಗಳಿಗೆಲ್ಲ ಯಾವಾಗಲೂ ನಾಂದಿ ಹಾಡುವುದು ನೀನು. "ನೀನು" ಎಂಬೊಂದು ಶಬ್ದ ನೆನಪಾದರೆ ಸಾಕು ಹಿಂದೆಯೇ ಸಾವಿರ ನೆನಪುಗಳ ಹಣತೆಯ ಸಾಲುಗಳು ಹೊತ್ತಿಕೊಳ್ಳುತ್ತವೆ. ಕೆಲವು ಬೆಳಗುತ್ತವೆ, ಕೆಲವು ಸುಡುತ್ತವೆ, ಕೆಲವು ಆರುತ್ತವೆ. ಎಲ್ಲವನು ಹರವಿಕೊಂಡು ಒಮ್ಮೆ ನೋಡುತ್ತೇನೆ. ಮತ್ತೆ ಎಲ್ಲವನ್ನು ಜತನದಿಂದ ಎತ್ತಿಡುವ ಹೊತ್ತಿಗೆ ಕೆಲವೊಮ್ಮೆ ನಗುವಿನ ಹಣತೆಗೆ ಕಣ್ಣೀರೇ ತೈಲವಾಗಿರುತ್ತದೆ..
 ಯಾವಾಗಲೂ ಜೋತೆಗಿರುತ್ತೇನೆ ಎಂದು ಮಾಡಿದ ಆಣೆ ಪ್ರಮಾಣವನ್ನು ಅದೆಷ್ಟು ಶ್ರದ್ಧೆಯಿಂದ ನಿರ್ವಹಿಸುತ್ತೀಯಾ. ಒಂಟಿತನದಲ್ಲಿ ನೀನಿಲ್ಲವೆಂದರೆ ನಿನ್ನ ನೆನಪುಗಳಾದರೂ ಜೋತೆಗಿರುತ್ತವೆ. ಪ್ರೀತಿಯ ಎಲ್ಲ ಮುಖಗಳನ್ನೂ  ತೋರಿದ್ದು ನಿನ್ನ ಪ್ರೀತಿ.. ಎಲ್ಲವನ್ನೂ ಮೀರಿದ್ದು ನಿನ್ನ ಪ್ರೀತಿ.. ಜೀವನದಲ್ಲಿ ಎಲ್ಲದರ ಜೊತೆಗೆ ನಿನ್ನನ್ನೂ  ಸಹಿಸಿಕೊಳ್ಳುವ ತಾಳ್ಮೆ ಕಲಿಸಿದ್ದು ನಿನ್ನ ಪ್ರೀತಿ. ಅದಕ್ಕೆ ಈ ದೂರ ಮತ್ತು ವಿರಹವನ್ನು ತಾಳ್ಮೆಯಿಂದ ಸಹಿಸಿಕೊಳ್ಳುತ್ತಿರುವುದು. ನೆನಪಿರಲಿ ಸಹನೆಗೂ ಮಿತಿಯಿದೆ.ಈ ದೂರ ಒಮ್ಮೊಮ್ಮೆ  ನೀನೆಲ್ಲಿ ನನ್ನ ಮರೆತೆಯೋ ಎಂಬ ಅನುಮಾನವನ್ನು ಹೆಡೆಯಾಡುವಂತೆ ಮಾಡಿ ಬಿಡುತ್ತದೆ. ಬೆನ್ನ ಹಿಂದೆಯೇ ನನ್ನ ಮರೆತರೆ ನಿನ್ನದೆಲ್ಲಿದೆ ಬದುಕು ? ಎಂಬ ನಂಬಿಕೆ ಕೈ ಹಿಡಿಯುತ್ತದೆ.ಎಡಗೈಯ್ಯ ಕಿರು ಬೆರಳು ಕೂಡಾ ನಿನ್ನ ಹೆಸರನ್ನು ಸರಾಗವಾಗಿ ಗೀಚಲು ಕಲಿತಿದೆ. ಯಾಕೋ ನಿನ್ನೊಂದಿಗಿನ ಬದುಕಿನ ಚಿತ್ರಗಳೆಲ್ಲ ಬಣ್ಣ ಕಳೆದುಕೊಂಡು ಮಸುಕಾಗಿವೆ  ಎನಿಸುತ್ತಿದೆ. ಅವೆಲ್ಲ ನಿನ್ನ ಕಣ್ಣ ಬೆಳಕ ಕಂಡೊಡನೆ ಮತ್ತೆ ಹೊಳೆಯುತ್ತವೆ ಬಿಡು. ಕನಸಿನ ಲೋಕದಲ್ಲಿ ನಾವೇ ನಿರ್ಮಿಸಿದ ನಮ್ಮ ಮುಂದಿನ ಬದುಕಿನಂಗಳಕ್ಕೆ ಆಗಾಗ ಹೋಗಿ ಬರುತ್ತಿದ್ದೇನೆ ಒಂಟಿಯಾಗಿ. ಆಗೆಲ್ಲ ನನ್ನ ಕೈ ಬೆರಳುಗಳ ನಡುವಿನ ಅಂತರವನ್ನು ತುಂಬಲು ನೆನ್ನ ಬೆರಳುಗಳಿರಬೇಕಿತ್ತು  ಎನಿಸುತ್ತದೆ. ಕನಸಿನೂರ ಕಾವಲುಗಾರನಿಗೆ ಮಾತು ಕೊಟ್ಟು ಬಂದಿದ್ದೀನಿ ,ಮುಂದಿನ ಸಲ ನಿನ್ನೊಂದಿಗೆ ಬರುತ್ತೇನೆ ಎಂದು. ನನ್ನ ಮಾತು ಉಳಿಸುವ ಜವಾಬ್ದಾರಿ ನಿನ್ನ ಮೇಲಿದೆ ನೆನಪಿರಲಿ...

ನಂಬಿಕೆಯಿಂದ ನೀರೆರೆಯುತ್ತಿರುವ ನಿರೀಕ್ಷೆಯ ಗಿಡ ನೀ ಬರುವ ದಿನಗಳು ಹತ್ತಿರವಾದಂತೆಲ್ಲ ದಿನಕ್ಕೆರಡು ಎಲೆಗಳಂತೆ ಚಿಗುರುತ್ತಿದೆ. ಯಾವಾಗ ಮೊಗ್ಗು ಬಿಡುವುದೋ ಎಂದು ಕಾಯುತ್ತಿದ್ದೇನೆ. ಅದೇನೇ ಇರಲಿ ನೀ ಬಂದ ದಿನ ಅದರಲ್ಲೊಂದು ಚಂದದ ಹೂ ಅರಳಿರುತ್ತದೆ.. ನಮ್ಮ ಪ್ರೀತಿಗಾಗಿ...

(ಇದು ೨೭.೧೧.೨೦೧೨ ರ ಲವಲವಿಕೆಯಲ್ಲಿ ಪ್ರಕಟವಾಗಿತ್ತು )

18 comments:

  1. ಪ್ರೀತಿಯ ಬಗ್ಗೆ ಸಂದೇಹ some ದೇಹದಲ್ಲಿ ಯಾವಗಲೂ ಇರುತ್ತವೆ..ಆ ಅನುಮಾನಗಳನ್ನು ಹೊಡೆದೋಡಿಸುವ ಶಕ್ತಿ ಪ್ರೀತಿಯ ಒಲೆಯಲ್ಲಿ ಮಾತ್ರ.ಆ ಒಲೆಯನ್ನು ಬರೆಯಲೇ ಬೇಕಿಲ್ಲ..ಅದು ಹೃದಯಗಳ ಪಿಸುಮಾತಿನಲ್ಲಿ ವ್ಯಕ್ತವಾಗುತ್ತದೆ...ಕನಸೂರಿನ ಕಾವಲುಗಾರ ಎಚ್ಚರಿಸಲು ಬರುವಾಗ ನನಸಾಗುವ ಆಸೆಯನ್ನು ಕೊಟ್ಟುಹೋಗುತ್ತಾನೆ...ಸುಂದರ ಲೇಖನ ಎಸ್ ಪಿ.

    ReplyDelete
  2. ನಂಬಿಕೆಯಿಂದ ನೀರೆರೆಯುತ್ತಿರುವ ನಿರೀಕ್ಷೆಯ ಗಿಡ ನೀ ಬರುವ ದಿನಗಳು ಹತ್ತಿರವಾದಂತೆಲ್ಲ ದಿನಕ್ಕೆರಡು ಎಲೆಗಳಂತೆ ಚಿಗುರುತ್ತಿದೆ. ಯಾವಾಗ ಮೊಗ್ಗು ಬಿಡುವುದೋ ಎಂದು ಕಾಯುತ್ತಿದ್ದೇನೆ. ಅದೇನೇ ಇರಲಿ ನೀ ಬಂದ ದಿನ ಅದರಲ್ಲೊಂದು ಚಂದದ ಹೂ ಅರಳಿರುತ್ತದೆ.. ನಮ್ಮ ಪ್ರೀತಿಗಾಗಿ.. ಇದು ಅತ್ಯಂತ ಸೊಗಸಾದ ಸಾಲುಗಳು. ಆಶಾದಾಯಕ. ಶುಭಾಶಯಗಳು.

    ReplyDelete
  3. ಸಂಧ್ಯಾ ತುಂಬಾ ಚಂದ ಬರೆದಿದ್ದಿಯೇ.
    ಒಂದಷ್ಟು ಚಂದದ ಉಪಮೆಗಳು ಲೇಖನದ ಚಂದ ಹೆಚ್ಚಿಸಿದೆ...ಸೂಪರ್..

    ReplyDelete
  4. "ಎಡಗೈಯ್ಯ ಕಿರು ಬೆರಳು ಕೂಡಾ ನಿನ್ನ ಹೆಸರನ್ನು ಸರಾಗವಾಗಿ ಗೀಚಲು ಕಲಿತಿದೆ"

    "ನನ್ನ ಕೈ ಬೆರಳುಗಳ ನಡುವಿನ ಅಂತರವನ್ನು ತುಂಬಲು ನೆನ್ನ ಬೆರಳುಗಳಿರಬೇಕಿತ್ತು ಎನಿಸುತ್ತದೆ."

    ಕೆವವೊಂದು ಚಂದದ ಉಪಮೆಗಳು.... ಹೋಲಿಕೆಗಳು ಬರಹಕ್ಕೆ ಕಿರೀಟದಂತೆ......
    ಭಾವನೆಗಳು ಹಬ್ಬುವಂತೆ ಮಾಡುತ್ತವೆ....

    ಸಂಧ್ಯಾ... ರಾಶೀ ಚಂದ ಬರದ್ದೆ......

    ReplyDelete
  5. 'ಸಂಧ್ಯೆ ಯಂಗಳದಿ'...ಒಂದು ಸುಂದರ ತಾಣವನ್ನು ನಿರ್ಮಿಸಿದ್ದೀರಿ....ಸುಂದರ ಬ್ಲಾಗ್....ಅಭಿನಂದನೆಗಳು.......

    ಸುಂದರ ಉಪಮೆ, ರೂಪಕಗಳ ಜೊತೆ ಸೊಗಸಾಗಿ ಹೆಣೆದಿರುವ ಬರಹ...ಪ್ರೀತಿಯ ಭಾವನೆಯೇ ಮಧುರ....ನಿಮ್ಮ ಮಧುರ ಭಾವನೆಗಳನ್ನು ಪದಗಳಲ್ಲಿ ಇಳಿಸಿದ ರೀತಿ ಅದ್ಭುತವಾಗಿದೆ......ಆಶಾದಾಯಕ ಸಾಲುಗಳ ಜೊತೆ ಮುಗಿದ ಸುಂದರ ಬರಹ.....ಶುಭವಾಗಲಿ......

    ReplyDelete
  6. ಭಾವ ಗಂಗೆ ಧುಮ್ಮಕ್ಕಿದೆ ಬರಹದಲಿ...ಮಾತು ಮರೆತು ಭಾವದಲಿ ತೇಲಿ ಹೋದ ಭಾವ...
    ಚಂದ ಬರಹ ಸಂಧ್ಯಾ...

    ReplyDelete
  7. ಮೊದಲ ಬಾರಿ ನಿಮ್ಮ ಬ್ಲಾಗ್ಗೆ ಭೇಟಿ ಕೊಟ್ಟೆ...ತುಂಬಾ ಇಷ್ಟ ಆಯ್ತು ಸಂಧ್ಯ.. :)

    ReplyDelete
  8. ಬೇಂದ್ರೆ ಅಜ್ಜನ ಅತ್ಯುತ್ತಮ ಕವನದಿಂದ ಆರಂಭವಾದ ಈ ಬರಹ ಬಹಳ ಮುದ ನೀಡಿತು.

    ನಿರೀಕ್ಷೆ ಮತ್ತು ಆಶಯ ಪೂರ್ಣ ಅತ್ಯುತ್ತಮ ಒಲುಮೆ ನಿವೇದನೆ.

    ReplyDelete
  9. ಪ್ರೀತಿಯ ಸಿಂಚನ ಸುಮಧುರವಾಗಿದೆ.

    ReplyDelete
  10. ನಿಮ್ಮ ನಿರೂಪಣಾ ಶೈಲಿ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ತುಂಬಾ ಹೊಸತು ಹಾಗೂ ಕ್ರಿಯಾತ್ಮಕವಾಗಿದೆ... wow... kudos..

    ReplyDelete