Saturday, 3 November 2012

" ಸನ್ನೆಯಲ್ಲಿ ಮಾತನಾಡುವುದನ್ನು ಕಲಿಯಬೇಕಿದೆ ನನಗೆ".





ಮೌನ ಕೊಲ್ಲುತ್ತಿತ್ತು ಅಲ್ಲಿ. ಆದರೆ ಮಾತು ಸತ್ತು ತುಂಬಾ ದಿನಗಳಾಗಿದ್ದವು ಆ ಮನೆಯಲ್ಲಿ. ಮೂರು ಜನ ಅಕ್ಷರಶಃ  ದ್ವೀಪದಂತೆಯೇ ಬದುಕಿದ್ದೆವು ಅಲ್ಲಿ. ಮೂಕ ಅಪ್ಪ. ಮಾತು ಬಂದರೂ ಮೂಕಿಯಂತೆಯೇ ಬದುಕುತ್ತಿದ್ದ ಅಮ್ಮ. ಮತ್ತು ನನ್ನ ಮಾತುಗಳು ಇವರಿಗೆಲ್ಲಿ ತಿಳಿದೀತು ಎಂಬ ಅಹಂಕಾರದಲ್ಲಿ ಮಾತೇ ಆಡದೆ ಇರುತ್ತಿದ್ದ ನಾನು. ನಾಲ್ಕು ಅಕ್ಷರ ಕಲಿತವಳಲ್ಲವೇ , ಕಲಿಸಿದವರ ನೆನಪಿರಲಿಲ್ಲ. ಜಾಣೆ ನಾನು. ಆಟ ಪಾಠಗಳಲ್ಲೆಲ್ಲ ನಾನೇ ಮೊದಲು.ನನ್ನ ಯಶಸ್ಸನ್ನು ಮನೆಯಲ್ಲಿ ಹೇಳಿದರೆ ಅಮ್ಮ ದೇವರ ಮುಂದೆ ತುಪ್ಪದ ದೀಪ ಹಚ್ಚಿ , ಹೀಗೆ ಒಳ್ಳೆದಾಗಲಿ ಎನ್ನುತ್ತಿದ್ದಳು. ಮಾತು ಬಾರದ ಅಪ್ಪ ಕಣ್ಣಲ್ಲಿ ನೀರು ತುಂಬಿಕೊಂಡು ಏನೇನೋ ಅರ್ಥವಾಗದ ಸನ್ನೆ ಮಾಡುತ್ತಿದ್ದ. ನಾನದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ  ಮಾಡಿರಲಿಲ್ಲ. ಅವನ ಕೈ ಸನ್ನೆಗಳು ಅರ್ಥವಾಗದ ಜನ ಅವನನ್ನು ನೋಡಿ ನಗುತ್ತಿದ್ದರು. ನನ್ನನ್ನು ಮೂಗನ ಮಗಳೆಂದು ಊರವರು ಗುರುತಿಸುತ್ತಿದ್ದರೆ ಅಸಹ್ಯವಾಗುತ್ತಿತ್ತು .ಅವಮಾನವಾದಂತಾಗುತ್ತಿತ್ತು. ಅದಕ್ಕೆ ಯಾರೆದುರಿಗೂ ಆತ ನನ್ನ ತಂದೆಯೆಂದು ಹೇಳುತ್ತಲೇ ಇರಲಿಲ್ಲ.  ಯಾರನ್ನು ಮನೆಗೆ ಕರೆಯುತ್ತಿರಲಿಲ್ಲ. ಕಾಲೇಜು ಮತ್ತು ಹಾಸ್ಟೆಲ್ ನಲ್ಲಿ ಅನಾಥೆ ಅಂತ ಹೇಳಿಕೊಂಡೆ ಕಾಲೇಜ್ ಮುಗಿಸಿದ್ದೆ. 

ಒಂದು ಒಳ್ಳೆ ಕಂಪನಿಯಲ್ಲಿ ಕೆಲಸ ಸಿಗುವುದರಲ್ಲಿತ್ತು. ಕೆಲಸ ಸಿಕ್ಕ ತಕ್ಷಣ ಈ ಮುದಿ ಜೀವಗಳನ್ನು ಬಿಟ್ಟು ಎಲ್ಲಾದರೂ ದೂರ ಹೋಗಿ ಬದುಕಬೇಕು . ಸಾಕಿದ್ದರಾದ್ದರಿಂದ ತಿಂಗಳು ತಿಂಗಳು ಅಷ್ಟೋ ಇಷ್ಟೋ ಕಳಿಸಿದರಾಯಿತು ಎಂದುಕೊಂಡು ಒಂದು ವಾರ ಇರುವುದಕ್ಕಾಗಿ ಬಂದಿದ್ದು ಇಲ್ಲಿಗೆ. ಆದರೆ ಇಷ್ಟು ದೊಡ್ಡ ಆಘಾತ ಭರಸಿಡಿಲಿನಂತೆ ಬಡಿದಿತ್ತು. ಆ ಮೂಗ ನನ್ನ ಅಪ್ಪನೇ ಅಲ್ಲ ಎಂಬ ಸತ್ಯ ತಿಳಿದಿತ್ತು. ಒಳ ಮನೆಯ ಗೋಡೆಗಳಿಗೆ ಬಹಳ ಸತ್ಯ ಗೊತ್ತಿರುತ್ತದೆ ಎಂದು ಎಲ್ಲೋ ಓದಿದ್ದೆ. ಆದರೆ ಈ ಗೋಡೆಗಳಲ್ಲಿ ನನ್ನನ್ನು ಅಲ್ಲಾಡಿಸುವ ಸತ್ಯವಿತ್ತು ಎಂದು ಗೊತ್ತಿರಲಿಲ್ಲ. ಅಮ್ಮನ ಬಗೆಗೂ ಅಸಹ್ಯವಾಗ ತೊಡಗಿತ್ತು. ಛೆ ಇದೆಂತ ಜೀವನ ? ಎನಿಸ ತೊಡಗಿತ್ತು. ಈ ಕ್ಷಣದಲ್ಲಿ ಮನೆ ಬಿಟ್ಟು ಹೋಗಬೇಕೆಂದು ನಿರ್ಧರಿಸಿ ಎಲ್ಲವನ್ನು ಪ್ಯಾಕ್ ಮಾಡಿಕೊಂಡು ಹೊರಟಿದ್ದೆ.  

ಯಾಕೋ ಅಮ್ಮನಿಗೆ ಹೇಳೋಣ ಅನಿಸಿತು. ಅಮ್ಮ ಒಳಮನೆಯ ಕಿಟಕಿಗೆ ತಲೆ ಕೊಟ್ಟು, ಈಗಲೋ ಆಗಲೋ ಮಳೆ ಬರುವಂತಿದ್ದ ಕಾರ್ಮುಗಿಲ ದಿಟ್ಟಿಸುತ್ತ ಕುಳಿತಿದ್ದಳು. ಹೆಜ್ಜೆ ಸಪ್ಪಳಕ್ಕೆ ತಿರುಗಿ ನೋಡಿದವಳು "ಹೇಳದೆ ಹೊರಟು ಬಿಟ್ಟೆ ಎಂದುಕೊಂಡೆ. ಹೇಳಿ ಹೋಗಲು ಬಂದೆಯಾ??" ಎಂದಳು. ತಲೆಯಾಡಿಸಿದ್ದೆ. "ನನ್ನ ಮೇಲೆ ಅಸಹ್ಯವಾಗಿರಬೇಕಲ್ಲ ?? ನನ್ನ ಮಾತುಗಳು ಅಸಹ್ಯ ಎನಿಸದಿದ್ದರೆ ನಿನ್ನೊಡನೆ ಸ್ವಲ್ಪ ಮಾತನಾದಬೇಕಿದೆ ಕೇಳುವೆಯಾ" ಎಂದವಳು ನನ್ನ ಮುಖವನ್ನೂ ನೋಡದೆ ತನ್ನಷ್ಟಕ್ಕೆ ತಾನೇ ಎಂಬಂತೆ ಮಾತನಾಡತೊಡಗಿದಳು. ನಿನಗೆ ಅಮ್ಮನಾಗುವ , ಗಂಡನಿಗೆ ಹೆಂಡತಿಯಾಗುವ, ಅತ್ತೆಗೆ ಸೊಸೆಯಾಗುವ ಮೊದಲು ನಾನೂ ನಿನ್ನಂತೆಯೇ ಹೆಣ್ಣಾಗಿದ್ದೆ ಕಣೆ. ನನಗೆ ಅಮ್ಮನ ಕೈ ತುತ್ತಿನ ಸವಿ, ಜೋಕಾಲಿ, ಹಲಪೆಯಾಟದ ನೆನಪುಗಳಿದ್ದವು.. ಹರೆಯದ ವೈಯ್ಯಾರ , ಒನಪು, ಚಂದದಿ ಅರಳಿದ ಕನಸುಗಳಿದ್ದವು.. ಆಗ ತಾನೇ ಅರಳಿದ ಪ್ರೀತಿಯಿತ್ತು ಬದುಕಲ್ಲಿ.. ಆದರೆ ಪ್ರತಿಷ್ಠೆಯ ದಳ್ಳುರಿಯಲ್ಲಿ ನನ್ನ ಪ್ರೀತಿಯನ್ನೂ, ಪ್ರೀತಿಸಿದವನನ್ನೂ ಕೊಂದು ನಿನ್ನ ಅಪ್ಪನೆನಿಸಿಕೊಂಡವನ ತಾಳಿಗೆ ಕೊರಳೊಡ್ಡಿಸಿದರು ಮಾರಿ ಗದ್ದುಗೆಗೆ ಕುರಿ ಕೊರಳಿಡುವಂತೆ. ಅಲ್ಲಿಗೆ ತವರ ಸಂಬಂಧ ಕಡಿದು ಬಿತ್ತು. ಹೆಣ್ಣು ಸಹನಾ ಧರಿತ್ರಿ ಅಲ್ಲವೇ . ಎಲ್ಲವನ್ನು ಮರೆತು ಹೊಸ ಬದುಕು ಕಟ್ಟುತ್ತೇನೆ ಎಂದುಕೊಂಡೆ. ಆದರೆ ಅತ್ತೆ ಎನಿಸಿಕೊಂಡವಳು ನನಗೆಂದೂ ತಾಯಿಯಾಗಲಿಲ್ಲ. ಗಂಡನಾದವನು ಗಂಡನ ದರ್ಪ ತೋರಿದನೆ ವಿನಃ ಗೆಳೆಯನಾಗಲಿಲ್ಲ. ಒಂದು ವರ್ಷದಲ್ಲಿ ನೀನು ಹೊಟ್ಟೆಯಲ್ಲಿದ್ದೆ. ಹೆಣ್ಣು ಮಗುವಾದರೆ ನಿನಗೆ ಈ ಮನೆಯಲ್ಲಿ ಜಾಗವಿಲ್ಲ ಎಂದು  ಮೊದಲೇ  ಅತ್ತೆಯ ತಾಕೀತು. ಹೆಣ್ಣಾದರೆ ಅವಳನ್ನು ಮತ್ತೆ ಕರೆತರುವ ಅವಶ್ಯಕತೆಯಿಲ್ಲ ಎಂದು ಮಾವ ಒಳಮನೆಯಲ್ಲಿ ನಿಂತು ಅಬ್ಬರಿಸಿದ್ದು, ಹೆರಿಗೆ ನೋವಿನಿಂದ ನರಳುತ್ತಿದ್ದರೂ ಕಿವಿಗೆ ತಾಕಿತ್ತು . ಆಸ್ಪತ್ರೆಯಲ್ಲಿ ನಿನ್ನ ಹೆತ್ತು , ನಿನ್ನ ಸ್ಪರ್ಶವನ್ನು ಆನಂದಿಸುತ್ತಿದ್ದವಳಿಗೆ ಕೇಳಿದ್ದು "ಹೆಣ್ಣುಮಗುವಮ್ಮ" ಎಂದ ನಿನ್ನಪ್ಪನ ಕೊನೇ ಮಾತು. ಆಮೇಲೆ ಅವರ ಮಾತು ಕೇಳಲಿಲ್ಲ , ಮುಖ ನೋಡಲಿಲ್ಲ. ಹೆಣ್ಣು ಹೆತ್ತ ಕಾರಣಕ್ಕೆ ಹಸಿ ಬಾಳಂತಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ನಡೆದಿದ್ದರು ನನ್ನ ಗಂಡನ ಮನೆಯವರು. ಗಂಡನ ಮನೆಯ ಸಂಬಂಧವೂ ಹಾಗೆ ಕಡಿದಿತ್ತು.  ಅಲ್ಲಿಂದ ಹೊರಬಿದ್ದ ನನ್ನನ್ನು ಹದ್ದಿನ ಕಣ್ಣಿನ ಸಮಾಜ ಹಸಿ ಮಾಂಸದ ತುಂಡಿನಂತೆ ನೋಡುತ್ತಿತ್ತು. ಆಗ ಜೋತೆಯಾದವನು ಈ ಮೂಗ. ಮನೆಗೆ ಬಾ ಎಂದು ಕರೆದುಕೊಂಡು ಬಂದ. ಒಂದೇ ಸೂರಿನಡಿಯಲ್ಲಿ ಗಂಡು ಹೆಣ್ಣು  ಸಂಬಂಧವಿಲ್ಲದೆ ಬದುಕುವುದನ್ನು ಸಮಾಜ ಒಪ್ಪುವುದಿಲ್ಲ ಅಲ್ಲವೇ? ಅದಕ್ಕೆ ಈ ತಾಳಿ ತಂದು ಕೊಟ್ಟು , ನೀನೆ ಕಟ್ಟಿಕೋ ಎಂದು ಸನ್ನೆ ಮಾಡಿದ. ಅವನ ಸನ್ನೆಯಂತೆ ನಾನೇ  ಕಟ್ಟಿಕೊಂಡೆ. ಅವತ್ತಿನಿಂದ ಮಗಳಲ್ಲದ ನೀನು , ಹೆಂಡತಿಯಲ್ಲದ ನಾನು ಅವನ ಮೂಕ ಪ್ರಪಂಚದ ಭಾಗವಾದೆವು. ನಮಗಾಗಿ ಅವರಿವರ ಮನೆಯ ಜಮೀನಿನಲ್ಲಿ ಗೇಣಿ ಮಾಡಿ ಗಾಣದೆತ್ತಿನಂತೆ ದುಡಿದು ಈ ಮನೆ ಮಾಡಿದರು. ನಿನಗೆ ಯಾವುದಕ್ಕೂ ಕಡಿಮೆಯಾಗದಂತೆ ನಿನ್ನ ಬೆಳೆಸಿದರು. ವಿದ್ಯೆ ಕಲಿಸಿದರು. ಮೂಕ ಮನಸ್ಸಿನಲ್ಲಿ ನಿನ್ನ ಮದುವೆಯ ಕನಸು ಕಂಡರು. ನಿನಗಾಗಿ ಚಿನ್ನ ಮಾಡಿಸಿದರು, ಬ್ಯಾಂಕಿನಲ್ಲಿ ಹಣ ಕೂಡಿಟ್ಟರು. ಅವರು ಬಂದ ತಕ್ಷಣ ಅವರನ್ನು ಕೇಳಿ ಆ ಕಾಗದ ಪತ್ರಗಳನ್ನು ನಿನಗೆ ಒಪ್ಪಿಸುತ್ತೇನೆ ಅಲ್ಲಿವರೆಗೂ ದಯವಿಟ್ಟು ನಿಲ್ಲು. ದೇವರು ನನ್ನಿಂದ ಪ್ರೀತಿಯನ್ನು ಕಿತ್ತುಕೊಂಡ. ತವರನ್ನು ದೂರ ಮಾಡಿದ . ಹೆಣ್ಣು ಹೆತ್ತಿದ್ದಕ್ಕಾಗಿ ಗಂಡನ ಮನೆಯವರನ್ನು ದೂರ ಮಾಡಿದ . ಹೆಣ್ಣು ಮಗಳಾದ ನಿನ್ನನ್ನೂ ದೂರ ಮಾಡುತ್ತಿದ್ದಾನೆ. ಆದರೂ ಬೇಸರವಿಲ್ಲ ,ಕಾರಣ ನನ್ನ ಮೌನ ಪ್ರಪಂಚವನ್ನೂ,ಅದರ ಸುಖವನ್ನು ಅವನು ಕಸಿದುಕೊಳ್ಳಲಾರ ಎಂದವಳು ನನ್ನ ಮುಖ ನೋಡಿ, ಇರು ಎಂದೂ ಒಳಗೆ ಹೋಗಿ ಒಂದು ಮಫ್ಲರ್ ಮತ್ತು ಸ್ವೆಟ್ಟರ್ ತಂದು , ಮೊನ್ನೆ ಸಂತೆಗೆ ಹೋದವರು ಮಳೆಗಾಲಕ್ಕೆ ನಿನಗೆ ಅಂತಾ ಇವರು ತಂದಿದ್ದಾರೆ ತೆಗೆದುಕೋ ಎಂದು ಕೈಗಿತ್ತಳು. ಸತ್ಯವನ್ನು ಮುಚ್ಚಿಡಬೇಕೆಂದುಕೊಂಡಿದ್ದೆ . ಆದರೆ ನಿನಗೆ ಗೊತ್ತಾದ ಅರ್ಧ ಸತ್ಯವನ್ನು ಪೂರ್ತಿಗೊಳಿಸಬೇಕಿತ್ತು ಅದಕ್ಕಾಗಿ ಎಲ್ಲವನ್ನೂ  ಹೇಳಿದೆ. ದಯವಿಟ್ಟು ನನ್ನ ಕಮಿಸು ಎಂದು ಕುಸಿದು ಕುಳಿತಳು.

ಹೊರಗಡೆ ಧೋ ಎಂದು ಮಳೆ ಸುರಿಯುತ್ತಿತ್ತು, ಆದರೆ ಅದರ ಪರಿವಿರಲಿಲ್ಲ. ಅಮ್ಮನ ಮಾತಿನ ಮಳೆ ಮನಸ್ಸಿನ ಎಲ್ಲ ಕೊಳೆಗಳನ್ನು ತೊಳೆದು ಹಾಕಿತ್ತು. ಹುಟ್ಟಿಸಿದ ಅಪ್ಪನೆನಿಸಿಕೊಂಡವ ನನ್ನನ್ನು  ಹೆಣ್ಣೆಂದು ತೊರೆದು ಹೋಗಿದ್ದ. ಆದರೆ ಅಪ್ಪನಲ್ಲದವನು ನನ್ನನ್ನೇ ಬದುಕೆಂದುಕೊಂಡು, ಗಂಧದಂತೆ ತನ್ನನ್ನು ಸವೆಸಿಕೊಂಡು ಅಪ್ಪನ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ್ದ. ಆದರೆ ನಾನು ಯಾವುದನ್ನೂ  ಅರ್ಥ ಮಾಡಿಕೊಂಡಿರಲಿಲ್ಲ. ಬದುಕ ತುಂಬಾ ಮೌನವಾಗಿ ಪ್ರೀತಿಸಿದವನಿಗೆ ನಾನು ಕೊಟ್ಟಿದ್ದು ತಿರಸ್ಕಾರ ಮಾತ್ರ. ಈಗ ಯಾವುದೂ ಬೇಡವಾಗಿತ್ತು. ಓಡಿ ಹೋಗಿ ಅಮ್ಮನನ್ನು ತಬ್ಬಿಕೊಂಡೆ."ನನ್ನನ್ನು ಕ್ಷಮಿಸಿಬಿಡಮ್ಮ . ಇನ್ನು ಯಾವತ್ತೂ ನಿಮ್ಮಿಬ್ಬರನ್ನು ಬಿಟ್ಟು ಎಲ್ಲೂ ಹೋಗಲಾರೆ. ಇಲ್ಲಿಯೇ ಕೆಲಸ ಹಿಡಿಯುತ್ತೇನೆ . ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನ್ನ ಕ್ಷಮಿಸು " ಎಂದು ಬೇಡಿಕೊಂಡೆ. ಬೊಗಸೆಯಲ್ಲಿ ನನ್ನ ಮುಖ ಹಿಡಿದುಕೊಂಡು ಹಣೆಗೆ ಮುತ್ತಿಟ್ಟು ಎದೆಗೆ ಒತ್ತಿಕೊಂಡಳು. ಕ್ಷಮಿಸುತ್ತಿಯಲ್ಲವೇ ? ಅಪ್ಪನು ಕ್ಷಮಿಸುತ್ತಾರೆನಮ್ಮ?? ಎಂದೆ. ತುಸುನಕ್ಕು  ಕಿವಿ ಮುಚ್ಚುವಂತೆ ಮಫ್ಲರ್ ಸುತ್ತಿ , ಸೆಟ್ಟರ್ ತೊಡಿಸಿ "ತುಂಬಾ ಚಳಿಯಿದೆ.ಬೆಚ್ಚಗೆ ಹೊದ್ದುಕೊ. ಇವರು ಬರುವ ಹೊತ್ತಾಯಿತು  ಮಳೆಯಲ್ಲಿ ನೆನೆದು ಬರುತ್ತಾರೆ,   ಬೆಂಕಿ ಮಾಡಿ ಬಿಸಿನೀರು ಕಾಯಿಸಬೇಕು ಎನ್ನುತ್ತಾ ಒಳಗೆ ಹೋದಳು. ಅಪ್ಪ ಬರುವ ದಾರಿ ಕಾಯುತ್ತಾ ಅಲ್ಲೇ ಕುಳಿತೆ. 

ತಡೆದ ಮಳೆ ಜಡಿದು ಹೊಡೆಯುತ್ತದಂತೆ. ಒಂದು ದೊಡ್ಡ ಮಳೆ ಬಂದು ನಿಂತು ಆಕಾಶ ನಿರ್ಮಲವಾಗಿತ್ತು. ಅಂತೆಯೇ ಮನಸ್ಸೂ ಕೂಡ. ಹೊದ್ದುಕೊಂಡಿದ್ದ ಸ್ವೆಟ್ಟರ್ ಮತ್ತು ಮಫ್ಲರ್ ಬೆಚ್ಚ್ಚಗಾಗಿಸುತ್ತಿದ್ದರೆ , ಅದರೊಳಗಿದ್ದ ಪ್ರೀತಿಯ ಭಾವ ಇನ್ನೂ  ಅಪ್ಯಾಯಮಾನವಾಗಿತ್ತು. "ಬೇಗ ಬನ್ನಿ ಅಪ್ಪಾ. ನಿಮ್ಮ ಮೌನ ಪ್ರಪಂಚದ ಭಾಗವಾಗಬೇಕಿದೆ. ಮಡಿಲಲ್ಲಿ ತಲೆಯಿಟ್ಟು ಮಲಗಬೇಕಿದೆ. ನಿಮ್ಮ ಸನ್ನೆಯ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸನ್ನೆಯಲ್ಲೇ ನಿಮ್ಮೊಡನೆ ಮಾತನಾಡಬೇಕಿದೆ. ನನ್ನ ಸನ್ನೆಗಳು ನಿಮಗೆ ಅರ್ಥವಾಗಬಹುದಾ?? ಗೊತ್ತಿಲ್ಲ. ಆದರೆ ಈಗಿನಿಂದಲೇ ಸನ್ನೆಯಲ್ಲಿ ಮಾತನಾಡುವುದನ್ನು ಕಲಿಯಬೇಕಿದೆ ನನಗೆ". 

Wednesday, 3 October 2012

ಮಟಿರಿಯಲಿಸ್ಟಿಕ್ ಜೀವನ , ಅದನ್ನೇ ಪ್ರೀತಿಸಬೇಕು





ಬಾಲ್ಕನಿಯಲ್ಲಿ  ನಿಂತಿದ್ದೆ.  ಏನು ಅಮ್ಮಾವ್ರು ದಿನಾ ೧೦ ಗಂಟೆಗೆ ಇಲ್ಲೇ ಇರ್ತಿರಲ್ಲ? ಮೊಬೈಲ್ ಕೂಡ ರೂಮಲ್ಲೇ ಬಿಟ್ಟು ಬರ್ತೀಯ. ಇಲ್ಲೇನು ಮಾಡ್ತಿಯ ಅಂತ ಕೇಳುತ್ತ ರೂಂ ಮೆಟ್ ಬಂದಳು. ಪಕ್ಕದ ಮನೆಯ ಟೆರ್ರೆಸ್ ಕಡೆ ಕೈ ತೋರಿಸಿದೆ. ಪುಟ್ಟ ಮಗು ಗಲ್ಲಕ್ಕೆ ಕೈ ಕೊಟ್ಟು ಕುಳಿತಿತ್ತು.  ಅಲ್ಲೇನು ಮಾಡ್ತಿದೆ ಅದು ಎಂದಳು. ಸುಮ್ನೆ ನೋಡು ಎಂದೇ. ಆ ಮಗು ಆಕಾಶ ನೋಡ್ತಾ, ಅಲ್ಲೇ ಇರೋ ಬಾಲ್ ಆಡುತ್ತ, ಪಕ್ಕದಲ್ಲಿರೋ ಜೋಕಾಲಿಯಲ್ಲಿ ಜೀಕುತ್ತ  , ಆಗಾಗ ರೋಡ್ ಕಡೆ ನೋಡುತ್ತಾ  ಏನೋ ಪದ್ಯಗಳನ್ನು ಹೇಳುತ್ತಾ ಇತ್ತು. ಇಬ್ಬರೂ ನೋಡುತ್ತಾ ಇದ್ದೆವು. ದಿನಾ ಹೀಗೆ ಆಡುತ್ತೆ ಕಣೆ ಇದು. ನೋಡೋಕೆ ಮಜಾ, ಅದಿಕ್ಕೆ ಇಲ್ಲಿರ್ತೀನಿ ಅಂದೆ. ಮಾತಾಡಿಸೇ ಅಂದಳು. ಹಾಯ್ ಪುಟ್ಟ ಅಂದೆ. ಹೆದರಿ ಕೆಳಗೆ ಹೋಗುತ್ತೆ ಮಗು ಅಂದುಕೊಂಡೆವು , ಬದಲಾಗಿ ಆ ಕಡೆಯಿಂದ ಏನು? ಎಂದು ಉತ್ತರ ಬಂತು. ಇಲ್ಲೇನು ಮಾಡ್ತಿದ್ದೀಯ ಕೇಳಿದೆ. ಅಮ್ಮನಿಗೆ ಕಾಯ್ತಾ ಇದ್ದೀನಿ , ಅಮ್ಮಾ ಬರ್ತಾಳೆ ಈಗಾ ಎಂದಿತು ಪಾಪು. ಎಲ್ಲಿ ಎಂದು ಇವಳು ಕೇಳಿದಳು. ಮಗು ರೋಡಿನ ಕಡೆಗೆ ಕೈ ತೋರಿತು.ನೀವೇನು ಮಾಡ್ತಿದ್ದೀರ ? ನಿಮ್ಮ ಅಮ್ಮನು ಬರ್ತಾರ? ಎಂದ ಮಗುವಿನ ಮುಗ್ದ ಪ್ರಶ್ನೆಗೆ ಉತ್ತರ ಹೊಳೆಯಲಿಲ್ಲ ಇಬ್ಬರಿಗೂ. ಆಗ ಸುಮಾರು ೧೧.೩೦. ಮನೆಯ ಎದುರು ಒಂದು ಕ್ಯಾಬ್ ಬಂದು ನಿಂತಿತು.  ಅಮ್ಮಾ ಬಂತು , ಅಮ್ಮಾ ಬಂತು ಎಂದು ಮಗು  ಖುಷಿ ಪಟ್ಟು ನಲಿಯುತ್ತಿತ್ತು. ಅದರಿಂದ ಇಳಿದ ಮಹಿಳೆ ನೇರವಾಗಿ ಬಾಲ್ಕನಿಗೆ ಬಂದು ಮಗುವನ್ನು ಅಪ್ಪಿ ಮುದ್ದಾಡಿ ಕರೆದುಕೊಂಡು ಹೋದಳು. 

ನೋಡಿದ್ಯ ಮಗು ಎಷ್ಟೊಂದು ಅಮ್ಮನಿಗಾಗಿ ಹಂಬಲಿಸುತ್ತೆ, ಇಷ್ಟು ಪುಟಾಣಿ ಮಕ್ಕಳನ್ನು ಬಿಟ್ಟು ಅದು ಹೇಗೆ ಕೆಲಸಕ್ಕೆ ಹೋಗ್ತಾರೋ ಏನೋ ಎಂದೆ.  ಅದಿಕ್ಕೆ ಇವಳು ಪಾಪ ಆ ತಾಯಿಯು ಆಫಿಸಿನಲ್ಲಿ ಮಗುವಿಗಾಗಿ  ಅದೆಷ್ಟು ಹಂಬಲಿಸಿದ್ದಾಳೋ ಏನು ಗೊತ್ತು. ಇಲ್ಲಿನ ಅನಿವಾರ್ಯತೆಗಳಿಗಾಗಿ, ಜೀವನ ಶೈಲಿಗಾಗಿ ದುಡಿಯಲೇ ಬೇಕಲ್ಲವಾ?? ಎಂದಳು. ಹ್ಮ್ಮ್ ಈ ಹೊತ್ತಿನಲ್ಲಿ ಬಂದು ಮಗುವಿನ ನಗು ನೋಡಿ ಸುಸ್ತು ಕಳೆದುಕೊಳ್ಳುವ ಅಮ್ಮಂದಿರಿರುವಂತೆ, ನಿದ್ದೆ ಮಾಡುತ್ತಿರುವ ಪುಟ್ಟ ಮಗುವಿನ ಹಣೆಗೆ ತುಟಿಯೊತ್ತಿ ಈಗ ಕೆಲಸಕ್ಕೆ ಹೊರಡುವ ಅಮ್ಮಂದಿರು ಇರುತ್ತಾರೆ ಎಂದೆ.  ಹೌದಮ್ಮ ಇದು ಬೆಂಗಳೂರು,  ಇಲ್ಲಿ  ಯಾವುದಕ್ಕೂ ಆದಿ ಅಂತ್ಯಗಳಿಲ್ಲ. ಇಲ್ಲಿ ಎಲ್ಲವೂ ನಿರಂತರವೇ.ಇಲ್ಲಿ ೨೪/೭ ಬಾಗಿಲು ಮುಚ್ಚದ, ಲೈಟ್ ಆಫ್ ಆಗದ ಕಂಪೆನಿಗಳೂ  ಇವೆ.ಎಲ್ಲವೂ ಯಾಂತ್ರಿಕ, ಎಲ್ಲವು ಶಿಫ್ಟ್ ಗಳಂತೆ, ಊಟ, ತಿಂಡಿ, ನಿದ್ದೆ ಎಲ್ಲವೂ,  ಕೊನೆಗೆ ದಿನ ರಾತ್ರಿಗಳು ಕೂಡ..  ಮಟಿರಿಯಲಿಸ್ಟಿಕ್ ಜೀವನ, ಅದನ್ನೇ ಪ್ರೀತಿಸಬೇಕು ಎಂದಳು. ಹೌದಲ್ವ ಅಂದೆ. ನೋಡು ಯಾರಿಗೆ ಯಾವ ಶಿಫ್ಟೋ ಏನೋ ನಮಗಂತೂ ಮಲಗೋ ಶಿಫ್ಟ್,ಅವಾಗಲೇ ಹನ್ನೆರಡುವರೆ ಬಾ ಮಲಗೋಣ ಎನ್ನುತ್ತಾ ಎಳೆದುಕೊಂಡು ಬಂದಳು. 

 ಬಂದು ಮಲಗಿದವಳಿಗೇಕೋ ನಿದ್ದೆ ಬರಲಿಲ್ಲ. ನಮ್ಮಲ್ಲಿ ಮುಸ್ಸಂಜೆಯಾದರೆ ಸಾಕು ಕತ್ತಲಾಯಿತು ಬಾಗಿಲು ಹಾಕು, ದೇವರಿಗೆ ದೀಪ ಹಚ್ಚು ಎನ್ನುತ್ತಾರೆ. ದೀಪ ಹಚ್ಚಿ ಬಂದು ಮತ್ತೊಮ್ಮೆ ಬಾಗಿಲೆಲ್ಲ ಭದ್ರವಾ ಎಂದು ನೋಡುವಷ್ಟರಲ್ಲಿ ಕತ್ತಲು  ಗವ್ವನೆ ಕವಿದಿರುತ್ತದೆ  ಹೆದರಿಸುವಷ್ಟು. ಆದರೆ ಇಲ್ಲಿ ಕತ್ತಲನ್ನೇ ನಾಚಿಸುವಷ್ಟು ದೀಪಗಳ ಸಾಲು. ಆಗಸದಲ್ಲಿ ನಕ್ಷತ್ರ ಕಂಡರೆ ಮಾತ್ರ ರಾತ್ರಿಯಿರಬೇಕು ಎಂದುಕೊಳ್ಳುವಷ್ಟು. ಆ ದೂರದ ಅಪಾರ್ಟ್ಮೆಂಟ್ ನಲ್ಲಿ ಕಾಣುವ ಲೈಟ್ ಗಳೆಲ್ಲ ಆರುವುದೇ ಇಲ್ಲವೇನೋ. ನಮ್ಮಲ್ಲಿ ಕತ್ತಲಾದರೆ ದಿನ ಮುಗಿಯಿತು.ಬೆಳಗಿನ ಸುಸ್ತೆಲ್ಲ ಕಳೆದುಕೊಳ್ಳಲೊಂದು ರಾತ್ರಿ   . ನಾಳೆ ಮತ್ತದೇ ದಿನ, ದುಡಿತ, ಆದರೆ ಇಲ್ಲಿ ಹಾಗಲ್ಲ ಹಗಲಿರುಳು ದುಡಿತವೇ, ದಿನರಾತ್ರಿಯ ವಿಂಗಡನೆಯೇ ಇಲ್ಲ  ಎಂದುಕೊಳ್ಳುತ್ತಿರುವಾಗಲೇ ಆ ಅಪರಾತ್ರಿಯಲ್ಲಿ ಕೆಳಗೆ ಬಂದು ನಿಂತ ಯಾವುದೋ ವಾಹನದಿಂದ ಚಂದಿರನನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು.. ಎಂಬ ಕನ್ನಡ ಹಾಡೊಂದು ಮೊಳಗುತ್ತಿತ್ತು. ಎಲ್ಲರನ್ನು ಸೇಫ್ ಆಗಿ ಮನೆಗೆ ಬಿಟ್ಟು ಬಂದ ಕ್ಯಾಬ್ ಡ್ರೈವರ್ ಸ್ವಲ್ಪ ಹೊತ್ತು ಹಾಡು ಕೇಳಿ ಮಲಗುತ್ತಾನೆ. ಇಲ್ಲಿಗೆ ಇವನ ದಿನ ಮುಗಿಯಿತು ಎಂದುಕೊಂಡೆ. ಹೊರಗಡೆ ಹೆಜ್ಜೆ ಸದ್ದು, ಇದು ಮೇಲಿನ ಮನೆಯ ಪೇಪರ್ ಏಜೆನ್ಸಿ ನಡೆಸುತ್ತಿರುವ ಹುಡುಗರದ್ದು,  ಪೇಪರ್ ಗಾಡಿ ಬರುವ ಹೊತ್ತು, ಜೊತೆಯಲ್ಲೇ ಪಕ್ಕದ ರೂಂ ನಿಂದ ಅಲರಾಂ ಶಬ್ದ. ಆ ಹುಡುಗಿಗೆ ಬೆಳಗ್ಗೆ ೫ ಗಂಟೆಗೆ ಲಾಗಿನ್. ಅವಳು ಸ್ವಲ್ಪ ಹೊತ್ತಿನಲ್ಲೇ ಹೊರಡುತ್ತಾಳೆ. ಆ ಡ್ರೈವರ್ ಕೆಲಸ ಮುಗಿಸಿ ಮಲಗುವ ಹೊತ್ತಿಗೆ, ಇವರೆಲ್ಲರಿಗೆ ಮತ್ತೆ  ದಿನದ  ಪ್ರಾರಂಭ. ರೂಂ ಮೆಟ್ ಹೇಳಿದಂತೆ  ಎಲ್ಲ ಇಲ್ಲಿ ನಿರಂತರವೇ ಎಂದುಕೊಳ್ಳುತ್ತ ಕತ್ತಲಲ್ಲೂ ಅವಳೆಡೆಗೆ ನೋಡಿದೆ. 

ಆಗಲೇ ದೂರದ ಮಸೀದಿಯ ಮೈಕಿನಲ್ಲಿ ಪ್ರಾರ್ಥನೆ ಕೇಳತೊಡಗಿತ್ತು.  ಇನ್ನು ಹೂವು ,ತರಕಾರಿ ಮಾರುವವರಿಗೆಲ್ಲ ದಿನ ಪ್ರಾರಂಭವಾಗುತ್ತದೆ. ಮತ್ತೊಂದು ಹೊಸ ದಿನ ಎಂದುಕೊಳ್ಳುವಷ್ಟರಲ್ಲಿ  ಪಕ್ಕದ ಗುಡಿಯ ಘಂಟೆ ಮೊಳಗಿತ್ತು, ಜೊತೆಗೆ ಸುಪ್ರಭಾತವೂ ಕೂಡ.ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಎದುರು ಮನೆ ಆಂಟಿ ಚಂದದ ರಂಗೋಲಿ ಹಾಕಲು ಬರುತ್ತಾಳೆ ಎಂದುಕೊಳ್ಳುತ್ತ ಮಗ್ಗುಲು ಬದಲಾಯಿಸುವ ಹೊತ್ತಿಗೆ ಮತ್ತೊಂದು ಬೆಳಗು ನಿಧಾನವಾಗಿ ತೆರೆದುಕೊಳ್ಳತೊಡಗಿತ್ತು.

(ಇದು ಸೆಪ್ಟೆಂಬರ್ 25 ರ ಲವಲವಿಕೆಯಲ್ಲಿ  ಪ್ರಕಟವಾದ ಲೇಖನ )

Monday, 10 September 2012

ಇದೆಲ್ಲ ಪ್ರೀತಿನಾ ??




ನಂಗೆ ಎಲ್ಲಿಲ್ಲದ ಸಿಟ್ಟು ಬಂದಿತ್ತು. ಬಂದಿತ್ತು ಏನು .. ಈಗಲೂ ಇದೆ. ಅಲ್ಲ ಮದ್ಯ ರಸ್ತೆಯಲ್ಲಿ ಅಷ್ಟೊಂದು ಸೀನ್ ಕ್ರಿಯೇಟ್ ಮಾಡೋ ಅವಶ್ಯಕತೆ ಇತ್ತಾ??  ನನ್ನ ದುಪ್ಪಟ್ಟಾ  ಗಾಳಿಯಲ್ಲಿ ಹಾರಿ ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಚಕ್ರಕ್ಕೆ ಸಿಲುಕಿದರೆ ಅದರಲ್ಲಿ ಬೈಕ್ ಸವಾರನ ತಪ್ಪೆನಿತ್ತು ಹೇಳು. ಸುಮ್ಮನೆ ಅವನ ಬೈಕ್ ಎಳೆದು ಹಿಡಿದು ನಿಲ್ಲಿಸಿ , ಕತ್ತಿನ ಪಟ್ಟಿ ಹಿಡಿದು ಜಗಳ ಆಡುವಂತದ್ದೇನಿತ್ತು?  ಅದಕ್ಕಿಂತ ಬೇಜಾರಾಗಿದ್ದು ಆ ಬೈಕ್ ನ ಎಳೆದು ನಿಲ್ಲಿಸುವ ಭರದಲ್ಲಿ ಅದೇನೋ ತಗುಲಿಸಿಕೊಂಡು ಕೈ ಗೆ ಗಾಯ ಮಾಡಿಕೊಂಡೆಯಲ್ಲ  ಅದು. ತುಂಬಾ ನೋವಾಗುತ್ತಿರಬೇಕು ಅಲ್ಲವಾ..?? ಮನೆಗೆ ಬಂದು ಇದೆಲ್ಲವನ್ನೂ ಅಮ್ಮನಿಗೆ ಒಪ್ಪಿಸಿದರೆ "ಅದು ಪ್ರೀತಿ ಕಣೆ , ಅವನು ನಿನ್ನ ಪ್ರೀತಿಸ್ತಾಯಿದಾನೆ" ಅಂತ ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಮಾತನಾಡುತ್ತಾಳೆ. ನೋಡು ಪುಟ್ಟಿ ಬರೀ ತರ್ಲೆ , ತಂಟೆ, ನಗು, ತುಂಟಾಟ ಅಂತ ಜೀವನಾನ ಸೀರಿಯಸ್ ಆಗಿ ತಗೊಳದೆ ಇರೊ ನೀನು ಬದುಕಿನ ಸೂಕ್ಷ್ಮತೆಗಳನ್ನು  ಅರ್ಥ ಮಾಡಿಕೊಂಡಿಲ್ಲ. ಪ್ರತಿ ಸಂಬಂಧಗಳಲ್ಲೂ ಅದರದೇ ಆದ ಸೂಕ್ಷ್ಮತೆಗಳಿರುತ್ತವೆ. ನೀನು ಸೂಕ್ಷ್ಮತೆಗಳನ್ನ ಅರ್ಥ ಮಾಡ್ಕೋ ಅಂತ ತಲೆ ನೇವರಿಸಿ ಕಾಫಿ ಕೊಟ್ಟು  ಒಳಗೆ ಹೋದಳು.

ಈಗ ಗೊಂದಲಕ್ಕೆ ಬಿದ್ದಿದ್ದೇನೆ ಮಾರಾಯ . ಇದೆಲ್ಲ ಪ್ರೀತಿನಾ ? ಈ ಮಹಾನ್ ಮೂಡಿ, ಕೋಪಿಷ್ಟೇ, ಜಗಳಗಂಟಿನಾ ಯಾವತ್ತಿಗೂ ನಗು ಮತ್ತು ಸಹನೆಯಿಂದ ಸಹಿಕೊಳ್ತಿಯಲ್ಲ ಅದು ಪ್ರೀತಿನಾ? ತುಂಬಾ ಮಾತಾಡಬೇಕು ಕಣೋ ಅಂತಾ ವಾಕಿಂಗ್ ಕರ್ಕೊಂಡ್ ಹೋಗಿ, ನಿನಗೆ ಚೂರೂ ಮಾತನಾಡಲು ಅವಕಾಶ ಕೊಡದೆ ಪಟ ಪಟಾಂತ ಮಾತಾಡ್ತಾ ಇದ್ರೆ, ಮುಖದಲ್ಲೊಂದು ಸಣ್ಣ ನಗು ಇಟ್ಕೊಂಡು ಸುಮ್ಮನೆ ಕೇಳ್ತಾ ಇರ್ತಿಯಲ್ಲ ಅದು ಪ್ರೀತಿನಾ? ನಂಗೆ ಮಾತಾಡೋ ಮೂಡ್ ಇಲ್ಲ ಅಂತ ಸುಮ್ನೆ ನಡಿತಾ ಇದ್ರೆ ನಮ್ಮಿಬ್ಬರ ಹೃದಯ ಬಡಿತಗಳಷ್ಟೇ ಕೇಳೋ ಅಷ್ಟು ಸೈಲೆಂಟ್ ಆಗಿ ಹೆಜ್ಜೆ ಹಾಕ್ತಿಯಲ್ಲ ನಂಜೊತೆ, ಆ ಹೆಜ್ಜೆಗಳಲ್ಲಿ ಇರೋದು ಪ್ರೀತಿನಾ? 

ಮಾತು - ಮೌನದಲ್ಲಿ ಜೊತೆ ಅಗ್ತಿಯಲ್ಲ ಇದು ಪ್ರೀತಿನಾ?

ನನ್ನ ಸಂತೋಷಗಳಿಗೆ ಜೋತೆಯಾಗ್ತಿಯಲ್ಲ. ಅದು ಪ್ರೀತಿನಾ? ನನ್ನ ಹಾಡುಗಳಿಗೆ ಕಿವಿಯಾಗ್ತಿಯಲ್ಲ ಅದು ಪ್ರೀತಿನಾ ? ಯಾವುದಾದರೂ ಕಾಂಪಿಟಿಶನ್ ಲಿ ಫಸ್ಟ್ ಬಂದ್ರೆ ನನಗಿಂತ ಜಾಸ್ತಿ ಖುಷಿ ಪಡ್ತಿಯಲ್ಲ. ಆ ಖುಷಿಯಲ್ಲಿರೋದು ಪ್ರೀತಿನಾ? ನೆಚ್ಚ್ಚಿನ ಗೆಳತಿ ನಮ್ಮನ್ನೆಲ್ಲ ಬಿಟ್ಟು ಹೋದಾಗ, ನಿನ್ನ ಹೆಗಲ ಮೇಲೆ ತಲೆಯಿಟ್ಟು ಬಿಕ್ಕಳಿಸಿದಾಗ, ಹೊದೊರೆಲ್ಲ ಬರಲ್ಲ. ನಾವೆಲ್ಲಾ ಇಲ್ವಾ ಜೊತೆಗೆ ಅಂತಾ ಬೆನ್ನ ಮೇಲೆ ಕೈ ಇಟ್ಟೆಯಲ್ಲ, ಆ ಸ್ಪರ್ಶದಲ್ಲಿದ್ದುದು ಪ್ರೀತಿನಾ? 

ನಗು - ಅಳು ಎರಡಲ್ಲೂ ಇರ್ತಿಯಲ್ಲ ಅದು ಪ್ರೀತಿನಾ?? 

ಎಲ್ಲರಲ್ಲೂ ಜಗಳ ಆಡಿಕೊಂಡು, ಏನೋ  ತರ್ಲೆ ಮಾಡಿಕೊಂಡು ಬಂದ್ರೆ ಅವಳ ಪರವಾಗಿ ನಾನು  ಸಾರೀ ಕೇಳ್ತೀನಿ, ಅವಳ ಮನೆಲ್ಲಿ ಕಂಪ್ಲೈಂಟ್ ಮಾಡ್ಬೇಡಿ ಅಂತಾ ಹೇಳಿ, ಮನೆಯವರಿಂದ ಬೈಗುಳ ತಪ್ಪಿಸ್ತಿಯಲ್ಲ ಅದು ಪ್ರೀತಿನಾ?? ವಿಪರೀತ ಜ್ವರ ಬಂದು ಆಸ್ಪತ್ರೆಗೆ ಅಡ್ಮಿಟ್  ಅದಾಗ, ನಾಳೆ ಹೊತ್ತಿಗೆ ಸರಿ ಅಗ್ತಿಯಾ ಅಂತಾ ಹಣೆ ಸವರಿ, ನಾಳೆ ಮಳೆ ಬಂದ್ರೆ  ನೆನೆದುಕೊಂಡು ಬರೋವಾಗಾ ಐಸ್ ಕ್ರೀಮ್ ತಿಂದ್ಕೊಂಡು ಬರೋಣ ಅಂತಾ , ಅಮ್ಮಂಗು ಕೇಳಿಸದಷ್ಟು ಸಣ್ಣಕೆ ಪಿಸುಗುಟ್ಟಿ ಕಣ್ಣು ಹೊಡೆದು ಹೋಗಿದ್ಯಲ್ಲ , ಆ ಕಣ್ಣೋಟದಲ್ಲಿ ಇದ್ದಿದ್ದು ಪ್ರೀತಿನಾ ?

ತರ್ಲೆಗಳಲ್ಲೂ ಪಾಲು ಕೇಳೋ ನಿಂದು ಪ್ರೀತಿನಾ??

ಹೆಣ್ಣು ಮಕ್ಕಳು ಹೂ ಮುಡ್ಕೊಂದ್ರೆ ಚೆಂದ ಅಂತಾ ಹೂವಿನಂಗಡಿ ಕಂಡಾಗ ಹೂ ಕೊಡ್ಸ್ತಿಯಲ್ಲ ಅದು ಪ್ರೀತಿನಾ? ಬರ್ತ್ ಡೆ ಗೆ ಬೆಲೆ ಕಟ್ಟೋಕೆ ಆಗದೆ ಇರೋ ಗಿಫ್ಟ್ ಕೊಡೊ ಅಂದಾಗ  ಕುಂಕುಮ ತುಂಬಿದ ಭರಣಿ ಕೊಟ್ಟು  ಬೆಲೆ ಕಟ್ಟು ನೋಡೋಣಾ  ಹುಬ್ಬು ಹಾರಿಸಿದ್ದೆ. ಅದರ ತುಂಬಾ ತುಂಬಿದ್ದು ಪ್ರೀತಿನಾ? ಕಣ್ಣೆದುರಿಗೆ ಇಲ್ಲಾ ಅಂದ್ರು ಕಣ್ಣಂಚಿನಲ್ಲಿ ಇಟ್ಕೊಂಡು ಜೋಪಾನ ಮಾಡ್ತಿಯಲ್ಲ ಇದು ಪ್ರೀತಿನಾ?

ಒಳ್ಳೆ ಗೆಳೆಯ ಅಂತ ಅನಿಸಿಕೊಳ್ತಿಯಲ್ಲ ಇದು ಪ್ರೀತಿನಾ?

  ಪಾಪ ಕೈ ಗಾಯ ತುಂಬಾ ನೋವಾಗ್ತಿರಬೇಕು ಫೋನ್ ಮಾಡಿ ಕೇಳೋಣವಾ ಅನಿಸ್ತಾಯಿದೆ. ಆದ್ರೂ ತಪ್ಪು ನಿಂದೆ. ಅದಕ್ಕೆ  "ಸಾರೀ ಕಣೆ " ಅಂತ ಒಂದು ಮಸ್ಸೇಜ್ ಮಾಡಲಿ ಅಂತ ಮೊಬೈಲ್ ಬೀಪ್  ಗಾಗಿ   ಹುಸಿ ಮುನಿಸಿನಿಂದಾ ಕಾಯ್ತಾ ಇದಿನಲ್ಲ ಇದು ಪ್ರೀತಿನಾ ??

ಮತ್ತೆ ಇದನ್ನೆಲ್ಲಾ ನಿನಗೇ ಹೇಳಬೇಕು ಅನಿಸ್ತಾಯಿದೆ ಇದೆಲ್ಲ ಪ್ರೀತಿನಾ ??


( ಇದು 14/08/2012 ರ ವಿಕೆ ಯಲ್ಲಿ ಪ್ರಕಟವಾದ ಬರಹ )

Thursday, 9 August 2012

ಯಾರಿಗೂ ದಕ್ಕಲಿಲ್ಲ ಇಡಿಯಾಗಿ.


ದೇವಕಿಯ ಕರುಳ ಕುಡಿಯಾಗಿ ..
ಯಶೋಧೆಯ ಕಣ್ಣ  ಬೆಳಕಾಗಿ ...
ತುಂಟ ಗೊಲ್ಲರಲಿ ...
ತಂಟೆ ಮಾಡುವ ಒಡನಾಡಿಯಾಗಿ..
ರುಕ್ಮಿಣಿ ಸಖನಾಗಿ .. 
ದ್ರೌಪದಿ ಸಹೋದರನಾಗಿ ...
ಭಾಮೆಯ ಮುಂಗೋಪದ ನುಡಿಯಾಗಿ ..
ವಿರಹಿ ರಾಧೆಯ ಬಿಸಿಯುಸಿರ ಕಿಡಿಯಾಗಿ ..
ಕಳ್ಳ ಕೃಷ್ಣ  ಕೊನೆಗೂ ...
ಯಾರಿಗೂ   ದಕ್ಕಲಿಲ್ಲ  ಇಡಿಯಾಗಿ ..

Sunday, 5 August 2012

ಈ ಸುಧೀರ್ಘ ಮೌನಕ್ಕಾಗಿ ಒಂದು ಕೋಳಿ ಜಗಳವಾಗಬೇಕಿದೆ.



ಮತ್ತೆ ನಿನ್ನ ನೆನಪಾಗುತ್ತಿದೆ. ನೆನಪಿಗೊಂದು ಕಾರಣ ಬೇಕಲ್ಲ. ನಾಳೆ ಬೆಳಗಾದರೆ ನನ್ನ ಹುಟ್ಟುಹಬ್ಬ. ಹ್ಯಾಪಿ ಬರ್ತ್ ಡೇ. ಅಂತ ಹೇಳಿ ಒಂದು ದೊಡ್ಡ ಬೊಕ್ಕೆ , ಒಂದು ದೊಡ್ಡ ಬಾಕ್ಸ್ ಚಾಕಲೇಟ್ ಬಂದು ನಾಳೆಗೆ ಒಂದು ವರ್ಷ . ನೀ ನನಗೆ ಪ್ರತಿ ವರ್ಷ ಕೊಟ್ಟಿದ್ದು ಅದೇ ಅಲ್ಲವೇ. ಯಾಕೆಂದರೆ ನಿನಗೆ ಗೊತ್ತಿತ್ತು  ನನಗೆ ಕೆಂಪು ಗುಲಾಬಿ  ಮತ್ತು ಚಾಕಲೇಟ್ ತುಂಬಾ ಇಷ್ಟ ಅಂತ. ಯಾವ ಗೆಳೆಯನು ಅತ್ಯಂತ ಶ್ರದ್ಧೆಯಿಂದ ಪ್ರತಿ ಭೇಟಿಯಲ್ಲೂ ಇದನ್ನೆಲ್ಲಾ ತಂದು ಕೊಡಲಾರನೇನೋ.(ಅಭಿ ಕೂಡ ತಂದು ಕೊಡುವುದಿಲ್ಲ ) . ಆದರೆ ನೀ ತಂದು ಕೊಡುತ್ತಿದ್ದೆ ಗೆಳತಿಯಾಗಿ." ಅಯ್ಯೋ public ಲಿ ಕೆಂಪು ಗುಲಾಬಿ , ಚಾಕಲೇಟ್ ಅಂತ ಕೊಡಬೇಡ ಅಂತ ಹೇಳೇ ಅವಳಿಗೆ , ಇಬ್ಬರು ಹುಡುಗಿಯರು ನೀವು, ಜನ ತಪ್ಪು ತಿಳಿತಾರೆ",ಅಂತ ಯಾವಾಗಲು ತಮಾಷೆ ಮಾಡುತ್ತಿದ್ದ ಅಭಿಷೇಕ್ . "ನಿನಗೇನು ಗೊತ್ತು ನಮ್ಮಿಬ್ಬರ Friendship. ನೀ ಸುಮ್ಮನಿರು" ಎನ್ನುತ್ತಿದ್ದೆ. 


ಆಕಸ್ಮಿಕವಾಗಿ ಪರಿಚಯವಾಗಿ ಆತ್ಮಿಯರಾದವರು ನಾವು. ವಾರಕ್ಕೊಮ್ಮೆ  ಭೇಟಿಯಾದರೆ ಆ ವಾರದ ಎಲ್ಲ ಘಟನೆಗಳ ಪೋಸ್ಟ್ ಮಾರ್ಟಂ ನಡೆದಿರುತ್ತಿತ್ತು ಇಬ್ಬರ ಮಾತುಗಳಲ್ಲಿ. ಕೆಲವೊಮ್ಮೆ ಮಾತಿಗಿಂತ ನಗುವಿನದೆ ಜಾತ್ರೆಯಾದರೆ , ಕೆಲವೊಮ್ಮೆ  ನೋವುಗಳದೇ ಯಾತ್ರೆ ಇರುತ್ತಿತ್ತು. ಆದರೆ ಎರಡಕ್ಕೂ ಸರಿಯಾಗಿ ಹೆಗಲು ನೀಡಿದ್ದೆವಲ್ಲೇ ನಾವು. ನೀ ಬಿಡಿಸುವ ಚಂದದ ಚಿತ್ರಗಳು, ನೀ ಹಾಕುವ ಮೆಹೆಂದಿ ನನಗಿಷ್ಟವಾದರೆ , ನಾ ಗೀಚುವ ಕವನಗಳ, ಲೇಖನಗಳ ಮೊದಲ ಓದುಗಳು ನೀನಾಗಿದ್ದೆ. ನಾ ಮೆಹಿಂದಿ ಹಾಕಿಸಿಕೊಂಡು ಸಂಭ್ರಮಿಸಿದರೆ ನೀ ನನ್ನ ಕವನಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ. ನಿನ್ನ ಪ್ರತಿ ಭೇಟಿಯಲ್ಲೂ ನಾ ಹಗುರಾಗುತ್ತಿದ್ದೆ ಅಥವಾ ಉತ್ಸಾಹ ತುಂಬಿಕೊಳ್ಳುತ್ತಿದ್ದೆ. ಪ್ರತಿ ಭೇಟಿಯ ನಂತರವೂ ಕೈಲಿರುತ್ತಿದ್ದ ಚಾಕಲೇಟ್ ಮತ್ತು ಮುಡಿಯಲ್ಲಿರುತ್ತಿದ್ದ ಕೆಂಪು ಗುಲಾಬಿ ನಮ್ಮಿಬ್ಬರ ಭೇಟಿಯ ಸಾಕ್ಷಿ  ಹೇಳುತ್ತಿದ್ದವು. ಅವಳಿಗೆ ಸಿಕ್ಕಿ ಬಂದೆಯಾ ಎಂಬ room mates  ಅಥವಾ ಅಭಿಯ ಪ್ರಶ್ನೆಗೆ ನನ್ನ ಮುಗುಳ್ನಗೆ ಅಥವಾ ನಿನ್ನ ಮೆಹೆಂದಿಗಳೇ ಉತ್ತರವಾಗಿರುತ್ತಿತ್ತು. 

  ಮನೆಯವರೆಲ್ಲ ಅಭಿಯೊಂದಿಗೆ ಮದುವೆ ಫಿಕ್ಸ್ ಮಾಡಿದ್ದಾರೆ ನನಗು ಒಪ್ಪಿಗೆಯಾಗಿದೆ ಎಂದಾಗಾ ನೀ ಚಿಕ್ಕ ಮಗುವಿನಂತೆ ಕುಣಿದು ಸಂಭ್ರಮಿಸಿದ್ದು ಇನ್ನು ಕಣ್ಣ ಮುಂದೆ ಹಾಗೆ ಇದೆ ಕಣೆ. "ನಿನ್ನನ್ನೂ ರಾಜಕುಮಾರಿ ಥರ ರೆಡಿ ಮಾಡ್ತೀನಿ ಕಣೆ. ನಾನೇ ಮೆಹೆಂದಿ ಹಾಕಿ ಕೊಡ್ತೀನಿ" ಅಂತೆಲ್ಲ ನೀ ಖುಷಿ ಪಟ್ಟಿದ್ದು ಅಚ್ಚೊತ್ತಿದೆ. "ಹೌದು ನನ್ನಿಂದ ಕಾಡಿ ಬೇಡಿ ಬರೆಸಿಕೊಂಡ  ೨ ಲವ್ ಲೆಟರ್ಸ್ ಏನಾಯಿತೇ" ಎಂದಾಗ "ಕೊಡುವವರಿಗೆ ಕೊಟ್ಟಾಗಿದೆ , ಉತ್ತರಕ್ಕಾಗಿ ಕಾಯ್ತಾ ಇದ್ದೀನಿ" ಎಂದೂ ಹುಬ್ಬು ಹಾರಿಸಿದ್ದು ನೆನಪಿದೆ ಕಣೆ. ಆದರೆ ಒಂದು ವರ್ಷ, ಒಂದೇ ವರ್ಷದಲ್ಲಿ ಏನೆಲ್ಲಾ ಆಗಿ ಹೋಯಿತು ಅಲ್ಲವಾ. ಎಲ್ಲಿ ಕಳೆದು ಹೋದೆ ನೀನು ?? ಅಥವಾ ನಾನೇ ಕಳೆದುಕೊಂಡೆನಾ.??  

ಅವತ್ತು ನನ್ನ ಹುಟ್ಟಿದ ದಿನ ಬೊಕ್ಕೆ ಮತ್ತು ಚಾಕಲೇಟ್ ಜೊತೆಗೆ ಬಂದು ವಿಶ್ ಮಾಡಿ "ಸಂಜೆ ಸಿಗೋಣ ಒಂದು ಲವ್ ಲೆಟರ್ ಬರೆದು ಕೊಡಬೇಕು ನೀನು" ಎಂದವಳಿಗೆ ಇಲ್ಲ ಕಣೆ ಅಭಿ ಸಿಗುತ್ತೇನೆ ಎಂದಿದ್ದಾನೆ ಎಂದಿದ್ದೆ. ಅದಕ್ಕೆ" ಸರಿ ನಾಳೆ ಲೆಟರ್ ರೆಡಿ ಮಾಡಿಕೊಂಡು ಮೀಟ್ ಮಾಡು" ಎಂದೂ ಕೆನ್ನೆ ಹಿಂಡಿ ಹೋಗಿದ್ದೆ ನೀನು. ಅಂದು ಸಂಜೆ ನನ್ನ ಅಭಿಷೇಕ್ ಜೊತೆ ನೋಡಿಯು ನೋದದವಳಂತೆ ಹೋಗಿದ್ದು ನೀನು. ಯಾಕೆ ಹಾಗೆ ಮಾಡಿದೆ ಎಂದೂ ಕೇಳಲು ರಾತ್ರಿ ಕಾಲ್ ಮಾಡಿದರೆ no answer  ಎಂಬ ರೆಕಾರ್ಡೆಡ್ ಮಂತ್ರ. ಮೆಸೇಜ್ ಮಾಡಿದರು ನಿನ್ನಿಂದ ಉತ್ತರವೇ ಇಲ್ಲ. ಮರುದಿನ ನಿನಗಾಗಿ ಲೆಟರ್ ಹಿಡಿದು ಕಾದವಳಿಗೆ ನಿನ್ನ ಸುಳಿವಿಲ್ಲ.  ಆಮೇಲೆ ಎರಡು  ದಿನದ ನಂತರ ಸ್ವಿಚ್ ಆಫ್  ಎನ್ನುತ್ತಿದ್ದ ನಿನ್ನ ನಂಬರ್ ಕೊನೆಗೆ ನಾಟ್  ಇನ್ ಯುಸ್ ಎಂದೂ ಬರತೊಡಗಿತ್ತು. ನಿನ್ನ ಹಾಸ್ಟೆಲ್ ಬಳಿ ಹೋದರೆ ಖಾಲಿ ಮಾಡಿದ್ದಾರೆ ಎಂಬ ಉತ್ತರ.  ಅವತ್ತಿನಿಂದ ನಿನಗಾಗಿ ಹುಡುಕಿದ್ದೇನೆ, ಹುಡುಕುತ್ತಲೇ ಇದ್ದೇನೆ."ಸಿಗುತ್ತಾಳೆ ಬಿಡು, ಮತ್ತೆ ಬರ್ತಾಳೆ ಕಣೆ, ನಿನ್ನ ತುಂಬಾ ಹಚ್ಚಿಕೊಂಡಿದ್ದಳು ಅವಳು" ಎನ್ನುವ ಯಾರ ಸಮಾಧಾನದ ಮಾತುಗಳಿಗೂ ನಿನ್ನನು ಮರೆಸುವ ಅಥವಾ ನನ್ನ ನೋವನ್ನು ಕಡಿಮೆ ಮಾಡುವ ಶಕ್ತಿ ಇಲ್ಲ. ಆದರೆ ನೀನು ಮಾತ್ರ ನನ್ನನ್ನ ಮರೆತು ಅದ್ಹೇಗೆ ಇದ್ದೀಯ ಅನ್ನೋ ಪ್ರಶ್ನೆ ನನ್ನಲ್ಲಿದೆ ಕಣೆ. 

ಹತ್ತು  ಹೊನ್ನು ಕಟ್ಟುವಲ್ಲಿ  ಕಟ್ಟಬೇಕಾದ ಒಂದು ಮುತ್ತು ಕಣೆ ನನ್ನ ಅಭಿಷೇಕ. ಆದರೆ ಅಂತ ಹುಡುಗನ ತೋಳಿಗೂ ನಿನ್ನ ಮತ್ತು ನಿನ್ನ ಸ್ನೇಹ ಮರೆಸುವ ಶಕ್ತಿಯಿಲ್ಲ. ನನಗೆ ಸ್ನೇಹಕ್ಕೆ ನೀನೆ ಬೇಕು ಕಣೆ. ಹಂಚಿಕೊಳ್ಳುವ ನಗು ಬೇಕಾದಷ್ಟಿದೆ. ನಿನಗೆ ಹೊರಿಸುವ ನೋವಿನ ಮೂಟೆಯಿದೆ. ರಂಗು ಕಳೆದು ಕೊಂಡ ಕೈಗೆ ನಿನ್ನಿಂದ ಮೆಹೆಂದಿ ಹಾಕಿಸಿಕೊಳ್ಳಬೇಕಾಗಿದೆ. ನಿನಗೆಂದೇ ಬರೆದಿಟ್ಟ ಲವ್ ಲೆಟರ್ಸ್ ರಾಶಿಯಿದೆ. ಮತ್ತು ಈ ಸುಧೀರ್ಘ ಮೌನಕ್ಕಾಗಿ ಒಂದು ಕೋಳಿ ಜಗಳವಾಗಬೇಕಿದೆ. ಪ್ಲೀಸ್ ಮತ್ತೆ ಬಾ ನನ್ನ ಜೀವನದಲ್ಲಿ.. ಸ್ನೇಹವೆಂಬುದು ಅರ್ಥ ಕಳೆದುಕೊಳ್ಳುವುದರೊಳಗಾಗಿ... 

ಗೋಡೆಯ ಗಡಿಯಾರ ಹನ್ನೆರಡು ಗಂಟೆ ತೋರಿಸುತ್ತಿದೆ. ಕೈ ಯಾಕೋ ಬಿಸಿ ಬಿಸಿ ಎನ್ನಿಸುತ್ತಿದೆ. ನಿನ್ನ ನೆನಪಿನಲ್ಲಿ ಬಂದ ಕಣ್ಣಿರು ಜಾರಿರಬೇಕು. ಮೊಬೈಲ್ ರಿಂಗ್ ಆಗುತ್ತಿದೆ. ಕಾಲ್ ಅಭಿಷೆಕನಿದಿರಬೇಕು. 

ಅದರೂ ಮನಸ್ಸು ಮಾತ್ರ ನಿನ್ನ ಕೆಂಪು ಗುಲಾಬಿ ಬೋಕ್ಕೆಗಾಗಿ.. ಚಾಕಲೇಟ್ ಬಾಕ್ಸ್ ಗಾಗಿ  ಕಾಯುತ್ತಿದೆ ಕಣೆ...


Saturday, 28 July 2012

ಅಪ್ಪನಂತಹ ಅಪ್ಪನಿಗೆ ...


ಪ್ರೀತಿಯ ಸುಧೆಯ ಧಾರೆಯೆರೆದು.. 
ಬೈಗುಳಗಳ ಚಾಣ ಹೊಡೆದು.. 
ಸಂಸ್ಕಾರದ ಎರಕ ಹೊಯ್ದು.. 
ನನ್ನ ವ್ಯಕ್ತಿತ್ವ ಕಡೆದ ..
ಶಿಲ್ಪಿಯಂತ ಅಪ್ಪನಿಗೆ.. 

ಸುಭಾಷಿತದ ಉಕ್ತಿಯಂತೆ 
ಐದು ವರ್ಷಗಳ ಕಾಲ ಮುದ್ದಿಸಿ.. 
ಆಮೇಲೆ ಹತ್ತು ವರ್ಷ ದಂಡಿಸಿ.. 
ಶೋಡಷದಲ್ಲಿ ಸ್ನೇಹಿತೆಯಂತೆ ಕಂಡ 
ಸ್ನೇಹಿತನಂತ ಅಪ್ಪನಿಗೆ..

ಹಂಸ ಕ್ಷೀರ ನ್ಯಾಯದಂತೆ 
ನೋವೆಲ್ಲ ತನ್ನಲ್ಲಿಟ್ಟುಕೊಂಡು..
ನಗು ಮಾತ್ರ ನಮ್ಮ ಪಾಲಿಗಿರಿಸಿ.. 
ಅಸೆ ಕನಸುಗಳಿಗೆಲ್ಲ ಬೆಂಬಲದ ನೀರುಣಿಸಿ 
ಇಡುವ ಪ್ರತಿ ಹೆಜ್ಜೆಗೂ ಅಂತಃಶಕ್ತಿಯಾಗುವ
ಅಪ್ಪನಂತಹ ಅಪ್ಪನಿಗೆ ...

"ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು" 

Monday, 9 July 2012




ಜಲವರ್ಣದಂತೆ....

ಗಿರಿ ತುದಿಗೆ ಕವಿದ 
ಮಂಜು ಕಾಣುತಿಹುದು ..
ಅಂಬರ ಚುಂಬಿಸುವ ಆಸೆಗೆ..
ಏಣಿ ಹಾಕುವಂತೆ..

ಕುಳಿತು ಕೇಳಲು ಕಿವಿಗಿಂಪು 
ನೀಡುತಿಹುದು.. 
ಮುಸಲಧಾರೆಯ ಸದ್ದು.. 
ಪುಟ್ಟ ಪಾದದಿ ನಲಿವ 
ಗೆಜ್ಜೆನಾದದಂತೆ.. 

ಮುಂಗಾರಲ್ಲಿ ಮಿಂದೆದ್ದ 
ಮಲೆನಾಡು ಕಂಗೊಳಿಸುತಿಹುದು.. 
ಕವಿಯೆದೆಯಲ್ಲಿ ಅರಳಿದ 
ಕಾವ್ಯ ಕಲ್ಪನೆಯಂತೆ.. 
ನುರಿತ ಕಲಾವಿದನ 
ಕೈಲರಳಿದ ಸುಂದರ ಜಲವರ್ಣದಂತೆ...