Monday, 14 May 2012

ಎಲ್ಲೆಲ್ಲಿಯ ಮೈತ್ರಿಯ ನಂಟೋ..?? ಯಾರ್ಯಾರಲ್ಲಿ ಪ್ರೀತಿಯ ಋಣದ ಗಂಟೋ..?? "ಹ್ಮ್ಹ್ ಆ ಚೀಲ ಇಲ್ಲಿ ಕೊಡು. ಏ ನಾಣಿ , ಎಂಕಟ ಆ ಕೂಸಿನ್ ಹಿಡಿರಾ , ಚೀಲ ತುಂಬುವಾ. ನಾಳೆ ಸಂತೆಯಲ್ಲಿ ಮಾರಿ ಬರ್ತೆ". ಹಿಂಗಂತ ನಮ್ಮ ಮನೆಗೆ ಕೊಳೆ ಅಡಿಕೆ ಕೊಳ್ಳಲು ಬರುತ್ತಿದ್ದ ಸಾಬಿಯೊಬ್ಬ ನನ್ನನ್ನು ಹೆದರಿಸುತ್ತಿದ್ದ. ಆಗ ನಾನು ಆರನೇ ತರಗತಿಲ್ಲಿದ್ದೆ. ಅವನ ಕೆಂಪು ಕಣ್ಣು, ಉದ್ದ ಗಡ್ಡ, ಆ ಟೋಪಿ, ದೊಗಲೆ ಶರಾಯಿ, ಎತ್ತರದ ಮೈಕಟ್ಟು ಎಲ್ಲ ನನ್ನನ್ನು ತುಂಬಾ ಹೆದರಿಸಿದ್ದವು. ಅವನು ಬಂದರೆ ನಾ ಮನೆಯಿಂದ ಹೊರಗೆ ಬರುತ್ತಲೇ ಇರಲಿಲ್ಲ. ದೇವರ ಮನೆಯಲ್ಲೇ ಇರುತ್ತಿದ್ದೆ. ಆದರೂ ಹೊರಗೆ ನಿಂತು ಹೀಗೆಲ್ಲ ಮಾತನಾಡಿ ಹೆದರಿಸಿ ಹೋಗುತ್ತಿದ್ದ. ಅವನಿಂದಾಗಿ ನನ್ನಲ್ಲಿ ಮುಸ್ಲಿಮರೆಂದರೆ ಮಕ್ಕಳು ಹಿಡಿಯುವವರು, ಮಾರಾಟ ಮಾಡುತ್ತಾರೆ ಎಂಬ ನಂಬಿಕೆ ಬಂದು ಹೋಗಿತ್ತು. ನಾನು ಮುಸ್ಲಿಮರನ್ನು ಕಂಡರೆ ಹೆದರುತ್ತಿದ್ದೆ. ಓಡುತ್ತಿದ್ದೆ.

ಒಂದು ಶನಿವಾರ ಶಾಲೆಯಿಂದ ಮನೆಗೆ ಬರುತ್ತಿದ್ದೆ. ಮಧ್ಯಾನ್ಹ  ಸುಮಾರು ೧ ಗಂಟೆಯ ಸಮಯ. ಒಂದು ಸೈಕಲ್ ವಾರಸುದಾರರಿಲ್ಲದೆ  ದಾರಿಯಲ್ಲಿ ಬಿದ್ದಿತ್ತು. ಹತ್ತಿರ ಹೋಗಿ ನೋಡಿದರೆ ಪಕ್ಕದಲ್ಲೇ ಒಬ್ಬ ಸಾಬಿ ತುಂಬಾ ಗಾಯವಾಗಿ ಬಿದ್ದಿದ್ದಾನೆ. ಮೊಳಕಾಲಿಗೆ ಗಾಯವಾದದ್ದರಿಂದ ಅವನಿಗೆ ನಿಲ್ಲಲೂ ಆಗುತ್ತಿರಲಿಲ್ಲ. ನಾನು ಅವನು ಮುಸ್ಲಿಂ ಎಂದು ಹೆದರಿ ಓಡಿ ಬಂದೆ. ಒಂದು ಸ್ವಲ್ಪ ಮುಂದೆ ಬಂದಿರಬಹುದು ಅವನನ್ನು ನೆನೆದು ಪಾಪ ಎನ್ನಿಸಿತು. ಮತ್ತೆ ಹಿಂದೆ ಅವನಲ್ಲಿಗೆ ಓಡಿ ಹೋದೆ. ಕುಡಿಯಲು ನೀರು ಕೊಟ್ಟು ಅವನ ಗಾಯವನ್ನು ನೀರಿನಿಂದ ತೊಳೆದು ಅದಕ್ಕೆ ನನ್ನದೇ ಖರ್ಚಿಪ್ಹ್ ಕಟ್ಟಿದೆ. ನಮ್ಮ ಮನೆ ಹತ್ತಿರವೇ ಇದ್ದಿದ್ದರಿಂದ ನಿಧಾನಕ್ಕೆ ಮನೆಗೆ ನಡೆಸಿಕೊಂಡು ಬಂದೆ.ಅಮ್ಮಾ  ಅವನ ಗಾಯಕ್ಕೆ ಔಷಧಿ ನೀಡಿ, ಅವನಿಗೆ ಊಟ ಹಾಕಿದರು. ಅವನು ಊಟ ಮಾಡಿ ನಿಧಾನವಾಗಿ ಸೈಕಲ್ ತಳ್ಳಿಕೊಂಡು ಹೊರಟು ಹೋದ. 

ಮುಂದಿನ ಶನಿವಾರ ಪೊಂವ್.. ಪೊಂವ್.. ಎಂಬ ಶಬ್ದದೊಂದಿಗೆ ಒಂದು ಸೈಕಲ್ ಮನೆ ಮುಂದೆ ಬಂದು ನಿಂತಿತು. ನೋಡಿದರೆ ಅದೇ ಸಾಬಿ. ಅವನೊಬ್ಬ ಐಸ್ ಕ್ಯಾಂಡಿ ಮಾರುವವನಾಗಿದ್ದ. ನನ್ನನ್ನು ಹತ್ತಿರ ಕರೆದ. ಹೆದರುತ್ತಲೇ ಹತ್ತಿರ ಹೋದವಳಿಗೆ, ಇದು ನನಗೆ ನೀರು ಕೊಟ್ಟ ಪುಟ್ಟ ಕೈ ಗೆ ಎಂದು ಐಸ್ ಕ್ಯಾಂಡಿ ಕೊಟ್ಟಿದ್ದ. ಮತ್ತೆ ಈ ಕೈ ಗೆ ಎಂದು ನನ್ನ ಎಡಗೈ ತೋರಿಸಿದ್ದೆ. ಇದು ಈ ಕೈಗೆ ಎಂದು ಅವನು ಮತ್ತೊಂದು ಐಸ್ ಕ್ಯಾಂಡಿ ಕೊಟ್ಟು ಹೋಗಿದ್ದ. ಅವತ್ತಿಂದ ಅದೇ ರೂಢಿಯಾಗಿತ್ತು. 
ಪ್ರತಿ ಶನಿವಾರ ಸೈಕಲ್ ನಿಲ್ಲಿಸಿ ನನ್ನ ಎರಡು ಕೈಗಳಿಗೆ ಒಂದೊಂದು ಐಸ್ ಕ್ಯಾಂಡಿ ನೀಡಿ ಹೋಗುತ್ತಿದ್ದ. ಹಣ ತೆಗೆದು ಕೊಳ್ಳುತ್ತಲೂ ಇರಲಿಲ್ಲ. ನನಗೆ "ಗಿಡ್ಡ ಲಂಗದ ಉದ್ದ ಜಡೆಯ ಪುಟಾಣಿ " ಎನ್ನುತ್ತಿದ್ದ. ಆಮೇಲೆ ನನ್ನ ಶಾಲೆ ಅಲ್ಲಿ ಮುಗಿದು ಹೈಸ್ಕೂಲ್ , ಕಾಲೇಜು, ಕೆಲಸಗಳಲ್ಲಿ ಐಸ್ ಕ್ಯಾಂಡಿಯ ನೆನಪೇ ಮರೆತು ಹೋಗಿತ್ತು. ಇನ್ನು ಕೊಡುತ್ತಿದ್ದವನ ನೆನಪೆಲ್ಲಿರಬೇಕು. 

ಮೊನ್ನೆ ಶನಿವಾರ ಮನೆಗೆ ಹೋಗಿದ್ದೆ. ಅಮ್ಮನೊಂದಿಗೆ ಹಲಸಿನ ಸೊಳೆ ಬಿಡಿಸುತ್ತ ಕುಳಿತವಳಿಗೆ ಪೊಂವ್.. ಪೊಂವ್.. ಎಂಬ ಸೌಂಡ್ ಕೇಳಿಸಿತು. ಅಮ್ಮಾ  ಐಸ್ ಕ್ಯಾಂಡಿ ಬಂತು ಎಂದಳು. ಪ್ರಜ್ಞಾ "ಅಕ್ಕ ಐಸ್ ಕ್ಯಾಂಡಿ ತಿಂಬನ" ಎನ್ನುತ್ತಾ ರಸ್ತೆ ಗೆ ಓಡಿ ಅವನನ್ನು ನಿಲ್ಲಿಸಿದಳು. ನಾನು ಹಣ ತೆಗೆದುಕೊಂಡು ಅವಳ ಹಿಂದೆ ಹೋದೆ. ಐಸ್ ಕ್ಯಾಂಡಿಯವ ನನ್ನನ್ನೇ ಒಂದೆರಡು ನಿಮಿಷ ಗಮನಿಸಿ ನೀನು ನನ್ನ "ಗಿಡ್ಡ ಲಂಗದ ಉದ್ದ ಜಡೆಯ ಪುಟಾಣಿ " ಅಲ್ಲವೇನೇ? ಎಷ್ಟು ದೊಡ್ಡವಳಾಗಿ ಬಿಟ್ಟಿದ್ದಿಯೇ ಎಂದ. ಹೌದು ಅದು ಅವನೇ ಆಗಿದ್ದ. ಸೈಕಲ್ ಬದಲು ಬೈಕ್ ಬಂದಿತ್ತು. ಗಡ್ಡ ನೆರೆತಿತ್ತು.  ನನ್ನ ನೋಡಿ "ಲಂಗ ಉದ್ದವಾಗಿದೆ ಜಡೆ ಗಿಡ್ಡವಾಗಿ ಬಿಟ್ಟಿದೆಯಲ್ಲೇ" ಎಂದು ತಮಾಷೆ ಮಾಡಿದ  . ನಾನು ಕೊಟ್ಟ ಹಣ ಸಹಿತ ತೆಗೆದುಕೊಳ್ಳದೆ  ಒಂದು ಐಸ್ ಕ್ಯಾಂಡಿ ಕೊಟ್ಟವನು "ಆ ಕೈ ಗೆ ಬೇಡವೇನೆ" ಇನ್ನೊಂದು ಕೈಗೂ ಐಸ್ ಕ್ಯಾಂಡಿ ಕೊಟ್ಟು  ನನ್ನ ಹಣೆ ಮುಟ್ಟಿ "ದೇವರು ನಿನ್ನನ್ನೂ ನೂರು ಕಾಲ ಸುಖವಾಗಿಟ್ಟಿರಲಿ ಮಗಳೇ " ಎಂದು ಆಶೀರ್ವದಿಸಿ ಪೊಂವ್.. ಪೊಂವ್.. ಎಂದು ಸದ್ದು ಮಾಡುತ್ತಾ ಹೊರಟು ಹೋದ. ಏನು ಮಾಡಬೇಕು.. ಏನು ಹೇಳಬೇಕು ಎಂದೇ ತಿಳಿಯಲಿಲ್ಲ.

ಅವನು ಕೊಟ್ಟ ಐಸ್ ಕ್ಯಾಂಡಿ ಬಾಯಿ ತಂಪು ಮಾಡುತ್ತಾ ಆ ಬಿಸಿಲಲ್ಲಿ ಕರಗಿ ಕೈ ತೊಯಿಸುತ್ತಿದ್ದರೆ; ಅವನ ಮುಗ್ದ ಮನಸಿನ ಹಾರೈಕೆಗೆ ಮನಸು ತಂಪಾಗಿ ಅವನನ್ನೇ ನೋಡುತ್ತಿದ್ದ ಕಣ್ಣುಗಳಲ್ಲಿ ಬಂದ ನೀರು ಕೆನ್ನೆ ತೋಯಿಸಿತ್ತು...

ಬಹು ದೂರದ ಬದುಕ  ಪಯಣದಲ್ಲಿ ಎಲ್ಲೆಲ್ಲಿಯ  ಮೈತ್ರಿಯ ನಂಟೋ..?? ಯಾರ್ಯಾರಲ್ಲಿ  ಪ್ರೀತಿಯ ಋಣದ ಗಂಟೋ..??

Thursday, 3 May 2012

ನಾಳೆಗಾಗಿ ಬೇಗನೆ ಒಂದು ಕನಸು ಬೇಕಿದೆ...ಇವತ್ತಿನ ಬೆಳಗು ಎಲ್ಲದರಂತಿಲ್ಲ.  ನಿಜ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ ಪ್ರಪಂಚ. ನಿನ್ನೆಯಂತೆ ಇವತ್ತಿಲ್ಲ; ಇವತ್ತಿನಂತೆ ನಾಳೆಗಳು ಇರುವುದಿಲ್ಲ. ನಿನ್ನೆ ಹೀಗಿದ್ದೆವು, ಹೀಗಿತ್ತು ಎನ್ನುವ ನೆನಪುಗಳೇ ಶಾಶ್ವತ. ನಾಳೆಗಳು ಹೇಗೋ ಎಂಬ ಕಲ್ಪನೆಯಲ್ಲೇ ಸಾಗುವುದು ಬದುಕು. ಪ್ರತಿ ಇಂದಿನಲ್ಲೂ ನಾಳೆಯದೊಂದು ಕಲ್ಪನೆ, ಒಂದು ಕನಸು. ಅದು ನಾಳೆಯು ಬದುಕಬೇಕು ಎಂಬುದಕ್ಕೊಂದು ಕಾರಣ. 

ಆದರೆ ಇವತ್ತೇಕೋ ನಾಳೆಗಳ ಬಗೆಗೆ ಕನಸುಗಳೇ ಹುಟ್ಟುತ್ತಿಲ್ಲ. ಎಲ್ಲ ಸಾಕೆನಿಸುತ್ತಿದೆ. ಎಲ್ಲವನ್ನು ತೊರೆದು ಎಲ್ಲಾದರು ದೂರ ಹೋಗಿ ಒಂಟಿಯಾಗಿ ಬದುಕಬಾದೇಕೆ ಎನಿಸುತ್ತಿದೆ. ಒಂದಿಷ್ಟು ಪುಸ್ತಕಗಳು, ಒಂದಿಷ್ಟು ಬಣ್ಣಗಳು, ಹಾಳೆಗಳು, ಹಳೆ ಹಾಡುಗಳು, ಭಾವಗೀತೆಗಳಲ್ಲಿ ಕಳೆದು ಹೋಗಬೇಕೆನಿಸುತ್ತಿದೆ.

ಇಂದೇಕೋ ಮಾತು ಮಾತಿಗೂ ಅಳು ಬರುವಂತಿದೆ. ಅಮ್ಮನಿಗೆ ಕಾಲ್ ಮಾಡಿದರೂ ಅವಳ ದ್ವನಿ ಕೇಳುತ್ತಾ ಅಳುವೇ ಮೇಲಾಗಿ ಮಾತನಾಡಲಾರದೆ ಹೋಗುತ್ತಿದ್ದೇನೆ. ಕಾರಣ ಗೊತ್ತಿಲ್ಲ.

ಇವತ್ತೇಕೆ ಹೀಗೆ?? ಅಥವಾ ನಾನೇಕೆ ಹೀಗೆ ?? ನಿರ್ದರಿಸಲಾಗದೆ ಹೋಗುತ್ತಿದ್ದೇನೆ..

ನಾಳೆಗಾಗಿ ಬೇಗನೆ ಒಂದು ಕನಸು ಬೇಕಿದೆ... 

ಮೊಳಕೆ ಒಡೆಯಬೇಕಿದೆ.. ಮತ್ತೆ ಬದುಕಬೇಕಿದೆ..