Monday 31 December 2012

ವರುಷವೊಂದು ಉರುಳಿದ್ದು ...


ಸ್ವಲ್ಪ ಅತ್ತಿದ್ದು ... ಜಾಸ್ತಿ ನಕ್ಕಿದ್ದು ..
ಒಂಚೂರು ಸಾಧನೆ ...
ಸಿಕ್ಕ ಬೆಟ್ಟದಷ್ಟು ಪ್ರೀತಿ ..
ನಮ್ಮವರೇ ನಮಗೆ ಮೋಸ ಮಾಡಿದ್ದು ..
ಯಾರೋ ನಮ್ಮವರಾಗಿದ್ದು ..
ಪರಿಚಿತರು ಅಪರಿಚಿತರಾದದ್ದು ..
ಅಪರಿಚಿತರು ಪರಿಚಿತರಾದದ್ದು ..
ದಿನಗಳು ಬದಲಾದಂತೆ ..
ಬದುಕು ಬದಲಾದದ್ದು ...
ಎಲ್ಲವೂ ಈಗ ಇತಿಹಾಸವೇ ..
ವರುಷವೊಂದು ರೆಪ್ಪೆ ಮಿಟುಕಿಸುವಂತೆ ಉರುಳಿ ಹೋಯಿತು ...

Wednesday 19 December 2012

ನೀ ಬಂದ ದಿನ ಅದರಲ್ಲೊಂದು ಚಂದದ ಹೂ ಅರಳಿರುತ್ತದೆ.. ನಮ್ಮ ಪ್ರೀತಿಗಾಗಿ...



ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ.... ಎಂಬ ಬೇಂದ್ರೆಯವರ ಹಾಡು ಕೇಳುತ್ತಾ ಸಮುದ್ರಕ್ಕೆ ಮುಖ ಮಾಡಿ  ನಿಂತಿದ್ದೆ ಈ  ಸಂಜೆ. ನಿನಗಿಷ್ಟ ಆ ಹಾಡು .. ಆ ಕಾರಣಕ್ಕೆ ಅದು ನನಗೂ ಇಷ್ಟ.. ನಿನ್ನೊಂದಿಗಿನ ಬೆಚ್ಚನೆಯ, ಚುಚ್ಚುವ , ಕಾಡುವ ನೆನಪುಗಳಿಗೆಲ್ಲ ಯಾವಾಗಲೂ ನಾಂದಿ ಹಾಡುವುದು ನೀನು. "ನೀನು" ಎಂಬೊಂದು ಶಬ್ದ ನೆನಪಾದರೆ ಸಾಕು ಹಿಂದೆಯೇ ಸಾವಿರ ನೆನಪುಗಳ ಹಣತೆಯ ಸಾಲುಗಳು ಹೊತ್ತಿಕೊಳ್ಳುತ್ತವೆ. ಕೆಲವು ಬೆಳಗುತ್ತವೆ, ಕೆಲವು ಸುಡುತ್ತವೆ, ಕೆಲವು ಆರುತ್ತವೆ. ಎಲ್ಲವನು ಹರವಿಕೊಂಡು ಒಮ್ಮೆ ನೋಡುತ್ತೇನೆ. ಮತ್ತೆ ಎಲ್ಲವನ್ನು ಜತನದಿಂದ ಎತ್ತಿಡುವ ಹೊತ್ತಿಗೆ ಕೆಲವೊಮ್ಮೆ ನಗುವಿನ ಹಣತೆಗೆ ಕಣ್ಣೀರೇ ತೈಲವಾಗಿರುತ್ತದೆ..
 ಯಾವಾಗಲೂ ಜೋತೆಗಿರುತ್ತೇನೆ ಎಂದು ಮಾಡಿದ ಆಣೆ ಪ್ರಮಾಣವನ್ನು ಅದೆಷ್ಟು ಶ್ರದ್ಧೆಯಿಂದ ನಿರ್ವಹಿಸುತ್ತೀಯಾ. ಒಂಟಿತನದಲ್ಲಿ ನೀನಿಲ್ಲವೆಂದರೆ ನಿನ್ನ ನೆನಪುಗಳಾದರೂ ಜೋತೆಗಿರುತ್ತವೆ. ಪ್ರೀತಿಯ ಎಲ್ಲ ಮುಖಗಳನ್ನೂ  ತೋರಿದ್ದು ನಿನ್ನ ಪ್ರೀತಿ.. ಎಲ್ಲವನ್ನೂ ಮೀರಿದ್ದು ನಿನ್ನ ಪ್ರೀತಿ.. ಜೀವನದಲ್ಲಿ ಎಲ್ಲದರ ಜೊತೆಗೆ ನಿನ್ನನ್ನೂ  ಸಹಿಸಿಕೊಳ್ಳುವ ತಾಳ್ಮೆ ಕಲಿಸಿದ್ದು ನಿನ್ನ ಪ್ರೀತಿ. ಅದಕ್ಕೆ ಈ ದೂರ ಮತ್ತು ವಿರಹವನ್ನು ತಾಳ್ಮೆಯಿಂದ ಸಹಿಸಿಕೊಳ್ಳುತ್ತಿರುವುದು. ನೆನಪಿರಲಿ ಸಹನೆಗೂ ಮಿತಿಯಿದೆ.ಈ ದೂರ ಒಮ್ಮೊಮ್ಮೆ  ನೀನೆಲ್ಲಿ ನನ್ನ ಮರೆತೆಯೋ ಎಂಬ ಅನುಮಾನವನ್ನು ಹೆಡೆಯಾಡುವಂತೆ ಮಾಡಿ ಬಿಡುತ್ತದೆ. ಬೆನ್ನ ಹಿಂದೆಯೇ ನನ್ನ ಮರೆತರೆ ನಿನ್ನದೆಲ್ಲಿದೆ ಬದುಕು ? ಎಂಬ ನಂಬಿಕೆ ಕೈ ಹಿಡಿಯುತ್ತದೆ.ಎಡಗೈಯ್ಯ ಕಿರು ಬೆರಳು ಕೂಡಾ ನಿನ್ನ ಹೆಸರನ್ನು ಸರಾಗವಾಗಿ ಗೀಚಲು ಕಲಿತಿದೆ. ಯಾಕೋ ನಿನ್ನೊಂದಿಗಿನ ಬದುಕಿನ ಚಿತ್ರಗಳೆಲ್ಲ ಬಣ್ಣ ಕಳೆದುಕೊಂಡು ಮಸುಕಾಗಿವೆ  ಎನಿಸುತ್ತಿದೆ. ಅವೆಲ್ಲ ನಿನ್ನ ಕಣ್ಣ ಬೆಳಕ ಕಂಡೊಡನೆ ಮತ್ತೆ ಹೊಳೆಯುತ್ತವೆ ಬಿಡು. ಕನಸಿನ ಲೋಕದಲ್ಲಿ ನಾವೇ ನಿರ್ಮಿಸಿದ ನಮ್ಮ ಮುಂದಿನ ಬದುಕಿನಂಗಳಕ್ಕೆ ಆಗಾಗ ಹೋಗಿ ಬರುತ್ತಿದ್ದೇನೆ ಒಂಟಿಯಾಗಿ. ಆಗೆಲ್ಲ ನನ್ನ ಕೈ ಬೆರಳುಗಳ ನಡುವಿನ ಅಂತರವನ್ನು ತುಂಬಲು ನೆನ್ನ ಬೆರಳುಗಳಿರಬೇಕಿತ್ತು  ಎನಿಸುತ್ತದೆ. ಕನಸಿನೂರ ಕಾವಲುಗಾರನಿಗೆ ಮಾತು ಕೊಟ್ಟು ಬಂದಿದ್ದೀನಿ ,ಮುಂದಿನ ಸಲ ನಿನ್ನೊಂದಿಗೆ ಬರುತ್ತೇನೆ ಎಂದು. ನನ್ನ ಮಾತು ಉಳಿಸುವ ಜವಾಬ್ದಾರಿ ನಿನ್ನ ಮೇಲಿದೆ ನೆನಪಿರಲಿ...

ನಂಬಿಕೆಯಿಂದ ನೀರೆರೆಯುತ್ತಿರುವ ನಿರೀಕ್ಷೆಯ ಗಿಡ ನೀ ಬರುವ ದಿನಗಳು ಹತ್ತಿರವಾದಂತೆಲ್ಲ ದಿನಕ್ಕೆರಡು ಎಲೆಗಳಂತೆ ಚಿಗುರುತ್ತಿದೆ. ಯಾವಾಗ ಮೊಗ್ಗು ಬಿಡುವುದೋ ಎಂದು ಕಾಯುತ್ತಿದ್ದೇನೆ. ಅದೇನೇ ಇರಲಿ ನೀ ಬಂದ ದಿನ ಅದರಲ್ಲೊಂದು ಚಂದದ ಹೂ ಅರಳಿರುತ್ತದೆ.. ನಮ್ಮ ಪ್ರೀತಿಗಾಗಿ...

(ಇದು ೨೭.೧೧.೨೦೧೨ ರ ಲವಲವಿಕೆಯಲ್ಲಿ ಪ್ರಕಟವಾಗಿತ್ತು )

Wednesday 5 December 2012

ಒಂಟಿ ಮರ ಮತ್ತು ಖಾಲಿ ಬೆಂಚು




ಇರೋನೊಬ್ಬ ಮಗ ನೀನು , ನಿನ್ನತ್ರ ಹೊಸದಾಗಿ ಏನಾದ್ರೂ ಮಾಡು ಅಂತ ಹೇಳ್ತಾ ಇಲ್ಲ . ನಾ ಮಾಡಿಟ್ಟ ಈ ಜಮೀನು ಮನೆ , ನೀ ನೋಡಿಕೊಂಡು ಹೋದರೆ ಸಾಕು ಎನ್ನುತ್ತಿದ್ದೇನೆ .ಅಷ್ಟೂ ಆಗಲ್ವಾ  ಅಂತ ಕೇಳಿದ ಅಪ್ಪನಿಗೆ ಹೋಗಪ್ಪಾ ಈ ಹಾಳು ಊರಲ್ಲಿ ಏನಿದೆ ಅಂತ ಇರಲಿ ? "ಇಲ್ಲಿರಲ್ಲ" ಎಂದು ಅಪ್ಪನೊಡನೆ ಜಗಳ ಆಡಿ  ಬಂದವನು  ನನ್ನಿಷ್ಟದ ಒಂಟಿ ಮರದ ಕೆಳಗಿನ ಖಾಲಿ ಬೆಂಚ್ ಹತ್ತಿರ ಬಂದಿದ್ದೆ. ಒಂದು ಸ್ವಲ್ಪ ಸಮಾಧಾನಿಸಿಕೊಳ್ಳಬೇಕಿತ್ತು ನನ್ನನ್ನು ನಾನು. ಆದರೆ ಅವತ್ತು ಅದು ಖಾಲಿ ಇರಲಿಲ್ಲ .ಅಲ್ಲಿ ನೀನಿದ್ದೆ . ಅದ್ಯಾವ ಪರಿ ನೀ ಚಲನೆ ಇಲ್ಲದೆ ಕುಳಿತಿದ್ದೆ ಎಂದರೆ ಕಣ್ಣ ರೆಪ್ಪೆಗಳ ಚಲನೆಯಿಂದಾಗಿ ನಿನಗೂ ಜೀವವಿದೆ ಎಂದು ನಾ ತೀರ್ಮಾನಿಸಿದ್ದೆ. ಏನು ನೋಡ್ತಿದ್ದೀರಾ ? ಎಂದು ಕೇಳಿದ್ದೆ ಧೈರ್ಯ ಮಾಡಿ, "ಸೂರ್ಯ ಮುಳುಗುತ್ತನಾ ಅಂತ" ..ಉತ್ತರ ಬಂತು ."ಅಲ್ಲಿ ಮುಳುಗಲ್ಲ ಬಿಡಿ.."ಎಂದರೆ "ಯಾಕ್ರೀ ಇವತ್ತು ಸೂರ್ಯ ಮುಳುಗಲ್ಲ ಅಂತ ನಿಮಗೆ ಹೇಳಿದ್ದಾನಾ?"  ಇಲ್ಲ, ಇದು ಪೂರ್ವ ನಮ್ಮೂರಲ್ಲಿ ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಾನೆ. ಊರಿಗೆ ಹೊಸಬರಾ ? ಅಂತ ಕೇಳಿದೆ.  ಇಲ್ಲಾರಿ ನಿನ್ನೇನೆ ಬಂದ್ವಿ, ಅಪ್ಪ ಹೆಲ್ತ್ ಡಿಪಾರ್ಟ್ಮೆಂಟ್ ಲಿದ್ದಾರೆ, ಈ ಊರಿನ ಅರ್ದ ಬೀದಿಗಳು ಗೊತ್ತಾಗಿವೆ. ಬೆಳಿಗ್ಗೆ ತಾನೇ ಗುಡಿಗೆ ಹೋಗಿ ನಿಮ್ಮೂರ ದೇವ್ರನ್ನ ಫ್ರೆಂಡ್ ಮಾಡಿಕೊಂಡು ಬಂದಿದ್ದೀನಿ ಅಂತ ಪಟ ಪಟಾಂತ ಹೇಳಿದ್ದು ಕೇಳಿ ನಗು ಬಂದಿತ್ತು. ನಿಮ್ಮೂರಲ್ಲಿ  ಇದೇ ಪಶ್ಚಿಮ ಆಗಬಹುದಿತ್ತು ಗುಡ್ಡಗಳ ನಡುವೆ ಚಂದದ ಸೂರ್ಯಾಸ್ತ  ನೋಡಬಹುದಿತ್ತು ಎಂದಾಗ , ಈಗಲೂ ಸೂರ್ಯೋದಯ ನೋಡಬಹುದು ಎಂದೆ. ಹೌದಲ್ವ ಎಂದು ಕಣ್ಣರಳಿಸಿ .. ಸರಿ ಬರ್ತಿನ್ರಿ .. ಶಾಸ್ತ್ರಿಗಳ ಮನೆಗೆ ಹೋಗಿ ನಾಳೆ ಸೂರ್ಯೋದಯ ಎಷ್ಟು ಹೊತ್ತಿಗೆ ಎಂದು ಕೇಳಬೇಕು ಎನ್ನುತ್ತಾ ಓಡಿ  ಹೋದವಳ ನೋಡುತ್ತಾ ನಿಂತವನಿಗೆ, ಹೆಸರೇನು ? ಎಂದು ಕೇಳಬೇಕೆಂಬ ಪ್ರಶ್ನೆ ಗಂಟಲಲ್ಲೇ ಉಳಿದಿತ್ತು. ಹತ್ತು ನಿಮಿಷದಿಂದ ಎಲ್ಲೋ ಬೇರೆ ಲೋಕದಲ್ಲೇ ಇದ್ದೆ ಎಂಬ ಅನುಭವ ಬಂದಿತ್ತು . ಅದ್ಯಾವುದೋ ಒಂದು ಆಕರ್ಷಣೆ ಮೊಳಕೆಯೊಡೆದಿತ್ತು. ಮನೆಗೆ ಬಂದು ಅಮ್ಮನಲ್ಲಿ ನಾಳೆ ಸೂರ್ಯೋದಯ ಎಷ್ಟು ಹೊತ್ತಿಗೆ ಎಂದು ಕೇಳಿ ಅಲಾರಂ ಸೆಟ್ ಮಾಡಿ ಮಲಗಿದ್ದೆ . 

ಬೆಳಿಗ್ಗೆ ಸೂರ್ಯೋದಯ ನೋಡಲು ಬಂದರೆ ಸೂರ್ಯನಿಗಿಂತ ಮೊದಲು ಕಾಣಿಸಿದ್ದು ನೀನು .ಬಂದ್ರಾ .. ಇನ್ನು ಐದೇ ನಿಮಿಷ ಬಾಕಿ ಅಂತ ಗುಡ್ಡಗಳ ನಡುವೆ ಕಣ್ಣಿಟ್ಟು ಕುಳಿತವಳ ನೋಡುವುದೇ ಮಜವಾಗಿತ್ತು ನನಗೆ.ಸೂರ್ಯೋದಯದ ಮೊದಲ ಕಿರಣಗಳು ನಿನ್ನ ಮುಖದ ಮೇಲೆ ಬಿದ್ದು , ಅದು ಬಂಗಾರ ವರ್ಣವಾದಾಗಲಂತೂ ದೇವತೆಯಂತೆ ಕಂಡಿದ್ದೆ ನೀನು. ಏನು ಓದಿದ್ದು ನೀವು ಎಂದು ಕೇಳಿದ್ದೆ, ಏನಾದರೂ ಮಾತಾನಾಡಬೇಕೆಂದು. ಡಿಗ್ರೀ ಮುಗಿದಿದೆ ಎಂದೆನೀನು. ಡಾಕ್ಟರ್ ಮಗಳು ಡಾಕ್ಟರ್ ಅಥವಾ ಇಂಜಿನಿಯರ್ ಇರಬೇಕು ಅಂದುಕೊಂಡೆ ಎಂದರೆ.ನನಗೆ ನಾಲ್ಕು ಗೋಡೆಗಳ ನಡುವೆ ಕುಳಿತು ಕಲಿಯಲು ಇಷ್ಟವಿಲ್ಲಾರಿ.ಪ್ರಕೃತಿಯೊಂದಿಗೆ ಕಲಿಯಬೇಕು. ಕಾಡು-ಮೇಡು ಅಲೆಯಬೇಕು , ಗದ್ದೆ ತೋಟ ತಿರುಗಬೇಕು. ಹಲಸಿನ ಹೂವು ಹಣ್ಣಾಗುವುದರಿಂದ ಹಿಡಿದು ಹಸು ಕರು ಹಾಕುವಲ್ಲಿಯವರೆಗೂ ಪ್ರಕೃತಿಯಲ್ಲಿ ಎಷ್ಟು ವೈಚಿತ್ರ್ಯ ಗಳಿವೆ ಗೊತ್ತಾ..ಪ್ರತಿಕ್ಷಣಕ್ಕೂ ಕುತೂಹಲದ ಮೂಟೆ ಇದು ,ಪ್ರಕೃತಿಯಿಂದ ಮನುಷ್ಯ ಕಲಿಯಬೇಕು , ಅದರೊಂದಿಗೆ ಬೆಳೆಯಬೇಕು ಎಂದಾಗ, ನನಗೆ ಏನು ಹೇಳಲು ತೋಚದೆ ಹೆಸರೇನು? ಎಂದು ಕೇಳಿದೆ. "ಪ್ರಕೃತಿ " ಎಂದವಳು , ಅಮ್ಮಾ ಕಾಯ್ತಾ ಇರ್ತಾರೆ ಸಂಜೆ ಸಿಕ್ತೀನಿ ಅಂತ ಹೊರಟು ಹೋಗಿದ್ದೆ ನೀನು. 


(ಫೋಟೋ : ರಂಜಿತಾ ಹೆಗಡೆ) 


ಮನೆಗೆ ಬಂದವನನ್ನು ಅಮ್ಮ "ಏನು ಯೋಚನೆ ಮಾಡಿದೆ" ಎಂದು ಕೇಳಿದರೆ , ಇಲ್ಲೇ ಇರುತ್ತೆನಮ್ಮ ,ಪ್ರಕೃತಿಯೊಂದಿಗೆ ಕಲಿಯಬೇಕಿದೆ ಎಂದಿದ್ದೆ. ಯಾಕೆ ಹಾಗೆ ಹೇಳಿದ್ದೆ ಎಂದು ಇವತ್ತಿಗೂ ಗೊತ್ತಿಲ್ಲ. ಆದರೆ ಆರು ತಿಂಗಳಿನಿಂದ ಇಲ್ಲಿಯೇ ಇದ್ದೇನೆ.ಕೃಷಿಯನ್ನು ಜೀವನ ಮಾಡಿಕೊಂಡಿದ್ದೇನೆ. ಪ್ರಕೃತಿಯ ಹಲವು ವೈಚಿತ್ರ್ಯಗಳಿಗೆ ಕಣ್ಣರಳಿಸಿದ್ದೇನೆ. ಕೃಷಿ ವರ್ಷಕ್ಕೊಮ್ಮೆ ಉತ್ಪನ್ನ ನೀಡುತ್ತದಾದರೂ  ತಿಂಗಳ ತಿಂಗಳ ಸಂಬಳ ಕೈಗೆ  ಕೊಡುವ ಕೆಲಸಕ್ಕಿಂತ ಹೆಚ್ಚು  ಸಂತೋಷ  ಕೊಟ್ಟಿದೆ , ನೆಮ್ಮದಿ ಕೊಟ್ಟಿದೆ, ಅಪ್ಪ ಅಮ್ಮನ ಮುಖದಲ್ಲೂ ನೆಮ್ಮದಿ ಕಂಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಸ್ನೇಹವಿದೆ, ನಾನ್ ಸ್ಟಾಪ್ ಹರಟೆಗಾಗಿ ಪ್ರತಿ ಸಂಜೆಯೂ ಕಾಯುತ್ತಿದೆ.ಈ ಸ್ನೇಹ ಸ್ನೇಹಾವಾಗಿಲ್ಲ ಎನಿಸಿದ ದಿನ, ನೀನೇ  ಕೊಟ್ಟ ಗುಲಾಬಿ ಗಿಡದಲ್ಲಿ ಅರಳಿದ್ದ ಹೂ ತಂದು, ಇದೇ  ಒಂಟಿ ಮರದಡಿಯ ಕಲ್ಲು ಬೆಂಚಿನ ಮುಂದೆ ನಿನಗೆ I love you ಎಂದಿದ್ದೆ. ಹೂ ತೆಗೆದು ಕೊಂಡವಳು ದೊಡ್ಡದಾಗಿ ಹೇಳು, ಗುಡ್ಡಗಳಿಂದ ಪ್ರತಿದ್ವನಿಸಬೇಕು ಎಂದೆ .ನಾನು  ದೊಡ್ಡದಾಗಿ ಹೇಳಿದಾಗ ಗುಡ್ಡಗಳಿಂದ ಬಂದ ಪ್ರತಿಧ್ವನಿ ಗೆ ಕಿವಿಕೊಟ್ಟು , ನಾನು ಹೇಳಿದರೂ ಹೀಗೆ ಕೇಳುತ್ತಾ? ಎಂದು ಕೇಳಿದವಳ ಮುಖ ನೋಡುತ್ತಾ ಒಳ್ಳೆಯ ಮನಸ್ಸಿನಿಂದ ಹೇಳಿದರೆ ಪ್ರತಿಧ್ವನಿಸುತ್ತೆ ಎಂದೆ. ಹೋಗೋ ನನಗಷ್ಟು ಒಳ್ಳೆ ಮನಸ್ಸಿಲ್ಲ ಎಂದು ಬೆಂಚಿನ ತುದಿಯಲ್ಲಿ ಕೆನ್ನೆಯುಬ್ಬಿಸಿ  ಕುಳಿತವಳನ್ನು, ತಮಾಷೆಯಲ್ಲ ನನ್ನನ್ನು ಮದುವೆ ಆಗ್ತಿಯಾ? ಎಂದು ಕೇಳಿದೆ. ಕಣ್ಣಲ್ಲಿ ಕಣ್ಣಿಟ್ಟು ನನಗೆ ಟೈಮ್ ಬೇಕು ಅಂತ ಹೇಳಿ ಅನಾಮತ್ತು ನೂರ ಅರವತ್ತೆಂಟು ಗಂಟೆಗಳ ಕಾಲ  ಕಾಯಿಸಿದ್ದೀಯ.ನೀ ಕೊಟ್ಟ ಗಡವು ಇವತ್ತಿಗೆ ಕೊನೆಯಾಗಿದೆ.  ನಮ್ಮ ಸ್ನೇಹ ಕಂಡ ಅಪ್ಪ ಅಮ್ಮಂದಿರಿಂದ ಹಿಡಿದು ನಮ್ಮನೆಯ ಕೊಟ್ಟಿಗೆಯ ನಿನ್ನದೇ ಹೆಸರಿನ ಕರುವರೆಗೆ ಎಲ್ಲರೂ ನಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ ಕಣೆ. ಮುಖ್ಯವಾಗಿ ನೀನೋಪ್ಪಬೇಕಿದೆ. ನಿನ್ನ ಮಾತಿಗೆ ಪ್ರತಿಧ್ವನಿಸಲು ಹಸಿರು ಗುಡ್ದಗಳೆಲ್ಲ  ಮಂಜಿನ ಸೆರಗು ಹೊದ್ದು ಸಿಂಗಾರ ಗೊಂಡಿವೆ, ಆ ಪ್ರತಿಧ್ವನಿಗೆ ನಾ ಕಾಯುತ್ತಿರುವಂತೆ, ನಮ್ಮಿಬ್ಬರಿಗಾಗಿ ಆ ಒಂಟಿ ಮರ ಮತ್ತು ಖಾಲಿ ಬೆಂಚು ಕಾಯುತ್ತಿವೆ.. .. 


(ಗೆಳತಿ ರಂಜಿತಾ ಹೆಗಡೆ ತೆಗೆದ ಫೋಟೋ ನನ್ನಿಂದ ಬರೆಸಿದ ಸಾಲುಗಳಿವು .. Special Thanks to Ranjithaa..:) )