Friday, 15 February 2013

ಪ್ರೀತಿಯೆಂದರೆ ಏನೆಲ್ಲಾ... ಪ್ರೀತಿಯೆಂದರೆ ಏನೆಲ್ಲಾ... 
ಪ್ರೀತಿಯೆಂದರೆ ಏನೂ ಇಲ್ಲಾ ...
ಪ್ರೀತಿಯೋಳಗಡೆ ಏನಿಲ್ಲ..??
ಪ್ರೀತಿಯಿಂದಲೇ ಎಲ್ಲ ...
ಈ ಪ್ರೀತಿಗೆ ಹುಡುಕಿದಷ್ಟೂ ಹೊಸ ಅರ್ಥಗಳಲ್ಲ..??

ದೇವನೊಬ್ಬ ನಾಮ ಹಲವಂತೆ. ಪ್ರೀತಿನೂ ದೇವರು ಅಂತಾರೆ. ಅಂದರೆ ಪ್ರೀತಿ ದೇವರಿಗೆ ಒಂದು ಹೆಸರಂತೆ. ಆದರೆ ಒಬ್ಬಳನ್ನು/ ಒಬ್ಬನನ್ನು ಮರೆತು ಇನ್ಯಾರದ್ದೋ ಪ್ರೀತಿಯೆಡೆಗೆ ಆಕರ್ಷಿತರಾಗುತ್ತಾರೆ ಅಂತಾದ್ರೆ ಮನುಷ್ಯನಿಗೆ ದೇವರೂ ಅವಾಗಾವಾಗ ಬದಲಾಗುತ್ತಿರುತ್ತಾನ? 

ಪ್ರೀತಿ ,ಸ್ನೇಹ , ಶಾಂತಿ ಶಬ್ದಗಳನ್ನು ಸೋದರಿಕೆಯ ಸಂಬಂಧದಂತೆ ಬಳಸುತ್ತಾರೆ .ಆದರೂ ಪ್ರೀತಿಗಾಗಿ ಯುದ್ಧಗಳಾಗುತ್ತವೆ.  ಶಾಂತಿ ಕದಡುತ್ತವೆ. ರಕ್ತಪಾತಗಳಾಗುತ್ತವೆ . ಪ್ರೀತಿ ಸಂಬಂಧಗಳನ್ನು ಬೆಸೆಯುತ್ತದೆ ಅಂತಾರೆ ಅದರೂ ರಕ್ತ ಸಂಬಂಧಗಳನ್ನು ಕಳೆದುಕೊಳ್ಳುತ್ತಾರೆ. 

ಕಾಮವೆಂಬುದು ಪ್ರೀತಿಯ ಉತ್ತುಂಗತೆ ಅಂತಾರೆ. ಆದರೆ ಅತ್ಯಾಚಾರದಂತಹ ಕೃತ್ಯಗಳಲ್ಲಿ ಪ್ರೀತಿಯ ಲವಲೇಶವೂ ಕಾಣದಿರುವಾಗ ಉತ್ತುಂಗತೆಯ ಪ್ರಶ್ನೆ ಎಲ್ಲಿ ಬಂತು ? ಅಂತಹ ಮೃಗೀಯ ಕೃತ್ಯಗಳಲ್ಲಿ ದೈವಿಕತೆಯನ್ನು ಹುಡುಕಲು ಸಾಧ್ಯವಾ? ಪ್ರೀತಿ ದೈವವೆಂದರೆ ನಂಬಬೇಕಾ ? 
 
ಪ್ರೀತಿ ಸರ್ವವ್ಯಾಪಿ ಅಂತಾರೆ. ಆದ್ರೆ ಪ್ರೀತಿಗೆ ಚೌಕಟ್ಟು ಹಾಕಿಟ್ಟುಕೊಳ್ಳೋಕೆ  ನೋಡ್ತಾರೆ.

ಪ್ರೀತಿನಾ ಪ್ರೀತಿಯಿಂದ ಪ್ರೀತ್ಸಿ ಅನ್ನೋರೆಲ್ಲ ಆಮೇಲೆ ಪ್ರೀತಿನಾ ಅಧಿಕಾರದಿಂದ ಪ್ರೀತಿಸುತ್ತಾರೆ. 

ನಿಸ್ವಾರ್ಥ ಪ್ರೀತಿ ಅನ್ನೋರೆಲ್ಲ ಪ್ರೀತಿಸುತ್ತಾ ಸ್ವಾರ್ಥಿಗಳಾಗಿ ಬಿಡ್ತಾರೆ.

ಪ್ರೀತಿ ಪವಿತ್ರ .. ಪ್ರೀತಿ ಪಾವನ ಅಂತಾರೆ.. ಆದರೂ ಪಾರ್ಕ್ ಗಳಲ್ಲಿ ಅಸಭ್ಯವಾಗಿ ಪ್ರೀತಿಯ ಮಾನ ತೆಗೆಯುತ್ತಾರೆ.


ನಿನ್ನೆ ತಾನೇ ಪ್ರೀತಿಯ ಹಬ್ಬ ಮುಗಿದಿದೆ. ಪ್ರೀತಿಸುವವರಿಗೆ ಪ್ರತಿದಿನವೂ ಪ್ರೇಮಿಗಳ ದಿನವೇ ಎಂದರೂ ಅದೇನೋ ಒಂದು ಸಣ್ಣ ಆನಂದ ಎಲ್ಲಿಂದಲೋ ಮೈ ತಾಕಿರುತ್ತದೆ ಫೆಬ್ರವರಿ ೧೪ ರಂದು. ಇದು ನಮ್ಮ ಆಚರಣೆಯಲ್ಲ , ಇದು ಸರಿಯಲ್ಲ ಎಂದು ಯಾರೇನೇ , ಎಷ್ಟೇ ಬಾಯಿ ಬಡಿದು ಕೊಂಡರೂ ಪ್ರೀತಿಯ ಸಂಭ್ರಮಕ್ಕೇನೂ ಕೊರತೆ ಇಲ್ಲ. ಧರಿಸುವ ಉಡುಪುಗಳ ಬಣ್ಣಗಳಿಗೆಲ್ಲ ಒಂದೊಂದು ಅರ್ಥ.ಅಲ್ಲಲ್ಲೇ ರೇಗಿಸುವ ಗೆಳತಿಯರ ಗುಂಪು. ಅದೆಷ್ಟು ಸಂಭ್ರಮದ ಹೊಳಪು ಕಣ್ಣಲ್ಲಿ. ಮನದಲ್ಲಿ , ಪ್ರೀತಿ ಸಿಕ್ಕ ಖುಷಿ , ಪ್ರೀತಿ ಉಳಿದ ಖುಷಿ , ಮುನಿಸು ಮರೆತು ಒಂದಾದ ಖುಷಿ. ಅಬ್ಬಾ ..!! ಪ್ರೀತಿಯೆಂದರೇ ಖುಷಿ .. 

ನಿನ್ನೆ ಎಂದಿನಂತೆ ಆಫೀಸ್ ಮುಗಿದು ಪಿ ಜಿ ಸೇರಿದರೆ ಒಬ್ಬೊಬ್ಬರದು ಒಂದೊಂದು ಭಾವ, ಸಂತೋಷ , ದುಃಖ ಎಲ್ಲವು ಸಿಕ್ಕಿದ್ದು. ಅವನ ಮೊದಲ ಉಡುಗೊರೆ ಇದು ಎಂದು ಕಣ್ಣು ಮಿಟುಕಿಸಿದ್ದು ಒಬ್ಬಳಾದರೆ, stupid ನೋಡು ನಂಗಿಷ್ಟ ಆಗದೆ ಇರೋ ಕಲರ್ ಡ್ರೆಸ್ ಕೊಟ್ಟಿದಾನೆ ಕೋತಿ ಅಂತ ಪ್ರೀತಿಯ ಕಂಪ್ಲೇಂಟ್ ಇನ್ನೊಬ್ಬಳ ಕಡೆಯಿಂದ. ಅದರೂ ಅವನಿಗಾಗಿ ಇದನ್ನ ಹಾಕೊಳ್ತೀನಿ.ಅವನಿಗಾಗಿ ಬದಲಾಗೊದ್ರಲ್ಲೇ ಖುಷಿ ಇದೆ ಅಂತ ಡ್ರೆಸ್ ಹಾಕಿಕೊಂಡು ಕನ್ನಡಿ ಮುಂದೆ..:)  break up  ಅಂತ mood  upset  ಆಗಿ ಕಣ್ಣಲ್ಲಿ ನೀರು ತುಂಬಿ ಕೊಂಡವಳೊಬ್ಬಳಾದರೆ, ಅಪ್ಪ ಅಮ್ಮನ ಒಪ್ಪಿಗೆಯ ಮುದ್ರೆ ಬಿತ್ತು ಕಣೆ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಅಪ್ಪಿಕೊಂಡಿದ್ದು ಇನ್ನೊಬ್ಬಳು. " ನೀರು ತುಂಬಿರುವ ಎಲ್ಲಾ ಕಣ್ಣುಗಳೂ ಪ್ರೀತಿ ಮುರಿದ ದುಃಖದಲ್ಲಿವೆ ಎಂದು ಭಾವಿಸಬೇಡ ; ಆ ಪ್ರೀತಿ ಸಿಕ್ಕಿರಲೂ ಬಹುದು " ಎಂದು ಎಲ್ಲೋ ಓದಿದ ನೆನಪು ಬಂತು. ದೂರದಲ್ಲಿನ ಪತಿ ಕಳಿಸಿದ ಟೆಡ್ಡಿ , ಚಾಕೊಲೇಟ್  ಖುಷಿ ಕೊಟ್ಟರೂ ಅವರು ಇದ್ದರೆ ಜೊತೆಗೆ it  will be more  romantic  ಎನ್ನುತ್ತಾ ಮಿಸ್ ಮಾಡಿಕೊಳ್ಳುತ್ತಿದವಳು ಇನ್ನೊಬ್ಬಳು. ಅವನಿಗೆ ಓಕೆ ಅಂದೆ, ಪಾಪಿ ಕೊನೆಗೂ ಸೋಲೋ ಹಾಗೆ ಮಾಡಿಬಿಟ್ಟ , ಛೇ ನಂಗೆ ಇದು ಬೇಡವಾಗಿತ್ತು ಕಣೆ ಅಂತಾಳೆ ಮತ್ತೊಬ್ಬ ಗೆಳತಿ. ಬೇಡವೆಂದರೆ ಬಿಡೆ ಅಂದರೆ , ಹೋಗೆ ನೀ ಪ್ರೀತಿ ಮಾಡು ಗೊತ್ತಾಗತ್ತೆ ಅಂತ ಗುರ್ ಅನ್ನೋದು ಬೇರೆ. ಇನ್ನು single  ಆಗಿದ್ದವರಿಗಂತೂ ಎಷ್ಟು proposals  ಬಂತು ?? ಯಾರು rose  ಕೊಟ್ಟಿಲ್ಲವಾ ?? are  you  still single ?? ಅಂತಾ ಕಣ್ಣರಳಿಸುತ್ತಾ questions ಗಳ ಸುರಿಮಳೆ. 

ಲವ್ ಅಂದ್ರೆ ಬರಿ ಹುಡುಗ ಹುಡುಗಿ ನಡುವೆ ಮಾತ್ರಾನ ? ಎಷ್ಟು ಜನ ಅಪ್ಪ ಅಮ್ಮಂಗೆ, freinds  ಗೆ,ಅಣ್ಣ , ಅಕ್ಕ ,ತಮ್ಮ, ತಂಗಿಗೆ wish  ಮಾಡಿದ್ರಿ ಅಂತ ಇನ್ನೊಬ್ಬಳ ಪ್ರಶ್ನೆ. its  all  over  buddy .. cheer up .. ನಾವೆಲ್ಲಾ ಇದೀವಿ. ತಪ್ಪು ಯಾರದೇ ಇದ್ರೂ ಆ ಪ್ರೀತಿ ಉಳಿಸಿಕೊಳ್ಳೋಕೆ ಇಬ್ಬರಿಂದಾನು ಆಗಿಲ್ಲ ಅಂದಮೇಲೆ ಕಣ್ಣೀರು ಹಾಕೊದೇಕೆ ಎಂಬ ಸಾಂತ್ವನದ ಮಾತುಗಳು. ಒಂದೇ ದಿನದಲ್ಲಿ ಎಷ್ಟೆಲ್ಲಾ ಭಾವ ಭಂಗಿಗಳನ್ನ ನೋಡಿದ್ದು . ಒಂದು colorful  day ಬಣ್ಣ ಬಣ್ಣಗಳಲ್ಲಿ ಮುಗಿದ್ದು ನಿಜ ಎನಿಸಿತು .

Tuesday, 5 February 2013

ಅಕ್ಕಾ ಎಂಬ ಅಮ್ಮನ ಬಗೆಗೊಂಚೂರು....ತಾಯಿಯ ಬಗೆಗೆ ಎಷ್ಟೆಲ್ಲಾ ಬರೆದರೂ ಮುಗಿಯುವುದಿಲ್ಲ ಯಾವಾಗಲೂ. ಬರೆದಷ್ಟೂ ಅಕ್ಷಯವಾಗುತ್ತಾ ಹೋಗುತ್ತಾಳೆ ಈ ಅಮ್ಮ ಎನ್ನುವವಳು. ಥೇಟ್  ಅಮ್ಮಂತಹುದೇ ಇನ್ನೊಂದು ಜೀವವಿರುತ್ತದೆ . ಅವಳು ಎರಡನೇ ತಾಯಿಯಾಗುತ್ತಾಳೆ, ಗೆಳತಿಯಾಗುತ್ತಾಳೆ, ಒಮ್ಮೊಮ್ಮೆ ವೈರಿ ಎನಿಸಿಬಿಡುತ್ತಾಳೆ, ಮುನಿಸಿಕೊಳ್ಳುತ್ತಾಳೆ, ಮಾತು ಬಿಡುತ್ತಾಳೆ. ಮುದ್ದುಗರೆಯುತ್ತಾಳೆ. ನಮಗಿಂತ ದೊಡ್ಡವಳಾಗಿರುತ್ತಾಳೆ. ಹೌದು ಅವಳು "ಅಕ್ಕ"  ಆಗಿರುತ್ತಾಳೆ. 

ಈ ಅಕ್ಕಂದಿರು ಯಾವಾಗಲೂ ಸಾವಿರಕ್ಕೊಬ್ಬರು  ಎನಿಸಿಬಿಡುತ್ತಾರೆ. ತಂಗಿಯರ ಮೊದಲ ಮಾಡೆಲ್ ಅಕ್ಕಂದಿರೇ ಅನಿಸುತ್ತದೆ. ಅಕ್ಕನನ್ನು ನೋಡುತ್ತಾ ತಂಗಿ ಬೆಳೆಯುತ್ತಾಳೆ. ಹಾಗಾಗಿಯೇ ಇರಬೇಕು "ಹಿರಿಯಕ್ಕನ ಚಾಳಿ ಮನೆ ಮಂದಿಗೆ " ಎಂಬ ಗಾದೆ ಹುಟ್ಟಿಕೊಂಡಿದ್ದು.  ಅಕ್ಕನಂತೆ ಎಲ್ಲವೂ ಬೇಕು. ಅಕ್ಕ ಹೇಗೆ ಮಾಡ್ತಾಳೋ ಹಾಗೆ ತಾನೂ ಮಾಡಬೇಕು. ಅಕ್ಕನಿಗೆ ಏನೇ ತಂದು ಕೊಟ್ಟರೂ ಅದು ತನಗೂ ಬೇಕು. ಅಕ್ಕ ಚೂಡಿ ಹಾಕುವಷ್ಟು ದೊಡ್ಡವಳಾಗಿದ್ದಾಳೆಂದು ಚೂಡಿ ತಂದು ಕೊಟ್ಟರೆ, ತನಗೆ ಚೂಡಿ ಹಾಕಲು ಬರದಿದ್ದರೂ ಚಿಂತೆಯಿಲ್ಲ , ತಂಗಿಗೆ ಅದೂ ಬೇಕು. ತಂಗಿಯ ಈ ತರಹದ ಹಠಗಳಿಂದ ಪಾಪ ಅಕ್ಕ ಎನ್ನುವವಳು ಎಷ್ಟೆಲ್ಲಾ ತ್ಯಾಗ ಮಾಡಬೇಕಾಗುತ್ತದೆ. "ನೀ ದೊಡ್ದವಳಲ್ಲವ ಹೊಂದಿಕೊಂಡು ಹೋಗು" ಎಂದು ಹಿರಿಯರ ಉಪದೇಶ ಬೇರೆ. ಎಲ್ಲದರಲ್ಲೂ ಪಾಲು ಕೊಡಬೇಕಿರುತ್ತದೆ. ಮಾಡದ ತಪ್ಪಿಗಾಗಿ ಅದೆಷ್ಟು ಸಲ ಬೈಸಿಕೊಳ್ಳುತ್ತಾರೋ ಏನೋ. ತಂಗಿಯ ತಪ್ಪಿಗಾಗಿ ಎಷ್ಟೋ ಸಲ ಬೈಸಿಕೊಳ್ಳುತ್ತಾಳೆ. ಹೊಡೆತ ಕೂಡಾ ತಿನ್ನುತ್ತಾಳೆ.

ತಂಗಿಯರು ಸುಮಾರು ಪ್ರಾಥಮಿಕ ಶಿಕ್ಷಣ ಮುಗಿಸಿ , ಹತ್ತನೇ ತರಗತಿಯವರೆಗೆ  ಬರುವವರೆಗೂ ಅಕ್ಕಂದಿರು ತಮ್ಮ ಜೊತೆಗೆ ಸೇರಿಸಿಕೊಳ್ಳುವುದಿಲ್ಲ. ಆಗೆಲ್ಲ ಅಕ್ಕ ವೈರಿಯಂತೆ ಕಾಣುತ್ತಾಳೆನೀ ಸಣ್ಣವಳು ನೀ ಬೇಡ ಅಂತ. ಅಮ್ಮಂದಿರು ಅವಳನ್ನೂ ಕರೆದುಕೊಂಡು ಹೋಗೆ ಅಂದ್ರು ಕೂಡಾ "ಹೋಗಮ್ಮ ಅವಳು ನನ್ನ ಜೊತೆ ಬರುವುದು ಬೇಡ" ಅಂತ ಹೇಳಿ ಹೊರಟು ಬಿಡುತ್ತಾರೆ. . ಅಕ್ಕನ ಬಗ್ಗೆ ಚಾಡಿ ಹೇಳಿ ಅಕ್ಕನಿಗೆ ಬೈಸುವುದೆಂದರೆ ಒಂಥರಾ ಖುಷಿ ಇರುತ್ತದೆ.ಆ ವಯಸ್ಸಿನಲ್ಲಿ. ಅಕ್ಕ ತಂಗಿಯರ ನಡುವೆ ವಾಕ್ ಯುದ್ದಗಳು ಸಾಮಾನ್ಯ ಅವಾಗ. ಕೆಲವೊಮ್ಮೆ  ಹೊಡೆದಾಟಗಳೂ  ನಡೆಯುತ್ತವೆ.ಅಕ್ಕನಿಗೆ ಸಣ್ಣದಾಗಿದ್ದೋ ಅಥವಾ ಅವಳು ಕಾಲೇಜಿಗೆ ಹಾಕದ ಡ್ರೆಸ್ ಗಳನ್ನೂ ನೀನು ಹಾಕಿಕೊ ಅಂತ ಅಮ್ಮ ಕೊಟ್ಟರೆ  ತಂಗಿಯೆದೆಯಲ್ಲಿ ಸಣ್ಣ ಅಸಮಾಧಾನ. ಅಕ್ಕನಿಗೆ ಒಂದು ಹೊಸ ಡ್ರೆಸ್ ತಂದುಕೊಟ್ಟರೂ ಅಕ್ಕನ ಬಗೆಗೊಂಚೂರು ಅಸೂಯೆ. 
 
ತಂಗಿ ಕಾಲೇಜ್ ಹೋಗುವಷ್ಟು ದೊಡ್ಡವಳಾದ ತಕ್ಷಣ ಅಕ್ಕ ಗೆಳತಿಯಾಗಿ ಬಿಡುತ್ತಾಳೆ. ಬಹುಶಃ ಆವಾಗೊಂದು ಸಣ್ಣ ಮೆಚುರಿಟಿ ಬಂದಿರುತ್ತದೆ ಎಂಬ ಕಾರಣಕ್ಕಿರಬೇಕು. ಅಕ್ಕಂದಿರು ಮೆಚ್ಯೂರ್ಡ್ ಆಗಿರುತ್ತಾರಲ್ಲ. ಈ ತಂಗಿಯರೂ ಅಷ್ಟೇ ಅಲ್ಲಿವರೆಗೂ ಅಕ್ಕನ ಮಾತುಗಳ ವಿರುದ್ಧವೇ ಹೋಗುತ್ತಾ , ಅಕ್ಕ ಹೇಳಿದ್ದನ್ನು ಕೇಳದೆ ಇದ್ದವರು ಅಕ್ಕನ ಮಾತಿಗೆ ಬೆಲೆ ಕೊಡತೊಡಗುತ್ತಾರೆ. ಅಕ್ಕ ಫಸ್ಟ್ ಅಂಡ್ ಬೆಸ್ಟ್ ಫ್ರೆಂಡ್ ಆಗಿಬಿಡುತ್ತಾಳೆ. ಅಕ್ಕಂದಿರಿಗೂ ತಂಗಿಯರು ಗೆಳತಿಯರಾಗುತ್ತಾರೆ. ಗುಟ್ಟಿನ ವಿಷಯಗಳಿಗೆಲ್ಲ ಕಿವಿಯಾಗುತ್ತಾರೆ. ಅಪ್ಪ ಅಮ್ಮಂದಿರೆದುರು ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುವಂತಾಗುತ್ತಾರೆ. ಎಗ್ಸಾಮ್ಸ್  ಟೈಮ್ ನಲ್ಲಿ ಅವಳೇ ಗುರು . ಎಷ್ಟೋ ಪ್ರಾಬ್ಲೆಮ್ ಗಳಿಗೆಲ್ಲ ಸೊಲ್ಯುಷನ್ ಅವಳು. ಕಾಲೇಜಿನಲ್ಲಿನ ಎಲ್ಲ ವಿಷಯಗಳನ್ನು ಅವಳ ಕಿವಿಗೆ ಹಾಕಲೇಬೇಕು. ಕೆಲವೊಂದು ವಿಷಯಗಳನ್ನು ಹಗುರವಾಗಿ ತೆಗೆದುಕೊಂಡು ನಕ್ಕು ಬಿಡುವ ಅಕ್ಕಂದಿರು, ಕೆಲವೊಮ್ಮೆ ಥೇಟ್ ಅಮ್ಮನ ಚಾರ್ಜ್  ತೆಗೆದುಕೊಂಡು ಬೈಯ್ಯುತ್ತಾರೆ. ಕಾರಣ ಇಷ್ಟೇ ತಂಗಿ ಆಗಷ್ಟೇ ಕಣ್ಣು ಬಿಡುತ್ತಿರುವ ವಯಸ್ಸನ್ನು ಅವರು ದಾಟಿ ಬಂದಿರುತ್ತಾರೆ. ಅನುಭವದ ಆಧಾರದಲ್ಲಿ ಬುದ್ದಿ ಹೇಳುತಾರೆ. ಎಷ್ಟೋ ಸಲ ನನಗಾದಂತೆ ತಂಗಿಗೆ ಆಗಬಾರದು ಎಂಬ ಕಳಕಳಿ ಇರುತ್ತದೆ. 

ಹೀಗೆಯೇ ಅಕ್ಕ ಗೆಳತಿಯಾಗಿ , ಅಮ್ಮನಾಗಿರುವಾಗ, ಅಕ್ಕನ ಮದುವೆಯ ಮಾತುಗಳು ಶುರು. ಮನೆಯಲ್ಲಿ ಮದುವೆ ಸಂಭ್ರವೇನೋ ನಿಜ. ಆದರೆ  ಮಾತು ಮಾತಿಗೂ ಅಕ್ಕ ಅಕ್ಕ ಎಂದು ಕರೆಯುತ್ತಿರುವಾಗ ಇನ್ನು ಅವಳು ಇಲ್ಲಿರುವುದಿಲ್ಲ ಎನ್ನುವ ಬೇಸರ ಶುರು. ತನ್ನೊಂದಿಗೆ ಮಾತು ಸ್ವಲ್ಪ ಕಡಿಮೆ ಮಾಡಿ ಮದುವೆಯಾಗುವವನ ಜೊತೆ ಜಾಸ್ತಿ ಮಾತನಾಡುತ್ತಾಳೆ ಎಂಬ ಕಾರಣಕ್ಕೆ ಭಾವನಾಗಿ ಬರುವವನ ಮೇಲೆ ಅಸೂಯೆ, ತನ್ನ ಜಾಗವನ್ನು ಇಂಚಿಂಚಾಗಿ ಆಕ್ರಮಿಸಿಕೊಳ್ಳುವನನ ಬಗೆಗೆ ಈರ್ಷ್ಯೆ. ಇಷ್ಟಿದ್ದರೂ ಅಕ್ಕನ ಮದುವೆಯಲ್ಲಿ ಹಿರೋಯಿನ್ ಗಳಂತೆ ಮೆರೆದಾಟ. ಆಮೇಲೆ  ತಬ್ಬಿ ಅತ್ತು  ಕಳಿಸಿಕೊಡುವಾಗ ನೋವಾದರೂ ಹೊಸ ಮನೆಯಲ್ಲಿ ಸಂತೋಷವಾಗಿರುತ್ತಾಳಲ್ಲ ಎನ್ನುವ ಭರವಸೆ. ಮದುವೆಯಾದ ಅಕ್ಕ ಮನೆಗೆ ಬರುತ್ತಾಳೆಂದರೆ ಮತ್ತೆ ಮನೆಯಲ್ಲಿ ಸಂಭ್ರಮ. ಅವತ್ತು ರಾತ್ರಿ ಅಕ್ಕನ ಪಕ್ಕದಲ್ಲೇ ಹಾಸಿಗೆ ಹಾಸಿಕೊಂಡು ಗುಟ್ಟಾಗಿ ಪಿಸು ಪಿಸು ಮಾತಾಡುತ್ತಾ, ಸಣ್ಣಗೆ ಮುಸಿ ಮುಸಿ  ನಗುತ್ತಾ , ಅಮ್ಮನೋ, ಅಪ್ಪನೋ , " ಸಾಕು ಮಲಗ್ರೆ ಲೇಟ್ ಆಯ್ತು . ನಾಳೇನು ದಿನ ಇದೆ " ಇದೆ ಎಂದಾಗ ಒಲ್ಲದ ಮನಸ್ಸಿಂದ ಮುಸುಕೆಳೆದುಕೊಳ್ಳುವ ಮಜವೇ ಬೇರೆ.

ಚಾಂದೊಂಕಾ ತಾರೊಂಕಾ ಸಬ್ ಕಾ ಕೆಹನಾ ಹೇ
ಏಕ್ ಹಜಾರೋನ್ ಮೇ ಮೇರಿ ಬೆಹನಾ ಹೇ
"ಸಾರೀ ಊಮಾರ್ ಹಮೆ ಸಂಘ್ ರೆಹನಾ ಹೇ" ಅಂತ ಹಾಡುವುದರಲ್ಲೇ ಏನೋ ಖುಷಿಯಿದೆ.

(ದಿನಾಂಕ ೨೯.೦೧.೨೦೧೩ ರ ಲವಲವಿಕೆಯಲ್ಲಿ ಪ್ರಕಟವಾಗಿತ್ತು )