Friday 15 March 2013

ಎಲ್ಲಿ ಹೋದವು ಆ ದಿನಗಳು ಮತ್ತೆ ಬರಲಾರದಷ್ಟು ದೂರ ...

ತುಂಬಾ ಕಷ್ಟ ಪಟ್ಟು ಅಕ್ಷರಗಳನ್ನು ಜೋಡಿಸುತ್ತಿದ್ದೇನೆ. ಈ ಪತ್ರದ ಪ್ರತಿ ಶಬ್ದಗಳನ್ನು ಬರೆಯುವಾಗಲೂ ಕೈ ಕಂಪಿಸುತ್ತಿದೆ. ನಾವಿಬ್ಬರು ಪ್ರೀತಿಸುತ್ತಿದ್ದಾಗಲೂ ಪತ್ರ ಬರೆದದ್ದು ಕಡಿಮೆಯೇ, ಆದರೆ ಇವತ್ತು ಏನೂ ಅಲ್ಲದ ನನ್ನನ್ನು ಸೊಸೆಯಾಗಿ ತಂದು ಕೊಂಡು, ಸೊಸೆಯಂತೆ ಕಾಣದೆ ತಾಯಿಯಾದ ಆ ಮಮತಾಮಯಿ ನಿಮ್ಮ ಅಮ್ಮನಿಗಾಗಿ ಈ ಪತ್ರ ಬರೆಯಲೇ ಬೇಕಾಗಿದೆ.ಇದೇ ಕೊನೆಯದೇನೋ ಅನಿಸುತ್ತಿದೆ . 

ಆರು ವರ್ಷಗಳು ಕೇವಲ ಆರೇ ವರ್ಷಗಳ ಹಿಂದೆ ಎಷ್ಟು ಚೆನ್ನಾಗಿತ್ತು ನಮ್ಮ ಜೀವನ. ನಿಮಗೊಂದು ಒಳ್ಳೆಯ ಕೆಲಸವಿತ್ತು. ನಮ್ಮ ಪ್ರೀತಿಯಿತ್ತು , ನನ್ನನ್ನು ನಿಮ್ಮಮ್ಮನಿಗೆ ಪರಿಚಯ ಮಾಡಿಸಲು ಕರೆದುಕೊಂಡು ಹೋಗುವಾಗ "ನೋಡು ನಮ್ಮಮ್ಮನಿಗೆ ದವಡೆಯ ಆಪರೇಶನ್ ಆಗಿರುವುದರಿಂದ ಮುಖ ಸ್ವಲ್ಪ ವಿಕಾರವಾಗಿದೆ. ಅವರನ್ನು ನೋಡಿ ಹೆದರಬೇಡ. ನನ್ನ ಮದುವೆಯಾದ ಮೇಲೂ ಎಂದಿಗೂ ಅವರನ್ನು ಹೀಯಾಳಿಸ ಬಾರದು" ಎಂದು. ಅವರನ್ನು  ನೋಡಿದಾಗ ಸ್ವಲ್ಪ ಭಯ ಎನಿಸಿದರೂ, ಅವರ ಮಮತೆ ಎಲ್ಲವನ್ನು ಮರೆಸಿತ್ತು. " ನೋಡಮ್ಮ ನನ್ನ ಮಗ ಕೆಲಸದಲ್ಲಿರುವುದು ನಿಜ, ಆದರೆ ಅವನ ಸಂಬಳ ತಿಂಗಳ ಮನೆ ಖರ್ಚುಗಳಿಗೆ ಸರಿ ಹೋಗತ್ತೆ. ಗಳಿಕೆಯ ಉಳಿಕೆ ಕಡಿಮೆಯೇ . ಮದುವೆಯಾದ ಮೇಲೆ ನಿನ್ನ ಎಲ್ಲ ಆಸೆಗಳು ಈಡೇರಬಹುದು  ಎಂಬ ಭರವಸೆ ಕೊಡಲಾರೆನಮ್ಮ  , ಒಪ್ಪಿಗೆ ಇದ್ದರೆ ಈ ಮನೆ ದೀಪ ಬೆಳಗು ತಾಯಿ" ಎಂದಿದ್ದರು ನಿಮ್ಮಮ್ಮ , ಒಪ್ಪಿ ನಿಮ್ಮ ಕೈ ಹಿಡಿದು ಆ  ಮನೆ ಸೊಸೆಯಾದೆ.(ಆ ಮನೆ ಎಂದು ನಾನೇಕೆ ಹೇಳಿದೆ ಎಂಬುದು ನಿಮಗೂ ಗೊತ್ತು ) ಆ ಪುಟ್ಟ ಮನೆಯಲ್ಲಿ ಖುಷಿ ಮಾತ್ರ ಇತ್ತು  . ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಬರುತ್ತಿದ್ದ ನೀವು . ಅದು ಇದು ಮಾತನಾಡುತ್ತ ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮುಗಿಸಿರುತ್ತಿದ್ದ ನಾವು , ಆಮೇಲೆ ಮೂವರು ಸೇರಿ ಮನೆಯಂಗಳದಲ್ಲೇ ಇದ್ದ ಮಾವನವರ ಸಮಾಧಿಯ ಮುಂದೆ ತಾಸುಗಟ್ಟಲೆ ಕುಳಿತು ಮಾಡುತ್ತಿದ್ದ ಭಜನೆ. ಅಪರೂಪಕ್ಕೆ ಬೇಗ ಬಂದರೆ ಓಣಿಯ ಮಕ್ಕಳನ್ನೆಲ್ಲ ಸೇರಿಸಿ ಗಾಳಿಪಟ ಬಿಡುತ್ತಿದ್ದುದ್ದು , ಭಾನುವಾರ ಎಲ್ಲಾ ಸೇರಿಕೊಂಡು ಅಡಿಗೆ ಮಾಡಿ ಅಮ್ಮನ ಕೈತುತ್ತು ತಿನ್ನುತ್ತಿದ್ದುದು. ಸಂಜೆ ಅಮ್ಮ ದೇವಸ್ಥಾನಕ್ಕೆ  ಹೋದರೆ ನಾವಿಬ್ಬರೇ ಟೆರೆಸ್ ಮೇಲೆ ಕುಳಿತು ಹರಟುತ್ತಿದ್ದುದು....  .ಎಲ್ಲಿ ಹೋದವು ಆ ದಿನಗಳು ಮತ್ತೆ ಬರಲಾರದಷ್ಟು ದೂರ ...

ಇಷ್ಟು ಚೆನ್ನಾಗಿದ್ದಾಗ ಜೀವನ, ಅದ್ಯಾರು ತುಂಬಿದರೋ ನಿಮ್ಮ ತಲೆಗೆ ಬ್ಯುಸಿನೆಸ್ ಮಾಡುವ ವಿಚಾರವನ್ನು , ನನ್ನ ಬಳಿ ಹೇಳಿದಾಗಲೂ ಅಚ್ಚುಕಟ್ಟಾದ ಜೀವನಕ್ಕೆ, ಮುಂದೆ ಮಕ್ಕಳಾದರೆ ಅವರ ಭವಿಷ್ಯಕ್ಕೆ ಒಳ್ಳೆಯದು ಎಂದು ನಾನೂ  ಸಪೋರ್ಟ್ ಮಾಡಿದೆ."ಅಮ್ಮಾ  ಸಾಲ ಮಾಡಿ ಬ್ಯುಸಿನೆಸ್ ಮಾಡಬೇಕೆಂದಿದ್ದೇನೆ" ಎಂದಾಗ ನಿಮ್ಮಮ್ಮ  "ಬೇಡ ಮಗು ಸಾಲದ ಶೂಲ ಕಷ್ಟವಪ್ಪ , ನನ್ನ ಬಳಿ ನಿಮ್ಮಪ್ಪನ ಸಮಾಧಿಯ ಮೇಲೆ ಗುಡಿ ಕಟ್ಟಿಸಲು ಕೂಡಿಟ್ಟ ಹಣವಿದೆ ಅದನ್ನೇ ಕೊಡುತ್ತೇನೆ ಬಳಸಿಕೋ , ಬ್ಯುಸಿನೆಸ್ ಚೆನ್ನಾಗಿ ನಡೆಸಿ ಅಲ್ಲೊಂದು ಗುಡಿ ನೀನೆ ಕಟ್ಟಿಸುವೆಯಂತೆ"  ಎಂದು ಹಣ ಕೊಟ್ಟರು. ಆ  ತಾಯಿ ಒಳ್ಳೆಯ ಕಾರ್ಯಕ್ಕಾಗಿ, ಒಳ್ಳೆ ಮನಸ್ಸಿನಿಂದ ಹಣ ಕೊಟ್ಟಿದ್ದರ ಪರಿಣಾಮ ನಿಮಗೂ ಒಳ್ಳೆಯದೇ ಆಯಿತು , ಮಾಡಿದ ಬ್ಯುಸಿನೆಸ್ ಕೈ ಹಿಡಿಯಿತು. ನಮ್ಮ ಜೀವನ ಬದಲಾಯಿತು, ಜೊತೆಗೆ ನೀವೂ ಕೂಡ.  ಕೆಲಸ, ಕೆಲಸ, ಕೆಲಸದಲ್ಲೇ ಮುಳುಗಿ ಹೋದಿರಿ. ನೀವು ಬೇಗ ಮನೆಗೆ ಬಂದಿದ್ದೇ  ಮರೆತು ಹೋಗಿದೆ ನನಗೆ. ಸ್ಟೇಟಸ್ ಗೆ ತಕ್ಕಂತೆ ಇರಬೇಕು ಎನ್ನುತ್ತಾ ಆ ಪುಟ್ಟ ಮನೆ ಬಿಡಿಸಿ ಇದ್ಯಾವುದೋ ಫ್ಲಾಟ್ ಎಂಬ ಭೂತ ಬಂಗಲೆಗೆ ತಂದಿರಿಸಿದಿರಿ. ಇದು ಮನೆಯೆಂದು ನಂಗೆ ಯಾವತ್ತೂ  ಅನಿಸಲೇ ಇಲ್ಲ. ಪುಟ್ಟ ಮಕ್ಕಳ ಜೊತೆಗಿನ ಗಾಳಿಪಟದ ಖುಷಿ ಮತ್ತೆ ಕಾಣಲೇ ಇಲ್ಲ, ನಿಮಗೆ ಭಾನುವಾರಗಳೇ ನೆನಪಿನಲ್ಲಿರುವುದು ದೂರವಾದ ಮೇಲೆ,  ಭಾನುವಾರದ ಅಡಿಗೆ, ಕೈ ತುತ್ತುಗಳ ನೆನಪೇ ಇಲ್ಲ, ಒಂದರ್ಧ ಗಂಟೆ ಭಜನೆಗೆ ಬಂದ ನೆನಪು ನಿಮಗಿದೆಯೇ?ನೆನಪಿಸಿಕೊಳ್ಳಿ . ಈ ಮನೆಯ ಟೆರೆಸ್ ಇನ್ನೂ ನೋಡೇ ಇಲ್ಲ , ಇವೆಲ್ಲ ಕೆಲಸದಲ್ಲಿ ಬ್ಯುಸಿ ಇರುವ ಗಂಡನ ಬಗ್ಗೆ ಹೆಂಡತಿಯಾದವಳು ಮಾಡುವ ನಾರ್ಮಲ್ ಕಂಪ್ಲೈಂಟ್ ಗಳು ಎನ್ನುತ್ತಾರೆ ಗೊತ್ತು ಅದಕ್ಕೆ ಇದನ್ನು ನಿಮ್ಮ ಮುಂದೆ ಎಂದು ಆಡಿರಲಿಲ್ಲ . 

ಆದರೆ ನೀವು ನಿಮ್ಮಮ್ಮನಿಗೆ ಮಾಡುತ್ತಿರುವ ಇಂಚಿಂಚು ಮೋಸವನ್ನು ಹೇಗೆ ಸಹಿಸಿಕೊಳ್ಳಲಿ. "ಗುಡಿ ಯಾವಾಗ ಕಟ್ಟಿಸುತ್ತಾನೆ ಎಂದು ಕೇಳಬೇಕಮ್ಮ, ಇವನು ಇತ್ತೀಚೆಗೆ ಮನೆಗೆ ಬರುವುದು ತಡವಾಗುತ್ತಿದೆ ಮನಸು ಯಾಕೋ ಸರಿ ಇಲ್ಲ ,  ನಿಮ್ಮ ಮಾವನರ ಸಮಾಧಿಯ ಮುಂದೆ ಒಂದು ಅರ್ಧ ಗಂಟೆ ಕುಳಿತುಬರಬೇಕು  ಎನಿಸುತ್ತಿದೆ, ನನ್ನ ಕರ್ಕೊಂಡು ಹೋಗ್ತಿಯ ಮಾ" ಎಂದು ಬೇಡುವಾಗ , "ಇಲ್ಲಮ್ಮ ನಿಮ್ಮ ಮಗ ಆ ಮನೆ ಮತ್ತು ಆ ಜಾಗ ಮಾರಿ ಬ್ಯುಸಿನೆಸ್ ಗೆ ಹಣ ಸುರಿದಿದ್ದಾರೆ" ಎಂದು ಹೇಗೆ ಹೇಳಲಿ ನಾನು ? ಇತ್ತೀಚಿಗೆ ಅಸ್ತಮ ಸ್ವಲ್ಪ ಜಾಸ್ತಿಯಾಗಿ ಕೆಮ್ಮುತ್ತಿದ್ದರೆ , ಅಮ್ಮ ಡಾಕ್ಟರ ಹತ್ರ ಹೋಗಿ ಬಾರಮ್ಮ ,ನನ್ನ ಕ್ಲೈಂಟ್, ಅಥವಾ ಗೆಳೆಯರೆಲ್ಲ ಬಂದಾಗ ನೀ ಹೀಗೆ ಕೆಮ್ಮುತ್ತ ಇದ್ದರೆ ಚೆನ್ನಾಗಿರಲ್ಲ ಎಂದಿದ್ದಕ್ಕಾಗಿ , ಮನೆಗೆ ಯಾರಾದರೂ ಬಂದರೆ ಬಚ್ಚಲಮನೆಯಲ್ಲಿ ಕುಳಿತು ಬರುವ ಕೆಮ್ಮನ್ನು ತಡೆ ಹಿಡಿಯಲು ಪ್ರಯತ್ನಿಸುತ್ತಾ ಕಷ್ಟ ಪಡುವ ಅವರನ್ನು ಹೇಗೆ ನೋಡುತ್ತಾ ಇರಲಿ ನಾನು ?ನಾನೇ ಡಾಕ್ಟರ್ ಹತ್ತಿರ  ಕರೆದು ಕೊಂಡು ಹೋಗುತ್ತೇನೆ ಎಂಬ ಮಾತು ನಿಮ್ಮ ಬಾಯಿಂದ ಬರಲೇ ಇಲ್ಲ .  ಮೊನ್ನೆ ನಿಮ್ಮ ಗೆಳೆಯನ ಮಗು ಅತ್ತೆಯನ್ನು ಕಂಡು ಕಿರುಚಿತ್ತು ಎನ್ನುವ ಕಾರಣಕ್ಕೆ , ನಿನ್ನ ಮುಖ ವಿಕಾರ ಎಂದು ಗೊತ್ತಿದ್ದರೂ ಯಾಕಮ್ಮ ಎದುರಿಗೆ ಬರಬೇಕಿತ್ತು ? ನೋಡು ಇನ್ಯಾವತ್ತೂ ಆತ  ನಮ್ಮನೆಗೆ ಬರಲಾರ ಎಂದು ಮುಖಕ್ಕೆಹೊಡೆದಂತೆ ನೀವು ಬೈದಿದ್ದನ್ನು ಹೇಗೆ ಸಹಿಸಿಕೊಳ್ಳಲಿ ? ಮೌನವಾಗಿ ಕಣ್ಣೀರು ಹಾಕುತ್ತಿರುವ ಆಕೆಯನ್ನು ಹೇಗೆ ಸಮಾಧಾನಿಸಲಿ ?

ಇದೆಲ್ಲದಕ್ಕಿಂತ ಹೆಚ್ಚಾಗಿ ಬೆಳಿಗ್ಗೆ ನೀವು ವೃದ್ಧಾಶ್ರಮದವರ  ಬಳಿ ಮಾತಾಡಿದ್ದನ್ನು ಕೇಳಿದ್ದೆ. ನೀವು ಅಲ್ಲಿಯ ಫಾರಂ ತಂದಿದ್ದು ಗೊತ್ತು ನನಗೆ. ಇದನ್ನು ಸಹಿಸಿಕೊಳ್ಳಲು ಸಾದ್ಯವಿಲ್ಲ . ಆ ಮಮತಾಮಯಿ ತಾಯಿಯನ್ನು ಯಾರೂ ಇಲ್ಲದ ಅನಾಥೆಯಂತೆ ಅಲ್ಲಿ ಬಿಡಲು ನಾನು ತಯಾರಿಲ್ಲ . ಅಚ್ಚುಕಟ್ಟಾದ ಜೀವನಕ್ಕೆ ಸಹಾಯವಾಗಬಹುದೆಂಬ  ನಿಮ್ಮ ಬ್ಯುಸಿನೆಸ್ ನನ್ನ ಸಂಸಾರದ ಚೌಕಟ್ಟನ್ನೇ ಒಡೆಯುತ್ತದೆ ಎಂದಾದರೆ ನನಗೆ ಆ ಬ್ಯುಸಿನೆಸ್ ಮತ್ತು ಅದರ ಹಣ ಎರಡೂ  ಬೇಕಾಗಿಲ್ಲ . ನಿಮಗೆ ಇಷ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ಕೆಲಸಕ್ಕೆ ಹೊಗುತ್ತಿರಲಿಲ್ಲ , ಬಿಟ್ಟರೆ ನಿಮ್ಮಮ್ಮನಿಗೆ ಎರಡು ಹೊತ್ತು ಊಟ ಹಾಕಿ ನೆಮ್ಮದಿಯ ಬದುಕು ನೀಡುವಷ್ಟು ಸಂಬಳ ಬರುವ ಕೆಲಸ ಸಿಗುವಷ್ಟು ವಿದ್ಯೆ ನನ್ನಲ್ಲಿದೆ. ನಾನವರನ್ನು ಸಾಕುತ್ತೇನೆ . ಎಲ್ಲ ಸತ್ಯವನ್ನು ಅವರಿಗೆ ತಿಳಿಸಿ ಒಂದು ಹೊಸ ಬದುಕನ್ನು ಕಟ್ಟುತ್ತೇನೆ ಹಾಗಾಗಿಯೇ ಅವರನ್ನು ಕರೆದುಕೊಂಡು ಈ ಮನೆಯಿಂದ ಹೊರಡುತ್ತಿದ್ದೇನೆ. ದುಡ್ಡಿನ ಮದವಿಲ್ಲದೆ ಹುಡುಕಿ ಬಂದರೆ ನಮ್ಮ ಬದುಕಿನಲ್ಲಿ ನಿಮಗೂ ಒಂದು ಜಾಗ ಸಿಗಬಹುದೇನೋ ...

23 comments:

  1. ಜೀವನವೇ ಹಾಗೆ.....
    ಈಗ ನಮ್ಮನ್ನೇ ಉದಾಹರಣೆಗೆ ಇಟ್ಟುಕೊಂಡರೆ ಚಿಕ್ಕಂದಿನಲ್ಲಿ ನಾವು
    ಮಾಡುವ ಚೇಷ್ಟೆಗಳು ಸುಖಾ ಸುಮ್ಮನೆ ಪಡುವ ಸಂತೋಷಗಳು,ನಮ್ಮ ಏಮುಗಳು
    ಗೇಮುಗಳು.. ಯಾವುದು ಮೊದಲಿನ ಹಾಗೆ ಉಳಿದುಕೊಂಡಿದೆ ಈಗ...
    ಕಾಲದ ಜೊತೆ ಜೊತೆಗೆ ಮಬ್ಬಾಗಿ ಬಿಟ್ಟಿದೆಯೇನೋ... ಎಷ್ಟೋ ಬಾರಿ ನಾನೇ ಅಂದುಕೊಂಡಿದ್ದೇನೆ... ಪ್ರತಿಷ್ಟೆಯ ಹೆಸರನ್ನು ಮೇಲು ಮಾಡಿ ನಮ್ಮ ತನವನ್ನು ಬಿಟ್ಟಿಬಿಡುವುದು ಎಂತಹ ದುಃಖದ ವಿಷಯ ಅಲ್ವಾ...?
    ಹಣವು ಮನುಷ್ಯನನ್ನು ಬದಲಿಸುವುದೇ ಸಾಬೀತಾ?....

    ಒಳ್ಳೆಯ ಬರಹ ಸಂಧ್ಯಾ...
    ಶುಕ್ರಿಯಾ....

    ReplyDelete
    Replies
    1. ಹಣದ ಮದ ನೆತ್ತಿಗೇರದ ಮನುಷ್ಯ ಬಹುಶಃ ಬದಲಾಗಲಾರ ರಾಘವ..
      Thank you

      Delete
  2. ಕೆಲವು ಕಾಲ ಮೌನದ ಅಲೆಗಳು ಮನದ ಕಡಲಲ್ಲಿ ಬಡಿಯಲು ಶುರುಮಾಡಿದವು. ಸೂಪರ್ ಎಸ್ ಪಿ. ತುಂಬಾ ಸುಂದರ ಬರಹ. ಕಣ್ಣಲ್ಲಿನ ಹನಿ ಬೀಳಲೋ ಬೇಡವೋ ಎಂದು ಯೋಚಿಸುತ್ತ ಕುಳಿತಿದೆ . ಕಾರಣ ಒಂದು ಸಾಲನ್ನು ಓದಿ ಹನಿಗಳು ಬಿದ್ದರೆ ಮುಂದಿನ ಸಾಲುಗಳಿಗೆ ಏನು ಮಾಡಬೇಕು ಎನ್ನುವ ಗೊಂದಲ.
    ನಿಜ ಹಣದ ಹಿಂದೆ ಓಡಿದಾಗ ಬಾಕಿ ಭಾವನೆಗಳ ಕಡಲು ಬತ್ತಿ ಹೋಗುತ್ತವೆ. ಇಲ್ಲಿ ಮಗಳಾದ ಸೊಸೆಯ ಬಗ್ಗೆ ಹೃದಯ ತುಂಬಿ ಬರುತ್ತದೆ. ಬೆನ್ನು ತಟ್ಟಬೇಕು ಎನ್ನಿಸುತ್ತದೆ ಅಂತಹ ಮನಸುಳ್ಳ ಮಗಳಿಗೆ. ಒಳ್ಳೆಯ ಲೇಖನ ಅಭಿನಂದನೆಗಳು

    ReplyDelete
    Replies
    1. ಹಣ ಒಳ್ಳೆತನವನ್ನು , ಕೆಟ್ಟಗುಣವನ್ನು ಎರಡನ್ನು ಕಲಿಸಬಹುದು. ಆಯ್ಕೆ ನಮ್ಮದಿರಬೇಕು. ಹಣದ ಬಿಸಿ ನೀವಂದಂತೆ ಭಾವನೆಗಳ ಕಡಲನ್ನು ಆವಿಯಾಗಿಸಿದರೆ ಇಲ್ಲಿಯ ಮಗನಂಥವರು ಸಿಗಬಹುದೇನೋ ಅಲ್ಲವಾ ..
      Thank you

      Delete
  3. ಕಳೆದು ಹೋದ ಆ ದಿನಗಳು ಮತ್ತೆ ಜೊತೆಯಾಗಲಿ...
    ಖುಷಿಯ ಗಾಳಿಪಟ ಅಮ್ಮ ಮಗಳ ಮೊಗದ ನಗುವಲ್ಲಿ ಮತ್ತೆ ಹಾರಾಡಲಿ...
    ಇಷ್ಟವಾಯಿತು...ಭಾವ ಬರಹ...

    ReplyDelete
    Replies
    1. ಹಿಂದಿನ ಖುಷಿ ನೋಡಲಷ್ಟೇ ಚಂದ ಈಗ.. ಮುಂದಿನ ದಿನಗಳಲ್ಲಿ ನೀನಂದಂಥಹ ಖುಷಿಯ ಬೆಳಕು ಮತ್ತೆ ಬರಬಹುದೇನೋ ...

      Delete
  4. "ಕುರುಡು ಕಾಂಚಾಣ ಕುಣಿಯುತಲಿತ್ತೊ..
    ಕಾಲಿಗೆ ಬಿದ್ದವರ ತುಳಿಯುತಲಿತ್ತೊ..."

    ಬೇಂದ್ರೆ ಅಜ್ಜನ ಹಾಡುಗಳ ಸಾಲು ನೆನಪಾಯಿತು..

    ಭಾವನೆಗಳ ತಾಕಲಾಟ
    ಬಹಳ ಚೆನ್ನಾಗಿ ಬಿಂಬಿತವಾಗಿದೆ..

    ಅಭಿನಂದನೆಗಳು ....

    ReplyDelete
    Replies
    1. ಬೇಂದ್ರೆಯವರ ಒಳ್ಳೆಯ ಸಾಲುಗಳು ಇವು. ಆಕೆ ಒಂದು ಹಂತದವರೆಗೆ ತನ್ನೆಲ್ಲ ಭಾವನೆಗಳನ್ನು ಮುಚ್ಚಿಟ್ಟಳು. ಆದರೆ ಯಾವಾಗ ಸಂಸಾರದ ಚೌಕಟ್ಟೇ ಕಿತ್ತು ಹೋಗುವ ಭಯ ಶುರುವಾಯಿತೋ ಆಗ ಭಾವನೆಗಳ ಕಟ್ಟೆಯೊಡೆಯಿತು ಅಲ್ಲವಾ ...
      Thank you Prakashanna

      Delete
  5. ಪುಟ್ಟ ತಂಗಿಯ ಬತ್ತಳಿಕೆಯಲ್ಲಿ ಎಂತಹ ವಿಚಾರಗಳ ಮಂಥನ ಇದೆ. ಅಬ್ಬ ಓದುತ್ತಿದ್ದರೆ ಮನಸ್ಸು ಭಾರವಾಗುತ್ತದೆ. ಬಹಳ ಒಳ್ಳೆಯ ಲೇಖನ ಪ್ರತೀ ಕುಟುಂಬದವರು ಇದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಕೇವಲ ಜೀವನದ ಶೋಕಿಗಾಗಿ ಹೆತ್ತವರನ್ನು ಕೈಷ್ಟವಾಗಿ ಕಾಣುವ ಇಂತಹ ಮಕ್ಕಳಿಗೆ ಧಿಕ್ಕಾರವಿರಲಿ ಆಲ್ವಾ ಒಳ್ಳೆಯ ಲೇಖನ ಬರೆದ ತಂಗಿಗೆ ಜೈ ಜೈ ಹೊ.

    ReplyDelete
  6. tumba chennagi, bhavanatmakavagi barediddeera:)I love it.

    ReplyDelete
  7. ಬದುಕಿನಲ್ಲಿ ಬೆಲೆ ಯಾವುದಕ್ಕೆ ಕೊಡಬೇಕು ಎನ್ನುವುದನ್ನು ನಿಮ್ಮ ಕತೆ ಚೆನ್ನಾಗಿ ಹೇಳುತ್ತದೆ. ನಿಮ್ಮ ಕಥಾನಾಯಕಿಯ ಭಾವನೆ ಹಾಗು ಧೈರ್ಯ ಮೆಚ್ಚುವಂತಹವು. ಒಂದು ಉತ್ತಮ ಕತೆಗಾಗಿ ಅಭಿನಂದಣೆಗಳು.

    ReplyDelete
  8. ತುಂಬಾ ಚೆನ್ನಾಗಿದೆ ಕಥೆ... ಯಾರ ಜೀವನದಲ್ಲೂ ಬರದಿರಲಿ ಇಂತಹ ಘಟನೆಗಳು...

    ReplyDelete
  9. ಲೇಖನಗಳು ಶುರುವಾದಾಗ ಆರಂಭದಲ್ಲಿ ಸಂತಸ ತುಂಬಿ ಬರುತ್ತೆ.. ನಿಧಾನವಾಗಿ ದಾಪುಗಾಲು ಇಡುತ್ತ ಹೋಗುವಾಗ ಖುಷಿಯಾಗುತ್ತದೆ. ಪ್ರತಿಯೊಂದು ಮೈಲುಗಲ್ಲುಗಳು ನಮ್ಮಲ್ಲಿನ ಭಾವಗಳನ್ನು ಗುರುತಿಸುತ್ತಾ ಹೋಗುತ್ತದೆ.

    ಅರ್ಧ ಶತಕದ ಸಂಭ್ರಮದಲ್ಲಿ ಸಂಧ್ಯೆಯಂಗಳದಿ ಬ್ಲಾಗ್ ರಂಗವಲ್ಲಿಯನ್ನು ಹಾಸಿ ಓದುಗರ ಮನಸ್ಸನ್ನು ಸೆಳೆಯುತ್ತಿದೆ. ಈ ಮೈಲುಗಲ್ಲಿನ ಈ ಲೇಖನ ನಿಜವಾಗಿಯೂ ಈ ಬ್ಲಾಗಿಗೊಂದು ಕಲಶ ಪ್ರಾಯ. ಅಭಿನಂದನೆಗಳು ಪುಟ್ಟಿ ಚಂದವಾಗಿ ಹರಡಲಿ ಮನದ ರಂಗವಲ್ಲಿ

    ReplyDelete
  10. ಸಂಧ್ಯಕ್ಕಾ ... ಒಳ್ಳೆಯ ಬರಹ.... ಭಾವನೆಗಳು, ಮೌಲ್ಯಗಳು ಚೆನ್ನಾಗಿ ಮೂಡಿ ಬಂದಿವೆ .... ಮಗ ಕುರುಡು ಕಾಂಚಾಣದ ಬೆನ್ನಿಗೆ ಬಿದ್ದರೆ ಸೊಸೆ ಅತ್ತೆಗೆ ತಾಯಿಯಾದಳು....
    ನೆಮ್ಮದಿ ಇರುವುದು ಒಡನಾಟ, ಪ್ರೀತಿಯಲ್ಲಿ.. ಅಷ್ಟು ಬದುಕಲು ಸಾಕಷ್ಟು ದುಡ್ಡು ಇದ್ದರೆ ನೆಮ್ಮದಿಯಿರುತ್ತೆ .... ದುಡ್ಡು ಜಾಸ್ತಿ ಆದಂತೆ ನೆಮ್ಮದಿ ಕಡಿಮೆಯಾಗುತ್ತೆ... ಇದು ನನ್ನ ಅಭಿಮತ... ನಮ್ಮ ಬಾಲ್ಯದಲ್ಲಿ ದುಡ್ಡಿಲ್ಲದೆ ಪೇಟೆಯಲ್ಲಿ ತಿರುಗಿ ಎಲ್ಲದನ್ನೂ ಕಣ್ಣಿನಲ್ಲೇ ನೋಡಿ ಆನಂದಿಸಿ, ಎಲ್ಲೋ ಅಪರೂಪಕ್ಕೆ, ಹಬ್ಬಕ್ಕೆ ಹೊಸ ಬಟ್ಟೆ ತಂದ ಖುಷಿ ಈಗ ಬೇಕೆಂದಾಗ ಹೋಗಿ, ಕಣ್ಣಿಗೆ ಚಂದ ಕಂಡ ಬಟ್ಟೆ ತಂದಲ್ಲಿದೆಯೇ...?!?

    ReplyDelete
    Replies
    1. ನಮ್ಮ ಬಾಲ್ಯದಲ್ಲಿ ದುಡ್ಡಿಲ್ಲದೆ ಪೇಟೆಯಲ್ಲಿ ತಿರುಗಿ ಎಲ್ಲದನ್ನೂ ಕಣ್ಣಿನಲ್ಲೇ ನೋಡಿ ಆನಂದಿಸಿ, ಎಲ್ಲೋ ಅಪರೂಪಕ್ಕೆ, ಹಬ್ಬಕ್ಕೆ ಹೊಸ ಬಟ್ಟೆ ತಂದ ಖುಷಿ ಈಗ ಬೇಕೆಂದಾಗ ಹೋಗಿ, ಕಣ್ಣಿಗೆ ಚಂದ ಕಂಡ ಬಟ್ಟೆ ತಂದಲ್ಲಿದೆಯೇ...?!?
      ನಿನ್ನ ಈ ಮಾತುಗಳು ನಿಜ ಕಾವ್ಯ. ಯೋಚಿಸುವಂತೆ ಮಾಡುತ್ತಿದೆ, .
      thank you ..

      Delete
  11. ಸಂಧ್ಯಾ ಡಾರ್ಲಿಂಗ್
    ನಿನ್ನ ಕಥೆಯ ನಾಯಕಿಯಂತಹ ಸೊಸೆ ಎಲ್ಲ ಅತ್ತೆಮ್ಮಂದಿರಿಗೂ ಸಿಕ್ಕರೆ ಯಾವ ವೃದ್ದ ತಂದೆ ತಾಯಿಗಳು ಅನಾಥಾಶ್ರಮದ ಬಾಗಿಲ ಕಡೆ ಮುಖವೂ ಮಾಡುವುದಿಲ್ಲ ನೋಡು.. ಈ ಸೊಸೆಯ ಪಾತ್ರ ಸಮಾಜಕ್ಕೆ ಮಾದರಿ...
    ಒಳ್ಳೆ ನಿರೂಪಣೆ... ಚಂದ ಬರ್ದಿದ್ದಿ.. ಸೊಸೆಯ ನಿರ್ಧಾರ ಶ್ಲಾಘನೀಯ...

    ReplyDelete
  12. ಹಾಯ್ ಪುಟ್ಟಾ,

    ನಿನ್ನ ಬರವಣಿಗೆಯನ್ನು ಓದುತ್ತಿದ್ದರೆ ನಾನು ನಿನಗಿಂತ ದೊಡ್ಡವಳೆಂದು ಹೇಳಿಕೊಳ್ಳುವುದೇ ಅಲ್ಲ.ಎಂಥಾ ಅನುಭವದ ಬರಹಗಳು ಅಬ್ಬಾ! ಪುಟ್ಟ ಪೋರಿಯ ಖಜಾನೆಯಲ್ಲಿ ಏನೇನು ಸರಕುಗಳಿವೆಯೋ ! ನಿನ್ನ ಬರಹದಲ್ಲಿನ ಪ್ರೌಢಿಮೆಗೆ ನನ್ನ ಮೆಚ್ಚಿಗೆಯ ಮುತ್ತುಗಳು.
    ಆದರೆ ಸಂದ್ಯಾ, ಇಂಥಾ ಸೊಸೆಯಂದಿರೂ ಇರುತ್ತಾರಾ? ವಾಸ್ತವಕ್ಕೆ ಸ್ವ.......ಲ್ಪ ದೂರ ಅಂತ ಅನಿಸುತ್ತದೆ.ಇರಲಿ ಏನೇ ಆದರೂ ಅದನ್ನೇ ವಾಸ್ತವವಾಗಿಸುವ ವಾತಾವರಣ ಮೂಡಲಿ.
    ಭಾಷೆ ಮತ್ತು ಭಾವ super!

    ReplyDelete
  13. ಸಂಧಾಯಕ್ಕಾ ತುಂಬಾ ಚೆನ್ನಾಗಿದ್ದು...... ಈ ಲೇಖನ ಓದಿದವರು ಯಾರಾದ್ರೂ ನಿಂಗೆ ಮದುವೆ ಆಜಿಲ್ಲೆ ಹೇಳಲ್ಲೆ ಸಾಧ್ಯ ಇಲ್ಲೆ.....

    ReplyDelete
  14. no words... sandhya...!! Simply superb..!!

    ReplyDelete
  15. naan innondu sala ee story odide nijvalu thumba chennagide simply superb kanri

    ReplyDelete
  16. Enri innu anta mamatamayi hrudaya irroru sigtara......!!?

    ReplyDelete