Tuesday 26 September 2017

ಪಾರೋತಿ


"ಏನು ಪುಟ್ಟಮ್ಮ ಇಲ್ಲಿ ಕುಳಿತಿದ್ದೀರಿ, ಮಳೆ ನೋಡುಕಾ" ಎನ್ನುತ್ತಾ ಸುಟ್ಟ ಹಲಸಿನ ಹಪ್ಪಳ ಹಿಡಿದು ಪಾರೋತಿ  ಬಾಲ್ಕನಿಗೆ ಬಂದಾಗ ನಾ ಮಳೆ ದಿಟ್ಟಿಸುತ್ತಿದ್ದೆ. 

"ಕುಳಿತು ನೋಡುವಂಥ ಒಂದೇ ಒಂದು ಮಳೆ ಬರಲಿಲ್ಲ ನೋಡು" ಎಂದೆ. 

"ಮಳೆ ಏನು ನೋಡುದು, ಮಕಾ ಮುಸುಡಿ ಇಲ್ಲದೇ ಸುರಿತದೆ. ಅದ್ರಾಗ್ ಏನ್ ಚಂದವೋ ನಾ ಕಾಣೆ" ಎಂದಳು. 

ಹಾಗಲ್ವೆ ಮಳೆ ಅಂದ್ರೆ ಖುಷಿ ಅಲ್ವೇನೆ . ಈಗ ನಂಗೆ ನೋಡು ಮಳೆ ಅಂದ್ರೆ ಎಷ್ಟೆಲ್ಲ ನೆನಪು ಬರುತ್ತೆ ಗೊತ್ತಾ?    ಅಂದೆ . ಮಳೆ ಎಂದರೆ ಪ್ರಾಣ ಬಿಡುವ ನಾನು ಅವಳುತ್ತರಕ್ಕೂ ಕಾಯದೇ ನೆನಪಿಗೆ ಜಾರಿ ಬಿಟ್ಟೆ. 

ಅಪ್ಪ ಅಮ್ಮನಿಂದ ದೂರವಿರುತ್ತಿದ್ದ ನನಗೆ ಕೆಲವೊಮ್ಮೆ ಒಂಟಿತನ ಕಾಡುತ್ತಿತ್ತು‌. ಆಗೆಲ್ಲ ಕಿಟಕಿಯ ಪಕ್ಕ ಕುಳಿತು ಆಗಸ ನೋಡುತ್ತಿದ್ದೆ. ಆಗಿಂದಲೇ ನನಗೆ ಮಳೆ ಆತ್ಮೀಯವಾಗಿದ್ದು. ಉದ್ದ ಜಡೆ ಜೋರು ಮಳೆಗೆ ಒದ್ದೆಯಾದಾಗೆಲ್ಲ ಹೊಡಸಲ ಬೆಂಕಿಯಲ್ಲಿ  ಕೂದಲು ಒಣಗಿಸೋ ಸಂಭ್ರಮ.ಆಗೆಲ್ಲ ಕೂದಲಿಗೆ ಬೆಂಕಿಕಿಡಿ ತಾಗದಂತೆ ಅಜ್ಜಿ ಪಕ್ಕದಲ್ಲಿ ಕುಳಿತುಕೊಂಡು ನೋಡಿಕೊಳ್ಳುತ್ತಿದ್ದಳು. ಸಂಜೆಯಾದರೆ ಸುಟ್ಟ ಹಲಸಿನ ಹಪ್ಪಳದ ಜೊತೆ ಅದೇ ಹೊಡಸಲ ಮುಂದೆ ಕುಳಿತು ಅದೇಷ್ಟು ಭೂತ, ವರ್ತಮಾನದ ಕತೆಗಳಿಗೆ ಕಿವಿಯಾಗುತ್ತಿದ್ದೆವು ಗೊತ್ತಾ.? ಹುಟ್ಟಿದ ಭವಿಷ್ಯದ ಕನಸುಗಳೆಷ್ಟೋ.. ಅದೇ ಬೆಂಕಿಯಲ್ಲಿ ಕರಗಿದವಕ್ಕೂ ಲೆಕ್ಕವಿಲ್ಲ ಬಿಡು. ನೆನಪುಗಳು ಮತ್ತಷ್ಟು ಮತ್ತಷ್ಟುಮುತ್ತಿಕೊಳ್ಳುವ ಮೊದಲೇ  ನನ್ನದೇ ಲಹರಿಯಲ್ಲಿ  ಅವಳಸ್ತಿತ್ವವನ್ನೂ ಮರೆತು ಮಾತನಾಡುತ್ತಿದ್ದವಳು ಪಕ್ಕನೆ ತಿರುಗಿ ನಿಂಗೇನೂ ನೆನಪುಗಳಿಲ್ಲವ  ನಿಮ್ಮೂರ ಮಳೆ ಜೊತೆ? ಎಂದು ಕೇಳಿದೆ. 

"ಏನು ನೆನಪಾಗಬೇಕು ಹೇಳಿ. ಮಳೆ ಬಂದರೆ ತುಂಬಿ ಹರಿಯೋ ತುಂಗೆ. ಮನೆ ಸುತ್ತೆಲ್ಲ ನೀರು ತುಂಬಿ ದ್ವೀಪವಾಗಿಬಿಡ್ತಿತ್ತು.  ಅದ್ ಬಿಟ್ರೆ ತುಂಗೆಯಲ್ಲಿ ಕೊಚ್ಚಿ ಹೋದ ಅಪ್ಪ ಅಮ್ಮ. ಕೊನೆಯ ಸಾರಿ ಎಂಬಂತೆ ದಡಕ್ಕೆಳೆಯಲು ಪ್ರಯತ್ನಿಸಿದಾಗ ಸಿಕ್ಕ ಅಮ್ಮನ ಸೀರೆ" ಎಂದಳು. ಧ್ವನಿಯಲ್ಲಿ ಸ್ವಲ್ಪವೂ ಏರಿಳಿತವಿರಲಿಲ್ಲ !

 ನನಗೆ ಪಿಚ್ಚೆನಿಸಿ ಮಾತು ಬದಲಾಯಿಸಲು "ಈ ಊರಿನ ಮಳೆ ಜೊತೆ ? " ಎಂದು ಕೇಳಿಬಿಟ್ಟೆ. 

"ಅವ ಸಿಕ್ಕಿದ್ದು ಇಂಥದ್ದೇ ಒಂದು ಮಳೆಗಾಲದಲ್ಲಿ.. ಅವ ನನ್ನ ತೊರೆದು ತೋದದ್ದೂ ಇಂಥದೇ ಮಳೆಗಾಲದಲ್ಲೇ " ಎಂದು ಖಾಲಿಯಾದ ಬಟ್ಟಲ ತೆಗೆದುಕೊಂಡು ಸರಸರನೆ ಮೆಟ್ಟಿಲಿಳಿದು ಹೋದಳು. ಅವಳ ಮುಖವನ್ನೊಮ್ಮೆ ಓದಬೇಕೆಂದುಕೊಂಡವಳಿಗೆ ಮಬ್ಬು ಬೆಳಕಲ್ಲಿ ಕಂಡಿದ್ದು ಅವಳ ಬೆನ್ನ ಮೇಲಿದ್ದ ಬರೆ.. ಮನಸ್ಸೀಗ ಮಳೆ ತೋಯಿಸಿದ ಕೆರೆಯಾಗಿತ್ತು. ಪಾರೋತಿ ತುಂಬಿಕೊಂಡಿದ್ದಳು. 

ಈ ಪಾರೋತಿ ಶೃಂಗೇರಿ ಕಡೆಯವಳು. ಇಲ್ಲಿನ ಶಂಕ್ರನನ್ನು ಮದುವೆಯಾಗಿ ಈ ಊರಿಗೆ ಬಂದವಳು ಇಲ್ಲಿನ ನಡೆ ನುಡಿಯನ್ನೂ ಅದೆಷ್ಟು ಬೇಗ ಕಲಿತಿದ್ದಳೆಂದರೆ ನಮ್ಮೂರಿನ ಮಗಳೇ ಆಗಿಬಿಟ್ಟಿದ್ದಾಳೆ.  ಸ್ವಂತ ಜಮೀನಿನಲ್ಲಿ ಬೆಳೆ ತೆಗೆಯುತ್ತಾ, ಅವರಿವರ ಮನೆ ಕೊಟ್ಟೆ ಕೊನೆ,ಮದ್ದು ಮಾಡುತ್ತಾ, ಜೇನು ಕೀಳುತ್ತಾ ಇದ್ದೊಂದು ಅಜ್ಜಿ ಯನ್ನೂ ಹೆಂಡತಿಯನ್ನೂ ನೆಮ್ಮದಿಯಿಂದ ಸಾಕುತ್ತಾ ನಾಲ್ಕು ಜನ ಮೆಚ್ಚುವಂತೆ ಸಂಸಾರ ಮಾಡುತ್ತಿದ್ದ ಶಂಕ್ರ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ.ತಿಂಗಳುಗಳು ಕಳೆದರೂ ಶಂಕ್ರ ಪತ್ತೆಯಾಗದಿದ್ದಾಗ, ಅವರಿವರ ಕಾಡಿಬೇಡಿ ಒಂದು ಹೊಲಿಗೆ ಅಂಗಡಿ ಹಾಕಿಸಿಕೊಂಡು, ಸಂಸಾರವನ್ನು ತನ್ನ ಹೆಗಲಿಗೆ ತೆಗೆದುಕೊಂಡಿದ್ದಳು. ಆದರೆ ಆ ಅಜ್ಜಿ ಅದೊಂದು ದಿನ ನನ್ನ ಕನಸಲ್ಲಿ ಮೊಮ್ಮಗ ಕಂಡಿದ್ದ, ಅವನು ಬದುಕಿಲ್ಲ, ನೀ ಮುತ್ತೈದೆಯಾಗಿರಬಾರದು ಎಂದು ಯಾರು ಹೇಳಿದರೂ ಕೇಳದೆ ಪಾರೋತಿಯ ಕುಂಕುಮ, ಬಳೆ, ಹೂವುಗಳ ತೆಗೆಸಿಬಿಟ್ಟಳು. ಅವಳ ಕಣ್ಣಿಗೆ ಕಾಣದಂತೆ ಒಂದೆರಡುಬಾರಿ ಸಿಂಗರಿಸಿಕೊಂಡಿದ್ದು ಗೊತ್ತಾಗಿ ಮುದುಕಿ ಇವಳ ಬೆನ್ನಿಗೆ ಬರೆ ಎಳೆದಿದ್ದಳು.  ನಾನೊಮ್ಮೆ ಇವಳನ್ನು ಕೇಳಿದ್ದೆ "ಅಜ್ಜಿ ಹೇಳಿದ್ದು ನಿನಗೂ ನಿಜ ಅನಿಸುತ್ತಾ ?"ಅದಕ್ಕವಳು "ಇಲ್ಲ ಅದ್ರೆ ಅವಳನ್ನು ಖುಷಿಯಿಂದ ಇಡಬೇಕು ನೀನು ಅಂತ ಶಂಕ್ರ ಮಾತು ತಗಂಡಾನೆ. ಪುಟ್ಟಮ್ಮ ನಂಗೆ ನಿಮ್ ಥರ ಪ್ರೀತಿ ಪ್ರೇಮ ಅಂತ ದೊಡ್ಡ ದೊಡ್ಡ ಮಾತೆಲ್ಲ ಆಡಾಕೆ ಬರುದಿಲ್ಲ. ಆದ್ರೆ ಮದ್ವೆ ಆದ ಸುರುವಲ್ಲಿ ಶಂಕ್ರ ನಂಗೆ ನಿಮ್ಮನೆ ಟೆರ್ರೆಸ್ ಮೇಲೆ ಕುಂತು ನಕ್ಷತ್ರ ನೋಡುದು ಕಲ್ಸಿಕೊಟ್ಟಿದ್ದ. ಈಗಲೂ ಬೇಸರ ಆದಾಗೆಲ್ಲ ನಕ್ಷತ್ರ ನೋಡ್ತೆ. ಆಗೆಲ್ಲ  ನಂಗೆ ಅಲ್ಲೆಲ್ಲೋ ಶಂಕ್ರನೂ ನನ್ಹಾಂಗೆ ಇದೇ ನಕ್ಷತ್ರ ನೋಡ್ತಿದ್ದಾ ಈಗ ಅನ್ನಿಸ್ತದೆ. ನಂಗೆ ಹಾಂಗೆ ಅನ್ನಿಸ್ದೆ ಇದ್ದ ದಿನ ನಾನು ಅಜ್ಜಿ ಹೇಳಿದ್ದನ್ನ ಒಪ್ಪಿಕೊಳ್ತೀನಿ. ಅಲ್ಲಿವರೆಗೂ ಅವಳ ಸಮಾಧಾನಕ್ಕೆ ಇದೆಲ್ಲ. ಮನಸಲ್ಲಿ ನಾ ಇನ್ನೂ ಮುತ್ತೈದೆನೆಯಾ" ಎಂದಿದ್ದಳು."ಇಂದೋ ನಾಳೆ ಉದರೋ ಆ ಮುದುಕಿಗಾಗಿ ಗೇಯೋ ಬದಲು ಆ ಪುಟ್ಟಣ್ಣನ ಕಟ್ಟಿಕೊಂಡು ಚಂದ ಸಂಸಾರ ಮಾಡಬಹುದಿತ್ತು"  ಎಂದು ಅತ್ತೆ  ಆಗಾಗ ಇವಳ ನೋಡಿ ಹಲುಬುತ್ತಾರೆ.  ಪಾರೋತಿ ಮಾತ್ರ ನಿರ್ಲಿಪ್ತೆ. ಪಾರೋತಿಯ ಮಾತುಗಳ ನೆನಪಾಗಿ "ಭೂರಮೆ ಕಾಯುತ್ತಿದ್ದಾಳೆ ಬಾರೋ ಮಳೆರಾಯ" ಎಂದು ಆಗಸವನ್ನು ಬೇಡಿಕೊಂಡು ಒಳಬಂದೆ.

ಬೇಡಿಕೊಂಡಿದ್ದೇ ನಿಜವಾಗುವಂತೆ ಮಳೆ ಭಯಂಕರವಾಗಿ ಶುರುವಾಗಿತ್ತು. ಗುಡುಗು, ಮಿಂಚು , ಸಿಡಿಲ ಅಬ್ಬರಕ್ಕೆ ಮಳೆ ಬೇಕೆಂದವಳೂ ಕೂಡ ಭಯಗೊಂಡಿದ್ದೆ. ಅತ್ತೆ ಬಂದು ನನ್ನ ಪಕ್ಕದಲ್ಲೆ ಮಲಗಿದ್ದರು. 

ಬೆಳಿಗ್ಗೆ ಏಳೋ ಹೊತ್ತಿಗೆ ಮಳೆಯ ಆರ್ಭಟ ಕಡಿಮೆಯಾಗಿದ್ದರೂ ಅನಾಹುತಕ್ಕೇನೂ ಕಡಿಮೆಯಿರಲಿಲ್ಲ.  ಎದ್ದವಳು  ಎಂದಿನಂತೆ ಪಾರೋತಿಯ ಮನೆ ಕಡೆ ನೋಡಿದೆ. ತುಂಬಾ ಜನ ಸೇರಿದ್ದರೂ ಸ್ಮಶಾನ ಮೌನವಿತ್ತು. ಅತ್ತೆಯ ಮುಖ ನೋಡಿದೆ, " ನಿನ್ನೆಯ ಗಾಳಿ ಮಳೆಗೆ ನಮ್ಮೂರಿಗೆ ಬರುತ್ತಿದ್ದ ಬಸ್ಸಿನ ಮೇಲೆ ಮರ ಬಿದ್ದು ನಾಲ್ಕು ಜನ ಸತ್ತರಂತೆ. ಅವರಲ್ಲಿ ಶಂಕ್ರನೂ ಒಬ್ಬ. ಊರ ಬಿಟ್ಟು  ಎಲ್ಲೆಲ್ಲೋ ಅಲೆದವನ ಸಾವು ಮಾತ್ರ ಊರ ಬಾಗಿಲಲ್ಲೇ ಬರೆದಿತ್ತು ನೋಡು. ಪಾಪ  ಆ ಹೆಣ್ಣು ಜೀವ " ಎಂದರು. 

ಕೈ ಕಾಲು ಸಣ್ಣಗೆ ನಡುಗುತ್ತಿದ್ದರೂ ಪಾರೋತಿಯ ಮನೆಯಂಗಳಕ್ಕೆ ಬಂದೆ. ನನ್ನ ಕಂಡವಳೇ ಓಡಿ ಬಂದು ತಬ್ಬಿಕೊಂಡಳು. " ಮನಸ್ಸಿನಲ್ಲಿ ಮುತ್ತೈದೆಯೇ ಎಂದವಳು ಹಾಗೆಯೇ ಬದುಕಿಬಿಡುತ್ತಿದ್ದಳು. ನೀ ಬರಲೇ ಬಾರದಿತ್ತು ಹಾಗೆಯೇ ಶಂಕ್ರನೂ " ಎಂದು ಮೊದಲ ಬಾರಿಗೆ ಮಳೆಯನ್ನು ಶಪಿಸುತ್ತಿದ್ದೆ.  ನನ್ನ ಮನಸ್ಸನ್ನು ಓದಿದವಳಂತೆ " ಇಷ್ಟು ದಿನ ಇದ್ದೂ ಇಲ್ಲದಂತೆ ಬದುಕಲಿಲ್ಲವ. ಈಗ ಇಲ್ಲವೇ ಇಲ್ಲ ಎಂದುಕೊಂಡು ಬದುಕುವುದು ಕಷ್ಟವಲ್ಲ ಪುಟ್ಟಮ್ಮ . ಎಲ್ಲ ಕೆಲಸಕ್ಕೂ ನಾನೇ ಮುಂದಾಗಬೇಕು ಈಗ, ಸಂಜೆ ದುಃಖ ಕರಗಿಸಿಕೊಳ್ಳುಕೆ ಹೆಗಲು ಕೊಡಿ ಸಾಕು" ಎಂದವಳು ಮರೆಯಾದಳು.

ಆಗಸ ಹರಿದಂತೆ ಮುಸಲಧಾರೆ ಮತ್ತೆ ಶುರುವಾಯ್ತು. ಶಂಕ್ರನ ಹೆಣ, ಸುತ್ತ ನೆರೆದ ಮಂದಿ, ಗೋಳಾಡುವ ಮುದುಕಿ ಎಲ್ಲರೂ ಮಸುಕು ಮಸುಕು... ಪಾರೋತಿಯ ಚಿತ್ರ ಮಾತ್ರ ಮನಸ್ಸಿನಲ್ಲಿ ನಿಚ್ಛಳ...

Monday 14 August 2017

ಮೇಘಶ್ಯಾಮ


ಗೊಲ್ಲನೆಂಬರು.. ನಲ್ಲನೆಂಬರು..
ನಾ ನೀಲ ವರ್ಣದವ  ಮೇಘಶ್ಯಾಮ..
ಬಾಲನಿನ್ನೂ ನಿನ್ನ ಮಗ
ಹೊಡೆಯದಿರೆ ಅಮ್ಮಾ....
 ಜೇನ ತೆಗೆಯುವವ ಕೈ ನೆಕ್ಕದೆ ಇದ್ದಾನೇನೆ ?
ಗೋ ಮಾತೆಯ ಕಾಯ್ವವ ನಾ ಕದ್ದು ಹಾಲು
ಕುಡಿದರೆ ತಪ್ಪೇನೆ ?

ಅಟ್ಟಾಡಿಸಿ ಕೋಲ ತೆಗೆದುಕೊಂಡು
ಓಡಿಸಬೇಡ ಮಹರಾಯ್ತಿ..
ದೊಡ್ಡವನಾದಂತೆ ತುಂಟಾಟಕ್ಕಿಲ್ಲವೇ ರಿಯಾಯಿತಿ..
ನಿನಗೆ ಚಾಡಿ ಹೇಳಿದವರೇ
ಸುಮ್ಮಗೆ ಕರೆದು ಕೊಡುವರು
ನೀನೆ ಕೇಳು ತಿಳೀದೀತು ನಿಜಾಯತಿ..

ಹೊಡೆದಂತೆ ನಟಿಸಿ, ಕೋಲ ಒಲೆಗೆಸೆದು..
ದೃಷ್ಟಿ ತೆಗೆದು, ನೆಟಿಕೆ ಮುರಿದು
ಮಡಿಲಲ್ಲಿ ಕೂರಿಸಿಕೊಂಡು ನೊರೆ ಹಾಲ
ಕೊಡುವವಳು ನೀ ಕ್ಷಮಾಯಾಧರಿತ್ರಿ..
ಮಡಿಲ ತುಂಬಿ ನೊರೆ ಮೀಸೆಯಡಿಯಲ್ಲಿ
ನಗುವ ನಾ ಜಗನ್ನಾಟಕ ಸೂತ್ರಧಾರಿ

Sunday 5 February 2017

ಹಾರ್ಟ್ ಬೀಟ್....:)



ಬಹಳ ದಿನಗಳ ಮೇಲೆ ನಾನು.. ಅವಳು.. ಮತ್ತು ಕಾಫಿ...

ಏನಾದರೂ ಹೇಳು..

ಏನ್ ಹೇಳ್ಲಿ...

ಅವನ ಬಗ್ಗೆ ಹೇಳು...

ಅವನು...

ನಾನು ಕೇಳಿದ ಮೊದಲ ಹಾರ್ಟ್ ಬೀಟ್ ಅವನದ್ದೇ... ಹೌದು ಅವತ್ತು ಅದೇನೋ ಓದುತ್ತಿದ್ದವನು ನನ್ನನ್ನು ಎದೆಗೊರಗಿಸಿಕೊಂಡಿದ್ದ..... ಡಬ್ ಡಬ್.. ಊಮ್ ಮ್ ಮ್.. ಲಬ್ ಡಬ್ ಊಹು ಆ ಸದ್ದೇ ಬೇರೆ.. ಜೀವನದಲ್ಲೇ ಮೊದಲಬಾರಿ ಕೇಳಿದ್ದೆ..!! ಬಹಳ ಖುಷಿಯಾಯ್ತು.,. ಮತ್ತೆ ಮತ್ತೆ ಕೇಳಿದೆ.. ಇದೇನ್ ನೀನು ಚೆಲ್ ಚಲ್ಲಾಗಿ ಆಡಿದ್ದು ಅನ್ನಬೇಡ ಮತ್ತೆ.. ಮೊದಲ ಸಲ ಅದೇನೋ ಹೊಸದನ್ನು ಕಂಡ ಮಗುವಾಗಿತ್ತು ಮನಸ್ಸು. ಕುತೂಹಲಕ್ಕೆ ಮತ್ತೆ ಮತ್ತೆ ಕೇಳಿದ್ದು.. ಅವ ಮಾತ್ರ ನನ್ನ ದುಪ್ಪಟ್ಟಾದ ಅಂಚು ಕೂಡ ಹಿಡಿಯಲಿಲ್ಲ.. ನಸುನಗುತ್ತ ಓದುತ್ತಲೇ ಇದ್ದ.. ಋಷಿಯಂತೆ.. ಅವತ್ತು ಅಷ್ಟುದ್ದದ ಬಟ್ಟಾ ಬಯಲಿನಂಥ ಜಗುಲಿಯಲ್ಲಿ.. ಮಟಮಟ ಮಧ್ಯಾಹ್ನದಲ್ಲಿ ನಮಗಾಗಿ ಅಂಥದೊಂದು ಏಕಾಂತ ಅದ್ಹೇಗೆ ಹುಟ್ಟಿತ್ತೋ ಇಂದಿಗೂ ಕಾಣೆ.. ಮನೆಗೆ ಬಂದ ಮೇಲೂ ಮನಸ್ಸು ಕೇಳುತ್ತಿತ್ತು ಅವನನ್ನು ಏನಂತ ಕರೆಯಲೇ ಎಂದು...


ಬೀದಿಯ ಮಕ್ಕಳೆಲ್ಲ ಅವನಿಗೆ ಅಂಕಲ್ ಎನ್ನುತ್ತಿದ್ದರು. ನಾನೂ ಅವರೊಂದಿಗೆ ಆಡುವಾಗ ಅಂಕಲ್ ಬಾಲ್ ಪ್ಲೀಸ್.,. ಎಂದರೆ ಕಣ್ಣಲ್ಲೊಂದು ಅಸಹನೆ... ಬಾಲ್ ಕೊಡದೆ ಒಳಗೆ ಹೋಗುತ್ತಿದ್ದ.. ಹಿಂಬಾಲಿಸಿ ಹೋದರೆ.. ಕಿವಿ ಹಿಂಡಿ ,ಸಾರಿ ಹೇಳಿಸಿ ಬಾಲ್ ಕೊಡೊಹೊತ್ತಿಗೆ ಮಕ್ಕಳು ಬಾಲ್ ಮರೆತು ಬೇರೆ ಆಟಕ್ಕೆ ತೊಡಗುತ್ತಿದ್ದವು .ನಾನೋ ಮಕ್ಕಳನ್ನೇ ಮರೆತಿರುತ್ತಿದ್ದೆ.


ರಸ್ತೆಯಲ್ಲಿ ಹೋಗುತ್ತಿದ್ದಾಗ ಅದ್ಯಾರೋ ಬೇಕಂತಲೇ ಎಲ್ಲಿಗೋ ಕೈ ತಾಕಿಸಿ, ಕಣ್ಣುಹೊಡೆದು ಹೋಗಿರುತ್ತಾನೆ. ಇದನ್ನೆಲ್ಲ ಅವನಿಗೆ ಹೇಳಿದರೆ " ಕೈ ಹಿಡಿದು ನಿಲ್ಲಿಸಿ ಕಪಾಳಕ್ಕೆರಡು ಬಾರಿಸಿ ಬರಬೇಕಿತ್ತು. ಮುಂದೇನಾದರೂ ಆದರೆ ನಾನ್ ನೋಡಿಕೊಳ್ತಿದ್ದೆ" ಎನ್ನುವಾಗ ಅಣ್ಣ ಅವನು. ಆದರೆ ಹಾಗೆ ಕರೆಯಲು ಮನಸ್ಸೇ ಬಾರದು. ಎದುರುಮನೆಯ ಕಾಲೇಜುಹುಡುಗಿ ಅವನಿಗೆ ಅಣ್ಣಾ ಎಂದರೆ ನನಗೇನೋ ಸಮಾಧಾನ.


ಅದೆಲ್ಲ ಆವಾಗ.. ಈಗಿಂದು ಹೇಳು....


ಈಗ.,.

ಅಮ್ಮ ಅವನನ್ನು ಮಗನೆಂದಾಗ, ಅಪ್ಪ ಅವನನ್ನೇ ಆದರಿಸಿದಾಗ, ತಂಗಿ ಅವನನ್ನೇ ವಿಚಾರಿಸಿದಾಗ ನನ್ನವರನ್ನೇ ನನ್ನಿಂದ ದೂರ ಮಾಡಿದ ದುಷ್ಟ ಅವನು..


ಅವನಮ್ಮ ನನ್ನನ್ನು ಸೊಸೆ ಮುದ್ದು ಎನ್ನುವಾಗ, ಆ ಮನೆಯ ದೊಡ್ಡಪಾಲಿನ ಪ್ರೀತಿ ನನ್ನದಾದಾಗ, ಪ್ರತಿಯೊಂದು ಪ್ರಥಮಗಳೂ ನನಗಾಗೇ ಮೀಸಲಿರುವಾಗ, ಎಲ್ಲರೂ ನನ್ನನ್ನೇ ಮುದ್ದುಗರೆವಾಗ ದೂರ ನಿಂತು ನನ್ನನ್ನೇ ನೋಡೋವಾಗ ಇಷ್ಟ ಅವನು..


ತಿಂಗಳ ನೋವಲ್ಲಿ ಹೊಟ್ಟೆನೋವೆಂದರೆ ಕಷಾಯ ಮಾಡಿ ಕುಡಿಸಿ, ಕಿಪ್ಪೊಟ್ಟೆ ನೀವಿ.. ಅಂಗಾಲಿಗೆ ಎಣ್ಣೆ ಸವರಿ ನೆತ್ತಿ ತಟ್ಟಿ ಮಲಗಿಸುವಾಗ ಅಮ್ಮ ಅವನು...


ಗೊತ್ತಿಲ್ಲದೆ ತಪ್ಪಾದಾಗ, ತಪ್ಪು ಅಂತ ಗೊತ್ತಿದ್ದೂ ಮಾಡಿದ ಹುಂಬತನದ ಕೆಲಸಗಳಿಗೆ ಪಟ್ಟಾಗಿ ಕೂತು ಬುದ್ಧಿ ಹೇಳೊ ಅಪ್ಪ ಅವನು...


ಸೋತು ನಿಂತಾಗ, ನೊಂದಾಗ, ಇನ್ನು ಆಗೊಲ್ಲ ಎಂದು ಕುಸಿದು ಕುಳಿತಾಗ, ಕಣ್ಣಂಚಲ್ಲಿ ನೀರಿದ್ದಾಗ " ನಾನಿದ್ದೇನೆ" ಎನ್ನುವ ಭರವಸೆ ಅವನು...


ಮುಡಿಗಿಷ್ಟು ಹೂವಿಟ್ಟು ಗಲ್ಲ ಸವರಿ ಬೆಲ್ಲ ಕೇಳುವವನು.. ಕತ್ತಿನ ಸುತ್ತ ಮುತ್ತಿನ ಸರ.. ತೋಳಬಂದಿಯಾಗುವವ ನಲ್ಲ ಅವನು..


ಊಮ್ ಇಷ್ಟೆಲ್ಲ ಆಯ್ತು ... ಇನ್ನೇನು ಇಲ್ವಾ ಅಂತ ಕಣ್ಣು ಮಿಟುಕಿಸಿದಳು..


ಅವಳಿಂಗಿತ ಅರ್ಥವಾಗಿ ಅಂಗಾಂಗಗಳಲೆಲ್ಲ ಸಣ್ಣ ಕಂಪನ.. ಬೆನ್ನಹುರಿಯಾಳದಲೆಲ್ಲೋ ಛಳಕು... ನಸು ನಾಚುತ್ತಲೇ ಅದೇನೊ ಹೇಳಲೆಂದು ಬಾಯಿ ತೆರೆದವಳು ಹಿಂದೆ ತಿರುಗಿದೆ.. ಉಸಿರು ತಾಕುವ ಸನಿಹದಲ್ಲಿ ಅವನು.. "ನನ್ನ ನಗು ನೀನು" ಎನ್ನುತ್ತಾ ತೋಳಲ್ಲಿ ಬಳಸಿದ..

ಅವಳು ನಾಚಿ ನೀರಾಗಿ ಮರೆಯಾದಳು...


ಮತ್ತೀಗ,....


ನಾನು... ಅವನು... ಮತ್ತೊಂದು ಏಕಾಂತ....

ತುರ್ತಾಗಿ ಮತ್ತೊಮ್ಮೆ ನಾನು ಹಾರ್ಟ್ ಬೀಟ್ ಕೇಳಬೇಕು...,. :)

Sunday 8 January 2017

ಚಂಗು...


ಚಂಗು..
ಈ ಹೆಸರನ್ನು ಅದೆಷ್ಟೋ ನೋಟ್ ಬುಕ್ ಹಿಂದಿನ ಪೇಜ್ ನಲ್ಲಿ ಬರೆದಿದ್ದೆ., ಅದೇನೊ ಖುಷಿ ಅವನ ನೆನಪಾದರೆ. ಇವತ್ತು ಈ ಹೆಸರು ಬರೆಯಲು ಮನಸ್ಸು ಭಾರ.,...

ಅದು ಬಹುಷಃ ನನ್ನ ಬಿ. ಕಾಂ ಎರಡನೆಯ ಸೆಮಿಸ್ಟರ್ ಎಕ್ಸಾಮ್ ಟೈಮ್. ನಮ್ಮನೆಯ ರಾಣಿ ನಾಲ್ಕು ಮರಿಗಳ ತಾಯಿ.. ನಮ್ಮನೆಯ ನಾಯಿ ಕಾಳು ಸತ್ತು ಒಂದೆರಡು ವರ್ಷವಾಗಿತ್ತೇನೊ, ರಾಣಿ ಬಹಳ ಡಲ್ ಆಗಿಬಿಟ್ಟಿದ್ದಳು. ಅವಳಿಗೆ ಮರಿ ಹಾಕಿಸಿ ಆ ಗೂಡಿನದೊಂದು ಮರಿ ಸಾಕುವುದೆಂದು ತೀರ್ಮಾನವಾಗಿತ್ತು. ಹಾಗೆ ನಮ್ಮನೆಯ ಮುದ್ದು ಸದಸ್ಯನಾಗಿದ್ದು ಚಂಗುವೆಂಬ ಕಂದು ಬಣ್ಣದ ಮರಿ.,. ಮೊದಲು ಅವನಿಗೇನೋ ಬೇರೆ ಹೆಸರಿಟ್ಟಿದ್ದೆವು, ನೆನಪಿಲ್ಲ. ನನ್ನ ತಂಗಿ ರಾಜಕುಮಾರ್ ಸಿನಿಮಾ ನೋಡಿ, ಚಂಗು ಎಂದು ಕರೆಯಲು ಶುರುಮಾಡಿದಾಗ ಅವನು ಎಲ್ಲರಿಗೂ ಚಂಗುವೇ ಆದ. ಹೊಸ ಹೆಸರಿಗೆ ಬಹು ಬೇಗ ಹೊಂದಿಕೊಂಡ. ಚಿಕ್ಕಂದಿನಿಂದಲೂ ಬಹಳ ಸಂಭಾವಿತ. ಅವನದು ನಾಯಿ ಬುದ್ಧಿ ಎನ್ನುವುದಕ್ಕಿಂತ, ಬಹಳ ಬುದ್ಧಿ ಯುಳ್ಳ ನಾಯಿಯಾಗಿದ್ದ‌. ನಮ್ಮ ದುಃಖ, ನಮ್ಮ ಸಂತೋಷ, ಅವನಿಗೆ ಬೈದಿದ್ದು, ಮುದ್ದಿಸಿದ್ದು ಎಲ್ಲವೂ ಅರ್ಥವಾಗುತ್ತಿತ್ತು.


ಅವನಿಗೂ ಅಪ್ಪನ ಕಂಡರೆ ನಮಗೆಷ್ಟು ಭಯವಿತ್ತೋ ಅಷ್ಟೇ ಭಯವಿತ್ತು. ಅಮ್ಮನಿಗೆ ಅವ ನಾಲ್ಕನೇ ಮಗ, ಕಾಕ ಅವನ ಬೆಸ್ಟ್ ಫ್ರೆಂಡ್, ಎಲ್ಲೇ ಕಾಕ ಹೋದರೂ ಅಲ್ಲೆಲ್ಲ ಇವನೂ ಹಾಜರ್, ನಮಗೆಲ್ಲ ಬಾಡಿಗಾರ್ಡ್.. ಊರವರಿಗೆಲ್ಲ ಡೇಂಜರ್.. ಹಾಗಂತ ಅವನೇನು ಕಚ್ಚುವ ನಾಯಿಯೇನಲ್ಲ, ಹೆಚ್ಚು ಕಡಿಮೆ ಮೂರು ಅಡಿ ಎತ್ತರದ, ಜೂಲು ಬಾಲದ, ದಪ್ಪನೆಯ, ಕೆಂಚು ಬಣ್ಣದ ನಾಯಿಯನ್ನು ನೋಡಿದರೆ ಎಲ್ಲರೂ ಹೆದರುತ್ತಿದ್ದರು. ಅದೆಷ್ಟೋ ಜನ ಬರುವ ಮೊದಲು ಫೋನ್ ಮಾಡಿ " ನಾಯಿ ಕಟ್ಟಾಕಿ, ನಂಗ ಬರ್ತಾಇದ್ಯ "ಎಂದು ಹೇಳಿಯೇ ಬರುವುದಿತ್ತು. ಬೆಂಗಳೂರಿನಿಂದ ಮನೆಗೆ ಹೋದ ತಕ್ಷಣ ಓಡಿ ಬಂದು ಕಾಲು ನೆಕ್ಕಿ , ನಮ್ಮನ್ನು ಮುದ್ದಿಸಿ, ತಾನು ಮುದ್ದಿಸಿಕೊಂಡು ಹೋಗುತ್ತಿದ್ದ ನಮ್ಮ ಚಂಗು ಇನ್ನು ನೆನಪು ಮಾತ್ರ......


ಮಂಗ ಬಂದರೆ, ದನ ಬಂದರೆ ಕೂಗದಿದ್ದಾಗ " ಅಂಗಳಕ್ಕೆ ಒಂದು ಸಿಂಗಾರಕ್ಕೆ ನಾಯಿನೆಯ, ಕೂಗದಿಲ್ಲೆ, ಮಾಡದಿಲ್ಲೆ ಎಂದು ಅಮ್ಮ ಬೈಯ್ಯುವಂತಿಲ್ಲ ಇನ್ನು, ಹೊಸಗದ್ದೆಯ ಅಂಗಳದಲ್ಲಿನ್ನು ಸಿಂಗಾರವಿಲ್ಲ, ತಂಗಿ ಪ್ರಜ್ಞಾ ಮೂರುವರೆ ಬಸ್ಸಿಗೆ ಬರುವ ಹೊತ್ತಿಗೆ ಅವಳ ಬರುವಿಕೆಯನ್ನು ಗೇಟ್ ಹತ್ತಿರ ನಿಂತು ಕಾಯುವವರಿಲ್ಲ .ಇಂದು ಗದ್ದೆಗೆ ಹೊರಡುವ ಕಾಕನ ಕಾಲುಗಳು ತಡವರಿಸಬಹುದು. ಹೊರಗಡೆಯಿಂದ ಬಂದ ತಕ್ಷಣ. " ಅವನೆಲ್ಲಿ ಬಸ್ಯಾ" ಎಂದು ಹುಡುಕುವ ಅಪ್ಪನ ಕಣ್ಣುಗಳು ನಿರಾಶೆಗೊಳ್ಳಬಹುದು. ಮುಸ್ಸಂಜೆಯಲ್ಲಿ ದೋಸೆ ತಿನ್ನುತ್ತಾ ಕೊನೆಯ ತುತ್ತೊಂದನ್ನು ನಾಯಿಗೆ ತಿನ್ನಿಸುವ ಪರಿಪಾಠವುಳ್ಳ ಅಮ್ಮನಿಗೆ ದೋಸೆ ಗಂಟಲಲ್ಲಿ ಇಳಿಯದೇ ಇರಬಹುದು. "ಈ ಕುನ್ನಿ ವಸ್ವಂತಕ್ಕೆ ಸಂಕ್ಟ"ಎಂದು ಬಯ್ಯುತ್ತಾ ನಾಯಿಯನ್ನು ಒಳಗಡೆ ಹಾಕುತ್ತಿದ್ದ ಚಿಕ್ಕಮ್ಮ ಇಂದು ತಡವರಿಸಬಹುದು. ಅವನ ಒಂದು ಕ್ಷಣವೂ ಬಿಟ್ಟಿರದ ರಾಣಿ ಮನೆಯ ಮೂರು ಸುತ್ತು ತಿರುಗಿ ಅವನಿಗಾಗಿ ಹುಡುಕಿರಬಹುದು.


ಇನ್ನು ಬೆಂಗಳೂರಿನಿಂದ ಮನೆಗೆ ಹೋದರೆ ಅವನ ಖಾಲಿ ತಟ್ಟೆ, ಸರಪಳಿಗಳು ಅವನ ನೆನಪಿನ ಸುರುಳಿ ಬಿಚ್ಚುತ್ತವೆ. ಅವನ ಬಗೆಗೆ ನೂರು ಪ್ರಶ್ನೆ ಕೇಳುವ ಪಾರ್ಥನಿಗೆ ಅಕ್ಕ ಏನೆಂದು ಉತ್ತರಿಸುತ್ತಾಳೋ.. "ಬೌ ಬೌ ನೋಡು " ಎಂದರೆ ಅರ್ಥವಾಗದೆ, " ಚಂಗು ನೋಡು" ಎಂದ ತಕ್ಷಣ ನಾಯಿಯೆಡೆಗೆ ನೋಡುವ ನನ್ನ ಮಗಳಿಗೆ ನಾನೇನು ಹೇಳಲಿ....

ಚಂಗು ಮಿಸ್ ಯು .. ಲವ್ ಯೂ..