"ಅಯ್ಯೋ ಚುಕ್ಕಿ ತಪ್ಪಿತಲ್ಲೆ " ಅಂದೆ ಪಾವನಿಗೆ. ಒರೆಸೋ ಬಟ್ಟೆ ತರಲು ಒಳಗೆ ಹೋದಳು ಮದುಮಗಳು. "ಏನೂ ಮಾಡೋದು ಹೇಳು ಸಾಲು ತಪ್ಪಿಸಿದವಳು ನೀನೆ. ಹಿರಿಯರ ಮಾತು ಕೇಳಿ ಮದುವೆಯಾಗಿದ್ದರೆ ಈಗ ನಿನ್ನ ಮದುವೆಯಾಗಬೇಕಿತ್ತು. ತಂಗಿ ಮದುವೆಗೆ ಬರುವಂತಾಯಿತಲ್ಲೇ " ಎಂದ ಅಜ್ಜಿಯ ಮಾತುಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ, ಹೇಗೆ ಚುಕ್ಕಿ ತಪ್ಪಿದೆ ? ಅಂತ ಯೋಚಿಸತೊಡಗಿದ್ದೆ. ಮನಸ್ಸೆಲ್ಲ ನಿನ್ನ ಕಡೆಗೆ ಹರಿದಿತ್ತು. ಬದುಕ ದಿಕ್ಕನ್ನೇ ತಪ್ಪಿಸಿ ನಡೆದವನ ನೆನಪು ರಂಗೋಲಿಯ ಚುಕ್ಕಿ ತಪ್ಪಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ ಬಿಡು. ಅಜ್ಜಿ ಹೊರಹಾಕಿದ್ದು ತನ್ನೊಳಗಿನ ನೋವನ್ನಾ? ಅಥವಾ ಆಡಿದ್ದು ಕುಹಕವಾ ? ಯೋಚಿಸುವ ಗೊಡವೆಗೆ ಹೋಗದೆ, ಕಣ್ಣಂಚಿನ ನೀರ ತಡೆದುಕೊಂಡು ರಂಗೋಲಿ ಬಿಡಿಸಿ ಬಂದಿದ್ದೆ.
ಬೆಳೆದಿದ್ದು, ಓದಿದ್ದು , ಕೆಲಸ ಹಿಡಿದಿದ್ದು ಎಲ್ಲವೂ ಹೊರಗಡೆಯೇ ಆದ್ದರಿಂದ ನನಗೂ ಊರಿಗೂ ನೆಂಟಸ್ತನದ ನಂಟು. ಈಗಲೂ ಮನೆಗೆ ಬಂದರೆ ನೆಂಟರಂತೆ ನೋಡಿಕೊಳ್ಳುತ್ತಾರೆ, ಮನೆಯವಳಂತೆ ಅಲ್ಲ, ಅಥವಾ ಬಂದು ಹೋಗುವ ನಾಲ್ಕು ದಿನಗಳಲ್ಲಿ ನಾನೇ ಹಾಗಿರುತ್ತೇನೋ ಏನೋ. ಆದರೆ ಪಾವನಿ ಹಾಗಲ್ಲ. ಆಕೆ ಮೊದಲಿಂದಲೂ ಮನೆಗುಬ್ಬಿ. ಹಾಗಾಗಿ ಆಕೆ ಮನೆ ಮಗಳು. ಅವತ್ತು ಚಿಕ್ಕಮ್ಮ ಫೋನ್ ಮಾಡಿ "ಮಗಳೇ ಪಾವನಿಗೆ ಒಳ್ಳೆ ಕಡೆಯ ಸಂಬಂಧ ಕೂಡಿ ಬಂದಿದೆ. ಮದುವೆ ಮಾಡಬಹುದಾ ?" ಎಂದಾಗ ಸಂತೋಷದಿಂದಲೇ "ಇದ್ರಲ್ಲಿ ಕೇಳೋದೇನಿದೆ ಚಿಕ್ಕಮ್ಮ, ಮದುವೆ ಮಾಡಿ. ನಾನಂತೂ ಸಹಾಯ ಮಾಡ್ತೀನಿ " ಅಂತ ಹೇಳಿದ್ದೆ. ಆದರೆ ಚಿಕ್ಕಮ್ಮ ಅವರ ಮಗಳ ಮದುವೆ ನಿಶ್ಚಯಕ್ಕೆ ನನಗೇಕೆ importance ಕೊಟ್ಟಿದ್ದು ಎಂಬುದು ಅರ್ಥವಾಗಿದ್ದು ಊರಿಗೆ ಬಂದಮೇಲೆಯೇ. "ಅಕ್ಕನ ಬಿಟ್ಟು ತಂಗಿಗೆ ಮದುವೆ ಮಾಡ್ತಾರ ? " "ನಿಮ್ಮ ಮಗಳೇ ದೊಡ್ದವಳಲ್ಲವಾ ? ಅವಳ ಮದುವೆ ಯಾವಾಗ ? " ಅಂತ ಎಲ್ಲರೂ ಅಮ್ಮನನ್ನು ಕೇಳುವಾಗ, ಅಮ್ಮ ಮಾತನಾಡಲಾಗದೆ ತಡವರಿಸುವಾಗ ಕಷ್ಟವಾಗತೊಡಗಿತ್ತು. "ಅಲ್ಲವೇ ನೀ ಯಾವಾಗ ಮದುವೆಯಾಗೋದು ? ಓದು ,ಕೆಲಸ ಎಲ್ಲ ಆದಂತೆ ಆ ವಯಸ್ಸಿಗೆ ಮದುವೆಯೂ ಆಗಿಬಿಡಬೇಕು. ಯಾರನ್ನಾದರೂ ಪ್ರೀತಿಸಿದ್ದೀಯ ? ಅದೂ ಬೇರೆ ಜಾತಿಯವನನ್ನಾ ? " ಅಂತೆಲ್ಲ ಬಂಧುಗಳು ಕೇಳುವಾಗ, "ಯಾವ ಕೆಲಸಕ್ಕೂ ಮುಂದಾಗಿ ಹೋಗಬೇಡ, ಇಂಥ ಮಾತುಗಳನ್ನೆಲ್ಲ ಕೇಳಬೇಕಾಗುತ್ತದೆ " ಎಂದು ಅಮ್ಮ ಮರುಗುತ್ತಿದ್ದಾಗೆಲ್ಲ " ಹೌದು ಪ್ರೀತಿಸಿದ್ದೆ, ಇವತ್ತು ಅದೇ ಹುಡುಗ ನನ್ನ ತಂಗಿಯನ್ನೇ ಮದುವೆಯಾಗುತ್ತಿದ್ದಾನೆ. ತಂಗಿಯ ರಟ್ಟೆ ಹಿಡಿದು ಎಬ್ಬಿಸಿ, ಅವನೆದುರು ಹಸೆಮಣೆಯಲ್ಲಿ ಕುಳಿತು ತಾಳಿ ಕಟ್ಟಿಸಿಕೊಳ್ಳಲಾ ? " ಎಂದು ಕೂಗಿ ಕೇಳುವ ಮನಸ್ಸಾಗುತ್ತಿತ್ತು. ಆದರೂ ತಡೆ ಹಿಡಿದಿದ್ದೆ. ಮಗಳೇ ಎನ್ನುವ ಚಿಕ್ಕಮ್ಮನ ಪ್ರೀತಿ. ಮದುವೆಯೆಂದು ಪಾವನಿಯ ಕಣ್ಣಲ್ಲಿನ ಹೊಳಪು, ನನ್ನನ್ನು ಕಟ್ಟಿ ಹಾಕಿದ್ದವು.
ಅವತ್ತು ಪಾವನಿ " ನೋಡೇ ಅಕ್ಕಾ , ನನ್ನ ಹುಡುಗಾ ಹೇಗಿದ್ದಾನೆ ಹೇಳು? " ಎಂದು ನಿನ್ನ ಫೋಟೋವನ್ನು ಕೈಲಿಟ್ಟಾಗ ಎಚ್ಚರತಪ್ಪಿ ಬಿದಿದ್ದೆ. ಎಚ್ಚರ ಬಂದಾಗ " ಹೇಗಿದ್ದಾನೆ ಹೇಳು ? ಅಂದ್ರೆ ಎಚ್ಚರ ತಪ್ತಿಯಲ್ಲ " ಅಂತ ಪಾವನಿ ಕೆನ್ನೆಯುಬ್ಬಿಸಿದರೆ " ನಿನ್ನ ಹುಡುಗ ಎಚ್ಚರ ತಪ್ಪುವಂತೆ ಇದ್ದಾನೆ, ಜೋಪಾನವಾಗಿಟ್ಟುಕೋ " ಅಂತ ಕೆನ್ನೆ ಹಿಂಡಿ ಕಳಿಸಿದ್ದೆ ಅವಳನ್ನು. ಆಮೇಲೆ ಯಥಾ ಪ್ರಕಾರ ನಿನ್ನ ಪ್ರೀತಿಸಿದ ನೆನಪುಗಳು.. ಎಲ್ಲ ಪ್ರೇಮ ಕಥೆಗಳಿಗಿಂತ ಭಿನ್ನವೇನಿಲ್ಲ. ಪ್ರೀತಿಯಿಂದ ನೀ ನುಣುಚಿಕೊಳ್ಳಲು ಕೊಟ್ಟ ಕಾರಣವೂ ಭಿನ್ನವೇನಲ್ಲ. ಯು ಕೆ ಗೆ ಹೋಗಿ ಬಂದವ ಕಣ್ಣು ತಪ್ಪಿಸಿ ಓಡಾಡತೊಡಗಿದ್ದೆ. ನಿಲ್ಲಿಸಿ ಕೇಳಿದವಳಿಗೆ " ನೋಡು ಅಲ್ಲಿ ಹೋಗಿ ಬಂದವನಿಗೆ ಕರಿಯರ್ ಎಷ್ಟು important ಎಂದು ಅರ್ಥವಾಗಿದೆ. ಮತ್ತೆ ಮನೆಯಲ್ಲೂ ಅಮ್ಮನಿಗೆ ತಾನೇ ನೋಡಿದ ಹುಡುಗಿಯನ್ನು ಮಗ ಮದುವೆಯಾಗಬೇಕು ಇದೆ. ಅವರ ಮಾತು ಮೀರುವುದು ಸಾದ್ಯವಿಲ್ಲ. ಕಾಲ ಮಿಂಚಿಲ್ಲ, ಜೀವನ ಇನ್ನೂ ಇದೆ. ಬೇರೆಯಾಗಿ ಬದುಕೋಣ " ಅಂತ ತಾವರೆ ಎಲೆಯ ಮೇಲಿನ ನೀರ ಹನಿಯಂತೆ ಜಾರಿಕೊಂಡು ಬಿಟ್ಟಿದ್ದೆ. ನೀ ಕೊಟ್ಟ ಪುಟಾಣಿ ಮಗುವಿನ ಕಾಲುಗೆಜ್ಜೆಯೊಂದು ನನ್ನ ಬಳಿಯಿತ್ತು. ಇನ್ನೊಂದು ಬಹುಶಃ ನಿನ್ನ ಬಳಿಯೇ ಇತ್ತೋ ಏನೋ. ಕಾಲಿಗೆ ಹಾಕಲು ಬಾರದ ಅದನ್ನು ಬಳೆಯಂತೆ ನನ್ನ ಕೈಗೆ ಹಾಕಿಕೊಂಡು ಖುಷಿ ಪಡುತ್ತಿದ್ದೆ ಯಾವಾಗಲೂ...
ನಿನ್ನ ಮದುವೆಯ ದಿನ ಕೂಡ ಅದೇ ಗೆಜ್ಜೆಯನ್ನು ಕೈ ಗೆ ಹಾಕಿಕೊಂಡಿದ್ದೆ. " ಇದೇನೆ ಕಾಲು ಗೆಜ್ಜೆನಾ ಕೈಗೆ ಹಾಕಿಕೊಂಡಿದ್ದೀಯ ಮ್ಯಾಚ್ ಆಗ್ತಿಲ್ಲ " ಅಂತ ಯಾರೇ ಹೇಳಿದರೂ ತೆಗೆಯುವ ಮನಸ್ಸಾಗಿರಲಿಲ್ಲ. " ಮದುವೆ ಗಂಡಿಗೆ ದೃಷ್ಟಿ ಬೊಟ್ಟು ಇಡಬೇಕಂತೆ. ಚೂರು ಸಹಾಯ ಮಾಡ್ತೀರ ? " ಅಂತ ನಿನ್ನ ಗೆಳೆಯ ನನ್ನನ್ನೇ ಕೇಳಿಕೊಂಡು ಬಂದಿದ್ದ. ಅದೇ ಗೆಜ್ಜೆ ಹಾಕಿಕೊಂಡ ಕೈಯಲ್ಲೇ ನಿನಗೊಂದು ದೃಷ್ಟಿ ಬೊಟ್ಟಿಟ್ಟು ನಕ್ಕಿದ್ದೆ. " ಒಂದು ಸಹಾಯ ಮಾಡ್ತೀಯ ? ದಯವಿಟ್ಟು ತಾಳಿ ಕಟ್ಟುವಾಗ ಎದುರು ಕುಳಿತಿರಬೇಡ, ನಂಗೆ ಕಸಿವಿಯಾಗುತ್ತೆ, ಪಾಪಪ್ರಜ್ಞೆ ಕಾಡುತ್ತೆ " ಅಂತ ನನ್ನೆದುರು ಪಿಸುಗುಟ್ಟಿದ್ದೆ ಅಲ್ಲವಾ ? ತಾಳಿ ಕಟ್ಟುವಾಗ ಎದುರಿನಲ್ಲೇ ಇದ್ದೇನಲ್ಲ ನಾನು. ಒಂದು ಗಂಟು, ಉಹೂನ್ ಎರಡನೇ ಗಂಟು ಹಾಕುವಾಗಲೂ ನಿನ್ನ ಕಣ್ಣಲ್ಲಿ ಯಾವುದೇ ಕಸಿವಿಸಿ ಇರಲಿಲ್ಲ, ಯಾವ ಪಾಪಪ್ರಜ್ಞೆಯೂ ಇರಲಿಲ್ಲ ..!! ಪಾಪಪ್ರಜ್ಞೆ ಕಾಡಿದ್ದು ನನಗೆ, ಪಾಪಿಯೇನಿಸಿಕೊಂಡಿದ್ದು ನಾನು.. ಅಲ್ಲಿರಲಾರದೆ ಓಡಿ ಬಂದು ದೇವಸ್ಥಾನದ ಮುಂದಿನ ಕಲ್ಯಾಣಿಯ ಪೌಳಿಯ ಮೇಲೆ ಕುಳಿತಿದ್ದೆ. ಗೆಜ್ಜೆಯನ್ನು ಬೀಸಿ ನೀರಿಗೆಸೆಯುವ ಮನಸ್ಸಾಗಿತ್ತು. ಆದರೆ ನೀರು ನನ್ನನ್ನೇ ಕರೆಯುವಂತೆ ಭಾಸವಾಗುತ್ತಿತ್ತು. ನಿಧಾನವಾಗಿ ಒಂದೊಂದೇ ಮೆಟ್ಟಿಲಿಳಿಯ ತೊಡಗಿದ್ದೆ. ನೀರೂ ಮೇಲೇರುತ್ತಿತ್ತು. ನೀರೊಳಗಿನ ಐದನೆಯದೋ ಆರನೆಯದೋ ಮೆಟ್ಟಿಲಲ್ಲಿದ್ದಾಗ ಗೆಜ್ಜೆಯ ಕೊಂಡಿ ತಪ್ಪಿತ್ತು. ಕೈಯಿಂದ ಜಾರಿ ನೀರೊಳಗೆ ಬೀಳುತ್ತಿದ್ದ ಗೆಜ್ಜೆ ಹಿಡಿಯಲು ಬಾಗಿದ್ದೆ, ಕಾಲು ತಪ್ಪಿತ್ತು. "ಅವನಿ ಅಲ್ಲಿ ಯಾಕಮ್ಮ ಹೋದೆ ? ವಾಪಸ್ ಬಾ . ಅಯ್ಯೋ ಮುಳುಗುತ್ತಿದ್ದಾಳೆ, ಈಜು ಬರುತ್ತೆ ನಿನಗೆ ಕಾಲು ಬಡಿಯೇ " ಎಂದೆಲ್ಲ ಮನೆಯವರೆಲ್ಲ ಹೇಳುತ್ತಿದುದು ಕ್ಷೀಣವಾಗುತ್ತ ಕೊನೆಗೊಮ್ಮೆ ನಿಂತೇ ಹೋಯಿತು.
***********************************************************************
ಬೆಳಕಿಗೆ ಕಣ್ಣ ಹೊಂದಿಸಿಕೊಂಡು ಸುತ್ತ ನೋಡಿದೆ. ಆಸ್ಪತ್ರೆಯ ವಾತಾವರಣ ಎಂದು ಗೊತ್ತಾಗಲು ಬಹಳ ಸಮಯ ಹಿಡಿಯಲಿಲ್ಲ. "ಮನೆಯಲ್ಲಿನ ಮದುವೆ ಹೇಗೆ ಆಯ್ತೋ,ಹೇಗೆ ಹೋಯ್ತೋ ಗೊತ್ತಿಲ್ಲ. ಅಲ್ಲಿ ನೀರ ಹತ್ತಿರ ಯಾಕೆ ಹೋಗಬೇಕಿತ್ತು. ಅಂತೂ ಕಣ್ಣು ಬಿಟ್ಟೆಯಲ್ಲ ತಾಯಿ" ಅಂತಾ ಅಜ್ಜಿ ಸಮಾಧಾನ ಮಾಡಿಕೊಳ್ಳುತ್ತಿದ್ದಾಳೆ. ಸಾವ ಬಯಸಿ ಹೊರಟವಳನ್ನು ಬದುಕು ಪ್ರೀತಿಸತೊಡಗಿತ್ತು. ಬದುಕಿಸಿಕೊಂಡಿದೆ. ಸಾವ ಕದ ತಟ್ಟಿ ಬಂದವಳಿಗೆ ಬದುಕಿನ ಮೇಲೆ ಅಪರಿಮಿತವಾಗಿ ಪ್ರೀತಿ ಹುಟ್ಟಿದೆ. " ಹುಡುಗಾ ನಿನ್ನನ್ನೂ, ಪಾವನಿಯನ್ನು ಒಂದು ದಿನ ಮನೆಗೆ ಕರೆಯುತ್ತೇನೆ. ತಪ್ಪದೇ ಬನ್ನಿ. ಹಾಂ ನಮ್ಮ ಮನೆಗೆ ಬರಲು ನೀನೇನೂ ಮುಜುಗರ ಪಟ್ಟುಕೊಳ್ಳಬೇಕಾಗಿಲ್ಲ. ತಾಂಬೂಲ, ಹಣ್ಣುಗಳನ್ನು ನಿಮ್ಮ ಮುಂದೆ ಇಟ್ಟಂತೆ ಹಳೆಯ ಪ್ರೀತಿಯನ್ನು ಸಹ ಪಕ್ಕದಲ್ಲಿ ಕರೆದು ಕೂರಿಸಿಕೊಳ್ಳುವುದಿಲ್ಲ. ಯಾಕೆಂದರೆ ಕೊಂಡಿ ತಪ್ಪಿ ಕಲ್ಯಾಣಿಯ ತಳ ಸೇರಿದ ಗೆಜ್ಜೆ ಮತ್ತೆಂದೂ ಸದ್ದು ಮಾಡುವುದಿಲ್ಲ...
ಬದುಕ ಕಾಲಿಗೆ ಅರಿಯದೆ ಕಟ್ಟಿ ಕುಣಿದ ಕೆಲವು ಗೆಜ್ಜೆಗಳು ಹೀಗೆ ಕೊಂಡಿ ತಪ್ಪಿ ಮರೆವಿನ ಕಲ್ಯಾಣಿಯ ತಳ ಮುಟ್ಟಿದಾಗಲೇ ಬದುಕಿನ ಮೇಲೆ ಅಪರಿಮಿತ ಪ್ರೀತಿ ಹುಟ್ಟೋದು.. ಬದುಕ ಚಿತ್ತಾರದ ಚುಕ್ಕಿಗಳನ್ನು ಅಳಿಸಿಹಾಕುವವರ ಮುಂದೆ ಅಳಿಸಲಾಗದ ರಂಗೋಲಿ ಬರೆದು ಮೆರೆಯೋಕಾಗೋದು..
ReplyDeleteಪಾವನಿ ಅವನಿ ಮನೆಗೆ ಬರೋವಾಗ ಕೈಗೆ ಪುಟಾಣಿ ಮಗುವಿನ ಗೆಜ್ಜೆ ಸುತ್ತಿಕೊಂಡು ಬರಲೂಬಹುದು.. ಇನ್ನೊಂದು ಅವನ ಬಳಿಯೇ ಇತ್ತಲ್ಲ..! ಆದರೆ ಈ ಬಾರಿ ಅವನಿಯ ಎಚ್ಚರ ತಪ್ಪುವುದಿಲ್ಲ.. ಅವಳಿಗಿನ್ನು ಈಜು ಮರೆಯುವದಿಲ್ಲ.. ಬದುಕ ಮೇಲೆ ಪ್ರೀತಿ ಹುಟ್ಟಿದೆಯಲ್ಲ..!
ಪಾವನಿ.. ಅವನಿ.. ಮತ್ತೆ ಅವನು.. ನಡುವಿನ ತ್ರಿಕೋನ ಮಜಬೂತಾಗಿ ಮೂಡಿ ಬಂದಿದೆ..
"ನಿನ್ನ ಮದುವೆಯ ಕೂಡ ಅದೇ ಗೆಜ್ಜೆಯನ್ನು ಕೈ ಗೆ ಹಾಕಿಕೊಂಡಿದ್ದೆ." ಇದೊಂದು ವಾಕ್ಯ ಸಲ್ಪ ಬದಲಿಸಿ..
ಸಂಧ್ಯಾಕ್ಕಾ ಸೂಪರ್ ಇದ್ದು.... "ನನಗೂ ಊರಿಗೂ ನೆಂಟಸ್ತನದ ನಂಟು" narration ತುಂಬಾ ಇಷ್ಟ ಆತು :)
ReplyDeleteಅವನ ಮನದಲ್ಲಿ ಸದ್ದು ಮಾಡುವುದ ನಿಲ್ಲಿಸಿದ ಗೆಜ್ಜೆ ಇವಳ ಮನದಲ್ಲಿ ಸದ್ದು ಮಾಡದೇ ಕಲ್ಯಾಣಿಯ ತಳ ಸೇರಿದ್ದು ಒಳ್ಳೆಯದೇ ಆಯ್ತು...!
ReplyDeleteಚಂದದ ಬರಹ... ಮನಸ್ಸಿಗೆ ತುಂಬಾನೇ ಇಷ್ಟವಾಯ್ತು ಕಣೆ ಹುಡುಗೀ ... :)
ಸಂಧ್ಯಾ...
ReplyDeleteಬದುಕ ಪ್ರೀತಿ ಹೀಗೆ ಹುಟ್ಟಬೇಕು ಅಲ್ಲವಾ.. ?
ಇಷ್ಟವಾಯಿತು...
ಬದುಕು ಹೊತ್ತು ತರುವ ಒಂದೊಂಧು ಘಟನೆಗಳಿಗೂ, ಹೊಂದಿಕೊಳ್ಳಲೇಬೇಕಲ್ವಾ..... . ಚಂದದ ಬರಹ ಸಂಧ್ಯಕ್ಕ...
ReplyDeleteಹೊಸ ಗೆಜ್ಜೆ ನಗಲಿ - ಕಾಲನ ತಳ್ಳಿ ನಡೆವ ಕಾಲಲ್ಲಿ...
ReplyDeleteಚಂದದ ಬರಹ...
ಕೆಲವೊಂದು ಬಾರಿ ತಪ್ಪಿದ ಹೆಜ್ಜೆಗಳೇ ಬದುಕನ್ನು ಸರಿಪಡಿಸಿಬಿಡುತ್ವೆ...
ReplyDeleteಕೆಲವು ತಪ್ಪುಗಳು ಮನುಷ್ಯನನ್ನು ಪಕ್ವನನ್ನಾಗಿ ಮಾಡುತ್ವೆ....
ಚಿಕ್ಕದಾಗಿ ಚಂದದ ಕಥೆ......
'ಕೆಲವೊಂದು ಬಾರಿ ತಪ್ಪಿದ ಹೆಜ್ಜೆಗಳೇ ಬದುಕನ್ನು ಸರಿಪಡಿಸಿಬಿಡುತ್ವೆ...' ಚೆಂದದ ಬರಹಕ್ಕೆ ಒಪ್ಪುವಂತಾ ಸಾಲು ... :)
DeleteNice Sandya ...
ReplyDeleteVery emotional story, well written.
ReplyDeleteDearSandhya,
ReplyDeleteಕತೆ ಓದಬೇಕಷ್ಟೆ. ನಿಮ್ಮprofile ’ನಾನು’ ಓದಿ ತುಂಬ ಇಷ್ಟಪಟ್ಟೆ. ಅದಕ್ಕೆ ಈ ಕಮೆಂಟ್
:-)
ಮಾಲತಿ ಎಸ್
ಗೆಜ್ಜೆ...ಕಲ್ಯಾಣಿ...ಮನದಲ್ಲೊಂದು ರಿಂಗಣ..
ReplyDeleteಚಂದದ ಭಾವ ಬರಹ ಸಂಧ್ಯಕ್ಕ.
ಕಾರಣ ಹೇಳಿ ಎದ್ದು ಹೋಗೊ ಹುಡುಗನಿಗಿಂತ ಕಾರಣವ ಹೇಳೋಕೆ ಪ್ರಯತ್ನವನ್ನೂ ಮಾಡದೇ ಸರಿದು ಹೋಗೋ ಹುಡುಗನೇ ಮನದಲ್ಲಿ ಅದೇ ಸ್ಥಾನವ ಬಿಟ್ಟು ಹೋಗ್ತಾನೇನೋ ಅಲ್ವಾ?
ಪಾವನಿಯ ಈ ಅಕ್ಕ ತುಂಬಾ ಇಷ್ಟವಾದ್ಲು ನಂಗೆ
ಎದುರಿಗೆ ಗುರಿಯಾಗ ಬೇಕಿದ್ದ ಗುರಿ ಬೇರೆ ಬಿಲ್ಲನ್ನು ಹುಡುಕಿಕೊಂಡು ಬಾಣವನ್ನೇ ಬದಲಾಯಿಸಿತು.. ಬಾಣ ಅಣಕಿಸಲಿಲ್ಲ ಗುರಿ ಬಾಗಲಿಲ್ಲ.. ಆದರೆ ಬಿಲ್ಲು ಮಾತ್ರ ಹೆದೆ ಏರಿಸಿಕೊಂಡು ಮತ್ತೊಮ್ಮೆ ಗುರಿಯತ್ತ ನುಗ್ಗದೆ.. ಗುರಿಯನ್ನೇ ತನ್ನ ಗಮ್ಯ ಅಂದುಕೊಳ್ಳದೆ.. ಮಗ್ಗುಲು ಬದಲಿಸಿದ್ದು ಇಷ್ಟವಾಯಿತು.
ReplyDeleteಜೀವನದಲ್ಲಿ ಕೆಲವೊಮ್ಮೆ ನಮ್ಮ ಕಲ್ಪನೆಗಿಂತ ವಿಚಿತ್ರ ಘಟನೆಗಳು ನಡೆಯುತ್ತವೆ. ಆದರೆ ಅವೇ ಪಾರಮಾರ್ಥಿಕ ಸತ್ಯವಲ್ಲ. ಆ ಕ್ಷಣಗಳನ್ನು ಮೆಟ್ಟಿ ಸೆಟೆದು ನಿಂತರೆ ಜೀವನ ಕಥೆಯಾಗೋಲ್ಲ.. ಚರಿತ್ರೆ ಕೂಡ ಆಗೋಲ್ಲ. ಬದಲಿಗೆ ಸ್ಪೂರ್ತಿದಾಯಕ ನುಡಿಗಟ್ಟು ಆಗುತ್ತದೆ.
ಸುಂದರ ಲೇಖನ ಇಷ್ಟವಾಯಿತು ಎಸ್ ಪಿ ..
ಭಾವನಾತ್ಮಕ ಕಥನ.
ReplyDeleteಸಂಧ್ಯಾ ,
ReplyDeleteಬರಹ, ಚಂದದ ಕಥೆ. ಎಂದಿನಂತೆ .
ಓದುಗನನ್ನು ಕಥೆಯ ಅದ್ಭುತ ಶೈಲಿ ನಿನ್ನದು ,ಓದುಗನನ್ನು ಕಥೆಯ ಅದ್ಭುತ ಶೈಲಿ ನಿನ್ನದು , ಓದಿ ಮುಗಿಸುವ ಹೊತ್ತಿಗೆ ಮನಸ್ಸು ಮಣ ಭಾರವಾಗಿರುತ್ತದೆ ಓದಿ ಮುಗಿಸುವ ಹೊತ್ತಿಗೆ ಮನಸ್ಸು ಮಣ ಭಾರವಾಗಿರುತ್ತದೆ
Keep writing :) more often.
ಸೂಪರ್ ಸಂಧ್ಯಕ್ಕಾ....
ReplyDeleteನಿನ್ನ ಬರಹದಲ್ಲಿನ ಆಪ್ತತೆ ನಂಗೆ ರಾಶಿ ಇಶ್ಟಾ....
ಮನಸ್ಸಿನ ಗೊಂದಲಗಳ್ತಾನೆ ಕಥೆ ಹೇಳುವ ನಿರೂಪಣೆ ,ನಿಂಗೊಂದು ಸಲಾಮು :)
"ಕೊಂಡಿ ತಪ್ಪಿ ಕಲ್ಯಾಣಿಯ ತಳ ಸೇರಿದ ಗೆಜ್ಜೆ ಮತ್ತೆಂದೂ ಸದ್ದು ಮಾಡುವುದಿಲ್ಲ..." - ಎಂಬ ಸಾಲುಗಳು ಓದುತ್ತಿದ್ದಂತೆ ಪ್ರತಿ ಓದುಗನ ಹಳೆಯ ಭಗ್ನಪ್ರೇಮ ಒಂದು ಆ ನಿಮ್ಮ ಕಥೆಯ ಗೆಜ್ಜೆಯ ತರಹವೇ ಕೈಗಂಟಿದಂತೆ, ಸದ್ದು ಮಾಡಿದಂತೆ, ಭಾಸವಾಗುವುದು ಖಂಡಿತ! ಎಷ್ಟು ಭಾವನಾತ್ಮಕವಾಗಿದೆ! ನಿರೂಪಣೆಗೆ ನೂರಕ್ಕೆ ನೂರು... ತುಂಬಾ ಇಷ್ಟ ಆಯ್ತು :)
ReplyDeleteಪುಟ್ಟಿ.. ಮನಸುಗಳ ಮಿಡಿತದ ಕೋಮಲತೆ ಬೆಳಗಿನ ಇಬ್ಬನಿಯನ್ನು ಹಿಡಿದಿಟ್ಟು...ಗಾಳಿಬಂದಾಗ ನಿಧಾನಕ್ಕೆ ಹೋಗಿಬಾ ಎಂದು ಕಳುಹಿಸಿಕೊಡುವ ಚಿಗುರೆಲೆಯಂತೆ ನಿನ್ನ ಕಥಾ ನಿರೂಪಣೆ... ಪುಟ್ಟ ಪುಟ್ಟ ಭಾವನೆಗಳ ಹಂದರ ಕತೆ ಪೂರ್ತಿಯಾಗುವುದರೊಳಗೆ ಮನದಲ್ಲಿ ಹಾಯ್ಕು ಭಾವನೆ ಹೊಮ್ಮುತ್ತೆ...ಇಷ್ಟ ಆಯ್ತು.
ReplyDeleteSandhya it's amazing, wonderful narration... keep going..
ReplyDelete
ReplyDeleteIts my life story..
Chennda aydu....
ReplyDeleteಸಂಧ್ಯಾ, ಚಂದಾಜು. ಪ್ರಬುದ್ಧ ಶೈಲಿಯ ಬರವಣಿಗೆ.ಹಿಂಗೇ ಮುಂದುವರೆಸು.
ReplyDeleteಸಂಧ್ಯಾ, ಚಂದಾಜು. ಪ್ರಬುದ್ಧ ಶೈಲಿಯ ಬರವಣಿಗೆ.ಹಿಂಗೇ ಮುಂದುವರೆಸು.
ReplyDelete