Sunday, 1 December 2013

ಆತ್ಮೀಯವೆನ್ನಿಸುವ ಎಲ್ಲ ಭಾವಗಳೂ ಪ್ರೀತಿಯೇ ಆಗಿರಬೇಕು ಎಂದೇನೂ ಇಲ್ಲ ಅಲ್ಲವಾ.

ಸಂಡೆ ಟೆಡ್ಡಿ ಬೇರ್  ತೊಳೆದಿಟ್ಟು ಬಂದವಳು ಮೊಬೈಲ್ ನೋಡಿದರೆ same  unknown number ನಿಂದ ಎರಡು ಮಿಸ್ಸಡ್ ಕಾಲ್ ಇತ್ತು. "ಕಾಲ್  ಮಿಸ್ಸಾಯ್ತಲ್ಲೇ" ಅಂತ ಅವಳ ಮುಖ ನೋಡಿದೆ. "ಬೇಡ ಕಣೆ ಈಗ ತಾನೆ ಟೆಡ್ಡಿ ಬೇರ್  ತೊಳೆದಿಟ್ಟು ಬಂದಿದ್ದೀಯಾ ಹುಷಾರು" ಎಂದು ಕಣ್ಣು ಮಿಟುಕಿಸಿ ಬೈ ಎಂದು ಹೊರಟಳು ಸಂಡೆ ಸುತ್ತಾಟಕ್ಕೆ. ನನ್ನ ಮನಸ್ಯಾಕೋ ಹಿಂದೆ ಸುತ್ತ ತೊಡಗಿತ್ತು. ಅವತ್ತು ಎಲ್ಲೋ ಬಿಸಾಕಿದ್ದ ಮೊಬೈಲ್ ಗೆ  ನಿನ್ನ ನಂಬರ್ ನಿಂದ ಬಂದ ಕಾಲ್ ನೋಡಿ ನಾನೇ ವಾಪಸ್ ಮಾಡಿದ್ದೆ. ಅಲ್ಲಿವರಿಗೂ ನಿನ್ನ ನಂಬರ್ ನನಗೆ unknown ಆಗಿತ್ತು. "ಬೈ ಮಿಸ್ಟೇಕ್ ಡಯಲ್ ಆಗಿದೆ" ಎಂದವನಿಗೆ, ಇಟ್ಸ್ ಓಕೆ ಎಂದು ಕಟ್ ಮಾಡಿದ್ದೆ.  so  sweet voice  ಎಂದು ಬಂದ ಮೆಸೇಜ್ ಗೆ thanks ಎಂದೆ. ಅನ್ಲಿಮಿಟೆಡ್ ಫ್ರೀ   ಮೆಸೇಜ್ ಗಳು ಒಂದಕ್ಕೊಂದು  ಕೊಂಡಿಯಾಗುತ್ತ ಹೋಗಿ ಒಂದು ಗೆಳೆತನ ರೂಪುಗೊಂಡು ಬಿಟ್ಟಿತ್ತು. ನಿನ್ನ ಹೆಸರು unknown  ಎಂದೇ save  ಆಗಿತ್ತು. ಇವತ್ತಿಗೂ ಹಾಗೆ ಇದೆ ಕೂಡಾ. 

ನಿನ್ನ ಮೊದಲ ಭೇಟಿಯೂ ಅಷ್ಟೇ, ಐದು ನಿಮಿಷ ಕಣೆ ಬಂದೆ ಇಲ್ಲೇ ಎಲ್ಲೋ ಇದಾನಂತೆ ಅಂತ ಫ್ರೆಂಡ್ ಗೆ ಹೇಳಿ ಬಂದವಳನ್ನು ಊರು ಸುತ್ತಲು ಕರೆದುಕೊಂಡು ಹೋಗಿದ್ದೆ ನೀನು. ನಿನ್ನೊಂದಿಗಿನ ಮಾತುಗಳಲ್ಲಿ, ನೀ ಕೊಟ್ಟ ಕಂಫರ್ಟಬಲ್ ಫೀಲಿಂಗ್ ನಲ್ಲಿ  ಫ್ರೆಂಡ್ ಮತ್ತು ಸಮಯದ ನೆನಪೇ ಇಲ್ಲದೆ ಅನಾಮತ್ತು ನಾಲಕ್ಕು ತಾಸು ಕಳೆದಿದ್ದೆ ನಿನ್ನೊಂದಿಗೆ. ವಾಪಸ್ ಬಂದವಳನ್ನು ಏನಮ್ಮಾ  ಎನ್ನುತ್ತಾ ಹುಬ್ಬುಹಾರಿಸಿ ಕೇಳಿದ ಅವಳಿಗೆ he is a good guy  ಎಂದಷ್ಟೇ ಹೇಳಿದ್ದೆ ನಾನು. ನಿನ್ನ  ಕೆಲಸ ಗಳೆಲ್ಲ ಮುಗಿದು ನೀ ಫೋನ್ ಮಾಡುತ್ತಿದುದ್ದೆ ಹತ್ತು ಗಂಟೆಯ ನಂತರ. ಆಮೇಲೆ ಹನ್ನೆರಡು ಗಂಟೆಯವರೆಗೂ ಮಾತಾನಾಡುತ್ತಿದ್ದೆವು ನಾವು. ಪ್ರತಿದಿನದ ದಿನಚರಿಯಾಗಿತ್ತು. ವಿಷಯಗಳ ಕೊರತೆಯೇ ಇರಲಿಲ್ಲ ಇಬ್ಬರ ನಡುವೆ. ಗೆಳೆತನ ಗಾಢವಾಗಿತ್ತು ಎಂಬುದಕ್ಕೆ ಮತ್ತೇನೂ ಸಾಕ್ಷಿ ಬೇಕಿಲ್ಲ  ಅಲ್ಲವಾ. "ಜಸ್ಟ್ ಹೊರಟೆ ಆಫೀಸ್ ಇಂದ, ಐಸ್ ಕ್ರೀಂ ತಿನ್ನೋಣಾ ಅನಿಸ್ತಿದೆ ಕಣೋ" ಎಂದರೆ, "ಸ್ವಲ್ಪ ಅರ್ಜೆಂಟ್ ಇದೆ ಕಣೆ ಆಮೇಲೆ ಮಾಡ್ತೀನಿ" ಎಂದು ಸಡನ್ ಆಗಿ ಫೋನ್ ಕಟ್ ಮಾಡಿದವನು, ನಾ ನನ್ನ ಸ್ಟಾಪ್ ನಲ್ಲಿ ಇಳಿಯುವ ಹೊತ್ತಿಗೆ ಅಲ್ಲೇ ಇದ್ದು, "ನಡಿ ಯಾವ ಐಸ್ ಕ್ರೀಮ್ ತಿಂತಿಯಾ ?" ಅಂತ ಕೇಳಿ surprise  ಕೊಟ್ಟಿದ್ದು ಇನ್ನೂ ನೆನಪಿದೆ. "ಆಫೀಸ್ ಕೆಳಗಡೆ ಇದ್ದೇನೆ ಬೇಗ ಬಾ "ಎಂದವನು, ನನ್ನನ್ನು ದೇವಸ್ತಾನದ ಬಾಗಿಲಿಗೆ ಕರೆದುಕೊಂಡು ಹೋಗಿ ನಿಲ್ಲಿಸಿ, "ನಿನ್ನ ಜೊತೆ ದೇವಸ್ತಾನಕ್ಕೆ ಬರಬೇಕು ಅನ್ನಿಸ್ತು ಕರೆದುಕೊಂಡು ಬಂದೆ. ದೇವಸ್ತಾನಕ್ಕೆ ಬರುವಂತೆ ಇದ್ದೀಯಾ ತಾನೇ ?" ಎಂದು ಕಣ್ಣು ಮಿಟುಕಿಸಿದ್ದೆ.  ನನ್ನ ಹುಟ್ಟುಹಬ್ಬದ ದಿನ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ನನ್ನೊಂದಿಗೆ ಕಳೆದದ್ದು, ನೀ ಕೊಂಡ ಫ್ಲಾಟ್  ನಲ್ಲಿ ಪುಟ್ಟ ಕೇಕ್ ನೊಂದಿಗೆ ನೀನೊಬ್ಬನೇ ಸೆಲೆಬ್ರೇಟ್ ಮಾಡಿದ್ದು. ಉಡುಗೊರೆಯಾಗಿ ನೀ ಕೊಟ್ಟ ಟೆಡ್ಡಿ ಬೇರ್, ಚೆಂದದೊಂದು ಪಿಲ್ಲೋ  ಇದೆಲ್ಲ ನೆನಪುಗಳು ಇನ್ನು ಹಸಿ ಹಸಿ. ನಮ್ಮಿಬ್ಬರಲ್ಲಿ  ಮುಚ್ಚುಮರೆಯಿರಲಿಲ್ಲ. ಎಲ್ಲ ವಿಷಯಗಳು ಗೊತ್ತಿರುತ್ತಿದ್ದವು. ನಿನ್ನ ತೋಳು ತಬ್ಬಿ ಬಿಕ್ಕಿದ ದಿನಗಳು ಬಹಳವಿದ್ದವು. ಅದೇನೋ ಕಾರಣಕ್ಕೆ ತುಂಬಾ ಬೇಜಾರಾಗಿ ನನ್ನ ಮಡಿಲಲ್ಲಿ ನೀ ತಲೆಯಿಟ್ಟು ಅತ್ತಿದ್ದು ಇನ್ನು ನೆನಪಿದೆ. 

ಸಾಮಾನ್ಯವಾಗಿ ಟೆಡ್ಡಿ , ಹೂ ಇದೆಲ್ಲ ಗಿಫ್ಟ್ ಕೊಡುವವನು ಪ್ರೇಮಿ ಎಂಬುದು ಜನಜನಿತ. ನಮ್ಮಿಬ್ಬರದು ಪ್ರೀತಿ ಎಂದೇ ನಮ್ಮಿಬ್ಬರ ಜೊತೆಯಲ್ಲಿದ್ದವರು ಭಾವಿಸಿದ್ದರು.ನಾವು ಹಾಗೆಯೇ ಇದ್ದೆವು ಬಿಡು. ಎಲ್ಲೆಂದರಲ್ಲಿ ಜೊತೆಯಾಗಿ ತಿರುಗಿದ್ದೇವೆ. ಎಷ್ಟೋ ಪರಿಚಯಸ್ತರ ಕಣ್ಣಿಗೆ ಬಿದ್ದಿದ್ದೇವೆ. ಆದರೆ ನಮ್ಮಲ್ಲಿ ಭಾವನೆಗಳೇಕೆ ಬದಲಾಗಲಿಲ್ಲವೋ ಗೊತ್ತಿಲ್ಲ. ನೀ ಕೊಡಿಸಿದ ಟೆಡ್ಡಿ ಅಪ್ಪಿ ಮಲಗುವಾಗ, ಆ ದಿಂಬಿಗೆ ಒರಗಿ ಕೂರುವಾಗ ಭಾವನೆಗಳು ಬದಲಾಗಲೇ ಇಲ್ಲ. ಬದಲಾಗಿದ್ದರೆ ಇಷ್ಟು ಹೊತ್ತಿಗೆ ನಾ ನಿನ್ನ  ಹೆಂಡತಿಯಾಗಿರುತ್ತಿದ್ದೆ ಎಂದು ನೆನೆಸಿಕೊಂಡರೆ ನಗು ಬರುತ್ತದೆ. ನಿನ್ನದೊಂದು ನೋಟ, ಸ್ಪರ್ಶ ಕೂಡಾ ಹಾಗಿರಲಿಲ್ಲ. "ಮನೆಗೆ ಹೋದರೆ ಮದುವೆಯ ಮಾತು ಎತ್ತುತ್ತಾರೆ. ನನಗೆ ಈ ಮದುವೆಯ ಮಾತೆ ಇಷ್ಟ ಆಗೋಲ್ಲಾ" ಎನ್ನುತ್ತಿದ್ದವನ convince ಮಾಡಿ ಊರಿಗೆ ಕಳಿಸುವಲ್ಲಿ ಸಾಕೋ ಸಾಕಾಗಿತ್ತು.  ನೀ ಹೋದ ಹದಿನೈದು ದಿನಗಳಲ್ಲಿ ಎಷ್ಟು ಮಿಸ್ ಮಾಡಿಕೊಂಡಿದ್ದೆ ಗೊತ್ತಾ. ಒಂದೊಂದು ದಿನಗಳು ಎಷ್ಟು ಕಷ್ಟಪಟ್ಟಿದ್ದೆ. ನಿನ್ನ ಕಂಡಾಗ ಮತ್ತೆ ಮನಸ್ಸಿಗೆ ರೆಕ್ಕೆ ಬಂದಷ್ಟೇ ಖುಷಿ . ವಾಪಾಸ್ ಬಂದವನು "ಮದುವೆಯಾಗಬಾರದು ಎಂದುಕೊಂಡವನನ್ನು ಹಾಳು ಮಾಡಿದ ಪಾಪಿ ಕಣೆ ನೀನು. ನಿನ್ನ next birthday  ದಿನ ನನ್ನ ಮದುವೆ" ಎಂದು ಕಾಫಿ ಡೇ ಯಲ್ಲಿ ಕೂರಿಸಿಕೊಂಡು ಹೇಳಿದ್ದೆಯಲ್ಲ. ತುಂಬಾ ಸಂತಸಗೊಂಡಿದ್ದೆ ನಾನು. ನಿನ್ನೊಡನೆ ಶಾಪಿಂಗ್ ಗೆಲ್ಲ ಓಡಾಡಿದವಳಿಗೆ, ನಿನ್ನ  ಮದುವೆಗೆ ಬರಲಾಗಲಿಲ್ಲ. ಮದುವೆಯ ಗಡಿಬಿಡಿಯಲ್ಲಿದ್ದರೂ ಗೆಳೆಯರಲ್ಲಿ ಹೇಳಿ ನನ್ನಿಷ್ಟವಾದ ಪುಸ್ತಕಗಳು ಮತ್ತು ಒಂದು ದೊಡ್ಡ ಬೊಕ್ಕೆ ನನ್ನ ಹುಟ್ಟುಹಬ್ಬದ ದಿನ  ನನಗೆ ತಲುಪುವಂತೆ ಮಾಡಿದ್ದೆ ನೀನು. ಅವತ್ತು ಖುಷಿಯಿಂದ ಕಣ್ಣಲ್ಲಿ ನೀರು ಬಂದಿತ್ತು. 

ಇವತ್ತಿಗೆ ಹೆಚ್ಚು ಕಡಿಮೆ ಮೂರು ವರ್ಷಗಳಾದವು ನಿನ್ನ ಮದುವೆಯಾಗಿ. ಚಂದದ ಸಂಸಾರ. ಇವತ್ತಿಗೂ ನಿನ್ನ ಖುಷಿಯಲ್ಲಿ ನನಗೊಂದು ಪಾಲಿದೆ. ನಿನ್ನ ನೆನಪುಗಳೇ ಹಾಗೆ ನೋಡು ಟೆಡ್ಡಿ ಬೇರ್ ನಿಂದ ತೆಗೆದಿಟ್ಟ ಹತ್ತಿಯಂತೆ, ಹರಡಿಕೊಂಡು ಬಿಡುತ್ತವೆ. ನಿನ್ನ ಎಲ್ಲ ನೆನಪು ಮಾಡಿಕೊಳ್ಳುತ್ತಲೇ ಒಣಗಿದ್ದ ಟೆಡ್ಡಿ ಗೆ ಹತ್ತಿ ತುಂಬಿ ಹೊಲಿದ್ದಿದ್ದಾಯ್ತು.ನಿನ್ನ ನೆನಪುಗಳನ್ನು ಜೋಪಾನವಾಗಿ ಎತ್ತಿಟ್ಟಿದ್ದಾಯ್ತು.ಆತ್ಮೀಯವೆನ್ನಿಸುವ ಎಲ್ಲ ಭಾವಗಳೂ ಪ್ರೀತಿಯೇ ಆಗಿರಬೇಕು ಎಂದೇನೂ ಇಲ್ಲ ಅಲ್ಲವಾ. ಇವತ್ತಿಗೂ ನೀ ಕೊಟ್ಟ ಟೆಡ್ಡಿ ಯನ್ನೇ ತಬ್ಬಿ ಮಲಗುತ್ತೇನೆ ಯಾವತ್ತಿನಂತೆ... 

Friday, 8 November 2013

ನಿನ್ನದೇ ರಕ್ತವಿದು ಹರಿಯುತ್ತಿದೆ ಧಮನಿಗಳಲ್ಲಿ...


ಈ ಹಾಳು ಊರು ಏನೆಲ್ಲಾ ಅನಿಸುವಂತೆ ಮಾಡಿ ಬಿಡುತ್ತದೆ ಗೊತ್ತಾ . ನಿನ್ನ ಮಡಿಲಲ್ಲಿ  ಮಲಗಿ ಬಿಕ್ಕಿ ಬಿಕ್ಕಿ ಅಳಬೇಕು ಎನಿಸುವಷ್ಟು ಒಂಟಿಯೆನಿಸುವಂತೆ ಮಾಡಿ ಬಿಡುತ್ತದೆ. ಯಾವ ಖುಷಿಯ ತುದಿಯಲ್ಲಿದ್ದರೂ ಹೇಳಿಕೊಳ್ಳಲು ನೀನೇ  ಬೇಕಿರುತ್ತದೆ. ಆದರೆ ನೀ ದೂರ ದೂರ. ಎಷ್ಟೋ ಸಲ ಯೋಚನೆಗೆ ಬೀಳುತ್ತೇನೆ.  ಹಿಂಗೆಲ್ಲ ಯಾಕೆ ಅನಿಸುತ್ತೆ ಅಂತ. ಅಲ್ಲಿದ್ದಾಗ ಯಾಕೆ ಅನಿಸ್ತಾ ಇರಲಿಲ್ಲ ಅಂತ. ಅಲ್ಲೇ ನಿನ್ನ ಜೊತೆಯೇ ಇದಿದ್ರೆ ಬಹುಶಃ ಒಂಟಿ ಅನ್ನೋ ಭಾವ ಬೆಳೆಯೋದಕ್ಕೆ ನೀ ಅವಕಾಶನೆ  ಕೊಡ್ತಾ ಇರಲಿಲ್ಲ.  ಯಾವಾಗಲೂ ಜೊತೆಲ್ಲೇ ಇದ್ದೀನಿ ಅನ್ನೋ ಫೀಲ್ ಕೊಡ್ತೀಯ. ಅಂಗಳದ ತುದಿಯಿಂದ ಹಿಡಿದು ಹಿತ್ತಲ ಮನೆಯ ಬಾಗಿಲವರೆಗೂ ಎಲ್ಲೇ ಹೋದರೂ ನಿನ್ನ ಹಿಂದೆಯೇ ಸುತ್ತುತ್ತಿದ್ದೆ ನಾನು.   ಅದಕ್ಕೆ ಅಲ್ಲಿದ್ದಾಗ ಯಾವತ್ತೂ  ನಿನ್ನ ಮಡಿಲಲ್ಲಿ ಮಲಗಬೇಕು ಅಂತಾ  ಅನ್ನಿಸ್ತಾನೆ ಇರಲಿಲ್ಲ. ಇನ್ನು ಅಳಬೇಕು ಅನಿಸಿದ್ದಂತೂ ದೂರದ ಮಾತೇ. ಅತ್ತಿದ್ದಿದ್ದರೂ ಅದು ನಿನ್ನಿಂದಲೇ, ನೀ ಬೈದಿದ್ದಕ್ಕೆನೆ.. ( ಪ್ರೀತಿಯ ಆರೋಪ ಇದು .. ಇದಕ್ಕೆ ಗುರ್ರ್ ಅನ್ನೋ ಅವಶ್ಯಕತೆಯಿಲ್ಲ ಮತ್ತೆ .. ) 

 ಪ್ರೀತಿಯಲ್ಲಿ ಪಾಲು ಹಂಚಲು ಹೇಳಿಕೊಟ್ಟಿದ್ಯಾರೆ ನಿನಗೆ . ಪ್ರತಿಯೊಬ್ಬರಿಗೂ ಪಾಲಿದೆ ನಿನ್ನ ಪ್ರೀತಿಯಲ್ಲಿ. ಪ್ರತಿಯೊಬ್ಬರಿಗೂ ದೊಡ್ಡ ಪಾಲಿನ ಪ್ರೀತಿ ತನಗೇ ಅನ್ನಿಸುವಂತೆ ಪ್ರೀತಿ ಕೊಡುತ್ತೀಯಲ್ಲ. ನಂಗ್ಯಾವತ್ತು ಅನಿಸುತ್ತೆ   ನೀ ಬಹುಶಃ ನನ್ನನ್ನೇ ಜಾಸ್ತಿ ಮುದ್ದು ಮಾಡ್ತೀಯ ಅಂತ, ಆದರೆ ತಮ್ಮ, ಮತ್ತು ಅಕ್ಕನ್ನ ಕೇಳಿ ನೋಡು ಅವರೂ ಹಿಂಗೆ ಹೇಳ್ತಾರೆ. ಅದ್ಹೇಗೆ ಸಾಧ್ಯ ನಿಂಗೆ. ಮಲ್ಟಿ ರೋಲ್ ಪ್ಲೇ ಮಾಡೋ ನಿನ್ನ ಬಗ್ಗೆ ಏನು  ಹೇಳಲಿ ಹೇಳು. ಚಿಕ್ಕವರಿರುವಾಗ ಅದೊಂದು ಮಾಮೂಲು ಪ್ರಶ್ನೆ ಇರುತ್ತಲ್ಲ ನೀನೇನಾಗ್ತೀಯ ಮುಂದೆ ಅಂತಾ? ಆ ಪ್ರಶ್ನೆ ಕೇಳಿದವರಿಗೆಲ್ಲ ಏನೇನೋ  ಉತ್ತರ ಕೊಟ್ಟಿದ್ದೇನೆ ಬಿಡು. ಟೀಚರ್, ಡಾಕ್ಟರ್, ಟೈಲರ್, ಫ್ಯಾಶನ್ ಡಿಸೈನರ್, ಫ್ರೆಂಡ್, ಅಗ್ರಿಯಲ್ಲಿ ಪಿಎಚ್ಡಿ, ಹೋಟೆಲ್ ಮ್ಯಾನೇಜ್ ಮೆಂಟ್, ಹೀಗೆ ಉದ್ದದ ಪಟ್ಟಿಯಿದೆ.. (ಆದ್ರೆ ಇವತ್ತಿಗೆ ನಾ ಅದ್ಯಾವುದೂ ಆಗಿಲ್ಲ ಬಿಡು...  ) ಆದರೆ ನೀನೋ ಇದೆಲ್ಲ ಆಗ್ತೀಯ, ಹುಶಾರಿಲ್ಲದಿದ್ರೆ ಡಾಕ್ಟರ್, ಡ್ರೆಸ್ ಸ್ಟಿಚ್ ಆಗಬೇಕಾ ?ಟೈಲರ್, ಡ್ರೆಸ್ ಸೆಲೆಕ್ಟ್ ಮಾಡುವಾಗೆಲ್ಲ ನೀ ನನ್ನ ಡಿಸೈನರ್, ಗಾರ್ಡೆನಿಂಗ್ ಅಂತ ಬಂದ್ರೆ ಪಿಎಚ್ಡಿ ಮಾಡಿದ್ದೂ ಸುಳ್ಳಲ್ಲ ಅನಿಸುತ್ತೆ, ಇನ್ನು ನಿನ್ನ ಕೈ ಅಡುಗೆಯ ಬಗ್ಗೆ ಏನು ಹೇಳಲಿ ನಾನು? ಅದೆಲ್ಲಿಂದ ಸಿಕ್ಕ ಒಳ್ಳೆಯ ಗೆಳತಿಯೋ ನೀನು.ಯಾರಿಗೋ ಕಾಂಪ್ಲಿಮೆಂಟ್ ಕೊಡ್ತೀವಿ, ಅದೆಷ್ಟು ಕಾಮೆಂಟ್ ಮಾಡ್ತೀವಿ , ಓವರ್ ಕಾಮೆಂಟ್ ಆದ್ರೆ ಕಿವಿ ಹಿಂಡಿ ತಿದ್ದುವವಳು  ನೀನು. ಒಮ್ಮೊಮ್ಮೆ ನಂಗೆ ಡೌಟ್ ಬರುತ್ತೆ ಅಮ್ಮ ನೀನಾ? ಅಥವಾ ನಾನಾ ? ಅಂತ. ಶಾಲೆಯಲ್ಲಿ, ಹೈ ಸ್ಕೂಲ್ ನಲ್ಲಿ , ಕಾಲೇಜ್ ನಲ್ಲಿ ಪ್ರತಿ ವಿಷಯಕ್ಕೂ ಬೇರೆ ಬೇರೆ ಶಿಕ್ಷಕರಿದ್ರು, ಆದ್ರೆ ಮನೆಯಲ್ಲಿ ಮಾತ್ರ ಕನ್ನಡದಿಂದ ಹಿಡಿದು ಸ್ಟ್ಯಾಟಿಸ್ಟಿಕ್ ವರೆಗೆ ನೀನೋಬ್ಳೆ ಟೀಚರ್. ಅಕಾಡೆಮಿಕ್ ಮಾತ್ರವಲ್ಲ ಜೀವನಕ್ಕೂ ನೀನೆ ಶಿಕ್ಷಕಿ.. ಈಗನಿಸುತ್ತೆ ಥತ್ ಆಗಲೇ ಗೊತ್ತಿದ್ರೆ ಏನಾಗ್ತೀಯ ಅಂತ ಕೇಳಿದವರಿಗೆಲ್ಲ " ಅಮ್ಮ "ನಾಗ್ತೀನಿ ಅಂದಿದ್ರೆ ಚೆನ್ನಾಗಿರೋದು ಅಂತಾ. ಇದು ನಿನ್ನೊಬ್ಬಳ ಕಥೆಯಲ್ಲ. ಎಲ್ಲರ ಅಮ್ಮಂದಿರ ಕಥೆ. ಎಲ್ಲರ ಅಮ್ಮಂದಿರೂ ಹೀಗೆ ಇರುತ್ತಾರೆ ಆಲ್ವಾ ? 

ನಂಗೊತ್ತು ನನಗೆ ನಿನ್ನ ಹೋಲಿಕೆ ಜಾಸ್ತಿ ಅಂತ. ಎಲ್ಲೇ ನಾನು ಹೋದರೂ  ಯಾರೋ ದೂರದ ಸಂಬಂಧಿಕರೋ ಅಥವಾ ಎಲ್ಲೋ ಕಂಡ ನಿನ್ನ ಹಳೆ ಕ್ಲಾಸ್ ಮೇಟ್ ಗಳೋ ನನ್ನ ಹತ್ತಿರ ನೀನು ಇವಳ   ಮಗಳಲ್ಲವೇನೆ? ನೋಡಿದ್ರೆ ಗೊತ್ತಾಗುತ್ತೆ  ಎನ್ನುವಾಗ ಎಷ್ಟು ಖುಷಿ ಗೊತ್ತ. ಹೈಸ್ಕೂಲ್ ನ ಮೊದಲ ದಿನವೇ ನನ್ನ ನೋಡಿದ ಶಿಕ್ಷಕರೋಬ್ಬರು  ನಾನು ನಿನ್ನ ಮಗಳೆಂದು ಗುರುತಿಸಿದಾಗಿನ ಖುಷಿಯನ್ನು ಓಡಿ ಬಂದು ನಿನಗೊಪ್ಪಿಸಿದ್ದೆ ನೆನಪಿದ್ಯಾ ? ಆಮೇಲೆ ಅಲ್ಲಿದ್ದ ಮೂರು ವರ್ಷಗಳೂ ಎಲ್ಲರೂ ನನ್ನನ್ನು  ನಿನ್ನ ಹೆಸರಿಂದಲೇ ನನ್ನ ಕರೆದರಲ್ಲ. ಎಷ್ಟು ಖುಷಿಯಿತ್ತು ಗೊತ್ತಾ. ಹೋಲಿಕೆ ನಿನ್ನದೇನೆ ಆದರೆ ನಿನ್ನಂತೆ ನಾನಾಗಲಾರೆ.  ನಿನ್ನ ಭೂಮಿಯಂಥ ತಾಳ್ಮೆ ನನಗೊಂದು ಮಣ್ಣ ಕಣದಷ್ಟು ಇಲ್ಲ... 

ನಿನ್ನದೇ ಹೋಲಿಕೆಯಿದೆ ರೂಪದಲ್ಲಿ.. 
ನಿನ್ನದೇ ರಕ್ತವಿದು ಹರಿಯುತ್ತಿದೆ ಧಮನಿಗಳಲ್ಲಿ... 
ನೀನೇ ಕೊಟ್ಟ ಜೀವಕಣಗಳಿವೆ ನನ್ನ ಉಸಿರಲ್ಲಿ.. 
ಆದರೂ ನಾ ನಿನ್ನಂತೆ ಅಲ್ಲ .. 
ನಿನ್ನಂತೆ ಆಗಬೇಕೆಂಬ ಹಂಬಲವೂ ಇಲ್ಲ .. 
ಆದರೆ ನೀ ನನ್ನ ಅಮ್ಮನೆಂಬ ಹೆಮ್ಮೆಯಿದೆ ನನಗೆ .. 

Wednesday, 16 October 2013

ತೋಚಿದ್ದು.... ಗೀಚಿದ್ದು....
ಕಣ್ಣಂಚುಗಳು 
ಮಾತನಾಡಲು ಕಲಿತಾಗಿಂದ 
ಬಚ್ಚಿಟ್ಟ ಭಾವಗಳ್ಯಾಕೋ 
ಗುಟ್ಟಾಗಿ ಉಳಿದಂತಿಲ್ಲ .. 
ನಿಂತಲ್ಲಿ ನಿಲ್ಲಲೊಲ್ಲದ 
ಮನದಲ್ಲೀಗ ಮೊದಲ ಒಲವ 
ಒಳಹರಿವ ಪುಳಕ 
******************************

ಅದೇನೋ ಬೆಳಗಿಂದಲೂ 
ನಿನ್ನ ನೆನಪು...
ಮೈ ಮನಗಳ ಸುತ್ತಿಕೊಂಡಿದೆ ...
ಆಗ ತಾನೇ ಆಕಳಿಸಿ...
ಎದ್ದ ಬೆಕ್ಕು ಹಾಲಿಗಾಗಿ ..
ಮನೆಯೊಡತಿಯ ಕಾಲು ಸುತ್ತುವಂತೆ ...
***********************************

ರಚ್ಚೆ ಹಿಡಿಯುವ ಮೊದಲೇ 
ರಮಿಸುವ ಅಮ್ಮನಂಥಹ 
ಮನಸ್ಸು ನಿನ್ನದು ... 
ಬರಿ ಪ್ರೀತಿಯೊಂದಿದ್ದರೆ 
ಪ್ರೇಮಿಗಳಿಗೂ ಅವಮಾನವಂತೆ.. 
ಮುನಿಸಿಗೂ ಅವಕಾಶವಿರಲಿ 
ಮಹರಾಯ ... !! 
*******************************

ಚೂರು ಹೃದಯ ಬಡಿತ 
ತಪ್ಪಿದ್ದರೂ ಪ್ರೀತಿಯಾಗಿಬಿಡುತ್ತಿತ್ತು 
ಎಂದವನಿಗೆ ಗೊತ್ತಾಗದಂತೆ .. 
ಹೃದಯ ಬಡಿತ ತಪ್ಪಲಿ ದೇವರೇ 
ಎಂದು ಬೇಡುವಾಗ 
ಹುಚ್ಚು ಮನಕೆ ಯಾಕೋ 
ಕಾಲುಂಗುರದ ಬಯಕೆ ...
*********************************


ನೀ ನನ್ನಲ್ಲಿ ಕನಸುಗಳ 
ಹುಟ್ಟಿಸಿರಲಿಲ್ಲ ... 
ಕನಸು ಕಟ್ಟುವ ಕಲೆ ಮಾತ್ರ 
ಹೇಳಿಕೊಟ್ಟಿದ್ದೆ .. 
ಕಟ್ಟುತ್ತಾ ಹೋದ ಕನಸೊಂದು 
ನಿನ್ನದೇ ರೂಪತಳೆಯಿತು .. 
ಕೊನೆಗೂ ನೀ ನನ್ನ 
ಕನಸಾಗಿಯೇ ಉಳಿದುಬಿಟ್ಟೆ ...
******************************

ದುಃಖದ ಕಟ್ಟೆಯೊಡೆಯುವ ಮುನ್ನ 
ಮನಸ್ಸಿಗೇಕೋ ಚಿಟ್ಟೆಯಾಗುವ 
ಹಂಬಲವಿತ್ತು .... 
ಎಳೆ ಎಳೆಯಾಗಿ ಬಣ್ಣ 
ತುಂಬಿಕೊಂಡ ಚಿಟ್ಟೆಯದೀಗ 
ದುಃಖ ಗೆದ್ದ ಸಂಭ್ರಮ .... 
*******************************

ಅವನು ಗೆದ್ದು ಸಂಭ್ರಮಿಸಿದ 
ನಗುವಿನಲ್ಲೆಲ್ಲ ... 
ಅವಳ ಸತ್ತ ಕನಸುಗಳ 
ವಿಷಾದದ ಗೆರೆಯಿತ್ತು ... 
******************************

ನಗೆಮಲ್ಲಿಗೆಯಿವಳು .. 
ಕಣ್ತುಂಬಿ ಬರುವಂತೆ ನಕ್ಕವಳು .. 
ಮನ ತುಂಬಿ ನಗಿಸುವವಳು .. 
ತನ್ನೊಳಗಿನ ನಗು 
ಕೊಂದು ಹೋದವನನ್ನೂ 
ಮುಗುಳುನಗೆಯಲ್ಲೇ 
ಕ್ಷಮಿಸಿಬಿಟ್ಟವಳು ... 
****************************

ಮತ್ತೆ ನಿನ್ನ ನೆನಪುಗಳು
ಚಿಗುರತೊಡಗಿದ್ದವು ..ಚಿವುಟಿಬಿಟ್ಟೆ .... 
ಇಷ್ಟು ದಿನ ಅವುಗಳ ಅಸ್ತಿತ್ವವೇ 
ಇಲ್ಲದಂತೆ ಬದುಕಿದವಳಿಗೆ ,
ಈಗ ಕಾಲಿಗೆ ತಡವುವಂತೆ 
ಅವು ಮತ್ತೆ ಚಿಗುರುವುದು 
ಬೇಕಾಗಿರಲಿಲ್ಲ.. 
******************************

Thursday, 26 September 2013

ಖಾಲಿ ಹಾಳೆಸೆಂಟರ್ ನಿಂದ ಬರುವವಳಿಗೆ ಪಾನಿಪೂರಿ ತಿನ್ನುವ ಮನಸ್ಸಾಗಿತ್ತು. ಹೋಗಿ "ಭಯ್ಯಾ  ದೋ ಪ್ಲೇಟ್ ಎಂದವಳು ನಾಲಿಗೆ ಕಚ್ಚಿಕೊಂಡೆ." "ಅರು" ಇರಬೇಕಿತ್ತು. ನಮ್ಮಿಬ್ಬರ Ever time favorite  ಈ ಪಾನಿಪೂರಿ ಎಂದುಕೊಂಡವಳಿಗೆ  ಥಟ್ಟನೆ ನೆನಪಾದದ್ದು ಅರ್ಜುನ್ ಇವತ್ತು ಬರುತ್ತಾರೆಂಬುದು. ತಿಂದು ಮುಗಿಸಿದವಳು ಬೇಗ ಬೇಗ ಮನೆ ಕಡೆ ಹೆಜ್ಜೆಹಾಕಿದೆ. ಆತನ ನೆನಪೇ ಹಾಗೆ ವಾಯುವೇಗ ಕೊಟ್ಟುಬಿಡುತ್ತದೆ ಎಂದುಕೊಂಡೆ. ಬಾಗಿಲು ತೆರೆದಿತ್ತು. ಒಳಗೆ ಯಾವುದೊ ಕಾರ್ಟೂನ್ enjoy  ಮಾಡುತ್ತಿದ್ದ ಅರ್ಜುನ್  ನ ನೋಡಿದವಳಿಗೆ ಮನೆಯಲ್ಲಿ ಒಬ್ಬರೇ ಇಲ್ಲ ಎಂಬ ಅರಿವಾಯ್ತು, ಗೆಸ್ಟ್ ರೂಮ್ ಕಡೆ ನೋಡಿದವಳಿಗೆ ಕಂಡದ್ದು ಒಬ್ಬ ಹುಡುಗಿ. ಅವರು ಹೆಣ್ಣುಮಕ್ಕಳನ್ನು ಹೀಗೆ ಕರೆತರುವುದು ನನಗೆ ಹೊಸದೇನೂ ಅಲ್ಲವಾದ್ದರಿಂದ ನಸು ನಗುತ್ತಲೇ ಸ್ನಾಕ್ಸ್ ತಯಾರಿಯಲ್ಲಿ ತೊಡಗಿದೆ. "ಉನ್ನತಿ" ನನ್ನ ಮತ್ತು  ಅರ್ಜುನ್ ನ ನನಸಾದ ಕೂಸು. ನಾವಿಬ್ಬರೂ ಸೇರಿ ಮಹಿಳೆಯರ ಸಬಲಿಕರಣಕ್ಕೆ, ವೇಶ್ಯಾವಾಟಿಕೆಗೆ ಬಲಿಯಾದವರಿಗೆ,ಆ  ವೃತ್ತಿಯಿಂದ ಹೊರಬರಲು ಇಶ್ಚಿಸುವವರಿಗಾಗಿ, ಅವರ ಪುನರ್ವಸತಿಗಾಗಿ ಪ್ರಾರಂಭಿಸಿದ ಏನ್ ಜಿ ಓ. ಆಗಲೇ ಮೂರು ವರ್ಷಗಳಾಯ್ತಲ್ಲ ಎಂದುಕೊಳ್ಳುತ್ತಾ  ಅವರಿಗೆ ಸ್ನಾಕ್ಸ್ ಕೊಟ್ಟೆ. "ಆಕೆಗೂ ಕೊಡು, ಒಳ್ಳೆಯವಳ ಥರ ಕಾಣಿಸ್ತಾಳೆ. ಮನೆಗೊಬ್ಬಳು ಕೆಲಸದವಳು ಬೇಕೆಂದೆಯಲ್ಲ ಇಷ್ಟ ಆಗ್ತಾಳ ನೋಡು, ಇಲ್ಲಾಂದ್ರೆ ನಾಳೆ ಸೆಂಟರ್ ಗೆ ಬಿಟ್ಟು ಬರುತ್ತೇನೆ"  ಎಂದರು.  ಸರಿ ಎಂದು ಅವಳಿಗೆ  ಕೊಡಲು ಹೋದವಳು , ಅವಳನ್ನು ನೋಡಿ ನಿಜಕ್ಕೂ ಗರ ಬಡಿದವಳಂತೆ ನಿಂತೆ. ತಿಂದ ಪಾನಿಪೂರಿ ಗಂಟಲಲ್ಲೇ ಸಿಕ್ಕಿಕೊಂಡ ಅನುಭವ.. !! ಅರ್ಜುನ್ ಗೆ ಅಲ್ಲಿಂದಲೇ ಕಿರುಚಿದೆ "ಇವಳನ್ನು ಸೆಂಟರ್ ಗೆ ಬಿಟ್ಟು ಬನ್ನಿ ಪ್ಲೀಸ್." ನನ್ನ ನಡುವಳಿಕೆ ಅವರಿಗೆ ಇರುಸು ಮುರಿಸಾದರೂ "ಸರಿ ಜಾನು  ಬಿ ಕೂಲ್ "ಎನ್ನುತ್ತಾ ಅವಳನ್ನು ಕರೆದುಕೊಂಡು ಹೋದರು. ಆಕೆಯ ಮುಖಭಾವ ಹೇಗಿತ್ತು ಎಂದು ನೋಡಬೇಕಿತ್ತು ಎನಿಸಿದರೂ ನೋಡಲಾಗಲೇ ಇಲ್ಲ. ಬಹುಶಃ ನನ್ನ ಸ್ಥಿತಿಯಲ್ಲೇ ಆಕೆಯೂ ಇದ್ದಳೇನೋ. 

ಅವಳನ್ನೂ ಈ ಸ್ಥಿತಿಯಲ್ಲಿ ನೋಡುತ್ತೇನೆ ಎಂಬುದನ್ನು ಊಹಿಸಿಕೊಂಡಿರಲಿಲ್ಲ. ಆಕೆ ಮಧು.. ಜೇನು..  ಒಂದು ಕಾಲದಲ್ಲಿ ಹುಡುಗರ ನಿದ್ದೆ ಕೆಡಿಸಿದವಳು,  ಮೆರೆದವಳು, beauty is strength  ಬೇಬಿ. ನೋಡು ಗಂಡುಮಕ್ಕಳು ನನ್ನ ಚಪ್ಪಲಿನಾ ತಲೆ ಮೇಲೆ ಇಟ್ಕೊಂಡು ಓಡಾಡ್ತಾರೆ. ಕಣ್ಸನ್ನೆ ಮಾಡಿದ್ರೆ ಕೆಲಸ ಆಗುತ್ತೆ.  ಮನೆ ಮುಂದೆ ನಾಯಿ ಥರ ಬಿದ್ದಿರ್ತಾರೆ ಹುಡುಗರು. ನಿಮಗೆಲ್ಲ ಎಲ್ಲಿದೆ ಆ ಭಾಗ್ಯ. ಅಂತ ಹುಬ್ಬು ಹಾರಿಸಿದವಳು, ಇಂದು ನಮ್ಮನೆಯಲ್ಲಿ.. ಅದೂ ಈ ಸ್ಥಿತಿಯಲ್ಲಿ .. !! ಮನಸ್ಸಿಗೆ ಕಸಿವಿಸಿಯಾಯ್ತು. ಜೇನು ಹುಳು ಥರಾನೆ ಹತ್ತಾರು ಹುಡುಗರನ್ನ ಬದಲಿಸಿ ಈ ಯಾರೋ ವಿ ಜೆ ವಿಶಾಲ್ ಎನ್ನುವವನ ಜೊತೆ ಮುಂಬೈ ಸೇರಿದ್ದಾಳಂತೆ ಎಂಬುದು ಕೊನೆ ಸುದ್ದಿಯಾಗಿತ್ತು ಅವಳ ಬಗೆಗೆ ಕೇಳಿದ್ದು.  ಇನ್ನೂ ಮುಂದುವರೆಯಬಹುದಾಗಿದ್ದ ಆಲೋಚನೆಗಳನ್ನು ನಿಲ್ಲಿಸಿದ್ದು ನನ್ನವನ ತೋಳು. ಬಿಸಿ ಅಪ್ಪುಗೆಯಲ್ಲಿ ಕರಗಿ ಹೋದೆ. ನಿನ್ನ ಮನಸ್ಸಿನ ತೊಳಲಾಟಗಳಿಗೆಲ್ಲ ನಾ ಕಿವಿಯಾಗಬಲ್ಲೆ ಎಂಬ ಭರವಸೆ ಆ ತೊಳುಗಳಲ್ಲಿತ್ತು. 

******************************************************
ಮರುದಿನ ಮುಂಜಾನೆ ಅಂಗಳದ ರಂಗವಲ್ಲಿ ನಗುತಿತ್ತು. ಕಾಫಿ ಮಾಡುತ್ತಿದ್ದವಳಿಗೆ ಅರ್ಜುನ್ ಒಂದು ಪತ್ರಕೊಟ್ಟು ನಿನ್ನೆ ಕರೆತಂದ ಹುಡುಗಿ  ಸುಸೈಡ್ ಮಾಡಿಕೊಂಡಿದ್ದಾಳೆ. ಸುಸೈಡ್ ನೋಟ್ ಬೇರೆ ಇದೆ. ಈ ಪತ್ರದ ಮೇಲೆ ನಿನ್ನ ಹೆಸರಿತ್ತು ಅದಕ್ಕೆ ಇನ್ಸ್ಪೆಕ್ಟರ್ ಕೊಟ್ಟರು. ಮುಂದಿನದೆಲ್ಲ  ಕೆಲಸಗಳು  ನಡೆಯುತ್ತಿವೆ . .ಇದು ನಮಗೆ  ಹೊಸದೇನೂ ಅಲ್ಲವಲ್ಲ ಎನ್ನುತ್ತಾ ಕಾಫಿ ತೆಗೆದುಕೊಂಡು ಹೋದರು. ಸಾವಿಗೆ  ನಾನೇ ಕಾರಣಳಾದೇನಾ ?  ಎಂದುಕೊಳ್ಳುತ್ತಾ  ನಡುಗುವ ಕೈಗಳಲ್ಲಿ ಪತ್ರ ಬಿಡಿಸಿದೆ. 

ಜಾನು , ಜಾನ್ಹವಿ.. 

ನನ್ನನ್ನು ಬಹಳ ಹತ್ತಿರದಿಂದ ನೋಡಿದವಳು ನೀನು. ಏಳು ವರ್ಷಗಳಿರಬೇಕಲ್ಲ ಒಟ್ಟಿಗಿದ್ದೆವು.  beauty is strength ಎಂದೇ ಬದುಕಿದವಳು ನಾನು. ನಿನಗೆ ಗೊತ್ತಲ್ಲ ನನಗಾಗಿ ಹುಡುಗರು ಸಾಯುತ್ತಿದ್ದರು. ನನ್ನದೊಂದು ನೋಟಕ್ಕಾಗಿ ಕಾಯುತ್ತಿದ್ದವರೆಷ್ಟೋ. ಎಷ್ಟೋ ಹುಡುಗರ ಹೃದಯದಲ್ಲಿ ಅನಭಿಷಿಕ್ತ ರಾಣಿಯಾಗಿ ಮೆರೆದವಳು. ಅದೇ ಅಂದವನ್ನೇ ಬಳಸಿಕೊಂಡೆ. ಕಾಲೇಜಿನ ಮೂರು ವರ್ಷಗಳಲ್ಲಿ  ಆರು ಬಾಯ್ ಫ್ರೆಂಡ್ ಗಳು ಬದಲಾದರು. ಕಾಲಿನ ಚಪ್ಪಲಿಯಿಂದ ಹಿಡಿದು ಕೈಯಲ್ಲಿನ ಕಾಸ್ಟ್ಲಿ ಮೊಬೈಲ್ ವರಿಗಿನ ಎಲ್ಲ ಗಿಫ್ಟ್ ಗಳು ನನ್ನ collection ಲ್ಲಿದ್ದವು. ಈ ಥರಹದ ಕೊಳ್ಳುವಿಕೆಯಲ್ಲಿ ' ಕೊಡುವಿಕೆಯೂ' ಇದ್ದೇ ಇತ್ತು. ಕಾಲೇಜ್ ಮುಗಿದ ಮೇಲೆ ಹುಡುಗು ಬುದ್ಧಿಯ ಆಟಗಳೆಲ್ಲ ಕೊನೆಯಾಗಬಹುದಿತ್ತು. ಆದರೆ ಸಿಕ್ಕ ಐದಂಕಿಯ  ಸಂಬಳದ ಕೆಲಸ ಹೈ ಸೊಸೈಟಿ ಗೆ ತೆರೆದುಕೊಟ್ಟಿತು. ಮದ್ಯಮವರ್ಗಕ್ಕೆ ವರ್ಜ್ಯವಾದ ಕೆಲಸಗಳೆಲ್ಲ ಹೈಸೋಸೈಟಿಯಲ್ಲಿ  ಮಾಮೂಲು ಎನ್ನುವಂಥವು. ಸುತ್ತಾಟ, ಶಾಪಿಂಗ್ ಗಳೆಲ್ಲ ಜೋರಾದವು. ವೀಕೆಂಡ್ ಗಳು ಬದಲಾದಂತೆ ಹುಡುಗರೂ ಬದಲಾದರು. ಬಾಸ್ ಗಳು, ಮ್ಯಾನೇಜರ್ ಗಳು, ಸಹೋದ್ಯೋಗಿಗಳು, ಸೋಶಿಯಲ್ ನೆಟ್ವರ್ಕ್ ಗಳ ಗೆಳೆಯರು ಎಷ್ಟೆಲ್ಲಾ ಜನ ಬಂದರು ಹೋದರು. ಎಲ್ಲರೂ ನನ್ನ ಅಂದಕ್ಕಾಗಿ ಸಾಯುತ್ತಿದ್ದರು. "ಕೊಡುಕೊಳ್ಳುವಿಕೆ" ಇಲ್ಲೂ ಮುಂದುವರಿಯುತ್ತಿತ್ತು. ಆಗಿನ ಚಿಕ್ಕ 'ಕೊಡುವಿಕೆಯೆಲ್ಲ ' ಈಗ ದೊಡ್ಡದಾಗಿ ಬದಲಾಗಿತ್ತು. ಏನೇನೋ ಪಡೆದುಕೊಂಡಿದ್ದೆ ,ಬದಲಾಗಿ  " ಎಲ್ಲವನ್ನೂ " ಕಳೆದುಕೊಂಡಿದ್ದೆ. ಜೀವನ ಮಜವಾಗಿತ್ತು ಆಗ. ಪ್ರೀತಿ ಹೆಸರಲ್ಲಿ ಮೋಸ ಮಾಡಿದವರು ಬಹಳಷ್ಟು ಜನ. ಅವರ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಇನ್ನೊಬ್ಬರ ಹುಡುಕಾಟ,ಈತ ಮೋಸ ಮಾಡಲಾರ ಎಂಬ ಭರವಸೆಯಲ್ಲಿ. ಆದರೆ ಎಲ್ಲ ಸಂಬಂಧಗಳು ಒಂದೋ ಅವರಿಗೆ ನನ್ನ ಆಕರ್ಷಣೆ ಕಡಿಮೆಯಾಗುವವರಿಗೆ, ಅಥವಾ ನನಗೆ ಅವರಲ್ಲಿ ಆಕರ್ಷಣೆ ಕಡಿಮೆಯಾಗುವಲ್ಲಿಗೆ ಮುಗಿಯುತ್ತಿತ್ತು. 

ಈ ಮಧ್ಯೆ ಮನಸ್ಸು ನಿಜಕ್ಕೂ ಒಬ್ಬ ಸಂಗಾತಿಯನ್ನು ಬೇಡುತ್ತಿತ್ತು. ವಿಡಿಯೋ ಜಾಕಿ ವಿಶಾಲ್ ಇಷ್ಟವಾಗಿದ್ದ. ಆತನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೆ. ಆತನೂ ಅಷ್ಟೇ. ಮನೆಯಲ್ಲಿ ಒಪ್ಪಲಿಲ್ಲ. ಆತ  ಮುಂಬೈ ಗೆ ಹೋಗಿಬಿಡೋಣ ಎಂದ. ಮನೆಯವರನ್ನು ಧಿಕ್ಕರಿಸಿ ಆತನೊಂದಿಗೆ ಮುಂಬೈ ಸೇರಿದೆ. ಅಪ್ಪ ಮಗಳು ಸತ್ತಳು ಎಂದು ಕೊಡ ನೀರು ಸುರಿದುಕೊಂಡು ಸಂಬಂಧ ಕಡಿದುಕೊಂಡರು. ಪುಟ್ಟದೊಂದು ಸಂಸಾರ ನಡೆಸಿಕೊಂಡು ಮನೆಯವರಿಗೆ ಸಡ್ಡು ಹೊಡೆದು ಬದುಕಬಹುದಿತ್ತು. ಆದರೆ ಕಡಲ ನಗರಿ ನನ್ನ ಮನಸಲ್ಲಿ ಬೇರೆಯದೆಯೇ ಅಲೆ ಎಬ್ಬಿಸಿತು. ಇಲ್ಲಿನ ಮಬ್ಬು ಬೆಳಕಿನ ಪಬ್ ಗಳಲ್ಲಿ , ಬಾರ್ ಡಿಸ್ಕೋ ಥೆಕ್ ಗಳ ತಳುಕಿನಲ್ಲಿ ವಿಶಾಲ್ ನ ಕಳೆದುಕೊಂಡೆ. ವಿಶಾಲ್ ತರುವ ತಿಂಗಳ ಸಂಬಳಕ್ಕೆ ಕಾಯುವ ಬದಲು ನನಗಾಗಿ ಅಷ್ಟನ್ನು ಒಂದೇ ದಿನಕ್ಕೆ ಖರ್ಚು ಮಾಡುವ ಶ್ರೀಮಂತರೇ ಪ್ರೀತಿಯಾದರು. ಮಧು ಎಂದು ಹೆಸರಿಟ್ಟುಕೊಂಡವಳು ಅಕ್ಷರಶಃ ಜೇನಿನಂತೆ ಸುತ್ತಿದೆ. ಈಗೀಗ ವಯಸ್ಸು ಬುದ್ಧಿ ಹೇಳತೊಡಗಿತ್ತು. ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎನಿಸುತ್ತಿತ್ತು. ದೇಹಸಂಗಕ್ಕಿಂತ ಮನಸ್ಸಿಗೆ ಸಂಗಾತಿ ಬೇಕಿತ್ತು. ರಂಜಿತ್ ಎಂಬ ಆಗರ್ಭ ಶ್ರೀಮಂತನೊಬ್ಬ ನನ್ನ ಕಥೆಯೆಲ್ಲಾ ಗೊತ್ತಿದ್ದೂ ನನ್ನ ಮದುವೆಯಾದಾಗ ಬಾಳು ಒಂದು ಹಂತಕ್ಕೆ ಬಂತು ಎಂದುಕೊಂಡೆ. ಆದರೆ ಆಗಿದ್ದೆ ಬೇರೆ. "ತಾಳಿಯ ಲೈಸೆನ್ಸ್ ಕೊಡಿಸಿದ್ದೆ ಈ ಧಂಧೆಗಾಗಿ. ನಿನ್ನನ್ನು ಕಟ್ಟಿಕೊಂಡಿದ್ದು ಸಂಸಾರ ಮಾಡುವುದಕ್ಕಾಗಿ ಅಲ್ಲ , ಮಾಡಿಸುವುದಕ್ಕಾಗಿ ಎಂದ." ನರಕವಾಯಿತು ಜೀವನ. ನನ್ನ ಕೈಯಿಂದಲೇ ಸುಂದರ ಬದುಕನ್ನು ಕತ್ತು  ಹಿಸುಕಿ ಸಾಯಿಸಿದ್ದೆ ನಾನು. ಆ ನರಕ ಬೇಸರವಾಗಿ ಉಟ್ಟ ಬಟ್ಟೆಯಲ್ಲೇ ಅಲ್ಲಿಂದ ಓಡಿ ಬಂದೆ. ಇಲ್ಲಿ ಯಾರಿಗೆ ಮುಖ ತೋರಿಸಲಿ ಹೇಳು.? ಸಾವೊಂದೇ ಎದುರಿಗಿದಿದ್ದು. ಸಾಯಬೇಕೆಂದು ಹೊರಟವಳನ್ನು ತಡೆದು ಆಶ್ರಯ ನೀಡುತ್ತೇನೆ ಕರೆದುಕೊಂಡು ಬಂದಿದ್ದು ನಿನ್ನ ಗಂಡ. ಇಷ್ಟು ಚಂದವಿದ್ದೀರ ಯಾಕೆ ಸಾಯಬೇಕು ಎಂದು ಆತ  ಕೇಳಿದಾಗ  "ಚೆಂದವಿರುವುದರಿಂದಲೇ" ಎಂದಿದ್ದೆ. ನನ್ನಾಕೆ ನಿಮ್ಮಷ್ಟು ಚೆಂದವಿಲ್ಲ, ಆದರೆ ನಿಜ ಹೇಳ್ತೀನಿ ಗುಣದಲ್ಲಿ ಮಾತ್ರ ಆಕೆಯಷ್ಟು ಸುಂದರಿ ಇನ್ಯಾರು ಇಲ್ಲ ಗೊತ್ತಾ ಅಂತ ನಿನ್ನ ಬಗೆಗೆ ಆತನಿಗಿದ್ದ ಗೌರವ. ನಿನ್ನೆಡೆಗಿನ ಆತನ ಪ್ರೀತಿ ಎಲ್ಲವನ್ನು ಕಾರಲ್ಲಿ ಬರುವಾಗ ಹೇಳಿದ್ದರು ಆತ. ನಿಮ್ಮ ಸೆಂಟರ್ ನ ಉದ್ದೇಶಗಳು, ಕೆಲಸಗಳ ಬಗೆಗೆಲ್ಲ ಹೇಳಿದ್ದರು. ಆದರೂ ಯಾಕೋ ನನ್ನಲ್ಲಿ  ಬದುಕುವ ಆಸೆ ಚಿಗುರಲೇ ಇಲ್ಲ. 

ಬಹುಶಃ ನೀ ಪತ್ರ ಓದುತ್ತಿರುವೆಯಾದರೆ ನಾನಿಲ್ಲ ಖಂಡಿತವಾಗಿಯೂ.ನಿನಗೆ  ಚಂದದ ಸಂಸಾರವಿದೆ ಬೇಬಿ. ನಿಜವಾಗಿ ಮೋಸ ಹೋದವರಿಗೆ, ಬಲಿಯಾದವರಿಗೆ ಆಶ್ರಯಾವಾಗಲಿ ನಿನ್ನ ಉನ್ನತಿ. ಬದಲಾಗಿ ನನ್ನಂತೆ ಬೇಕೆಂದೇ ಜೀವನವನ್ನು ಹಾಳುಮಾಡಿಕೊಂಡವರಿಗಲ್ಲ. ಸಾಯುವಾಗಲೂ ನಿಮಗೆ ತೊಂದರೆ ಕೊಟ್ಟೇ ಹೋಗುತ್ತಿದ್ದೇನೆ. ಕ್ಷಮೆಯಿರಲಿ. ನನ್ನ ಕುರಿತಾಗಿ ನಿನ್ನ ಕಣ್ಣಲ್ಲಿ ಎರಡು ಹನಿಯಾದರೂ ಜಿನುಗಿದರೆ ಅವೇ ನನ್ನನ್ನು ಕಾಯುತ್ತವೇನೋ ... 

ಇಂತಿ   ಮಧು.. 


ಇವಿಷ್ಟನ್ನು ಓದುವ ಹೊತ್ತಿಗೆ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು. ಹಿಂದಿಂದ  ಬಂದ ಅರ್ಜುನ್ "ಯಾಕೆ ಜಾನು ? ಇದು ನಮಗೇನೂ ಹೊಸ ಕೇಸ್ ಅಲ್ಲವಲ್ಲ.  ಬಿ ಕೂಲ್. ಆಕೆಯ ಸಂಬಂಧಿಗಳ್ಯಾರು ಇದ್ದಂತಿಲ್ಲ.  ಪೋಸ್ಟ್ ಮಾರ್ಟಂ ಆದಮೇಲೆ ಹಾಗೆಯೇ ಚಿತಾಗಾರಕ್ಕೆ ಕಳುಹಿಸಬೇಕು" ಅಂದ. "ಇಲ್ಲ ಅರ್ಜುನ್  ಆಕೆ ನನ್ನ ಗೆಳತಿ. ಬಹುಶಃ ಗೆಳತಿಯರಾಗಿ ನಾವೆಲ್ಲಾ ಆಕೆ ಹೀಗಾಗದಂತೆ ತಡೆಯಬಹುದಿತ್ತೇನೋ. ಆದರೆ ನಾವು ತಪ್ಪು ಮಾಡಿ ಬಿಟ್ಟೆವು. ಈಗ ಆಕೆಯನ್ನು ಅನಾಥಳಂತೆ ಕಳುಹಿಸಿಕೊಡಲು ಇಷ್ಟವಿಲ್ಲ. ಎಲ್ಲರಿಗೂ ಫೋನ್ ಮಾಡುತ್ತೇನೆ.  ಫ್ರೆಂಡ್ಸ್ ಎಲ್ಲ ಬರ್ತಾರೆ" ಎನ್ನುತ್ತಾ ಫೋನ್ ಬುಕ್ ಓಪನ್ ಮಾಡಿ ಕುಳಿತುಕೊಂಡೆ.     

Tuesday, 20 August 2013

ಏನೆಂದು ಹೆಸರಿಡಲಿ ...


"ಅಲ್ಲ ಕಣೋ ಏಪ್ರಿಲ್  ಫ್ಹಸ್ಟ್  ದಿನ ಪ್ರೊಪೋಸ್ ಮಾಡಿದ್ದರೆ,ರಿಜೆಕ್ಟ್ ಮಾಡಿದ್ರೆ ಎಪ್ರಿಲ್ ಫೂಲ್ ಅಂತ ಹೇಳಿ,ದೂರದಿಂದಲೇ ನನ್ನ ಹುಡುಗಿ ಅಂತ ನೋಡ್ಕೊಂಡು ಮನಸಲ್ಲೇ ಖುಷಿ ಪಡ್ತಾ ಇರಬಹುದಿತ್ತಾ.. ಅದು ಬಿಟ್ಟು  ಹೋಗಿ ಹೋಗಿ ರಕ್ಷಾಬಂಧನದ ಹಿಂದಿನ ದಿನ ಪ್ರಪೋಸ್ ಮಾಡಿದೀಯಲ್ಲ ನಾಳೆ ಬಂದು ಹುಡುಗಿ ರಾಖಿ ಕಟ್ಟಿದರೆ ಏನ್ಲಾ ಮಾಡ್ತೀಯಾ" ಅಂತ ರೇಗಿಸಿದ್ದ ಗೆಳೆಯನಿಗೆ ಪುಸ್ತಕದಲ್ಲಿ ಹೊಡೆದು ಆಚೆಗಟ್ಟಿ ಮಲಗಿದ್ದ ಆ ಹುಡುಗ. ಆತನ  ಮನಸಲ್ಲಿದಿದ್ದನ್ನೇ ಗೆಳೆಯ  ಬಾಯಿ ಬಿಟ್ಟು ಹೇಳಿದ್ದ. ಆದ್ರೆ ಅದನ್ನ ಒಪ್ಪಿಕೊಳ್ಳುವ ಮನಸ್ಸು ಇವನದಾಗಿರಲಿಲ್ಲ . ಅದಕ್ಕೆ ಗೆಳೆಯನ್ನು ಹೊರ ಹಾಕಿದವನ ಮನದ ತುಂಬಾ ಆಕೆಯೇ ತುಂಬಿಕೊಂಡಿದ್ದಳು. ಕಲ್ಪನೆಯಲ್ಲೇ ಮನದರಸಿಯ ಜೊತೆಗೆ ಮಾತಿಗಿಳಿದಿದ್ದ ಹುಡುಗ... 

ನಿಜಕ್ಕೂ ಅವನಂದಂತೆ ನೀನು ಮಾಡುತ್ತೀಯಾ ? ನಿನ್ನ ಬಗ್ಗೆ ನಂಬಿಕೆಯೂ ಇಲ್ಲ ಬಿಡು, ನೀ ಹಾಗೇ ಮಾಡಿದರೂ ಮಾಡುವವಳೇ.  ನಿನ್ನ ಬಗ್ಗೆ ಏನು ಹೇಳಲಿ ಹೇಳು ಮಹರಾಯ್ತಿ. ನಿನ್ನ ಆ ನಗು ಎಲ್ಲಾನೂ  ಮರೆಸಿಬಿಡುತ್ತೆ. ಮಾತನ್ನೂ  ಕೂಡ.ಅದಿಕ್ಕೆ ನಿನ್ನ ಮುಂದೆ ಮೌನಿ ನಾನು.ನಿನ್ನ ಮಾತು, ಮೌನ, ಸಿಟ್ಟು, ಆ ಅಳು ಎಲ್ಲವೂ ಇಷ್ಟ ಗೊತ್ತಾ. ಇದನ್ನ ನಿನ್ನೆದುರಿಗೆ ಹೇಳಿದರೆ ಒದೆ ಗ್ಯಾರೆಂಟಿ. ಅದೇನೊ ನಿನ್ನನ್ನ ಗೆಳತಿ ಅಂತಾ ಕಲ್ಪಿಸಿಕೊಳ್ಳಲಾರೆ. ಪ್ರೇಮಿಯಾಗಿಯೇ ನನ್ನೆದೆಯೊಳಗೆ ಇಳಿದವಳು ನೀನು. ಹಾಗಾಗಿಯೆ ನಿನ್ನ ಜೊತೆ ಇನ್ಯಾರನ್ನು ಕಂಡರೂ ಉರಿ ನನಗೆ. ಅವತ್ತು  ಮಧು ಜೊತೆ ಮಾತನಾಡುತ್ತಾ ಬರುತ್ತಿದ್ದ ನಿನ್ನ ನೊಡುತ್ತಿದ್ದರೆ ನನಗೆಷ್ಟು ಉರಿಯುತ್ತಿತ್ತು ಗೊತ್ತಾ. ಅವನನ್ನು ಆ ಕಡೆ ಕಳುಹಿಸಿ ನೇರ ನನ್ನೆದುರಿಗೆ ಬಂದು ಹಾಯ್ ಎಂದವಳಿಗೆ ಬಿಗಿಯಾಗಿಯೇ ಉತ್ತರಿಸಿದ್ದೆ. ಆದರೆ ನನ್ನ ಕಣ್ಣಲ್ಲಿನ, ನನ್ನ ಮಾತಲ್ಲಿನ ಅಹಸನೆಯನ್ನು ಗುರುತಿಸಿದವಳಂತೆ, 

ಕಣ್ಣಿಗೆ ಕಂಡದ್ದೆಲ್ಲ ನಿಜವಾಗಿರಲೇ 
ಬೇಕಿಲ್ಲ.. 
ಕೃಷ್ಣನ ಪಕ್ಕ ನಿಂತ ಮಾತ್ರಕ್ಕೆ 
ರಾಧೆ ರುಕ್ಮಿಣಿ ಭಾಮೆಯರೇ ಆಗಬೇಕೆಂದೇನೂ ಇಲ್ಲ 
ಅಲ್ಲೊಬ್ಬ ಕೃಷ್ಣೇಯೂ ಇರಬಹುದಲ್ಲ ... !!

ಎಂದು ಹೇಳಿ ತಲೆ ಮೇಲೆ ನೋಟ್ ಬುಕ್ ನಿಂದ ಹೊಡೆದು ಹೋದಾಗ ಸ್ವಲ್ಪ ಪಪ್ಪಿ ಶೇಮ್ ಆಗಿದ್ದು ನಿಜ. ಆದರೆ ನನ್ನ ಮನಸ್ಸನ್ನ ಸ್ವಲ್ಪವಾದರೂ ನಿನಗೆ ತಿಳಿಸಿದ್ದೇನೆ, ಮತ್ತೂ ಅದು ನಿನಗೆ ಅರ್ಥವಾಗಿದೆ ಎನ್ನುವ ಸಣ್ಣ ಖುಷಿ ನನ್ನದಾಗಿತ್ತು. ನಿನ್ನ ಬಗ್ಗೆ ಅದ್ಯಾಕೆ ಅಷ್ಟು ಕಾಳಜಿ ಗೊತ್ತಿಲ್ಲ ನನಗೆ. ನಿನಗೊಂದು ಸಣ್ಣ ನೊವಾದರೂ ತಡೆಯಲ್ಲ ಜೀವ. ನಿನಗೇನು ಗೊತ್ತು ಕಷ್ಟ. ಆದರೂ ನನಗೆ ಜೀವ ಹಿಂಡುವಷ್ಟು ಕಷ್ಟ ಕೊಡುತ್ತೀಯ."ಅಕಸ್ಮಾತ್ ನಾನು ಸತ್ತರೆ... " ಅಂತ ಅವತ್ತು ನೀನು ಅಂದಾಗ ಅದ್ಯಾವ ಮಾಯದ ಸಿಟ್ಟೊ ಗೊತ್ತಿಲ್ಲ. ಸಡನ್ನಾಗಿ ಬಾಯಿ ಮೇಲೆ ಹೊಡೆದು ಬಿಟ್ಟಿದ್ದೆ. ತುಟಿಯೊಡೆದು ರಕ್ತ ಬಂದಿತ್ತು ನಿನಗೆ."ಅಯ್ಯೊ ಸತ್ತರೆ ಅಂತಾ ಹೆಳಿದ್ದಿಷ್ಟೆ ಕಣೊ, ನಿನ್ನ ಏಟಿಗೆ ಅನ್ಯಾಯವಾಗಿ ಕೊಲೆಯಾಗಿಬಿಡುತ್ತಿದ್ದೆನಲ್ಲೊ" ಅಂತಾ ನೀನು ಹೇಳಿದಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು.ನಿನ್ನ ಸಮಾಧಾನಿಸುವ ಬಗೆ ತಿಳಿದಿರಲಿಲ್ಲ. ನೀ ಅದನ್ನ ಬಯಸೋದು ಇಲ್ಲ ಅಂತಾ ಗೊತ್ತಿತ್ತು.ಮರುದಿನ ಎಲ್ಲರಂತೆಯೆ ಕಾಲೇಜ್ ಗೆ ಬಂದವಳು, ಕಾಲೆಳೆಯುತ್ತಿದ್ದವರಿಗೆಲ್ಲ ಹಾಗೆಯೇ ಉತ್ತರಿಸುತ್ತಾ, ಸಂಜೆ ನನ್ನ ಬಳಿ ಬಂದು ನೋಡು ನೀ ಮಾಡಿದ ಗಾಯ, ಎಷ್ಟು ಎಂಜಾಯ್ ಮಾಡಿದೆ ಗೊತ್ತಾ ಅಂದಾಗ ನಗು ಬಂತು.ಇಷ್ಟೆಲ್ಲ ಆದರೂ ಪ್ರೀತಿಯ ನಿವೇದನೆಗೆ ಮಾತ್ರ ಅವ್ಯಕ್ತ ಭಯ. ಕೊನೆಗೂ ಇವತ್ತು ನಿಲ್ಲದ ಮನಸ್ಸನ್ನು ಹತೊಟಿಗೆ ತರದೆ ನಿನ್ನ ಮುಂದೆ ಎಲ್ಲವನ್ನೂ ಅರುಹಿ ಬಿಟ್ಟಿದ್ದೆ. ನೀನೋ ಮಹಾನ್ ಸೊಕ್ಕಿನಿಂದ ನಾಳೆ ಹೆಳ್ತೀನಿ ಎಂದು ಮಾಯವಾದೆ. ನಾಳೆ ರಕ್ಷಾಬಂಧನ ಎಂದು ಅರಿವಾಗಿದ್ದು ಆಮೇಲೆ. ನೊಡು ದಯವಿಟ್ಟು ನಾಳೆ ಆಟ ಆಡಬೇಡ. ನನಗೆ ಗೊತ್ತು ನನ್ನ ಪ್ರೀತಿಯನ್ನು ಸಿರಿಯಸ್ ಆಗಿ ನೀ ಒಪ್ಪಿಕೊಂಡರೂ ನಿನ್ನ ಪ್ರೀತಿಯಲ್ಲಿ ಸಿರಿಯಸ್ನೆಸ್ ಇರಲಾರದು.ಮಗುವಂತೆಯೆ ನಿನ್ನ ಪ್ರೀತಿ. ಸಂಭಾಳಿಸುವುದು ಕಷ್ಟ. ಆದರೂ ನಿನ್ನ ಸಂಭಾಳಿಸಬಲ್ಲೆ ಕಣೇ...


ಹೀಗೆಯೇ ಯೊಚಿಸುತ್ತಾ ರಾತ್ರಿಯೆಲ್ಲ ನಿದ್ದೆಯಿಲ್ಲದೆ ಹೊರಳಿದ್ದ ಹುಡುಗನ ಕಣ್ಣು ಕೆಂಪಾಗಿತ್ತು.ಹೃದಯ ಬಡಿತ ಪಕ್ಕದಲ್ಲಿ ಕುಳಿತವರಿಗೂ ಕೇಳಿಸುವಂತಿತ್ತು.ಅವನ ಮುದ್ದು ಹುಡುಗಿ ಮಾತ್ರ ಯಾವುದೇ ಬದಲಾವಣೆಗಳಿಲ್ಲದೆ ಕೈ ಲ್ಲಿ ಒಂದು ಪುಟ್ಟ ಬಾಕ್ಸ್ ಕೊಟ್ಟು ನಡೆದಿದ್ದಳು. ಓಪನ್ ಮಾಡಿ ನೋಡಿದವನಿಗೆ ಜಗವೆಲ್ಲ ಸ್ತಬ್ಧವೆನಿಸಿತ್ತು .ಅದರಲ್ಲಿ ಚಂದದೊಂದು ರಾಖಿ ನಗುತ್ತಿತ್ತು. ಕಿವಿಗೆ ಕೇಳುತ್ತಿದ್ದುದು ಆಕೆಯ ಗೆಜ್ಜೆಯ ದನಿಯೊಂದೇ. ಆಕೆ ವಾಪಸ್ ಬಂದವಳು ಇದು ನಿನಗೆ, ಅದು ನಿನಗಾಗಿ ಅಲ್ಲ. ಸಾರಿ ಕಣೊ ಎಂದು ಬಂದ ವೇಗದಲ್ಲೆ ಬೇರೆ ಬಾಕ್ಸ್ ಒಂದನ್ನು ಇವನ ಕೈಗಿಟ್ಟು ಹೋದಳು. ಹೋದ ಜೀವ ವಾಪಸ್ ಬಂದಂತಾದಾಗ ಹುಡುಗನ ಕಣ್ಣಲ್ಲಿ ಯುದ್ಧ ಗೆದ್ದ ಸಂಭ್ರಮ.


ನಿಧಾನವಾಗಿ ಒಪನ್ ಮಾಡಿದವನಿಗೆ ಕಂಡದ್ದು ಎರಡೆಳೆ ಕರಿಮಣಿಯ ಮಧ್ಯ ಜೊಡಿಸಿದ್ದ ಪುಟ್ಟ ತಾಳಿಯಂತಹ ಪದಕ. ಜೊತೆಯಲ್ಲೆ "ರಾಖಿ ಕಟ್ಟಿಯೇ ರಕ್ಷಣೆ ಮಾಡಬೇಕಿಲ್ಲ, ಇದನ್ನ ಕಟ್ಟಿದ್ರೂ ರಕ್ಷಣೆ ಮಾಡಬೇಕಾಗತ್ತೆ. ಲವ್ ಯು ಕಣೊ ಗೂಬೆ" ಎಂದು ಬರೆದ ಮುದ್ದಾದ ಅಕ್ಷರಗಳು. ನಮ್ಮದೆನ್ನುವ ಈ ಪ್ರೀತಿಯಲ್ಲಿ ತನಗಿಂತಲೂ ಗಟ್ಟಿಯಾದ ಕನಸು ಈ ಹುಡುಗಿಯದು ಎಂದುಕೊಂಡವನಿಗೆ ಹೆಮ್ಮೆಯಾಗಿತ್ತು.


ಹೊಸ ಕನಸೊಂದು ಹುಡುಗನ ಖುಷಿಯ ಜೋಳಿಗೆ ತುಂಬಿತ್ತು.

Friday, 9 August 2013

ನಲ್ಲ ಬರುವನಂತೆ ..

Photo by : Dinesh Maneer
http://www.dineshmaneer.com/
ಭಾವಗಳೂ ಬದಲಾಗುತ್ತವೆ .. 
ಸಂಜೆ ಬಾನಂಚಲ್ಲಿ 
ರಂಗು ಬದಲಾದಂತೆ ... 
ಮನದ ಮನೆಯಲ್ಲಿ 
ಅದಾಗಲೇ ಸಡಗರ ... 
ತಂಗಾಳಿ ಹೊತ್ತು ತಂದ ಸುದ್ದಿ .. 
ನಲ್ಲ ಬರುವನಂತೆ .. 


ಶಕ್ಕೊಪ್ಪಿಸಬೇಕು ನಾ 
ನನ್ನೆಲ್ಲ ಭಾವಗಳ ಪಿಸುನುಡಿಯಲ್ಲಿ 
ನಿನಗೆ ಮಾತ್ರ ಕೇಳುವಂತೆ 
ನಿನ್ನ ಬಿಸಿಯಪ್ಪುಗೆಯಲ್ಲಿ ... 
ಗಡಿಯಾರದ ಮುಳ್ಳುಗಳದೂ 
ಮುಂದೋಡಲು ಮುಷ್ಕರ 
ನೀ ಬರುವ ಹೊತ್ತಲ್ಲಿ ..


ನಾ ನನ್ನೊಳಗೆ ನಗುತಿರಲು 
ನಿನ್ನ ಪ್ರತಿಬಿಂಬ ಕಾಣುವಾಸೆ 
ಹೊರನೆಟ್ಟ ಕಂಗಳಲಿ .. 
ಚಡಪಡಿಕೆಯ ಮನಸ್ಸು 
ಕಾಯುವಿಕೆಯ ಮುನಿಸು .. 
ನಿನ್ನ ಕಂಡಾಗ 
ಮುಗುಳು ನಗೆಯಾಗಿ 
ಬದಲಾಗುವದು ತುಟಿಯಂಚಲ್ಲಿ .


Monday, 15 July 2013

"ಜೀವಂತು ಶರದಾಂ ಶತಮ್ "
"ಆತ್ಮ ಬಂಧು"   ಈ ಶಬ್ದ ಕೇಳಿದರೆ ಅದ್ಯಾಕೋ ನಿನ್ನ ಹೆಸರು ನೆನಪಾಗಿ ಬಿಡುತ್ತೆ. ದುಃಖವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಆದರೂ ಕಡಿಮೆ ಮಾಡಿಕೊಳ್ಳಬೇಕು ಎನಿಸಿದರೆ ನಿನ್ನ ನೆನಪಾಗಿಬಿಡುತ್ತೆ. ಯಾವುದೋ ಒಂದು ಮೂಡ್ ನಿಂದ ಹೊರಬರಬೇಕು ಆಗಲೂ ನಿನ್ನದೇ ನೆನಪು. ಸುಮ್ನೆ ಹರಟಬೇಕು, ಗಟ್ಟಿಯಾಗಿ ನಗಬೇಕು ಕಣ್ಣಲ್ಲಿ ನೀರು ಬರುವಷ್ಟು ಎನಿಸಿದರೆ again  ನಿನ್ನದೇ ನೆನಪಪ್ಪಾ.  ನನಗೆ ತುಂಬಾ ಮುದ್ದಿಸಿಕೊಳ್ಳಬೇಕು, ಚಿಕ್ಕಮಗುವಿನಂತೆ ಹಠ ಮಾಡಬೇಕು ಅಂದರೆ ಅದಕ್ಕೆ ನೀನೆ ಬೇಕು. ನಗಿಸಿ ಕಣ್ಣೀರಾಗಿಸಿದವ ನೀನು ಇದುವರೆಗೂ ನಿನ್ನಿಂದಾಗಿ ನನ್ನ ಅಳಿಸಿದವನಲ್ಲ,
ನಿನ್ನ ಫೋನ್ ಎತ್ತಿದ ತಕ್ಷಣ "ಒಪಿ ಸೊಕ್ಕು ಮುದ್ದು ಜಾಣು ಅಂತ ಮಾತಿದ್ದಡ" ಎಂಬ ಮುದ್ದು ಭಾಷೆಯ  ನಿನ್ನ ಮಾತು ಕೇಳಿದರೆ ಸಾಕು ಅದೆಷ್ಟೇ ದುಃಖ, ಟೆನ್ಶನ್ ಲಿ ಕಾಲ್ ಮಾಡಿದ್ದರೂ ಎಲ್ಲವೂ ಖಲ್ಲಾಸ್. ಆಮೇಲೆ ಬಿಡು ಮಾತಿಗಿಂತ ಜಾಸ್ತಿ ನಗುವೇ.. :) 

ಪುಟ್ಟ ಬೊಮ್ಮಟೆ ಪಾಪುವಾಗಿದ್ದಾಗ ನಿನ್ನ ಎತ್ತಿಕೊಂಡ ನೆನಪಿಲ್ಲ. ಕೈ ಹಿಡಿದು ಶಾಲೆಗೇ ಕರೆದುಕೊಂಡು ಹೋದದ್ದು ನೆನಪಿಲ್ಲ. ಹೋಂ ವರ್ಕ್ ಮಾಡಿಕೊಟ್ಟಿಲ್ಲ ಬಿಡು. ಹೈ ಸ್ಕೂಲ್ ನಲ್ಲಿದ್ದಾಗ ನಾ ಬಸ್ ಇಳಿಯುವ ಮುನ್ನ ಕಾದಿದ್ದು, ನಿನ್ನ ಸೈಕಲ್ ಮೇಲೆ ನನ್ನ ಕರೆದುಕೊಂಡು ಬಂದಿದ್ದು ನೆನಪಿದೆ. ಆಮೇಲೆ ನೀ ಕಾಲೇಜ್ ಗೆ ಹೋಗುವಾಗ ನನ್ನ ಕಾಲೇಜ್ ಹತ್ತಿರ ಸಡನ್ ಆಗಿ ಬೈಕ್ ತಂದು ನಿಲ್ಲಿಸಿ ನನ್ನನ್ನು ಕರೆದುಕೊಂಡು ಬಂದಿದ್ದು ನೆನಪಿದೆ. ಎಷ್ಟೋ ಜನ ತಂಗಿಯರನ್ನು ಅವರ ಅಣ್ಣಂದಿರು ಕಾಲೇಜ್ ಗೆ ಡ್ರಾಪ್ , ಪಿಕ್ ಅಪ್ ಮಾಡುವಾಗ, ನನಗೂ ಒಬ್ಬ ಅಣ್ಣನಿರಬೇಕಿತ್ತು ಅಂದುಕೊಳ್ಳುತ್ತಿದ್ದ ನನಗೆ, ತಮ್ಮನಾದವನು ಅಣ್ಣನಿಗಿಂತ ಗ್ರೇಟ್ ಅಂತ ಅವತ್ತು ಅನಿಸಿತ್ತು.  ನನಗೆ ಸೈಕಲ್ ಕಲಿಸಬೇಕೆಂದು ನೀ ಪಟ್ಟ ಪಾಡು  ಇನ್ನೂ ಮರೆತಿಲ್ಲ, ಮತ್ತೂ ನನಗಿನ್ನೂ ಸೈಕಲ್ ಓಡಿಸಲು ಬರುವುದಿಲ್ಲ ಬಿಡು..:) ನಿನಗೂ ಗೊತ್ತು. 

ನೀನು,  ನಿನ್ನೊಡನೆ ವಸಂತ ಇಬ್ಬರಿದ್ದಲ್ಲಿ ಅಲ್ಲಿ ಖುಷಿ ಬಿಟ್ಟರೆ ಬೇರೆಯದಕ್ಕೆ ಜಾಗವೇ ಇಲ್ಲ. ನಿಮ್ಮೊಂದಿಗಿದ್ರೆ  ನಗುವಿಗೆ ಬ್ರೇಕ್ ಇಲ್ಲ. ಮೂವರೂ  ಒಬ್ಬರಿಗೊಬ್ಬರೂ ಮುಖ  ನೋಡಿಕೊಂಡರಂತೂ ಆ ನಗು ನಿಲ್ಲುವುದಿಲ್ಲ. ಅದಕ್ಕೆ ಎಷ್ಟೋ ವಿಚಾರಗಳ discussions ಆಗುವಾಗ  ನಾವೂ  ಮುಖ ನೋಡಿಕೊಳ್ಳುವುದಿಲ್ಲ ...  ಅದರಲ್ಲೂ ದೊಡ್ಡವರ ಎದುರಲ್ಲಿ...:)    " ಬಡಿ ಬಡಿ ಭಟ್ಟನ ಕಂಡರೆ ಈಶ್ವರನ ತಲೆ ಮೇಲಿನ ಬಿಲ್ವ ಪತ್ರೆಯೂ ಹುಬ್ಬು ಹಾರ್ಸಿತ್ತಡ " ಎಂಬ ಒಂದು ಗಾದೆಯನ್ನ ಉಟಕ್ಕೆ ಕುಳಿತಾಗ ನೆನಪಿಸಿಕೊಂಡು ನಕ್ಕಿದ್ದು, ತುತ್ತು ಗಂಟಲು ಸಿಕ್ಕಿಕೊಂಡಿದ್ದು  ನೆನಪಿದೆ. "ಮಾಣಿಕ್ಯ ಮುಕುಟಾಕಾರ ಜಾನುದ್ವಯ  ವಿರಾಜಿತ " ಎಂಬ ಲಲಿತಾ ಸಹಸ್ರನಾಮದ ಶ್ಲೋಕವನ್ನು ಅಪ್ಪ ತಮಾಷೆಯಾಗಿ " ಮಾಣಿಕ್ಯ ಮರ್ಕಟಾಕಾರ ಬಾಲದ್ವಯ  ವಿರಾಜಿತ " ಎಂದು ಬದಲಾಯಿಸಿದ್ದು ನಿಮಗಾಗಿಯೇ, ಬೈಯಿಸಿಕೊಳ್ಳುವುದು ಮತ್ತು ಜಗಳಗಳಲ್ಲಿ ನಾವ್ಯಾವತ್ತು ಒಂದೇ ಪಾರ್ಟಿ ಬಿಡು. ಮೂವರೂ ಸೇರಿ ಬೈಸಿಕೊಂಡಿದ್ದೇವೆ ಹೊರತು, ಒಬ್ಬರಿಗೊಬ್ಬರು ಚಾಡಿ ಹೇಳಿ ಬೈಸಿಕೊಂಡಿದ್ದಿಲ್ಲ. ಬೈಸಿಕೊಂಡ ಘಟನೆಗಳ ನೆನಪು ಮಾಡಿದರೆ ಕಾದಂಬರಿಯಾಗಿಬಿಡುತ್ತೆ ಅಲ್ವಾ.  ಜಗಳಗಳ ಜುಗಲ್ ಬಂದಿ ಇದ್ದಿದ್ದೆ. ಆದರೆ ಜಗಳವಾಡಿದಷ್ಟೇ ಹೊತ್ತು.ಮತ್ತೆಲ್ಲ ಏಕದಂ ಮಾಮೂಲಿ. 

ನನಗಿಬ್ಬರು ಮುದ್ದಿನ ತಮ್ಮಂದಿರಿದ್ದಾರೆ ಎಂದುಕೊಳ್ಳುವ ಹೊತ್ತಿಗೆ ನೀವಿಬ್ಬರೂ ಅಣ್ಣಂದಿರಾಗಿಬಿಟ್ಟಿರುತ್ತೀರಿ.  ನನ್ನಿಷ್ಟಗಳೆಲ್ಲ  ನನಗಿಂತ ಚೆನ್ನಾಗಿ ನಿಮಗೇ ಗೊತ್ತು. ನನ್ನ ಮೊಬೈಲ್ ಮೆಮೊರಿ ಕಾರ್ಡ್ ನಲ್ಲಿ ನೀವೇ ಸೆಲೆಕ್ಟ್ ಮಾಡಿದ ಹಾಡುಗಳಿವೆ, ಇದುವರೆಗೂ ಒಂದೇ ಒಂದು ಹಾಡು ನಾನು ಡಿಲೀಟ್ ಮಾಡಿಲ್ಲ. ಇದು ನಿನಗಿಷ್ಟ ಆಗುತ್ತೆ ತಗೋ ಅಂತ ನೀವು ಕೊಟ್ಟ/ಕೊಡುವ  ಎಲ್ಲ ವಸ್ತುಗಳು ನನಗಿಷ್ಟವಾದದ್ದೆ. ನಿಮ್ಮಬ್ಬರದು ಬೇರೆ ಬೇರೆ ರೀತಿಯ ಪ್ರೀತಿ, ಎರಡೂ ನನಗಿಷ್ಟ. ಮಕ್ಕಳು ಎದೆಯೆತ್ತರಕ್ಕೆ ಬೆಳೆದರು ಅಂತ ಅಪ್ಪ , ಕಾಕ ಹೆಮ್ಮೆಯಿಂದ ಹೇಳುವಾಗ ನನಗೂ ಹೆಮ್ಮೆಯೆನಿಸುತ್ತೆ.  ನೀವಿಬ್ಬರೂ ಒಂದು ಜೀವ, ಎರಡು ದೇಹ , ನಮಗೆಲ್ಲ ಎರಡೂ ಕಣ್ಣುಗಳಿದ್ದಂತೆ. ಅಮ್ಮಂದಿರ ಮುದ್ದಿನ ಕೂಸುಗಳು. ಇಬ್ಬರಿಗೂ ಬೇರೆ ಬೇರೆಯದೇ ಕನಸುಗಳಿವೆ. ಹೊಸ ಕನಸುಗಳ ಹೊಸ್ತಿಲಲ್ಲಿದ್ದೀರಿ ಇವತ್ತು. . ನಿಮ್ಮ ಗುರಿ ನೀವು ತಲುಪಿದರೆ ನಮ್ಮೆಲ್ಲರ ಕನಸುಗಳು ನನಸಾದಂತೆ. ಇಬ್ಬರಿಗೂ ಒಳ್ಳೆಯದಾಗಲಿ ನನ್ನ ಮುದ್ದೂಸ್...

"ಜೀವಂತು ಶರದಾಂ ಶತಮ್ " 

ಹಾಂ ನನ್ನ ಪುಟ್ಟು ನಿನ್ನ ಹುಟ್ಟಿದ ದಿನ ಇವತ್ತು. ಎಷ್ಟು ವರ್ಷವಾಯಿತು ನಿನಗೆ ? ಬೇಕಾಗಿಲ್ಲ ಬಿಡು ತಮ್ಮನಿಗಿಂತ ಅಣ್ಣನಾಗಿ ಬಿಟ್ಟಿದ್ದೀಯ. ಅಣ್ಣಂದಿರಿಗೆ ವಯಸ್ಸಾದಂತೆ ತಂಗಿಯರು ಚಿಕ್ಕವರಾಗುತ್ತಾರಂತೆ. ನಾ ಚಿಕ್ಕವಳಾಗಿಯೇ ಇರ್ತೀನಿ ನಿನ್ನ ಮುಂದೆ. 

ಹ್ಯಾಪಿ ಹ್ಯಾಪಿ ಬರ್ತ್ ಡೆ ಪದ್ದು..  ಲವ್ ಯು ಕಣೋ..

ಮೂರು ದಿಕ್ಕುಗಳಲ್ಲಿ ಮೂವರಿದ್ದರೂ ಪ್ರೀತಿ ಮತ್ತು ನಗು ನಮ್ಮ ನಿರಂತರ ಜೀವಸೆಲೆ..   

Thursday, 11 July 2013

ಈ ಸ್ನೇಹವೇ ಅಪ್ಯಾಯಮಾನ..

"ಮೌನ ಗೌರಿ.. ಅದೆಷ್ಟು ಮುದ್ದಾಗಿ ಕಾಣ್ತಾ ಇದ್ದೀಯ. ಹಬ್ಬದ ದಿನ ಹೆಣ್ಣು ಮಕ್ಕಳು ಹೀಗೆ  ರೆಡಿ ಆಗಿ ಮನೆತುಂಬಾ ಓಡಾಡ್ಕೊಂಡು ಇದ್ರೆ ಎಷ್ಟು ಖುಷಿ ಗೊತ್ತಾ" ಅಂತ ಅಮ್ಮ  ಗಲ್ಲಕ್ಕೊಂದು ಪುಟ್ಟ ಬೊಟ್ಟಿಟ್ಟು ಹೊರಗೆ ಹೋದಳು. ಅಷ್ಟು ಚಂದವಿದ್ದೀನಾ ? ಅಂದುಕೊಂಡು ಕನ್ನಡಿ ನೋಡಿಕೊಂಡೆ. ಯಾಕೋ ಹಿಂದೆ ನಿಂತು ನೀನೇ ನಕ್ಕಂತಾಯಿತು. ನನ್ನ ತುಟಿಯಂಚಿನ ಪುಟ್ಟ ನಗು ನೆನಪಿನ ಸುರುಳಿ ಬಿಚ್ಚಿಟ್ಟಿತ್ತು. ಆ ಕನ್ನಡಿಯೂ ನಿನ್ನದೇ ಉಡುಗೊರೆ ತಾನೇ. ಅದೊಂದು ಹುಟ್ಟು ಹಬ್ಬದ ದಿನ ಬೆಳಿಗ್ಗೆ ಮನೆ ಬಾಗಿಲ ಮುಂದೆ ಇದ್ದ ಆಳೆತ್ತರದ ಗಿಫ್ಟ್ ಪ್ಯಾಕ್ ನೋಡಿ ಏನಿರಬಹುದು ಎಂದು ಓಪನ್ ಮಾಡಿದವಳಿಗೆ ಕಂಡಿದ್ದು ನನ್ನದೇ  ಸಂಪೂರ್ಣ ರೂಪ. 

ಅವತ್ತು  ನಾನು ಅಮ್ಮ ನೋಡು ನೋಡುತ್ತಿದ್ದಂತೆ ನೀ ಬೈಕ್ ನಿಂದ ಬಿದ್ದಿದ್ದೆ. ಹೋಗಿ ಯಮ ಗಾತ್ರದ ರಾಯಲ್ ಎನ್ಫಿಲ್ದ್ ಬೈಕ್ ನ ಎತ್ತಿ ನಿನ್ನನ್ನು ಎಬ್ಬಿಸಿ ನಿಲ್ಲಿಸಿದವಳಿಗೆ ನೀನು ಡ್ರೈವ್ ಮಾಡಲಾರೆ ಎನಿಸಿತ್ತು . ಅದೇ ಬೀದಿಯ ತುದಿಯವನೆಂದು ಗೊತ್ತಿತ್ತು .ಅದಕ್ಕೆ ಬೈಕ್ ಸ್ಟಾರ್ಟ್ ಮಾಡಿ ಕುಳಿತುಕೋ ಎಂದವಳನ್ನು ಅನುಮಾನದಿಂದ ನೋಡಿದ್ದೆ ನೀನು. " ಬೈಕ್ ಓಡ್ಸೋಕೆ ಬರುತ್ತೆ ರೀ " ಎಂದು ವಿಥ್ ಗೇರ್ ಡ್ರೈವಿಂಗ್ ಲೈಸೆನ್ಸ್ ತೋರಿಸಿದ್ದೆ ನಾನು. ಒಂದು ನಗು , ಸಣ್ಣ ಸಹಾಯ , ಸಾಕಲ್ಲವಾ ಒಂದು ಗೆಳತನಕ್ಕೆ. ಬೆಳಿಗ್ಗೆ ಬೆಳಿಗ್ಗೆ ಕಣ್ಣಿಗೆ ಬೆಳಕು ಬಂದು ಎಚ್ಚರವಾಗುತ್ತದೆ ಎಂದು ಬಯ್ಯುತ್ತಿದ್ದ ನನ್ನ ರೂಮಿನ ದೊಡ್ಡ ಕಿಟಕಿಗಳು ಪ್ರೀತಿಯಾಗತೊಡಗಿದ್ದು  ಆ ಕಿಟಕಿಗಳಿಂದ ನಿಮ್ಮನೆಯ ಟೆರ್ರೆಸ್ ಕಾಣುತ್ತದೆ ಎಂದು ಗೊತ್ತಾದಾಗಲೇ. ಅಲ್ಲಿ ಟೆರ್ರೆಸ್ ಮೇಲೆ ಓಡಾಡುತ್ತಾ ನೀನು ಮೆಸೇಜ್ ಮಾಡಿದರೆ ಇಲ್ಲಿ ಕಿಟಕಿಯ ಬಳಿಯಲ್ಲಿ ಕುಳಿತು ರಿಪ್ಲೈ ಟೈಪಿಸುವುದು . ರಿಪ್ಲೈ ಗೆ ಸ್ವಲ್ಪ ತಡವಾದರೂ ಸಾಕು ಸನ್ನೆಗಳಲ್ಲಿ ಜಗಳ ಶುರು. ಬೆಳಿಗ್ಗೆ ನಿನ್ನದೇ ಕಾಲ್ ನಿಂದ  ನಾನೆದ್ದು ಕಿಟಕಿಯ ಹತ್ತಿರ ಬಂದರೆ ಅಲ್ಲೇ ಟೆರ್ರೆಸ್ ಮೇಲೆ ನಿಂತು ಕೈ ಬೀಸಿ ಹಾಯ್ ಎನ್ನುತ್ತಿದ್ದ ನೀನು . ನಿನ್ನ ಪರಿಚಯ ಗಟ್ಟಿ ಆದ ದಿನದಿಂದ ಆ ಕಿಟಕಿಗಳ ಕರ್ಟನ್ಸ್ ತೆಗೆದುಬಿಟ್ಟಿದ್ದೆ ನಾನು. 

ಗೆಳೆತನವನ್ನು ಅಷ್ಟಾಗಿ ಹಚ್ಚಿಕೊಳ್ಳದೆ ಬೆಳೆದ ನನಗೆ ಮೊದಲ ಬಾರಿ ಗೆಳೆತನದ ಬಗೆಗೆ ಪ್ರೀತಿ ಮೂಡಿಸಿದ್ದು  ಸರ್ವಗುಣ ಸಂಪನ್ನ(?)ನ್ನಾಗಿ ಸಿಕ್ಕ ನೀನು ..!! ಮನೆಯಲ್ಲಿ ಜವಬ್ದಾರಿಯುತ ಮಗ ಎನಿಸಿಕೊಂಡು ಊರಲ್ಲೂ ಪರೋಪಕಾರಿ ಎಂದು ಹೇಳಿಸಿಕೊಳ್ಳುವವನು., ಕೆಲವೊಮ್ಮೆ ಅದ್ಯಾರಿಗೋ ರಕ್ತ ಬರುವಂತೆ ಚಚ್ಚ್ಚಿ ಬಂದು  ಮನಸೋ ಇಚ್ಛೆ ಬಿಯರ್ ಕುಡಿಯುತ್ತಾ ತಣ್ಣಗೆ ಕುಳಿತುಕೊಳ್ಳುತ್ತಿದ್ದೆ. ಟ್ರಿಪ್ ,ಎಕ್ಷ್ಸ್ಕರ್ಶನ್ಸ್  ಅಂತ ಹೊರಗಡೆ ಹೋದಾಗ, ಎಷ್ಟೇ ತಡವಾದರೂ ನನ್ನನ್ನು ಸೇಫ್ ಆಗಿ ಮನೆ ತಲುಪಿಸಿದ್ದ ನೀನೇ ,ನನ್ನ ಜೊತೆ ಬರಬೇಡ ಅಂತ ಹೇಳಿದರೂ ಕೂಡ ಅದೆಲ್ಲಿಗೋ ನಾನೂ ಬರುತ್ತೇನೆ ಎಂದು ನಿನ್ನ ಬೆನ್ನಿಗಂಟಿ ಕುಳಿತ ನನ್ನನ್ನು ಮದ್ಯ ದಾರಿಯಲ್ಲಿ ಬೀಳಿಸಿ ತಿರುಗಿ ನೋಡದೆ ಹೋಗಿದ್ದೆ .  ಕೆಟ್ಟತನ ಮತ್ತು ಒಳ್ಳೆತನ ಎಲ್ಲವನ್ನೂ ಮೀರಿ ನಿನ್ನನ್ನು ಇಡಿಯಾಗಿ ಒಪ್ಪಿಕೊಂಡಿದ್ದಕ್ಕೆ ದ್ವೇಷಿಸುವ ಮನಸ್ಸೇ ಬರಲಿಲ್ಲ. long drive  ಎಂದು ಎಲ್ಲಾದರೂ ಕರೆದುಕೊಂಡು ಹೋಗಿ ಸುಮ್ಮನೆ ಬಿಯರ್ ಕುಡಿಯುತ್ತಾ ಕುಳಿತುಬಿಡುತ್ತಿದ್ದೆ. " ನನ್ನನ್ನೇಕೆ ಕರೆತಂದಿದ್ದು ಎಂದು ಕೇಳಿದರೆ , ವಾಪಸ್ ಸೇಫ್ ಆಗಿ ಮನೆ ತಲುಪಿಸಲು ಡ್ರೈವರ್ ಬೇಕಲ್ಲ ಎಂದು ನಗುತ್ತಿದ್ದೆ. ನಿನ್ನ ಆ ನಗು ನನಗಿಷ್ಟ.  ಡೆಲ್ಲಿ ರಾಜಕೀಯದಿಂದ ಹಿಡಿದು ಪಕ್ಕದ ಬೀದಿಯ ಹುಡುಗಿಯ ಬಗ್ಗೆ ಎಲ್ಲವನ್ನೂ ಮಾತನಾಡುವ ನೀನು ಪ್ರೀತಿ ವಿಷಯದಲ್ಲಿ ಮಾತ್ರ ಮೌನಿಯಾಗಿಬಿಡುತ್ತಿದ್ದೆ. ನಿನಗೆ ಯಾವುದೇ flash back ಗಳಿಲ್ಲದಿದ್ದರೂ ನಿನ್ನ ಮೌನಕ್ಕೆ ಮಾತ್ರ ಉತ್ತರ ಸಿಕ್ಕಿಲ್ಲ ನನಗೆ. ಗೆಜ್ಜೆ ಸದ್ದು ಕೇಳೋಕೆ ಚಂದ ಕಣೆ ಎಂದ ನಿನ್ನ ಮಾತಿನಿಂದ ಘಲ್ ಘಲ್ ಎನ್ನುವ ಗೆಜ್ಜೆ ಹಾಕುವುದ ಕಲಿತಿದ್ದೆ. "ಏನಾದ್ರು ಗಿಫ್ಟ್ ಕೊಡಬೇಕು ಅನಿಸ್ತಿದೆ ಏನು ಕೊಡಲಿ" ಎಂದು ಕೇಳಿದವಳಿಗೆ, "ರೀಡ್ ಆಂಡ್ ಟೈಲರ್ ಫುಲ್ ಫಾರ್ಮಲ್ ಸೆಟ್ ಕೊಡ್ಸು" ಎಂದಿದ್ದಕ್ಕಾಗಿ ಅಪ್ಪ ಕೊಡುವ ಪಾಕೆಟ್ ಮನಿಯಲ್ಲಿ ಉಳಿಸತೋಡಗಿದ್ದೆ. ಬದುಕು  ಹೀಗೆಯೇ ಸಾಗುತ್ತಿದ್ದಾಗ ಅದ್ಯಾವ ಮಾಯದಲ್ಲಿ ಭಾವನೆಗಳು ಬದಲಾಗತೊಡಗಿದವೋ ಗೊತ್ತಿಲ್ಲ. ಮನಸ್ಸು ನಿನಗೆ ಅಂಕುಶ ಹಾಕತೊಡಗಿತ್ತು. ಫಾಸ್ಟ್ ಆಗಿ ಡ್ರೈವ್ ಮಾಡಬೇಡ , ಅದೆಷ್ಟು ಕುಡಿಯೋದು ? ಯಾಕೆ ಲೇಟ್ ? ಎಂದೆಲ್ಲ ಸಣ್ಣ ಸಣ್ಣ ವಿಷಯಗಳಿಗೂ ನಿನ್ನೊಡನೆ ಜಗಳ ಆಡತೊಡಗಿದ್ದೆ. ಬೇರೆ ಹುಡುಗಿಯರ ಜೊತೆ ನೀ ಮಾತನಾಡುವುದು ನನಗೆ ಇರುಸು ಮುರಿಸಾಗತೊಡಗಿತ್ತು. ಯಾವಾಗ ನಿನ್ನನ್ನು ಬಿಟ್ಟು ಹೋಗಬೇಕೆಂದು ಸಿಕ್ಕ ಒಳ್ಳೆ ಕೆಲಸವನ್ನು ಒಪ್ಪಿಕೊಳ್ಳಲು ಮನಸ್ಸಾಗಲಿಲ್ಲವೋ ಅವತ್ತು ಭಾವನೆಗಳು ಬದಲಾಗಿವೆ ಎಂದು ಅರ್ಥವಾಗಿ  ಬಿಟ್ಟಿತು. ಯಾಕೋ ಪ್ರೀತಿಯ ಚೌಕಟ್ಟು ಹಾಕುವ ಮನಸ್ಸಾಗದೆ , ಒಲ್ಲದ ಮನಸ್ಸನ್ನು ಒಪ್ಪಿಸಿ  ಇಲ್ಲಿಗೆ ಬಂದು ಬಿಟ್ಟೆ.

"Thanks ನೀ ಕೊಟ್ಟ ನಗುವಿಗೆ" ಎಂದು ಪುಟ್ಟದಾಗಿ ಬರೆದಿಟ್ಟು ಬಂದವಳು, ಇಲ್ಲಿಗೆ ಬಂದ  ಮೇಲೆ ಕಣ್ಣಲ್ಲಿ ನೀರು ತುಂಬುವಷ್ಟು ನಗಲೇ ಇಲ್ಲ. ಇಲ್ಲಿರುವ ದೊಡ್ಡ ಕಿಟಕಿಗಳಿಗೆ ಯಾವಾಗಲೂ ಕರ್ಟನ್ ಗಳಿಂದ ಅಲಂಕಾರ. ಸದ್ದು ಮಾಡದ ನನ್ನ ಕಾಲುಚೈನ್ , ರೋಡ್ ಲ್ಲಿ ಕಾಣುವ ರಾಯಲ್ ಎನ್ಫಿಲ್ದ್ ಗಳು , ಅಲ್ಲೆಲ್ಲೋ ಕಾಣುವ 
ರೀಡ್ ಅಂಡ್ ಟೈಲರ್ ಶಾಪ್ ಎಲ್ಲವೂ ನಿನ್ನನ್ನು ನೆನಪಿಸುತ್ತವೆ. 

ಅಪರೂಪಕ್ಕೊಮ್ಮೆ ಬರುವ ನಿನ್ನ ಕಾಲ್. long drive ಹೋಗಬೇಕಿತ್ತು, ನೀನಿಲ್ಲ ಕಣೆ , miss you idiot ಎಂಬ ನಿನ್ನ ಮೆಸೇಜ್ ಗಳು ಖುಷಿ ಕೊಡುತ್ತವೆ. 

ಬಿಟ್ಟಿರಲಾರೆ ಎಂಬ ಪ್ರೀತಿಯ ಚೌಕಟ್ಟಿಗಿಂತ ಬಿಟ್ಟರೂ ಬಿಡದಂತಿರುವ ಈ ಸ್ನೇಹವೇ ಅಪ್ಯಾಯಮಾನ.. 

Monday, 17 June 2013

ಯಾಕಾಯಿತು ನಿನ್ನ ಪರಿಚಯ ... ಅರೆಕಾಲದ ಖುಷಿಗಾಗಿ ...ಯಾಕಾಯಿತು ನಿನ್ನ ಪರಿಚಯ ... ಅರೆಕಾಲದ ಖುಷಿಗಾಗಿ ... 

ನಿನ್ನ ಅಸ್ತಿತ್ವವೇ ಗೊತ್ತಿಲ್ಲದಾಗ ... 

ನನ್ನದೇ ಆದ ಪ್ರಪಂಚ . ತುಂಬಿ ತುಳುಕವ ಖುಷಿ. ನಕ್ಕಷ್ಟು ಇಮ್ಮಡಿಯಲ್ಲಿ ನಗು.  ಅಲ್ಲಿ ನಾನು. ನನ್ನದೊಂದು ದೊಡ್ಡ ಅವಕಾಶ . ಯಾರಿಗೂ ಸೋತಿದ್ದಿಲ್ಲ , ಬಗ್ಗಿದ್ದಿಲ್ಲ. ನಡೆದಿದ್ದೇ  ದಾರಿ. ಕಂಡಷ್ಟೂ ನನ್ನದೇ. ಪುಟಿಪುಟಿಯುವ ಜೀವ ಸೆಲೆಯಲ್ಲಿ  ಆರಾಮಾಗಿದ್ದೆ ನಾನು... 

ನಿನ್ನ ಅಸ್ತಿತ್ವ ಗೊತ್ತಾದಾಗ ... 

ನನ್ನ ಪ್ರಪಂಚದ ಬಹು ಭಾಗ ನೀನಾದೆ.ನಿನ್ನಿಂದ ಬೆಳಗು.. ನಿನ್ನೊಂದಿಗೆ ಮುಗಿವ ಇರುಳು. ನಿನ್ನವೇ ಮಾತುಗಳು.. ನೀ ಕೊಟ್ಟರೆ ಮಾತ್ರ ಅಲ್ಲಿ ಮೌನಕ್ಕೆ ಆಸ್ಪದ .  ನಿನಗಾಗಿ ಇಲ್ಲದ ಛಲ .. ಎಲ್ಲ ಗೆಲ್ಲಬಲ್ಲೆ ಎಂಬ ಹಂಬಲ. ಪ್ರಪಂಚ ಎದುರಾದರೂ ನಿನ್ನ ಜೊತೆಯಿದೆ ಎಂಬ ಬೆಂಬಲ. ಖುಷಿಯಾಗಿದ್ದೆ ನಾನು ... 

ನಿನ್ನ ಅಸ್ತಿತ್ವ ಇದ್ದೂ ಇಲ್ಲದಂತಾದಾಗ ... 

ನನ್ನ ಪ್ರಪಂಚವೇ ಖಾಲಿಯಾದಂತೆ ಭಾಸ. ತುಂಬಿಕೊಂಡಿದ್ದ ಖುಷಿಯೀಗ ತೂತು ಮಡಿಕೆಯಲ್ಲಿನ ನೀರು.   ಸಂಜೆಗಳಿಗೆಲ್ಲ ಮೌನದ ಹೊದಿಕೆ. ಕಂಡ ಕನಸುಗಳೆಲ್ಲ ಕಾದ ಗಾಜಿನಂತೆ. ಕಣ್ಣೀರಿಗೂ ಹೊರಬರಲು ಭಯ. ಬೊಗಸೆಯೊಡ್ಡಿಯೂ ಗೊತ್ತಿಲ್ಲದ ನಾನು ಎರಡೂ ತೋಳು ಚಾಚಿ ನಿಂತಿದ್ದೆ ನಿನ್ನ ಮುಂದೆ.  ಸೋಲೇ  ಗೊತ್ತಿಲ್ಲದ ನಾನೆಂಬ ನಾನು ಸೋತಿದ್ದೆ .. 

ನಿನ್ನ ಅಸ್ತಿತ್ವವೇ ಇಲ್ಲದಂತಾದಾಗ ... 

ನಾನೇ ಕುಸಿದಂಥ  ಭಾವ . ನನ್ನ ಪ್ರಪಂಚ ಖಾಲಿ ಖಾಲಿ. ಕಣ್ಣೀರು ಖಾಲಿಯಾಯ್ತಾ? ಗೊತ್ತಿಲ್ಲ . ಅಳು ಬರಲೇ ಇಲ್ಲ. ಮಾತಿದೆಯಾ? ಗೊತ್ತಿಲ್ಲ . ಮೌನ ಸಹನೀಯ. ಬಡಿಯುತ್ತಿರುವ ಹೃದಯ ಬಂಡೆಯಾಗಿದೆ.  ಹೆಪ್ಪುಗಟ್ಟಿದ ಹನಿಗಳದು ಹೊರಬಲಾರೆನೆಂಬ ಮುಷ್ಕರ. ಮುಚ್ಚ್ಹಿದ ಕತ್ತಲ ಬಾಗಿಲಾಚೆಗೊಂದು ಬೆಳಕಿರಬಹುದಾ ? ಆ ಬೆಳಕಿನಲ್ಲಿ ನೀನಿರಬಹುದಾ ? ಎಂಬ ಭ್ರಮೆಯಲ್ಲಿ ಸತ್ತು ಬದುಕುತ್ತಿದ್ದೇನೆ; ಕನಸುಗಳು ಉಸಿರಾಡುತ್ತಿವೆಯಲ್ಲ....

Tuesday, 28 May 2013

ಪ್ರೀತಿಯ ಕೊಳಲನ್ನು ಮುರಿದು ನಿಶ್ಯಬ್ದದಲ್ಲಿ ಬದುಕಬೇಕಿದೆ.

ಇವತ್ತೇಕೋ ಬರೆಯಬೇಕೆನಿಸುತ್ತಿದೆ.  ಈ ಪೂಪಿ ಗೆ ಎಲ್ಲವನ್ನು ನೇರವಾಗಿಯೇ ಹೇಳಿ ಅಭ್ಯಾಸವಿದ್ದಿದ್ದು.   ಈಗಲೂ ಅಷ್ಟೇ ಜಿಯಾ ನಿನ್ನೆದುರು ಕಾಲೂರಿ ನಿಂತು , ಕಣ್ಣಲ್ಲಿ ಕಣ್ಣಿಟ್ಟು ಮುಂದೆ ಬರೆಯುವ ಎಲ್ಲ ಸತ್ಯಗಳನ್ನು ಹೇಳಬಲ್ಲೆ .
ಒಂದು ಚಂದದ ಗೆಳೆತನವಿತ್ತು ಅಲ್ಲವಾ.  'ಪೂಪಿ' , 'ಜಿಯಾ', ಅವನೊಬ್ಬನಿದ್ದ 'ಸನ್ನು'. ಅದೇನದು ನಮ್ಮ ಮೂವರನ್ನೂ ಕಂಡು ಎಲ್ಲ ಹೇಳುತ್ತಿದ್ದಿದ್ದು " ಒಬ್ಬ ಕೃಷ್ಣ ರಾಧೆಯರಿಬ್ಬರು" ಅಂತ ಅಲ್ವಾ .  

ಒಂದು ವೇಳೆ ಅವನು ಕೃಷ್ಣನಾದರೆ
 ಭಾಮೆ ನಾನೇ
ನೀ ರಾಧೆಯಾಗಬೇಕಿತ್ತೇನೋ.
 ಆದರೆ ನಾ ಭಾಮೆಯಾಗಲೂ ಇಲ್ಲ. 
ನಿನಗೆ ರಾಧೆಯಾಗಲೂ ಬಿಡಲಿಲ್ಲ. 
ಅವನು ಮಾತ್ರ ರಾಮನಾಗಿಬಿಟ್ಟ ಚೆಂದದ ಅವನದೇ ಸಂಸಾರದಲ್ಲಿ.

ನೀನು ಬಹುಶಃ ಸೀತೆಯಂತೆ ಬದುಕುತ್ತಿರಬಹುದು. ಆದರೆ ನಾನು ... Never.... ಅಪ್ಪನದು ರಾಜಕೀಯದ ತುಪ್ಪ , ಅಣ್ಣನದು  ರೌಡಿಸಂ ಉರಿ...  ಇದೆರಡರ ಮಧ್ಯೆ ಹೂ ಅರಳಲು ಸಾಧ್ಯವಾ ನಾ ಬೆಳೆದದ್ದು ಹಾಗೆಯೇ. ಸೋತು ಗೊತ್ತಿರಲಿಲ್ಲ. ಸೋಲನ್ನು ಸಹಿಕೊಂಡು ಗೊತ್ತಿಲ್ಲ.ಕೇಳುವ ಮೊದಲೇ ಎಲ್ಲವೂ ಕಾಲಡಿಯಲ್ಲಿರುತ್ತಿತ್ತು. ಇಲ್ಲವೆಂದರೆ  ಕೇಳಿ ಗೊತ್ತು ಕೊಡದಿದ್ದರೆ ಕಿತ್ತುಕೊಳ್ಳುವುದು ಗೊತ್ತು. ಹಂಚಿಕೊಳ್ಳುವುದು..  ಹೊಂದಾಣಿಕೆ...  ಊಹುಂ ... ಗೊತ್ತಿಲ್ಲ...  ಯಾರ ಮಾತನ್ನು ಕೇಳದೆ Don't   care  ಎನ್ನುವ ನನ್ನನ್ನು ಮಾತು ಕೇಳಿಸುವ ತಾಕತ್ತು ನಿಮ್ಮಿಬ್ಬರಿಗಿತ್ತು. ನಿನ್ನ ಸ್ಪರ್ಶ ಮತ್ತು ಅವನ ಕಣ್ಣುಗಳು ನನ್ನನ್ನು ಎಷ್ಟೋ ವಿಷಯಗಳಲ್ಲಿ ತಡೆಯುತ್ತಿದ್ದವು. 

ನಿನ್ನ ಮತ್ತು ಸನ್ನುವನ್ನು ನೋಡಿ ಇಡಿ ಕಾಲೇಜ್  ಒಳ್ಳೆ ಜೋಡಿ ಎನ್ನುತ್ತಿತ್ತು. ನನಗೆ ನಿಜಕ್ಕೂ ಇದನ್ನು ಸಹಿಕೊಳ್ಳಲು ಸಾದ್ಯವಿರಲಿಲ್ಲ. ಹಾಗಂತ ನಾನೇನು ಸನ್ನುವನ್ನು ಬಯಸುತ್ತಿರಲಿಲ್ಲ. ನಿಮ್ಮಿಬ್ಬರನ್ನು ಕಳೆದುಕೊಳ್ಳುವ ಮನಸ್ಸಿರಲಿಲ್ಲ. ನೀವಿಬ್ಬರು ಒಂದಾಗಿ ನಿಮ್ಮ ನಡುವೆ ನಾನಿದ್ದೇನೆ ಎನ್ನುವ ಭಾವನೆಯಲ್ಲಿ ಬದುಕುವುದಕ್ಕೆ ನಾನು ತಯಾರಿರಲಿಲ್ಲ. ಯಾವಾಗ ಸನ್ನುವಿನೆಡೆಗಿನ ನಿನ್ನ ಭಾವನೆಗಳು ಬದಲಾಗ ತೊಡಗಿದ್ದು ನನಗೆ ತಿಳಿಯಿತೋ    ಎಲ್ಲೋ ಸ್ನೇಹ ಕಳೆದುಕೊಳ್ಳುತ್ತೇನೆ ಎನ್ನುವ ಭಯ ಕಾಡತೊಡಗಿತು. ಅದಕ್ಕೆ ನಿಮ್ಮಿಬ್ಬರಿಗೆ  ಬೇಕಂತಲೇ ಅಡ್ಡ ನಿಂತೆ ನಾನು. ಸನ್ನುವನ್ನು ನಾನು ಪ್ರೀತಿಸುತ್ತಿದ್ದೇನೆ ಎನ್ನುವ ಮಾತನ್ನು ನಿನ್ನ ಮುಂದೆ ಆಡಿದ್ದೆ.  ಮುಗ್ದೆ ನೀನುನಿನಗೆ ತಿಳಿಯಲೇ ಇಲ್ಲ. ಅವನಲ್ಲಿ ಯಾವ ಭಾವನೆಗಳ ತಾಕಲಾಟವೂ ಇರಲಿಲ್ಲ ಕಣೆ. ನನ್ನ ಹಠ ಗೊತ್ತಿತ್ತು ನಿನಗೆನನ್ನ ಸಿಟ್ಟು ದ್ವೇಷಗಳನ್ನು ಚೆನ್ನಾಗಿ ತಿಳಿದವಳು ನೀನು. ಮತ್ತೂ ಅದೇನೋ ತ್ಯಾಗ ಸಹನೆಕರುಣೆ ಅನ್ನೋ ಅಂಥಹ ಹೆಣ್ಣ್ ಸಹಜ ಗುಣಗಳ ಸರ್ವ ಸಂಪನ್ನೆಯಾಗಿದ್ದೆಯಲ್ಲ ನೀನು. ಅದಕ್ಕಾಗಿಯೆ ದೂರ ಹೋಗುವಾಗ ತ್ಯಾಗ ಎಂಬ ಶಬ್ದವನ್ನು ನಿನ್ನ ಸಮಾಧಾನಕ್ಕೆ ಇಟ್ಟುಕೊಂಡು ಹೊರಟೆಯಲ್ಲ. ನೀ ಮಾಡಿದ್ದು ತ್ಯಾಗವಲ್ಲ  ಕಣೆ ದಡ್ಡಿ ಅದು ಪಲಾಯನ. ನಿನ್ನ ಜಾಗದಲ್ಲಿ ನಾನಿದ್ದರೆ ಕಿತ್ತುಕೊಳ್ಳುತ್ತಿದ್ದೆ.

ಅತ್ತ  ಕಾಲೇಜ್ ಮುಗಿದ ಮೇಲೆ Rank Student  ಆದ ನಿನಗೆ ಒಳ್ಳೆಯ ಕೆಲಸವೇ ಸಿಕ್ಕಿತ್ತು. ಇತ್ತ ಸನ್ನು ಕೂಡ ಒಳ್ಳೆಯ ಕೆಲಸದಲ್ಲಿ ಸೆಟ್ಲ್ ಆಗಿದ್ದ.ಸನ್ನು ನಾನು ವಾರಕ್ಕೊಮ್ಮೆ ಸಿಗುತ್ತಿದ್ದೆವು. ಈ ಮದ್ಯೆ ಎಲ್ಲೋ ನನಗೆ ಸನ್ನು ಇಷ್ಟವಾಗ ತೊಡಗಿದ್ದ. ಅವನ ಕಣ್ಣುಗಳಲ್ಲಿ ಕಳೆದು ಹೋಗುವ ಭಯ ಕಾಡುತ್ತಿತ್ತು.ಅವನಿಗೆ ನಾನಾಗಿಯೇ ಸೋಲಲು ನನಗೆ ಇಷ್ಟವಿರಲಿಲ್ಲ. ದೇಹಿ ಎಂದು ನನ್ನೆಡೆಗೆ ಬರಲಿ ಎಂದುಕೊಳ್ಳುತ್ತಿದ್ದೆ. ಆದರೆ ಈಗಲೂ ಅವನ ಭಾವನೆಗಳಲ್ಲಿ ಯಾವ ಏರಿಳಿತಗಳೂ ಇರಲಿಲ್ಲ.  ಮನೆಯಲ್ಲೂ ಮದುವೆಯ ಮಾತುಕಥೆಗಳು ಜೋರಾಗಿಯೇ ಸಾಗುತ್ತಿದ್ದವು. ರಾಜಕಾರಣಿಯ ಮಗಳಿಗೆ ಸಂಬಂಧಗಳು ಬರುವುದೇನು ಕಡಿಮೆಯೇ ?   ಮನೆಯಿಂದಲೇ ಅವನ ಜೊತೆಗೆ ಮದುವೆಯ ಪ್ರಸ್ತಾಪ  ಬಂದಾಗ ನಿಜಕ್ಕೂ ಖುಷಿಯಾಗಿದ್ದೆ ಕಣೆ. ಆಗ ಬಂತು ನೋಡು ನಿನ್ನ ನೆನಪು. ಅವನಿಗೆ ಸೋತುನಿನ್ನ ತ್ಯಾಗಕ್ಕೆ ಬೆಲೆ ಕೊಡಲು ನನಗಿಷ್ಟವಿರಲಿಲ್ಲ. again  ಇಲ್ಲೂ ನನಗೆ ಸೋಲಲು ,ಸೋಲೋಪ್ಪಿಕ್ಕೊಳ್ಳಲು ಇಷ್ಟವಿರಲಿಲ್ಲ. ಅದಕ್ಕೆ ಅವನನ್ನು ಬೇಕಂತಲೇ ತಿರಸ್ಕರಿಸಿದೆ. ಕಾರಣವನ್ನು ನೇರವಾಗಿಯೇ ಹೇಳಿದೆ. ಅದಕ್ಕೆ " ನೀನು ಸಣ್ಣವಳಂತೆ ಆಡುತ್ತೀಯ ಅಂದೊಕೊಂಡಿದ್ದೆ ಆದರೆ ಇಷ್ಟೆಲ್ಲಾ ಸಣ್ಣತನಗಳು ಇದೆ ಎಂದು ಗೊತ್ತಿರಲಿಲ್ಲ ಎಂದು ದೂರ ಹೋದ. 

ಅವನು ಹೋದ ಮೇಲೆ ಒಂಟಿ ಎನಿಸಲಿಲ್ಲ. ಒಂಟಿತನ ನನ್ನ ಕಾಡಲಿಲ್ಲ. ಕಾಡುತ್ತಿರುವುದು ಪ್ರೀತಿ.  . ಸೋಲಲು ಇಷ್ಟವಿಲ್ಲವೆಂದವಳನ್ನು ಪ್ರೀತಿ ಸೋಲಿಸಿಬಿಟ್ಟಿದೆ. ಯಾವ ಭಾವಗಳಿಗೂ ಸಿಗದಂತೆ ಬದುಕುತ್ತಿದ್ದವಳ ಹೊಸ ಭಾವಗಳು ಸುತ್ತಿಕೊಳ್ಳುತ್ತಿವೆ. ಬಹುಶಃ ಇಂಥ ಮಧುರ ಅನುಭೂತಿಗಳೇ ಪ್ರೇಮಿಗಳನ್ನು ಖುಷಿಯಿಂದ ಇಡುತ್ತವೇನೋ. ನೆನಪುಗಳ ಭಾರವನ್ನು ಪ್ರೀತಿಯಲ್ಲಿ ಸೋತವರು ಮಾತ್ರ ಅರಿಯಬಲ್ಲರೆನೋ ಅಲ್ಲವಾ ?   ಚಿವುಟಿದಷ್ಟೂ ಚಿಗುರುತ್ತಾ ಹೆಣ್ತನವನ್ನು ಜಾಗೃತಗೊಳಿಸುತ್ತ ಜ್ವಾಲಾಮುಖಿಯಂತೆ ಒಳಗೊಳಗೇ ಕುದಿಯುತ್ತಿದೆ. ಉಹೂಂ ಸೋಲಲಾರೆ ನಾನು.  ಅವನು ಕೊಟ್ಟು ಹೋದ ಹೊಸ ರಾಗಗಳ ನುಡಿಸುವ  ಪ್ರೀತಿಯ  ಕೊಳಲನ್ನು ಮುರಿದು ನಿಶ್ಯಬ್ದದಲ್ಲಿ ಬದುಕಬೇಕಿದೆ.ಮುಖವಾಡ ಕಳಚಿ ಮಂಡಿಯೂರಲಾರೆ.  ಜ್ವಾಲೆಯ  ಕಾವು ನನ್ನೊಳಗೆ ಆರಿ ಅಗ್ನಿಶಿಲೆಯಾಗಿಬಿಡಲಿ..  

ಇಷ್ಟೆಲ್ಲಾ ಬರೆದವಳು ಕ್ಷಮೆ ಕೇಳುತ್ತೇನೆ ಎಂದುಕೊಳ್ಳಬೇಡ. ನನ್ನ ನೇರಕ್ಕೆ ನಾ ಮಾಡಿದ್ದೆಲ್ಲವೂ ಸರಿಯೇ. ನಿನಗೆ ಗೊತ್ತಲ್ಲ ನನಗೆ ಕ್ಷಮೆ ಕೇಳಿಯೂ ಗೊತ್ತಿಲ್ಲ. ಕ್ಷಮಿಸಿಯೂ ಗೊತ್ತಿಲ್ಲ.  
-ಪೂಫಿ....  
(ಇದು 19 ಮೇ 2013 ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು )                               

Monday, 13 May 2013

ನೀನಿರಬೇಕಿತ್ತು ..

ಮಿತ್ರ ದಿನೇಶ್ ಮನೀರ್ ತೆಗೆದ ಈ  ಫೋಟೊ ನೋಡಿ ಬರೆದ ಸಾಲುಗಳಿವು. ಅವರದೇ ವೆಬ್ಸೈಟ್ ನ ಚಿತ್ರ -ಕಾವ್ಯ ಸರಣಿಯಲ್ಲಿ ನನಗೊಂದು ಅವಕಾಶ ಸಿಕ್ಕಿತ್ತು. ನನ್ನ ಸಾಲುಗಳಿಗಿಂತಲೂ ಚಂದದ ಫೋಟೋ ಇಲ್ಲಿದೆ. ಒಮ್ಮೆ ನೋಡಿ ಬನ್ನಿ .

Thank you Dineshanna for this opportunity ... 


ಹೊಸ ಬೆಳಗಿನಲ್ಲಿ ... 
ಅಂಗಳದ ತುಂಬಾ 
ಹರಳು ಇಬ್ಬನಿಯ  
ರಂಗವಲ್ಲಿ ಮೂಡಿತ್ತು ...

ಎಳೆ ಬಿಸಿಲ ಉಂಗುರಗಳ 
ಜೊತೆಯಾಗಿ ನೀನಿರಬೇಕಿತ್ತು ..  

ಊರಂಚಿನ ಹಸಿರ ಮೇರೆಯೆಲ್ಲ 
ಆಗಸದ ಕೆಂಪಿನಲ್ಲಿ ಕರಗಿ 
ಕತ್ತಲ ಮಡಿಲಲ್ಲಿ  ಮಲಗುತಿರಲು 
ಬೀಸು ತಂಗಾಳಿಯಲ್ಲಿ 
ಹಿತವಾದ ಮೌನವಿತ್ತು 

 ಮೌನಕ್ಕೆ ಜೊತೆಯಾಗಿ 
 ಸಖ ನೀನಿರಬೇಕಿತ್ತು 
ಹೊಳೆಯಂಚಿನ ಹಾದಿಯಲ್ಲಿ 
ಸುಮ್ಮನೆ ನಡೆವಾಗ .. 
ಏಕಾಂಗಿ ಮನ ಜೊತೆಯಲ್ಲಿ 
ನಿನ್ನ ಕಲ್ಪಿಸಲು 
ಆಡುವ ಸಾವಿರ ಮಾತುಗಳಿತ್ತು .. 

ನನ್ನೊಲವ ಮಾತುಗಳ 
ಜೊತೆಯಾಗಿ ನೀನಿರಬೇಕಿತ್ತು .. 

ಪಾದ ತೋಯಿಸಿದ ಅಲೆಗಳು 

ಮರಳಿ ಬರುವುದರೊಳಗಾಗಿ ... 
ಹಸಿ ಮರಳ ಮೇಲೆ 
ಹೆಜ್ಜೆಗುರುತು ಮೂಡಿತ್ತು  .. 

ಜೋಡಿ ಹೆಜ್ಜೆಗಳಿಗೆ 
ಜೊತೆಯಾಗಿ ನೀನಿರಬೇಕಿತ್ತು... 


Saturday, 27 April 2013

ತೋಚಿದ್ದು .. ಗೀಚಿದ್ದು ...ಸತ್ತ ಸಂಬಂಧಗಳೆಲ್ಲ .. 
ಸವಿ ನೆನಪುಗಳಾಗಿ 
ಫ್ರೇಮ್ ನಲ್ಲಿ ಕುಳಿತಿವೆ .. 

ಮುಚ್ಚಟೆಯಿಂದ 
ಮನದ ಪೆಟ್ಟಿಗೆಯಲ್ಲಿಟ್ಟು .. 
ಬೀಗ ಹಾಕಿದ್ದಾಗಿದೆ ... 

ಕೀ ಕಳೆಯಬೇಕೆಂದಾಗೆಲ್ಲ 
ಹಾಳಾದ್ದು ಕೀಲಿಯಿಟ್ಟ  ಜಾಗ 
ತಪ್ಪದೆ ನೆನಪಾಗುತ್ತದೆ...  

****************************

ಹೀಗೊಂದು ಕೆಟ್ಟ ಕನಸು... 
ಸೇತುವೆಗಳೆಲ್ಲ ಗೋಡೆಗಳಾಗಿ 
ಬದಲಾದಂತೆ ... 

*****************************
ಒಂದು ವೇಳೆ ಅವನು ಕೃಷ್ಣನಾದರೆ 


ಭಾಮೆ ನಾನೇ, ...

ನೀ ರಾಧೆಯಾಗಬೇಕಿತ್ತೇನೋ. ...

ಆದರೆ ನಾ ಭಾಮೆಯಾಗಲೂ ಇಲ್ಲ...

ನಿನಗೆ ರಾಧೆಯಾಗಲೂ ಬಿಡಲಿಲ್ಲ. ...

ಅವನು ಮಾತ್ರ ರಾಮನಾಗಿಬಿಟ್ಟ ...

ಚೆಂದದ ಅವನದೇ ಸಂಸಾರದಲ್ಲಿ. ...

************************

ನೀ ಅರ್ಧದಲ್ಲೇ ಎದ್ದು ಹೋದ 
ನಂತರವೂ ನಿನ್ನ ಹೊರತಾದ 
ಬದುಕೊಂದಿದೆ ಎಂದು 
ಅರ್ಥ ಮಾಡಿಕೊಂಡಾಗಿನಿಂದ 
ನಿನ್ನ ನೆನಪುಗಳಿಗೆ 
ಪೂರ್ಣವಿರಾಮ ಬಿದ್ದಿದೆ ... 

************************

ಮರೆವಿನ ಅಲೆಗಳು...
ಎಲ್ಲವನ್ನೂ ಅಳಿಸುತ್ತವೆ..
ಮನದ ತೀರದಲ್ಲಿ ಬರೆದ...
ನಿನ್ನ ಹೆಸರೊಂದನ್ನು ಬಿಟ್ಟು...

********************
ದ್ವೇಷಿಸಲು ಸಾಧ್ಯವಿಲ್ಲದಷ್ಟು
ನಿನ್ನನ್ನೂ ಪ್ರೀತಿಸಿದ್ದಕ್ಕೋ ಏನೋ ..
ನಿನ್ನನ್ನು ಕಳೆದುಕೊಂಡದ್ದಕ್ಕೆ 
ಬೇಸರವಿಲ್ಲ ಕಣೋ .. . 
ಆದರೆ ಕೊಟ್ಟಂತೆ ಮಾಡಿ 
ಕಸಿದುಕೊಂಡ ಬದುಕಿನ 
ಪರಿಸ್ಥಿತಿಯ ಬಗೆಗೆ 
ಒಂದು ಮೌನ ತಿರಸ್ಕಾರವಿದೆಯಷ್ಟೇ..
----- ಇಲ್ಲಿನ ಮೊದಲ ಮೂರು ಹನಿಗಳು ಏಪ್ರಿಲ್ ಹದಿನೆಂಟರ "ಅವಧಿ" ಯಲ್ಲಿ ಪ್ರಕಟಗೊಂಡಿದ್ದವು. 

Friday, 12 April 2013

ಹೇಳು ಇದು ಪ್ರೇಮ ಕಥೆಯಾ ??ಹಾಗೆ ಒಂದು ದಿನ . ಅದೊಂದು ಪ್ರೇಮ ಪುಸ್ತಕ, ಎದೆಗವಚಿ ನಿದ್ದೆ ಹೋದೆ. ಮುಸ್ಸಂಜೆ ಸಮಯ. ಕಿಟಕಿಯಲ್ಲಿ ಯಾರೋ ಇಣುಕಿದಂತಾಯ್ತು .
 ನೋಡಿದರೆ ಸೂರ್ಯ ..!! 
ಚಂದ್ರನ ಕಿಟಕಿಯ ಇಣುಕುವ ಪರಿ ಗೊತ್ತು . ಇದೇನು ಸೂರ್ಯ ಬಂದಿದ್ದು??!! ಎಂದುಕೊಂಡೆ. 
ಹೊತ್ತಲ್ಲದ ಹೊತ್ತಲ್ಲಿ ಮಲಗಿದರೆ ಇನ್ನೇನಾಗುತ್ತೆ ಎಂದು ಮನಸ್ಸು ಹೇಳಿತು. 
ನೋಡು ನೋಡುತ್ತಿದ್ದಂತೆ ಸೂರ್ಯನಿಗೆ ಕಣ್ಣು , ಮೂಗು , ಬಾಯಿ  ಒಂದು ಗಿರಿಜಾ ಮೀಸೆ  ಎಲ್ಲವೂ  ಮೂಡಿದವು . ನಿಧಾನವಾಗಿ ನನ್ನ ಮಾತನಾಡಿಸತೊಡಗಿದ.
 "ಹೋಗು ನನಗೆ ನಿದ್ದೆ ಮಾಡಬೇಕು" ಎಂದು ಕೆನ್ನೆಯುಬ್ಬಿಸಿದೆ.  
"ನೀ ಆರಾಮವಾಗಿ ನಿದ್ದೆ ಮಾಡುವೆಯಂತೆ ಮೊದಲೊಂದು ಕಥೆ ಹೇಳುವೆ ಕೇಳು.. ಇದು ಪ್ರೇಮ ಕಥೆಯಾ ?? ನೀ ಹೇಳು" ಎಂದು ಶುರುವಿಟ್ಟುಕೊಂಡ. 
ಅವ ಹೇಳುತ್ತಿರುವಂತೆ ಕಲ್ಪನೆಯ ಭಿತ್ತಿಗಳಲ್ಲಿ ಚಿತ್ರ ಮೂಡುತ್ತಾ ಹೋಯಿತು .. 

ಅಗೋ ನೋಡು ಆ ನದಿಯಲ್ಲಿ ಒಂದು ಎತ್ತರದ ಅಟ್ಟಣಿಗೆ ಕಾಣುತ್ತಿದೆಯಾ ? ಅಲ್ಲಿ ಕಾಲು ಇಳಿ ಬಿಟ್ಟು ಕುಳಿತರೆ ಪಾದ ಮುಳುಗುವಷ್ಟು ನೀರು ಕಾಲಿಗೆ ತಾಕುತ್ತೆ. ಅಲ್ಲೊಬ್ಬ ಹುಡುಗ , ಪಕ್ಕದಲ್ಲೊಬ್ಬಳು ಹುಡುಗಿ ಪ್ರತಿದಿನ ಕುಳಿತು  ನನ್ನ ನೋಡುತ್ತಿದ್ದರು. ಅವರಿಬ್ಬರೂ  ಸ್ನೇಹಿತರಿರಬಹುದೇನೋ ಗೊತ್ತಿಲ್ಲ, ಪರಿಚಿತರಂತೂ ಹೌದು. ಪ್ರೇಮಿಗಳಂತೆ ಅಂತೂ ಇರಲಿಲ್ಲ.  ಹುಡುಗನೋ ಪಕ್ಕಾ  practical . ಹುಡುಗಿಗೋ ಬದುಕಿನ ವಾಸ್ತವತೆಯ ಜೊತೆಯಲ್ಲೇ ಮಿಳಿತವಾಗುವ ಭಾವುಕತೆಯೂ ಇಷ್ಟ. ಆತನಿಗೆ  ಪ್ರಕೃತಿಯಲ್ಲಿ . ಹಕ್ಕಿಗಳ ಹಾರುವಿಕೆಯಲ್ಲಿ , ನೀರ ಹರಿಯುವಿಕೆಯಲ್ಲಿ , ಮುಳುಗೋ ಸೂರ್ಯನಲ್ಲಿ ಏನೇನೂ ವಿಶೇಷವಿಲ್ಲ. ಆದರೂ ನೋಡುತ್ತಾ ಕೂರುತ್ತಾನೆ. ಅವಳಿಗೋ ಪಕ್ಕದಲ್ಲಿ ಕುಳಿತು ಅವನ ನೋಡುವುದೇ ಖುಷಿ.ಅದು ಪ್ರೀತಿಯಲ್ಲ. ಸ್ನೇಹವನ್ನೂ ಮೀರಿದ ಆ ಭಾವಕ್ಕೆ ಹೆಸರಿಲ್ಲ.ನನ್ನ ಮತ್ತು ಭೂಮಿಯ ಸಂಬಂಧದಂತೆ.   ಅವರಿಬ್ಬರೂ ಮಾತನಾಡಿಕೊಳ್ಳುತ್ತಾರ ? ಗೊತ್ತಿಲ್ಲ .ಭೂಮಿಯನ್ನೇ  ಕೇಳಬೇಕೆನೋ.   ಆದರೆ ನೀ ನನ್ನ ತೋಳು ತಬ್ಬಿದ ದಿನ ನಾನಿಲ್ಲಿಂದ ಎದ್ದು ಹೊರಡುತ್ತೇನೆ ಎಂಬುದು ಹುಡುಗನ ಮನದ ಮಾತಾದರೆ , ನನ್ನದೇ ಆದ ಬದುಕು ನನ್ನ ಕರೆಯುವವರೆಗೂ ನಿನ್ನ ಪಕ್ಕದಲ್ಲಿ  ನಿನ್ನ ತೋಳು ತಬ್ಬದೆ ನಾ ಕೂರಬಲ್ಲೆ  ಎಂಬ ಮೌನ ಪ್ರಮಾಣ ಹುಡುಗಿಯದು.  .ಆದರೂ ನನಗೆ  ಅವರನ್ನು  ನೋಡುವ ಖುಷಿ.  ಅವರಿಗಾಗಿ ಎರಡು ನಿಮಿಷ  ತಡೆದು ಮುಳುಗಲಾ ?? ಎನ್ನುವಷ್ಟು ಇಷ್ಟವಾಗಿಬಿಟ್ಟಿದ್ದರು. ದಿನಗಳು ಹೀಗೆ ಸಾಗುತ್ತಾನೆ ಇದ್ದವು. ಒಂದು ದಿನ ಅದ್ಯಾವ ಕಾರ್ಮೋಡ ನನ್ನ ಕವಿದಿತ್ತೋ ಗೊತ್ತಿಲ್ಲ. ಮೋಡ ಸರಿದು ಬೆಳಕು ಬರುವ ಮೊದಲೇ  ಹುಡುಗಿ  ಏಕಾಂಗಿ. ಯಾವ ಕರಿ ಮೋಡಗಳ ಭಯ ಕಾಡಿತೋ ಏನೋ ಆಕೆ ಆತನ ತೋಳು ತಬ್ಬಿಬಿಟ್ಟಿದ್ದಳು. ಹುಡುಗ ಎದ್ದು ನಡೆದಿದ್ದ ಒಂದು ಮಾತೂ ಹೇಳದೆ. ಕ್ಷಮೆಯ ಇವಳ ಮಾತನ್ನೂ ಆಲಿಸದೆ. 

ಅವಳದೇ ಆದ ಬದುಕಿನ್ನು ಅವಳನ್ನು ಕರೆದಿರಲಿಲ್ಲ. ಅವನ ನೋಡದೆ ಬದುಕುವುದು ಗೊತ್ತಿರಲಿಲ್ಲ .ನದಿ ತೀರದಲ್ಲಿ ಈಗ ಅವಳು ಏಕಾಂಗಿ. ಆದರೂ ಆಕೆಯ ಮೌನ ಒಡೆಯಲೇ ಇಲ್ಲ. ಕಾಯುವ ಮನಸ್ಸು ಕರಗಲೇ ಇಲ್ಲ.  ಅಕೆಯದೋ ಭೂಮಿಯ ತಾಳ್ಮೆ. ಹುಡುಗನೋ ನಿರ್ಧಾರದಲ್ಲಿ ಬಂಡೆ. ಆತನಿಗೆ ಮುಂದೆ ನಡೆಯುವುದೊಂದೇ ಗೊತ್ತು. ಹಿಂದೆ ತಿರುಗಿ ನೋಡಲಾರ . ಮತ್ತೆ ಹಿಂದಿರುಗಿ ಬರಲಾರ. ಆದರೆ ಆಕೆಯ ಕಾಯುವಿಕೆ ಮಾತ್ರ ನಿರಂತರ ನಾನು ಮುಳುಗಿ ಮತ್ತೆ ಹುಟ್ಟುವಂತೆ. ಮತ್ತೆ ಅವನು ಬರಬಹುದೇನೋ ಎರಡು ನಿಮಿಷ ಕಾಯಲಾ??  ಎನಿಸುವುದುಂಟು. ಆದರೆ ನಾನು ಹಾಗೆ ಮಾಡಲಾರೆನಲ್ಲ.ಅವರಲ್ಲಿಯೇ ನಾನು ನನ್ನನ್ನು ಮತ್ತು ಭೂಮಿಯನ್ನು ಕಾಣುತ್ತಿದ್ದೆ. ಅವಳೋ ನನ್ನನ್ನು ಮುತ್ತಿಕ್ಕಲಾರಳು. ನಾನೂ ಅವಳನ್ನು ತಬ್ಬಲಾರೆ. ನಾವಿಬ್ಬರೂ ದೂರವಿದ್ದರೂ ಹತ್ತಿರ.. ಅವರೋ ಹತ್ತಿರವಿದ್ದೂ ದೂರ ದೂರ. ಎಲ್ಲ ಮನಸ್ಸುಗಳೂ ಸಾಗರದಷ್ಟು ನಿಗೂಢವೇ ಎನಿಸುತ್ತಿದೆ. 
 ಹೇಳು ಇದು ಪ್ರೇಮ ಕಥೆಯಾ ?? ಎಂದ. 

ಉತ್ತರವಿರಲಿಲ್ಲ ನನ್ನ ಬಳಿ. ನಾನೂ  ಎಚ್ಚರಗೊಂಡು , ನನಗೂ  ಈ ಪ್ರೀತಿ  ಮಧ್ಯಾಹ್ನದ  ನಿನ್ನಂತೆ ಸುಡು ಬಿಸಿಲಾ ?? ಸಂಜೆ ಬಾನಿನ ರಂಗಿನೋಕುಳಿಯಾ ? ಅಥವಾ ನೀ ಮುಳುಗಿದ ಮೇಲೆ ಬರುವ ತಂಪು ಬೆಳದಿಂಗಳಾ ?? ಎಂದು ಗೊತ್ತಿಲ್ಲ  ಎನ್ನುವಷ್ಟರಲ್ಲಿ ಮಾಯವಾಗಿದ್ದ. ನಾನೂ  ಈಗ ಸೂರ್ಯನನ್ನು ಹುಡುಕಬೇಕಿದೆ. 
   

Monday, 18 March 2013

ಹೀಗೊಂದು "ಆಶ"ಯ.. ಪ್ರೀತಿಯ ಶುಭಾಷಯ..
ಆವತ್ತು ಎಂದಿನಂತೆ ಆಫೀಸ್ ಮುಗಿಸಿ ಹೊರಟವಳಿಗೆ direct  buss  ಸಿಗದೇ ಬೇರೆ buss  ಹತ್ತಿದ್ದೆ. ಸಣ್ಣ ಅಯಾಸದೊಂದಿಗೆ ಹಾಡು ಕೇಳುತ್ತಾ ಕಣ್ಣುಮುಚ್ಚಿ  ಕುಳಿತವಳಿಗೆ bus  ಎಲ್ಲಿ ಹೋಗುತ್ತಿದೆ ಅಂತ ಗೊತ್ತಿರಲಿಲ್ಲ. ಒಂದು ಕಡೆ bus ನಿಂತ ಅನುಭವವಾಗಿ ಕಣ್ ಬಿಟ್ಟರೆ, ಒಂದಿಷ್ಟು ಜನ ಇಳಿದಿದಿದ್ದು , ಹತ್ತಿದ್ದು ಕಾಣಿಸಿದ್ದು. ಹತ್ತಿ ಒಳಬಂದವರನ್ನು ನೋಡುತ್ತಿರುವಂತೆ ಕಂಡಿದ್ದು ನೀನು .!! ಹೌದಾ ? ಇದು ನಿಜವಾ ? ನೀನಾ ? ಅಂತ ಎರಡೆರಡು ಬಾರಿ ನೋಡಿಕೊಂಡೆ. ಹೌದು ಅದು ನೀನೆ ಅಂತ  ಗೊತ್ತಾದಾಗ ಮನಸ್ಸು ಎಷ್ಟು ಕುಣಿದಿತ್ತು ಗೊತ್ತಾ ? ನನ್ನ ಎದುರು ಸೀಟ್ ನಲ್ಲಿಯೇ ಕುಳಿತು ನೀ ನನ್ನನ್ನು ನೋಡದೆ ನಿನ್ನ ಪಾಡಿಗೆ ಕುಳಿತಾಗ ಮಾತ್ರ ಎಲ್ಲಿಲ್ಲದ ಸಿಟ್ಟು ಬಂತು . ಆದರೆ ಯಾವಾಗ ನೀ ನನ್ನ ನೋಡಿದೆಯೋ ಆಗ ನಿನ್ನ ಮುಖದಲ್ಲಿನ expression  ಇವತ್ತಿಗೂ ಮರೆಯಲು ಆಗೋಲ್ಲ. ಏನೋ ಒಂದು ಅಚಾನಕ್ ಆಗಿ ಸಿಕ್ಕ ಖುಷಿ ನಿನ್ನ ಕಣ್ಣಲ್ಲಿ ಕಂಡಿತ್ತು. ನಿನ್ನ ಕಣ್ಣಲ್ಲಿ ಖುಷಿ ಗೆ ನೀರು ಬರುವುದೊಂದು ಬಾಕಿ ಎನಿಸಿತ್ತು. ಈ ವರ್ಕೋ ಹಾಲಿಕ್ ಜಗತ್ತಿನಲ್ಲಿ ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಬೇಕಲ್ಲ. ಒಬ್ಬರಿಗೊಬ್ಬರು ಸಿಗುವುದಾದರೂ. ಆದರೆ ಏನೇ ಹೇಳು plan  ಪ್ರಕಾರವೇ ಸಿಕ್ಕಿದ್ದರೂ ಇಷ್ಟು ಖುಷಿಯನ್ನು ನಿನ್ನ ಕಣ್ಣಲ್ಲಿ ನಾ ನೋಡುತ್ತಿರಲಿಲ್ಲ. ನವರಂಗ್ ಲ್ಲಿ ಇಳಿದ ತಕ್ಷಣ  ಪಾನಿಪುರಿ ತಿನ್ನೋಣವಾ ಅಂತ ಕೇಳಿದವಳಿಗೆ ಬೇಡ ಎಂದರೆ , ಮದ್ಯಾಹ್ನ ಏನು ತಿಂದಿಲ್ಲ ಎಂದಾಗ ಮಾತ್ರ ಒಂದು ಗುದ್ದು ಕೊಡುವಷ್ಟು ಸಿಟ್ಟು ಬಂದಿತ್ತು. ಆದರೆ ನಿನ್ನ ಆ ಮುಖ ನೋಡಿದ್ರೆ ಅದ್ಯಾವನಿಗೆ ಹೊಡಿಯೋ ಮನಸ್ಸು ಬರುತ್ತೆ ಹೇಳು. ಬಹುಷಃ ಅದಕ್ಕೆ ನೀನು ಅಪ್ಪನ ಹತ್ತಿರ ಕೂಡ ಹೊಡೆತ ತಿಂದಿರಲಿಕ್ಕಿಲ್ಲ. ಪುಟ್ಟ ಮಗುವಂತೆ ಪಾರ್ಕ್ ನಲ್ಲಿ ಕೈ ಹಿಡಿದು ಕರೆದುಕೊಂಡು ಹೋಗಿ ಕೈ ಹಿಡಿದೇ ಕುಳಿತಿದ್ದು ತುಂಬಾ ಆಪ್ಯಾಯಮಾನವಾಗಿತ್ತು.ಎಷ್ಟೇ ಬೆಳೆದಿದ್ದೇವೆ ಎಂದುಕೊಂಡರೂ,ಇಬ್ಬರ ಪ್ರಪಂಚಗಳು ಎಷ್ಟೇ ದೊಡ್ದದ್ದಾಗಿದ್ದರೂ ನಮ್ಮ ಮಾತುಗಳು ಮಾತ್ರ ಯಾವತ್ತಿಗೂ ಆ ದಿನಗಳಿಗೆ ಮಾತ್ರ ಸೀಮಿತ ಅಲ್ಲವಾ.  ಪುಟ್ಟ ಮಗುವಂತೆ ನೀ ಖುಷಿಯನ್ನು ವ್ಯಕ್ತ ಪಡಿಸುವಾಗ ನನಗೆ ಎಲ್ಲೋ ನಿನ್ನಂತೆ ಖುಷಿಯನ್ನು ಹೊರಹಾಕಲು ಬರುತ್ತಿಲ್ಲವೇನೋ ಅನಿಸಿದ್ದು ಸುಳ್ಳಲ್ಲ. ನಮ್ಮನೆಗೆ ಬಾ ಎಂದು ಮಗುವಂತೆ ಹಠ ಮಾಡುತ್ತಿದ್ದ ನಿನ್ನ , ಆ ನಿನ್ನ ಖುಷಿಯನ್ನ ಕದಡುವ ಮನಸ್ಸಾಗಲೇ ಇಲ್ಲ. ಅದಕ್ಕೆ ಪಿಜಿ, ಆಫೀಸ್ ಎಲ್ಲವನ್ನೂ ಮರೆತು ನಿನ್ನ ಜೊತೆ ಹೆಜ್ಜೆ ಹಾಕಿದ್ದು. ಮನೆಗೆ ಹೋದರೂ ಅಷ್ಟೇ, ನಾ ಬಂದ ಸಂಭ್ರಮ ನಿನ್ನ ಹೆಜ್ಜೆ ಹೆಜ್ಜೆಗಳಲ್ಲಿ ಗೊತ್ತಾಗುತ್ತಿತ್ತು. ಮನಸ್ಸು ನಿಜಕ್ಕೂ ಮೂಕ .. ಮೋಕ.. ನಾ ಮಾಡಿದ ಪ್ರಾಜೆಕ್ಟ್ ನಿನಗೆ ತೋರಿಸಲಾ ? ಎಂದು ಕೇಳಿದಾಗ ಏನೂ ಅರ್ಥವಾಗೋಲ್ಲ ಎಂದು ಗೊತ್ತಿದ್ದರೂ ಬೇಡ ಎನ್ನುವ  ಮನಸ್ಸೇ ಬರಲಿಲ್ಲ ಕಣೆ. ಕಾರಣ ಇಷ್ಟೇ ನಿನ್ನ ಪಕ್ಕದಲ್ಲಿ ಕೂರಬೇಕಿತ್ತು. ನಿನ್ನ ಮಾತುಗಳನ್ನು ಕೇಳಬೇಕಿತ್ತು. ಒಂದು ವಿಷಯದಲ್ಲಿ ಆಳವಾಗಿ ಹೋಗಿ explain  ಮಾಡುವ ನನ್ನ ಹೈಸ್ಕೂಲಿನ ಆಶಾ ನನಗೆ ಮತ್ತೆ ಬೇಕಿತ್ತು. 

ರಾತ್ರಿ ಮಲಗುವ ಮನಸ್ಸಿರಲಿಲ್ಲ , ನಿನ್ನೊಂದಿಗಿನ ಮಾತುಗಳು ಎಂದಿಗಾದರೂ ಮುಗಿದಾವಾ? ಹೇಳು. ಆದರೆ ನಾಳೆಯ ಆಫೀಸ್ ಭೂತ ಇಬ್ಬರನ್ನೂ ಕಾಡುತ್ತಿದ್ದಕ್ಕೆ ನಾವು ಮಲಗಿದ್ದು. ಒಲ್ಲದ ಮನಸ್ಸಿನಿಂದಲೇ ಮುಸುಕೆಳೆದಿದ್ದು ಸುಳ್ಳಲ್ಲ ಅಲ್ಲವಾ... ಮರುದಿನ bus  ಲ್ಲಿ ಎರಡೇ stop  ಗೆ ನೀ bus  change  ಮಾಡಬೇಕೆಂದು ಹೇಳಿದಾಗ, ಇನ್ನುಳಿದ ಅಷ್ಟು ದೂರದ ಪಯಣಕ್ಕೆ ಪಕ್ಕದಲ್ಲಿ ಯಾರನ್ನೋ ಕಲ್ಪಿಸಿಕೊಳ್ಳುವುದು ಕಷ್ಟವಾಯಿತು ಮುದ್ದು.. ಅಷ್ಟು ದೂರ ನಾನೊಬ್ಬಳೆ ಹೋಗಬೇಕಾ ? ಎಂದವಳನ್ನು , ನೋಡಿ  bus  ಇಳಿದು call  ಮಾಡ್ತೀನಿ. ಮಾತಾಡ್ತಾ ಹೋಗೋಣ ಆಫೀಸ್ ಗೆ ಎಂದವಳ ಕಣ್ಣಲ್ಲಿ ಅದೆಷ್ಟು ಪ್ರೀತಿ ಕಾಣಿಸಿತ್ತು ಗೊತ್ತಾ?. ಆಮೇಲೆ ಆಫೀಸ್ ಮೆಟ್ಟಿಲು ಹತ್ತುತ್ತಿರುವಾಗಲೇ ಗೊತ್ತಾದವರಂತೆ ಬಂದ ನಿನ್ನ reached ? ಎಂಬ ಮೆಸೇಜ್ ಗೆ reached  ಎಂದು ಕಳಿಸಿದರೂ ಕೂಡ ಮನಸ್ಸು ನಿನ್ನನ್ನು ತುಂಬಾ miss  ಮಾಡಿಕೊಳ್ಳುತ್ತಿತ್ತು . 

ಲವ್ ಯು ಕಣೋ . ಬದುಕಲ್ಲಿ ಏನು ಸಾಧಿಸಿದ್ದೇನೋ ಗೊತ್ತಿಲ್ಲ. ಆದರೆ ನಿನ್ನಂತ ಗೆಳತಿಯನ್ನು ಸಂಪಾದಿಸಿದ್ದು ಸಾಕು ಈ ಬದುಕಿಗೆ ....ಈ ಖುಷಿಗೆ.. ಜೀವನದಲ್ಲಿ ಕೆಲವು unexpected ಆಗಿ ಸಿಕ್ಕಾಗ ಆಗುವ ಖುಷಿ , ಆ ಥ್ರಿಲ್ ಇನ್ನೆಲ್ಲೂ ಸಿಗಲಾರದೇನೋ. ಎಲ್ಲೋ ಒಂದು ತಿರುವಲ್ಲಿ ನೀ surprise ಆಗಿ ಸಿಕ್ಕಂತೆಯೇ.   ಹಾಗಾಗಿಯೇ ಈ ಜೀವನ predefined  ಆಗದಿರುವುದೇ ಒಳ್ಳೆಯದು ಅಲ್ಲವಾ.. 

 Golden life ಕೊಟ್ಟ ಚಿನ್ನದಂಥಹ ಗೆಳತಿ ಗೆ 
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. ನಿನ್ನೆಲ್ಲ ಕನಸುಗಳು ನನಸಾಗಲಿ... 
 ಒಂದು ದಿನ ತಡವಾಗಿದ್ದಕ್ಕೆ ಕ್ಷಮೆಯಿರಲಿ... 

Friday, 15 March 2013

ಎಲ್ಲಿ ಹೋದವು ಆ ದಿನಗಳು ಮತ್ತೆ ಬರಲಾರದಷ್ಟು ದೂರ ...

ತುಂಬಾ ಕಷ್ಟ ಪಟ್ಟು ಅಕ್ಷರಗಳನ್ನು ಜೋಡಿಸುತ್ತಿದ್ದೇನೆ. ಈ ಪತ್ರದ ಪ್ರತಿ ಶಬ್ದಗಳನ್ನು ಬರೆಯುವಾಗಲೂ ಕೈ ಕಂಪಿಸುತ್ತಿದೆ. ನಾವಿಬ್ಬರು ಪ್ರೀತಿಸುತ್ತಿದ್ದಾಗಲೂ ಪತ್ರ ಬರೆದದ್ದು ಕಡಿಮೆಯೇ, ಆದರೆ ಇವತ್ತು ಏನೂ ಅಲ್ಲದ ನನ್ನನ್ನು ಸೊಸೆಯಾಗಿ ತಂದು ಕೊಂಡು, ಸೊಸೆಯಂತೆ ಕಾಣದೆ ತಾಯಿಯಾದ ಆ ಮಮತಾಮಯಿ ನಿಮ್ಮ ಅಮ್ಮನಿಗಾಗಿ ಈ ಪತ್ರ ಬರೆಯಲೇ ಬೇಕಾಗಿದೆ.ಇದೇ ಕೊನೆಯದೇನೋ ಅನಿಸುತ್ತಿದೆ . 

ಆರು ವರ್ಷಗಳು ಕೇವಲ ಆರೇ ವರ್ಷಗಳ ಹಿಂದೆ ಎಷ್ಟು ಚೆನ್ನಾಗಿತ್ತು ನಮ್ಮ ಜೀವನ. ನಿಮಗೊಂದು ಒಳ್ಳೆಯ ಕೆಲಸವಿತ್ತು. ನಮ್ಮ ಪ್ರೀತಿಯಿತ್ತು , ನನ್ನನ್ನು ನಿಮ್ಮಮ್ಮನಿಗೆ ಪರಿಚಯ ಮಾಡಿಸಲು ಕರೆದುಕೊಂಡು ಹೋಗುವಾಗ "ನೋಡು ನಮ್ಮಮ್ಮನಿಗೆ ದವಡೆಯ ಆಪರೇಶನ್ ಆಗಿರುವುದರಿಂದ ಮುಖ ಸ್ವಲ್ಪ ವಿಕಾರವಾಗಿದೆ. ಅವರನ್ನು ನೋಡಿ ಹೆದರಬೇಡ. ನನ್ನ ಮದುವೆಯಾದ ಮೇಲೂ ಎಂದಿಗೂ ಅವರನ್ನು ಹೀಯಾಳಿಸ ಬಾರದು" ಎಂದು. ಅವರನ್ನು  ನೋಡಿದಾಗ ಸ್ವಲ್ಪ ಭಯ ಎನಿಸಿದರೂ, ಅವರ ಮಮತೆ ಎಲ್ಲವನ್ನು ಮರೆಸಿತ್ತು. " ನೋಡಮ್ಮ ನನ್ನ ಮಗ ಕೆಲಸದಲ್ಲಿರುವುದು ನಿಜ, ಆದರೆ ಅವನ ಸಂಬಳ ತಿಂಗಳ ಮನೆ ಖರ್ಚುಗಳಿಗೆ ಸರಿ ಹೋಗತ್ತೆ. ಗಳಿಕೆಯ ಉಳಿಕೆ ಕಡಿಮೆಯೇ . ಮದುವೆಯಾದ ಮೇಲೆ ನಿನ್ನ ಎಲ್ಲ ಆಸೆಗಳು ಈಡೇರಬಹುದು  ಎಂಬ ಭರವಸೆ ಕೊಡಲಾರೆನಮ್ಮ  , ಒಪ್ಪಿಗೆ ಇದ್ದರೆ ಈ ಮನೆ ದೀಪ ಬೆಳಗು ತಾಯಿ" ಎಂದಿದ್ದರು ನಿಮ್ಮಮ್ಮ , ಒಪ್ಪಿ ನಿಮ್ಮ ಕೈ ಹಿಡಿದು ಆ  ಮನೆ ಸೊಸೆಯಾದೆ.(ಆ ಮನೆ ಎಂದು ನಾನೇಕೆ ಹೇಳಿದೆ ಎಂಬುದು ನಿಮಗೂ ಗೊತ್ತು ) ಆ ಪುಟ್ಟ ಮನೆಯಲ್ಲಿ ಖುಷಿ ಮಾತ್ರ ಇತ್ತು  . ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಬರುತ್ತಿದ್ದ ನೀವು . ಅದು ಇದು ಮಾತನಾಡುತ್ತ ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮುಗಿಸಿರುತ್ತಿದ್ದ ನಾವು , ಆಮೇಲೆ ಮೂವರು ಸೇರಿ ಮನೆಯಂಗಳದಲ್ಲೇ ಇದ್ದ ಮಾವನವರ ಸಮಾಧಿಯ ಮುಂದೆ ತಾಸುಗಟ್ಟಲೆ ಕುಳಿತು ಮಾಡುತ್ತಿದ್ದ ಭಜನೆ. ಅಪರೂಪಕ್ಕೆ ಬೇಗ ಬಂದರೆ ಓಣಿಯ ಮಕ್ಕಳನ್ನೆಲ್ಲ ಸೇರಿಸಿ ಗಾಳಿಪಟ ಬಿಡುತ್ತಿದ್ದುದ್ದು , ಭಾನುವಾರ ಎಲ್ಲಾ ಸೇರಿಕೊಂಡು ಅಡಿಗೆ ಮಾಡಿ ಅಮ್ಮನ ಕೈತುತ್ತು ತಿನ್ನುತ್ತಿದ್ದುದು. ಸಂಜೆ ಅಮ್ಮ ದೇವಸ್ಥಾನಕ್ಕೆ  ಹೋದರೆ ನಾವಿಬ್ಬರೇ ಟೆರೆಸ್ ಮೇಲೆ ಕುಳಿತು ಹರಟುತ್ತಿದ್ದುದು....  .ಎಲ್ಲಿ ಹೋದವು ಆ ದಿನಗಳು ಮತ್ತೆ ಬರಲಾರದಷ್ಟು ದೂರ ...

ಇಷ್ಟು ಚೆನ್ನಾಗಿದ್ದಾಗ ಜೀವನ, ಅದ್ಯಾರು ತುಂಬಿದರೋ ನಿಮ್ಮ ತಲೆಗೆ ಬ್ಯುಸಿನೆಸ್ ಮಾಡುವ ವಿಚಾರವನ್ನು , ನನ್ನ ಬಳಿ ಹೇಳಿದಾಗಲೂ ಅಚ್ಚುಕಟ್ಟಾದ ಜೀವನಕ್ಕೆ, ಮುಂದೆ ಮಕ್ಕಳಾದರೆ ಅವರ ಭವಿಷ್ಯಕ್ಕೆ ಒಳ್ಳೆಯದು ಎಂದು ನಾನೂ  ಸಪೋರ್ಟ್ ಮಾಡಿದೆ."ಅಮ್ಮಾ  ಸಾಲ ಮಾಡಿ ಬ್ಯುಸಿನೆಸ್ ಮಾಡಬೇಕೆಂದಿದ್ದೇನೆ" ಎಂದಾಗ ನಿಮ್ಮಮ್ಮ  "ಬೇಡ ಮಗು ಸಾಲದ ಶೂಲ ಕಷ್ಟವಪ್ಪ , ನನ್ನ ಬಳಿ ನಿಮ್ಮಪ್ಪನ ಸಮಾಧಿಯ ಮೇಲೆ ಗುಡಿ ಕಟ್ಟಿಸಲು ಕೂಡಿಟ್ಟ ಹಣವಿದೆ ಅದನ್ನೇ ಕೊಡುತ್ತೇನೆ ಬಳಸಿಕೋ , ಬ್ಯುಸಿನೆಸ್ ಚೆನ್ನಾಗಿ ನಡೆಸಿ ಅಲ್ಲೊಂದು ಗುಡಿ ನೀನೆ ಕಟ್ಟಿಸುವೆಯಂತೆ"  ಎಂದು ಹಣ ಕೊಟ್ಟರು. ಆ  ತಾಯಿ ಒಳ್ಳೆಯ ಕಾರ್ಯಕ್ಕಾಗಿ, ಒಳ್ಳೆ ಮನಸ್ಸಿನಿಂದ ಹಣ ಕೊಟ್ಟಿದ್ದರ ಪರಿಣಾಮ ನಿಮಗೂ ಒಳ್ಳೆಯದೇ ಆಯಿತು , ಮಾಡಿದ ಬ್ಯುಸಿನೆಸ್ ಕೈ ಹಿಡಿಯಿತು. ನಮ್ಮ ಜೀವನ ಬದಲಾಯಿತು, ಜೊತೆಗೆ ನೀವೂ ಕೂಡ.  ಕೆಲಸ, ಕೆಲಸ, ಕೆಲಸದಲ್ಲೇ ಮುಳುಗಿ ಹೋದಿರಿ. ನೀವು ಬೇಗ ಮನೆಗೆ ಬಂದಿದ್ದೇ  ಮರೆತು ಹೋಗಿದೆ ನನಗೆ. ಸ್ಟೇಟಸ್ ಗೆ ತಕ್ಕಂತೆ ಇರಬೇಕು ಎನ್ನುತ್ತಾ ಆ ಪುಟ್ಟ ಮನೆ ಬಿಡಿಸಿ ಇದ್ಯಾವುದೋ ಫ್ಲಾಟ್ ಎಂಬ ಭೂತ ಬಂಗಲೆಗೆ ತಂದಿರಿಸಿದಿರಿ. ಇದು ಮನೆಯೆಂದು ನಂಗೆ ಯಾವತ್ತೂ  ಅನಿಸಲೇ ಇಲ್ಲ. ಪುಟ್ಟ ಮಕ್ಕಳ ಜೊತೆಗಿನ ಗಾಳಿಪಟದ ಖುಷಿ ಮತ್ತೆ ಕಾಣಲೇ ಇಲ್ಲ, ನಿಮಗೆ ಭಾನುವಾರಗಳೇ ನೆನಪಿನಲ್ಲಿರುವುದು ದೂರವಾದ ಮೇಲೆ,  ಭಾನುವಾರದ ಅಡಿಗೆ, ಕೈ ತುತ್ತುಗಳ ನೆನಪೇ ಇಲ್ಲ, ಒಂದರ್ಧ ಗಂಟೆ ಭಜನೆಗೆ ಬಂದ ನೆನಪು ನಿಮಗಿದೆಯೇ?ನೆನಪಿಸಿಕೊಳ್ಳಿ . ಈ ಮನೆಯ ಟೆರೆಸ್ ಇನ್ನೂ ನೋಡೇ ಇಲ್ಲ , ಇವೆಲ್ಲ ಕೆಲಸದಲ್ಲಿ ಬ್ಯುಸಿ ಇರುವ ಗಂಡನ ಬಗ್ಗೆ ಹೆಂಡತಿಯಾದವಳು ಮಾಡುವ ನಾರ್ಮಲ್ ಕಂಪ್ಲೈಂಟ್ ಗಳು ಎನ್ನುತ್ತಾರೆ ಗೊತ್ತು ಅದಕ್ಕೆ ಇದನ್ನು ನಿಮ್ಮ ಮುಂದೆ ಎಂದು ಆಡಿರಲಿಲ್ಲ . 

ಆದರೆ ನೀವು ನಿಮ್ಮಮ್ಮನಿಗೆ ಮಾಡುತ್ತಿರುವ ಇಂಚಿಂಚು ಮೋಸವನ್ನು ಹೇಗೆ ಸಹಿಸಿಕೊಳ್ಳಲಿ. "ಗುಡಿ ಯಾವಾಗ ಕಟ್ಟಿಸುತ್ತಾನೆ ಎಂದು ಕೇಳಬೇಕಮ್ಮ, ಇವನು ಇತ್ತೀಚೆಗೆ ಮನೆಗೆ ಬರುವುದು ತಡವಾಗುತ್ತಿದೆ ಮನಸು ಯಾಕೋ ಸರಿ ಇಲ್ಲ ,  ನಿಮ್ಮ ಮಾವನರ ಸಮಾಧಿಯ ಮುಂದೆ ಒಂದು ಅರ್ಧ ಗಂಟೆ ಕುಳಿತುಬರಬೇಕು  ಎನಿಸುತ್ತಿದೆ, ನನ್ನ ಕರ್ಕೊಂಡು ಹೋಗ್ತಿಯ ಮಾ" ಎಂದು ಬೇಡುವಾಗ , "ಇಲ್ಲಮ್ಮ ನಿಮ್ಮ ಮಗ ಆ ಮನೆ ಮತ್ತು ಆ ಜಾಗ ಮಾರಿ ಬ್ಯುಸಿನೆಸ್ ಗೆ ಹಣ ಸುರಿದಿದ್ದಾರೆ" ಎಂದು ಹೇಗೆ ಹೇಳಲಿ ನಾನು ? ಇತ್ತೀಚಿಗೆ ಅಸ್ತಮ ಸ್ವಲ್ಪ ಜಾಸ್ತಿಯಾಗಿ ಕೆಮ್ಮುತ್ತಿದ್ದರೆ , ಅಮ್ಮ ಡಾಕ್ಟರ ಹತ್ರ ಹೋಗಿ ಬಾರಮ್ಮ ,ನನ್ನ ಕ್ಲೈಂಟ್, ಅಥವಾ ಗೆಳೆಯರೆಲ್ಲ ಬಂದಾಗ ನೀ ಹೀಗೆ ಕೆಮ್ಮುತ್ತ ಇದ್ದರೆ ಚೆನ್ನಾಗಿರಲ್ಲ ಎಂದಿದ್ದಕ್ಕಾಗಿ , ಮನೆಗೆ ಯಾರಾದರೂ ಬಂದರೆ ಬಚ್ಚಲಮನೆಯಲ್ಲಿ ಕುಳಿತು ಬರುವ ಕೆಮ್ಮನ್ನು ತಡೆ ಹಿಡಿಯಲು ಪ್ರಯತ್ನಿಸುತ್ತಾ ಕಷ್ಟ ಪಡುವ ಅವರನ್ನು ಹೇಗೆ ನೋಡುತ್ತಾ ಇರಲಿ ನಾನು ?ನಾನೇ ಡಾಕ್ಟರ್ ಹತ್ತಿರ  ಕರೆದು ಕೊಂಡು ಹೋಗುತ್ತೇನೆ ಎಂಬ ಮಾತು ನಿಮ್ಮ ಬಾಯಿಂದ ಬರಲೇ ಇಲ್ಲ .  ಮೊನ್ನೆ ನಿಮ್ಮ ಗೆಳೆಯನ ಮಗು ಅತ್ತೆಯನ್ನು ಕಂಡು ಕಿರುಚಿತ್ತು ಎನ್ನುವ ಕಾರಣಕ್ಕೆ , ನಿನ್ನ ಮುಖ ವಿಕಾರ ಎಂದು ಗೊತ್ತಿದ್ದರೂ ಯಾಕಮ್ಮ ಎದುರಿಗೆ ಬರಬೇಕಿತ್ತು ? ನೋಡು ಇನ್ಯಾವತ್ತೂ ಆತ  ನಮ್ಮನೆಗೆ ಬರಲಾರ ಎಂದು ಮುಖಕ್ಕೆಹೊಡೆದಂತೆ ನೀವು ಬೈದಿದ್ದನ್ನು ಹೇಗೆ ಸಹಿಸಿಕೊಳ್ಳಲಿ ? ಮೌನವಾಗಿ ಕಣ್ಣೀರು ಹಾಕುತ್ತಿರುವ ಆಕೆಯನ್ನು ಹೇಗೆ ಸಮಾಧಾನಿಸಲಿ ?

ಇದೆಲ್ಲದಕ್ಕಿಂತ ಹೆಚ್ಚಾಗಿ ಬೆಳಿಗ್ಗೆ ನೀವು ವೃದ್ಧಾಶ್ರಮದವರ  ಬಳಿ ಮಾತಾಡಿದ್ದನ್ನು ಕೇಳಿದ್ದೆ. ನೀವು ಅಲ್ಲಿಯ ಫಾರಂ ತಂದಿದ್ದು ಗೊತ್ತು ನನಗೆ. ಇದನ್ನು ಸಹಿಸಿಕೊಳ್ಳಲು ಸಾದ್ಯವಿಲ್ಲ . ಆ ಮಮತಾಮಯಿ ತಾಯಿಯನ್ನು ಯಾರೂ ಇಲ್ಲದ ಅನಾಥೆಯಂತೆ ಅಲ್ಲಿ ಬಿಡಲು ನಾನು ತಯಾರಿಲ್ಲ . ಅಚ್ಚುಕಟ್ಟಾದ ಜೀವನಕ್ಕೆ ಸಹಾಯವಾಗಬಹುದೆಂಬ  ನಿಮ್ಮ ಬ್ಯುಸಿನೆಸ್ ನನ್ನ ಸಂಸಾರದ ಚೌಕಟ್ಟನ್ನೇ ಒಡೆಯುತ್ತದೆ ಎಂದಾದರೆ ನನಗೆ ಆ ಬ್ಯುಸಿನೆಸ್ ಮತ್ತು ಅದರ ಹಣ ಎರಡೂ  ಬೇಕಾಗಿಲ್ಲ . ನಿಮಗೆ ಇಷ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ಕೆಲಸಕ್ಕೆ ಹೊಗುತ್ತಿರಲಿಲ್ಲ , ಬಿಟ್ಟರೆ ನಿಮ್ಮಮ್ಮನಿಗೆ ಎರಡು ಹೊತ್ತು ಊಟ ಹಾಕಿ ನೆಮ್ಮದಿಯ ಬದುಕು ನೀಡುವಷ್ಟು ಸಂಬಳ ಬರುವ ಕೆಲಸ ಸಿಗುವಷ್ಟು ವಿದ್ಯೆ ನನ್ನಲ್ಲಿದೆ. ನಾನವರನ್ನು ಸಾಕುತ್ತೇನೆ . ಎಲ್ಲ ಸತ್ಯವನ್ನು ಅವರಿಗೆ ತಿಳಿಸಿ ಒಂದು ಹೊಸ ಬದುಕನ್ನು ಕಟ್ಟುತ್ತೇನೆ ಹಾಗಾಗಿಯೇ ಅವರನ್ನು ಕರೆದುಕೊಂಡು ಈ ಮನೆಯಿಂದ ಹೊರಡುತ್ತಿದ್ದೇನೆ. ದುಡ್ಡಿನ ಮದವಿಲ್ಲದೆ ಹುಡುಕಿ ಬಂದರೆ ನಮ್ಮ ಬದುಕಿನಲ್ಲಿ ನಿಮಗೂ ಒಂದು ಜಾಗ ಸಿಗಬಹುದೇನೋ ...

Tuesday, 5 March 2013

ಬಾಲ್ಯಕ್ಕಿಷ್ಟೇ ಗೊತ್ತು ..ರೂಪದರ್ಶಿ : ಶ್ರೇಯಾ . ಫೋಟೋ : ವಿನೋದ್ ಕುಮಾರ್  
ಸ್ನಿಗ್ದ ನಗುವಿಗೊಂದು
ಮುಗ್ದತೆಯ ಚೌಕಟ್ಟು... 
ಪುಟ್ಟ ತಲೆಯೊಳಗೊಂದು ... 
ತುಂಟಾಟದ ಜಗತ್ತು ... 
ಬಾಲ್ಯಕ್ಕಿಷ್ಟೇ ಗೊತ್ತು ..  


ರೂಪದರ್ಶಿ : ಪ್ರಣತಿ ಹೆಗಡೆ , ಫೋಟೊ : ಸುಷಮಾ ಭಟ್ 
ಇಲ್ಲ ಬೆಡಗು ಬಿನ್ನಾಣ              
ಒನಪು ವಯ್ಯಾರಗಳ        
ಜರೂರತ್ತು . ...                             
ಬೆರಗು ಕಂಗಳಲಿ ... 
ಕುತೂಹಲದ  ಸುರುಳಿ ... 
ಬಾಲ್ಯಕ್ಕಿಷ್ಟೇ ಗೊತ್ತು ... 

    

ರೂಪದರ್ಶಿ:ಅಬ್ಜಾ ದಿಗ್ವಾಸ್ , ಪ್ರಾಚಿ ,
 ಫೋಟೊ : ದಿಗ್ವಾಸ್ ಜಿ . ಹೆಚ್ 
ಬೇಕಿಲ್ಲ ಬದುಕಿಗೊಂದೇ ದಾರಿ .. 
ಬದುಕಲ್ಲೊಂದೇ ಗುರಿಯೆಂಬ ಉಯಿಲು  
ಪುಟ್ಟ ಕಂಗಳಿಗೆ 
ಕಾಣೋದೆಲ್ಲ ಆಟದ ಬಯಲು 
ಬಾಲ್ಯಕ್ಕಿಷ್ಟೇ ಗೊತ್ತು .. 

ಗೊತ್ತಿಲ್ಲ ಸಮಾಜ 
ಅದಕ್ಕೊಂದಿಷ್ಟು ಕಟ್ಟು ಪಾಡು .. 
ಪುಟ್ಟ ಗುಲಾಬಿ  ತುಟಿಗಳಲಿ 
ಹಾಲುಗಲ್ಲದ ತೊದಲ ಹಾಡು 
ಬಾಲ್ಯಕ್ಕಿಷ್ಟೇ ಗೊತ್ತು .. 
ರೂಪದರ್ಶಿ: ಪಾರ್ಥ , ಫೋಟೊ : ಸುಷಮಾ ಭಟ್ 

ತಿಳಿದಿಲ್ಲ ಅನಾಚಾರ .. 
ಅದರದಿಷ್ಟು ಲೆಕ್ಕಾಚಾರ .. 
ಬೊಗಸೆ ಕೈಗಳಲಿ 
ಹಿಡಿದ ಸ್ಲೇಟು ಬಳಪದ ಚಿತ್ತಾರ 
ಬಾಲ್ಯಕ್ಕ್ಕಿಷ್ಟೇ ಗೊತ್ತು ...