Friday 8 November 2013

ನಿನ್ನದೇ ರಕ್ತವಿದು ಹರಿಯುತ್ತಿದೆ ಧಮನಿಗಳಲ್ಲಿ...


ಈ ಹಾಳು ಊರು ಏನೆಲ್ಲಾ ಅನಿಸುವಂತೆ ಮಾಡಿ ಬಿಡುತ್ತದೆ ಗೊತ್ತಾ . ನಿನ್ನ ಮಡಿಲಲ್ಲಿ  ಮಲಗಿ ಬಿಕ್ಕಿ ಬಿಕ್ಕಿ ಅಳಬೇಕು ಎನಿಸುವಷ್ಟು ಒಂಟಿಯೆನಿಸುವಂತೆ ಮಾಡಿ ಬಿಡುತ್ತದೆ. ಯಾವ ಖುಷಿಯ ತುದಿಯಲ್ಲಿದ್ದರೂ ಹೇಳಿಕೊಳ್ಳಲು ನೀನೇ  ಬೇಕಿರುತ್ತದೆ. ಆದರೆ ನೀ ದೂರ ದೂರ. ಎಷ್ಟೋ ಸಲ ಯೋಚನೆಗೆ ಬೀಳುತ್ತೇನೆ.  ಹಿಂಗೆಲ್ಲ ಯಾಕೆ ಅನಿಸುತ್ತೆ ಅಂತ. ಅಲ್ಲಿದ್ದಾಗ ಯಾಕೆ ಅನಿಸ್ತಾ ಇರಲಿಲ್ಲ ಅಂತ. ಅಲ್ಲೇ ನಿನ್ನ ಜೊತೆಯೇ ಇದಿದ್ರೆ ಬಹುಶಃ ಒಂಟಿ ಅನ್ನೋ ಭಾವ ಬೆಳೆಯೋದಕ್ಕೆ ನೀ ಅವಕಾಶನೆ  ಕೊಡ್ತಾ ಇರಲಿಲ್ಲ.  ಯಾವಾಗಲೂ ಜೊತೆಲ್ಲೇ ಇದ್ದೀನಿ ಅನ್ನೋ ಫೀಲ್ ಕೊಡ್ತೀಯ. ಅಂಗಳದ ತುದಿಯಿಂದ ಹಿಡಿದು ಹಿತ್ತಲ ಮನೆಯ ಬಾಗಿಲವರೆಗೂ ಎಲ್ಲೇ ಹೋದರೂ ನಿನ್ನ ಹಿಂದೆಯೇ ಸುತ್ತುತ್ತಿದ್ದೆ ನಾನು.   ಅದಕ್ಕೆ ಅಲ್ಲಿದ್ದಾಗ ಯಾವತ್ತೂ  ನಿನ್ನ ಮಡಿಲಲ್ಲಿ ಮಲಗಬೇಕು ಅಂತಾ  ಅನ್ನಿಸ್ತಾನೆ ಇರಲಿಲ್ಲ. ಇನ್ನು ಅಳಬೇಕು ಅನಿಸಿದ್ದಂತೂ ದೂರದ ಮಾತೇ. ಅತ್ತಿದ್ದಿದ್ದರೂ ಅದು ನಿನ್ನಿಂದಲೇ, ನೀ ಬೈದಿದ್ದಕ್ಕೆನೆ.. ( ಪ್ರೀತಿಯ ಆರೋಪ ಇದು .. ಇದಕ್ಕೆ ಗುರ್ರ್ ಅನ್ನೋ ಅವಶ್ಯಕತೆಯಿಲ್ಲ ಮತ್ತೆ .. ) 

 ಪ್ರೀತಿಯಲ್ಲಿ ಪಾಲು ಹಂಚಲು ಹೇಳಿಕೊಟ್ಟಿದ್ಯಾರೆ ನಿನಗೆ . ಪ್ರತಿಯೊಬ್ಬರಿಗೂ ಪಾಲಿದೆ ನಿನ್ನ ಪ್ರೀತಿಯಲ್ಲಿ. ಪ್ರತಿಯೊಬ್ಬರಿಗೂ ದೊಡ್ಡ ಪಾಲಿನ ಪ್ರೀತಿ ತನಗೇ ಅನ್ನಿಸುವಂತೆ ಪ್ರೀತಿ ಕೊಡುತ್ತೀಯಲ್ಲ. ನಂಗ್ಯಾವತ್ತು ಅನಿಸುತ್ತೆ   ನೀ ಬಹುಶಃ ನನ್ನನ್ನೇ ಜಾಸ್ತಿ ಮುದ್ದು ಮಾಡ್ತೀಯ ಅಂತ, ಆದರೆ ತಮ್ಮ, ಮತ್ತು ಅಕ್ಕನ್ನ ಕೇಳಿ ನೋಡು ಅವರೂ ಹಿಂಗೆ ಹೇಳ್ತಾರೆ. ಅದ್ಹೇಗೆ ಸಾಧ್ಯ ನಿಂಗೆ. ಮಲ್ಟಿ ರೋಲ್ ಪ್ಲೇ ಮಾಡೋ ನಿನ್ನ ಬಗ್ಗೆ ಏನು  ಹೇಳಲಿ ಹೇಳು. ಚಿಕ್ಕವರಿರುವಾಗ ಅದೊಂದು ಮಾಮೂಲು ಪ್ರಶ್ನೆ ಇರುತ್ತಲ್ಲ ನೀನೇನಾಗ್ತೀಯ ಮುಂದೆ ಅಂತಾ? ಆ ಪ್ರಶ್ನೆ ಕೇಳಿದವರಿಗೆಲ್ಲ ಏನೇನೋ  ಉತ್ತರ ಕೊಟ್ಟಿದ್ದೇನೆ ಬಿಡು. ಟೀಚರ್, ಡಾಕ್ಟರ್, ಟೈಲರ್, ಫ್ಯಾಶನ್ ಡಿಸೈನರ್, ಫ್ರೆಂಡ್, ಅಗ್ರಿಯಲ್ಲಿ ಪಿಎಚ್ಡಿ, ಹೋಟೆಲ್ ಮ್ಯಾನೇಜ್ ಮೆಂಟ್, ಹೀಗೆ ಉದ್ದದ ಪಟ್ಟಿಯಿದೆ.. (ಆದ್ರೆ ಇವತ್ತಿಗೆ ನಾ ಅದ್ಯಾವುದೂ ಆಗಿಲ್ಲ ಬಿಡು...  ) ಆದರೆ ನೀನೋ ಇದೆಲ್ಲ ಆಗ್ತೀಯ, ಹುಶಾರಿಲ್ಲದಿದ್ರೆ ಡಾಕ್ಟರ್, ಡ್ರೆಸ್ ಸ್ಟಿಚ್ ಆಗಬೇಕಾ ?ಟೈಲರ್, ಡ್ರೆಸ್ ಸೆಲೆಕ್ಟ್ ಮಾಡುವಾಗೆಲ್ಲ ನೀ ನನ್ನ ಡಿಸೈನರ್, ಗಾರ್ಡೆನಿಂಗ್ ಅಂತ ಬಂದ್ರೆ ಪಿಎಚ್ಡಿ ಮಾಡಿದ್ದೂ ಸುಳ್ಳಲ್ಲ ಅನಿಸುತ್ತೆ, ಇನ್ನು ನಿನ್ನ ಕೈ ಅಡುಗೆಯ ಬಗ್ಗೆ ಏನು ಹೇಳಲಿ ನಾನು? ಅದೆಲ್ಲಿಂದ ಸಿಕ್ಕ ಒಳ್ಳೆಯ ಗೆಳತಿಯೋ ನೀನು.ಯಾರಿಗೋ ಕಾಂಪ್ಲಿಮೆಂಟ್ ಕೊಡ್ತೀವಿ, ಅದೆಷ್ಟು ಕಾಮೆಂಟ್ ಮಾಡ್ತೀವಿ , ಓವರ್ ಕಾಮೆಂಟ್ ಆದ್ರೆ ಕಿವಿ ಹಿಂಡಿ ತಿದ್ದುವವಳು  ನೀನು. ಒಮ್ಮೊಮ್ಮೆ ನಂಗೆ ಡೌಟ್ ಬರುತ್ತೆ ಅಮ್ಮ ನೀನಾ? ಅಥವಾ ನಾನಾ ? ಅಂತ. ಶಾಲೆಯಲ್ಲಿ, ಹೈ ಸ್ಕೂಲ್ ನಲ್ಲಿ , ಕಾಲೇಜ್ ನಲ್ಲಿ ಪ್ರತಿ ವಿಷಯಕ್ಕೂ ಬೇರೆ ಬೇರೆ ಶಿಕ್ಷಕರಿದ್ರು, ಆದ್ರೆ ಮನೆಯಲ್ಲಿ ಮಾತ್ರ ಕನ್ನಡದಿಂದ ಹಿಡಿದು ಸ್ಟ್ಯಾಟಿಸ್ಟಿಕ್ ವರೆಗೆ ನೀನೋಬ್ಳೆ ಟೀಚರ್. ಅಕಾಡೆಮಿಕ್ ಮಾತ್ರವಲ್ಲ ಜೀವನಕ್ಕೂ ನೀನೆ ಶಿಕ್ಷಕಿ.. ಈಗನಿಸುತ್ತೆ ಥತ್ ಆಗಲೇ ಗೊತ್ತಿದ್ರೆ ಏನಾಗ್ತೀಯ ಅಂತ ಕೇಳಿದವರಿಗೆಲ್ಲ " ಅಮ್ಮ "ನಾಗ್ತೀನಿ ಅಂದಿದ್ರೆ ಚೆನ್ನಾಗಿರೋದು ಅಂತಾ. ಇದು ನಿನ್ನೊಬ್ಬಳ ಕಥೆಯಲ್ಲ. ಎಲ್ಲರ ಅಮ್ಮಂದಿರ ಕಥೆ. ಎಲ್ಲರ ಅಮ್ಮಂದಿರೂ ಹೀಗೆ ಇರುತ್ತಾರೆ ಆಲ್ವಾ ? 

ನಂಗೊತ್ತು ನನಗೆ ನಿನ್ನ ಹೋಲಿಕೆ ಜಾಸ್ತಿ ಅಂತ. ಎಲ್ಲೇ ನಾನು ಹೋದರೂ  ಯಾರೋ ದೂರದ ಸಂಬಂಧಿಕರೋ ಅಥವಾ ಎಲ್ಲೋ ಕಂಡ ನಿನ್ನ ಹಳೆ ಕ್ಲಾಸ್ ಮೇಟ್ ಗಳೋ ನನ್ನ ಹತ್ತಿರ ನೀನು ಇವಳ   ಮಗಳಲ್ಲವೇನೆ? ನೋಡಿದ್ರೆ ಗೊತ್ತಾಗುತ್ತೆ  ಎನ್ನುವಾಗ ಎಷ್ಟು ಖುಷಿ ಗೊತ್ತ. ಹೈಸ್ಕೂಲ್ ನ ಮೊದಲ ದಿನವೇ ನನ್ನ ನೋಡಿದ ಶಿಕ್ಷಕರೋಬ್ಬರು  ನಾನು ನಿನ್ನ ಮಗಳೆಂದು ಗುರುತಿಸಿದಾಗಿನ ಖುಷಿಯನ್ನು ಓಡಿ ಬಂದು ನಿನಗೊಪ್ಪಿಸಿದ್ದೆ ನೆನಪಿದ್ಯಾ ? ಆಮೇಲೆ ಅಲ್ಲಿದ್ದ ಮೂರು ವರ್ಷಗಳೂ ಎಲ್ಲರೂ ನನ್ನನ್ನು  ನಿನ್ನ ಹೆಸರಿಂದಲೇ ನನ್ನ ಕರೆದರಲ್ಲ. ಎಷ್ಟು ಖುಷಿಯಿತ್ತು ಗೊತ್ತಾ. ಹೋಲಿಕೆ ನಿನ್ನದೇನೆ ಆದರೆ ನಿನ್ನಂತೆ ನಾನಾಗಲಾರೆ.  ನಿನ್ನ ಭೂಮಿಯಂಥ ತಾಳ್ಮೆ ನನಗೊಂದು ಮಣ್ಣ ಕಣದಷ್ಟು ಇಲ್ಲ... 

ನಿನ್ನದೇ ಹೋಲಿಕೆಯಿದೆ ರೂಪದಲ್ಲಿ.. 
ನಿನ್ನದೇ ರಕ್ತವಿದು ಹರಿಯುತ್ತಿದೆ ಧಮನಿಗಳಲ್ಲಿ... 
ನೀನೇ ಕೊಟ್ಟ ಜೀವಕಣಗಳಿವೆ ನನ್ನ ಉಸಿರಲ್ಲಿ.. 
ಆದರೂ ನಾ ನಿನ್ನಂತೆ ಅಲ್ಲ .. 
ನಿನ್ನಂತೆ ಆಗಬೇಕೆಂಬ ಹಂಬಲವೂ ಇಲ್ಲ .. 
ಆದರೆ ನೀ ನನ್ನ ಅಮ್ಮನೆಂಬ ಹೆಮ್ಮೆಯಿದೆ ನನಗೆ .. 

28 comments:

  1. ಅಮ್ಮನೇ ಹಾಗೆ ತಟ್ಟನೆ ವಿಶ್ವ ರೂಪವನ್ನು ತಳೆಯುವ ದೇವತೆ.
    ಆಕೆ ನೋವ ನುಂಗಿ ನಲಿವು ಹಂಚುವ ಜಗದ ಏಕೈಕ ಸಾಧನ.
    ಮನ ಮಿಡಿಯುವ ಬರಹ ಇದು.

    ReplyDelete
  2. Sandhya chanda bardye.... :) Ammangondu namana... :)

    ReplyDelete
  3. ಅತಿ ಸುಂದರ ಬರಹ.."ಅಮ್ಮ ನಿನ್ನ ಎದೆಯಾಳದಲ್ಲಿ" ಹಾಡು ನೆನಪಾಯ್ತು...."ನಿನ್ನ ಮಡಿಲಲ್ಲಿ ಮಲಗಿ ಬಿಕ್ಕಿ ಬಿಕ್ಕಿ ಅಳಬೇಕು ಎನಿಸುವಷ್ಟು ಒಂಟಿಯೆನಿಸುವಂತೆ ಮಾಡಿ ಬಿಡುತ್ತದೆ"...ಏನು ಅಂತ ಹೇಳಲಿ ಈ ಸಾಲಿಗೆ? ಭಾವುಕನಾಗಿ ಅಳುವುದೊಂದೇ ಬಾಕಿ...
    Really hats off to this article..Wonderful :)

    ReplyDelete
    Replies

    1. ಆದಿ ,
      ನಿಜವಾಗಲೂ ಈ ಊರು ಒಮ್ಮೊಮ್ಮೆ ಹಾಗನಿಸುವಂತೆ ಮಾಡುತ್ತೆ.

      ಧನ್ಯವಾದ ಬರಹ ಇಷ್ಟ ಪಟ್ಟಿದ್ದಕ್ಕೆ .. :)

      Delete
  4. ಹಿರಿಯರನ್ನು ಹೋಲುವಲ್ಲಿ ಹೆಮ್ಮೆ ಇದೆ. ಆದರೆ ಅವರಂತೆಯೇ ಆಗಬಾರದೆನ್ನುವ ಎಚ್ಚರಿಕೆ ಇದೆ. ಉತ್ತಮ ಲೇಖನ!

    ReplyDelete
  5. Ammana bagge.. nice one! nice feelings expressed!

    ReplyDelete
  6. ಸಂಧ್ಯಾ,

    ಬಹಳ ಖುಷಿ ಕೊಟ್ಟ ಲೇಖನ.

    ಅಮ್ಮನ ಬಗ್ಗೆ ಎಷ್ಟು ಬರೆದರೂ, ಹೇಗೆಲ್ಲ ಬರೆದರೂ ಕಡಿಮೆಯೇ. ಮತ್ತಷ್ಟು ಭಾವಗಳು, ವಿಷಯಗಳು ಉಳಿದುಹೋಗಿಬಿಡುತ್ತವೆ. ಅಪ್ಪ ಮಗಳ ಮೊದಲ ಹೀರೋ ಆಗಬಹುದು, ಆಗದೇನೂ ಇರಬಹುದು. ಆದರೆ ಅಮ್ಮ ಮಾತ್ರ ತನ್ನೆಲ್ಲಾ ಮಕ್ಕಳ ಮೊದಲ ಹೀರೋಯಿನ್. ಮನಸ್ಸಿಗೆ ಹಿಡಿ(ಸಿ)ದ ಲೇಖನ.

    ಬರೀತಿರಿ.

    ReplyDelete
  7. ಅಣ್ಣಾವ್ರ ಎಲ್ಲಾ ಚಿತ್ರಗಳಲ್ಲೂ (ಸರಿ ಸುಮಾರು) ತಾಯಿಗೆ ಪ್ರಾಶಸ್ತ್ಯ.. ನಿಜಜೀವನದಲ್ಲಿ ಅವರು ಕಲಿತದ್ದು ಅಪ್ಪನಿಂದ ಹೆಚ್ಚು.. ಆದರೆ ಅಪ್ಪನ ಪಾತ್ರದಲ್ಲಿ ಅಮ್ಮನ ಮಮತೆಯ ಪಾಲು ಇರುತ್ತದೆ ಎನ್ನುವುದು ಅಣ್ಣಾವ್ರ ಚಿತ್ರಗಳಲ್ಲಿ ತಾಯಿ ಪಾತ್ರಕ್ಕೆ ಕೊಡುವ ಒಟ್ಟು ನೀಡುವುದನ್ನು ನೋಡಿದರೆ ಅರಿವಾಗುತ್ತದೆ.. ನೀನು ಹೇಳಿದ ಪ್ರತಿಯೊಂದು ಪದವು ಬೆಲೆಕಟ್ಟಲಾಗದ ಅಮ್ಮನ ಮಡಿಲಿಗೆ ಹಾಕುವ ಅನರ್ಘ್ಯ ಮುತ್ತು ರತ್ನಗಳೇ... ಸೂಪರ್ ಎಸ್ ಪಿ.. ದೇವರ ಪ್ರತಿನಿಧಿಯಾದ.. ದೇವರೇ ಪ್ರತಿನಿಧಿಗೆ ಹಂಬಲಿಸುವ ಅಮ್ಮನ ಪಾತ್ರಕ್ಕೆ.. ನಿನ್ನ ಅಮ್ಮನಿಗೆ ಬರೆದಿರುವ ಪ್ರತಿ ಅಕ್ಷರಕ್ಕೂ ನನ್ನ ನಮನಗಳು.. ಹಾಗೆ ನನಗೆ ಮುದ್ದಾದ ಒಂದು ಪುಟ್ಟ ತಂಗಿಯನ್ನು ನೀಡಿದ ಆ ಮಾತೆಗೆ ಹುಟ್ಟು ಹಬ್ಬದ ಶುಭಾಶಯಗಳು ನನ್ನ ಕಡೆಯಿಂದ

    ReplyDelete
    Replies
    1. ಧನ್ಯವಾದ ಅಣ್ಣಾ ..

      ಅಮ್ಮನಿಗೆ ಶುಭಾಷಯ ತಲುಪಿದೆ

      Delete
  8. ಚಂದಾ ಚಂದ ಈ ಭಾವ ಬರಹ .
    ಅಮ್ಮನಿಗೆ ತಡವಾಗಿ ನನ್ನ ಕಡೆಯಿಂದಲೂ ಜನುಮ ದಿನದ ಪ್ರೀತಿಯ ಶುಭಾಶಯಗಳು ಸಂಧ್ಯಕ್ಕಾ .
    ಅಮ್ಮನ ಮಡಿಲ ಬೆಚ್ಚಗಿನ ನೆನಪುಗಳ ಜೊತೆ ವಾಪಸ್ಸಾದಾಗಲೇ ಹೀಗೊಂದು ಭಾವ ಬರಹವ ನಿರೀಕ್ಷಿಸಿದ್ದೆ ನಾ.
    ನಿಜ ..ಎಲ್ಲಾ ಅಮ್ಮಂದಿರೂ ಹೀಗೇ ಅಲ್ವಾ .
    ಇಷ್ಟವಾಯ್ತೇ ಮುದ್ದಕ್ಕಾ :)

    ReplyDelete
  9. ಅಮ್ಮನ ಬಗ್ಗೆ ಇಷ್ಟೆಲ್ಲಾ ಚೆನ್ನಾಗಿ ನಮ್ಮ ಹೃದಯದ ಮಾತನ್ನು ಹೇಳಬಹುದೇ ? ಎನ್ನುವ ಪ್ರಶ್ನೆಗೆ ಉತ್ತರ , ಹಾಗಿದ್ರೆ ಸಂಧ್ಯಾ ಪುಟ್ಟಿ ಬರೆದಿರುವ ಈ ಲೇಖನ ಓದಿ ಎಂಬುದೇ ಆಗಿದೆ. ಅದಕ್ಕೆ ಸಾಕ್ಷಿಯಾಗಿ ನಿನ್ನ ಈ ಕೆಳಗಿನ ಚಿನ್ನದಂತಹ ಮಾತುಗಳೇ ನಿಂತಿವೆ

    ನಿನ್ನದೇ ಹೋಲಿಕೆಯಿದೆ ರೂಪದಲ್ಲಿ..
    ನಿನ್ನದೇ ರಕ್ತವಿದು ಹರಿಯುತ್ತಿದೆ ಧಮನಿಗಳಲ್ಲಿ...
    ನೀನೇ ಕೊಟ್ಟ ಜೀವಕಣಗಳಿವೆ ನನ್ನ ಉಸಿರಲ್ಲಿ..
    ಆದರೂ ನಾ ನಿನ್ನಂತೆ ಅಲ್ಲ ..
    ನಿನ್ನಂತೆ ಆಗಬೇಕೆಂಬ ಹಂಬಲವೂ ಇಲ್ಲ ..
    ಆದರೆ ನೀ ನನ್ನ ಅಮ್ಮನೆಂಬ ಹೆಮ್ಮೆಯಿದೆ ನನಗೆ .

    ಹ ಹೌದಲ್ವಾ ಅಮ್ಮನ ಮಗಳ ಮಾತು ಎಂದಿಗೂ ಸುಳ್ಳಾಗದು

    ReplyDelete
  10. ammana bagege eshtu chanda bareedye sandyakkaa......

    ReplyDelete
  11. ಅಮ್ಮನೆಂದರೆ ಹಾಗೆ ಅಲ್ವಾ... ಆ ಕೊನೆಯ ಸಾಲುಗಳು ತಡೆದು ಕ್ಷಣ ನಿಲ್ಲಿಸಿ ಬಿಟ್ಟಿತು ನನ್ನನ್ನು.. ಅಮ್ಮನಿಗೆ ತೋರಿಸು ಒಮ್ಮೆ ಇದನ್ನು ಅಮ್ಮ ಮಗುವಾಗುವುದ ನೋಡು... ಚಂದ ಮತ್ತು ಚಂದದ ಲೇಖನ ಮೈ ಡಿಯರ್....

    ReplyDelete
    Replies
    1. ಸುಷ್ಮಾ ,
      ಇದನ್ನ ಅಮ್ಮನಿಗೆ ತೋರಿಸಿ ಅವಳ ಮಡಿಲ ಮಗುವಾಗಿ .. ಕಿವಿಹಿಂಡಿಸಿಕೊಂಡಿದ್ದೂ ಆಯ್ತು ಕಣೆ ..

      Delete
  12. ಅಮ್ಮನೆಂದರೆ ಹಾಗೆನೇ ಆಮ್ಮನ ಬಗ್ಗೆ ಎಷ್ಟು ಬರೆದರೂ ಸಾಲದು ಎಷ್ಟು ಓದಿದರೂ ಸಾಲದು. ನಿಮ್ಮ ಬರಹ ನನಗೆ ತುಂಬಾ ಇಷ್ಟವಾಯಿತು.

    ReplyDelete
  13. ಚೆಂದದ ಬರಹ ಸಂಧ್ಯಾ.. ಇಷ್ಟ ಆಯಿತು.. :)

    ReplyDelete
  14. ಅಮ್ಮನ ಮಗಳ ಮಮ್ಮಲ ಪ್ರೀತಿಯ ಗುನುಗುನು...ಬಹಳ ಸುಂದರವಾಗಿದೆ...ಮನದಾಳದ ಮಾತಿಗೆ ಸರಳ ಮನಮುಟ್ಟುವ ಪದಗಳ ಸಾಲು... ಇಷ್ಟ ಆಯ್ತು ಪುಟ್ಟು... ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...ಎಷ್ಟೇ ನಾವು ಬೆಳೆದರೂ ಅಮ್ಮನಿಗೆ ಕಂದನೇ....

    ReplyDelete
  15. `` ಯಾವ ಖುಷಿಯ ತುದಿಯಲ್ಲಿದ್ದರೂ ಹೇಳಿಕೊಳ್ಳಲು ನೀನೇ ಬೇಕಿರುತ್ತದೆ.
    ಆದರೆ ನೀ ದೂರ ದೂರ. `` ತುಂಭಾ ಇಷ್ಟ ಈ ಸಾಲು.ಒಟ್ಟಾರೆ ತುಂಭಾ ಆಪ್ತ ಬರಹ.

    ReplyDelete