Monday 25 August 2014

ಕಿಟಕಿಯ ಪಕ್ಕ ಕುಳಿತು ಕನಸು ನೇಯುವ ತವಕ ....




"ಏನೇ ಒಳ್ಳೆ ಕಾಲು ಸುಟ್ಟ ಬೆಕ್ಕಿನ ಥರ ಆ ಕಡೆಯಿಂದ ಈ ಕಡೆ .. ಈ ಕಡೆಯಿಂದ ಆ ಕಡೆ ಓಡಾಡ್ತಾ ಇದ್ದೀಯ ?" ಅಂತ ಅಣ್ಣ ಕೇಳಿದಾಗ " ಕೀರ್ತಿ ಗೆ ಮದ್ವೆ ಮಾಡ್ತಾರಂತೆ ಕಣೋ " ಅನ್ನೋ ಮಾತು ಅನಾಯಾಸವಾಗಿ ಬಾಯಿಂದ ಹೊರಬಂದಿತ್ತು . "ಅಯ್ಯೋ ಹಳ್ಳಕ್ಕೆ ಬೀಳೋನು ಅವನು.. ಹುಡುಕೋ ಕಷ್ಟ ಅವನ ಮನೆಯವರಿಗೆ .. ನಿಂದೇನು ಗಂಟು ಹೋಗೋದು ?" ಎಂದು ಅಣ್ಣ ಹುಬ್ಬು ಹಾರಿಸಿದಾಗ ಛೇ ನನ್ನ ಮಾತಲ್ಲಿನ ಅಸಹನೆ ಸ್ವಲ್ಪನಾದ್ರು ಇವನಿಗೆ ಗೊತ್ತಾಗಿದ್ರೆ ನನ್ನ ಮನಸ್ಸು ತಿಳಿಯುತ್ತಿತ್ತೇನೋ ಅನಿಸಿತ್ತು . "ಏನಿಲ್ಲಾ ಬಿಡು " ಅಂತ ಹೇಳಿ ರೂಮ್ ಗೆ ಬಂದೆ. ಯಾರದೋ ದೂರದ ಸಂಬಂಧಿಗಳ ಮದುವೆಯಲ್ಲಿ ಬಹಳ ಹತ್ತಿರದವನಾಗಿ ಪರಿಚಯ ಆದವನು ನೀನು. ಅದೇನೋ ಯಾರನ್ನು ಪರಿಚಯ ಮಾಡಿಕೊಂಡರೂ ಅನಾಯಾಸವಾಗಿ "ಅಣ್ಣ " ಎಂದು ಬಾಯಿಗೆ ಬರುತ್ತಿದ್ದ ಪದವೊಂದು ನಿನ್ನ ಪರಿಚಯವಾದಾಗ ಜಪ್ಪಯ್ಯ ಅಂದರೂ ಬರಲಿಲ್ಲ ..!!


ಪಯಣದಿಂದಲೇ ಪರಿಚಯ ಗಾಢವಾಗಿದ್ದು . ಅವತ್ತು ಹೆಸರಿಡದೆ ಶುರುವಾದ ನಿನ್ನೊಂದಿಗಿನ ಪಯಣವನ್ನು journey of love ಅಂತ ಹೇಳಲಾ ? journey of life ಅಂತ ಹೇಳಲಾ ? ಅಂತ ಇವತ್ತು confusion ನಲ್ಲಿ ಇದ್ದೀನಿ . ಅದ್ಯಾವುದೋ ಗುಡ್ಡದ ದೇವರ ಪೂಜೆಗೆ ಹೋಗಿ ವಾಪಸ್ ಬರುವಾಗ ನಿನ್ನೊಂದಿಗೆ ಬೈಕ್ ನಲ್ಲಿ ಬರುವಂತಾಗಿತ್ತು . ಒಂದೇ ದಿನದ ಒಡನಾಟದಲ್ಲಿ ಅಷ್ಟು ಪರಿಚಿತನಲ್ಲದ ನಿನಗಿಂತ ಅಣ್ಣ ನ ಜೊತೆ ಹೋಗುವುದೇ ಹಿತ ಎನಿಸಿ ಅಣ್ಣನೆಡೆಗೆ ನೋಡಿದರೆ ಮಾವನ ಮಗಳು ಪಲ್ಲವಿ ಆಗಲೇ ಅಣ್ಣನ ಬೈಕ್ ಏರಿಯಾಗಿತ್ತು . ಒಲ್ಲದ ಮನಸ್ಸಿನಿಂದಲೇ ನಿನ್ನ ಬೈಕ್ ನಲ್ಲಿ ಕುಳಿತಿದ್ದೆ . ಡೆಸ್ಟಿನೇಷನ್ ದೂರದ್ದಾದಾಗ ಮಾತಿರದ ಪಯಣ ಎಷ್ಟು ಹೊತ್ತು ? ಮೌನ ಪೊರೆ ಕಳಚಿ ಮಾತಿಗೆ ಜಾಗ ಕೊಟ್ಟಿತ್ತು. ಸದ್ದಿಲ್ಲದ ಆ ಕಾಡಿನ ಪರಿಸರದಲ್ಲಿ ನನ್ನದೊಂದೇ ಗದ್ದಲವೇನೋ ಎಂಬಂತೆ ಸಾವಿರ ಪ್ರಶ್ನೆಗಳನ್ನು ಕೇಳಿದ್ದೆ ನಿನ್ನ ಬಳಿ . ಎಲ್ಲದಕ್ಕೂ ತಾಳ್ಮೆಯಿಂದ ಉತ್ತರಿಸಿದ್ದೆ ನೀನು. ದಾರಿ ಮಧ್ಯದಲ್ಲಿ ಅದೆಲ್ಲೋ ಕವಲು ದಾರಿಯಲ್ಲಿ ನಿಲ್ಲಿಸಿ , "ಇಲ್ಲಿಂದ ಎಂಟು ಕಿಲೋಮೀಟರ್ ಹೋದರೆ ಡೆಡ್ ಎಂಡ್ ಲ್ಲಿ ನಮ್ಮನೆ ಇರೋದು" ಅಂತ ಮೈ ಮುರಿಯುತ್ತಾ ಹೇಳಿದಾಗ , ಬೈಕ್ ಲ್ಲಿ ಕೂತು ಬೋರಾದ ನನಗೂ ಇನ್ನೂ ಅಷ್ಟು ದೂರವಾ ?ಅನಿಸಿದ್ದು ಸುಳ್ಳಲ್ಲ . ಈ ನಡುವೆ ನನ್ನ ತೋಳುಗಳು ನಿನ್ನ ಕೊರಳು ಬಳಸಿದ್ದು , ಗಲ್ಲಕ್ಕೆ ನಿನ್ನ ಹೆಗಲು ಆಸರೆಯಾಗಿದ್ದು , ಹಾರಾಡುವ ಕೂದಲುಗಳು ಕೆನ್ನೆಯೊಂದಿಗೆ ಕಚಗುಳಿಯ ಆಟವಾಡಿದ್ದು ಯಾವ ಮಾಯದಲ್ಲಿ ನಡೆದಿತ್ತೋ ಗೊತ್ತಾಗಿರಲೇ ಇಲ್ಲ . ಬೈಕ್ ನಿಮ್ಮನೆ ಮುಂದೆ ನಿಂತಾಗ ಇಳಿದು ಮತ್ತೆ ಮದುವೆ ಮನೆ ಗದ್ದಲದಲ್ಲಿ ಸೇರಿ ಹೋಗುವಾಗ ಮಾತ್ರ ಡೆಡ್ ಎಂಡ್ ಗೆ ಬಂದು ನಿಂತ ಈ  ಪಯಣ, ಇಲ್ಲಿಂದಲೇ ಶುರುವಾಗಿ ಕಾಡಿನ ದಾರಿಗಳಲ್ಲಿ , ಕವಲುಗಳಲ್ಲಿ , ಆ ಹಾವಿನ ತಿರುವುಗಳಲ್ಲಿ ನಾವಿಬ್ಬರೂ ಕಳೆದು ಹೋಗಬೇಕಿತ್ತು ಅನಿಸಿದ್ದು ಸುಳ್ಳಲ್ಲ. ಏಕಾಂತ ಬೇಕಿತ್ತು ಮನಸ್ಸಿಗೆ ಈಗ , ಮೌನದ ಪೋರೆಯಲ್ಲಿ ಮತ್ತೆ ಸೇರಲು ಹವಣಿಸುತ್ತಿತ್ತು ಮನಸ್ಸು. ಅದರೂ ನಾವಿಬ್ಬರೂ ಗದ್ದಲದ ಸಂತೆಯಲ್ಲಿ ಕಳೆದುಹೋದೆವು .


ಪರಿಚಯದ ಹತ್ತು ತಿಂಗಳಲ್ಲಿ ಅದದೇ ಭಾವಗಳು ಮತ್ತೆ ಮತ್ತೆ ಕಾಡುವಾಗ ಇದಕ್ಕೆ ಪ್ರೀತಿಯಲ್ಲದೇ ಬೇರೇನು ಹೆಸರಿಡಲಿ ? " ಅಮ್ಮಾ ಕೀರ್ತಿ ಇದಾನಲ್ಲ " ಅಂತಾ ಶುರು ಮಾಡೋ ಹೊತ್ತಿಗೆ ಅಮ್ಮ " ಅದೇನೇ ಕೀರ್ತಿ ಅಂದ್ಕೊಂಡು ಕೀರ್ತಿ ಅಣ್ಣ ಅಂತ ಹೇಳೋಕೆ ಏನ್ ದೊಡ್ಡ ರೋಗ ನಿಂಗೆ ? "ಅಂತ ಕೇಳಿದರೆ  ಸಿಟ್ಟು ಬರುತ್ತೆ . ಇಷ್ಟೆಲ್ಲಾ ಕೇಳೋ ಅಮ್ಮನ ಕಣ್ಣಲ್ಲಿ ಒಂದು ಅನುಮಾನದ ಎಳೆ ಮೂಡಬಾರದ ? ನನ್ನನ್ನು ಕೇಳಬಾರದಾ ಅನಿಸುತ್ತೆ . ಅವಳಾಗೇ ಕೇಳಿದರೆ ಕೋಲೆ ಬಸವನ ಥರ ತಲೆ ಆಡಿಸುವುದೇ ಸುಲಭ , ತಡವರಿಸುತ್ತಾ ಮಾತುಗಳ ಪೋಣಿಸುವ ಬದಲು . ಅದಕ್ಕೆ ನಿನ್ನ ಕಾಗದ ಬಂದರೆ ಇನ್ನಿಲ್ಲದಂತೆ ಸಂಭ್ರಮಿಸುತ್ತೇನೆ . ಆದರೂ "ನಾನೇಕೆ ಹೀಗೆ?" ಅನ್ನೋ ಅನುಮಾನದ ಭೂತ ಮನೆಯಲ್ಲಿ ಯಾರ ಕಣ್ಣಲ್ಲೂ ಪ್ರತಿಫಲಿಸಲ್ಲ ಹಾಳಾದ್ದು . ನೀನೋ ಅಷ್ಟುದ್ದ ಪತ್ರವನ್ನು ಹಾಲ್ ಎಂಬೋ ಸಂತೆಯಲ್ಲಿ ಕೂತು ಓದುವಂತೆ ಬರೆದಿರುತ್ತೀಯ ವಿನಃ ರೂಮ್ ಎಂಬ ನನ್ನದೇ ಲೋಕದಲ್ಲಿ ಕದವಿಕ್ಕಿಕೊಂಡು ಕಿಟಕಿಯ ಪಕ್ಕ ಕುಳಿತು ಕನಸು ನೇಯುವಂತಹ ನಾಲ್ಕು ಸಾಲುಗಳನ್ನೂ ಬರೆಯುವುದಿಲ್ಲ ..


ನಿನಗೆ ರಾಖಿ ಕಳಿಸು ಅಂದ ಅಮ್ಮನಿಗೆ ಇನ್ನಿಲ್ಲದಂತೆ ನೆಪ ಹೇಳಿ ತಪ್ಪಿಸಿಕೊಂಡಿದ್ದೇನೆ . ರಕ್ಷಾ ಬಂಧನದ ಬದಲು ಭಾವ ಬಂಧನದ ಬಗೆಗೆ ಈ ನಾಲ್ಕು ಸಾಲುಗಳನ್ನು ನಿನಗಾಗಿ ಬರೆದೆ. ರಾಖಿ ಹಬ್ಬವಾಗಿ ವಾರದೊಳಗಾಗಿ ಈ ಪತ್ರ ಕೈ ಸೇರಿದಾಗ ಅಲ್ಲಿ ನಿನ್ನೆದೆಯಲ್ಲೆಲ್ಲೋ "ಒಳಗಡೆ ರಾಖಿಯಿರಬಹುದಾ ?" ಅಂತ ಒಂದು ಸಣ್ಣ ತಲ್ಲಣವಾದರೂ ಇಲ್ಲಿ ನನ್ನೆದೆ ಗೂಡೊಳಗೆ ಖುಷಿಯ ಕಲರವ...


ನಿನ್ನಿಂದ ಬರಬಹುದಾದ ಕಿಟಕಿಯ ಪಕ್ಕ ಕುಳಿತು ಕನಸು ನೇಯುವಂಥಹ ನಾಲ್ಕು ಸಾಲುಗಳ ನಿರೀಕ್ಷೆಯಲ್ಲಿ ...