Tuesday, 26 September 2017

ಪಾರೋತಿ


"ಏನು ಪುಟ್ಟಮ್ಮ ಇಲ್ಲಿ ಕುಳಿತಿದ್ದೀರಿ, ಮಳೆ ನೋಡುಕಾ" ಎನ್ನುತ್ತಾ ಸುಟ್ಟ ಹಲಸಿನ ಹಪ್ಪಳ ಹಿಡಿದು ಪಾರೋತಿ  ಬಾಲ್ಕನಿಗೆ ಬಂದಾಗ ನಾ ಮಳೆ ದಿಟ್ಟಿಸುತ್ತಿದ್ದೆ. 

"ಕುಳಿತು ನೋಡುವಂಥ ಒಂದೇ ಒಂದು ಮಳೆ ಬರಲಿಲ್ಲ ನೋಡು" ಎಂದೆ. 

"ಮಳೆ ಏನು ನೋಡುದು, ಮಕಾ ಮುಸುಡಿ ಇಲ್ಲದೇ ಸುರಿತದೆ. ಅದ್ರಾಗ್ ಏನ್ ಚಂದವೋ ನಾ ಕಾಣೆ" ಎಂದಳು. 

ಹಾಗಲ್ವೆ ಮಳೆ ಅಂದ್ರೆ ಖುಷಿ ಅಲ್ವೇನೆ . ಈಗ ನಂಗೆ ನೋಡು ಮಳೆ ಅಂದ್ರೆ ಎಷ್ಟೆಲ್ಲ ನೆನಪು ಬರುತ್ತೆ ಗೊತ್ತಾ?    ಅಂದೆ . ಮಳೆ ಎಂದರೆ ಪ್ರಾಣ ಬಿಡುವ ನಾನು ಅವಳುತ್ತರಕ್ಕೂ ಕಾಯದೇ ನೆನಪಿಗೆ ಜಾರಿ ಬಿಟ್ಟೆ. 

ಅಪ್ಪ ಅಮ್ಮನಿಂದ ದೂರವಿರುತ್ತಿದ್ದ ನನಗೆ ಕೆಲವೊಮ್ಮೆ ಒಂಟಿತನ ಕಾಡುತ್ತಿತ್ತು‌. ಆಗೆಲ್ಲ ಕಿಟಕಿಯ ಪಕ್ಕ ಕುಳಿತು ಆಗಸ ನೋಡುತ್ತಿದ್ದೆ. ಆಗಿಂದಲೇ ನನಗೆ ಮಳೆ ಆತ್ಮೀಯವಾಗಿದ್ದು. ಉದ್ದ ಜಡೆ ಜೋರು ಮಳೆಗೆ ಒದ್ದೆಯಾದಾಗೆಲ್ಲ ಹೊಡಸಲ ಬೆಂಕಿಯಲ್ಲಿ  ಕೂದಲು ಒಣಗಿಸೋ ಸಂಭ್ರಮ.ಆಗೆಲ್ಲ ಕೂದಲಿಗೆ ಬೆಂಕಿಕಿಡಿ ತಾಗದಂತೆ ಅಜ್ಜಿ ಪಕ್ಕದಲ್ಲಿ ಕುಳಿತುಕೊಂಡು ನೋಡಿಕೊಳ್ಳುತ್ತಿದ್ದಳು. ಸಂಜೆಯಾದರೆ ಸುಟ್ಟ ಹಲಸಿನ ಹಪ್ಪಳದ ಜೊತೆ ಅದೇ ಹೊಡಸಲ ಮುಂದೆ ಕುಳಿತು ಅದೇಷ್ಟು ಭೂತ, ವರ್ತಮಾನದ ಕತೆಗಳಿಗೆ ಕಿವಿಯಾಗುತ್ತಿದ್ದೆವು ಗೊತ್ತಾ.? ಹುಟ್ಟಿದ ಭವಿಷ್ಯದ ಕನಸುಗಳೆಷ್ಟೋ.. ಅದೇ ಬೆಂಕಿಯಲ್ಲಿ ಕರಗಿದವಕ್ಕೂ ಲೆಕ್ಕವಿಲ್ಲ ಬಿಡು. ನೆನಪುಗಳು ಮತ್ತಷ್ಟು ಮತ್ತಷ್ಟುಮುತ್ತಿಕೊಳ್ಳುವ ಮೊದಲೇ  ನನ್ನದೇ ಲಹರಿಯಲ್ಲಿ  ಅವಳಸ್ತಿತ್ವವನ್ನೂ ಮರೆತು ಮಾತನಾಡುತ್ತಿದ್ದವಳು ಪಕ್ಕನೆ ತಿರುಗಿ ನಿಂಗೇನೂ ನೆನಪುಗಳಿಲ್ಲವ  ನಿಮ್ಮೂರ ಮಳೆ ಜೊತೆ? ಎಂದು ಕೇಳಿದೆ. 

"ಏನು ನೆನಪಾಗಬೇಕು ಹೇಳಿ. ಮಳೆ ಬಂದರೆ ತುಂಬಿ ಹರಿಯೋ ತುಂಗೆ. ಮನೆ ಸುತ್ತೆಲ್ಲ ನೀರು ತುಂಬಿ ದ್ವೀಪವಾಗಿಬಿಡ್ತಿತ್ತು.  ಅದ್ ಬಿಟ್ರೆ ತುಂಗೆಯಲ್ಲಿ ಕೊಚ್ಚಿ ಹೋದ ಅಪ್ಪ ಅಮ್ಮ. ಕೊನೆಯ ಸಾರಿ ಎಂಬಂತೆ ದಡಕ್ಕೆಳೆಯಲು ಪ್ರಯತ್ನಿಸಿದಾಗ ಸಿಕ್ಕ ಅಮ್ಮನ ಸೀರೆ" ಎಂದಳು. ಧ್ವನಿಯಲ್ಲಿ ಸ್ವಲ್ಪವೂ ಏರಿಳಿತವಿರಲಿಲ್ಲ !

 ನನಗೆ ಪಿಚ್ಚೆನಿಸಿ ಮಾತು ಬದಲಾಯಿಸಲು "ಈ ಊರಿನ ಮಳೆ ಜೊತೆ ? " ಎಂದು ಕೇಳಿಬಿಟ್ಟೆ. 

"ಅವ ಸಿಕ್ಕಿದ್ದು ಇಂಥದ್ದೇ ಒಂದು ಮಳೆಗಾಲದಲ್ಲಿ.. ಅವ ನನ್ನ ತೊರೆದು ತೋದದ್ದೂ ಇಂಥದೇ ಮಳೆಗಾಲದಲ್ಲೇ " ಎಂದು ಖಾಲಿಯಾದ ಬಟ್ಟಲ ತೆಗೆದುಕೊಂಡು ಸರಸರನೆ ಮೆಟ್ಟಿಲಿಳಿದು ಹೋದಳು. ಅವಳ ಮುಖವನ್ನೊಮ್ಮೆ ಓದಬೇಕೆಂದುಕೊಂಡವಳಿಗೆ ಮಬ್ಬು ಬೆಳಕಲ್ಲಿ ಕಂಡಿದ್ದು ಅವಳ ಬೆನ್ನ ಮೇಲಿದ್ದ ಬರೆ.. ಮನಸ್ಸೀಗ ಮಳೆ ತೋಯಿಸಿದ ಕೆರೆಯಾಗಿತ್ತು. ಪಾರೋತಿ ತುಂಬಿಕೊಂಡಿದ್ದಳು. 

ಈ ಪಾರೋತಿ ಶೃಂಗೇರಿ ಕಡೆಯವಳು. ಇಲ್ಲಿನ ಶಂಕ್ರನನ್ನು ಮದುವೆಯಾಗಿ ಈ ಊರಿಗೆ ಬಂದವಳು ಇಲ್ಲಿನ ನಡೆ ನುಡಿಯನ್ನೂ ಅದೆಷ್ಟು ಬೇಗ ಕಲಿತಿದ್ದಳೆಂದರೆ ನಮ್ಮೂರಿನ ಮಗಳೇ ಆಗಿಬಿಟ್ಟಿದ್ದಾಳೆ.  ಸ್ವಂತ ಜಮೀನಿನಲ್ಲಿ ಬೆಳೆ ತೆಗೆಯುತ್ತಾ, ಅವರಿವರ ಮನೆ ಕೊಟ್ಟೆ ಕೊನೆ,ಮದ್ದು ಮಾಡುತ್ತಾ, ಜೇನು ಕೀಳುತ್ತಾ ಇದ್ದೊಂದು ಅಜ್ಜಿ ಯನ್ನೂ ಹೆಂಡತಿಯನ್ನೂ ನೆಮ್ಮದಿಯಿಂದ ಸಾಕುತ್ತಾ ನಾಲ್ಕು ಜನ ಮೆಚ್ಚುವಂತೆ ಸಂಸಾರ ಮಾಡುತ್ತಿದ್ದ ಶಂಕ್ರ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ.ತಿಂಗಳುಗಳು ಕಳೆದರೂ ಶಂಕ್ರ ಪತ್ತೆಯಾಗದಿದ್ದಾಗ, ಅವರಿವರ ಕಾಡಿಬೇಡಿ ಒಂದು ಹೊಲಿಗೆ ಅಂಗಡಿ ಹಾಕಿಸಿಕೊಂಡು, ಸಂಸಾರವನ್ನು ತನ್ನ ಹೆಗಲಿಗೆ ತೆಗೆದುಕೊಂಡಿದ್ದಳು. ಆದರೆ ಆ ಅಜ್ಜಿ ಅದೊಂದು ದಿನ ನನ್ನ ಕನಸಲ್ಲಿ ಮೊಮ್ಮಗ ಕಂಡಿದ್ದ, ಅವನು ಬದುಕಿಲ್ಲ, ನೀ ಮುತ್ತೈದೆಯಾಗಿರಬಾರದು ಎಂದು ಯಾರು ಹೇಳಿದರೂ ಕೇಳದೆ ಪಾರೋತಿಯ ಕುಂಕುಮ, ಬಳೆ, ಹೂವುಗಳ ತೆಗೆಸಿಬಿಟ್ಟಳು. ಅವಳ ಕಣ್ಣಿಗೆ ಕಾಣದಂತೆ ಒಂದೆರಡುಬಾರಿ ಸಿಂಗರಿಸಿಕೊಂಡಿದ್ದು ಗೊತ್ತಾಗಿ ಮುದುಕಿ ಇವಳ ಬೆನ್ನಿಗೆ ಬರೆ ಎಳೆದಿದ್ದಳು.  ನಾನೊಮ್ಮೆ ಇವಳನ್ನು ಕೇಳಿದ್ದೆ "ಅಜ್ಜಿ ಹೇಳಿದ್ದು ನಿನಗೂ ನಿಜ ಅನಿಸುತ್ತಾ ?"ಅದಕ್ಕವಳು "ಇಲ್ಲ ಅದ್ರೆ ಅವಳನ್ನು ಖುಷಿಯಿಂದ ಇಡಬೇಕು ನೀನು ಅಂತ ಶಂಕ್ರ ಮಾತು ತಗಂಡಾನೆ. ಪುಟ್ಟಮ್ಮ ನಂಗೆ ನಿಮ್ ಥರ ಪ್ರೀತಿ ಪ್ರೇಮ ಅಂತ ದೊಡ್ಡ ದೊಡ್ಡ ಮಾತೆಲ್ಲ ಆಡಾಕೆ ಬರುದಿಲ್ಲ. ಆದ್ರೆ ಮದ್ವೆ ಆದ ಸುರುವಲ್ಲಿ ಶಂಕ್ರ ನಂಗೆ ನಿಮ್ಮನೆ ಟೆರ್ರೆಸ್ ಮೇಲೆ ಕುಂತು ನಕ್ಷತ್ರ ನೋಡುದು ಕಲ್ಸಿಕೊಟ್ಟಿದ್ದ. ಈಗಲೂ ಬೇಸರ ಆದಾಗೆಲ್ಲ ನಕ್ಷತ್ರ ನೋಡ್ತೆ. ಆಗೆಲ್ಲ  ನಂಗೆ ಅಲ್ಲೆಲ್ಲೋ ಶಂಕ್ರನೂ ನನ್ಹಾಂಗೆ ಇದೇ ನಕ್ಷತ್ರ ನೋಡ್ತಿದ್ದಾ ಈಗ ಅನ್ನಿಸ್ತದೆ. ನಂಗೆ ಹಾಂಗೆ ಅನ್ನಿಸ್ದೆ ಇದ್ದ ದಿನ ನಾನು ಅಜ್ಜಿ ಹೇಳಿದ್ದನ್ನ ಒಪ್ಪಿಕೊಳ್ತೀನಿ. ಅಲ್ಲಿವರೆಗೂ ಅವಳ ಸಮಾಧಾನಕ್ಕೆ ಇದೆಲ್ಲ. ಮನಸಲ್ಲಿ ನಾ ಇನ್ನೂ ಮುತ್ತೈದೆನೆಯಾ" ಎಂದಿದ್ದಳು."ಇಂದೋ ನಾಳೆ ಉದರೋ ಆ ಮುದುಕಿಗಾಗಿ ಗೇಯೋ ಬದಲು ಆ ಪುಟ್ಟಣ್ಣನ ಕಟ್ಟಿಕೊಂಡು ಚಂದ ಸಂಸಾರ ಮಾಡಬಹುದಿತ್ತು"  ಎಂದು ಅತ್ತೆ  ಆಗಾಗ ಇವಳ ನೋಡಿ ಹಲುಬುತ್ತಾರೆ.  ಪಾರೋತಿ ಮಾತ್ರ ನಿರ್ಲಿಪ್ತೆ. ಪಾರೋತಿಯ ಮಾತುಗಳ ನೆನಪಾಗಿ "ಭೂರಮೆ ಕಾಯುತ್ತಿದ್ದಾಳೆ ಬಾರೋ ಮಳೆರಾಯ" ಎಂದು ಆಗಸವನ್ನು ಬೇಡಿಕೊಂಡು ಒಳಬಂದೆ.

ಬೇಡಿಕೊಂಡಿದ್ದೇ ನಿಜವಾಗುವಂತೆ ಮಳೆ ಭಯಂಕರವಾಗಿ ಶುರುವಾಗಿತ್ತು. ಗುಡುಗು, ಮಿಂಚು , ಸಿಡಿಲ ಅಬ್ಬರಕ್ಕೆ ಮಳೆ ಬೇಕೆಂದವಳೂ ಕೂಡ ಭಯಗೊಂಡಿದ್ದೆ. ಅತ್ತೆ ಬಂದು ನನ್ನ ಪಕ್ಕದಲ್ಲೆ ಮಲಗಿದ್ದರು. 

ಬೆಳಿಗ್ಗೆ ಏಳೋ ಹೊತ್ತಿಗೆ ಮಳೆಯ ಆರ್ಭಟ ಕಡಿಮೆಯಾಗಿದ್ದರೂ ಅನಾಹುತಕ್ಕೇನೂ ಕಡಿಮೆಯಿರಲಿಲ್ಲ.  ಎದ್ದವಳು  ಎಂದಿನಂತೆ ಪಾರೋತಿಯ ಮನೆ ಕಡೆ ನೋಡಿದೆ. ತುಂಬಾ ಜನ ಸೇರಿದ್ದರೂ ಸ್ಮಶಾನ ಮೌನವಿತ್ತು. ಅತ್ತೆಯ ಮುಖ ನೋಡಿದೆ, " ನಿನ್ನೆಯ ಗಾಳಿ ಮಳೆಗೆ ನಮ್ಮೂರಿಗೆ ಬರುತ್ತಿದ್ದ ಬಸ್ಸಿನ ಮೇಲೆ ಮರ ಬಿದ್ದು ನಾಲ್ಕು ಜನ ಸತ್ತರಂತೆ. ಅವರಲ್ಲಿ ಶಂಕ್ರನೂ ಒಬ್ಬ. ಊರ ಬಿಟ್ಟು  ಎಲ್ಲೆಲ್ಲೋ ಅಲೆದವನ ಸಾವು ಮಾತ್ರ ಊರ ಬಾಗಿಲಲ್ಲೇ ಬರೆದಿತ್ತು ನೋಡು. ಪಾಪ  ಆ ಹೆಣ್ಣು ಜೀವ " ಎಂದರು. 

ಕೈ ಕಾಲು ಸಣ್ಣಗೆ ನಡುಗುತ್ತಿದ್ದರೂ ಪಾರೋತಿಯ ಮನೆಯಂಗಳಕ್ಕೆ ಬಂದೆ. ನನ್ನ ಕಂಡವಳೇ ಓಡಿ ಬಂದು ತಬ್ಬಿಕೊಂಡಳು. " ಮನಸ್ಸಿನಲ್ಲಿ ಮುತ್ತೈದೆಯೇ ಎಂದವಳು ಹಾಗೆಯೇ ಬದುಕಿಬಿಡುತ್ತಿದ್ದಳು. ನೀ ಬರಲೇ ಬಾರದಿತ್ತು ಹಾಗೆಯೇ ಶಂಕ್ರನೂ " ಎಂದು ಮೊದಲ ಬಾರಿಗೆ ಮಳೆಯನ್ನು ಶಪಿಸುತ್ತಿದ್ದೆ.  ನನ್ನ ಮನಸ್ಸನ್ನು ಓದಿದವಳಂತೆ " ಇಷ್ಟು ದಿನ ಇದ್ದೂ ಇಲ್ಲದಂತೆ ಬದುಕಲಿಲ್ಲವ. ಈಗ ಇಲ್ಲವೇ ಇಲ್ಲ ಎಂದುಕೊಂಡು ಬದುಕುವುದು ಕಷ್ಟವಲ್ಲ ಪುಟ್ಟಮ್ಮ . ಎಲ್ಲ ಕೆಲಸಕ್ಕೂ ನಾನೇ ಮುಂದಾಗಬೇಕು ಈಗ, ಸಂಜೆ ದುಃಖ ಕರಗಿಸಿಕೊಳ್ಳುಕೆ ಹೆಗಲು ಕೊಡಿ ಸಾಕು" ಎಂದವಳು ಮರೆಯಾದಳು.

ಆಗಸ ಹರಿದಂತೆ ಮುಸಲಧಾರೆ ಮತ್ತೆ ಶುರುವಾಯ್ತು. ಶಂಕ್ರನ ಹೆಣ, ಸುತ್ತ ನೆರೆದ ಮಂದಿ, ಗೋಳಾಡುವ ಮುದುಕಿ ಎಲ್ಲರೂ ಮಸುಕು ಮಸುಕು... ಪಾರೋತಿಯ ಚಿತ್ರ ಮಾತ್ರ ಮನಸ್ಸಿನಲ್ಲಿ ನಿಚ್ಛಳ...

6 comments:

 1. ಸಂಧ್ಯಾ...
  "ಇಷ್ಟು ದಿನ ಇದ್ದೂ ಇಲ್ಲದಂತೆ ಬದುಕಲಿಲ್ಲವ. ಈಗ ಇಲ್ಲವೇ ಇಲ್ಲ ಎಂದುಕೊಂಡು ಬದುಕುವುದು ಕಷ್ಟವಲ್ಲ ಪುಟ್ಟಮ್ಮ. ಎಲ್ಲ ಕೆಲಸಕ್ಕೂ ನಾನೇ ಮುಂದಾಗಬೇಕು ಈಗ, ಸಂಜೆ ದುಃಖ ಕರಗಿಸಿಕೊಳ್ಳುಕೆ ಹೆಗಲು ಕೊಡಿ ಸಾಕು" ಎಂದವಳು ಮರೆಯಾದಳು.
  ಉಫ್...
  ಆ ನೋವು, ಅದಕೂ ಮೀರಿದ ಜೀವನ ಪ್ರೀತಿ ಎರಡೂ ಕಾಡಿತು...
  ಚಂದ ಬರಹ...

  ReplyDelete
 2. ಸಂಧ್ಯಾವರೆ, ನಿಮ್ಮ ಕಥೆ ನನ್ನನ್ನು ಓದಿಸಿಕೊಂಡು ಹೋಯಿತು. ಪಾರೋತಿಯ ಜೀವನ ಪ್ರೀತಿಯ ಬಗ್ಗೆ ಹೆಮ್ಮೆ ಅನಿಸಿತು. ಅವಳ ನೋವನ್ನು ಕಂಡು ಬೇಸರವಾಯಿತು. ಒಂದು ಒಳ್ಳೆಯ ಕಥೆ. ನನ್ನ ಬ್ಲಾಗ್ sarovaradallisuryabimba.blogspot.in ಗೆ ಭೇಟಿ ಕೊಟ್ಟು ಚಿತ್ರ ಕಲಾವಿದ ಮಂಜುನಾಥ ಕಾಮತರ ಬಗ್ಗೆ ನಾನು ಬರೆದಿರುವ ಲೇಖನ ನೀವೂ ಓದಿ.

  ReplyDelete
 3. ಮನ ಕಲಕುವ ಕಥೆ.

  ReplyDelete
 4. ತುಂಗೆ ತೀರದಲ್ಲಿ ನಾನೆ ನಿಂತು ನೋಡಿದಹಾಗಿತ್ತು. ಬಹಳ ಚೆನ್ನಾಗಿದೆ.

  ReplyDelete