Monday 9 March 2015

(ಕು)ರೂಪ


ಗುಡ್ ಮಾರ್ನಿಂಗ್ .. ಹೇಗಿದ್ದೀರಾ ? ಎನ್ನುತ್ತಾ ನಂದಿನಿ ಎಬ್ಬಿಸಿದಾಗ ನಿಧಾನಕ್ಕೆ ಕಣ್ಣು ತೆರೆದ ಮಹೇಶನಿಗ್ಯಾಕೋ ಬೆಳಕಿಗೆ ಕಣ್ಣು  ಹೊಂದಿಸಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯ್ತು. ಎದುರಿದ್ದ ನಂದಿನಿಯ ನಗು ಬೆಳಗಿಗೆ ಹೊಸ ರಂಗು ಕೊಟ್ಟಂತಾಗಿ ತಾನೂ ಮುಗುಳ್ನಕ್ಕ. "ಎರಡು ದಿನ ಬಿಡದೆ ಕಾಡಿದ ಜ್ವರ ಎಷ್ಟು ಸುಸ್ತು ಹೊಡೆಸಿದೆ ನೋಡಿ, ಕಣ್ಣೆಲ್ಲ ಹೇಗಾಗಿದೆ ನೋಡಿ,ಮಾಧುರಿಯ ಬಗೆಗೆಲ್ಲ ಕನವರಿಸುತ್ತಿದ್ದಿರಿ ಗೊತ್ತಾ. ಕಾಫಿ ತರ್ತೀನಿ ಇರಿ " ಎನ್ನುತ್ತಾ ಎದ್ದು ಹೋದ ನಂದಿನಿಯನ್ನು ನೋಡುತ್ತಿದ್ದವನಿಗೆ ಮಾಧುರಿ ನೆನಪಾದಳು. 

'ಮಾಧುರಿ' ಸೌಂದರ್ಯದಲ್ಲಿ ಮಾಧುರ್ಯವನ್ನು ಹೊಂದಿದವಳು. ಮೊದಲ ನೋಟದಲ್ಲೇ ಮರುಳಾಗಿದ್ದ. ತನಗಿದ್ದ ಅಸಾದ್ಯ ಬುದ್ದಿಮತ್ತೆ ಆಕೆಯನ್ನು ಬಳಿ ಸೆಳೆದಿತ್ತು. ಆಕೆಯೊಂದಿಗೆ ಒಡನಾಡುತ್ತ ಕೊನೆಗೊಮ್ಮೆ ಆಕೆಗೆ ತನ್ನ ಪ್ರೀತಿಯನ್ನು ತಿಳಿಸಿದ್ದ. ತಿರಸ್ಕಾರವಿತ್ತು ಆಕೆಯಿಂದ, ಆಕೆಯ ತಿರಸ್ಕಾರಕ್ಕಿಂತ ಆಕೆ ಕೊಟ್ಟ ಕಾರಣಗಳೇ ತನ್ನನ್ನು ಎಷ್ಟು ಜರ್ಜರಿತಗೊಳಿಸಿತ್ತು. " ನಿನ್ನ ಹಣ, ಗುಣಾವಗುಣಗಳೇನೆ ಇದ್ದರೂ ನಾನು ಮದುವೆಯಾಗುವವನಲ್ಲಿ, ಪ್ರೀತಿಸುವವನಲ್ಲಿ ಚಂದ ಬಯಸುತ್ತೇನೆ, ಪ್ರೀತಿ, ಕಾಮ ಎರಡಕ್ಕೂ ಚಂದ ಮುಖ್ಯ ಕಣೋ. ಸ್ನೇಹಕ್ಕೆ ಹಾಗಲ್ಲ. ನನ್ನ ಮರೆತುಬಿಡು. ನಿನ್ನೊಂದಿಗೆ ಬದುಕು ನನಗೆ ಸಾಧ್ಯವಿಲ್ಲ " ಎಂದು ಬದುಕಿನಿಂದ ಎದ್ದು ನಡೆದಿದ್ದಳು. ಚೆಲುವಾಂತ ಚೆನ್ನಿಗನೆಂದೇ ಬಿರುದು ಪಡೆದ, ಹುಡುಗಿಯರ ಕನಸು ಎನ್ನುವಂತಿದ್ದ ಗೌತಮ್ ನ ಮದುವೆಯಾಗಿದ್ದಳು. ಅವಳು ಹೋದ ಮೇಲೆ ಅಲ್ಲಿಯವರೆಗೂ ಯಾವುದಕ್ಕೂ ತೊಡಕಾಗದ ರೂಪ ತೊಡಕಾಗತೊಡಗಿತ್ತು. ಕನ್ನಡಿ ನೋಡಿಕೊಳ್ಳುವಾಗೆಲ್ಲ, ತಾನೊಬ್ಬ ಡಾಕ್ಟರ್ ಆಗಿಯೂ ಕೂಡ ತನ್ನ ರೂಪಕ್ಕೆ ತಾನೇನೂ ಮಾಡಿಕೊಳ್ಳಲಾರೆನಲ್ಲ ಎಂದು ಬೇಸರವಾಗುತ್ತಿತ್ತು. ಹೆಣ್ಣುಮಕ್ಕಳನ್ನು ಮಾತನಾಡಿಸುವುದನ್ನು ಬಿಟ್ಟಿದ್ದೆ. ಅಮ್ಮ ಮದುವೆಯ ಸುದ್ದಿ ಎತ್ತಿದ್ದರೂ ಹೆಣ್ಣು ನೋಡಲು ಹೋಗುತ್ತಿರಲಿಲ್ಲ. ನಂದಿನಿಯ ತಂದೆ ಅವರ ಮನೆಗೇ ಹುಡುಕಿಕೊಂಡು ಬಂದು ಹೆಣ್ಣು ಕೊಡುತ್ತೇವೆ ಎಂದಾಗಲೂ ಕೇಳಿದ್ದೆ, ನನ್ನ ಕುರೂಪವನ್ನು ನಿಮ್ಮ ಮಗಳು ಒಪ್ಪಿಕೊಳ್ಳುತ್ತಾಳ ? ಎಂದು. ಅದಕ್ಕವರು " ನಮ್ಮ ಮಗಳು ನಾವು ಹೇಳಿದಂತೆ ಕೇಳುತ್ತಾಳೆ ನೀವದರ ಬಗ್ಗೆ ಯೋಚಿಸಬೇಡಿ" ಎಂದಿದ್ದರು. ಮದುವೆಗೆ ಮೊದಲು ಎರಡು ಮೂರು ಬಾರಿ ಮೀಟ್ ಆಗಿದ್ದರೂ ನನ್ನನ್ನು ಇಷ್ಟಪಟ್ಟೆ ಮದುವೆಯಾಗುತ್ತಿದ್ದೀಯ ? ಎಂದು ನಂದಿನಿಯನ್ನು ಕೇಳಲು ಆಗಿರಲೇ ಇಲ್ಲ. ನಂದಿನಿಯೊಂದಿಗಿನ ಸಂಸಾರದಲ್ಲಿ ಮಾಧುರಿ ಆಗಾಗ ನೆನಪಾಗುತ್ತಿದ್ದರೂ ಮೊದಲಿನಂತೆ ಕಾಡುತ್ತಿರಲಿಲ್ಲ. 

ಮೊನ್ನೆ ಎಮರ್ಜೆನ್ಸಿ ಕಾಲ್ ಬಂದು ಹಾಸ್ಪಿಟಲ್ ಗೆ ಹೋದರೆ ಅದೊಂದು  ಆಕ್ಸಿಡೆಂಟ್ ಕೇಸ್ ಆಗಿತ್ತು. ಮಾಧುರಿಯ ಗಂಡ ಗೌತಮ್ rash driving  ಮಾಡಿ ಕಂಟ್ರೋಲ್ ಮಾಡಲಾಗದೆ construction  ಹಂತದಲ್ಲಿದ್ದ ಮೊರಿಯೊಂದಕ್ಕೆ ಡಿಕ್ಕಿ ಹೊಡೆದಿದ್ದ. ಆ ರಭಸಕ್ಕೆ ಕಬ್ಬಿಣದ ಸರಳೊಂದು ಅವನ ಕೆನ್ನೆಯನ್ನು ಹೊಕ್ಕಿತ್ತು. ಒಪರೆಟ್ ಮಾಡಿದರೂ ಕೊಡ ಮುಖವನ್ನು ಮೊದಲಿನಂತೆ ಮಾಡಲು ಸಾಧ್ಯವಿರಲಿಲ್ಲ. ದವಡೆಯ ಮೂಳೆಯೊಂದನ್ನು ತೆಗೆಯಬೇಕಾಗಿ ಬಂದಿತ್ತು. ಒಪರೆಶನ್ ಮುಗಿದ ತಕ್ಷಣ ಅವನನ್ನು ನೋಡಿದ ಮಾಧುರಿ ಹಾಸ್ಪಿಟಲ್ ಎನ್ನುವುದನ್ನು ಮರೆತು ಕಿರುಚಿದ್ದಳು. ಅವಳನ್ನು ಸಮಾಧಾನಿಸುವ ಮನಸ್ಸಾದರೂ ನಂದಿನಿಯ ನೆನಪಾಗಿ ಸುಮ್ಮನೆ ಬಂದಿದ್ದೆ. ನಂದಿನಿಯು ಅಷ್ಟೇ ಮೊದಮೊದಲು ಹೆಂಡತಿಯಾದರೂ ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಳು. ಯಾವತ್ತಿಗೂ ನನ್ನ ಕುರೂಪದ ಬಗ್ಗೆ ಮಾತನಾಡದಿದ್ದರೂ, ಅವಳಲ್ಲಿ ಬೇಸರವಿತ್ತು ಎಂಬುದು ಗೊತ್ತಾಗುತ್ತಿತ್ತು.  ಅವಳ ಗೆಳತಿಯರಿಗೆ ನನ್ನ ಪರಿಚಯಿಸಲು ಸಂಕೋಚ ಪಡುತ್ತಿದ್ದಳು. ಆದರೆ ಈಗೀಗಂತೂ ಇನ್ನಿಲ್ಲದಂತೆ ಪ್ರೀತಿಸತೊಡಗಿದ್ದಾಳೆ. ಪ್ರತಿ ಹೆಜ್ಜೆಗಿರುತ್ತಾಳೆ. ಎಲ್ಲ ಅವಶ್ಯಕತೆಗಳ ನೋಡಿಕೊಳ್ಳುತ್ತಾಳೆ. ಪ್ರತಿ ಕ್ಷಣಕ್ಕೂ ತನ್ನ ನೆನಪಿಸಿಕೊಡುತ್ತಾಳೆ, ನನ್ನುಸಿರಲ್ಲಿ ಹಸಿರಾಗಿರುತ್ತಾಳೆ. ಎರಡು ದಿನದ ಜ್ವರದ ಸುಸ್ತು ಕೂಡಾ ಅವಳ ಸನಿಹ, ಅವಳ ಸ್ಪರ್ಶವಿದ್ದರೆ ಮಾಯ ಎಂದುಕೊಂಡವನಿಗೆ ಅವಳನ್ನೊಮ್ಮೆ ಬಿಗಿಯಾಗಿ ಅಪ್ಪಿಕೊಳ್ಳುವ ಮನಸ್ಸಾಗಿ ರೂಂ ನಿಂದ ಎದ್ದು ಹೊರಬಂದ....  
 
ಇತ್ತ ಕಾಫಿ ಮಾಡುತ್ತಿದ್ದ ನಂದಿನಿಯ ತಲೆಯಲ್ಲೂ ಯೋಚನೆಗಳು ಸಾಲು ಸಾಲಾಗಿದ್ದವು. ಯಾಕೋ ಮಾಧುರಿಯ ಹೆಸರೆತ್ತಿದ್ದು ತಪ್ಪೆನಿಸಿದ್ದರೂ ಆಕೆ ಕಾಡತೊಡಗಿದ್ದಳು.ಹೌದು ಪ್ರೀತಿ , ಕಾಮ ಎರಡೂ ಚಂದವನ್ನೇ ಬಯಸುತ್ತವೆ. ಒಂದು ಹೆಣ್ಣು ಇವೆರಡರಲ್ಲೂ ಚಂದವನ್ನೇ ಬಯಸುತ್ತಾಳೆ.ನಾನೂ ಅದಕ್ಕೆ ಹೊರತಾಗಿರಲಿಲ್ಲ.  ಬಹುಶಃ ಆಕೆಗಾದರೆ ಆಯ್ಕೆಗಳಿದ್ದವು ಅಂತ ಕಾಣುತ್ತೆ. ಅದಕ್ಕೆ ತನಗೆ ಬೇಕಾದ್ದನ್ನು ಆಯ್ದುಕೊಂಡಳು. ಆದರೆ ನನಗೆ ? ನನಗೆ ಆಯ್ಕೆಯೆಂಬ ಸ್ವಾತಂತ್ರ್ಯವೇ ಇರಲಿಲ್ಲ. ನಾವೊಪ್ಪಿದ ಹುಡುಗ ನೀನು ಒಪ್ಪಿಕೊಳ್ಳಲೇ ಬೇಕು ಎನ್ನುವಂತೆಯೇ ಮಾತಾಡಿದ್ದು. ನನಗೆ ಆಯ್ಕೆಯ ಸ್ವಾತಂತ್ರ್ಯವಿದ್ದಿದ್ದರೆ ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಿರಲಿಲ್ಲ. ಆ ದೊಡ್ಡ ಮೂಗು, ದಪ್ಪ ದಪ್ಪ ಕಪ್ಪು ತುಟಿಗಳು, ಕೆನ್ನೆ ತುಂಬಾ ಮೊಡವೆ ಕಲೆಗಳು, ಬೇಡ ಬೇಡ ಎಂದು ಮನಸ್ಸಿನಲ್ಲಿದ್ದರೂ ಹೇಳಲಾರದೆ ಮದುವೆಯೂ ನಡೆದುಹೋಗಿತ್ತು. ಮೊದಮೊದಲು ಮುದ್ದಿಸುವಾಗ ಅಸಹ್ಯವಾಗುತ್ತಿತ್ತು. ಗೆಳತಿಯರಿಗೆ ಪರಿಚಯ ಮಾಡಿಕೊಡುವಾಗ ತಡೆ ತಡೆದು ಪರಿಚಯಿಸಿದ್ದೆ. " ಏನೇ ಹಣ ನೋಡಿ ಒಪ್ಪಿಕೊಂಡೆಯೇನೆ ? " ಎಂದು ಗೆಳತಿಯೊಬ್ಬಳು ಕೇಳಿದಾಗಲಂತೂ ಮಯೆಲ್ಲ ಉರಿದಿತ್ತು. ಆದರೆ ಸಂಸಾರ ಸಾಗಿದಂತೆ, ನೀವು ಅರ್ಥವಾಗುತ್ತಾ ಹೋದಂತೆಲ್ಲ ಇಷ್ಟವಾಗುತ್ತಾ ಹೋದಿರಿ. ನಿಮ್ಮ ಒಳ್ಳೆತನ, ನಿಮ್ಮ ನಡವಳಿಕೆಗಳು, ನಿಮ್ಮೊಂದಿಗೆ ಮನಸ್ಸು ಸ್ಪಂದಿಸತೊಡಗಿದಂತೆ ಪ್ರೀತಿ ತನ್ನದೇ ಹೊಳಪು ಪಡೆದುಕೊಂಡಿತು. ಒಳ್ಳೆಯಗುಣ ಎಲ್ಲವನ್ನು ಮರೆಸತೊಡಗಿತು. ನಿಮ್ಮ ಮನಸಿನಂತೆ,ದೇಹವನ್ನೂ ಅರಿವಿಲ್ಲದಂತೆ ಪ್ರೀತಿಸತೊಡಗಿದ್ದೇನೆ. ಕಪ್ಪು ತುಟಿಗಳ ತುಂಟಾಟಕ್ಕೆ ಕೆನ್ನೆ ನಾಚುತ್ತೆ, ಕಾಯುತ್ತೆ. ದೊಡ್ಡ ಮೂಗನ್ನು ಮುದ್ದಿಸುವ ಮನಸ್ಸಾಗುತ್ತೆ, ನಾ ಕೊಟ್ಟ ಮುತ್ತುಗಳೆಲ್ಲ ನಿನ್ನ ಮೊಡವೆ ಕಲೆಗಳಲ್ಲಿ ಕುಳಿತು ನಗುವಾಗ ಖುಷಿಯಾಗುತ್ತೆ. ತವರ ಮರೆಸಿದ ಪ್ರೀತಿ ನಿನ್ನದು.ಸೌಂದರ್ಯ, ಐಶ್ವರ್ಯಕ್ಕಿಂತ ಗುಣವೊಂದೇ ಮುಖ್ಯ ಎನ್ನುವ ನಿಲುವು ನನ್ನದಲ್ಲದಿದ್ದರೂ. ಒಳ್ಳೆಯತನ, ಒಳ್ಳೆಯಗುಣ ಕುರೂಪವನ್ನು ಮರೆಸಬಲ್ಲದು ಎಂದು ಅರ್ಥವಾಗಿದೆ.  ನೀವು  ಹೇಗಿದ್ದರೂ ನೀವು  ನನ್ನವರೇ , ನಿಮ್ಮನ್ನ  ಕಳೆದುಕೊಳ್ಳಲಾರೆ.   ಎಂದುಕೊಳ್ಳುವ ಹೊತ್ತಿಗೆ ಬಿಸಿ ಬಿಸಿ ಕಾಫಿ ರೆಡಿ ಆಗಿತ್ತು. ಕಾಫಿಯೊಂದಿಗಿನ ಇಂದಿನ ಮುತ್ತಲ್ಲಿ ಎಲ್ಲ ಪ್ರೀತಿಯ ಸುರಿದುಕೊಡುತ್ತೇನೆ ಎಂದುಕೊಂಡು ಅಡಿಗೆಮನೆಯಿಂದ ಹೊರಬರುವುದಕ್ಕೂ , ಮಹೇಶ್ ರೂಮಿಂದ ಹೊರಬರುವುದಕ್ಕೂ ಸರಿಹೋಯಿತು. ಇಬ್ಬರೂ ಒಬ್ಬರಿಗೊಬ್ಬರೂ ಮುಖ ನೋಡಿಕೊಂಡು ನಕ್ಕರು.  ಒಬ್ಬರ ಭಾವಗಳು ಒಬ್ಬರಿಗೆ ಅರ್ಥವಾದಂತೆ.  ಮಾತುಗಳಿಲ್ಲದ ಭಾವಗಳೆಲ್ಲ ಜೀವ ತುಂಬಿಕೊಂಡು ಅದಲುಬದಲಾದಂತೆನಿಸಿತು. ಮರುಕ್ಷಣ ಅವನಪ್ಪುಗೆಯಲ್ಲಿ ಆಕೆ ಕಾಫಿಯಲ್ಲಿ ಸಕ್ಕರೆ ಬೆರೆತಂತೆ ಕರಗಿದರೆ, ಅವಳ ಹಣೆ ತಾಕಿದ ಅವನ ಮುತ್ತು ಜೇನು ಸುರಿದಂತಾಗಿತ್ತು. 

ಸ್ನಾನ ಮಾಡಿ ರೆಡಿಯಾಗಿ ಹಾಸ್ಪಿಟಲ್ ಗೆ ಹೊರಟನಾದರೂ ಮನಸ್ಸಲ್ಲಿ ಮಾತ್ರ ಅವ್ಯಕ್ತ ಭಯವಿದ್ದಂತೆ ಎನಿಸಿತ್ತು. ಚೇಂಬರ್ ಗೆ ಬಂದು ಕಣ್ಮುಚ್ಚಿ ಕುಳಿತವನನ್ನು ನರ್ಸ್ ಮಾತು ಎಚ್ಚ್ಚರಿಸಿತು. "ಸರ್  ಮಿಸ್ಟರ್ ಗೌತಮ್ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದೇವೆ " ಎಂದಳು. 

" ಯಾರಿದ್ದಾರೆ ಅವರ ಜೊತೆ ? " ಎಂದು ಕೇಳಿದ. 

" ಅಪ್ಪ, ಅಮ್ಮ ಅನಿಸುತ್ತೆ ಸರ್, ಅವತ್ತು ಕಿರುಚಿಕೊಂಡು ಹೋದ ಅವರ ವೈಫ್ ನಿನ್ನೆ ಒಂದು ಸಾರಿ ಬಂದಿದ್ದರು " ಎಂದ ನರ್ಸ್ ಗೆ ಆಯ್ತು ಎನ್ನುವಂತೆ ತಲೆಯಾಡಿಸಿದವನು ಯಾಕೋ ಕಸಿವಿಸಿಯಾದಂತಾಗಿ ಗೌತಮ್ ಇದ್ದ ವಾರ್ಡ್ ಗೆ ಹೋದ. ಹಾಸಿಗೆಯಲ್ಲಿ ಮಲಗಿದ್ದ ಗೌತಮ್ ನ ಕಣ್ಣುಗಳು ಆಳಕ್ಕಿಳಿದು ಹೋಗಿದ್ದವು. ದವಡೆಯ ಮೂಳೆಯೇ ಮುರಿದಿದ್ದರಿಂದ  ಮುಖ ವಿಕಾರವಾಗಿತ್ತು. ಅದೆಂದಿಗೂ ಸರಿಯಾಗಲಾರದು ಎಂದುಕೊಳ್ಳುತ್ತಾ ರಿಪೋರ್ಟ್ಸ ಎಲ್ಲಾ ನೋಡಿ ಮಾತ್ರೆಗಳನ್ನು ಬದಲಾಯಿಸಿ ಬರೆದು ವಾಪಸ್ ಇಡುವ ಹೊತ್ತಿಗೆ ಪಕ್ಕದಲ್ಲಿದ್ದ ಪೇಪರ್ ಗಳು ಕಣ್ಣಿಗೆ ಬಿದ್ದವು. ಎತ್ತಿಹಿಡಿದು ನೋಡಿದರೆ ಮಾಧುರಿಯ ಕಡೆಯಿಂದ ಬಂದ ಡೈವೋರ್ಸ್ ನೋಟಿಸ್ ಆಗಿತ್ತು ಅದು .  ಗೌತಮ್ ನ ಮುಖ ನೋಡಿದ, ಇವನ ನೋಟ ಎದುರಿಸಲಾರದೇ ಗೌತಮ್ ಆ ಕಡೆ ಮುಖ ತಿರುಗಿಸಿದನಾದರೂ ಅವನ ಕಣ್ಣಂಚಿನ ನೀರು ಮಹೇಶ್ ಗೆ ಕಾಣದೆ ಇರಲಿಲ್ಲ. ಯಾಕೋ ಕೈಯಲ್ಲಿದ್ದ ಡೈವೋರ್ಸ್ ನೋಟಿಸ್  ಗಹಗಹಿಸಿ ನಗುತ್ತಿರುವಂತೆ ಭಾಸವಾಯ್ತು. ಒಂದು ಕಾಲದಲ್ಲಿ ಸುಂದರಿಯೆನಿಸಿ ಮನಸ್ಸಿನಲ್ಲಿ ಅಚ್ಚ್ಹೊತ್ತಿದ್ದ ಮಾಧುರಿಯ ರೂಪವೂ ಕುರೂಪವಾಗುತ್ತಿರುವಂತೆ ಕಾಣತೊಡಗಿತು.