Monday, 31 December 2012

ವರುಷವೊಂದು ಉರುಳಿದ್ದು ...


ಸ್ವಲ್ಪ ಅತ್ತಿದ್ದು ... ಜಾಸ್ತಿ ನಕ್ಕಿದ್ದು ..
ಒಂಚೂರು ಸಾಧನೆ ...
ಸಿಕ್ಕ ಬೆಟ್ಟದಷ್ಟು ಪ್ರೀತಿ ..
ನಮ್ಮವರೇ ನಮಗೆ ಮೋಸ ಮಾಡಿದ್ದು ..
ಯಾರೋ ನಮ್ಮವರಾಗಿದ್ದು ..
ಪರಿಚಿತರು ಅಪರಿಚಿತರಾದದ್ದು ..
ಅಪರಿಚಿತರು ಪರಿಚಿತರಾದದ್ದು ..
ದಿನಗಳು ಬದಲಾದಂತೆ ..
ಬದುಕು ಬದಲಾದದ್ದು ...
ಎಲ್ಲವೂ ಈಗ ಇತಿಹಾಸವೇ ..
ವರುಷವೊಂದು ರೆಪ್ಪೆ ಮಿಟುಕಿಸುವಂತೆ ಉರುಳಿ ಹೋಯಿತು ...

Wednesday, 19 December 2012

ನೀ ಬಂದ ದಿನ ಅದರಲ್ಲೊಂದು ಚಂದದ ಹೂ ಅರಳಿರುತ್ತದೆ.. ನಮ್ಮ ಪ್ರೀತಿಗಾಗಿ...ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ.... ಎಂಬ ಬೇಂದ್ರೆಯವರ ಹಾಡು ಕೇಳುತ್ತಾ ಸಮುದ್ರಕ್ಕೆ ಮುಖ ಮಾಡಿ  ನಿಂತಿದ್ದೆ ಈ  ಸಂಜೆ. ನಿನಗಿಷ್ಟ ಆ ಹಾಡು .. ಆ ಕಾರಣಕ್ಕೆ ಅದು ನನಗೂ ಇಷ್ಟ.. ನಿನ್ನೊಂದಿಗಿನ ಬೆಚ್ಚನೆಯ, ಚುಚ್ಚುವ , ಕಾಡುವ ನೆನಪುಗಳಿಗೆಲ್ಲ ಯಾವಾಗಲೂ ನಾಂದಿ ಹಾಡುವುದು ನೀನು. "ನೀನು" ಎಂಬೊಂದು ಶಬ್ದ ನೆನಪಾದರೆ ಸಾಕು ಹಿಂದೆಯೇ ಸಾವಿರ ನೆನಪುಗಳ ಹಣತೆಯ ಸಾಲುಗಳು ಹೊತ್ತಿಕೊಳ್ಳುತ್ತವೆ. ಕೆಲವು ಬೆಳಗುತ್ತವೆ, ಕೆಲವು ಸುಡುತ್ತವೆ, ಕೆಲವು ಆರುತ್ತವೆ. ಎಲ್ಲವನು ಹರವಿಕೊಂಡು ಒಮ್ಮೆ ನೋಡುತ್ತೇನೆ. ಮತ್ತೆ ಎಲ್ಲವನ್ನು ಜತನದಿಂದ ಎತ್ತಿಡುವ ಹೊತ್ತಿಗೆ ಕೆಲವೊಮ್ಮೆ ನಗುವಿನ ಹಣತೆಗೆ ಕಣ್ಣೀರೇ ತೈಲವಾಗಿರುತ್ತದೆ..
 ಯಾವಾಗಲೂ ಜೋತೆಗಿರುತ್ತೇನೆ ಎಂದು ಮಾಡಿದ ಆಣೆ ಪ್ರಮಾಣವನ್ನು ಅದೆಷ್ಟು ಶ್ರದ್ಧೆಯಿಂದ ನಿರ್ವಹಿಸುತ್ತೀಯಾ. ಒಂಟಿತನದಲ್ಲಿ ನೀನಿಲ್ಲವೆಂದರೆ ನಿನ್ನ ನೆನಪುಗಳಾದರೂ ಜೋತೆಗಿರುತ್ತವೆ. ಪ್ರೀತಿಯ ಎಲ್ಲ ಮುಖಗಳನ್ನೂ  ತೋರಿದ್ದು ನಿನ್ನ ಪ್ರೀತಿ.. ಎಲ್ಲವನ್ನೂ ಮೀರಿದ್ದು ನಿನ್ನ ಪ್ರೀತಿ.. ಜೀವನದಲ್ಲಿ ಎಲ್ಲದರ ಜೊತೆಗೆ ನಿನ್ನನ್ನೂ  ಸಹಿಸಿಕೊಳ್ಳುವ ತಾಳ್ಮೆ ಕಲಿಸಿದ್ದು ನಿನ್ನ ಪ್ರೀತಿ. ಅದಕ್ಕೆ ಈ ದೂರ ಮತ್ತು ವಿರಹವನ್ನು ತಾಳ್ಮೆಯಿಂದ ಸಹಿಸಿಕೊಳ್ಳುತ್ತಿರುವುದು. ನೆನಪಿರಲಿ ಸಹನೆಗೂ ಮಿತಿಯಿದೆ.ಈ ದೂರ ಒಮ್ಮೊಮ್ಮೆ  ನೀನೆಲ್ಲಿ ನನ್ನ ಮರೆತೆಯೋ ಎಂಬ ಅನುಮಾನವನ್ನು ಹೆಡೆಯಾಡುವಂತೆ ಮಾಡಿ ಬಿಡುತ್ತದೆ. ಬೆನ್ನ ಹಿಂದೆಯೇ ನನ್ನ ಮರೆತರೆ ನಿನ್ನದೆಲ್ಲಿದೆ ಬದುಕು ? ಎಂಬ ನಂಬಿಕೆ ಕೈ ಹಿಡಿಯುತ್ತದೆ.ಎಡಗೈಯ್ಯ ಕಿರು ಬೆರಳು ಕೂಡಾ ನಿನ್ನ ಹೆಸರನ್ನು ಸರಾಗವಾಗಿ ಗೀಚಲು ಕಲಿತಿದೆ. ಯಾಕೋ ನಿನ್ನೊಂದಿಗಿನ ಬದುಕಿನ ಚಿತ್ರಗಳೆಲ್ಲ ಬಣ್ಣ ಕಳೆದುಕೊಂಡು ಮಸುಕಾಗಿವೆ  ಎನಿಸುತ್ತಿದೆ. ಅವೆಲ್ಲ ನಿನ್ನ ಕಣ್ಣ ಬೆಳಕ ಕಂಡೊಡನೆ ಮತ್ತೆ ಹೊಳೆಯುತ್ತವೆ ಬಿಡು. ಕನಸಿನ ಲೋಕದಲ್ಲಿ ನಾವೇ ನಿರ್ಮಿಸಿದ ನಮ್ಮ ಮುಂದಿನ ಬದುಕಿನಂಗಳಕ್ಕೆ ಆಗಾಗ ಹೋಗಿ ಬರುತ್ತಿದ್ದೇನೆ ಒಂಟಿಯಾಗಿ. ಆಗೆಲ್ಲ ನನ್ನ ಕೈ ಬೆರಳುಗಳ ನಡುವಿನ ಅಂತರವನ್ನು ತುಂಬಲು ನೆನ್ನ ಬೆರಳುಗಳಿರಬೇಕಿತ್ತು  ಎನಿಸುತ್ತದೆ. ಕನಸಿನೂರ ಕಾವಲುಗಾರನಿಗೆ ಮಾತು ಕೊಟ್ಟು ಬಂದಿದ್ದೀನಿ ,ಮುಂದಿನ ಸಲ ನಿನ್ನೊಂದಿಗೆ ಬರುತ್ತೇನೆ ಎಂದು. ನನ್ನ ಮಾತು ಉಳಿಸುವ ಜವಾಬ್ದಾರಿ ನಿನ್ನ ಮೇಲಿದೆ ನೆನಪಿರಲಿ...

ನಂಬಿಕೆಯಿಂದ ನೀರೆರೆಯುತ್ತಿರುವ ನಿರೀಕ್ಷೆಯ ಗಿಡ ನೀ ಬರುವ ದಿನಗಳು ಹತ್ತಿರವಾದಂತೆಲ್ಲ ದಿನಕ್ಕೆರಡು ಎಲೆಗಳಂತೆ ಚಿಗುರುತ್ತಿದೆ. ಯಾವಾಗ ಮೊಗ್ಗು ಬಿಡುವುದೋ ಎಂದು ಕಾಯುತ್ತಿದ್ದೇನೆ. ಅದೇನೇ ಇರಲಿ ನೀ ಬಂದ ದಿನ ಅದರಲ್ಲೊಂದು ಚಂದದ ಹೂ ಅರಳಿರುತ್ತದೆ.. ನಮ್ಮ ಪ್ರೀತಿಗಾಗಿ...

(ಇದು ೨೭.೧೧.೨೦೧೨ ರ ಲವಲವಿಕೆಯಲ್ಲಿ ಪ್ರಕಟವಾಗಿತ್ತು )

Wednesday, 5 December 2012

ಒಂಟಿ ಮರ ಮತ್ತು ಖಾಲಿ ಬೆಂಚು
ಇರೋನೊಬ್ಬ ಮಗ ನೀನು , ನಿನ್ನತ್ರ ಹೊಸದಾಗಿ ಏನಾದ್ರೂ ಮಾಡು ಅಂತ ಹೇಳ್ತಾ ಇಲ್ಲ . ನಾ ಮಾಡಿಟ್ಟ ಈ ಜಮೀನು ಮನೆ , ನೀ ನೋಡಿಕೊಂಡು ಹೋದರೆ ಸಾಕು ಎನ್ನುತ್ತಿದ್ದೇನೆ .ಅಷ್ಟೂ ಆಗಲ್ವಾ  ಅಂತ ಕೇಳಿದ ಅಪ್ಪನಿಗೆ ಹೋಗಪ್ಪಾ ಈ ಹಾಳು ಊರಲ್ಲಿ ಏನಿದೆ ಅಂತ ಇರಲಿ ? "ಇಲ್ಲಿರಲ್ಲ" ಎಂದು ಅಪ್ಪನೊಡನೆ ಜಗಳ ಆಡಿ  ಬಂದವನು  ನನ್ನಿಷ್ಟದ ಒಂಟಿ ಮರದ ಕೆಳಗಿನ ಖಾಲಿ ಬೆಂಚ್ ಹತ್ತಿರ ಬಂದಿದ್ದೆ. ಒಂದು ಸ್ವಲ್ಪ ಸಮಾಧಾನಿಸಿಕೊಳ್ಳಬೇಕಿತ್ತು ನನ್ನನ್ನು ನಾನು. ಆದರೆ ಅವತ್ತು ಅದು ಖಾಲಿ ಇರಲಿಲ್ಲ .ಅಲ್ಲಿ ನೀನಿದ್ದೆ . ಅದ್ಯಾವ ಪರಿ ನೀ ಚಲನೆ ಇಲ್ಲದೆ ಕುಳಿತಿದ್ದೆ ಎಂದರೆ ಕಣ್ಣ ರೆಪ್ಪೆಗಳ ಚಲನೆಯಿಂದಾಗಿ ನಿನಗೂ ಜೀವವಿದೆ ಎಂದು ನಾ ತೀರ್ಮಾನಿಸಿದ್ದೆ. ಏನು ನೋಡ್ತಿದ್ದೀರಾ ? ಎಂದು ಕೇಳಿದ್ದೆ ಧೈರ್ಯ ಮಾಡಿ, "ಸೂರ್ಯ ಮುಳುಗುತ್ತನಾ ಅಂತ" ..ಉತ್ತರ ಬಂತು ."ಅಲ್ಲಿ ಮುಳುಗಲ್ಲ ಬಿಡಿ.."ಎಂದರೆ "ಯಾಕ್ರೀ ಇವತ್ತು ಸೂರ್ಯ ಮುಳುಗಲ್ಲ ಅಂತ ನಿಮಗೆ ಹೇಳಿದ್ದಾನಾ?"  ಇಲ್ಲ, ಇದು ಪೂರ್ವ ನಮ್ಮೂರಲ್ಲಿ ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಾನೆ. ಊರಿಗೆ ಹೊಸಬರಾ ? ಅಂತ ಕೇಳಿದೆ.  ಇಲ್ಲಾರಿ ನಿನ್ನೇನೆ ಬಂದ್ವಿ, ಅಪ್ಪ ಹೆಲ್ತ್ ಡಿಪಾರ್ಟ್ಮೆಂಟ್ ಲಿದ್ದಾರೆ, ಈ ಊರಿನ ಅರ್ದ ಬೀದಿಗಳು ಗೊತ್ತಾಗಿವೆ. ಬೆಳಿಗ್ಗೆ ತಾನೇ ಗುಡಿಗೆ ಹೋಗಿ ನಿಮ್ಮೂರ ದೇವ್ರನ್ನ ಫ್ರೆಂಡ್ ಮಾಡಿಕೊಂಡು ಬಂದಿದ್ದೀನಿ ಅಂತ ಪಟ ಪಟಾಂತ ಹೇಳಿದ್ದು ಕೇಳಿ ನಗು ಬಂದಿತ್ತು. ನಿಮ್ಮೂರಲ್ಲಿ  ಇದೇ ಪಶ್ಚಿಮ ಆಗಬಹುದಿತ್ತು ಗುಡ್ಡಗಳ ನಡುವೆ ಚಂದದ ಸೂರ್ಯಾಸ್ತ  ನೋಡಬಹುದಿತ್ತು ಎಂದಾಗ , ಈಗಲೂ ಸೂರ್ಯೋದಯ ನೋಡಬಹುದು ಎಂದೆ. ಹೌದಲ್ವ ಎಂದು ಕಣ್ಣರಳಿಸಿ .. ಸರಿ ಬರ್ತಿನ್ರಿ .. ಶಾಸ್ತ್ರಿಗಳ ಮನೆಗೆ ಹೋಗಿ ನಾಳೆ ಸೂರ್ಯೋದಯ ಎಷ್ಟು ಹೊತ್ತಿಗೆ ಎಂದು ಕೇಳಬೇಕು ಎನ್ನುತ್ತಾ ಓಡಿ  ಹೋದವಳ ನೋಡುತ್ತಾ ನಿಂತವನಿಗೆ, ಹೆಸರೇನು ? ಎಂದು ಕೇಳಬೇಕೆಂಬ ಪ್ರಶ್ನೆ ಗಂಟಲಲ್ಲೇ ಉಳಿದಿತ್ತು. ಹತ್ತು ನಿಮಿಷದಿಂದ ಎಲ್ಲೋ ಬೇರೆ ಲೋಕದಲ್ಲೇ ಇದ್ದೆ ಎಂಬ ಅನುಭವ ಬಂದಿತ್ತು . ಅದ್ಯಾವುದೋ ಒಂದು ಆಕರ್ಷಣೆ ಮೊಳಕೆಯೊಡೆದಿತ್ತು. ಮನೆಗೆ ಬಂದು ಅಮ್ಮನಲ್ಲಿ ನಾಳೆ ಸೂರ್ಯೋದಯ ಎಷ್ಟು ಹೊತ್ತಿಗೆ ಎಂದು ಕೇಳಿ ಅಲಾರಂ ಸೆಟ್ ಮಾಡಿ ಮಲಗಿದ್ದೆ . 

ಬೆಳಿಗ್ಗೆ ಸೂರ್ಯೋದಯ ನೋಡಲು ಬಂದರೆ ಸೂರ್ಯನಿಗಿಂತ ಮೊದಲು ಕಾಣಿಸಿದ್ದು ನೀನು .ಬಂದ್ರಾ .. ಇನ್ನು ಐದೇ ನಿಮಿಷ ಬಾಕಿ ಅಂತ ಗುಡ್ಡಗಳ ನಡುವೆ ಕಣ್ಣಿಟ್ಟು ಕುಳಿತವಳ ನೋಡುವುದೇ ಮಜವಾಗಿತ್ತು ನನಗೆ.ಸೂರ್ಯೋದಯದ ಮೊದಲ ಕಿರಣಗಳು ನಿನ್ನ ಮುಖದ ಮೇಲೆ ಬಿದ್ದು , ಅದು ಬಂಗಾರ ವರ್ಣವಾದಾಗಲಂತೂ ದೇವತೆಯಂತೆ ಕಂಡಿದ್ದೆ ನೀನು. ಏನು ಓದಿದ್ದು ನೀವು ಎಂದು ಕೇಳಿದ್ದೆ, ಏನಾದರೂ ಮಾತಾನಾಡಬೇಕೆಂದು. ಡಿಗ್ರೀ ಮುಗಿದಿದೆ ಎಂದೆನೀನು. ಡಾಕ್ಟರ್ ಮಗಳು ಡಾಕ್ಟರ್ ಅಥವಾ ಇಂಜಿನಿಯರ್ ಇರಬೇಕು ಅಂದುಕೊಂಡೆ ಎಂದರೆ.ನನಗೆ ನಾಲ್ಕು ಗೋಡೆಗಳ ನಡುವೆ ಕುಳಿತು ಕಲಿಯಲು ಇಷ್ಟವಿಲ್ಲಾರಿ.ಪ್ರಕೃತಿಯೊಂದಿಗೆ ಕಲಿಯಬೇಕು. ಕಾಡು-ಮೇಡು ಅಲೆಯಬೇಕು , ಗದ್ದೆ ತೋಟ ತಿರುಗಬೇಕು. ಹಲಸಿನ ಹೂವು ಹಣ್ಣಾಗುವುದರಿಂದ ಹಿಡಿದು ಹಸು ಕರು ಹಾಕುವಲ್ಲಿಯವರೆಗೂ ಪ್ರಕೃತಿಯಲ್ಲಿ ಎಷ್ಟು ವೈಚಿತ್ರ್ಯ ಗಳಿವೆ ಗೊತ್ತಾ..ಪ್ರತಿಕ್ಷಣಕ್ಕೂ ಕುತೂಹಲದ ಮೂಟೆ ಇದು ,ಪ್ರಕೃತಿಯಿಂದ ಮನುಷ್ಯ ಕಲಿಯಬೇಕು , ಅದರೊಂದಿಗೆ ಬೆಳೆಯಬೇಕು ಎಂದಾಗ, ನನಗೆ ಏನು ಹೇಳಲು ತೋಚದೆ ಹೆಸರೇನು? ಎಂದು ಕೇಳಿದೆ. "ಪ್ರಕೃತಿ " ಎಂದವಳು , ಅಮ್ಮಾ ಕಾಯ್ತಾ ಇರ್ತಾರೆ ಸಂಜೆ ಸಿಕ್ತೀನಿ ಅಂತ ಹೊರಟು ಹೋಗಿದ್ದೆ ನೀನು. 


(ಫೋಟೋ : ರಂಜಿತಾ ಹೆಗಡೆ) 


ಮನೆಗೆ ಬಂದವನನ್ನು ಅಮ್ಮ "ಏನು ಯೋಚನೆ ಮಾಡಿದೆ" ಎಂದು ಕೇಳಿದರೆ , ಇಲ್ಲೇ ಇರುತ್ತೆನಮ್ಮ ,ಪ್ರಕೃತಿಯೊಂದಿಗೆ ಕಲಿಯಬೇಕಿದೆ ಎಂದಿದ್ದೆ. ಯಾಕೆ ಹಾಗೆ ಹೇಳಿದ್ದೆ ಎಂದು ಇವತ್ತಿಗೂ ಗೊತ್ತಿಲ್ಲ. ಆದರೆ ಆರು ತಿಂಗಳಿನಿಂದ ಇಲ್ಲಿಯೇ ಇದ್ದೇನೆ.ಕೃಷಿಯನ್ನು ಜೀವನ ಮಾಡಿಕೊಂಡಿದ್ದೇನೆ. ಪ್ರಕೃತಿಯ ಹಲವು ವೈಚಿತ್ರ್ಯಗಳಿಗೆ ಕಣ್ಣರಳಿಸಿದ್ದೇನೆ. ಕೃಷಿ ವರ್ಷಕ್ಕೊಮ್ಮೆ ಉತ್ಪನ್ನ ನೀಡುತ್ತದಾದರೂ  ತಿಂಗಳ ತಿಂಗಳ ಸಂಬಳ ಕೈಗೆ  ಕೊಡುವ ಕೆಲಸಕ್ಕಿಂತ ಹೆಚ್ಚು  ಸಂತೋಷ  ಕೊಟ್ಟಿದೆ , ನೆಮ್ಮದಿ ಕೊಟ್ಟಿದೆ, ಅಪ್ಪ ಅಮ್ಮನ ಮುಖದಲ್ಲೂ ನೆಮ್ಮದಿ ಕಂಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಸ್ನೇಹವಿದೆ, ನಾನ್ ಸ್ಟಾಪ್ ಹರಟೆಗಾಗಿ ಪ್ರತಿ ಸಂಜೆಯೂ ಕಾಯುತ್ತಿದೆ.ಈ ಸ್ನೇಹ ಸ್ನೇಹಾವಾಗಿಲ್ಲ ಎನಿಸಿದ ದಿನ, ನೀನೇ  ಕೊಟ್ಟ ಗುಲಾಬಿ ಗಿಡದಲ್ಲಿ ಅರಳಿದ್ದ ಹೂ ತಂದು, ಇದೇ  ಒಂಟಿ ಮರದಡಿಯ ಕಲ್ಲು ಬೆಂಚಿನ ಮುಂದೆ ನಿನಗೆ I love you ಎಂದಿದ್ದೆ. ಹೂ ತೆಗೆದು ಕೊಂಡವಳು ದೊಡ್ಡದಾಗಿ ಹೇಳು, ಗುಡ್ಡಗಳಿಂದ ಪ್ರತಿದ್ವನಿಸಬೇಕು ಎಂದೆ .ನಾನು  ದೊಡ್ಡದಾಗಿ ಹೇಳಿದಾಗ ಗುಡ್ಡಗಳಿಂದ ಬಂದ ಪ್ರತಿಧ್ವನಿ ಗೆ ಕಿವಿಕೊಟ್ಟು , ನಾನು ಹೇಳಿದರೂ ಹೀಗೆ ಕೇಳುತ್ತಾ? ಎಂದು ಕೇಳಿದವಳ ಮುಖ ನೋಡುತ್ತಾ ಒಳ್ಳೆಯ ಮನಸ್ಸಿನಿಂದ ಹೇಳಿದರೆ ಪ್ರತಿಧ್ವನಿಸುತ್ತೆ ಎಂದೆ. ಹೋಗೋ ನನಗಷ್ಟು ಒಳ್ಳೆ ಮನಸ್ಸಿಲ್ಲ ಎಂದು ಬೆಂಚಿನ ತುದಿಯಲ್ಲಿ ಕೆನ್ನೆಯುಬ್ಬಿಸಿ  ಕುಳಿತವಳನ್ನು, ತಮಾಷೆಯಲ್ಲ ನನ್ನನ್ನು ಮದುವೆ ಆಗ್ತಿಯಾ? ಎಂದು ಕೇಳಿದೆ. ಕಣ್ಣಲ್ಲಿ ಕಣ್ಣಿಟ್ಟು ನನಗೆ ಟೈಮ್ ಬೇಕು ಅಂತ ಹೇಳಿ ಅನಾಮತ್ತು ನೂರ ಅರವತ್ತೆಂಟು ಗಂಟೆಗಳ ಕಾಲ  ಕಾಯಿಸಿದ್ದೀಯ.ನೀ ಕೊಟ್ಟ ಗಡವು ಇವತ್ತಿಗೆ ಕೊನೆಯಾಗಿದೆ.  ನಮ್ಮ ಸ್ನೇಹ ಕಂಡ ಅಪ್ಪ ಅಮ್ಮಂದಿರಿಂದ ಹಿಡಿದು ನಮ್ಮನೆಯ ಕೊಟ್ಟಿಗೆಯ ನಿನ್ನದೇ ಹೆಸರಿನ ಕರುವರೆಗೆ ಎಲ್ಲರೂ ನಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ ಕಣೆ. ಮುಖ್ಯವಾಗಿ ನೀನೋಪ್ಪಬೇಕಿದೆ. ನಿನ್ನ ಮಾತಿಗೆ ಪ್ರತಿಧ್ವನಿಸಲು ಹಸಿರು ಗುಡ್ದಗಳೆಲ್ಲ  ಮಂಜಿನ ಸೆರಗು ಹೊದ್ದು ಸಿಂಗಾರ ಗೊಂಡಿವೆ, ಆ ಪ್ರತಿಧ್ವನಿಗೆ ನಾ ಕಾಯುತ್ತಿರುವಂತೆ, ನಮ್ಮಿಬ್ಬರಿಗಾಗಿ ಆ ಒಂಟಿ ಮರ ಮತ್ತು ಖಾಲಿ ಬೆಂಚು ಕಾಯುತ್ತಿವೆ.. .. 


(ಗೆಳತಿ ರಂಜಿತಾ ಹೆಗಡೆ ತೆಗೆದ ಫೋಟೋ ನನ್ನಿಂದ ಬರೆಸಿದ ಸಾಲುಗಳಿವು .. Special Thanks to Ranjithaa..:) ) 

Saturday, 3 November 2012

" ಸನ್ನೆಯಲ್ಲಿ ಮಾತನಾಡುವುದನ್ನು ಕಲಿಯಬೇಕಿದೆ ನನಗೆ".

ಮೌನ ಕೊಲ್ಲುತ್ತಿತ್ತು ಅಲ್ಲಿ. ಆದರೆ ಮಾತು ಸತ್ತು ತುಂಬಾ ದಿನಗಳಾಗಿದ್ದವು ಆ ಮನೆಯಲ್ಲಿ. ಮೂರು ಜನ ಅಕ್ಷರಶಃ  ದ್ವೀಪದಂತೆಯೇ ಬದುಕಿದ್ದೆವು ಅಲ್ಲಿ. ಮೂಕ ಅಪ್ಪ. ಮಾತು ಬಂದರೂ ಮೂಕಿಯಂತೆಯೇ ಬದುಕುತ್ತಿದ್ದ ಅಮ್ಮ. ಮತ್ತು ನನ್ನ ಮಾತುಗಳು ಇವರಿಗೆಲ್ಲಿ ತಿಳಿದೀತು ಎಂಬ ಅಹಂಕಾರದಲ್ಲಿ ಮಾತೇ ಆಡದೆ ಇರುತ್ತಿದ್ದ ನಾನು. ನಾಲ್ಕು ಅಕ್ಷರ ಕಲಿತವಳಲ್ಲವೇ , ಕಲಿಸಿದವರ ನೆನಪಿರಲಿಲ್ಲ. ಜಾಣೆ ನಾನು. ಆಟ ಪಾಠಗಳಲ್ಲೆಲ್ಲ ನಾನೇ ಮೊದಲು.ನನ್ನ ಯಶಸ್ಸನ್ನು ಮನೆಯಲ್ಲಿ ಹೇಳಿದರೆ ಅಮ್ಮ ದೇವರ ಮುಂದೆ ತುಪ್ಪದ ದೀಪ ಹಚ್ಚಿ , ಹೀಗೆ ಒಳ್ಳೆದಾಗಲಿ ಎನ್ನುತ್ತಿದ್ದಳು. ಮಾತು ಬಾರದ ಅಪ್ಪ ಕಣ್ಣಲ್ಲಿ ನೀರು ತುಂಬಿಕೊಂಡು ಏನೇನೋ ಅರ್ಥವಾಗದ ಸನ್ನೆ ಮಾಡುತ್ತಿದ್ದ. ನಾನದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ  ಮಾಡಿರಲಿಲ್ಲ. ಅವನ ಕೈ ಸನ್ನೆಗಳು ಅರ್ಥವಾಗದ ಜನ ಅವನನ್ನು ನೋಡಿ ನಗುತ್ತಿದ್ದರು. ನನ್ನನ್ನು ಮೂಗನ ಮಗಳೆಂದು ಊರವರು ಗುರುತಿಸುತ್ತಿದ್ದರೆ ಅಸಹ್ಯವಾಗುತ್ತಿತ್ತು .ಅವಮಾನವಾದಂತಾಗುತ್ತಿತ್ತು. ಅದಕ್ಕೆ ಯಾರೆದುರಿಗೂ ಆತ ನನ್ನ ತಂದೆಯೆಂದು ಹೇಳುತ್ತಲೇ ಇರಲಿಲ್ಲ.  ಯಾರನ್ನು ಮನೆಗೆ ಕರೆಯುತ್ತಿರಲಿಲ್ಲ. ಕಾಲೇಜು ಮತ್ತು ಹಾಸ್ಟೆಲ್ ನಲ್ಲಿ ಅನಾಥೆ ಅಂತ ಹೇಳಿಕೊಂಡೆ ಕಾಲೇಜ್ ಮುಗಿಸಿದ್ದೆ. 

ಒಂದು ಒಳ್ಳೆ ಕಂಪನಿಯಲ್ಲಿ ಕೆಲಸ ಸಿಗುವುದರಲ್ಲಿತ್ತು. ಕೆಲಸ ಸಿಕ್ಕ ತಕ್ಷಣ ಈ ಮುದಿ ಜೀವಗಳನ್ನು ಬಿಟ್ಟು ಎಲ್ಲಾದರೂ ದೂರ ಹೋಗಿ ಬದುಕಬೇಕು . ಸಾಕಿದ್ದರಾದ್ದರಿಂದ ತಿಂಗಳು ತಿಂಗಳು ಅಷ್ಟೋ ಇಷ್ಟೋ ಕಳಿಸಿದರಾಯಿತು ಎಂದುಕೊಂಡು ಒಂದು ವಾರ ಇರುವುದಕ್ಕಾಗಿ ಬಂದಿದ್ದು ಇಲ್ಲಿಗೆ. ಆದರೆ ಇಷ್ಟು ದೊಡ್ಡ ಆಘಾತ ಭರಸಿಡಿಲಿನಂತೆ ಬಡಿದಿತ್ತು. ಆ ಮೂಗ ನನ್ನ ಅಪ್ಪನೇ ಅಲ್ಲ ಎಂಬ ಸತ್ಯ ತಿಳಿದಿತ್ತು. ಒಳ ಮನೆಯ ಗೋಡೆಗಳಿಗೆ ಬಹಳ ಸತ್ಯ ಗೊತ್ತಿರುತ್ತದೆ ಎಂದು ಎಲ್ಲೋ ಓದಿದ್ದೆ. ಆದರೆ ಈ ಗೋಡೆಗಳಲ್ಲಿ ನನ್ನನ್ನು ಅಲ್ಲಾಡಿಸುವ ಸತ್ಯವಿತ್ತು ಎಂದು ಗೊತ್ತಿರಲಿಲ್ಲ. ಅಮ್ಮನ ಬಗೆಗೂ ಅಸಹ್ಯವಾಗ ತೊಡಗಿತ್ತು. ಛೆ ಇದೆಂತ ಜೀವನ ? ಎನಿಸ ತೊಡಗಿತ್ತು. ಈ ಕ್ಷಣದಲ್ಲಿ ಮನೆ ಬಿಟ್ಟು ಹೋಗಬೇಕೆಂದು ನಿರ್ಧರಿಸಿ ಎಲ್ಲವನ್ನು ಪ್ಯಾಕ್ ಮಾಡಿಕೊಂಡು ಹೊರಟಿದ್ದೆ.  

ಯಾಕೋ ಅಮ್ಮನಿಗೆ ಹೇಳೋಣ ಅನಿಸಿತು. ಅಮ್ಮ ಒಳಮನೆಯ ಕಿಟಕಿಗೆ ತಲೆ ಕೊಟ್ಟು, ಈಗಲೋ ಆಗಲೋ ಮಳೆ ಬರುವಂತಿದ್ದ ಕಾರ್ಮುಗಿಲ ದಿಟ್ಟಿಸುತ್ತ ಕುಳಿತಿದ್ದಳು. ಹೆಜ್ಜೆ ಸಪ್ಪಳಕ್ಕೆ ತಿರುಗಿ ನೋಡಿದವಳು "ಹೇಳದೆ ಹೊರಟು ಬಿಟ್ಟೆ ಎಂದುಕೊಂಡೆ. ಹೇಳಿ ಹೋಗಲು ಬಂದೆಯಾ??" ಎಂದಳು. ತಲೆಯಾಡಿಸಿದ್ದೆ. "ನನ್ನ ಮೇಲೆ ಅಸಹ್ಯವಾಗಿರಬೇಕಲ್ಲ ?? ನನ್ನ ಮಾತುಗಳು ಅಸಹ್ಯ ಎನಿಸದಿದ್ದರೆ ನಿನ್ನೊಡನೆ ಸ್ವಲ್ಪ ಮಾತನಾದಬೇಕಿದೆ ಕೇಳುವೆಯಾ" ಎಂದವಳು ನನ್ನ ಮುಖವನ್ನೂ ನೋಡದೆ ತನ್ನಷ್ಟಕ್ಕೆ ತಾನೇ ಎಂಬಂತೆ ಮಾತನಾಡತೊಡಗಿದಳು. ನಿನಗೆ ಅಮ್ಮನಾಗುವ , ಗಂಡನಿಗೆ ಹೆಂಡತಿಯಾಗುವ, ಅತ್ತೆಗೆ ಸೊಸೆಯಾಗುವ ಮೊದಲು ನಾನೂ ನಿನ್ನಂತೆಯೇ ಹೆಣ್ಣಾಗಿದ್ದೆ ಕಣೆ. ನನಗೆ ಅಮ್ಮನ ಕೈ ತುತ್ತಿನ ಸವಿ, ಜೋಕಾಲಿ, ಹಲಪೆಯಾಟದ ನೆನಪುಗಳಿದ್ದವು.. ಹರೆಯದ ವೈಯ್ಯಾರ , ಒನಪು, ಚಂದದಿ ಅರಳಿದ ಕನಸುಗಳಿದ್ದವು.. ಆಗ ತಾನೇ ಅರಳಿದ ಪ್ರೀತಿಯಿತ್ತು ಬದುಕಲ್ಲಿ.. ಆದರೆ ಪ್ರತಿಷ್ಠೆಯ ದಳ್ಳುರಿಯಲ್ಲಿ ನನ್ನ ಪ್ರೀತಿಯನ್ನೂ, ಪ್ರೀತಿಸಿದವನನ್ನೂ ಕೊಂದು ನಿನ್ನ ಅಪ್ಪನೆನಿಸಿಕೊಂಡವನ ತಾಳಿಗೆ ಕೊರಳೊಡ್ಡಿಸಿದರು ಮಾರಿ ಗದ್ದುಗೆಗೆ ಕುರಿ ಕೊರಳಿಡುವಂತೆ. ಅಲ್ಲಿಗೆ ತವರ ಸಂಬಂಧ ಕಡಿದು ಬಿತ್ತು. ಹೆಣ್ಣು ಸಹನಾ ಧರಿತ್ರಿ ಅಲ್ಲವೇ . ಎಲ್ಲವನ್ನು ಮರೆತು ಹೊಸ ಬದುಕು ಕಟ್ಟುತ್ತೇನೆ ಎಂದುಕೊಂಡೆ. ಆದರೆ ಅತ್ತೆ ಎನಿಸಿಕೊಂಡವಳು ನನಗೆಂದೂ ತಾಯಿಯಾಗಲಿಲ್ಲ. ಗಂಡನಾದವನು ಗಂಡನ ದರ್ಪ ತೋರಿದನೆ ವಿನಃ ಗೆಳೆಯನಾಗಲಿಲ್ಲ. ಒಂದು ವರ್ಷದಲ್ಲಿ ನೀನು ಹೊಟ್ಟೆಯಲ್ಲಿದ್ದೆ. ಹೆಣ್ಣು ಮಗುವಾದರೆ ನಿನಗೆ ಈ ಮನೆಯಲ್ಲಿ ಜಾಗವಿಲ್ಲ ಎಂದು  ಮೊದಲೇ  ಅತ್ತೆಯ ತಾಕೀತು. ಹೆಣ್ಣಾದರೆ ಅವಳನ್ನು ಮತ್ತೆ ಕರೆತರುವ ಅವಶ್ಯಕತೆಯಿಲ್ಲ ಎಂದು ಮಾವ ಒಳಮನೆಯಲ್ಲಿ ನಿಂತು ಅಬ್ಬರಿಸಿದ್ದು, ಹೆರಿಗೆ ನೋವಿನಿಂದ ನರಳುತ್ತಿದ್ದರೂ ಕಿವಿಗೆ ತಾಕಿತ್ತು . ಆಸ್ಪತ್ರೆಯಲ್ಲಿ ನಿನ್ನ ಹೆತ್ತು , ನಿನ್ನ ಸ್ಪರ್ಶವನ್ನು ಆನಂದಿಸುತ್ತಿದ್ದವಳಿಗೆ ಕೇಳಿದ್ದು "ಹೆಣ್ಣುಮಗುವಮ್ಮ" ಎಂದ ನಿನ್ನಪ್ಪನ ಕೊನೇ ಮಾತು. ಆಮೇಲೆ ಅವರ ಮಾತು ಕೇಳಲಿಲ್ಲ , ಮುಖ ನೋಡಲಿಲ್ಲ. ಹೆಣ್ಣು ಹೆತ್ತ ಕಾರಣಕ್ಕೆ ಹಸಿ ಬಾಳಂತಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ನಡೆದಿದ್ದರು ನನ್ನ ಗಂಡನ ಮನೆಯವರು. ಗಂಡನ ಮನೆಯ ಸಂಬಂಧವೂ ಹಾಗೆ ಕಡಿದಿತ್ತು.  ಅಲ್ಲಿಂದ ಹೊರಬಿದ್ದ ನನ್ನನ್ನು ಹದ್ದಿನ ಕಣ್ಣಿನ ಸಮಾಜ ಹಸಿ ಮಾಂಸದ ತುಂಡಿನಂತೆ ನೋಡುತ್ತಿತ್ತು. ಆಗ ಜೋತೆಯಾದವನು ಈ ಮೂಗ. ಮನೆಗೆ ಬಾ ಎಂದು ಕರೆದುಕೊಂಡು ಬಂದ. ಒಂದೇ ಸೂರಿನಡಿಯಲ್ಲಿ ಗಂಡು ಹೆಣ್ಣು  ಸಂಬಂಧವಿಲ್ಲದೆ ಬದುಕುವುದನ್ನು ಸಮಾಜ ಒಪ್ಪುವುದಿಲ್ಲ ಅಲ್ಲವೇ? ಅದಕ್ಕೆ ಈ ತಾಳಿ ತಂದು ಕೊಟ್ಟು , ನೀನೆ ಕಟ್ಟಿಕೋ ಎಂದು ಸನ್ನೆ ಮಾಡಿದ. ಅವನ ಸನ್ನೆಯಂತೆ ನಾನೇ  ಕಟ್ಟಿಕೊಂಡೆ. ಅವತ್ತಿನಿಂದ ಮಗಳಲ್ಲದ ನೀನು , ಹೆಂಡತಿಯಲ್ಲದ ನಾನು ಅವನ ಮೂಕ ಪ್ರಪಂಚದ ಭಾಗವಾದೆವು. ನಮಗಾಗಿ ಅವರಿವರ ಮನೆಯ ಜಮೀನಿನಲ್ಲಿ ಗೇಣಿ ಮಾಡಿ ಗಾಣದೆತ್ತಿನಂತೆ ದುಡಿದು ಈ ಮನೆ ಮಾಡಿದರು. ನಿನಗೆ ಯಾವುದಕ್ಕೂ ಕಡಿಮೆಯಾಗದಂತೆ ನಿನ್ನ ಬೆಳೆಸಿದರು. ವಿದ್ಯೆ ಕಲಿಸಿದರು. ಮೂಕ ಮನಸ್ಸಿನಲ್ಲಿ ನಿನ್ನ ಮದುವೆಯ ಕನಸು ಕಂಡರು. ನಿನಗಾಗಿ ಚಿನ್ನ ಮಾಡಿಸಿದರು, ಬ್ಯಾಂಕಿನಲ್ಲಿ ಹಣ ಕೂಡಿಟ್ಟರು. ಅವರು ಬಂದ ತಕ್ಷಣ ಅವರನ್ನು ಕೇಳಿ ಆ ಕಾಗದ ಪತ್ರಗಳನ್ನು ನಿನಗೆ ಒಪ್ಪಿಸುತ್ತೇನೆ ಅಲ್ಲಿವರೆಗೂ ದಯವಿಟ್ಟು ನಿಲ್ಲು. ದೇವರು ನನ್ನಿಂದ ಪ್ರೀತಿಯನ್ನು ಕಿತ್ತುಕೊಂಡ. ತವರನ್ನು ದೂರ ಮಾಡಿದ . ಹೆಣ್ಣು ಹೆತ್ತಿದ್ದಕ್ಕಾಗಿ ಗಂಡನ ಮನೆಯವರನ್ನು ದೂರ ಮಾಡಿದ . ಹೆಣ್ಣು ಮಗಳಾದ ನಿನ್ನನ್ನೂ ದೂರ ಮಾಡುತ್ತಿದ್ದಾನೆ. ಆದರೂ ಬೇಸರವಿಲ್ಲ ,ಕಾರಣ ನನ್ನ ಮೌನ ಪ್ರಪಂಚವನ್ನೂ,ಅದರ ಸುಖವನ್ನು ಅವನು ಕಸಿದುಕೊಳ್ಳಲಾರ ಎಂದವಳು ನನ್ನ ಮುಖ ನೋಡಿ, ಇರು ಎಂದೂ ಒಳಗೆ ಹೋಗಿ ಒಂದು ಮಫ್ಲರ್ ಮತ್ತು ಸ್ವೆಟ್ಟರ್ ತಂದು , ಮೊನ್ನೆ ಸಂತೆಗೆ ಹೋದವರು ಮಳೆಗಾಲಕ್ಕೆ ನಿನಗೆ ಅಂತಾ ಇವರು ತಂದಿದ್ದಾರೆ ತೆಗೆದುಕೋ ಎಂದು ಕೈಗಿತ್ತಳು. ಸತ್ಯವನ್ನು ಮುಚ್ಚಿಡಬೇಕೆಂದುಕೊಂಡಿದ್ದೆ . ಆದರೆ ನಿನಗೆ ಗೊತ್ತಾದ ಅರ್ಧ ಸತ್ಯವನ್ನು ಪೂರ್ತಿಗೊಳಿಸಬೇಕಿತ್ತು ಅದಕ್ಕಾಗಿ ಎಲ್ಲವನ್ನೂ  ಹೇಳಿದೆ. ದಯವಿಟ್ಟು ನನ್ನ ಕಮಿಸು ಎಂದು ಕುಸಿದು ಕುಳಿತಳು.

ಹೊರಗಡೆ ಧೋ ಎಂದು ಮಳೆ ಸುರಿಯುತ್ತಿತ್ತು, ಆದರೆ ಅದರ ಪರಿವಿರಲಿಲ್ಲ. ಅಮ್ಮನ ಮಾತಿನ ಮಳೆ ಮನಸ್ಸಿನ ಎಲ್ಲ ಕೊಳೆಗಳನ್ನು ತೊಳೆದು ಹಾಕಿತ್ತು. ಹುಟ್ಟಿಸಿದ ಅಪ್ಪನೆನಿಸಿಕೊಂಡವ ನನ್ನನ್ನು  ಹೆಣ್ಣೆಂದು ತೊರೆದು ಹೋಗಿದ್ದ. ಆದರೆ ಅಪ್ಪನಲ್ಲದವನು ನನ್ನನ್ನೇ ಬದುಕೆಂದುಕೊಂಡು, ಗಂಧದಂತೆ ತನ್ನನ್ನು ಸವೆಸಿಕೊಂಡು ಅಪ್ಪನ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ್ದ. ಆದರೆ ನಾನು ಯಾವುದನ್ನೂ  ಅರ್ಥ ಮಾಡಿಕೊಂಡಿರಲಿಲ್ಲ. ಬದುಕ ತುಂಬಾ ಮೌನವಾಗಿ ಪ್ರೀತಿಸಿದವನಿಗೆ ನಾನು ಕೊಟ್ಟಿದ್ದು ತಿರಸ್ಕಾರ ಮಾತ್ರ. ಈಗ ಯಾವುದೂ ಬೇಡವಾಗಿತ್ತು. ಓಡಿ ಹೋಗಿ ಅಮ್ಮನನ್ನು ತಬ್ಬಿಕೊಂಡೆ."ನನ್ನನ್ನು ಕ್ಷಮಿಸಿಬಿಡಮ್ಮ . ಇನ್ನು ಯಾವತ್ತೂ ನಿಮ್ಮಿಬ್ಬರನ್ನು ಬಿಟ್ಟು ಎಲ್ಲೂ ಹೋಗಲಾರೆ. ಇಲ್ಲಿಯೇ ಕೆಲಸ ಹಿಡಿಯುತ್ತೇನೆ . ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನ್ನ ಕ್ಷಮಿಸು " ಎಂದು ಬೇಡಿಕೊಂಡೆ. ಬೊಗಸೆಯಲ್ಲಿ ನನ್ನ ಮುಖ ಹಿಡಿದುಕೊಂಡು ಹಣೆಗೆ ಮುತ್ತಿಟ್ಟು ಎದೆಗೆ ಒತ್ತಿಕೊಂಡಳು. ಕ್ಷಮಿಸುತ್ತಿಯಲ್ಲವೇ ? ಅಪ್ಪನು ಕ್ಷಮಿಸುತ್ತಾರೆನಮ್ಮ?? ಎಂದೆ. ತುಸುನಕ್ಕು  ಕಿವಿ ಮುಚ್ಚುವಂತೆ ಮಫ್ಲರ್ ಸುತ್ತಿ , ಸೆಟ್ಟರ್ ತೊಡಿಸಿ "ತುಂಬಾ ಚಳಿಯಿದೆ.ಬೆಚ್ಚಗೆ ಹೊದ್ದುಕೊ. ಇವರು ಬರುವ ಹೊತ್ತಾಯಿತು  ಮಳೆಯಲ್ಲಿ ನೆನೆದು ಬರುತ್ತಾರೆ,   ಬೆಂಕಿ ಮಾಡಿ ಬಿಸಿನೀರು ಕಾಯಿಸಬೇಕು ಎನ್ನುತ್ತಾ ಒಳಗೆ ಹೋದಳು. ಅಪ್ಪ ಬರುವ ದಾರಿ ಕಾಯುತ್ತಾ ಅಲ್ಲೇ ಕುಳಿತೆ. 

ತಡೆದ ಮಳೆ ಜಡಿದು ಹೊಡೆಯುತ್ತದಂತೆ. ಒಂದು ದೊಡ್ಡ ಮಳೆ ಬಂದು ನಿಂತು ಆಕಾಶ ನಿರ್ಮಲವಾಗಿತ್ತು. ಅಂತೆಯೇ ಮನಸ್ಸೂ ಕೂಡ. ಹೊದ್ದುಕೊಂಡಿದ್ದ ಸ್ವೆಟ್ಟರ್ ಮತ್ತು ಮಫ್ಲರ್ ಬೆಚ್ಚ್ಚಗಾಗಿಸುತ್ತಿದ್ದರೆ , ಅದರೊಳಗಿದ್ದ ಪ್ರೀತಿಯ ಭಾವ ಇನ್ನೂ  ಅಪ್ಯಾಯಮಾನವಾಗಿತ್ತು. "ಬೇಗ ಬನ್ನಿ ಅಪ್ಪಾ. ನಿಮ್ಮ ಮೌನ ಪ್ರಪಂಚದ ಭಾಗವಾಗಬೇಕಿದೆ. ಮಡಿಲಲ್ಲಿ ತಲೆಯಿಟ್ಟು ಮಲಗಬೇಕಿದೆ. ನಿಮ್ಮ ಸನ್ನೆಯ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸನ್ನೆಯಲ್ಲೇ ನಿಮ್ಮೊಡನೆ ಮಾತನಾಡಬೇಕಿದೆ. ನನ್ನ ಸನ್ನೆಗಳು ನಿಮಗೆ ಅರ್ಥವಾಗಬಹುದಾ?? ಗೊತ್ತಿಲ್ಲ. ಆದರೆ ಈಗಿನಿಂದಲೇ ಸನ್ನೆಯಲ್ಲಿ ಮಾತನಾಡುವುದನ್ನು ಕಲಿಯಬೇಕಿದೆ ನನಗೆ". 

Wednesday, 3 October 2012

ಮಟಿರಿಯಲಿಸ್ಟಿಕ್ ಜೀವನ , ಅದನ್ನೇ ಪ್ರೀತಿಸಬೇಕು

ಬಾಲ್ಕನಿಯಲ್ಲಿ  ನಿಂತಿದ್ದೆ.  ಏನು ಅಮ್ಮಾವ್ರು ದಿನಾ ೧೦ ಗಂಟೆಗೆ ಇಲ್ಲೇ ಇರ್ತಿರಲ್ಲ? ಮೊಬೈಲ್ ಕೂಡ ರೂಮಲ್ಲೇ ಬಿಟ್ಟು ಬರ್ತೀಯ. ಇಲ್ಲೇನು ಮಾಡ್ತಿಯ ಅಂತ ಕೇಳುತ್ತ ರೂಂ ಮೆಟ್ ಬಂದಳು. ಪಕ್ಕದ ಮನೆಯ ಟೆರ್ರೆಸ್ ಕಡೆ ಕೈ ತೋರಿಸಿದೆ. ಪುಟ್ಟ ಮಗು ಗಲ್ಲಕ್ಕೆ ಕೈ ಕೊಟ್ಟು ಕುಳಿತಿತ್ತು.  ಅಲ್ಲೇನು ಮಾಡ್ತಿದೆ ಅದು ಎಂದಳು. ಸುಮ್ನೆ ನೋಡು ಎಂದೇ. ಆ ಮಗು ಆಕಾಶ ನೋಡ್ತಾ, ಅಲ್ಲೇ ಇರೋ ಬಾಲ್ ಆಡುತ್ತ, ಪಕ್ಕದಲ್ಲಿರೋ ಜೋಕಾಲಿಯಲ್ಲಿ ಜೀಕುತ್ತ  , ಆಗಾಗ ರೋಡ್ ಕಡೆ ನೋಡುತ್ತಾ  ಏನೋ ಪದ್ಯಗಳನ್ನು ಹೇಳುತ್ತಾ ಇತ್ತು. ಇಬ್ಬರೂ ನೋಡುತ್ತಾ ಇದ್ದೆವು. ದಿನಾ ಹೀಗೆ ಆಡುತ್ತೆ ಕಣೆ ಇದು. ನೋಡೋಕೆ ಮಜಾ, ಅದಿಕ್ಕೆ ಇಲ್ಲಿರ್ತೀನಿ ಅಂದೆ. ಮಾತಾಡಿಸೇ ಅಂದಳು. ಹಾಯ್ ಪುಟ್ಟ ಅಂದೆ. ಹೆದರಿ ಕೆಳಗೆ ಹೋಗುತ್ತೆ ಮಗು ಅಂದುಕೊಂಡೆವು , ಬದಲಾಗಿ ಆ ಕಡೆಯಿಂದ ಏನು? ಎಂದು ಉತ್ತರ ಬಂತು. ಇಲ್ಲೇನು ಮಾಡ್ತಿದ್ದೀಯ ಕೇಳಿದೆ. ಅಮ್ಮನಿಗೆ ಕಾಯ್ತಾ ಇದ್ದೀನಿ , ಅಮ್ಮಾ ಬರ್ತಾಳೆ ಈಗಾ ಎಂದಿತು ಪಾಪು. ಎಲ್ಲಿ ಎಂದು ಇವಳು ಕೇಳಿದಳು. ಮಗು ರೋಡಿನ ಕಡೆಗೆ ಕೈ ತೋರಿತು.ನೀವೇನು ಮಾಡ್ತಿದ್ದೀರ ? ನಿಮ್ಮ ಅಮ್ಮನು ಬರ್ತಾರ? ಎಂದ ಮಗುವಿನ ಮುಗ್ದ ಪ್ರಶ್ನೆಗೆ ಉತ್ತರ ಹೊಳೆಯಲಿಲ್ಲ ಇಬ್ಬರಿಗೂ. ಆಗ ಸುಮಾರು ೧೧.೩೦. ಮನೆಯ ಎದುರು ಒಂದು ಕ್ಯಾಬ್ ಬಂದು ನಿಂತಿತು.  ಅಮ್ಮಾ ಬಂತು , ಅಮ್ಮಾ ಬಂತು ಎಂದು ಮಗು  ಖುಷಿ ಪಟ್ಟು ನಲಿಯುತ್ತಿತ್ತು. ಅದರಿಂದ ಇಳಿದ ಮಹಿಳೆ ನೇರವಾಗಿ ಬಾಲ್ಕನಿಗೆ ಬಂದು ಮಗುವನ್ನು ಅಪ್ಪಿ ಮುದ್ದಾಡಿ ಕರೆದುಕೊಂಡು ಹೋದಳು. 

ನೋಡಿದ್ಯ ಮಗು ಎಷ್ಟೊಂದು ಅಮ್ಮನಿಗಾಗಿ ಹಂಬಲಿಸುತ್ತೆ, ಇಷ್ಟು ಪುಟಾಣಿ ಮಕ್ಕಳನ್ನು ಬಿಟ್ಟು ಅದು ಹೇಗೆ ಕೆಲಸಕ್ಕೆ ಹೋಗ್ತಾರೋ ಏನೋ ಎಂದೆ.  ಅದಿಕ್ಕೆ ಇವಳು ಪಾಪ ಆ ತಾಯಿಯು ಆಫಿಸಿನಲ್ಲಿ ಮಗುವಿಗಾಗಿ  ಅದೆಷ್ಟು ಹಂಬಲಿಸಿದ್ದಾಳೋ ಏನು ಗೊತ್ತು. ಇಲ್ಲಿನ ಅನಿವಾರ್ಯತೆಗಳಿಗಾಗಿ, ಜೀವನ ಶೈಲಿಗಾಗಿ ದುಡಿಯಲೇ ಬೇಕಲ್ಲವಾ?? ಎಂದಳು. ಹ್ಮ್ಮ್ ಈ ಹೊತ್ತಿನಲ್ಲಿ ಬಂದು ಮಗುವಿನ ನಗು ನೋಡಿ ಸುಸ್ತು ಕಳೆದುಕೊಳ್ಳುವ ಅಮ್ಮಂದಿರಿರುವಂತೆ, ನಿದ್ದೆ ಮಾಡುತ್ತಿರುವ ಪುಟ್ಟ ಮಗುವಿನ ಹಣೆಗೆ ತುಟಿಯೊತ್ತಿ ಈಗ ಕೆಲಸಕ್ಕೆ ಹೊರಡುವ ಅಮ್ಮಂದಿರು ಇರುತ್ತಾರೆ ಎಂದೆ.  ಹೌದಮ್ಮ ಇದು ಬೆಂಗಳೂರು,  ಇಲ್ಲಿ  ಯಾವುದಕ್ಕೂ ಆದಿ ಅಂತ್ಯಗಳಿಲ್ಲ. ಇಲ್ಲಿ ಎಲ್ಲವೂ ನಿರಂತರವೇ.ಇಲ್ಲಿ ೨೪/೭ ಬಾಗಿಲು ಮುಚ್ಚದ, ಲೈಟ್ ಆಫ್ ಆಗದ ಕಂಪೆನಿಗಳೂ  ಇವೆ.ಎಲ್ಲವೂ ಯಾಂತ್ರಿಕ, ಎಲ್ಲವು ಶಿಫ್ಟ್ ಗಳಂತೆ, ಊಟ, ತಿಂಡಿ, ನಿದ್ದೆ ಎಲ್ಲವೂ,  ಕೊನೆಗೆ ದಿನ ರಾತ್ರಿಗಳು ಕೂಡ..  ಮಟಿರಿಯಲಿಸ್ಟಿಕ್ ಜೀವನ, ಅದನ್ನೇ ಪ್ರೀತಿಸಬೇಕು ಎಂದಳು. ಹೌದಲ್ವ ಅಂದೆ. ನೋಡು ಯಾರಿಗೆ ಯಾವ ಶಿಫ್ಟೋ ಏನೋ ನಮಗಂತೂ ಮಲಗೋ ಶಿಫ್ಟ್,ಅವಾಗಲೇ ಹನ್ನೆರಡುವರೆ ಬಾ ಮಲಗೋಣ ಎನ್ನುತ್ತಾ ಎಳೆದುಕೊಂಡು ಬಂದಳು. 

 ಬಂದು ಮಲಗಿದವಳಿಗೇಕೋ ನಿದ್ದೆ ಬರಲಿಲ್ಲ. ನಮ್ಮಲ್ಲಿ ಮುಸ್ಸಂಜೆಯಾದರೆ ಸಾಕು ಕತ್ತಲಾಯಿತು ಬಾಗಿಲು ಹಾಕು, ದೇವರಿಗೆ ದೀಪ ಹಚ್ಚು ಎನ್ನುತ್ತಾರೆ. ದೀಪ ಹಚ್ಚಿ ಬಂದು ಮತ್ತೊಮ್ಮೆ ಬಾಗಿಲೆಲ್ಲ ಭದ್ರವಾ ಎಂದು ನೋಡುವಷ್ಟರಲ್ಲಿ ಕತ್ತಲು  ಗವ್ವನೆ ಕವಿದಿರುತ್ತದೆ  ಹೆದರಿಸುವಷ್ಟು. ಆದರೆ ಇಲ್ಲಿ ಕತ್ತಲನ್ನೇ ನಾಚಿಸುವಷ್ಟು ದೀಪಗಳ ಸಾಲು. ಆಗಸದಲ್ಲಿ ನಕ್ಷತ್ರ ಕಂಡರೆ ಮಾತ್ರ ರಾತ್ರಿಯಿರಬೇಕು ಎಂದುಕೊಳ್ಳುವಷ್ಟು. ಆ ದೂರದ ಅಪಾರ್ಟ್ಮೆಂಟ್ ನಲ್ಲಿ ಕಾಣುವ ಲೈಟ್ ಗಳೆಲ್ಲ ಆರುವುದೇ ಇಲ್ಲವೇನೋ. ನಮ್ಮಲ್ಲಿ ಕತ್ತಲಾದರೆ ದಿನ ಮುಗಿಯಿತು.ಬೆಳಗಿನ ಸುಸ್ತೆಲ್ಲ ಕಳೆದುಕೊಳ್ಳಲೊಂದು ರಾತ್ರಿ   . ನಾಳೆ ಮತ್ತದೇ ದಿನ, ದುಡಿತ, ಆದರೆ ಇಲ್ಲಿ ಹಾಗಲ್ಲ ಹಗಲಿರುಳು ದುಡಿತವೇ, ದಿನರಾತ್ರಿಯ ವಿಂಗಡನೆಯೇ ಇಲ್ಲ  ಎಂದುಕೊಳ್ಳುತ್ತಿರುವಾಗಲೇ ಆ ಅಪರಾತ್ರಿಯಲ್ಲಿ ಕೆಳಗೆ ಬಂದು ನಿಂತ ಯಾವುದೋ ವಾಹನದಿಂದ ಚಂದಿರನನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು.. ಎಂಬ ಕನ್ನಡ ಹಾಡೊಂದು ಮೊಳಗುತ್ತಿತ್ತು. ಎಲ್ಲರನ್ನು ಸೇಫ್ ಆಗಿ ಮನೆಗೆ ಬಿಟ್ಟು ಬಂದ ಕ್ಯಾಬ್ ಡ್ರೈವರ್ ಸ್ವಲ್ಪ ಹೊತ್ತು ಹಾಡು ಕೇಳಿ ಮಲಗುತ್ತಾನೆ. ಇಲ್ಲಿಗೆ ಇವನ ದಿನ ಮುಗಿಯಿತು ಎಂದುಕೊಂಡೆ. ಹೊರಗಡೆ ಹೆಜ್ಜೆ ಸದ್ದು, ಇದು ಮೇಲಿನ ಮನೆಯ ಪೇಪರ್ ಏಜೆನ್ಸಿ ನಡೆಸುತ್ತಿರುವ ಹುಡುಗರದ್ದು,  ಪೇಪರ್ ಗಾಡಿ ಬರುವ ಹೊತ್ತು, ಜೊತೆಯಲ್ಲೇ ಪಕ್ಕದ ರೂಂ ನಿಂದ ಅಲರಾಂ ಶಬ್ದ. ಆ ಹುಡುಗಿಗೆ ಬೆಳಗ್ಗೆ ೫ ಗಂಟೆಗೆ ಲಾಗಿನ್. ಅವಳು ಸ್ವಲ್ಪ ಹೊತ್ತಿನಲ್ಲೇ ಹೊರಡುತ್ತಾಳೆ. ಆ ಡ್ರೈವರ್ ಕೆಲಸ ಮುಗಿಸಿ ಮಲಗುವ ಹೊತ್ತಿಗೆ, ಇವರೆಲ್ಲರಿಗೆ ಮತ್ತೆ  ದಿನದ  ಪ್ರಾರಂಭ. ರೂಂ ಮೆಟ್ ಹೇಳಿದಂತೆ  ಎಲ್ಲ ಇಲ್ಲಿ ನಿರಂತರವೇ ಎಂದುಕೊಳ್ಳುತ್ತ ಕತ್ತಲಲ್ಲೂ ಅವಳೆಡೆಗೆ ನೋಡಿದೆ. 

ಆಗಲೇ ದೂರದ ಮಸೀದಿಯ ಮೈಕಿನಲ್ಲಿ ಪ್ರಾರ್ಥನೆ ಕೇಳತೊಡಗಿತ್ತು.  ಇನ್ನು ಹೂವು ,ತರಕಾರಿ ಮಾರುವವರಿಗೆಲ್ಲ ದಿನ ಪ್ರಾರಂಭವಾಗುತ್ತದೆ. ಮತ್ತೊಂದು ಹೊಸ ದಿನ ಎಂದುಕೊಳ್ಳುವಷ್ಟರಲ್ಲಿ  ಪಕ್ಕದ ಗುಡಿಯ ಘಂಟೆ ಮೊಳಗಿತ್ತು, ಜೊತೆಗೆ ಸುಪ್ರಭಾತವೂ ಕೂಡ.ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಎದುರು ಮನೆ ಆಂಟಿ ಚಂದದ ರಂಗೋಲಿ ಹಾಕಲು ಬರುತ್ತಾಳೆ ಎಂದುಕೊಳ್ಳುತ್ತ ಮಗ್ಗುಲು ಬದಲಾಯಿಸುವ ಹೊತ್ತಿಗೆ ಮತ್ತೊಂದು ಬೆಳಗು ನಿಧಾನವಾಗಿ ತೆರೆದುಕೊಳ್ಳತೊಡಗಿತ್ತು.

(ಇದು ಸೆಪ್ಟೆಂಬರ್ 25 ರ ಲವಲವಿಕೆಯಲ್ಲಿ  ಪ್ರಕಟವಾದ ಲೇಖನ )

Monday, 10 September 2012

ಇದೆಲ್ಲ ಪ್ರೀತಿನಾ ??
ನಂಗೆ ಎಲ್ಲಿಲ್ಲದ ಸಿಟ್ಟು ಬಂದಿತ್ತು. ಬಂದಿತ್ತು ಏನು .. ಈಗಲೂ ಇದೆ. ಅಲ್ಲ ಮದ್ಯ ರಸ್ತೆಯಲ್ಲಿ ಅಷ್ಟೊಂದು ಸೀನ್ ಕ್ರಿಯೇಟ್ ಮಾಡೋ ಅವಶ್ಯಕತೆ ಇತ್ತಾ??  ನನ್ನ ದುಪ್ಪಟ್ಟಾ  ಗಾಳಿಯಲ್ಲಿ ಹಾರಿ ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಚಕ್ರಕ್ಕೆ ಸಿಲುಕಿದರೆ ಅದರಲ್ಲಿ ಬೈಕ್ ಸವಾರನ ತಪ್ಪೆನಿತ್ತು ಹೇಳು. ಸುಮ್ಮನೆ ಅವನ ಬೈಕ್ ಎಳೆದು ಹಿಡಿದು ನಿಲ್ಲಿಸಿ , ಕತ್ತಿನ ಪಟ್ಟಿ ಹಿಡಿದು ಜಗಳ ಆಡುವಂತದ್ದೇನಿತ್ತು?  ಅದಕ್ಕಿಂತ ಬೇಜಾರಾಗಿದ್ದು ಆ ಬೈಕ್ ನ ಎಳೆದು ನಿಲ್ಲಿಸುವ ಭರದಲ್ಲಿ ಅದೇನೋ ತಗುಲಿಸಿಕೊಂಡು ಕೈ ಗೆ ಗಾಯ ಮಾಡಿಕೊಂಡೆಯಲ್ಲ  ಅದು. ತುಂಬಾ ನೋವಾಗುತ್ತಿರಬೇಕು ಅಲ್ಲವಾ..?? ಮನೆಗೆ ಬಂದು ಇದೆಲ್ಲವನ್ನೂ ಅಮ್ಮನಿಗೆ ಒಪ್ಪಿಸಿದರೆ "ಅದು ಪ್ರೀತಿ ಕಣೆ , ಅವನು ನಿನ್ನ ಪ್ರೀತಿಸ್ತಾಯಿದಾನೆ" ಅಂತ ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಮಾತನಾಡುತ್ತಾಳೆ. ನೋಡು ಪುಟ್ಟಿ ಬರೀ ತರ್ಲೆ , ತಂಟೆ, ನಗು, ತುಂಟಾಟ ಅಂತ ಜೀವನಾನ ಸೀರಿಯಸ್ ಆಗಿ ತಗೊಳದೆ ಇರೊ ನೀನು ಬದುಕಿನ ಸೂಕ್ಷ್ಮತೆಗಳನ್ನು  ಅರ್ಥ ಮಾಡಿಕೊಂಡಿಲ್ಲ. ಪ್ರತಿ ಸಂಬಂಧಗಳಲ್ಲೂ ಅದರದೇ ಆದ ಸೂಕ್ಷ್ಮತೆಗಳಿರುತ್ತವೆ. ನೀನು ಸೂಕ್ಷ್ಮತೆಗಳನ್ನ ಅರ್ಥ ಮಾಡ್ಕೋ ಅಂತ ತಲೆ ನೇವರಿಸಿ ಕಾಫಿ ಕೊಟ್ಟು  ಒಳಗೆ ಹೋದಳು.

ಈಗ ಗೊಂದಲಕ್ಕೆ ಬಿದ್ದಿದ್ದೇನೆ ಮಾರಾಯ . ಇದೆಲ್ಲ ಪ್ರೀತಿನಾ ? ಈ ಮಹಾನ್ ಮೂಡಿ, ಕೋಪಿಷ್ಟೇ, ಜಗಳಗಂಟಿನಾ ಯಾವತ್ತಿಗೂ ನಗು ಮತ್ತು ಸಹನೆಯಿಂದ ಸಹಿಕೊಳ್ತಿಯಲ್ಲ ಅದು ಪ್ರೀತಿನಾ? ತುಂಬಾ ಮಾತಾಡಬೇಕು ಕಣೋ ಅಂತಾ ವಾಕಿಂಗ್ ಕರ್ಕೊಂಡ್ ಹೋಗಿ, ನಿನಗೆ ಚೂರೂ ಮಾತನಾಡಲು ಅವಕಾಶ ಕೊಡದೆ ಪಟ ಪಟಾಂತ ಮಾತಾಡ್ತಾ ಇದ್ರೆ, ಮುಖದಲ್ಲೊಂದು ಸಣ್ಣ ನಗು ಇಟ್ಕೊಂಡು ಸುಮ್ಮನೆ ಕೇಳ್ತಾ ಇರ್ತಿಯಲ್ಲ ಅದು ಪ್ರೀತಿನಾ? ನಂಗೆ ಮಾತಾಡೋ ಮೂಡ್ ಇಲ್ಲ ಅಂತ ಸುಮ್ನೆ ನಡಿತಾ ಇದ್ರೆ ನಮ್ಮಿಬ್ಬರ ಹೃದಯ ಬಡಿತಗಳಷ್ಟೇ ಕೇಳೋ ಅಷ್ಟು ಸೈಲೆಂಟ್ ಆಗಿ ಹೆಜ್ಜೆ ಹಾಕ್ತಿಯಲ್ಲ ನಂಜೊತೆ, ಆ ಹೆಜ್ಜೆಗಳಲ್ಲಿ ಇರೋದು ಪ್ರೀತಿನಾ? 

ಮಾತು - ಮೌನದಲ್ಲಿ ಜೊತೆ ಅಗ್ತಿಯಲ್ಲ ಇದು ಪ್ರೀತಿನಾ?

ನನ್ನ ಸಂತೋಷಗಳಿಗೆ ಜೋತೆಯಾಗ್ತಿಯಲ್ಲ. ಅದು ಪ್ರೀತಿನಾ? ನನ್ನ ಹಾಡುಗಳಿಗೆ ಕಿವಿಯಾಗ್ತಿಯಲ್ಲ ಅದು ಪ್ರೀತಿನಾ ? ಯಾವುದಾದರೂ ಕಾಂಪಿಟಿಶನ್ ಲಿ ಫಸ್ಟ್ ಬಂದ್ರೆ ನನಗಿಂತ ಜಾಸ್ತಿ ಖುಷಿ ಪಡ್ತಿಯಲ್ಲ. ಆ ಖುಷಿಯಲ್ಲಿರೋದು ಪ್ರೀತಿನಾ? ನೆಚ್ಚ್ಚಿನ ಗೆಳತಿ ನಮ್ಮನ್ನೆಲ್ಲ ಬಿಟ್ಟು ಹೋದಾಗ, ನಿನ್ನ ಹೆಗಲ ಮೇಲೆ ತಲೆಯಿಟ್ಟು ಬಿಕ್ಕಳಿಸಿದಾಗ, ಹೊದೊರೆಲ್ಲ ಬರಲ್ಲ. ನಾವೆಲ್ಲಾ ಇಲ್ವಾ ಜೊತೆಗೆ ಅಂತಾ ಬೆನ್ನ ಮೇಲೆ ಕೈ ಇಟ್ಟೆಯಲ್ಲ, ಆ ಸ್ಪರ್ಶದಲ್ಲಿದ್ದುದು ಪ್ರೀತಿನಾ? 

ನಗು - ಅಳು ಎರಡಲ್ಲೂ ಇರ್ತಿಯಲ್ಲ ಅದು ಪ್ರೀತಿನಾ?? 

ಎಲ್ಲರಲ್ಲೂ ಜಗಳ ಆಡಿಕೊಂಡು, ಏನೋ  ತರ್ಲೆ ಮಾಡಿಕೊಂಡು ಬಂದ್ರೆ ಅವಳ ಪರವಾಗಿ ನಾನು  ಸಾರೀ ಕೇಳ್ತೀನಿ, ಅವಳ ಮನೆಲ್ಲಿ ಕಂಪ್ಲೈಂಟ್ ಮಾಡ್ಬೇಡಿ ಅಂತಾ ಹೇಳಿ, ಮನೆಯವರಿಂದ ಬೈಗುಳ ತಪ್ಪಿಸ್ತಿಯಲ್ಲ ಅದು ಪ್ರೀತಿನಾ?? ವಿಪರೀತ ಜ್ವರ ಬಂದು ಆಸ್ಪತ್ರೆಗೆ ಅಡ್ಮಿಟ್  ಅದಾಗ, ನಾಳೆ ಹೊತ್ತಿಗೆ ಸರಿ ಅಗ್ತಿಯಾ ಅಂತಾ ಹಣೆ ಸವರಿ, ನಾಳೆ ಮಳೆ ಬಂದ್ರೆ  ನೆನೆದುಕೊಂಡು ಬರೋವಾಗಾ ಐಸ್ ಕ್ರೀಮ್ ತಿಂದ್ಕೊಂಡು ಬರೋಣ ಅಂತಾ , ಅಮ್ಮಂಗು ಕೇಳಿಸದಷ್ಟು ಸಣ್ಣಕೆ ಪಿಸುಗುಟ್ಟಿ ಕಣ್ಣು ಹೊಡೆದು ಹೋಗಿದ್ಯಲ್ಲ , ಆ ಕಣ್ಣೋಟದಲ್ಲಿ ಇದ್ದಿದ್ದು ಪ್ರೀತಿನಾ ?

ತರ್ಲೆಗಳಲ್ಲೂ ಪಾಲು ಕೇಳೋ ನಿಂದು ಪ್ರೀತಿನಾ??

ಹೆಣ್ಣು ಮಕ್ಕಳು ಹೂ ಮುಡ್ಕೊಂದ್ರೆ ಚೆಂದ ಅಂತಾ ಹೂವಿನಂಗಡಿ ಕಂಡಾಗ ಹೂ ಕೊಡ್ಸ್ತಿಯಲ್ಲ ಅದು ಪ್ರೀತಿನಾ? ಬರ್ತ್ ಡೆ ಗೆ ಬೆಲೆ ಕಟ್ಟೋಕೆ ಆಗದೆ ಇರೋ ಗಿಫ್ಟ್ ಕೊಡೊ ಅಂದಾಗ  ಕುಂಕುಮ ತುಂಬಿದ ಭರಣಿ ಕೊಟ್ಟು  ಬೆಲೆ ಕಟ್ಟು ನೋಡೋಣಾ  ಹುಬ್ಬು ಹಾರಿಸಿದ್ದೆ. ಅದರ ತುಂಬಾ ತುಂಬಿದ್ದು ಪ್ರೀತಿನಾ? ಕಣ್ಣೆದುರಿಗೆ ಇಲ್ಲಾ ಅಂದ್ರು ಕಣ್ಣಂಚಿನಲ್ಲಿ ಇಟ್ಕೊಂಡು ಜೋಪಾನ ಮಾಡ್ತಿಯಲ್ಲ ಇದು ಪ್ರೀತಿನಾ?

ಒಳ್ಳೆ ಗೆಳೆಯ ಅಂತ ಅನಿಸಿಕೊಳ್ತಿಯಲ್ಲ ಇದು ಪ್ರೀತಿನಾ?

  ಪಾಪ ಕೈ ಗಾಯ ತುಂಬಾ ನೋವಾಗ್ತಿರಬೇಕು ಫೋನ್ ಮಾಡಿ ಕೇಳೋಣವಾ ಅನಿಸ್ತಾಯಿದೆ. ಆದ್ರೂ ತಪ್ಪು ನಿಂದೆ. ಅದಕ್ಕೆ  "ಸಾರೀ ಕಣೆ " ಅಂತ ಒಂದು ಮಸ್ಸೇಜ್ ಮಾಡಲಿ ಅಂತ ಮೊಬೈಲ್ ಬೀಪ್  ಗಾಗಿ   ಹುಸಿ ಮುನಿಸಿನಿಂದಾ ಕಾಯ್ತಾ ಇದಿನಲ್ಲ ಇದು ಪ್ರೀತಿನಾ ??

ಮತ್ತೆ ಇದನ್ನೆಲ್ಲಾ ನಿನಗೇ ಹೇಳಬೇಕು ಅನಿಸ್ತಾಯಿದೆ ಇದೆಲ್ಲ ಪ್ರೀತಿನಾ ??


( ಇದು 14/08/2012 ರ ವಿಕೆ ಯಲ್ಲಿ ಪ್ರಕಟವಾದ ಬರಹ )

Thursday, 9 August 2012

ಯಾರಿಗೂ ದಕ್ಕಲಿಲ್ಲ ಇಡಿಯಾಗಿ.


ದೇವಕಿಯ ಕರುಳ ಕುಡಿಯಾಗಿ ..
ಯಶೋಧೆಯ ಕಣ್ಣ  ಬೆಳಕಾಗಿ ...
ತುಂಟ ಗೊಲ್ಲರಲಿ ...
ತಂಟೆ ಮಾಡುವ ಒಡನಾಡಿಯಾಗಿ..
ರುಕ್ಮಿಣಿ ಸಖನಾಗಿ .. 
ದ್ರೌಪದಿ ಸಹೋದರನಾಗಿ ...
ಭಾಮೆಯ ಮುಂಗೋಪದ ನುಡಿಯಾಗಿ ..
ವಿರಹಿ ರಾಧೆಯ ಬಿಸಿಯುಸಿರ ಕಿಡಿಯಾಗಿ ..
ಕಳ್ಳ ಕೃಷ್ಣ  ಕೊನೆಗೂ ...
ಯಾರಿಗೂ   ದಕ್ಕಲಿಲ್ಲ  ಇಡಿಯಾಗಿ ..

Sunday, 5 August 2012

ಈ ಸುಧೀರ್ಘ ಮೌನಕ್ಕಾಗಿ ಒಂದು ಕೋಳಿ ಜಗಳವಾಗಬೇಕಿದೆ.ಮತ್ತೆ ನಿನ್ನ ನೆನಪಾಗುತ್ತಿದೆ. ನೆನಪಿಗೊಂದು ಕಾರಣ ಬೇಕಲ್ಲ. ನಾಳೆ ಬೆಳಗಾದರೆ ನನ್ನ ಹುಟ್ಟುಹಬ್ಬ. ಹ್ಯಾಪಿ ಬರ್ತ್ ಡೇ. ಅಂತ ಹೇಳಿ ಒಂದು ದೊಡ್ಡ ಬೊಕ್ಕೆ , ಒಂದು ದೊಡ್ಡ ಬಾಕ್ಸ್ ಚಾಕಲೇಟ್ ಬಂದು ನಾಳೆಗೆ ಒಂದು ವರ್ಷ . ನೀ ನನಗೆ ಪ್ರತಿ ವರ್ಷ ಕೊಟ್ಟಿದ್ದು ಅದೇ ಅಲ್ಲವೇ. ಯಾಕೆಂದರೆ ನಿನಗೆ ಗೊತ್ತಿತ್ತು  ನನಗೆ ಕೆಂಪು ಗುಲಾಬಿ  ಮತ್ತು ಚಾಕಲೇಟ್ ತುಂಬಾ ಇಷ್ಟ ಅಂತ. ಯಾವ ಗೆಳೆಯನು ಅತ್ಯಂತ ಶ್ರದ್ಧೆಯಿಂದ ಪ್ರತಿ ಭೇಟಿಯಲ್ಲೂ ಇದನ್ನೆಲ್ಲಾ ತಂದು ಕೊಡಲಾರನೇನೋ.(ಅಭಿ ಕೂಡ ತಂದು ಕೊಡುವುದಿಲ್ಲ ) . ಆದರೆ ನೀ ತಂದು ಕೊಡುತ್ತಿದ್ದೆ ಗೆಳತಿಯಾಗಿ." ಅಯ್ಯೋ public ಲಿ ಕೆಂಪು ಗುಲಾಬಿ , ಚಾಕಲೇಟ್ ಅಂತ ಕೊಡಬೇಡ ಅಂತ ಹೇಳೇ ಅವಳಿಗೆ , ಇಬ್ಬರು ಹುಡುಗಿಯರು ನೀವು, ಜನ ತಪ್ಪು ತಿಳಿತಾರೆ",ಅಂತ ಯಾವಾಗಲು ತಮಾಷೆ ಮಾಡುತ್ತಿದ್ದ ಅಭಿಷೇಕ್ . "ನಿನಗೇನು ಗೊತ್ತು ನಮ್ಮಿಬ್ಬರ Friendship. ನೀ ಸುಮ್ಮನಿರು" ಎನ್ನುತ್ತಿದ್ದೆ. 


ಆಕಸ್ಮಿಕವಾಗಿ ಪರಿಚಯವಾಗಿ ಆತ್ಮಿಯರಾದವರು ನಾವು. ವಾರಕ್ಕೊಮ್ಮೆ  ಭೇಟಿಯಾದರೆ ಆ ವಾರದ ಎಲ್ಲ ಘಟನೆಗಳ ಪೋಸ್ಟ್ ಮಾರ್ಟಂ ನಡೆದಿರುತ್ತಿತ್ತು ಇಬ್ಬರ ಮಾತುಗಳಲ್ಲಿ. ಕೆಲವೊಮ್ಮೆ ಮಾತಿಗಿಂತ ನಗುವಿನದೆ ಜಾತ್ರೆಯಾದರೆ , ಕೆಲವೊಮ್ಮೆ  ನೋವುಗಳದೇ ಯಾತ್ರೆ ಇರುತ್ತಿತ್ತು. ಆದರೆ ಎರಡಕ್ಕೂ ಸರಿಯಾಗಿ ಹೆಗಲು ನೀಡಿದ್ದೆವಲ್ಲೇ ನಾವು. ನೀ ಬಿಡಿಸುವ ಚಂದದ ಚಿತ್ರಗಳು, ನೀ ಹಾಕುವ ಮೆಹೆಂದಿ ನನಗಿಷ್ಟವಾದರೆ , ನಾ ಗೀಚುವ ಕವನಗಳ, ಲೇಖನಗಳ ಮೊದಲ ಓದುಗಳು ನೀನಾಗಿದ್ದೆ. ನಾ ಮೆಹಿಂದಿ ಹಾಕಿಸಿಕೊಂಡು ಸಂಭ್ರಮಿಸಿದರೆ ನೀ ನನ್ನ ಕವನಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ. ನಿನ್ನ ಪ್ರತಿ ಭೇಟಿಯಲ್ಲೂ ನಾ ಹಗುರಾಗುತ್ತಿದ್ದೆ ಅಥವಾ ಉತ್ಸಾಹ ತುಂಬಿಕೊಳ್ಳುತ್ತಿದ್ದೆ. ಪ್ರತಿ ಭೇಟಿಯ ನಂತರವೂ ಕೈಲಿರುತ್ತಿದ್ದ ಚಾಕಲೇಟ್ ಮತ್ತು ಮುಡಿಯಲ್ಲಿರುತ್ತಿದ್ದ ಕೆಂಪು ಗುಲಾಬಿ ನಮ್ಮಿಬ್ಬರ ಭೇಟಿಯ ಸಾಕ್ಷಿ  ಹೇಳುತ್ತಿದ್ದವು. ಅವಳಿಗೆ ಸಿಕ್ಕಿ ಬಂದೆಯಾ ಎಂಬ room mates  ಅಥವಾ ಅಭಿಯ ಪ್ರಶ್ನೆಗೆ ನನ್ನ ಮುಗುಳ್ನಗೆ ಅಥವಾ ನಿನ್ನ ಮೆಹೆಂದಿಗಳೇ ಉತ್ತರವಾಗಿರುತ್ತಿತ್ತು. 

  ಮನೆಯವರೆಲ್ಲ ಅಭಿಯೊಂದಿಗೆ ಮದುವೆ ಫಿಕ್ಸ್ ಮಾಡಿದ್ದಾರೆ ನನಗು ಒಪ್ಪಿಗೆಯಾಗಿದೆ ಎಂದಾಗಾ ನೀ ಚಿಕ್ಕ ಮಗುವಿನಂತೆ ಕುಣಿದು ಸಂಭ್ರಮಿಸಿದ್ದು ಇನ್ನು ಕಣ್ಣ ಮುಂದೆ ಹಾಗೆ ಇದೆ ಕಣೆ. "ನಿನ್ನನ್ನೂ ರಾಜಕುಮಾರಿ ಥರ ರೆಡಿ ಮಾಡ್ತೀನಿ ಕಣೆ. ನಾನೇ ಮೆಹೆಂದಿ ಹಾಕಿ ಕೊಡ್ತೀನಿ" ಅಂತೆಲ್ಲ ನೀ ಖುಷಿ ಪಟ್ಟಿದ್ದು ಅಚ್ಚೊತ್ತಿದೆ. "ಹೌದು ನನ್ನಿಂದ ಕಾಡಿ ಬೇಡಿ ಬರೆಸಿಕೊಂಡ  ೨ ಲವ್ ಲೆಟರ್ಸ್ ಏನಾಯಿತೇ" ಎಂದಾಗ "ಕೊಡುವವರಿಗೆ ಕೊಟ್ಟಾಗಿದೆ , ಉತ್ತರಕ್ಕಾಗಿ ಕಾಯ್ತಾ ಇದ್ದೀನಿ" ಎಂದೂ ಹುಬ್ಬು ಹಾರಿಸಿದ್ದು ನೆನಪಿದೆ ಕಣೆ. ಆದರೆ ಒಂದು ವರ್ಷ, ಒಂದೇ ವರ್ಷದಲ್ಲಿ ಏನೆಲ್ಲಾ ಆಗಿ ಹೋಯಿತು ಅಲ್ಲವಾ. ಎಲ್ಲಿ ಕಳೆದು ಹೋದೆ ನೀನು ?? ಅಥವಾ ನಾನೇ ಕಳೆದುಕೊಂಡೆನಾ.??  

ಅವತ್ತು ನನ್ನ ಹುಟ್ಟಿದ ದಿನ ಬೊಕ್ಕೆ ಮತ್ತು ಚಾಕಲೇಟ್ ಜೊತೆಗೆ ಬಂದು ವಿಶ್ ಮಾಡಿ "ಸಂಜೆ ಸಿಗೋಣ ಒಂದು ಲವ್ ಲೆಟರ್ ಬರೆದು ಕೊಡಬೇಕು ನೀನು" ಎಂದವಳಿಗೆ ಇಲ್ಲ ಕಣೆ ಅಭಿ ಸಿಗುತ್ತೇನೆ ಎಂದಿದ್ದಾನೆ ಎಂದಿದ್ದೆ. ಅದಕ್ಕೆ" ಸರಿ ನಾಳೆ ಲೆಟರ್ ರೆಡಿ ಮಾಡಿಕೊಂಡು ಮೀಟ್ ಮಾಡು" ಎಂದೂ ಕೆನ್ನೆ ಹಿಂಡಿ ಹೋಗಿದ್ದೆ ನೀನು. ಅಂದು ಸಂಜೆ ನನ್ನ ಅಭಿಷೇಕ್ ಜೊತೆ ನೋಡಿಯು ನೋದದವಳಂತೆ ಹೋಗಿದ್ದು ನೀನು. ಯಾಕೆ ಹಾಗೆ ಮಾಡಿದೆ ಎಂದೂ ಕೇಳಲು ರಾತ್ರಿ ಕಾಲ್ ಮಾಡಿದರೆ no answer  ಎಂಬ ರೆಕಾರ್ಡೆಡ್ ಮಂತ್ರ. ಮೆಸೇಜ್ ಮಾಡಿದರು ನಿನ್ನಿಂದ ಉತ್ತರವೇ ಇಲ್ಲ. ಮರುದಿನ ನಿನಗಾಗಿ ಲೆಟರ್ ಹಿಡಿದು ಕಾದವಳಿಗೆ ನಿನ್ನ ಸುಳಿವಿಲ್ಲ.  ಆಮೇಲೆ ಎರಡು  ದಿನದ ನಂತರ ಸ್ವಿಚ್ ಆಫ್  ಎನ್ನುತ್ತಿದ್ದ ನಿನ್ನ ನಂಬರ್ ಕೊನೆಗೆ ನಾಟ್  ಇನ್ ಯುಸ್ ಎಂದೂ ಬರತೊಡಗಿತ್ತು. ನಿನ್ನ ಹಾಸ್ಟೆಲ್ ಬಳಿ ಹೋದರೆ ಖಾಲಿ ಮಾಡಿದ್ದಾರೆ ಎಂಬ ಉತ್ತರ.  ಅವತ್ತಿನಿಂದ ನಿನಗಾಗಿ ಹುಡುಕಿದ್ದೇನೆ, ಹುಡುಕುತ್ತಲೇ ಇದ್ದೇನೆ."ಸಿಗುತ್ತಾಳೆ ಬಿಡು, ಮತ್ತೆ ಬರ್ತಾಳೆ ಕಣೆ, ನಿನ್ನ ತುಂಬಾ ಹಚ್ಚಿಕೊಂಡಿದ್ದಳು ಅವಳು" ಎನ್ನುವ ಯಾರ ಸಮಾಧಾನದ ಮಾತುಗಳಿಗೂ ನಿನ್ನನು ಮರೆಸುವ ಅಥವಾ ನನ್ನ ನೋವನ್ನು ಕಡಿಮೆ ಮಾಡುವ ಶಕ್ತಿ ಇಲ್ಲ. ಆದರೆ ನೀನು ಮಾತ್ರ ನನ್ನನ್ನ ಮರೆತು ಅದ್ಹೇಗೆ ಇದ್ದೀಯ ಅನ್ನೋ ಪ್ರಶ್ನೆ ನನ್ನಲ್ಲಿದೆ ಕಣೆ. 

ಹತ್ತು  ಹೊನ್ನು ಕಟ್ಟುವಲ್ಲಿ  ಕಟ್ಟಬೇಕಾದ ಒಂದು ಮುತ್ತು ಕಣೆ ನನ್ನ ಅಭಿಷೇಕ. ಆದರೆ ಅಂತ ಹುಡುಗನ ತೋಳಿಗೂ ನಿನ್ನ ಮತ್ತು ನಿನ್ನ ಸ್ನೇಹ ಮರೆಸುವ ಶಕ್ತಿಯಿಲ್ಲ. ನನಗೆ ಸ್ನೇಹಕ್ಕೆ ನೀನೆ ಬೇಕು ಕಣೆ. ಹಂಚಿಕೊಳ್ಳುವ ನಗು ಬೇಕಾದಷ್ಟಿದೆ. ನಿನಗೆ ಹೊರಿಸುವ ನೋವಿನ ಮೂಟೆಯಿದೆ. ರಂಗು ಕಳೆದು ಕೊಂಡ ಕೈಗೆ ನಿನ್ನಿಂದ ಮೆಹೆಂದಿ ಹಾಕಿಸಿಕೊಳ್ಳಬೇಕಾಗಿದೆ. ನಿನಗೆಂದೇ ಬರೆದಿಟ್ಟ ಲವ್ ಲೆಟರ್ಸ್ ರಾಶಿಯಿದೆ. ಮತ್ತು ಈ ಸುಧೀರ್ಘ ಮೌನಕ್ಕಾಗಿ ಒಂದು ಕೋಳಿ ಜಗಳವಾಗಬೇಕಿದೆ. ಪ್ಲೀಸ್ ಮತ್ತೆ ಬಾ ನನ್ನ ಜೀವನದಲ್ಲಿ.. ಸ್ನೇಹವೆಂಬುದು ಅರ್ಥ ಕಳೆದುಕೊಳ್ಳುವುದರೊಳಗಾಗಿ... 

ಗೋಡೆಯ ಗಡಿಯಾರ ಹನ್ನೆರಡು ಗಂಟೆ ತೋರಿಸುತ್ತಿದೆ. ಕೈ ಯಾಕೋ ಬಿಸಿ ಬಿಸಿ ಎನ್ನಿಸುತ್ತಿದೆ. ನಿನ್ನ ನೆನಪಿನಲ್ಲಿ ಬಂದ ಕಣ್ಣಿರು ಜಾರಿರಬೇಕು. ಮೊಬೈಲ್ ರಿಂಗ್ ಆಗುತ್ತಿದೆ. ಕಾಲ್ ಅಭಿಷೆಕನಿದಿರಬೇಕು. 

ಅದರೂ ಮನಸ್ಸು ಮಾತ್ರ ನಿನ್ನ ಕೆಂಪು ಗುಲಾಬಿ ಬೋಕ್ಕೆಗಾಗಿ.. ಚಾಕಲೇಟ್ ಬಾಕ್ಸ್ ಗಾಗಿ  ಕಾಯುತ್ತಿದೆ ಕಣೆ...


Saturday, 28 July 2012

ಅಪ್ಪನಂತಹ ಅಪ್ಪನಿಗೆ ...


ಪ್ರೀತಿಯ ಸುಧೆಯ ಧಾರೆಯೆರೆದು.. 
ಬೈಗುಳಗಳ ಚಾಣ ಹೊಡೆದು.. 
ಸಂಸ್ಕಾರದ ಎರಕ ಹೊಯ್ದು.. 
ನನ್ನ ವ್ಯಕ್ತಿತ್ವ ಕಡೆದ ..
ಶಿಲ್ಪಿಯಂತ ಅಪ್ಪನಿಗೆ.. 

ಸುಭಾಷಿತದ ಉಕ್ತಿಯಂತೆ 
ಐದು ವರ್ಷಗಳ ಕಾಲ ಮುದ್ದಿಸಿ.. 
ಆಮೇಲೆ ಹತ್ತು ವರ್ಷ ದಂಡಿಸಿ.. 
ಶೋಡಷದಲ್ಲಿ ಸ್ನೇಹಿತೆಯಂತೆ ಕಂಡ 
ಸ್ನೇಹಿತನಂತ ಅಪ್ಪನಿಗೆ..

ಹಂಸ ಕ್ಷೀರ ನ್ಯಾಯದಂತೆ 
ನೋವೆಲ್ಲ ತನ್ನಲ್ಲಿಟ್ಟುಕೊಂಡು..
ನಗು ಮಾತ್ರ ನಮ್ಮ ಪಾಲಿಗಿರಿಸಿ.. 
ಅಸೆ ಕನಸುಗಳಿಗೆಲ್ಲ ಬೆಂಬಲದ ನೀರುಣಿಸಿ 
ಇಡುವ ಪ್ರತಿ ಹೆಜ್ಜೆಗೂ ಅಂತಃಶಕ್ತಿಯಾಗುವ
ಅಪ್ಪನಂತಹ ಅಪ್ಪನಿಗೆ ...

"ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು" 

Monday, 9 July 2012
ಜಲವರ್ಣದಂತೆ....

ಗಿರಿ ತುದಿಗೆ ಕವಿದ 
ಮಂಜು ಕಾಣುತಿಹುದು ..
ಅಂಬರ ಚುಂಬಿಸುವ ಆಸೆಗೆ..
ಏಣಿ ಹಾಕುವಂತೆ..

ಕುಳಿತು ಕೇಳಲು ಕಿವಿಗಿಂಪು 
ನೀಡುತಿಹುದು.. 
ಮುಸಲಧಾರೆಯ ಸದ್ದು.. 
ಪುಟ್ಟ ಪಾದದಿ ನಲಿವ 
ಗೆಜ್ಜೆನಾದದಂತೆ.. 

ಮುಂಗಾರಲ್ಲಿ ಮಿಂದೆದ್ದ 
ಮಲೆನಾಡು ಕಂಗೊಳಿಸುತಿಹುದು.. 
ಕವಿಯೆದೆಯಲ್ಲಿ ಅರಳಿದ 
ಕಾವ್ಯ ಕಲ್ಪನೆಯಂತೆ.. 
ನುರಿತ ಕಲಾವಿದನ 
ಕೈಲರಳಿದ ಸುಂದರ ಜಲವರ್ಣದಂತೆ...

Thursday, 28 June 2012ಸರಸ್ವತಿಯ ಆಸ್ಥಾನದಲ್ಲಿ ಮರೆಯಲಾರದ ಒಂದು ದಿನ ....


ಪ್ರವಾಸ ಎಂದರೆ ಖುಷಿಯೇ.. ನಗು, ಗಲಾಟೆ ಎಲ್ಲವು ಅದರ ಭಾಗಗಳೇ.. ಆದರೆ ಪ್ರವಾಸಕ್ಕೆ ಹೋದ ಸ್ಥಳವೊಂದು ಮಾತು ಮನಸ್ಸು ಎರಡನ್ನೂ ಮೂಕವಾಗಿಸಿತ್ತು ಅಂದರೆ ನಂಬಲು ಸಾಧ್ಯಾನಾ ?? ಮೊನ್ನೆ ಜೂನ್ ೨೩ ಕ್ಕೆ ಅದು ಸಾಧ್ಯವಾಗಿತ್ತು. ಹರಳಳ್ಳಿಯ ಅಂಕೆ ಗೌಡರ ಪುಸ್ತಕದ ಮನೆ ನೋಡಿದಾಗ ಮಾತು.. ಮನಸು ಎರಡೂ ಮೂಕವಾಗಿತ್ತು... ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎನ್ನುವ ವಾಕ್ಯ ಕಣ್ಣಿಗೆ ಕಂಡಿತ್ತು.ಎಲ್ಲ ಕಾಲೇಜ್ಗಳಲ್ಲಿ , ಲೈಬ್ರೆರಿಗಳಲ್ಲಿ ಇದೇ ಇರತ್ತೆ ಅಂದುಕೊಂಡೇ ಒಳಗೆ ಹೆಜ್ಜೆ ಇಟ್ಟವಳಿಗೆ ಅನಿಸಿದ್ದು ಕೈ ಮುಗಿದು ಮಾತ್ರವಲ್ಲ ಸಾಷ್ಟಾಂಗ ನಮಸ್ಕಾರ ಮಾಡಿಯೇ ಒಳಗೆ ಅಡಿ ಇಡಬೇಕಿತ್ತು ಎಂದು. ನಾನು ಕುಬೇರನ ಆಸ್ಥಾನ ನೋಡಿಲ್ಲ ಅಲ್ಲಿ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿದ್ದಳಂತೆ.. ಕೈಲಾಸ, ವೈಕುಂಠ , ಇಂದ್ರನ ಐಭೋಗ.. ಉಹೂ೦.. ..ಅದೆಲ್ಲ ಹೋಗಲಿ ರಾಜಮಹಾರಾಜರ ಯಾವ ವೈಭವದ ಆಸ್ಥಾನವನ್ನೂ ನೋಡಿಲ್ಲ. ಆದರೆ ನಾನು ಸರಸ್ವತಿಯ ಅಸ್ಥಾನವನ್ನು ನೋಡಿದ್ದೇನೆ. ಹೌದು ಅಂಕೆ ಗೌಡರ ಪುಸ್ತಕದ ಮನೆ ಸರಸ್ವತಿಯ ಆಸ್ಥಾನವೇ. ನಾನು ಸ್ವಲ್ಪ ಸೊಕ್ಕಿನಿಂದ ಮತ್ತು ಹೆಮ್ಮೆಯಿಂದ ಹೇಳಬಲ್ಲೆ ನಾನು ಸರಸ್ವತಿಯ ಅಸ್ಥಾನವನ್ನು ಕಣ್ಣಾರೆ ನೋಡಿದ್ದೇನೆ ಮತ್ತು ಅಲ್ಲಿ ಕೆಲ ಹೊತ್ತು ಕಳೆದಿದ್ದೇನೆ ಎಂದು.ಸರಸ್ವತಿಯ ಆಸ್ಥಾನದ ಮುಂಭಾಗ 

ಪ್ರಕಾಶಣ್ಣ ಪ್ರವಾಸದಲ್ಲಿ ನಾವೊಂದು ಲೈಬ್ರೆರಿಗೆ ಭೇಟಿ ಕೊಡುತ್ತಿದ್ದೇವೆ ಎಂದಾಗ, ಎಲ್ಲ ಕಡೆ ನೋಡಿರ್ತೆವಲ್ಲ ಇದೇನು ಹೊಸದು ? ಎಂದುಕೊಂಡಿದ್ದೆ. ಆದರೆ ಪ್ರವಾಸಕ್ಕೆ ೨ ದಿನ ಮುಂಚೆ ಪ್ರಕಾಶಣ್ಣ ಈ ಲೈಬ್ರೆರಿ ಯ ಬಗ್ಗೆ ಬಾಲು ಸರ್ ಬರೆದ ಲೇಖನದ ಲಿಂಕ್ ಕಳಿಸಿದಾಗ(http://nimmolagobba.blogspot.com/2010/08/blog-post_16.html ) ಓದಿ ಆಶ್ಚರ್ಯಗೊಂಡಿದ್ದೆ. ಆದರೆ ಅಲ್ಲಿ ಹೋದಾಗ ಮಾತ್ರ ಕಣ್ಣೆದುರು ತೆರೆದು ಕೊಂಡಿದ್ದು ಬೇರೆಯದೇ ಲೋಕ. ಅದು ಪುಸ್ತಕಗಳ ಲೋಕ. ನೋಡಿದಷ್ಟೂ ಕಂಡಿದ್ದು ಪುಸ್ತಕಗಳೇ. ಯಾವುದನ್ನ ನೋಡಲೋ..ಅಥವಾ ತೆಗೆದು ಓದಲೋ ಎನ್ನುವ ಗೊಂದಲದಲ್ಲೇ ಸ್ವಲ್ಪ ಹೊತ್ತು ಕಳೆದೇ ಹೋಯಿತು ಅನ್ನಿಸುತ್ತಿದೆ ಈಗ.. ಅಷ್ಟೊಂದು ಪುಸ್ತಕಗಳು. ಅಪರೂಪದ ಪುಸ್ತಕಗಳು.. ಹೆಸರೇ ಕೇಳದ ಪುಸ್ತಕಗಳು.. ಕಣ್ಣಿನಿಂದ ನೋಡುತ್ತೇನೆ ಅಂದುಕೊಂಡಿರದಿದ್ದ ಪುಸ್ತಕಗಳು..ಈ ಎಲ್ಲವೂ ಸಾಧ್ಯವಾದದ್ದಕ್ಕೆ ಕೋಟಿ ನಮನಗಳು ಸಲ್ಲಬೇಕು ಆ ಮಹಾನುಭಾವ ಅಂಕೆ ಗೌಡರಿಗೆ.. ಒಂದು ಸಕ್ಕರೆ ಕಾರ್ಖಾನೆಯ ಟೈಮ್ ಕೀಪೆರ್ ಆಗಿದ್ದುಕೊಂಡು ತಮ್ಮ ಜೀವನದ ಬಹು ಪಾಲು ಆಯುಷ್ಯ ಮತ್ತು ಗಳಿಕೆಯ ಹಣವನ್ನು ಪುಸ್ತಕಗಳಿಗಾಗಿಯೇ ವ್ಯಯಿಸಿ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ, ಮುಂದಿನ ಪೀಳಿಗೆಗೆ ನೀಡಬೇಕೆಂದಿರುವ ಆ ಜೀವಕ್ಕೆ ಶಿರ ಸಾಷ್ಟಾಂಗ ನಮಸ್ಕಾರ. ಅಂಕೆ ಗೌಡರ ಅಸೆಗೆ ಆಸರೆಯಾಗಿ ನಿಂತ ಅವರ ಪತ್ನಿಯವರಿಗೂ ಕೂಡ ನಮನಗಳು ಸಲ್ಲಲೇ ಬೇಕು..


ಪುಸ್ತಕ ಲೋಕದಲ್ಲಿ ಅಂಕೆ ಗೌಡರಂತಹ ಮಹಾನ್ ಸಾಧಕರೊಡನೆ ಸಂತೋಷ ಹಂಚಿಕೊಂಡ ಒಂದೆರಡು ಕ್ಷಣ ..


ಅಲ್ಲಿ ಏನು ನೋಡಿದೆ ಎಂದರೆ ಎಲ್ಲವನ್ನೂ ಹೇಳಲಾರೆ. ನೋಡಿದ್ದೆಲ್ಲವು ಹೊಸದೇ.. ಅಪರೂಪದ್ದೇ.. ಹೇಳಲು , ವರ್ಣಿಸಲು ಸಾಧ್ಯವಿಲ್ಲ ಅವುಗಳನ್ನ. ಕಿಟ್ಟೆಲ್ ಡಿಕ್ಷನರಿಗಿಂತಲೂ ಹಳೆಯ ಡಿಕ್ಷನರಿ ನೋಡಿದ್ದು. ೧೮೦೦ ರಲ್ಲಿ ಪ್ರಕಟಣೆಯಾದ ಪುಸ್ತಕ ನೋಡಿದ್ದು, ರಾಜಾ ರವಿವರ್ಮರ ಎಲ್ಲಾ ಚಿತ್ರಗಳಿರುವ ಪುಸ್ತಕ ನೋಡಿದ್ದು. ಮಾನವ ದೇಹ ರಚನೆಯ ಬಗೆಗೆ ಇದ್ದ ಹೊರಲಾರದ ಪುಸ್ತಕವನ್ನು ಅದು ಇದ್ದಲ್ಲಿಯೇ ತಿರುವಿ ಹಾಕಿದ್ದು. ೧೯೬೬ ರ ಪ್ರಜಾವಾಣಿ ದೀಪಾವಳಿ ವಿಶೇಷಾಂಕ, ಸುಧಾ ವಾರಪತ್ರಿಕೆಯ ಮೊದಲಸಂಚಿಕೆ ನೋಡಿದ್ದು.. ಅಬ್ಬಾ..!! ಹೇಳುತ್ತಾ ಹೋದರೆ ಹನುಮನ ಬಾಲದಂತೆ ಬೆಳೆಯುತ್ತಾ ಹೋಗುವುದು. ನಾನು ಯಾವುದೋ ಸಮಿತಿಯ ಕಾಲೇಜಿನ, ಸರ್ಕಾರದ ಲೈಬ್ರೆರಿಗಳನ್ನ ನೋಡಿದ್ದೆ. ಆದರೆ ಒಬ್ಬ ವ್ಯಕ್ತಿ ಜೀವನದಲ್ಲಿ ಒಂದು ಅಪರೂಪದ ಲೈಬ್ರೆರಿ ಮಾಡುವಷ್ಟು ಪುಸ್ತಕಗಳನ್ನು ಸಂಪಾದಿಸುತ್ತಾನೆ ಅಂತ ಅಗಲೀ , ಅದನ್ನ ನನ್ನ ಆಯುಷ್ಯದಲ್ಲಿ ನಾನು ನೋಡುತ್ತೇನೆ ಎಂದಾಗಲೀ ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಅಲ್ಲಿ ಹೋದ ತಕ್ಷಣ ನಮಗೆ ಅಂಕೆ ಗೌಡರು ನೀಡಿದ್ದು " 50 wonders of the world" ಎನ್ನುವ ಪುಸ್ತಕವನ್ನು. ಆ ಲೈಬ್ರೆರಿಯಲ್ಲಿ ಅಷ್ಟು ಹೊತ್ತು ಕಳೆದ ಮೇಲೆ ನನಗನ್ನಿಸಿದ್ದು "ಐತ್ತೊಂದನೆ ಅಧ್ಬುತದಲ್ಲಿ " ನಿಂತು " 50 Wonders of the World" ಎನ್ನುವ ಪುಸ್ತಕ ನೋಡಿದೆ ಎಂದು.

ಬಾಲು ಸರ್ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದು ..

ಅಂಕೆ ಗೌಡರನ್ನು ಆಜಾದ್ ಸರ್ ಸನ್ಮಾನಿಸಿದ ಕ್ಷಣ ..


ರೂಪಾ ಸತೀಶ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಾಗ ..


ಬರಿಯ ಕೆಲಸ ಕಾರ್ಯಗಳು, ಅಥವಾ ಊರು ಬೇಸರವಾದವರು ಮಾತ್ರವಲ್ಲ , ಜೀವನವೇ ಬೇಸರವಾದ ಒಬ್ಬ ವ್ಯಕ್ತಿ ಒಮ್ಮೆ ಹರಳಳ್ಳಿಯ ಪುಸ್ತಕದ ಮನೆಗೆ ಭೇಟಿ ನೀಡಿ ಕೆಲ ಹೊತ್ತು ಕಳೆದರೆ ಮತ್ತೆ ಜೀವನೋತ್ಸಾಹ ತುಂಬಿಕೊಂಡು ಬರುತ್ತಾನೆ ಎನ್ನುವದರಲ್ಲಿ ಸಂಶಯವೇ ಇಲ್ಲ. ಬೆಳಿಗ್ಗೆ ೧೦.೩೦ ರ ಸುಮಾರಿಗೆ ಅಲ್ಲಿ ಹೋಗಿ ೨ ಗಂಟೆಯ ಸುಮಾರಿಗೆ ಹೊರ ಅಡಿ ಇಟ್ಟಾಗಲೇ ಗೊತ್ತಾಗಿದ್ದು ನಾವು ಭೂಲೋಕದಲ್ಲೇ ಇದ್ದೇವೆ ಎಂದು. ತಲೆಗೆ ಸೂರ್ಯ ಶಾಖ ತಾಗಿದಾಗಲೇ ಗೊತ್ತಾಗಿದ್ದು ಅದು ಮದ್ಯಾನ್ಹದ ಸಮಯವೆಂದು.

ನಮ್ಮ ಪ್ರೀತಿಯ ಬಳಗ 

ಇಂತಹದ್ದೊಂದು ಅಧ್ಬುತವನ್ನು ತೋರಿಸಿದ ಬಾಲು ಸರ್ ಮತ್ತು ಪ್ರಕಾಶಣ್ಣನಿಗೆ ಧನ್ಯವಾದಗಳು . ಮತ್ತು ಈ ಪ್ರವಾಸದಲ್ಲಿ ನನ್ನೊಡನೆ ಸೇರಿ. ಸುಂದರ ನೆನಪುಗಳನ್ನು ಕಟ್ಟಿಕೊಟ್ಟ ಎಲ್ಲ ಬ್ಲಾಗ್ ಮಿತ್ರರಿಗೆ ಈ ಪುಟಾಣಿಯ ನಮನಗಳು..

ಚಿತ್ರ ಕ್ರಪೆ - ಪ್ರಕಾಶ್  ಹೆಗ್ಡೆ 

Tuesday, 12 June 2012


ಅಂಥಹದ್ದೊಂದು ಸುಂದರ ಕಿರುನಗೆಯೊಂದನ್ನು ನಮಗಾಗಿ ನಾವೇ ಸೃಷ್ಟಿ ಮಾಡಿಕೊಳ್ಳಲು ನಮಗೆ ಸಮಯವಿಲ್ಲ..... ಎರಡು ಮೊಬೈಲ್ ಫೋನ್ ಗಳಲ್ಲಿ ಒಂದನ್ನು ಊರಲ್ಲಿ ಬಿಟ್ಟು ಬಂದವಳಿಗೆ ಮೊನ್ನೆಈ ಮೊಬೈಲ್ ಲ್ಲಿ ಎಲ್ಲರ ನಂಬರ್ ಗಳು ಇದೆಯಾ ಇಲ್ಲವಾ ಎನ್ನುವ ಅನುಮಾನ ಕಾಡಲು ಶುರು ಆಯ್ತು . ಸರಿ ಅನುಮಾನಕ್ಕೊಂದು ಪರಿಹಾರ ಬೇಕೇ ಬೇಕು ಎನ್ನುತ್ತಾ contact list ನಲ್ಲಿ ಹುಡುಕುತ್ತ ಕುಳಿತೆ. ಎಲ್ಲರ ನಂಬರ್ ಗಳಿವೆ ಎಂದೂ confirm ಆದ ನಂತರ ಪಿ ಯು ಸಿ ಯ ಗೆಳತಿಯೊಬ್ಬಳ ನಂಬರ್ ನೋಡಿ ತುಂಬಾ ದಿನ ಆಯ್ತಲ್ಲ ಕಾಲ್ ಮಾಡಿ. ಮೆಸೇಜ್ ಮಾಡೋದಂತೂ ನಿಂತೇ ಹೋಗಿದೆ. ಚಾಟಿಂಗ್ ಹೋಗಲಿ ಫಾರ್ವರ್ಡ್ ಮೆಸೇಜ್ ಕೂಡ ಇಲ್ಲ. ನಂಬರ್ ಚೇಂಜ್ ಮಾಡಿದ್ದಾಳೋ ಏನೋ ಎನ್ನುವಂತಹ ನೂರಾರು ಯೋಚನೆಗಳನ್ನ ತುಂಬಿಕೊಂಡೆ ಡಯಲ್ ಬಟ್ಟನ್ ಒತ್ತಿದೆ. ರಿಂಗ್ ಆಗಿ ರಿಸೀವ್ ಮಾಡಿದವಳು ಯಾರು ? ಎಂದಳು. ನಾನು ನನ್ನ details ಎಲ್ಲ ಹೇಳಿದ ನಂತರ ,ನಿನ್ನ ನಂಬರ್ ಚೇಂಜ್ ಆಗಿದೆ ಅಂದ್ಕೊಂಡೆ ಅದಕ್ಕೆ ಮೆಸೇಜ್ ಅಥವಾ ಕಾಲ್ ಮಾಡಿಲ್ಲ ಎಂದಳು ಅವಳು. ನಾನು ಹಾಗೆ ಅಂದುಕೊಂಡಿದ್ದೆ ಎಂದೇ ನಾನು. ನಮ್ಮ ಮಾತುಗಳಲ್ಲಿ ಮೊದಲರ್ಧ ಏನು ಮಾಡ್ತಿದಿಯಾ? ಎಲ್ಲಿ ವರ್ಕ್ ? ಯಾವ ಏರಿಯ ? ಇದೆ ಆದರೆ ಅಮೆಲಿನದು ಮತ್ತೆ..??? ಅಂದರೆ ಏನಿಲ್ಲ.. ಎಂತಾ ಸುದ್ದಿ ಅಂದರೆ ಎಂತು ಇಲ್ಯೇ .. ಇಷ್ಟರಲ್ಲೇ ಮುಗಿದಿತ್ತು . ಈ ಮತ್ತೆ... ಏನಿಲ್ಲ... ಎಂಬ ರಾಗದ ನಾಟಕ ಸಾಕಾಗಿ ಸರಿ ಮತ್ತೆ ಮಾತನಾಡೋಣ ಎನ್ನುತ್ತಾ ಫೋನ್ ಕಟ್ ಮಾಡಿದೆ.


"Relations are not fade, but we just reduce the communications" ಎಂಬ ಫಾರ್ವರ್ಡ್ ಮೆಸೇಜ್ ಬೇಡವೆಂದರೂ ನೆನಪಾಯಿತು.ಹೊಸ ಹೊಸ ಸಂಪರ್ಕ ತಂತ್ರಜ್ಞಾನಗಳು ಮನುಷ್ಯನನ್ನು ಬೆಸೆಯಲು ಅವಿಷ್ಕಾರವಾಗುತ್ತಿದ್ದರೂ ಯಾಕೋ ಸಂಬಂಧಗಳ ನೆಲೆಗಟ್ಟು ಗಳು ಸಡಿಲಗೊಳ್ಳುತ್ತಿದೆ ಎನ್ನಿಸುತ್ತಿದೆ.ಹೊಸ ಸಂಬಂಧಗಳಿಗೆ ಮನಸ್ಸು ತೆರೆದುಕೊಂಡಾಗ ಪ್ರತಿ ಸಂಬಂಧಗಳು ಆಕರ್ಷಣೀಯವಾಗಿರುತ್ತವೆ. ಆ ಸಂಬಂಧಗಳು ಗಟ್ಟಿಯಾಗಬೇಕಾಗಿರುತ್ತವೆ. ಅವಾಗ ಕುಂತಿದ್ದು, ನಿಂತಿದ್ದು, ಅತ್ತಿದ್ದು , ನಕ್ಕಿದ್ದು. ಮಾರ್ನಿಂಗ್, ಇವಿನಿಂಗ್ ಎಲ್ಲವೂ ಮೆಸೇಜ್ ಅಥವಾ ಕಾಲ್ ಗಳಲ್ಲಿ ಹರಿದಾಡುತ್ತಿರುತ್ತವೆ. ಪ್ರತಿ ಭೇಟಿಗಾಗಿಯು ಮನಸು ಕಾಯುತ್ತದೆ. ಪ್ರತಿ ಭೇಟಿಗಳು ಸ್ಮರಣೀಯವಾಗಿರುತ್ತವೆ. ಯಾವಾಗ ಸಂಬಂಧಗಳು ಗಟ್ಟಿಯಾಗಿವೆ ಎಂಬ ಒಂದು ಹುಂಬ confidence ಬೆಳೆದುಬಿಡುತ್ತದೋ ಆಗ ಇವನು /ಇವಳು ನನ್ನ ಗೆಳೆಯ /ಗೆಳತಿಯಲ್ಲವಾ.. ನನ್ನ ಬಿಟ್ಟು ಎಲ್ಲಿ ಹೋಗುತ್ತಾರೆ ಎಂಬ ಧೈರ್ಯವಿರುತ್ತದೆ. ಇವತ್ತು ಮೆಸೇಜ್ ಅಥವಾ ಕಾಲ್ ಮಾಡಲಾಗಲಿಲ್ಲವಾ ನಾಳೆ ಮಾಡಿದರಾಯಿತು ನನ್ನ ಫ್ರೆಂಡ್ ತಾನೇ ಎಂದುಕೊಳ್ಳುತ್ತೇವೆ.ಈ ವಾರ ಸಿಗಲು ಅಗಲಿಲ್ಲವಾ ಮುಂದಿನವಾರ ನೋಡಿಕೊಳ್ಳೋಣ ಎಂದುಕೊಳ್ಳುತ್ತೇವೆ. ಆದರೆ ಈ ನಾಳೆಗಳ, ವಾರಗಳ ಸಂಖ್ಯೆ ಜಾಸ್ತಿ ಆದಂತೆಲ್ಲ ಸಂಬಂಧಗಳ ನಡುವಿನ ಅಂತರ ಜಾಸ್ತಿಯಾಗುತ್ತ ಹೋಗುತ್ತದೆ. ಕಾಲೇಜ್ , ಆಫೀಸ್ , ಸೋಸಿಯಲ್ ನೆಟ್ವರ್ಕ್ ಗಳಲ್ಲಿ ದಿನ ನಿತ್ಯ ನಾವು ಎಷ್ಟೋ ಹೊಸ ಸಂಬಂಧಗಳಿಗೆ ತೆರೆದು ಕೊಳ್ಳುತ್ತೇವೆ. ಅವುಗಳನ್ನೆಲ್ಲ ಉಳಿಸಿಕೊಳ್ಳುವ ಭರದಲ್ಲಿ ಜೊತೆಯಲ್ಲಿದ್ದ, ಹೆಗಲು ನೀಡಿದ, ಬೆನ್ನುತಟ್ಟಿದ ಎಷ್ಟೋ ಸಂಬಂಧಗಳಿಗೆ ಸಮಯ ಹಾಗೂ ಬೆಲೆ ಕೊಡುವುದನ್ನು ಮರೆತು ಹೋಗಿರುತ್ತೇವೆ. ಯಾವುದೇ ಮನುಷ್ಯ ಹೊಸ ಸಂಬಂಧಗಳಿಗೆ ತೆರೆದು ಕೊಂಡಾಗ ಶುರುವಿನಲ್ಲಿ ಆಕರ್ಷಕವಾಗಿ ಕಾಣುವ ಸಂಬಂಧಗಳು ಕ್ರಮೇಣ ಏಕೆ ಆಕರ್ಷಣೆ ಕಳೆದುಕೊಳ್ಳುತ್ತವೆ?? ಸಂಬಂಧಗಳನ್ನು ಗಟ್ಟಿಯಾಗಿಸುವಲ್ಲಿನ ಉತ್ಸಾಹ, ಆತುರತೆ , ಶ್ರದ್ಧೆ, ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಏಕೆ ಕಡಿಮೆಯಾಗುತ್ತಿದೆ??


ಗೆಳತಿಯೊಬ್ಬಳು ಹುಬ್ಬಳ್ಳಿಯಲ್ಲಿ ಓದುತ್ತಿದ್ದಾಗ ನಾನು ಅವಳು ವಾರಕ್ಕೊಂದು ಕಾಗದ ಬರೆದುಕೊಳ್ಳುತ್ತಿದ್ದೆವು. ಅಂಚೆ ಇಲಾಖೆ ಜೀವಂತವಾಗಿರುವುದಕ್ಕೆ ನಾವೇ ಕಾರಣವೇನೋ ಎನ್ನುವಂತೆ..!! ಮೊಬೈಲ್ ಇರಲಿಲ್ಲ ಆಗ. ಅವಳು ಈ ಹಬ್ಬಕ್ಕೆ ಮನೆಗೆ ಬಂದಿರಬಹುದೆಂಬ ಊಹೆಯ ಮೇರೆಗೆ ಲ್ಯಾಂಡ್ ಲೈನ್ ಗೆ ಕಾಲ್ ಮಾಡಿಕೊಳ್ಳುತ್ತಿದ್ದೆವು. ಬಸ್ , ಕ್ಲಾಸಿನ ಗಡಿಬಿಡಿಯಲ್ಲೂ ಹತ್ತು ನಿಮಿಷಗಳ ಮಾತಿಗಾದರೂ ಒಬ್ಬರಿಗೊಬ್ಬರು ಸಿಗುತ್ತಿದ್ದೆವು. ಆದರೆ ಈಗ ಇಬ್ಬರ ಬಳಿಯಲ್ಲೂ ಮೊಬೈಲ್ ಇದೆ. ಕಾಲ್ ಗಳು ಕಡಿಮೆ ಆಗಿವೆ. ಅರ್ಧಗಂಟೆಯ ದಾರಿಯಲ್ಲಿ ಇಬ್ಬರ ಮನೆಗಳಿವೆ. ಆದರೂ ವಾರಕ್ಕೊಮ್ಮೆ ಕೂಡಾ ಸಿಗುವುದಿಲ್ಲ ನಾವು. ಇಂದು advanced ಎನ್ನುವ ತಂತ್ರಜ್ಞಾನಗಳಿದ್ದರೂ ಸಂಪರ್ಕ ಕಡಿಮೆಯಾಗಿದೆ ಎನ್ನುವದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ .


ಹಿಂದಿನ ಕಾಲದಲ್ಲಿ ಸಂಪರ್ಕ ಮಾದ್ಯಮಗಳು ಕಡಿಮೆಯಿದ್ದರೂ ಸಂಬಂಧಗಳು ಅವುಗಳ ಗಟ್ಟಿತನವನ್ನು ಉಳಿಸಿಕೊಂಡಿದ್ದವು. ಸಂಪರ್ಕ ಕಷ್ಟ ಸಾದ್ಯ ಎನ್ನುವ ಕಾಲದಲ್ಲೂ ಆದರ್ಶ ಸ್ನೇಹ ಮೆರೆದ ಎಷ್ಟು ಸ್ನೇಹಿತರ ಕಥೆ ಕೇಳಿಲ್ಲ ನಾವು ?? ಪತ್ರ ಮುಖೇನ ಒಂದಾದ ಎಷ್ಟು ಪ್ರೇಮಕಥನಗಳಿಲ್ಲ .?? ಹಬ್ಬಹರಿದಿನಗಳಿಗೆ ಕರೆದು ಕಳುಹಿಸಿ ಮಾಡಿದ ಎಷ್ಟು ಅಣ್ಣ ತಮ್ಮಂದಿರಿಲ್ಲ?? ಆಷಾಢದ ವಿರಹದ ಹೊರೆಯನ್ನು ಪತ್ರಗಳಲ್ಲೇ ನಿವೇದಿಸಿಕೊಂಡ ಅದೆಷ್ಟು ದಂಪತಿಗಳಿಲ್ಲ?? Advanced generation ಎಂದು ಕರೆಸಿಕೊಳ್ಳುತ್ತ, ದಿನ ದಿನಕ್ಕೂ ಹೊಸ ಅವಿಷ್ಕಾರಗಳನ್ನು ಬಳಸುತ್ತಿರುವ ನಮಗೆ ಅವೆಲ್ಲ ಬಾಲಮಂಗಳ , ಚಂದಮಾಮದಲ್ಲಿ ಬರುತ್ತಿದ್ದ ಕಾಲ್ಪನಿಕ ಕಥೆಗಳಂತೆ ಭಾಸವಾಗುತ್ತವೆ. ಆದರೆ ಅವೆಲ್ಲ ವಾಸ್ತವಗಳಾಗಿದ್ದವು.


ಕಾಲದೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿರುವ ನಮಗೆ ಸಮಯ ಕಡಿಮೆ ಬೀಳುತ್ತಿದೆ. ಉದ್ಯೋಗ, ಉನ್ನತಿ, ಹಣ, ಖ್ಯಾತಿಗಳು ನಮ್ಮನ್ನು ಉತ್ತುಂಗಕ್ಕೆರಿಸುತ್ತಿದ್ದರೂ ಸಂಬಂಧಗಳ ನಿಭಾಯಿಸುವಿಕೆಯಲ್ಲಿ ನಾವು ಸೋಲುತ್ತಿದ್ದೆವಾ?? ಎನಿಸುತ್ತಿದೆ.ಹಾಗಂತ ಈ ಸಂಬಂಧಗಳು ಹಳಸಿಹೊಗಿರುವುದಿಲ್ಲ, ಅಳಿಸಿಯೂಹೊಗಿರುವುದಿಲ್ಲ,ಸ್ವಲ್ಪ ಮಸುಕಾಗಿರುತ್ತವೆ ಅಷ್ಟೇ; ತುಂಬಾ ದಿನ ಮುದ್ದಾಡದೆ show case ನಲ್ಲಿ ಇಟ್ಟ ಮುದ್ದು ಗೊಂಬೆಯ ಮೇಲೆ ಧೂಳು ಕುಳಿತಿರುವಂತೆ. ವಿಶೇಷ ಸಂಧರ್ಬಗಳಲ್ಲಿ ನಮ್ಮವರಿಗೆ ನಾವು ಮಾಡುವ ವಿಶ್ ಅವರಿಗೆ ಧೈರ್ಯ ಅಥವಾ ಖುಷಿ ನೀಡಬಹುದು. ಎಲ್ಲೋ ಒಂದು surprise visit ಅವರ ಮನಸ್ಸನ್ನು ಮುದಗೊಳಿಸಬಹುದು ಅಥವಾ ನಮ್ಮವರೊಂದಿಗಿನ ಒಂದು trip ಅಥವಾ ಒಂದು Get together ನಮ್ಮ ಎಲ್ಲ ಒತ್ತಡಗಳನ್ನು ತಣಿಸಬಲ್ಲದು. ಅಯ್ಯೋ ಅದಕ್ಕೆಲ್ಲ ಸಮಯವೆಲ್ಲಿದೆ ಎಂದುಕೊಂಡರೆ ಈ ಮೊಬೈಲ್ ಎಂಬ ಮಾಯಾಂಗನೆ ದಿನ ನಿತ್ಯದ ಅಗತ್ಯವಾಗಿರುವಾಗ , love You, Miss You, Take care ಅಥವಾ ಪುಟ್ಟದಾದ Good Morning ಮೆಸೇಜ್ ಗಳನ್ನು ಎರಡೇ ನಿಮಿಷದಲ್ಲಿ ಟೈಪ್ ಮಾಡಿ ಸಂಬಂಧಪಟ್ಟವರಿಗೆ ಕಳುಹಿಸಿದರೆ ಮುಂದಿನ ಎರಡೇ ನಿಮಿಷದಲ್ಲಿ ನಮಗೆ ಕಾಣದಿದ್ದರೂ ನಮಗಾಗಿಯೇ ಅವರ ಮುಖದಲ್ಲಿ ಒಂದು ಕಿರುನಗೆ ಅರಳಿರುತ್ತದೆ . ಆದರೆ ಅಂಥಹದ್ದೊಂದು ಸುಂದರ ಕಿರುನಗೆಯೊಂದನ್ನು ನಮಗಾಗಿ ನಾವೇ ಸೃಷ್ಟಿ ಮಾಡಿಕೊಳ್ಳಲು ನಮಗೆ ಸಮಯವಿಲ್ಲ.


ಸಮಯ ಯಾರಿಗಾಗಿಯೂ ನಿಲ್ಲುವುದಿಲ್ಲ. ಸಮಯಕ್ಕೆ ಹೊಂದಿಕೊಳ್ಳಲೇ ಬೇಕು. ಬದಲಾಗುತ್ತಿರಲೇ ಬೇಕು...


ಆದರೆ ಈ ಸಮಯದೊಂದಿಗೆ ಓಡುತ್ತಲೇ ನಾವು ಸಂಬಂಧಗಳ ನೆಲೆಗಟ್ಟನ್ನು ಗಟ್ಟಿಯಾಗಿಸಿಕೊಳ್ಳಬೇಕು ಅಲ್ಲವೇ ...

Monday, 4 June 2012

ನಗೆಮಲ್ಲಿಗೆ..


ಕೆನ್ನೆ  ಕೆಂಪಿನ  
ರಂಗಿನೋಕುಳಿಯಲ್ಲಿ..
      ನಾಚಿಕೆಯ ನಗೆಮಲ್ಲಿಗೆ
 ಘಮಘಮಿಸುತ್ತಿತ್ತು..
     ನಲ್ಲ ನೀಡಿದ ಪ್ರೀತಿಯ
 ಸಿಹಿಮುತ್ತುಗಳಿಂದ..
ಸಾಕ್ಷಿ ........


ಬೆಳಿಗ್ಗೆ ನನ್ನ ಕಂಡ ಕನ್ನಡಿಯೂ
ನಾಚಿಕೊಂಡಂತಿತ್ತು ..
ಕಾರಣ ನಲ್ಲನ ತುಂಟಾಟಗಳಿಗೆ 
ಕೆನ್ನೆಮೆಲಿನ ಗುರುತು 
ಸಾಕ್ಷಿ ಹೇಳುತ್ತಿತ್ತು...

Monday, 14 May 2012

ಎಲ್ಲೆಲ್ಲಿಯ ಮೈತ್ರಿಯ ನಂಟೋ..?? ಯಾರ್ಯಾರಲ್ಲಿ ಪ್ರೀತಿಯ ಋಣದ ಗಂಟೋ..?? "ಹ್ಮ್ಹ್ ಆ ಚೀಲ ಇಲ್ಲಿ ಕೊಡು. ಏ ನಾಣಿ , ಎಂಕಟ ಆ ಕೂಸಿನ್ ಹಿಡಿರಾ , ಚೀಲ ತುಂಬುವಾ. ನಾಳೆ ಸಂತೆಯಲ್ಲಿ ಮಾರಿ ಬರ್ತೆ". ಹಿಂಗಂತ ನಮ್ಮ ಮನೆಗೆ ಕೊಳೆ ಅಡಿಕೆ ಕೊಳ್ಳಲು ಬರುತ್ತಿದ್ದ ಸಾಬಿಯೊಬ್ಬ ನನ್ನನ್ನು ಹೆದರಿಸುತ್ತಿದ್ದ. ಆಗ ನಾನು ಆರನೇ ತರಗತಿಲ್ಲಿದ್ದೆ. ಅವನ ಕೆಂಪು ಕಣ್ಣು, ಉದ್ದ ಗಡ್ಡ, ಆ ಟೋಪಿ, ದೊಗಲೆ ಶರಾಯಿ, ಎತ್ತರದ ಮೈಕಟ್ಟು ಎಲ್ಲ ನನ್ನನ್ನು ತುಂಬಾ ಹೆದರಿಸಿದ್ದವು. ಅವನು ಬಂದರೆ ನಾ ಮನೆಯಿಂದ ಹೊರಗೆ ಬರುತ್ತಲೇ ಇರಲಿಲ್ಲ. ದೇವರ ಮನೆಯಲ್ಲೇ ಇರುತ್ತಿದ್ದೆ. ಆದರೂ ಹೊರಗೆ ನಿಂತು ಹೀಗೆಲ್ಲ ಮಾತನಾಡಿ ಹೆದರಿಸಿ ಹೋಗುತ್ತಿದ್ದ. ಅವನಿಂದಾಗಿ ನನ್ನಲ್ಲಿ ಮುಸ್ಲಿಮರೆಂದರೆ ಮಕ್ಕಳು ಹಿಡಿಯುವವರು, ಮಾರಾಟ ಮಾಡುತ್ತಾರೆ ಎಂಬ ನಂಬಿಕೆ ಬಂದು ಹೋಗಿತ್ತು. ನಾನು ಮುಸ್ಲಿಮರನ್ನು ಕಂಡರೆ ಹೆದರುತ್ತಿದ್ದೆ. ಓಡುತ್ತಿದ್ದೆ.

ಒಂದು ಶನಿವಾರ ಶಾಲೆಯಿಂದ ಮನೆಗೆ ಬರುತ್ತಿದ್ದೆ. ಮಧ್ಯಾನ್ಹ  ಸುಮಾರು ೧ ಗಂಟೆಯ ಸಮಯ. ಒಂದು ಸೈಕಲ್ ವಾರಸುದಾರರಿಲ್ಲದೆ  ದಾರಿಯಲ್ಲಿ ಬಿದ್ದಿತ್ತು. ಹತ್ತಿರ ಹೋಗಿ ನೋಡಿದರೆ ಪಕ್ಕದಲ್ಲೇ ಒಬ್ಬ ಸಾಬಿ ತುಂಬಾ ಗಾಯವಾಗಿ ಬಿದ್ದಿದ್ದಾನೆ. ಮೊಳಕಾಲಿಗೆ ಗಾಯವಾದದ್ದರಿಂದ ಅವನಿಗೆ ನಿಲ್ಲಲೂ ಆಗುತ್ತಿರಲಿಲ್ಲ. ನಾನು ಅವನು ಮುಸ್ಲಿಂ ಎಂದು ಹೆದರಿ ಓಡಿ ಬಂದೆ. ಒಂದು ಸ್ವಲ್ಪ ಮುಂದೆ ಬಂದಿರಬಹುದು ಅವನನ್ನು ನೆನೆದು ಪಾಪ ಎನ್ನಿಸಿತು. ಮತ್ತೆ ಹಿಂದೆ ಅವನಲ್ಲಿಗೆ ಓಡಿ ಹೋದೆ. ಕುಡಿಯಲು ನೀರು ಕೊಟ್ಟು ಅವನ ಗಾಯವನ್ನು ನೀರಿನಿಂದ ತೊಳೆದು ಅದಕ್ಕೆ ನನ್ನದೇ ಖರ್ಚಿಪ್ಹ್ ಕಟ್ಟಿದೆ. ನಮ್ಮ ಮನೆ ಹತ್ತಿರವೇ ಇದ್ದಿದ್ದರಿಂದ ನಿಧಾನಕ್ಕೆ ಮನೆಗೆ ನಡೆಸಿಕೊಂಡು ಬಂದೆ.ಅಮ್ಮಾ  ಅವನ ಗಾಯಕ್ಕೆ ಔಷಧಿ ನೀಡಿ, ಅವನಿಗೆ ಊಟ ಹಾಕಿದರು. ಅವನು ಊಟ ಮಾಡಿ ನಿಧಾನವಾಗಿ ಸೈಕಲ್ ತಳ್ಳಿಕೊಂಡು ಹೊರಟು ಹೋದ. 

ಮುಂದಿನ ಶನಿವಾರ ಪೊಂವ್.. ಪೊಂವ್.. ಎಂಬ ಶಬ್ದದೊಂದಿಗೆ ಒಂದು ಸೈಕಲ್ ಮನೆ ಮುಂದೆ ಬಂದು ನಿಂತಿತು. ನೋಡಿದರೆ ಅದೇ ಸಾಬಿ. ಅವನೊಬ್ಬ ಐಸ್ ಕ್ಯಾಂಡಿ ಮಾರುವವನಾಗಿದ್ದ. ನನ್ನನ್ನು ಹತ್ತಿರ ಕರೆದ. ಹೆದರುತ್ತಲೇ ಹತ್ತಿರ ಹೋದವಳಿಗೆ, ಇದು ನನಗೆ ನೀರು ಕೊಟ್ಟ ಪುಟ್ಟ ಕೈ ಗೆ ಎಂದು ಐಸ್ ಕ್ಯಾಂಡಿ ಕೊಟ್ಟಿದ್ದ. ಮತ್ತೆ ಈ ಕೈ ಗೆ ಎಂದು ನನ್ನ ಎಡಗೈ ತೋರಿಸಿದ್ದೆ. ಇದು ಈ ಕೈಗೆ ಎಂದು ಅವನು ಮತ್ತೊಂದು ಐಸ್ ಕ್ಯಾಂಡಿ ಕೊಟ್ಟು ಹೋಗಿದ್ದ. ಅವತ್ತಿಂದ ಅದೇ ರೂಢಿಯಾಗಿತ್ತು. 
ಪ್ರತಿ ಶನಿವಾರ ಸೈಕಲ್ ನಿಲ್ಲಿಸಿ ನನ್ನ ಎರಡು ಕೈಗಳಿಗೆ ಒಂದೊಂದು ಐಸ್ ಕ್ಯಾಂಡಿ ನೀಡಿ ಹೋಗುತ್ತಿದ್ದ. ಹಣ ತೆಗೆದು ಕೊಳ್ಳುತ್ತಲೂ ಇರಲಿಲ್ಲ. ನನಗೆ "ಗಿಡ್ಡ ಲಂಗದ ಉದ್ದ ಜಡೆಯ ಪುಟಾಣಿ " ಎನ್ನುತ್ತಿದ್ದ. ಆಮೇಲೆ ನನ್ನ ಶಾಲೆ ಅಲ್ಲಿ ಮುಗಿದು ಹೈಸ್ಕೂಲ್ , ಕಾಲೇಜು, ಕೆಲಸಗಳಲ್ಲಿ ಐಸ್ ಕ್ಯಾಂಡಿಯ ನೆನಪೇ ಮರೆತು ಹೋಗಿತ್ತು. ಇನ್ನು ಕೊಡುತ್ತಿದ್ದವನ ನೆನಪೆಲ್ಲಿರಬೇಕು. 

ಮೊನ್ನೆ ಶನಿವಾರ ಮನೆಗೆ ಹೋಗಿದ್ದೆ. ಅಮ್ಮನೊಂದಿಗೆ ಹಲಸಿನ ಸೊಳೆ ಬಿಡಿಸುತ್ತ ಕುಳಿತವಳಿಗೆ ಪೊಂವ್.. ಪೊಂವ್.. ಎಂಬ ಸೌಂಡ್ ಕೇಳಿಸಿತು. ಅಮ್ಮಾ  ಐಸ್ ಕ್ಯಾಂಡಿ ಬಂತು ಎಂದಳು. ಪ್ರಜ್ಞಾ "ಅಕ್ಕ ಐಸ್ ಕ್ಯಾಂಡಿ ತಿಂಬನ" ಎನ್ನುತ್ತಾ ರಸ್ತೆ ಗೆ ಓಡಿ ಅವನನ್ನು ನಿಲ್ಲಿಸಿದಳು. ನಾನು ಹಣ ತೆಗೆದುಕೊಂಡು ಅವಳ ಹಿಂದೆ ಹೋದೆ. ಐಸ್ ಕ್ಯಾಂಡಿಯವ ನನ್ನನ್ನೇ ಒಂದೆರಡು ನಿಮಿಷ ಗಮನಿಸಿ ನೀನು ನನ್ನ "ಗಿಡ್ಡ ಲಂಗದ ಉದ್ದ ಜಡೆಯ ಪುಟಾಣಿ " ಅಲ್ಲವೇನೇ? ಎಷ್ಟು ದೊಡ್ಡವಳಾಗಿ ಬಿಟ್ಟಿದ್ದಿಯೇ ಎಂದ. ಹೌದು ಅದು ಅವನೇ ಆಗಿದ್ದ. ಸೈಕಲ್ ಬದಲು ಬೈಕ್ ಬಂದಿತ್ತು. ಗಡ್ಡ ನೆರೆತಿತ್ತು.  ನನ್ನ ನೋಡಿ "ಲಂಗ ಉದ್ದವಾಗಿದೆ ಜಡೆ ಗಿಡ್ಡವಾಗಿ ಬಿಟ್ಟಿದೆಯಲ್ಲೇ" ಎಂದು ತಮಾಷೆ ಮಾಡಿದ  . ನಾನು ಕೊಟ್ಟ ಹಣ ಸಹಿತ ತೆಗೆದುಕೊಳ್ಳದೆ  ಒಂದು ಐಸ್ ಕ್ಯಾಂಡಿ ಕೊಟ್ಟವನು "ಆ ಕೈ ಗೆ ಬೇಡವೇನೆ" ಇನ್ನೊಂದು ಕೈಗೂ ಐಸ್ ಕ್ಯಾಂಡಿ ಕೊಟ್ಟು  ನನ್ನ ಹಣೆ ಮುಟ್ಟಿ "ದೇವರು ನಿನ್ನನ್ನೂ ನೂರು ಕಾಲ ಸುಖವಾಗಿಟ್ಟಿರಲಿ ಮಗಳೇ " ಎಂದು ಆಶೀರ್ವದಿಸಿ ಪೊಂವ್.. ಪೊಂವ್.. ಎಂದು ಸದ್ದು ಮಾಡುತ್ತಾ ಹೊರಟು ಹೋದ. ಏನು ಮಾಡಬೇಕು.. ಏನು ಹೇಳಬೇಕು ಎಂದೇ ತಿಳಿಯಲಿಲ್ಲ.

ಅವನು ಕೊಟ್ಟ ಐಸ್ ಕ್ಯಾಂಡಿ ಬಾಯಿ ತಂಪು ಮಾಡುತ್ತಾ ಆ ಬಿಸಿಲಲ್ಲಿ ಕರಗಿ ಕೈ ತೊಯಿಸುತ್ತಿದ್ದರೆ; ಅವನ ಮುಗ್ದ ಮನಸಿನ ಹಾರೈಕೆಗೆ ಮನಸು ತಂಪಾಗಿ ಅವನನ್ನೇ ನೋಡುತ್ತಿದ್ದ ಕಣ್ಣುಗಳಲ್ಲಿ ಬಂದ ನೀರು ಕೆನ್ನೆ ತೋಯಿಸಿತ್ತು...

ಬಹು ದೂರದ ಬದುಕ  ಪಯಣದಲ್ಲಿ ಎಲ್ಲೆಲ್ಲಿಯ  ಮೈತ್ರಿಯ ನಂಟೋ..?? ಯಾರ್ಯಾರಲ್ಲಿ  ಪ್ರೀತಿಯ ಋಣದ ಗಂಟೋ..??

Thursday, 3 May 2012

ನಾಳೆಗಾಗಿ ಬೇಗನೆ ಒಂದು ಕನಸು ಬೇಕಿದೆ...ಇವತ್ತಿನ ಬೆಳಗು ಎಲ್ಲದರಂತಿಲ್ಲ.  ನಿಜ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ ಪ್ರಪಂಚ. ನಿನ್ನೆಯಂತೆ ಇವತ್ತಿಲ್ಲ; ಇವತ್ತಿನಂತೆ ನಾಳೆಗಳು ಇರುವುದಿಲ್ಲ. ನಿನ್ನೆ ಹೀಗಿದ್ದೆವು, ಹೀಗಿತ್ತು ಎನ್ನುವ ನೆನಪುಗಳೇ ಶಾಶ್ವತ. ನಾಳೆಗಳು ಹೇಗೋ ಎಂಬ ಕಲ್ಪನೆಯಲ್ಲೇ ಸಾಗುವುದು ಬದುಕು. ಪ್ರತಿ ಇಂದಿನಲ್ಲೂ ನಾಳೆಯದೊಂದು ಕಲ್ಪನೆ, ಒಂದು ಕನಸು. ಅದು ನಾಳೆಯು ಬದುಕಬೇಕು ಎಂಬುದಕ್ಕೊಂದು ಕಾರಣ. 

ಆದರೆ ಇವತ್ತೇಕೋ ನಾಳೆಗಳ ಬಗೆಗೆ ಕನಸುಗಳೇ ಹುಟ್ಟುತ್ತಿಲ್ಲ. ಎಲ್ಲ ಸಾಕೆನಿಸುತ್ತಿದೆ. ಎಲ್ಲವನ್ನು ತೊರೆದು ಎಲ್ಲಾದರು ದೂರ ಹೋಗಿ ಒಂಟಿಯಾಗಿ ಬದುಕಬಾದೇಕೆ ಎನಿಸುತ್ತಿದೆ. ಒಂದಿಷ್ಟು ಪುಸ್ತಕಗಳು, ಒಂದಿಷ್ಟು ಬಣ್ಣಗಳು, ಹಾಳೆಗಳು, ಹಳೆ ಹಾಡುಗಳು, ಭಾವಗೀತೆಗಳಲ್ಲಿ ಕಳೆದು ಹೋಗಬೇಕೆನಿಸುತ್ತಿದೆ.

ಇಂದೇಕೋ ಮಾತು ಮಾತಿಗೂ ಅಳು ಬರುವಂತಿದೆ. ಅಮ್ಮನಿಗೆ ಕಾಲ್ ಮಾಡಿದರೂ ಅವಳ ದ್ವನಿ ಕೇಳುತ್ತಾ ಅಳುವೇ ಮೇಲಾಗಿ ಮಾತನಾಡಲಾರದೆ ಹೋಗುತ್ತಿದ್ದೇನೆ. ಕಾರಣ ಗೊತ್ತಿಲ್ಲ.

ಇವತ್ತೇಕೆ ಹೀಗೆ?? ಅಥವಾ ನಾನೇಕೆ ಹೀಗೆ ?? ನಿರ್ದರಿಸಲಾಗದೆ ಹೋಗುತ್ತಿದ್ದೇನೆ..

ನಾಳೆಗಾಗಿ ಬೇಗನೆ ಒಂದು ಕನಸು ಬೇಕಿದೆ... 

ಮೊಳಕೆ ಒಡೆಯಬೇಕಿದೆ.. ಮತ್ತೆ ಬದುಕಬೇಕಿದೆ.. 

Monday, 30 April 2012

ಒಂಟಿ ಹೆಜ್ಜೆಗುರುತುಗಳಲ್ಲಿ...

ಮರೆತರೂ ಮರೆಯದೆ ...
ಮತ್ತೆ ಮತ್ತೆ ನೆನಪಾಗಿ..
ಕಾಡುವೆ ನೀನು..
ಕೊಲ್ಲುವ ನೆನಪುಗಳಲ್ಲಿ..
ಕದಡಿದ ಸಂಬಂಧಗಳಲ್ಲಿ..
ನೀರು ಬತ್ತಿದ ಕಣ್ಣುಗಳಲ್ಲಿ..
ನೀ ಬಿತ್ತಿದ ಕನಸುಗಳಲ್ಲಿ..
ಒಡೆದ ಮನದ 
ಕನ್ನಡಿಯ ಪ್ರತಿಬಿಂಬಗಳಲ್ಲಿ..
ಬಾಳ ಪಯಣದ 
ಒಂಟಿ ಹೆಜ್ಜೆಗುರುತುಗಳಲ್ಲಿ...

Monday, 16 April 2012

ಕೆಂಗುಲಾಬಿ...


ನಾ ನಿನಗೆ ಇಷ್ಟವಾ..?? ಎಂಬ 
ಹುಡುಗಿಯ ಕುಡಿನೋಟದ ಪ್ರಶ್ನೆಗೆ 
ಹುಡುಗನ ಚಿಗುರುಮೀಸೆಯ 
ತುಂಟ ಕಿರುನಗೆಯಲ್ಲಿ ಉತ್ತರ ಸಿಕ್ಕಿತ್ತು..
ಹೊಸ ಭಾವನೆಗಳ ಹದವಾದ ಮಳೆಯಾಗಿರಲು 
ಎರಡು ಮೃದು ಮನಸುಗಳ ಅಂಗಳದಿ  
ಪ್ರೀತಿಯ ಕೆಂಗುಲಾಬಿಯೊಂದು ಅರಳಿತ್ತು ..


Wednesday, 11 April 2012

ಇರುವುದೊಂದೇ ಆಶಯ..


 ಒಂಭತ್ತು ತಿಂಗಳು ಆಡಿದ್ದು 
ಅಮ್ಮಾ ನಿನ್ನ ಒಡಲಲ್ಲಿ...
ಆಮೇಲೆ ಬೆಳೆದದ್ದು 
ಅಪ್ಪಾ ನಿನ್ನ ನೆರಳಲ್ಲಿ..

ಅಪ್ಪನ ಏಟು ತಿಂದು ಬಿಕ್ಕಳಿಸುವಾಗ 
ಸಿಕ್ಕಿದ್ದು ಅಮ್ಮಾ ನಿನ್ನ ಮಡಿಲು..
ಅಮ್ಮನ ಬೈಗುಳಗಳಿಗೆ ಹೆದರಿ 
ಓಡಿ ಬಂದು ತಬ್ಬಿದ್ದು ಅಪ್ಪಾ ನಿನ್ನ ಹೆಗಲು..

ಬದುಕಲು ಕಲಿಸಿದ್ದು ಅಪ್ಪನ 
ಅಧಿಕಾರದ ನೀತಿ...
ಬದುಕಲ್ಲಿ ಬೆಳೆಸಿದ್ದು ಅಮ್ಮನ 
ವಾತ್ಸಲ್ಯದ ಪ್ರೀತಿ..

ನನ್ನ ಪ್ರತಿ ಕಷ್ಟಗಳಿಗೂ 
ಮಿಡಿದದ್ದು ನಿಮ್ಮ ಜೀವ..
ನನ್ನ ಪ್ರತಿ ಸಫಲತೆಯಲ್ಲೂ 
ಕಂಡದ್ದು ನಿಮ್ಮ ಕಣ್ಣಲ್ಲಿ ಧನ್ಯತಾ ಭಾವ..

ನಿಮ್ಮ ಮುದ್ದಿನ ಮಗಳಾಗಿ 
ನನಗಿರುವುದೊಂದೇ ಆಶಯ 
ಅನುಕ್ಷಣವೂ ನಿಮಗಿರಲಿ 
ಆ ಭಗವಂತನ ಅಭಯ..


Wednesday, 4 April 2012

ಕಾಯುತ್ತಿದ್ದೇನೆ ಗೆಳತಿ ಕತ್ತಲ್ಲಲ್ಲಿ..


ಮನಸ್ಸಿನಿಂದ ನೀನೆದ್ದು ಹೋದ 
ರಭಸಕ್ಕೆ  ಎದೆಮನೆಯ 
ಪ್ರೀತಿಯ ಹಣತೆ ಆರಿಹೋಗಿತ್ತು..
ಆದರೂ ಕಾಯುತ್ತಿದ್ದೇನೆ 
ಗೆಳತಿ ಕತ್ತಲ್ಲಲ್ಲಿ..
ಎಂದಾದರೊಮ್ಮೆ 
ನೀ ಮರಳಿ ಬರಬಹುದು 
ಈ ಮನಸ್ಸಿಗೆ..
ಪ್ರೇಮದ ಹಣತೆ 
ಮತ್ತೆ ಉರಿಯಬಹುದು..
ಎದೆ ಮನೆಯಲ್ಲಿ 
ಮತ್ತೆ ಬೆಳಕಾಗಬಹುದೆಂಬ 
ನಿರೀಕ್ಷೆಯಲ್ಲಿ...

Thursday, 22 March 2012

ಎಲ್ಲರಿಗೂ ಶುಭ ತರಲಿ ಚಾಂದ್ರಮಾನ ಯುಗಾದಿ...


ಪಾಡ್ಯದ ರವಿ ಉದಯಿಸಿರಲು..
ಚೈತ್ರದ ಬಾಗಿಲಲ್ಲಿ..
ಹೊಸ ಚಿಗುರ ರಂಗವಲ್ಲಿ...

ಹೊಸ ಸಂವತ್ಸರದ ಬೆಳಕಲ್ಲಿ 
ಸಿಹಿಕಹಿಗಳ ಹೂರಣವಿಹುದು
ಬೇವು- ಬೆಲ್ಲಗಳ ಮಿಶ್ರಣದಲ್ಲಿ..

ಹಳೆ ಎಲೆಗಳ ಉದುರಿಸಿ 
ಹೊಸ ಚಿಗುರ ತೊಟ್ಟು..
ಪ್ರಕೃತಿ ಸಂಭ್ರಮಿಸುವಂದದಿ...
.
ಹಳೆಯ ನೋವೆಲ್ಲವ ಮರೆಸಿ 
ಹೊಸ ಆಶಯಗಳ ಕೊಟ್ಟು 
ಎಲ್ಲರಿಗೂ ಶುಭ ತರಲಿ 
ಚಾಂದ್ರಮಾನ ಯುಗಾದಿ... 


Tuesday, 6 March 2012

ಮೌನ ಶಿಲೆ....


ನಿನ್ನ ಕಣ್ಣುಗಳೇ ತಾವರೆಗಳು ಎಂದವನು
      ಬಾಳನ್ನು ಕಣ್ಣಿರ ಕೊಳವಾಗಿಸಿ  ಬಿಟ್ಟೆ...
      ನಿನ್ನ ಮಾತೆ ಮುತ್ತುಗಳು ಎಂದವನು 
      ಮೌನ ಶಿಲೆಯಾಗಿಸಿ ಬಿಟ್ಟೆ...
      ನಮ್ಮಿಬ್ಬರ ನಡುವೆ ಕಂದಕಗಳೇ 
ಬರಲಾರವು ಎಂದವನು
     ವಂಚನೆ, ಅಪನಂಬಿಕೆಯ  
ಪರ್ವತವನ್ನೇ ಎಬ್ಬಿಸಿಬಿಟ್ಟೆ.... !!!

Friday, 2 March 2012

ಮಧುಪಾತ್ರೆ....


ಪ್ರತಿ  ಹೂವೆದೆಯ ಚುಂಬಿಸಿ..
ಸಂಭ್ರಮದಿ ಭ್ರಮರ 
ಮಕರಂದವ  ಹೀರುವಂದದಿ..
ಪ್ರತಿ ಎದೆಯಾಳದಿ ನಗು ಸುರಿದು 
ಒಲವ ಬಿತ್ತಿ ಬೆಳೆಯಲು 
ಜೇನಿಗಿಂತ ಸಿಹಿ ನೋಡು 
ಬದುಕೆಂಬ ಮಧುಪಾತ್ರೆ....

Friday, 17 February 2012

ಮನದಾಳದಲ್ಲಿ...

ಎದೆ ಕದವ ತೆರೆದೊಮ್ಮೆ 
ತಿರುವಿ ಹಾಕಲು ಬದುಕ ಪುಟಗಳ 
ಮೃದು ಮಧುರ ಮೆಲುಕುಗಳು 
ಮೂಡಿ ನಿಲ್ಲುವವು ಮನದಾಳದಲ್ಲಿ...
ತಿಳಿ ನೀರ ಕೊಳದಲ್ಲಿ 
ನಿಚ್ಛಳವಾಗಿ ನೆರಳು ಮೂಡುವಂತೆ.. 

ಅಲೆಗಳೇಳಲು ನೆರಳು 
ಮಸುಕು ಮಸುಕು 
ತಿಳಿನೀರ ಕೊಳದಲ್ಲಿ..

ಭಾವಗಳ  ಅಲೆಗಳೆದ್ದಷ್ಟೂ
ಬೆಚ್ಚಗೆ ತಬ್ಬುವುದು 
ನೆನಪಿನಾ ಮುಸುಕು 
ಮನದಾಳದಲ್ಲಿ ....

ಬೆಳಕಿನಾ ಕಿರಣಗಳಳಿಯಲು
ನೆರಳೂ ದೂರ ದೂರ 
ತಿಳಿನೀರ ಕೊಳದಲ್ಲಿ...

ಅನುಭವದ ಬೆಳಕಲ್ಲಿ 
ತಿರುತಿರುಗಿ ನೋಡಿದಷ್ಟೂ
ನೆನಪುಗಳು ಮಧುರ 
ಮನದಾಳದಲ್ಲಿ ...

ನಾಳೆಗಳ ಅಂಗಳದಿ ನಿಂತು 
ಮತ್ತೆ ತಿರುಗಲು ಇಂದಿನೆಡೆಗೆ 
ಮನಕರಗಿ ಕಣ್ಣು ಹನಿಯುವುದು
ನೆನಪುಗಳ ಬಿಸಿಯಲ್ಲಿ..

Tuesday, 14 February 2012

ಜಲಧಾರೆ ನಿನ್ನದು....


ಎಷ್ಟು ಪಡೆದರೂ...
     ಇನ್ನು ಬೇಕು ಬೇಕೆನ್ನುವ..
     ಪ್ರೀತಿ ಪಿಪಾಸು ಮನಸು ನನ್ನದು...
     ಎಷ್ಟು ಕೊಟ್ಟರೂ ...
    ಮುಗಿಯದ ನಿತ್ಯ ನೂತನ..
    ಅಕ್ಷಯದ ಪ್ರೀತಿ ಜಲಧಾರೆ ನಿನ್ನದು..


ಮಧುರ ಗೀತೆಯಂತೆ..


ಮನಸ್ಸು ಮರೆಯದ..
ಮೌನವಾಗಿರಲೂ ಬಿಡದ..
ಮತ್ತೆ ಮತ್ತೆ ನೆನಪಾಗಿ ಗುನುಗುವ..
ಮುಂಜಾನೆಯೇ ಮನ ತುಂಬಿಕೊಂಡ...
ಮಧುರ ಗೀತೆಯಂತೆ..
ನಿನ್ನ ಪ್ರೀತಿಯೆಂಬುದು..


ಬೆಳಕ ಪಸರಿಸಿಹುದು..


ಮೊದಲ ನೋಟದಲಿ 
ಕನಸುಗಳು ಅರಳಿರಲು...
ಮಾತು ಮೌನಗಳಲಿ 
ಮನವ ಅರಿತಿರಲು ...
ಹೃದಯ ಹೃದಯಗಳು 
ಬೆಸೆದಿರಲು...
ಜೀವನದಿ ಬೆಳಕ ಪಸರಿಸಿಹುದು.. 
ಪ್ರೀತಿ ತನ್ನ ಹೊನ್ನಕಾಂತಿಯಲಿ 


Friday, 10 February 2012

ಕಹಿಗಳೆಲ್ಲವ ಮರೆತು...ಕಾಲದ ಒಡಲಲ್ಲಿ ..
ಹೂತ ಕಹಿಗಳೆಲ್ಲವ ಮರೆತು...
ಮನಗಳ ನಡುವಿನ...
ಮೌನಗೋಡೆಯನೊಡೆದು
ಒಮ್ಮೆ ತಿರುಗಿ ನೋಡು..
ಕಾದಿಹುದು ಮನದ ಕನ್ನಡಿ 
ನಿನ್ನ ಪ್ರೀತಿಯ  ಪ್ರತಿಬಿಂಬಗಳಿಗಾಗಿ..

Wednesday, 8 February 2012

ಕಪ್ಪು ಬಿಳುಪು ಚಿತ್ರಗಳಲ್ಲಿ...


ನೀ ಬಣ್ಣವಾಗದಿರಲು
       ಈ ಬದುಕಿನ ಹಾಳೆಯಲಿ..
      ನಿನ್ನ ನೆನಪುಗಳು ಬೆರೆತಾಗಿವೆ
      ಬದುಕಿನ ಕಪ್ಪು ಬಿಳುಪು ಚಿತ್ರಗಳಲ್ಲಿ...

ಸುಂದರ ಕನಸು....


ನನ್ನ ಎಲ್ಲ ಕನಸುಗಳಲ್ಲಿ ನೀ        
       ವಾಸ್ತವದ ಬದುಕಾಗಿರುತ್ತಿದ್ದೆ..
       ಆದರೆ ವಾಸ್ತವದಲ್ಲಿ ನೀ 
       ಬದುಕಿನ ಸುಂದರ ಕನಸಾಗಿಯೇ ಉಳಿದೆ....

Monday, 6 February 2012

ಕಾಯುತ್ತಿದೆ ಮನ..


ಎದೆಯಂಗಳದಲ್ಲಿ ಪ್ರೀತಿಯ 
      ಹಣತೆ ಹೊತ್ತಿಸಿ.. ಕಾಯುತ್ತಿದೆ ಮನ..
      ಈ ಹಾಲು ಬೆಳದಿಂಗಳರಾತ್ರಿಯಲ್ಲಿ....
     ಹೊಳೆಯಂಚಿನ ಕಾಲುದಾರಿಯಲ್ಲಿ.. 
     ನೀ ಬಂದೇ ಬರುವೆಯೆಂಬ ನಿರೀಕ್ಷೆಯಲ್ಲಿ..

ಹೃದಯ ನುಡಿಯುತ್ತಿದೆ ..


ಮೊದಲ ಸಾರಿ ...
ಹೃದಯ ನುಡಿಯುತ್ತಿದೆ ..
ತೊದಲು ತೊದಲಾಗಿ..
    ನೀ ಬರುವೆಯ...
   ಇನ್ನೂ ಬಿಡಿಸದ ಪ್ರೆಮಚಿತ್ರಕ್ಕೆ..
    ಬಿಳಿಯ  ಹಾಳೆಯಾಗಿ...

Friday, 3 February 2012

ಮಂಗಳದ ಮುಂಬೆಳಗಿಗಾಗಿ.......


ಪ್ರತಿದಿನವೂ ಸಂಧ್ಯೆಯಂಗಳದಿ ನಿಂತು 
     ಭಾಸ್ಕರನ ಬೀಳ್ಕೊಡುವ ಭೂರಮೆ 
     ಕಾಯುವುದು ಮರುದಿನದ 
     ಮಂಗಳದ ಮುಂಬೆಳಗಿಗಾಗಿ.......

ಏಕಾಂಗಿಯೇ..


ಸೂರ್ಯನಿಗೆ ಇರುವ 
      ಮನಸ್ಸಿಲ್ಲಾ..
      ಚಂದ್ರನಿಗೆ ಬರುವ 
      ಮನಸ್ಸಿಲ್ಲಾ...
     ಸಂಧ್ಯೆ ಯಾವಾಗಲೂ 
     ಏಕಾಂಗಿಯೇ..

Wednesday, 1 February 2012

ನೆನಪೇ ಆಗಲಿಲ್ಲವೇನೋ ಹುಡುಗಾ......


 ಇಂದು ಇನ್ನೊಬ್ಬಳಿಗೆ ತಾಳಿ ಕಟ್ಟುವಾಗ 
       ನನ್ನ ಕೊರಳಿಗೆ ಮುತ್ತಿಕ್ಕಿದ್ದು 
       ನೆನಪೇ ಆಗಲಿಲ್ಲವೇನೋ ಹುಡುಗಾ..

      ಇಂದು ಇನ್ನೊಬ್ಬಳ ಪಾಣಿಗ್ರಹಣ ಮಾಡುವಾಗ 
      ನನ್ನ ಕೈ ಹಿಡಿದು ನಡೆದಿದ್ದು 
      ನೆನಪೇ ಆಗಲಿಲ್ಲವೇನೋ ಹುಡುಗಾ.....

     ಇಂದು ಇನ್ನೊಬ್ಬಳೊಂದಿಗೆ ಸಪ್ತಪದಿ ತುಳಿಯುವಾಗ 
     ಒಂದೇ ಕೊಡೆಯಲ್ಲಿ ನಾವಿಬ್ಬರು 
     ಹಂಚಿಕೊಂಡ ಹೆಜ್ಜೆಗಳು  
     ನೆನಪೇ ಆಗಲಿಲ್ಲವೇನೋ ಹುಡುಗಾ..

Sunday, 29 January 2012

ಯಾವ ಚೈತ್ರದ ವಸಂತ ಋತುವೋ ನೀನು...??


ಕಣ್ಣ ಸನ್ನೆಯಲಿ..
ಹೆಣ್ತನವ ಗೆದ್ದು..
ರೆಪ್ಪೆಯಂಚುಗಳಲ್ಲಿ ...
ಕನಸುಗಳ ಬಲೆ ಹೆಣೆದು...
ಕೆನ್ನೆಗುಳಿಯ ಬೊಗಸೆಗಳಲ್ಲಿ 
ಮುತ್ತಿನ ಮಳೆ ಸುರಿದು..
ಎದೆಯ ಮಾಮರದಿ...
ಒಲವ ಉಯ್ಯಾಲೆಯಲಿ..
ಸವಿನೆನಪುಗಳ ತೂಗುವವ..
ಯಾವ ಚೈತ್ರದ  
ವಸಂತ ಋತುವೋ ನೀನು...??

Friday, 27 January 2012

ಕಿರುಬೆರಳ ಸನಿಹದಲ್ಲಿ ಜೊತೆಯಾಗಿ ನೀನಿರಲು...


ಇಳಿಸಂಜೆಯ ತಂಗಾಳಿ
ಮೈಮನಗಳ ತಾಕುತಿರಲು...
ಕಿರುಬೆರಳ ಸನಿಹದಲ್ಲಿ  
ಜೊತೆಯಾಗಿ ನೀನಿರಲು...
ಪ್ರೀತಿ ಸುಧೆಯಲ್ಲಿ..
ಮನಸು ಬೆರೆತಿರಲು..
ನಿನ್ನೊಲವ ಕಂಡು.. 
ನಸುನಾಚಿ ಕೊಂಡ೦ತಿತ್ತು ...
ಹೊಂಬೆಳಕಿನಲ್ಲಿ ಮುಗಿಲು...