Thursday, 28 June 2012ಸರಸ್ವತಿಯ ಆಸ್ಥಾನದಲ್ಲಿ ಮರೆಯಲಾರದ ಒಂದು ದಿನ ....


ಪ್ರವಾಸ ಎಂದರೆ ಖುಷಿಯೇ.. ನಗು, ಗಲಾಟೆ ಎಲ್ಲವು ಅದರ ಭಾಗಗಳೇ.. ಆದರೆ ಪ್ರವಾಸಕ್ಕೆ ಹೋದ ಸ್ಥಳವೊಂದು ಮಾತು ಮನಸ್ಸು ಎರಡನ್ನೂ ಮೂಕವಾಗಿಸಿತ್ತು ಅಂದರೆ ನಂಬಲು ಸಾಧ್ಯಾನಾ ?? ಮೊನ್ನೆ ಜೂನ್ ೨೩ ಕ್ಕೆ ಅದು ಸಾಧ್ಯವಾಗಿತ್ತು. ಹರಳಳ್ಳಿಯ ಅಂಕೆ ಗೌಡರ ಪುಸ್ತಕದ ಮನೆ ನೋಡಿದಾಗ ಮಾತು.. ಮನಸು ಎರಡೂ ಮೂಕವಾಗಿತ್ತು... ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎನ್ನುವ ವಾಕ್ಯ ಕಣ್ಣಿಗೆ ಕಂಡಿತ್ತು.ಎಲ್ಲ ಕಾಲೇಜ್ಗಳಲ್ಲಿ , ಲೈಬ್ರೆರಿಗಳಲ್ಲಿ ಇದೇ ಇರತ್ತೆ ಅಂದುಕೊಂಡೇ ಒಳಗೆ ಹೆಜ್ಜೆ ಇಟ್ಟವಳಿಗೆ ಅನಿಸಿದ್ದು ಕೈ ಮುಗಿದು ಮಾತ್ರವಲ್ಲ ಸಾಷ್ಟಾಂಗ ನಮಸ್ಕಾರ ಮಾಡಿಯೇ ಒಳಗೆ ಅಡಿ ಇಡಬೇಕಿತ್ತು ಎಂದು. ನಾನು ಕುಬೇರನ ಆಸ್ಥಾನ ನೋಡಿಲ್ಲ ಅಲ್ಲಿ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿದ್ದಳಂತೆ.. ಕೈಲಾಸ, ವೈಕುಂಠ , ಇಂದ್ರನ ಐಭೋಗ.. ಉಹೂ೦.. ..ಅದೆಲ್ಲ ಹೋಗಲಿ ರಾಜಮಹಾರಾಜರ ಯಾವ ವೈಭವದ ಆಸ್ಥಾನವನ್ನೂ ನೋಡಿಲ್ಲ. ಆದರೆ ನಾನು ಸರಸ್ವತಿಯ ಅಸ್ಥಾನವನ್ನು ನೋಡಿದ್ದೇನೆ. ಹೌದು ಅಂಕೆ ಗೌಡರ ಪುಸ್ತಕದ ಮನೆ ಸರಸ್ವತಿಯ ಆಸ್ಥಾನವೇ. ನಾನು ಸ್ವಲ್ಪ ಸೊಕ್ಕಿನಿಂದ ಮತ್ತು ಹೆಮ್ಮೆಯಿಂದ ಹೇಳಬಲ್ಲೆ ನಾನು ಸರಸ್ವತಿಯ ಅಸ್ಥಾನವನ್ನು ಕಣ್ಣಾರೆ ನೋಡಿದ್ದೇನೆ ಮತ್ತು ಅಲ್ಲಿ ಕೆಲ ಹೊತ್ತು ಕಳೆದಿದ್ದೇನೆ ಎಂದು.ಸರಸ್ವತಿಯ ಆಸ್ಥಾನದ ಮುಂಭಾಗ 

ಪ್ರಕಾಶಣ್ಣ ಪ್ರವಾಸದಲ್ಲಿ ನಾವೊಂದು ಲೈಬ್ರೆರಿಗೆ ಭೇಟಿ ಕೊಡುತ್ತಿದ್ದೇವೆ ಎಂದಾಗ, ಎಲ್ಲ ಕಡೆ ನೋಡಿರ್ತೆವಲ್ಲ ಇದೇನು ಹೊಸದು ? ಎಂದುಕೊಂಡಿದ್ದೆ. ಆದರೆ ಪ್ರವಾಸಕ್ಕೆ ೨ ದಿನ ಮುಂಚೆ ಪ್ರಕಾಶಣ್ಣ ಈ ಲೈಬ್ರೆರಿ ಯ ಬಗ್ಗೆ ಬಾಲು ಸರ್ ಬರೆದ ಲೇಖನದ ಲಿಂಕ್ ಕಳಿಸಿದಾಗ(http://nimmolagobba.blogspot.com/2010/08/blog-post_16.html ) ಓದಿ ಆಶ್ಚರ್ಯಗೊಂಡಿದ್ದೆ. ಆದರೆ ಅಲ್ಲಿ ಹೋದಾಗ ಮಾತ್ರ ಕಣ್ಣೆದುರು ತೆರೆದು ಕೊಂಡಿದ್ದು ಬೇರೆಯದೇ ಲೋಕ. ಅದು ಪುಸ್ತಕಗಳ ಲೋಕ. ನೋಡಿದಷ್ಟೂ ಕಂಡಿದ್ದು ಪುಸ್ತಕಗಳೇ. ಯಾವುದನ್ನ ನೋಡಲೋ..ಅಥವಾ ತೆಗೆದು ಓದಲೋ ಎನ್ನುವ ಗೊಂದಲದಲ್ಲೇ ಸ್ವಲ್ಪ ಹೊತ್ತು ಕಳೆದೇ ಹೋಯಿತು ಅನ್ನಿಸುತ್ತಿದೆ ಈಗ.. ಅಷ್ಟೊಂದು ಪುಸ್ತಕಗಳು. ಅಪರೂಪದ ಪುಸ್ತಕಗಳು.. ಹೆಸರೇ ಕೇಳದ ಪುಸ್ತಕಗಳು.. ಕಣ್ಣಿನಿಂದ ನೋಡುತ್ತೇನೆ ಅಂದುಕೊಂಡಿರದಿದ್ದ ಪುಸ್ತಕಗಳು..ಈ ಎಲ್ಲವೂ ಸಾಧ್ಯವಾದದ್ದಕ್ಕೆ ಕೋಟಿ ನಮನಗಳು ಸಲ್ಲಬೇಕು ಆ ಮಹಾನುಭಾವ ಅಂಕೆ ಗೌಡರಿಗೆ.. ಒಂದು ಸಕ್ಕರೆ ಕಾರ್ಖಾನೆಯ ಟೈಮ್ ಕೀಪೆರ್ ಆಗಿದ್ದುಕೊಂಡು ತಮ್ಮ ಜೀವನದ ಬಹು ಪಾಲು ಆಯುಷ್ಯ ಮತ್ತು ಗಳಿಕೆಯ ಹಣವನ್ನು ಪುಸ್ತಕಗಳಿಗಾಗಿಯೇ ವ್ಯಯಿಸಿ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ, ಮುಂದಿನ ಪೀಳಿಗೆಗೆ ನೀಡಬೇಕೆಂದಿರುವ ಆ ಜೀವಕ್ಕೆ ಶಿರ ಸಾಷ್ಟಾಂಗ ನಮಸ್ಕಾರ. ಅಂಕೆ ಗೌಡರ ಅಸೆಗೆ ಆಸರೆಯಾಗಿ ನಿಂತ ಅವರ ಪತ್ನಿಯವರಿಗೂ ಕೂಡ ನಮನಗಳು ಸಲ್ಲಲೇ ಬೇಕು..


ಪುಸ್ತಕ ಲೋಕದಲ್ಲಿ ಅಂಕೆ ಗೌಡರಂತಹ ಮಹಾನ್ ಸಾಧಕರೊಡನೆ ಸಂತೋಷ ಹಂಚಿಕೊಂಡ ಒಂದೆರಡು ಕ್ಷಣ ..


ಅಲ್ಲಿ ಏನು ನೋಡಿದೆ ಎಂದರೆ ಎಲ್ಲವನ್ನೂ ಹೇಳಲಾರೆ. ನೋಡಿದ್ದೆಲ್ಲವು ಹೊಸದೇ.. ಅಪರೂಪದ್ದೇ.. ಹೇಳಲು , ವರ್ಣಿಸಲು ಸಾಧ್ಯವಿಲ್ಲ ಅವುಗಳನ್ನ. ಕಿಟ್ಟೆಲ್ ಡಿಕ್ಷನರಿಗಿಂತಲೂ ಹಳೆಯ ಡಿಕ್ಷನರಿ ನೋಡಿದ್ದು. ೧೮೦೦ ರಲ್ಲಿ ಪ್ರಕಟಣೆಯಾದ ಪುಸ್ತಕ ನೋಡಿದ್ದು, ರಾಜಾ ರವಿವರ್ಮರ ಎಲ್ಲಾ ಚಿತ್ರಗಳಿರುವ ಪುಸ್ತಕ ನೋಡಿದ್ದು. ಮಾನವ ದೇಹ ರಚನೆಯ ಬಗೆಗೆ ಇದ್ದ ಹೊರಲಾರದ ಪುಸ್ತಕವನ್ನು ಅದು ಇದ್ದಲ್ಲಿಯೇ ತಿರುವಿ ಹಾಕಿದ್ದು. ೧೯೬೬ ರ ಪ್ರಜಾವಾಣಿ ದೀಪಾವಳಿ ವಿಶೇಷಾಂಕ, ಸುಧಾ ವಾರಪತ್ರಿಕೆಯ ಮೊದಲಸಂಚಿಕೆ ನೋಡಿದ್ದು.. ಅಬ್ಬಾ..!! ಹೇಳುತ್ತಾ ಹೋದರೆ ಹನುಮನ ಬಾಲದಂತೆ ಬೆಳೆಯುತ್ತಾ ಹೋಗುವುದು. ನಾನು ಯಾವುದೋ ಸಮಿತಿಯ ಕಾಲೇಜಿನ, ಸರ್ಕಾರದ ಲೈಬ್ರೆರಿಗಳನ್ನ ನೋಡಿದ್ದೆ. ಆದರೆ ಒಬ್ಬ ವ್ಯಕ್ತಿ ಜೀವನದಲ್ಲಿ ಒಂದು ಅಪರೂಪದ ಲೈಬ್ರೆರಿ ಮಾಡುವಷ್ಟು ಪುಸ್ತಕಗಳನ್ನು ಸಂಪಾದಿಸುತ್ತಾನೆ ಅಂತ ಅಗಲೀ , ಅದನ್ನ ನನ್ನ ಆಯುಷ್ಯದಲ್ಲಿ ನಾನು ನೋಡುತ್ತೇನೆ ಎಂದಾಗಲೀ ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಅಲ್ಲಿ ಹೋದ ತಕ್ಷಣ ನಮಗೆ ಅಂಕೆ ಗೌಡರು ನೀಡಿದ್ದು " 50 wonders of the world" ಎನ್ನುವ ಪುಸ್ತಕವನ್ನು. ಆ ಲೈಬ್ರೆರಿಯಲ್ಲಿ ಅಷ್ಟು ಹೊತ್ತು ಕಳೆದ ಮೇಲೆ ನನಗನ್ನಿಸಿದ್ದು "ಐತ್ತೊಂದನೆ ಅಧ್ಬುತದಲ್ಲಿ " ನಿಂತು " 50 Wonders of the World" ಎನ್ನುವ ಪುಸ್ತಕ ನೋಡಿದೆ ಎಂದು.

ಬಾಲು ಸರ್ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದು ..

ಅಂಕೆ ಗೌಡರನ್ನು ಆಜಾದ್ ಸರ್ ಸನ್ಮಾನಿಸಿದ ಕ್ಷಣ ..


ರೂಪಾ ಸತೀಶ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಾಗ ..


ಬರಿಯ ಕೆಲಸ ಕಾರ್ಯಗಳು, ಅಥವಾ ಊರು ಬೇಸರವಾದವರು ಮಾತ್ರವಲ್ಲ , ಜೀವನವೇ ಬೇಸರವಾದ ಒಬ್ಬ ವ್ಯಕ್ತಿ ಒಮ್ಮೆ ಹರಳಳ್ಳಿಯ ಪುಸ್ತಕದ ಮನೆಗೆ ಭೇಟಿ ನೀಡಿ ಕೆಲ ಹೊತ್ತು ಕಳೆದರೆ ಮತ್ತೆ ಜೀವನೋತ್ಸಾಹ ತುಂಬಿಕೊಂಡು ಬರುತ್ತಾನೆ ಎನ್ನುವದರಲ್ಲಿ ಸಂಶಯವೇ ಇಲ್ಲ. ಬೆಳಿಗ್ಗೆ ೧೦.೩೦ ರ ಸುಮಾರಿಗೆ ಅಲ್ಲಿ ಹೋಗಿ ೨ ಗಂಟೆಯ ಸುಮಾರಿಗೆ ಹೊರ ಅಡಿ ಇಟ್ಟಾಗಲೇ ಗೊತ್ತಾಗಿದ್ದು ನಾವು ಭೂಲೋಕದಲ್ಲೇ ಇದ್ದೇವೆ ಎಂದು. ತಲೆಗೆ ಸೂರ್ಯ ಶಾಖ ತಾಗಿದಾಗಲೇ ಗೊತ್ತಾಗಿದ್ದು ಅದು ಮದ್ಯಾನ್ಹದ ಸಮಯವೆಂದು.

ನಮ್ಮ ಪ್ರೀತಿಯ ಬಳಗ 

ಇಂತಹದ್ದೊಂದು ಅಧ್ಬುತವನ್ನು ತೋರಿಸಿದ ಬಾಲು ಸರ್ ಮತ್ತು ಪ್ರಕಾಶಣ್ಣನಿಗೆ ಧನ್ಯವಾದಗಳು . ಮತ್ತು ಈ ಪ್ರವಾಸದಲ್ಲಿ ನನ್ನೊಡನೆ ಸೇರಿ. ಸುಂದರ ನೆನಪುಗಳನ್ನು ಕಟ್ಟಿಕೊಟ್ಟ ಎಲ್ಲ ಬ್ಲಾಗ್ ಮಿತ್ರರಿಗೆ ಈ ಪುಟಾಣಿಯ ನಮನಗಳು..

ಚಿತ್ರ ಕ್ರಪೆ - ಪ್ರಕಾಶ್  ಹೆಗ್ಡೆ 

7 comments:

 1. ಸಂಧ್ಯಾ ಶ್ರೀಧರ್ ಭಟ್;ಇಂತಹ ಅದ್ಭುತ ಸಾಧಕರ ಬಗ್ಗೆ ಏನು ಹೇಳೋಣ!!?ಅವರ ಅಘಾದ ವ್ಯಕ್ತಿತ್ವ ನಮ್ಮ ನಿಲುಕಿಗೇ ಸಿಗುವುದಿಲ್ಲ.ಇಂತಹ ಪುಸ್ತಕ ರಾಶಿ,ಅದರ ಹಿಂದಿರುವ ಅವರ ಮತ್ತು ಅವರ ಮನೆಯವರ ಪರಿಶ್ರಮ,ಸಾಧನೆ,ಇವೆಲ್ಲವೂ ನಮ್ಮನ್ನು ಮೂಕ ವಿಸ್ಮಿತರಾಗಿಸುತ್ತದೆ.ನಮ್ಮ ಕರ್ನಾಟಕಕದಲ್ಲೇ ಇರುವ ಅದ್ಭುತಗಳಲ್ಲಿ ಅಂಕೇ ಗೌಡರೂ ಒಬ್ಬರು.ಅವರ ಪುಸ್ತಕ ಪ್ರೇಮ ಅಪರೂಪದ್ದು!೨೦೧೦ರಲ್ಲಿ ಬಾಲಣ್ಣನವರು ನಮ್ಮನ್ನು ಅಲ್ಲಿಗೆ ಕಳಿಸಿದಾಗ ದಂಗಾಗಿ ಹೋದೆ.ಅಂಕೆ ಗೌಡರು 'ಇದು ಯಾವುದೋ ಜನ್ಮದಲ್ಲಿ ಸರಸ್ವತಿ ನನಗೆ ನೀಡಿದ ಶಾಪ ಸರ್'ಎಂದಾಗ ನನ್ನ ಕಣ್ಣುಗಳು ತೇವವಾಗಿದ್ದವೂ.ಅವರು ಸಣ್ಣವರಿದ್ದಾಗ ಎರವಲು ಪಡೆದಿದ್ದ ಪುಸ್ತಕವೊಂದನ್ನು ಹಿಂದಿರುಗಿಸಲು ಸ್ವಲ್ಪ ತಡವಾದಾಗ ಹಿರಿಯರೊಬ್ಬರು 'ಪುಸ್ತಕವನ್ನು ಸರಿಯಾಗಿ ಹಿಂದಕ್ಕೆ ಕೊಡೋಕೆ ಆಗದಿದ್ದರೆ ಪುಸ್ತಕ ಯಾಕೆ ತೆಗೆದುಕೊಂಡುಹೋಗುತ್ತೀರಿ'ಎಂದಿದ್ದರಂತೆ.
  ಆ ಮಾತುಗಳು ಅವರನ್ನು ಪುಸ್ತಕ ಸಂಗ್ರಹಿಸಲು ಪ್ರೇರೇಪಿಸಿತಂತೆ!
  ಪ್ರತಿಯೊಬ್ಬರೂ ಜೀವನದಲ್ಲಿ ನೋಡಲೇ ಬೇಕಾದ ಸ್ಥಳ 'ಪುಸ್ತಕದ ಮನೆ'.ಇಂತಹ ಮಹತ್ ಕಾರ್ಯಕ್ಕೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಯನ್ನು ಸರ್ಕಾರ ಗೌರವಿಸಿ ಸೂಕ್ತ ಆರ್ಥಿಕ ಸಹಾಯ ನೀಡಲು ಮುಂದಾಗಿರುವುದು ಸಮಾಧಾನ ತಂದಿದೆ.ಆದಷ್ಟು ಬೇಗ ಅದು ಕಾರ್ಯ ರೂಪಕ್ಕೆ ಬರಲಿ.ಲೇಖನ ಮತ್ತು ಫೋಟೋಗಳು ತುಂಬಾ ಚೆನ್ನಾಗಿವೆ.ಧನ್ಯವಾದಗಳು.ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.ನಮಸ್ಕಾರ.

  ReplyDelete
 2. ನಿಮ್ಮ ಮನದ ಮಾತುಗಳನ್ನು ಸುಂದರ ಚಿತ್ರಗಳೊಡನೆ ಹೊಂದಿಸಿ ಸುಂದರ ಚಿತ್ರಣ ನೀಡಿದ್ದೀರಿ ನಿಮಗೆ ಜೈ ಹೋ

  ReplyDelete
 3. ಅಂಕೇಗೌಡರ ಸಾಧನೆಗೆ ನನ್ನ ಶರಣು. ಈ ಟ್ರಿಪ ಮಿಸ್ ಆದದ್ದು ನನಗೇ ಬೇಸರವಾಯಿತು.

  ಒಳ್ಳೆಯ ಬರಹ ಮತ್ತು ಉತ್ತಮ ಚಿತ್ರಗಳು.

  ನನ್ನ ಬ್ಲಾಗಿಗೂ ಸ್ವಾಗತ...

  ReplyDelete
 4. ಮನೆಯ ಮುಂದೆ ರಂಗೋಲಿ..
  ಮನೆಯ ಒಳಗಡೆ ಸಾಧನೆಯ ಹರಿಯಾಲಿ..
  ಮನ ಮಾತ್ರ ಏನು ಸಾಧಿಸಿಲ್ಲ ಅನ್ನುವ ಒಳ್ಳೆಯ ಸಂತರ ಭಾವ..
  ಇವೆಲ್ಲ ಒಬ್ಬ ಮಾನವನಲ್ಲಿ ಕಾಣಬಹುದು ಎಂದು ಅರಿವಿರಲಿಲ್ಲ..
  ಅಂತಹ ಮಹನೀಯರು ನಮ್ಮ ಶ್ರೀ ಅಂಕೆ ಗೌಡರು..
  ಅವರ ಹವ್ಯಾಸ, ಸಾಧನೆ, ಯಾರಿಗೋ ಅಂಜದೆ ತಮ್ಮ ಕಾರ್ಯವನ್ನು ನಿಸ್ವಾರ್ಥದಿಂದ ಮಾಡು ಅವರು ಎಲ್ಲರಿಗೂ ಮಾರ್ಗದರ್ಶಿ..
  ಸಂಧ್ಯೆಯ ಅಂಗಳದಲ್ಲಿ ಅರಳಿದ ಬ್ಲಾಗ್ ಪುಷ್ಪ..ಶ್ರೀ ಅಂಕೆ ಗೌಡರ ಸಾಧನೆಗೆ ಒಂದು ನಮನ ತಿಳಿಸಿದ ರೀತಿ ಶ್ಲಾಘನೀಯ...

  ReplyDelete
 5. ಸಂಧ್ಯಾ ಪುಟ್ಟಾ ಬಹಳ ಚನ್ನಾಗಿ ವಿವರಣೆ ಮತ್ತು ಚಿತ್ರಗಳ ಪೋಣಿಕೆಯ ಮೂಲಕ ಲೇಖನ ಪ್ರಸ್ತುತ ಪಡಿಸಿದ್ದೀಯಾ... ಮತ್ತೊಮ್ಮೆ ನಿಮ್ಮೆಲ್ಲರೊಂದಿಗೆ ಪುಸ್ತಕ ದರ್ಬಾರಿಗೆ ಹೋದಹಾಗಾಯ್ತು...

  ReplyDelete
 6. ಅಂಕೇಗೌಡರ ಸಾಧನೆಗೆ ನನ್ನ ಶರಣು

  ReplyDelete