Wednesday, 23 January 2013

ಪ್ರೀತಿಯಿಂದ .....ನಾನೆಂದರೆ ಅಜ್ಜನಮನೆಯಲ್ಲಿ ಪ್ರೀತಿಯ ಮೊಮ್ಮಗಳು . "ನೀ ಅಪ್ಪನ ಮಗಳಲ್ಲವೇ " ಎಂದು ಅಮ್ಮ  ಜಲಸಿಯಿಂದ ಬಯ್ಯುವ ಅಮ್ಮನ ಮಗಳು , ಅಕ್ಕನ ಮುದ್ದಿನ ತಂಗಿ , ಭಾವನ ತರ್ಲೆ ನಾದಿನಿ , ತಮ್ಮ , ತಂಗಿಯರಿಗೆ ಒಮ್ಮೊಮ್ಮೆ ಜಗಳಗಂಟಿ ಎನಿಸುವ , ಒಮ್ಮೊಮ್ಮೆ  ಮುದ್ದು ಮಾಡುವ ಅಕ್ಕ , ಸ್ನೇಹ ಕೊಟ್ಟು, ಸ್ನೇಹ ಪಡೆದವರಿಗೆಲ್ಲ ಗೆಳತಿ..ಇದು ನನ್ನ ಪುಟ್ಟ ಪ್ರಪಂಚ.ಇಲ್ಲಿನವರೆಲ್ಲರೂ ನನ್ನನ್ನು ಬೆಳೆಸಿದ್ದಾರೆ , ತಿದ್ದಿದ್ದಾರೆ . ಬದುಕಲ್ಲಿ ಹೇಗಾದರೂ  ಬದುಕಿದರಾಯಿತು ಎಂಬ ಉಡಾಫೆ ಮನೋಭಾವವಿಲ್ಲ . ಹೀಗೆಯೇ ಬದುಕಬೇಕು ಎಂಬ ಸಿದ್ದಾಂತ ಹೊಂದಿದವಳೂ ಅಲ್ಲ. ಆದರೆ ಬದುಕು ಹೇಗೆ ಬಂದರೂ ಎದುರಿಸ ಬಲ್ಲೆ ಎಂಬ  ಧೈರ್ಯ ಮತ್ತು ಶಕ್ತಿ ಎರಡನ್ನೂ  ಮೇಲೆ ಹೇಳಿದ ಎಲ್ಲರೂ ನೀಡಿದ್ದಾರೆ . ಬದುಕಲ್ಲಿ ಪ್ರೀತಿಯಿಂದ ಕಲಿತದ್ದಕ್ಕಿಂತ ಹೆಚ್ಚ್ಹಾಗಿ ಬೈಸಿಕೊಂಡೆ ಕಲಿತದ್ದು . ಇವರ್ಯಾರೂ ಹೇಳಿಕೊಡದಂಥ, ಬೈದರೂ ಕಲಿತುಕೊಳ್ಳದಂಥಹ ಪಾಠಗಳನ್ನು ಬದುಕು ಬೈದು ಹೇಳಿಕೊಟ್ಟಿದೆ , ತಿದ್ದಿದೆ . ಒಂದೆರಡು  ಅವ್ಯಕ್ತ ನೋವುಗಳಿವೆ ಎನ್ನುವುದನ್ನು ಬಿಟ್ಟರೆ ಬದುಕಿನಲ್ಲಿ ಪರಮ ಸುಖಿ ಮತ್ತು ಪರಮ ಸಂತೋಷಿ ನಾನು.  

ಇಂತಿಪ್ಪ ನಾನು, ನನ್ನ ಲೊಕವೇ ಬೇರೆ ಇತ್ತು . ಬರವಣಿಗೆ ನನ್ನದಾಗಿರಲೇ ಇಲ್ಲ. ಈಗಲೂ ನಾನು ಏನನ್ನಾದರೂ ಬರೆಯುತ್ತೇನೆ  ಎಂದು ಹೇಳಿಕೊಳ್ಳುವ  ಧೈರ್ಯವಿಲ್ಲ. ಗೆಳತಿಯರ ಹುಟ್ಟುಹಬ್ಬಕ್ಕೆ ಗ್ರೀಟಿಂಗ್ಸ್ ಗಳಲ್ಲಿ , ಅದಿಲ್ಲವೆಂದರೆ ಕ್ಲಾಸ್ ತುಂಬಾ ಬೋರ್ ಅನಿಸಿದಾಗ ನೋಟ್ ಬುಕ್ ನ ಕೊನೆ ಪೇಜ್ ಲಿ ಬರೆದಿದ್ದಷ್ಟೇ. ಅವೂ  ನೋಟ್ ಬುಕ್ ಗಳು ಬದಲಾಂತೆಲ್ಲ ಕಾಣೆಯಾಗಿಹೋಗಿದ್ದವು. ಆಮೇಲೆ ಮೊಬೈಲ್ ಬಂದಮೇಲೆ, ಬರೆದ ಸಾಲುಗಳನ್ನು ಸ್ನೇಹಿತರಿಗೆ  ಟೈಪಿಸಿ ಕಳುಹಿಸಿ, ಪ್ರಾಣ ತಿನ್ನುತ್ತಿದ್ದೆ. ಹೀಗೆ ನಡೆಯುತ್ತಿದ್ದಾಗ ಅಕಸ್ಮಾತ್ ಆಗಿ ಸಿಕ್ಕಿದ್ದು "ಇಟ್ಟಿಗೆ ಸಿಮೆಂಟ್ " ಬ್ಲಾಗ್. ಅಲ್ಲಿನ ಕಥೆಗಳನ್ನು ಓದಿ ತುಂಬಾ ಎಂಜಾಯ್ ಮಾಡುತ್ತಿದ್ದೆ.ನನ್ನ ಖುಷಿಯನ್ನು , ಅನಿಸಿಕೆಗಳನ್ನು ಪ್ರಕಾಶಣ್ಣನಿಗೆ ತಿಳಿಸಬೇಕು ಎನಿಸಿತು .  ಗೆಳೆಯನೊಬ್ಬನಿಂದ ಮೇಲ್ ಐಡಿ ತೆಗೆದುಕೊಂಡು "ಪ್ರಕಾಶಣ್ಣ " ನಿಗೆ ಮೇಲ್ ಕೂಡ ಮಾಡಿಬಿಟ್ಟೆ.ರಿಪ್ಲೈ ನಿರಿಕ್ಷೆಯಿರಲಿಲ್ಲ . ಆದರೆ  ಮೇಲ್ ಗೆ ರಿಪ್ಲೈ ಬಂದಾಗಂತೂ ಖುಷಿಗೆ ಲೆಕ್ಕವೇ ಇರಲಿಲ್ಲ. ಆಮೇಲೆ ಫೇಸ್ ಬುಕ್ ನಲ್ಲಿ  ಪರಿಚಯವಾಯಿತು. ಅಲ್ಲಿ ಚಾಟ್ ಲ್ಲಿ ಮಾತಿಗೆ ಸಿಕ್ಕಾಗ  ನಾನೇನಾದರೂ ಬರೆದಿದ್ದರೆ ಆ ಸಾಲುಗಳನ್ನು ಅವರಿಗೂ ಕಳಿಸುತ್ತಿದ್ದೆ .ಫೇಸ್ ಬುಕ್ ನಲ್ಲಿ " ಮನಸು ಮಾತಾಡಿದ್ದು " ಎಂಬ ಆಲ್ಬಮ್ ಮಾಡಿ , ಚಂದದ ಫೋಟೋಗಳಿಗೆ ನನ್ನ ಸಾಲುಗಳನ್ನು ಬರೆದು ಹಾಕುತ್ತಿದ್ದೆ. ಆ ಎಲ್ಲ ಫೋಟೋಗಳನ್ನು ಬಳಸಿಕೊಳ್ಳಲು ಅನುಮತಿಸಿದವರಿಗೆಲ್ಲ ನಾನು ನಿಜಕ್ಕೂ ಋಣಿ. ಇದನ್ನೆಲ್ಲಾ ಓದಿದ ಪ್ರಕಾಶಣ್ಣ , "ಚೆನ್ನಾಗಿ ಬರೆಯುತ್ತೀಯ ಬ್ಲಾಗ್ ಮಾಡು" ಎಂದರು. ಅದರ ಅ ಆ ಗೊತ್ತಿಲ್ಲದ ನಾನು" ಸರಿ" ಎಂದಷ್ಟೇ ಬಾಯಿ ಮಾತಿಗೆ ಹೇಳಿದ್ದೆ. ಆದರೆ ಆಮೇಲೆ ಸಿಕ್ಕಾಗಲೂ ಮತ್ತೆ ಕೇಳುವುದು ಅದೇ ಪ್ರಶ್ನೆಯಾಗಿತ್ತು  "ಯಾವಾಗಿಂದ ಬ್ಲಾಗ್ ಮಾಡ್ತೀಯ" ಅಂತ . ಆಮೇಲೆ ಜನವರಿಯಲ್ಲಿ ನಾನು ಬ್ಲಾಗ್ ಓಪನ್ ಮಾಡಿದೆ. ನನ್ನಲ್ಲಿ ಬ್ಲಾಗ್ ಓಪನ್ ಮಾಡು ಎಂದ ಈ "ಇಟ್ಟಿಗೆ ಸಿಮೆಂಟಿನ ಕಂಟ್ರಾಕ್ಟರ್ " ನಿನಗಾಗಿ ಹೊಸಮನೆಯೊಂದು ನಿರ್ಮಾಣವಾಗಿದೆ, ಅಲ್ಲೊಂದು ಸುಂದರ ಕುಟುಂಬವಿದೆ . ಅದರ ಬಾಗಿಲು ತೆರೆ ಅನ್ನುತ್ತಿದ್ದಾರೆಂದು ಗೊತ್ತಾದದ್ದು ಬ್ಲಾಗ್ ಕುಟುಂಬ ನನ್ನನ್ನು ಕೈ ಚಾಚಿ ಪ್ರೀತಿಯಿಂದ ಬರ ಮಾಡಿಕೊಂಡಾಗಲೇ.... 
ಅಮೆಲಿನದು  ನಾನೇನು ಹೇಳಲಿ....
 ಸಿಕ್ಕಿದ್ದೆಲ್ಲ ಪ್ರೀತಿಯೇ... 
ಎಷ್ಟೆಲ್ಲಾ ಅಣ್ಣಂದಿರು , ಅಕ್ಕಂದಿರು , ಗೆಳತಿಯರು , ಗೆಳೆಯರು... 
ಅಬ್ಬಾ .. ಹೊಸ ಜಗತ್ತೇ ಇಳಿದಿದ್ದು ಬದುಕಲ್ಲಿ... 
"ಚೆನ್ನಾಗಿದೆ ಎಸ್ ಪಿ. ಇದೊಂಚುರು ವಿಷ್ಯ ಸೇರಿಸು" ಎನ್ನುವ ಶ್ರೀಕಾಂತಣ್ಣ .. "ಪುಟ್ಟಾ ಪಂಕ್ಚುಯೇಶನ್ಸ್ ನೋಡಿಕೋ , ಇಲ್ಲಿ ಗ್ರಾಮರ್ ಸರಿ ಮಾಡು" ಎಂದು ತಿದ್ದುವ ಆಜಾದ್ ಭಯ್ಯಾ .. ದೂರದಿಂದಲೇ ಓದಿ ಹರಸುವ ಸುಗುಣಕ್ಕ ..  ಬಾಲು ಸರ್ , ಪ್ರವೀಣ್ , ಶ್ರೀವತ್ಸ ,ಕಿರಣ , ಸುಷ್ಮಾ , ರಂಜಿತಾ, ಬದರಿ ಸರ್ , ವೆಂಕಟರಮಣ, ಗಿರೀಶ್ . ಹೆಸರು ಬಿಟ್ಟು ಹೋದ ಇನ್ನೂ ಅನೇಕರಿದ್ದೀರಿ .ಎಲ್ಲರೂ ಹರಸಿದಿರಿ , ಬೆಳೆಸಿದಿರಿ... ಈ ಸಂಬಂಧಗಳನ್ನೆಲ್ಲ ಮತ್ತಷ್ಟು ಗಟ್ಟಿಯಾಗಿಸಿದ್ದು  ಜೂನ್ ೨೩ ರ ಕರಿಘಟ್ಟ ಟ್ರಿಪ್ ಮತ್ತೂ  ಅಗಸ್ಟ್ ೨೫ ರ ಪಂಚ ಪುಸ್ತಕಗಳ ಲೋಕಾರ್ಪಣೆ . ಎಲ್ಲರನ್ನೂ ಅಲ್ಲದಿದ್ದರೂ ಕೆಲವರನ್ನಾದರೂ ಮುಖತಃ ಪರಿಚಯಿಸಿಕೊಟ್ಟವು. ಬ್ಲಾಗ್ ನ ಸಣ್ಣ ಪರಿಚಯ ಮತ್ತು ಅದಾದ ನಂತರ  ನನ್ನ ಮೂರು ಲೇಖನಗಳು ವಿಜಯಕರ್ನಾಟಕದಲ್ಲಿ ಪ್ರಕಟವಾದವು.ಇದಕ್ಕಾಗಿ ಶ್ರೀದೇವಿ ಕಳಸದ ಮತ್ತು ವಿ ಕೆ ಬಳಗಕ್ಕೆ ಧನ್ಯವಾದ. 

ಎಷ್ಟೋ ಸಲ ಈ ಬ್ಲಾಗ್ ಬೇಡ ಡಿಲೀಟ್ ಮಾಡೋಣ ಎನಿಸಿತ್ತು. ಏನು ಬರೆಯಲಾರೆ ಖಾಲಿ ಎನಿಸತೊಡಗಿತ್ತು. ಅದೇನೋ ಅದನ್ನು ಮತ್ತೆ ನಿಮ್ಮ ಬಳಿಯೇ ಹೇಳಿಕೊಳ್ಳಬೇಕಿತ್ತು. ಮತ್ತೇ ಅದನ್ನೆಲ್ಲ ಬರೆದು ಇದೇ  ಬ್ಲಾಗ್ ಗೋಡೆಗೆ ಅಂಟಿಸಿದೆ. ಆಗಲೂ ನೀವೆಲ್ಲ ಹರಸಿದಿರಿ, ಬೆನ್ನು ತಟ್ಟಿದಿರಿ,  ನನ್ನಲ್ಲಿ ಇನ್ನೂ ನಾನೆನನ್ನೋ ಬರೆಯಬಲ್ಲೆ ಎಂಬ ಧೈರ್ಯ ತುಂಬಿದಿರಿ. ಸನ್ನೆಯಲ್ಲಿ ಮಾತನಾಡುವುದನ್ನು ಕಲಿಯಬೇಕಿದೆ ನನಗೆ".  ಎಂಬುದನ್ನು ಓದಿ "ವಿಷಯ ಚೆನ್ನಾಗಿದ್ದರೂ ಕೂಡ ,ಇಷ್ಟುದ್ದ ಬರಿತಿಯಲ್ಲ. ಯಾರಾದ್ರು ಓದುತ್ತಾರಾ ?" ಅಂತ ಅಮ್ಮ ತಮಾಷೆಗಾಗಿ ಕಾಲೆಳೆದಿದ್ದನ್ನು ನಗುತ್ತಾ ಖುಷಿಯಿಂದ ಅನುಭವಿಸಿದವಳು .. ಅಪ್ಪನಂತಹ ಅಪ್ಪನಿಗೆ ... ಬರೆದಿದ್ದನ್ನು ಅಪ್ಪ ಓದಿ ಏನೂ ಮಾತನಾಡದೆ ನನ್ನ ಕೈ ನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಆ ಸ್ಪರ್ಶದ ಭಾವವನ್ನೂ ಮೂಕಳಾಗಿ ಅನುಭವಿಸಿದ್ದೇನೆ.ಬಹುಶಃ ಅವತ್ತು ಪ್ರಕಾಶಣ್ಣ ನ ಒತ್ತಾಯವಿಲ್ಲದ್ದಿದ್ದರೆ, ನಿಮ್ಮೆಲ್ಲರ ಪ್ರೀತಿಯಿಲ್ಲದಿದ್ದರೆ ಇವತ್ತು ಈ "ಸಂಧ್ಯೆಯಂಗಳದಿ " ಯಾವ ಸಂತೋಷವೂ  ಇರುತ್ತಿರಲಿಲ್ಲವೇನೋ . 

ಒಂದು ವರುಷವಾಯಿತು ಬ್ಲಾಗ್ ಪ್ರಾರಂಭಿಸಿ.. ಹೇಗೆ ಕಳೆಯಿತೋ ಗೊತ್ತೇ ಇಲ್ಲ. 

ನನ್ನಲೇನೋ ಸಾದ್ಯವಾದದನ್ನು ಬರೆಯುತ್ತಿರುತ್ತೇನೆ. ತಪ್ಪಿದ್ದಲ್ಲಿ ತಿದ್ದಿ .. ಚೆಂದವಿದ್ದರೆ ಹಾರೈಸಿ.. 

ಪ್ರೀತಿಯಿಂದ ..
ಸಂಧ್ಯೆ...