Monday 31 August 2015

ಆಯೀ



( ಮೂರು ಸಣ್ಣ  ಆಲಾಪಗಳು )

೧)
ಅದೊಂದು ಹೃದ್ರೋಗ ಆಸ್ಪತ್ರೆ, ರೋಗಿಯ ಜೀವ ಉಳಿಸಲು ಡಾಕ್ಟರ್ ಗಳು ಪ್ರಯತ್ನಪಡುತ್ತಿದ್ದರು. ಆದರೆ ಹಾಸಿಗೆಯಲ್ಲಿದ್ದ ರೋಗಿಗೆ ಗೊತ್ತಾಗುತ್ತಿತ್ತು ತನ್ನ ಪುಟ್ಟ ಹೃದಯ ಈಗ ನಿಂತೇ ಹೋಗುತ್ತದೆ ಎಂದು. ಆಗ ಅವಳ ನೆನಪಾಗಿತ್ತು. ಹಣ ಸಂಪಾದಿಸುವಾಗ , ಆಸ್ತಿ ಮಾಡುವಾಗ , ಮನ ಮೆಚ್ಚಿದ ಹುಡುಗಿಯ ಮದುವೆಯಾದಾಗ , ಮಕ್ಕಳಾದಾಗ, ಪ್ರಶಸ್ತಿಗಳ ಮುಡಿಗೇರಿಸಿಕೊಂಡಾಗ, ಕೀರ್ತಿ ಯಶಸ್ಸಿನ ಮೆಟ್ಟಿಲೇರಿ ನಿಂತಾಗ ಮರೆತೇ ಹೋಗಿದ್ದ "ಆಯಿ"ಯ ಮುಖ ಮತ್ತೆ ಮತ್ತೆ ನೆನಪಾಗುತ್ತಿತ್ತು. "ಆಯೀ"  ಎಂದು ಚೀರಿಕೊಂಡು ಕಣ್ಮುಚ್ಚಿದ .............
-------------------------------------------------------------------------------------
ಇಲ್ಲಿ ಯಾವುದೋ ಯಾತನೆಯಿಂದ ತಟ್ಟನೇ ಎದ್ದು ಕುಳಿತಳು ಅವಳು. ಕತ್ತಲಲ್ಲಿ ಸ್ವಲ್ಪವೂ ತಡಕಾಡದೇ ಎದ್ದು ಹೋಗಿ ದೇವರಿಗೆ ತುಪ್ಪದ ದೀಪ ಹಚ್ಚಿ ದೇವರೆದುರು ಕಣ್ಮುಚ್ಚಿ ಕುಳಿತಳು. " ಎಲ್ಲೇ ಇದ್ರೂ ನನ್ನ ಮಗ ಚೆನ್ನಾಗಿರಲಿ " ಎನ್ನುವುದು  ಅವಳ ನಿತ್ಯ ಪ್ರಾರ್ಥನೆ ಎಂಬುದು ಅವಳಿಗೂ ಗೊತ್ತು , ದೇವರಿಗೂ ಗೊತ್ತಿತ್ತು. ಆದರೆ ಇವತ್ತು ಮಾತ್ರ ಅವಳು “ ಇದೊಂದು ಬಾರಿ ನನ್ನ ಮಗನನ್ನು ಉಳಿಸಿಕೊಡು ದೇವರೇ. ಅವನು ನನ್ನ ಬಳಿ ಬಂದೇ ಬರುತ್ತಾನೆ.” ಎಂದು ಬಿಟ್ಟಳು. ದೇವರಿಗೂ ಆಶ್ಚರ್ಯವಾಗಿತ್ತೇನೊ, ಅಸ್ತು ಎಂದನೋ ಎನೊ ಅವಳಿಗೆ ತಿಳಿಯಲಿಲ್ಲ...
------------------------------------------------------------------------
ಪ್ರಯತ್ನವೋ , ಹಾರೈಕೆಯೋ ಅಂತೂ ಅವನು ಮರುದಿನದ ಮುಂಜಾವನ್ನು ನೋಡಿದ್ದ, ಜಗತ್ತು ಹೊಸದಾದಂತೆ ಕಾಣಿಸುತ್ತಿತ್ತು. ಆಯಿಯ ಮುಖ , ಆಯಿಯ ಹಂಬಲ ಇನ್ನೂ ಬಲವಾಗಿತ್ತು. ಆಸ್ಪತ್ರೆಯಿಂದ ಮಾತ್ರವಲ್ಲ , ಎಲ್ಲದರಿಂದಲೂ ಬಿಡುಗಡೆ ಹೊಂದಿ ಆಯಿಯ ಬಳಿ ಹೋಗಲೇ ಬೇಕೆಂದು ನಿರ್ಧರಿಸಿ ಕಣ್ಣು ಮುಚ್ಚಿದ. ಅವನನ್ನು ನೋಡಿಕೊಳ್ಳುತ್ತಿದ್ದ ಸರ್ವೆಂಟ್ ಸಣ್ಣ ದನಿಯಲ್ಲಿ ಹಾಡಿಕೊಳ್ಳುತ್ತಿದ್ದಳು 

" ಇಂಧನ ತೀರಲು, ಬಂದೇ ಬರುವೆನು... ಮತ್ತೆ ನಿನ್ನ ತೊಡೆಗೆ,... ಮೂರ್ತ ಪ್ರೇಮದೆಡೆಗೆ"

******************************************************************
೨)
ಮೊನ್ನೆ ಮೊನ್ನೆವರೆಗೂ ಅವಳ ಬಗ್ಗೆ ಮಾತೇ ಬರದವರ ಬಾಯಲೆಲ್ಲ ಇವತ್ತು ಅವಳದೇ ಮಾತು. ಅವಳ ಬಗ್ಗೆ ಹಿಂದಾಡಿಕೊಂಡವರ, ಅವಳ ಮುಂದೆಯೇ ಅವಳನ್ನಾಡಿಕೊಂಡವರ ಬಾಯಲ್ಲೂ ಒಳ್ಳೆಯ ಮಾತುಗಳು ..!! ಕಾಲ ಕಸಕ್ಕಿಂತ ಕಡೆಯಾಗಿ ಕಂಡ ಮಕ್ಕಳ ಕಣ್ಣಲ್ಲೂ ಅವಳಿಗಾಗಿ ಕಣ್ಣೀರು, ಬಾಯಲ್ಲಿ ಒಳ್ಳೆಯ ಮಾತುಗಳು ..!! "ಸತ್ತ ಮೇಲೆ ಅಥವಾ ಸತ್ತಿದ್ದರಿಂದಲೇ ನಾನು ಒಳ್ಳೆಯವಳಾದೆನಾ" ಎಂದು ಅವಳ ಆತ್ಮವೂ ಆಶ್ಚರ್ಯಗೊಂಡಿತ್ತೋ ಏನೋ ?ಅವಳ ಮುಖ ಕಂಡರಾಗದಿದ್ದವರೂ ಅವಳನ್ನು ನೋಡಿಕೊಂಡು ಬಂದರು ಕೊನೆಯ ಬಾರಿಗೆಂಬಂತೆ... ಥಥ್ ಎಲ್ಲಿ ಬಿತ್ತಿದರೂ ಹುಟ್ಟಲಾರದು ಎಂದು ಬಿಸಾಡಿದ್ದ ತುಳಸಿಯೂ ಎರಡೆಲೆಯಾಗಿ ಚಿಗುರಿ ನಗುತ್ತಿತ್ತು ಅವಳ ಸಮಾಧಿಯ ಮೇಲೆ ..!!!

*********************************************************************
೩)
ಆಕೆ ರಸ್ತೆಯಂಚಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ .. ಬಸ್ ಮೆಲ್ಲನೆ ಮುಂದೆ ಸರಿಯುತ್ತಿತ್ತು.
"ಥತ್ ಇವಳದ್ದು ಯಾವಾಗಲೂ ಇದೇ ಗೋಳು" ಎಂದು ಕಂಡಕ್ಟರ್ ಗೊಣಗಿದ. "ಏನಾಗಿದೆ ಅವಳಿಗೆ" ಎಂದರು ಬಸ್ಸಲ್ಲಿದ್ದ ಹಿರಿಯರೊಬ್ಬರು. "ಎಂಟು ವರ್ಷದ ಹಿಂದೆ ಹೀಗೆ ಟಾಟ ಮಾಡಿ ಕಳಿಸಿಕೊಟ್ಟ ಇವಳ ಮಗಳೊಬ್ಬಳು ಯಾವನದೋ ಜೊತೆ ಓಡಿ ಹೋದಳಂತೆ. ತಂದೆ ಸಂಬಂಧ ಕಳೆದುಕೊಂಡು ನಿರಾಳವಾದರು. ಆದರೆ ತಾಯಿ ಕರುಳು ನೋಡಿ ಇನ್ನು ಕಾಯುತ್ತಿದೆ.ಮಗಳು ಬರುತ್ತಾಳೇನೋ ಅಂತ, ಹೀಗೆ ಕೈ ಬೀಸುತ್ತಾ... " ಎಂದವನು ಟಿಕೆಟ್ ಗಾಗಿ ಮುಂದೆ ಹೋದ. ಹಿರಿಯರ ಪಕ್ಕ ಕುಳಿತ ಆವಂತಿಗೆ ಮತ್ತೊಮ್ಮೆ ತಿರುಗಿ ಅಮ್ಮನ ಮುಖ ನೋಡಬೇಕೆನಿಸಿತ್ತು..



(ಈ ಕಥೆ "ಕುಡಿಗಥೆಗಳು " ಎಂಬ ಫೇಸ್ಬುಕ್  ಪೇಜ್ ನ ಕುಡಿಗಥೆಗಳು ಪ್ರಯತ್ನ -೬ ರಲ್ಲಿ ಬರೆದಿದ್ದು )