Wednesday, 5 December 2012

ಒಂಟಿ ಮರ ಮತ್ತು ಖಾಲಿ ಬೆಂಚು
ಇರೋನೊಬ್ಬ ಮಗ ನೀನು , ನಿನ್ನತ್ರ ಹೊಸದಾಗಿ ಏನಾದ್ರೂ ಮಾಡು ಅಂತ ಹೇಳ್ತಾ ಇಲ್ಲ . ನಾ ಮಾಡಿಟ್ಟ ಈ ಜಮೀನು ಮನೆ , ನೀ ನೋಡಿಕೊಂಡು ಹೋದರೆ ಸಾಕು ಎನ್ನುತ್ತಿದ್ದೇನೆ .ಅಷ್ಟೂ ಆಗಲ್ವಾ  ಅಂತ ಕೇಳಿದ ಅಪ್ಪನಿಗೆ ಹೋಗಪ್ಪಾ ಈ ಹಾಳು ಊರಲ್ಲಿ ಏನಿದೆ ಅಂತ ಇರಲಿ ? "ಇಲ್ಲಿರಲ್ಲ" ಎಂದು ಅಪ್ಪನೊಡನೆ ಜಗಳ ಆಡಿ  ಬಂದವನು  ನನ್ನಿಷ್ಟದ ಒಂಟಿ ಮರದ ಕೆಳಗಿನ ಖಾಲಿ ಬೆಂಚ್ ಹತ್ತಿರ ಬಂದಿದ್ದೆ. ಒಂದು ಸ್ವಲ್ಪ ಸಮಾಧಾನಿಸಿಕೊಳ್ಳಬೇಕಿತ್ತು ನನ್ನನ್ನು ನಾನು. ಆದರೆ ಅವತ್ತು ಅದು ಖಾಲಿ ಇರಲಿಲ್ಲ .ಅಲ್ಲಿ ನೀನಿದ್ದೆ . ಅದ್ಯಾವ ಪರಿ ನೀ ಚಲನೆ ಇಲ್ಲದೆ ಕುಳಿತಿದ್ದೆ ಎಂದರೆ ಕಣ್ಣ ರೆಪ್ಪೆಗಳ ಚಲನೆಯಿಂದಾಗಿ ನಿನಗೂ ಜೀವವಿದೆ ಎಂದು ನಾ ತೀರ್ಮಾನಿಸಿದ್ದೆ. ಏನು ನೋಡ್ತಿದ್ದೀರಾ ? ಎಂದು ಕೇಳಿದ್ದೆ ಧೈರ್ಯ ಮಾಡಿ, "ಸೂರ್ಯ ಮುಳುಗುತ್ತನಾ ಅಂತ" ..ಉತ್ತರ ಬಂತು ."ಅಲ್ಲಿ ಮುಳುಗಲ್ಲ ಬಿಡಿ.."ಎಂದರೆ "ಯಾಕ್ರೀ ಇವತ್ತು ಸೂರ್ಯ ಮುಳುಗಲ್ಲ ಅಂತ ನಿಮಗೆ ಹೇಳಿದ್ದಾನಾ?"  ಇಲ್ಲ, ಇದು ಪೂರ್ವ ನಮ್ಮೂರಲ್ಲಿ ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಾನೆ. ಊರಿಗೆ ಹೊಸಬರಾ ? ಅಂತ ಕೇಳಿದೆ.  ಇಲ್ಲಾರಿ ನಿನ್ನೇನೆ ಬಂದ್ವಿ, ಅಪ್ಪ ಹೆಲ್ತ್ ಡಿಪಾರ್ಟ್ಮೆಂಟ್ ಲಿದ್ದಾರೆ, ಈ ಊರಿನ ಅರ್ದ ಬೀದಿಗಳು ಗೊತ್ತಾಗಿವೆ. ಬೆಳಿಗ್ಗೆ ತಾನೇ ಗುಡಿಗೆ ಹೋಗಿ ನಿಮ್ಮೂರ ದೇವ್ರನ್ನ ಫ್ರೆಂಡ್ ಮಾಡಿಕೊಂಡು ಬಂದಿದ್ದೀನಿ ಅಂತ ಪಟ ಪಟಾಂತ ಹೇಳಿದ್ದು ಕೇಳಿ ನಗು ಬಂದಿತ್ತು. ನಿಮ್ಮೂರಲ್ಲಿ  ಇದೇ ಪಶ್ಚಿಮ ಆಗಬಹುದಿತ್ತು ಗುಡ್ಡಗಳ ನಡುವೆ ಚಂದದ ಸೂರ್ಯಾಸ್ತ  ನೋಡಬಹುದಿತ್ತು ಎಂದಾಗ , ಈಗಲೂ ಸೂರ್ಯೋದಯ ನೋಡಬಹುದು ಎಂದೆ. ಹೌದಲ್ವ ಎಂದು ಕಣ್ಣರಳಿಸಿ .. ಸರಿ ಬರ್ತಿನ್ರಿ .. ಶಾಸ್ತ್ರಿಗಳ ಮನೆಗೆ ಹೋಗಿ ನಾಳೆ ಸೂರ್ಯೋದಯ ಎಷ್ಟು ಹೊತ್ತಿಗೆ ಎಂದು ಕೇಳಬೇಕು ಎನ್ನುತ್ತಾ ಓಡಿ  ಹೋದವಳ ನೋಡುತ್ತಾ ನಿಂತವನಿಗೆ, ಹೆಸರೇನು ? ಎಂದು ಕೇಳಬೇಕೆಂಬ ಪ್ರಶ್ನೆ ಗಂಟಲಲ್ಲೇ ಉಳಿದಿತ್ತು. ಹತ್ತು ನಿಮಿಷದಿಂದ ಎಲ್ಲೋ ಬೇರೆ ಲೋಕದಲ್ಲೇ ಇದ್ದೆ ಎಂಬ ಅನುಭವ ಬಂದಿತ್ತು . ಅದ್ಯಾವುದೋ ಒಂದು ಆಕರ್ಷಣೆ ಮೊಳಕೆಯೊಡೆದಿತ್ತು. ಮನೆಗೆ ಬಂದು ಅಮ್ಮನಲ್ಲಿ ನಾಳೆ ಸೂರ್ಯೋದಯ ಎಷ್ಟು ಹೊತ್ತಿಗೆ ಎಂದು ಕೇಳಿ ಅಲಾರಂ ಸೆಟ್ ಮಾಡಿ ಮಲಗಿದ್ದೆ . 

ಬೆಳಿಗ್ಗೆ ಸೂರ್ಯೋದಯ ನೋಡಲು ಬಂದರೆ ಸೂರ್ಯನಿಗಿಂತ ಮೊದಲು ಕಾಣಿಸಿದ್ದು ನೀನು .ಬಂದ್ರಾ .. ಇನ್ನು ಐದೇ ನಿಮಿಷ ಬಾಕಿ ಅಂತ ಗುಡ್ಡಗಳ ನಡುವೆ ಕಣ್ಣಿಟ್ಟು ಕುಳಿತವಳ ನೋಡುವುದೇ ಮಜವಾಗಿತ್ತು ನನಗೆ.ಸೂರ್ಯೋದಯದ ಮೊದಲ ಕಿರಣಗಳು ನಿನ್ನ ಮುಖದ ಮೇಲೆ ಬಿದ್ದು , ಅದು ಬಂಗಾರ ವರ್ಣವಾದಾಗಲಂತೂ ದೇವತೆಯಂತೆ ಕಂಡಿದ್ದೆ ನೀನು. ಏನು ಓದಿದ್ದು ನೀವು ಎಂದು ಕೇಳಿದ್ದೆ, ಏನಾದರೂ ಮಾತಾನಾಡಬೇಕೆಂದು. ಡಿಗ್ರೀ ಮುಗಿದಿದೆ ಎಂದೆನೀನು. ಡಾಕ್ಟರ್ ಮಗಳು ಡಾಕ್ಟರ್ ಅಥವಾ ಇಂಜಿನಿಯರ್ ಇರಬೇಕು ಅಂದುಕೊಂಡೆ ಎಂದರೆ.ನನಗೆ ನಾಲ್ಕು ಗೋಡೆಗಳ ನಡುವೆ ಕುಳಿತು ಕಲಿಯಲು ಇಷ್ಟವಿಲ್ಲಾರಿ.ಪ್ರಕೃತಿಯೊಂದಿಗೆ ಕಲಿಯಬೇಕು. ಕಾಡು-ಮೇಡು ಅಲೆಯಬೇಕು , ಗದ್ದೆ ತೋಟ ತಿರುಗಬೇಕು. ಹಲಸಿನ ಹೂವು ಹಣ್ಣಾಗುವುದರಿಂದ ಹಿಡಿದು ಹಸು ಕರು ಹಾಕುವಲ್ಲಿಯವರೆಗೂ ಪ್ರಕೃತಿಯಲ್ಲಿ ಎಷ್ಟು ವೈಚಿತ್ರ್ಯ ಗಳಿವೆ ಗೊತ್ತಾ..ಪ್ರತಿಕ್ಷಣಕ್ಕೂ ಕುತೂಹಲದ ಮೂಟೆ ಇದು ,ಪ್ರಕೃತಿಯಿಂದ ಮನುಷ್ಯ ಕಲಿಯಬೇಕು , ಅದರೊಂದಿಗೆ ಬೆಳೆಯಬೇಕು ಎಂದಾಗ, ನನಗೆ ಏನು ಹೇಳಲು ತೋಚದೆ ಹೆಸರೇನು? ಎಂದು ಕೇಳಿದೆ. "ಪ್ರಕೃತಿ " ಎಂದವಳು , ಅಮ್ಮಾ ಕಾಯ್ತಾ ಇರ್ತಾರೆ ಸಂಜೆ ಸಿಕ್ತೀನಿ ಅಂತ ಹೊರಟು ಹೋಗಿದ್ದೆ ನೀನು. 


(ಫೋಟೋ : ರಂಜಿತಾ ಹೆಗಡೆ) 


ಮನೆಗೆ ಬಂದವನನ್ನು ಅಮ್ಮ "ಏನು ಯೋಚನೆ ಮಾಡಿದೆ" ಎಂದು ಕೇಳಿದರೆ , ಇಲ್ಲೇ ಇರುತ್ತೆನಮ್ಮ ,ಪ್ರಕೃತಿಯೊಂದಿಗೆ ಕಲಿಯಬೇಕಿದೆ ಎಂದಿದ್ದೆ. ಯಾಕೆ ಹಾಗೆ ಹೇಳಿದ್ದೆ ಎಂದು ಇವತ್ತಿಗೂ ಗೊತ್ತಿಲ್ಲ. ಆದರೆ ಆರು ತಿಂಗಳಿನಿಂದ ಇಲ್ಲಿಯೇ ಇದ್ದೇನೆ.ಕೃಷಿಯನ್ನು ಜೀವನ ಮಾಡಿಕೊಂಡಿದ್ದೇನೆ. ಪ್ರಕೃತಿಯ ಹಲವು ವೈಚಿತ್ರ್ಯಗಳಿಗೆ ಕಣ್ಣರಳಿಸಿದ್ದೇನೆ. ಕೃಷಿ ವರ್ಷಕ್ಕೊಮ್ಮೆ ಉತ್ಪನ್ನ ನೀಡುತ್ತದಾದರೂ  ತಿಂಗಳ ತಿಂಗಳ ಸಂಬಳ ಕೈಗೆ  ಕೊಡುವ ಕೆಲಸಕ್ಕಿಂತ ಹೆಚ್ಚು  ಸಂತೋಷ  ಕೊಟ್ಟಿದೆ , ನೆಮ್ಮದಿ ಕೊಟ್ಟಿದೆ, ಅಪ್ಪ ಅಮ್ಮನ ಮುಖದಲ್ಲೂ ನೆಮ್ಮದಿ ಕಂಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಸ್ನೇಹವಿದೆ, ನಾನ್ ಸ್ಟಾಪ್ ಹರಟೆಗಾಗಿ ಪ್ರತಿ ಸಂಜೆಯೂ ಕಾಯುತ್ತಿದೆ.ಈ ಸ್ನೇಹ ಸ್ನೇಹಾವಾಗಿಲ್ಲ ಎನಿಸಿದ ದಿನ, ನೀನೇ  ಕೊಟ್ಟ ಗುಲಾಬಿ ಗಿಡದಲ್ಲಿ ಅರಳಿದ್ದ ಹೂ ತಂದು, ಇದೇ  ಒಂಟಿ ಮರದಡಿಯ ಕಲ್ಲು ಬೆಂಚಿನ ಮುಂದೆ ನಿನಗೆ I love you ಎಂದಿದ್ದೆ. ಹೂ ತೆಗೆದು ಕೊಂಡವಳು ದೊಡ್ಡದಾಗಿ ಹೇಳು, ಗುಡ್ಡಗಳಿಂದ ಪ್ರತಿದ್ವನಿಸಬೇಕು ಎಂದೆ .ನಾನು  ದೊಡ್ಡದಾಗಿ ಹೇಳಿದಾಗ ಗುಡ್ಡಗಳಿಂದ ಬಂದ ಪ್ರತಿಧ್ವನಿ ಗೆ ಕಿವಿಕೊಟ್ಟು , ನಾನು ಹೇಳಿದರೂ ಹೀಗೆ ಕೇಳುತ್ತಾ? ಎಂದು ಕೇಳಿದವಳ ಮುಖ ನೋಡುತ್ತಾ ಒಳ್ಳೆಯ ಮನಸ್ಸಿನಿಂದ ಹೇಳಿದರೆ ಪ್ರತಿಧ್ವನಿಸುತ್ತೆ ಎಂದೆ. ಹೋಗೋ ನನಗಷ್ಟು ಒಳ್ಳೆ ಮನಸ್ಸಿಲ್ಲ ಎಂದು ಬೆಂಚಿನ ತುದಿಯಲ್ಲಿ ಕೆನ್ನೆಯುಬ್ಬಿಸಿ  ಕುಳಿತವಳನ್ನು, ತಮಾಷೆಯಲ್ಲ ನನ್ನನ್ನು ಮದುವೆ ಆಗ್ತಿಯಾ? ಎಂದು ಕೇಳಿದೆ. ಕಣ್ಣಲ್ಲಿ ಕಣ್ಣಿಟ್ಟು ನನಗೆ ಟೈಮ್ ಬೇಕು ಅಂತ ಹೇಳಿ ಅನಾಮತ್ತು ನೂರ ಅರವತ್ತೆಂಟು ಗಂಟೆಗಳ ಕಾಲ  ಕಾಯಿಸಿದ್ದೀಯ.ನೀ ಕೊಟ್ಟ ಗಡವು ಇವತ್ತಿಗೆ ಕೊನೆಯಾಗಿದೆ.  ನಮ್ಮ ಸ್ನೇಹ ಕಂಡ ಅಪ್ಪ ಅಮ್ಮಂದಿರಿಂದ ಹಿಡಿದು ನಮ್ಮನೆಯ ಕೊಟ್ಟಿಗೆಯ ನಿನ್ನದೇ ಹೆಸರಿನ ಕರುವರೆಗೆ ಎಲ್ಲರೂ ನಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ ಕಣೆ. ಮುಖ್ಯವಾಗಿ ನೀನೋಪ್ಪಬೇಕಿದೆ. ನಿನ್ನ ಮಾತಿಗೆ ಪ್ರತಿಧ್ವನಿಸಲು ಹಸಿರು ಗುಡ್ದಗಳೆಲ್ಲ  ಮಂಜಿನ ಸೆರಗು ಹೊದ್ದು ಸಿಂಗಾರ ಗೊಂಡಿವೆ, ಆ ಪ್ರತಿಧ್ವನಿಗೆ ನಾ ಕಾಯುತ್ತಿರುವಂತೆ, ನಮ್ಮಿಬ್ಬರಿಗಾಗಿ ಆ ಒಂಟಿ ಮರ ಮತ್ತು ಖಾಲಿ ಬೆಂಚು ಕಾಯುತ್ತಿವೆ.. .. 


(ಗೆಳತಿ ರಂಜಿತಾ ಹೆಗಡೆ ತೆಗೆದ ಫೋಟೋ ನನ್ನಿಂದ ಬರೆಸಿದ ಸಾಲುಗಳಿವು .. Special Thanks to Ranjithaa..:) ) 

35 comments:

 1. ಸಂಧ್ಯಾ -
  ಚಂದನೆಯ ನಿರೂಪಣೆ..ನಂಗಿಷ್ಟ ಆತು...

  ReplyDelete
 2. Awesome post Sandhya :)
  And cool pic..!

  ReplyDelete
 3. ಅಯಸ್ಕಾಂತ ತನಗೆ ಇಷ್ಟವಾದ ಲೋಹಗಳನ್ನು ಮಾತ್ರ ಆಕರ್ಷಿಸುತ್ತದೆ..ಅದರ ಬದಿಗೆ ಮರದ ತುಂಡಾಗಲಿ, ಗಾಜಿನ ಚೂರಾಗಲಿ ಅಂಟಿಕೊಳ್ಳುವುದಿಲ್ಲ..ಕಡೆಗೆ ಅಯಸ್ಕಾಂತ ಹಿಡಿಗೆ ಉಪಯೋಗಿಸಿದ ರಬ್ಬರ್ ಆಗಲಿ ಮರದ ಹಿಡಿಯಾಗಲಿ ಆಗೋಲ್ಲ....ಅಪ್ಪ ಅಮ್ಮ ಅಷ್ಟು ಆಸ್ಥೆಯಿಂದ ಗೋಗರೆದರೂ ಒಪ್ಪದವ...ಒಂದು ಹೆಂಗಳ ಕಂಗಳ ಮುಂದೆ ಸೋತು ತನ್ನ ನಿರ್ಧಾರ ಬದಲಾಯಿಸಿದ್ದು ಸೋಜಿಗ..ಪ್ರೀತಿಯ ಆರಂಭ ಎಲ್ಲಿಂದ ಶುರುವಾಗುತ್ತೆ ಗೊತ್ತಿರೋಲ್ಲ...ಆದ್ರೆ ತನ್ನ ನಿರ್ಧಾರ ಅಪ್ಪ ಅಮ್ಮನಿಗೆ ಖುಷಿ ತಂದಿರುವುದು ನೋಡಿದಾಗ ಅವನ ಕನಸು ನನಸಾಗಲಿ ಎನ್ನುವ ಆಶಯ ನಮ್ಮ ಮನದಲ್ಲಿ ಮೂಡುತ್ತದೆ..ಇದಕ್ಕೆ ಕಾರಣ ಎಸ್. ಪಿ. ನಿನ್ನ ಸುಲಲಿತ ಬರವಣಿಗೆ..ಅಭಿನಂದನೆಗಳು

  ReplyDelete
  Replies
  1. ಹೆಣ್ಣ ಕಂಗಳ ಪ್ರೀತಿ ಅವನಲ್ಲಿ ಮಣ್ಣ ಕಂಪಿನ ಬಗೆಗೂ ಪ್ರೀತಿ ಮೂಡಿಸಿತು ..:)

   ಧನ್ಯವಾದ ಅಣ್ಣಯ್ಯ ಒಳ್ಳೆಯ ಪ್ರತಿಕ್ರಿಯೆಗೆ

   Delete
 4. chennagide baraha sandhya.. photo tumba chennagide...

  ReplyDelete
 5. ದಿನದಿಂದ ದಿನಕ್ಕೆ ಬರವಣಿಗೆಯಲ್ಲಿ ಆಪ್ತತೆ ಜಾಸ್ತಿ ಕಾಣುತ್ತಿದೆ...

  ಅಭಿನಂದನೆಗಳು ಚಂದದ ಬರಹಕ್ಕೆ...

  ReplyDelete
  Replies
  1. ಬರವಣಿಗೆ ಆಪ್ತವಾಗಲು ಅಷ್ಟೇ ಆಪ್ತತೆಯ ಭಾವ ಮೂಡಿಸಿದ್ದು ಆ ಫೋಟೋ ಪ್ರಕಾಶಣ್ಣ
   ಧನ್ಯವಾದ ...

   Delete
 6. Thanks.. Baraha thumba chennagide .

  ReplyDelete
  Replies
  1. ಥ್ಯಾಂಕ್ಯು .. ಬರಹ ಇಷ್ಟಪಟ್ಟಿದ್ದಕ್ಕಾಗಿ ... ಮತ್ತು ಚಂದದ ಫೋಟೋ ಬ್ಲಾಗ್ ಗಾಗಿ ಖುಷಿಯಿಂದ ಕೊಟ್ಟಿದ್ದಕ್ಕಾಗಿ ..

   Delete
 7. Present in a Different Way .... i lke So much , i am big fan of http://sandhyeyangaladi.blogspot.in

  Keepa Writing.

  All THe BEst

  ReplyDelete
 8. ಚಂದದ ಬರಹ....ಮನಸ್ಸಿಗೆ ಹತ್ತಿರವಾಗುವ ಶೈಲಿ..ಇಷ್ಟವಾಯ್ತು...ಬರೆಯುತ್ತಿರಿ....
  ಹಾಂ ಚಿತ್ರವೂ ಸುಂದರ...

  ReplyDelete
 9. Very Nice Sandhya.....
  ishtavaaytu.....
  Roopa

  ReplyDelete
 10. ಆಪ್ತತೆಯ ಅನಾವರಣವಾಗಿಸುವ ಈ ಶೈಲಿ ಓದುಗರಿಗೂ ಅಪ್ತವಾಗುತ್ತದೆ.

  ಒಳ್ಳೆ ಚಿತ್ರ ಕೊಟ್ಟ ನಿಮ್ಮ ಗೆಳತಿಗ್ಯ್ ಅಭಿನಂದನೆಗಳು.

  ReplyDelete
 11. ಸರಳ ಮತ್ತು ಸುಂದರ ಬರಹ...
  ಫೋಟೋ ಗೆ ತಕ್ಕ ರೀತಿಯ ಸಾಲುಗಳನ್ನು ಬಹಳ ಮುತುವರ್ಜಿಯಿಂದ ಪೋಣಿಸಿದ್ದಿರಿ ...ಸೂಪರ್...

  ReplyDelete
  Replies
  1. Thank you very much... Vittal Hagde, Chinnu, Roopakka, Badari Sir and Sushma..:)

   Delete
 12. ಖರೆ ಹೇಳತೇನ್ರಿ..ವಾಹ್ ಏನ್ ಬರದೀರ್ರಿ
  ಬರದರ ಹಿಂಗ ಬರೀಬೇಕು ಇಲ್ಲಾ ಸುಮ್ಮಗಿರಬೇಕು
  ಪಕ್ವತೆ ಅದು ಇದು ಎಲ್ಲಾ ಅದ ಓದಿ ಖುಷಿ ಆತು

  ReplyDelete
  Replies
  1. ದೇಸಾಯಿ ಸರ್ ನಿಮ್ಮ ಕಾಮೆಂಟ್ ಗಳೆಲ್ಲ ಆಶೀರ್ವಾದಗಳಿದ್ದಂತೆ ...
   ಧನ್ಯವಾದ ಪ್ರೀತಿಪೂರ್ವಕ ಆಶಿರ್ವಾದಕ್ಕಾಗಿ ...

   Delete
 13. "ಪ್ರಕೃತಿಯೊಂದಿಗೆ ಕಲಿಯಬೇಕಿದೆ", wonderful thought. Good one!!

  ReplyDelete
 14. ವಾವ್....ಸುಪರ್ ಬರೆದ ರೀತಿ....ಒಂದೇ ಆಕ್ಷೇಪ... ಸ್ವಲ್ಪ ಬಿಡಿ...ಬಿಡಿ ಯಾಗಿ ಬರೆಯಬೇಕಿತ್ತು.... ಇಲ್ಲಾ ಹೆಚ್ಚು ಪ್ಯಾರಾಗ್ರಾಫ್ ಇಟ್ಟು ಬರೆಯಬೇಕಿತ್ತು.. ಇನ್ನೂ ಚೆನ್ನಾಗಿ ಬರ್ತಿತ್ತು....ಟ್ರೈ ಮಾಡಿ..... ನಿಮಗೇ ಇಷ್ಟ ಆಗತ್ತೆ..... ಈಗ್ಲೂ ಎನಾಗಿಲ್ಲ...ತುಂಬಾ ಚೆನ್ನಾಗಿದೆ..... ಒಂದೇ ಗುಕ್ಕಿನಲ್ಲಿ ಮುಗಿದುಬಿಡ್ತು ಅಷ್ಟೇ....

  ReplyDelete
  Replies
  1. ಧನ್ಯವಾದ ದಿನಕರ್ ಸರ್ ... ಒಳ್ಳೆಯ ಪ್ರತಿಕ್ರಿಯೆಗೆ ಮತ್ತು ಸಲಹೆಗೆ ..
   ಮುಂದಿನ ದಿನಗಳಲ್ಲಿ ನೀವು ಹೇಳಿದಂತೆ ಬರೆಯಲು ಪ್ರಯತ್ನಿಸುತ್ತೇನೆ ...

   Delete
 15. ಸಂಧ್ಯಾ ಬರೆದ ಸಾಲುಗಳಲ್ಲಿನ ಪ್ರೀತಿ ಭಾವುಕತೆ ತನ್ಮಯತೆಗಳು ಗೊತ್ತಾಗೋದು

  ಅದರ ವಿವರಣೆಯಲ್ಲಿ... ವಿವರಿಸೋ ರೀತಿಯಲ್ಲಿ.... ಅದು ಈ ಬರಹದಲ್ಲಿದೆ..

  ಚಂದಿದ್ದೇ............

  ReplyDelete
 16. ದಿನಕರ ಮೊಗೇರರಂದಂತೆ ನನ್ನದೂ ಅದೊಂದೇ ಆಕ್ಷೇಪ. ಚೆನ್ನಾಗಿದೆ ಬರಹ ಸಂಧ್ಯಾ.

  ReplyDelete
 17. ನೀನಂದು ಹೇಳಿದ್ದು ಕೇಳಿ ಕವನ ಬರೀತೀಯಾ ಅಂದ್ಕೊಂಡೆ..ಆದರೆ ಕವನದ ಭಾವಸಾರ ಕಥೆಯ ವ್ಯಾಪ್ತಿ, ಮನದಲ್ಲಿ ಏಳುವ ಪ್ರಶ್ನೆಗಳನ್ನು ತಾನೇ ಉತ್ತರಿಸುವ ಸಂಭಾಷಣೆ ಎಲ್ಲವನ್ನೂ ಹೊತ್ತ ಭಾವ ಕಥನ ಇಷ್ಟು ಸಮರ್ಪಕವಾಗಿ ನಿರೂಪಿಸಿರುವುದು ಶ್ಲಾಘನಾರ್ಹ. ರಂಜಿತಾ ಚಿತ್ರ ಏನೆಲ್ಲಾ ಭಾವ...ಸುಂದರ..

  ReplyDelete
 18. ಚೆನ್ನಾಗಿದ್ದು.. ಮೊದಲಾರ್ಧದಲ್ಲಿ ಭಾವನೆ, ಸೂರ್ಯೋದಯದ ವರ್ಣನೆ ಎಲ್ಲ ಕಣ್ಣಿಗೆ ಕಟ್ಟ ಹಂಗೆ ಇದ್ದು :)

  ReplyDelete
 19. ಸುಂದರವಾಗಿದೆ. ಕಲ್ಪನೆಯನ್ನ ನಿಮ್ಮ ಸಾಲುಗಳಲ್ಲಿ ಸುಂದರವಾಗಿ ಬಿಂಬಿಸಿದ್ದೀರ.

  ReplyDelete
 20. ಸಂಧ್ಯಾ, ತುಂಬಾ ಚಂದದ ಬರವಣಿಗೆ, ಇಷ್ಟ ಆಯಿತು, ಒಳ್ಳೆಯದಾಗಲಿ

  ReplyDelete