Tuesday, 20 August 2013

ಏನೆಂದು ಹೆಸರಿಡಲಿ ...


"ಅಲ್ಲ ಕಣೋ ಏಪ್ರಿಲ್  ಫ್ಹಸ್ಟ್  ದಿನ ಪ್ರೊಪೋಸ್ ಮಾಡಿದ್ದರೆ,ರಿಜೆಕ್ಟ್ ಮಾಡಿದ್ರೆ ಎಪ್ರಿಲ್ ಫೂಲ್ ಅಂತ ಹೇಳಿ,ದೂರದಿಂದಲೇ ನನ್ನ ಹುಡುಗಿ ಅಂತ ನೋಡ್ಕೊಂಡು ಮನಸಲ್ಲೇ ಖುಷಿ ಪಡ್ತಾ ಇರಬಹುದಿತ್ತಾ.. ಅದು ಬಿಟ್ಟು  ಹೋಗಿ ಹೋಗಿ ರಕ್ಷಾಬಂಧನದ ಹಿಂದಿನ ದಿನ ಪ್ರಪೋಸ್ ಮಾಡಿದೀಯಲ್ಲ ನಾಳೆ ಬಂದು ಹುಡುಗಿ ರಾಖಿ ಕಟ್ಟಿದರೆ ಏನ್ಲಾ ಮಾಡ್ತೀಯಾ" ಅಂತ ರೇಗಿಸಿದ್ದ ಗೆಳೆಯನಿಗೆ ಪುಸ್ತಕದಲ್ಲಿ ಹೊಡೆದು ಆಚೆಗಟ್ಟಿ ಮಲಗಿದ್ದ ಆ ಹುಡುಗ. ಆತನ  ಮನಸಲ್ಲಿದಿದ್ದನ್ನೇ ಗೆಳೆಯ  ಬಾಯಿ ಬಿಟ್ಟು ಹೇಳಿದ್ದ. ಆದ್ರೆ ಅದನ್ನ ಒಪ್ಪಿಕೊಳ್ಳುವ ಮನಸ್ಸು ಇವನದಾಗಿರಲಿಲ್ಲ . ಅದಕ್ಕೆ ಗೆಳೆಯನ್ನು ಹೊರ ಹಾಕಿದವನ ಮನದ ತುಂಬಾ ಆಕೆಯೇ ತುಂಬಿಕೊಂಡಿದ್ದಳು. ಕಲ್ಪನೆಯಲ್ಲೇ ಮನದರಸಿಯ ಜೊತೆಗೆ ಮಾತಿಗಿಳಿದಿದ್ದ ಹುಡುಗ... 

ನಿಜಕ್ಕೂ ಅವನಂದಂತೆ ನೀನು ಮಾಡುತ್ತೀಯಾ ? ನಿನ್ನ ಬಗ್ಗೆ ನಂಬಿಕೆಯೂ ಇಲ್ಲ ಬಿಡು, ನೀ ಹಾಗೇ ಮಾಡಿದರೂ ಮಾಡುವವಳೇ.  ನಿನ್ನ ಬಗ್ಗೆ ಏನು ಹೇಳಲಿ ಹೇಳು ಮಹರಾಯ್ತಿ. ನಿನ್ನ ಆ ನಗು ಎಲ್ಲಾನೂ  ಮರೆಸಿಬಿಡುತ್ತೆ. ಮಾತನ್ನೂ  ಕೂಡ.ಅದಿಕ್ಕೆ ನಿನ್ನ ಮುಂದೆ ಮೌನಿ ನಾನು.ನಿನ್ನ ಮಾತು, ಮೌನ, ಸಿಟ್ಟು, ಆ ಅಳು ಎಲ್ಲವೂ ಇಷ್ಟ ಗೊತ್ತಾ. ಇದನ್ನ ನಿನ್ನೆದುರಿಗೆ ಹೇಳಿದರೆ ಒದೆ ಗ್ಯಾರೆಂಟಿ. ಅದೇನೊ ನಿನ್ನನ್ನ ಗೆಳತಿ ಅಂತಾ ಕಲ್ಪಿಸಿಕೊಳ್ಳಲಾರೆ. ಪ್ರೇಮಿಯಾಗಿಯೇ ನನ್ನೆದೆಯೊಳಗೆ ಇಳಿದವಳು ನೀನು. ಹಾಗಾಗಿಯೆ ನಿನ್ನ ಜೊತೆ ಇನ್ಯಾರನ್ನು ಕಂಡರೂ ಉರಿ ನನಗೆ. ಅವತ್ತು  ಮಧು ಜೊತೆ ಮಾತನಾಡುತ್ತಾ ಬರುತ್ತಿದ್ದ ನಿನ್ನ ನೊಡುತ್ತಿದ್ದರೆ ನನಗೆಷ್ಟು ಉರಿಯುತ್ತಿತ್ತು ಗೊತ್ತಾ. ಅವನನ್ನು ಆ ಕಡೆ ಕಳುಹಿಸಿ ನೇರ ನನ್ನೆದುರಿಗೆ ಬಂದು ಹಾಯ್ ಎಂದವಳಿಗೆ ಬಿಗಿಯಾಗಿಯೇ ಉತ್ತರಿಸಿದ್ದೆ. ಆದರೆ ನನ್ನ ಕಣ್ಣಲ್ಲಿನ, ನನ್ನ ಮಾತಲ್ಲಿನ ಅಹಸನೆಯನ್ನು ಗುರುತಿಸಿದವಳಂತೆ, 

ಕಣ್ಣಿಗೆ ಕಂಡದ್ದೆಲ್ಲ ನಿಜವಾಗಿರಲೇ 
ಬೇಕಿಲ್ಲ.. 
ಕೃಷ್ಣನ ಪಕ್ಕ ನಿಂತ ಮಾತ್ರಕ್ಕೆ 
ರಾಧೆ ರುಕ್ಮಿಣಿ ಭಾಮೆಯರೇ ಆಗಬೇಕೆಂದೇನೂ ಇಲ್ಲ 
ಅಲ್ಲೊಬ್ಬ ಕೃಷ್ಣೇಯೂ ಇರಬಹುದಲ್ಲ ... !!

ಎಂದು ಹೇಳಿ ತಲೆ ಮೇಲೆ ನೋಟ್ ಬುಕ್ ನಿಂದ ಹೊಡೆದು ಹೋದಾಗ ಸ್ವಲ್ಪ ಪಪ್ಪಿ ಶೇಮ್ ಆಗಿದ್ದು ನಿಜ. ಆದರೆ ನನ್ನ ಮನಸ್ಸನ್ನ ಸ್ವಲ್ಪವಾದರೂ ನಿನಗೆ ತಿಳಿಸಿದ್ದೇನೆ, ಮತ್ತೂ ಅದು ನಿನಗೆ ಅರ್ಥವಾಗಿದೆ ಎನ್ನುವ ಸಣ್ಣ ಖುಷಿ ನನ್ನದಾಗಿತ್ತು. ನಿನ್ನ ಬಗ್ಗೆ ಅದ್ಯಾಕೆ ಅಷ್ಟು ಕಾಳಜಿ ಗೊತ್ತಿಲ್ಲ ನನಗೆ. ನಿನಗೊಂದು ಸಣ್ಣ ನೊವಾದರೂ ತಡೆಯಲ್ಲ ಜೀವ. ನಿನಗೇನು ಗೊತ್ತು ಕಷ್ಟ. ಆದರೂ ನನಗೆ ಜೀವ ಹಿಂಡುವಷ್ಟು ಕಷ್ಟ ಕೊಡುತ್ತೀಯ."ಅಕಸ್ಮಾತ್ ನಾನು ಸತ್ತರೆ... " ಅಂತ ಅವತ್ತು ನೀನು ಅಂದಾಗ ಅದ್ಯಾವ ಮಾಯದ ಸಿಟ್ಟೊ ಗೊತ್ತಿಲ್ಲ. ಸಡನ್ನಾಗಿ ಬಾಯಿ ಮೇಲೆ ಹೊಡೆದು ಬಿಟ್ಟಿದ್ದೆ. ತುಟಿಯೊಡೆದು ರಕ್ತ ಬಂದಿತ್ತು ನಿನಗೆ."ಅಯ್ಯೊ ಸತ್ತರೆ ಅಂತಾ ಹೆಳಿದ್ದಿಷ್ಟೆ ಕಣೊ, ನಿನ್ನ ಏಟಿಗೆ ಅನ್ಯಾಯವಾಗಿ ಕೊಲೆಯಾಗಿಬಿಡುತ್ತಿದ್ದೆನಲ್ಲೊ" ಅಂತಾ ನೀನು ಹೇಳಿದಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು.ನಿನ್ನ ಸಮಾಧಾನಿಸುವ ಬಗೆ ತಿಳಿದಿರಲಿಲ್ಲ. ನೀ ಅದನ್ನ ಬಯಸೋದು ಇಲ್ಲ ಅಂತಾ ಗೊತ್ತಿತ್ತು.ಮರುದಿನ ಎಲ್ಲರಂತೆಯೆ ಕಾಲೇಜ್ ಗೆ ಬಂದವಳು, ಕಾಲೆಳೆಯುತ್ತಿದ್ದವರಿಗೆಲ್ಲ ಹಾಗೆಯೇ ಉತ್ತರಿಸುತ್ತಾ, ಸಂಜೆ ನನ್ನ ಬಳಿ ಬಂದು ನೋಡು ನೀ ಮಾಡಿದ ಗಾಯ, ಎಷ್ಟು ಎಂಜಾಯ್ ಮಾಡಿದೆ ಗೊತ್ತಾ ಅಂದಾಗ ನಗು ಬಂತು.ಇಷ್ಟೆಲ್ಲ ಆದರೂ ಪ್ರೀತಿಯ ನಿವೇದನೆಗೆ ಮಾತ್ರ ಅವ್ಯಕ್ತ ಭಯ. ಕೊನೆಗೂ ಇವತ್ತು ನಿಲ್ಲದ ಮನಸ್ಸನ್ನು ಹತೊಟಿಗೆ ತರದೆ ನಿನ್ನ ಮುಂದೆ ಎಲ್ಲವನ್ನೂ ಅರುಹಿ ಬಿಟ್ಟಿದ್ದೆ. ನೀನೋ ಮಹಾನ್ ಸೊಕ್ಕಿನಿಂದ ನಾಳೆ ಹೆಳ್ತೀನಿ ಎಂದು ಮಾಯವಾದೆ. ನಾಳೆ ರಕ್ಷಾಬಂಧನ ಎಂದು ಅರಿವಾಗಿದ್ದು ಆಮೇಲೆ. ನೊಡು ದಯವಿಟ್ಟು ನಾಳೆ ಆಟ ಆಡಬೇಡ. ನನಗೆ ಗೊತ್ತು ನನ್ನ ಪ್ರೀತಿಯನ್ನು ಸಿರಿಯಸ್ ಆಗಿ ನೀ ಒಪ್ಪಿಕೊಂಡರೂ ನಿನ್ನ ಪ್ರೀತಿಯಲ್ಲಿ ಸಿರಿಯಸ್ನೆಸ್ ಇರಲಾರದು.ಮಗುವಂತೆಯೆ ನಿನ್ನ ಪ್ರೀತಿ. ಸಂಭಾಳಿಸುವುದು ಕಷ್ಟ. ಆದರೂ ನಿನ್ನ ಸಂಭಾಳಿಸಬಲ್ಲೆ ಕಣೇ...


ಹೀಗೆಯೇ ಯೊಚಿಸುತ್ತಾ ರಾತ್ರಿಯೆಲ್ಲ ನಿದ್ದೆಯಿಲ್ಲದೆ ಹೊರಳಿದ್ದ ಹುಡುಗನ ಕಣ್ಣು ಕೆಂಪಾಗಿತ್ತು.ಹೃದಯ ಬಡಿತ ಪಕ್ಕದಲ್ಲಿ ಕುಳಿತವರಿಗೂ ಕೇಳಿಸುವಂತಿತ್ತು.ಅವನ ಮುದ್ದು ಹುಡುಗಿ ಮಾತ್ರ ಯಾವುದೇ ಬದಲಾವಣೆಗಳಿಲ್ಲದೆ ಕೈ ಲ್ಲಿ ಒಂದು ಪುಟ್ಟ ಬಾಕ್ಸ್ ಕೊಟ್ಟು ನಡೆದಿದ್ದಳು. ಓಪನ್ ಮಾಡಿ ನೋಡಿದವನಿಗೆ ಜಗವೆಲ್ಲ ಸ್ತಬ್ಧವೆನಿಸಿತ್ತು .ಅದರಲ್ಲಿ ಚಂದದೊಂದು ರಾಖಿ ನಗುತ್ತಿತ್ತು. ಕಿವಿಗೆ ಕೇಳುತ್ತಿದ್ದುದು ಆಕೆಯ ಗೆಜ್ಜೆಯ ದನಿಯೊಂದೇ. ಆಕೆ ವಾಪಸ್ ಬಂದವಳು ಇದು ನಿನಗೆ, ಅದು ನಿನಗಾಗಿ ಅಲ್ಲ. ಸಾರಿ ಕಣೊ ಎಂದು ಬಂದ ವೇಗದಲ್ಲೆ ಬೇರೆ ಬಾಕ್ಸ್ ಒಂದನ್ನು ಇವನ ಕೈಗಿಟ್ಟು ಹೋದಳು. ಹೋದ ಜೀವ ವಾಪಸ್ ಬಂದಂತಾದಾಗ ಹುಡುಗನ ಕಣ್ಣಲ್ಲಿ ಯುದ್ಧ ಗೆದ್ದ ಸಂಭ್ರಮ.


ನಿಧಾನವಾಗಿ ಒಪನ್ ಮಾಡಿದವನಿಗೆ ಕಂಡದ್ದು ಎರಡೆಳೆ ಕರಿಮಣಿಯ ಮಧ್ಯ ಜೊಡಿಸಿದ್ದ ಪುಟ್ಟ ತಾಳಿಯಂತಹ ಪದಕ. ಜೊತೆಯಲ್ಲೆ "ರಾಖಿ ಕಟ್ಟಿಯೇ ರಕ್ಷಣೆ ಮಾಡಬೇಕಿಲ್ಲ, ಇದನ್ನ ಕಟ್ಟಿದ್ರೂ ರಕ್ಷಣೆ ಮಾಡಬೇಕಾಗತ್ತೆ. ಲವ್ ಯು ಕಣೊ ಗೂಬೆ" ಎಂದು ಬರೆದ ಮುದ್ದಾದ ಅಕ್ಷರಗಳು. ನಮ್ಮದೆನ್ನುವ ಈ ಪ್ರೀತಿಯಲ್ಲಿ ತನಗಿಂತಲೂ ಗಟ್ಟಿಯಾದ ಕನಸು ಈ ಹುಡುಗಿಯದು ಎಂದುಕೊಂಡವನಿಗೆ ಹೆಮ್ಮೆಯಾಗಿತ್ತು.


ಹೊಸ ಕನಸೊಂದು ಹುಡುಗನ ಖುಷಿಯ ಜೋಳಿಗೆ ತುಂಬಿತ್ತು.

22 comments:

 1. ಹುಡುಗನ ಪ್ರೇಮ ಫಲಿಸಿತು... ಚಂದದ ಕಥೆ...

  ReplyDelete
 2. ರಾಖಿ ಆಗಿ ಕರಿಮಣಿ ಸರನು ಕಟ್ಟಬಹುದು ಹಾಗಿದ್ರೆ ಹಹಹ ಚೆನ್ನಾಗಿದೆ ಕಥೆ

  ReplyDelete
 3. chandada kathe, ishta aaytu... sandhyeyangaladi kathe banda mele ishta aagadiralu saadhyave!!!

  ReplyDelete
 4. ಗೂಬೆಯಂತಲೂ ಬೈಸಿಕೊಂಡರೂ... ಆತ್ಮೀಯವೆನಿಸುವ ನಿಮ್ಮ ಹುಡಗರಿಗೆ ಮತ್ತು
  ಕಥೆಯ Bold & Beautifull ಹೆಣ್ಣುತನಕ್ಕೆ ಮನಕ್ಕೆ ನಾವು ಫ್ಯಾನ್ಸು ..

  ಮೂರು ಪ್ಯಾರಗಳಲ್ಲೇ ಕಥೆ ಆವರಿಸಿಕೊಳ್ಳುವ ಕಾಲ , ಥ್ರಿಲ್ಲಿಂಗು, ರೋಮಾಂಚನ ದೊಡ್ಡದು..
  ಚಂದ ಇದೆ.

  ReplyDelete
 5. ನವಿರಾಗಿ ರೋಮಾಂಚನಗೊಳಿಸುವ ಕತೆ!

  ReplyDelete
 6. ಕಥೆ ಬರೆದ ಶೈಲಿ ತುಂಬಾ ಚೆನ್ನಾಗಿದೆ.

  ReplyDelete
 7. ನನ್ನ ಬ್ಲಾಗಿಗೂ ಭೇಟಿ ಕೊಡಿ ಒಂದು ಒಳ್ಳೆಯ ಕಥೆ ನಿಮನ್ನು ಕಾದಿದೆ.

  ReplyDelete
 8. ಕಟ್ಟುವ ಕಾರ್ಯ ಒಂದೇ.. ಒಂದು ರಕ್ಷಣೆ ಇನ್ನೊಂದು ಸಂ(ಸಾರ)ರಕ್ಷಣೆ... ಕೊಟ್ಟಿರುವ ತಿರುವು ಸೂಪರ್ ಎಸ್ ಪಿ.. ಸುಂದರ ಲೇಖನ ಹುಡುಗನ ಮನದ ತಳಮಳವನ್ನು ವಿವರಿಸುವ ಪರಿ.. ಅದಕ್ಕೆ ಸಿಕ್ಕ ಪಲಿತಾಂಶ ಎಲ್ಲವು ಒಂದು ಗುಲಾಬಿ ಹೂವನ್ನು ನೋಡಿ ಆನಂದಿಸಿ ಅದು ಕೈಗೆ ಸಿಕ್ಕಾಗ ಆಗುವ ಸಂತಸ ಮನದಲ್ಲಿ ಮೂಡಿ ಬಂದಿದೆ., ಸೂಪರ್ ಲೇಖನ

  ReplyDelete
 9. ತಾಳಿ ಕೊಟ್ಟವಳು ಮನಸುಗೆದ್ದವಳು ನೆಚ್ಚಿಗೆಯಾದಳು ಸಂಧ್ಯಾ.
  the bestಊ:
  ಗೋಪಿಕೆ ಅಥವಾ ಪತ್ನಿಯೇ ಆಗಬೇಕೆಂದೇನೂ ಇಲ್ಲ! ultimate :)

  ReplyDelete
 10. ಸಖ್ಖತ್ತು ಮತ್ತು ಬೊಂಬಾಟ್ ಕಥೆ.

  ReplyDelete