Monday, 15 July 2013

"ಜೀವಂತು ಶರದಾಂ ಶತಮ್ "
"ಆತ್ಮ ಬಂಧು"   ಈ ಶಬ್ದ ಕೇಳಿದರೆ ಅದ್ಯಾಕೋ ನಿನ್ನ ಹೆಸರು ನೆನಪಾಗಿ ಬಿಡುತ್ತೆ. ದುಃಖವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಆದರೂ ಕಡಿಮೆ ಮಾಡಿಕೊಳ್ಳಬೇಕು ಎನಿಸಿದರೆ ನಿನ್ನ ನೆನಪಾಗಿಬಿಡುತ್ತೆ. ಯಾವುದೋ ಒಂದು ಮೂಡ್ ನಿಂದ ಹೊರಬರಬೇಕು ಆಗಲೂ ನಿನ್ನದೇ ನೆನಪು. ಸುಮ್ನೆ ಹರಟಬೇಕು, ಗಟ್ಟಿಯಾಗಿ ನಗಬೇಕು ಕಣ್ಣಲ್ಲಿ ನೀರು ಬರುವಷ್ಟು ಎನಿಸಿದರೆ again  ನಿನ್ನದೇ ನೆನಪಪ್ಪಾ.  ನನಗೆ ತುಂಬಾ ಮುದ್ದಿಸಿಕೊಳ್ಳಬೇಕು, ಚಿಕ್ಕಮಗುವಿನಂತೆ ಹಠ ಮಾಡಬೇಕು ಅಂದರೆ ಅದಕ್ಕೆ ನೀನೆ ಬೇಕು. ನಗಿಸಿ ಕಣ್ಣೀರಾಗಿಸಿದವ ನೀನು ಇದುವರೆಗೂ ನಿನ್ನಿಂದಾಗಿ ನನ್ನ ಅಳಿಸಿದವನಲ್ಲ,
ನಿನ್ನ ಫೋನ್ ಎತ್ತಿದ ತಕ್ಷಣ "ಒಪಿ ಸೊಕ್ಕು ಮುದ್ದು ಜಾಣು ಅಂತ ಮಾತಿದ್ದಡ" ಎಂಬ ಮುದ್ದು ಭಾಷೆಯ  ನಿನ್ನ ಮಾತು ಕೇಳಿದರೆ ಸಾಕು ಅದೆಷ್ಟೇ ದುಃಖ, ಟೆನ್ಶನ್ ಲಿ ಕಾಲ್ ಮಾಡಿದ್ದರೂ ಎಲ್ಲವೂ ಖಲ್ಲಾಸ್. ಆಮೇಲೆ ಬಿಡು ಮಾತಿಗಿಂತ ಜಾಸ್ತಿ ನಗುವೇ.. :) 

ಪುಟ್ಟ ಬೊಮ್ಮಟೆ ಪಾಪುವಾಗಿದ್ದಾಗ ನಿನ್ನ ಎತ್ತಿಕೊಂಡ ನೆನಪಿಲ್ಲ. ಕೈ ಹಿಡಿದು ಶಾಲೆಗೇ ಕರೆದುಕೊಂಡು ಹೋದದ್ದು ನೆನಪಿಲ್ಲ. ಹೋಂ ವರ್ಕ್ ಮಾಡಿಕೊಟ್ಟಿಲ್ಲ ಬಿಡು. ಹೈ ಸ್ಕೂಲ್ ನಲ್ಲಿದ್ದಾಗ ನಾ ಬಸ್ ಇಳಿಯುವ ಮುನ್ನ ಕಾದಿದ್ದು, ನಿನ್ನ ಸೈಕಲ್ ಮೇಲೆ ನನ್ನ ಕರೆದುಕೊಂಡು ಬಂದಿದ್ದು ನೆನಪಿದೆ. ಆಮೇಲೆ ನೀ ಕಾಲೇಜ್ ಗೆ ಹೋಗುವಾಗ ನನ್ನ ಕಾಲೇಜ್ ಹತ್ತಿರ ಸಡನ್ ಆಗಿ ಬೈಕ್ ತಂದು ನಿಲ್ಲಿಸಿ ನನ್ನನ್ನು ಕರೆದುಕೊಂಡು ಬಂದಿದ್ದು ನೆನಪಿದೆ. ಎಷ್ಟೋ ಜನ ತಂಗಿಯರನ್ನು ಅವರ ಅಣ್ಣಂದಿರು ಕಾಲೇಜ್ ಗೆ ಡ್ರಾಪ್ , ಪಿಕ್ ಅಪ್ ಮಾಡುವಾಗ, ನನಗೂ ಒಬ್ಬ ಅಣ್ಣನಿರಬೇಕಿತ್ತು ಅಂದುಕೊಳ್ಳುತ್ತಿದ್ದ ನನಗೆ, ತಮ್ಮನಾದವನು ಅಣ್ಣನಿಗಿಂತ ಗ್ರೇಟ್ ಅಂತ ಅವತ್ತು ಅನಿಸಿತ್ತು.  ನನಗೆ ಸೈಕಲ್ ಕಲಿಸಬೇಕೆಂದು ನೀ ಪಟ್ಟ ಪಾಡು  ಇನ್ನೂ ಮರೆತಿಲ್ಲ, ಮತ್ತೂ ನನಗಿನ್ನೂ ಸೈಕಲ್ ಓಡಿಸಲು ಬರುವುದಿಲ್ಲ ಬಿಡು..:) ನಿನಗೂ ಗೊತ್ತು. 

ನೀನು,  ನಿನ್ನೊಡನೆ ವಸಂತ ಇಬ್ಬರಿದ್ದಲ್ಲಿ ಅಲ್ಲಿ ಖುಷಿ ಬಿಟ್ಟರೆ ಬೇರೆಯದಕ್ಕೆ ಜಾಗವೇ ಇಲ್ಲ. ನಿಮ್ಮೊಂದಿಗಿದ್ರೆ  ನಗುವಿಗೆ ಬ್ರೇಕ್ ಇಲ್ಲ. ಮೂವರೂ  ಒಬ್ಬರಿಗೊಬ್ಬರೂ ಮುಖ  ನೋಡಿಕೊಂಡರಂತೂ ಆ ನಗು ನಿಲ್ಲುವುದಿಲ್ಲ. ಅದಕ್ಕೆ ಎಷ್ಟೋ ವಿಚಾರಗಳ discussions ಆಗುವಾಗ  ನಾವೂ  ಮುಖ ನೋಡಿಕೊಳ್ಳುವುದಿಲ್ಲ ...  ಅದರಲ್ಲೂ ದೊಡ್ಡವರ ಎದುರಲ್ಲಿ...:)    " ಬಡಿ ಬಡಿ ಭಟ್ಟನ ಕಂಡರೆ ಈಶ್ವರನ ತಲೆ ಮೇಲಿನ ಬಿಲ್ವ ಪತ್ರೆಯೂ ಹುಬ್ಬು ಹಾರ್ಸಿತ್ತಡ " ಎಂಬ ಒಂದು ಗಾದೆಯನ್ನ ಉಟಕ್ಕೆ ಕುಳಿತಾಗ ನೆನಪಿಸಿಕೊಂಡು ನಕ್ಕಿದ್ದು, ತುತ್ತು ಗಂಟಲು ಸಿಕ್ಕಿಕೊಂಡಿದ್ದು  ನೆನಪಿದೆ. "ಮಾಣಿಕ್ಯ ಮುಕುಟಾಕಾರ ಜಾನುದ್ವಯ  ವಿರಾಜಿತ " ಎಂಬ ಲಲಿತಾ ಸಹಸ್ರನಾಮದ ಶ್ಲೋಕವನ್ನು ಅಪ್ಪ ತಮಾಷೆಯಾಗಿ " ಮಾಣಿಕ್ಯ ಮರ್ಕಟಾಕಾರ ಬಾಲದ್ವಯ  ವಿರಾಜಿತ " ಎಂದು ಬದಲಾಯಿಸಿದ್ದು ನಿಮಗಾಗಿಯೇ, ಬೈಯಿಸಿಕೊಳ್ಳುವುದು ಮತ್ತು ಜಗಳಗಳಲ್ಲಿ ನಾವ್ಯಾವತ್ತು ಒಂದೇ ಪಾರ್ಟಿ ಬಿಡು. ಮೂವರೂ ಸೇರಿ ಬೈಸಿಕೊಂಡಿದ್ದೇವೆ ಹೊರತು, ಒಬ್ಬರಿಗೊಬ್ಬರು ಚಾಡಿ ಹೇಳಿ ಬೈಸಿಕೊಂಡಿದ್ದಿಲ್ಲ. ಬೈಸಿಕೊಂಡ ಘಟನೆಗಳ ನೆನಪು ಮಾಡಿದರೆ ಕಾದಂಬರಿಯಾಗಿಬಿಡುತ್ತೆ ಅಲ್ವಾ.  ಜಗಳಗಳ ಜುಗಲ್ ಬಂದಿ ಇದ್ದಿದ್ದೆ. ಆದರೆ ಜಗಳವಾಡಿದಷ್ಟೇ ಹೊತ್ತು.ಮತ್ತೆಲ್ಲ ಏಕದಂ ಮಾಮೂಲಿ. 

ನನಗಿಬ್ಬರು ಮುದ್ದಿನ ತಮ್ಮಂದಿರಿದ್ದಾರೆ ಎಂದುಕೊಳ್ಳುವ ಹೊತ್ತಿಗೆ ನೀವಿಬ್ಬರೂ ಅಣ್ಣಂದಿರಾಗಿಬಿಟ್ಟಿರುತ್ತೀರಿ.  ನನ್ನಿಷ್ಟಗಳೆಲ್ಲ  ನನಗಿಂತ ಚೆನ್ನಾಗಿ ನಿಮಗೇ ಗೊತ್ತು. ನನ್ನ ಮೊಬೈಲ್ ಮೆಮೊರಿ ಕಾರ್ಡ್ ನಲ್ಲಿ ನೀವೇ ಸೆಲೆಕ್ಟ್ ಮಾಡಿದ ಹಾಡುಗಳಿವೆ, ಇದುವರೆಗೂ ಒಂದೇ ಒಂದು ಹಾಡು ನಾನು ಡಿಲೀಟ್ ಮಾಡಿಲ್ಲ. ಇದು ನಿನಗಿಷ್ಟ ಆಗುತ್ತೆ ತಗೋ ಅಂತ ನೀವು ಕೊಟ್ಟ/ಕೊಡುವ  ಎಲ್ಲ ವಸ್ತುಗಳು ನನಗಿಷ್ಟವಾದದ್ದೆ. ನಿಮ್ಮಬ್ಬರದು ಬೇರೆ ಬೇರೆ ರೀತಿಯ ಪ್ರೀತಿ, ಎರಡೂ ನನಗಿಷ್ಟ. ಮಕ್ಕಳು ಎದೆಯೆತ್ತರಕ್ಕೆ ಬೆಳೆದರು ಅಂತ ಅಪ್ಪ , ಕಾಕ ಹೆಮ್ಮೆಯಿಂದ ಹೇಳುವಾಗ ನನಗೂ ಹೆಮ್ಮೆಯೆನಿಸುತ್ತೆ.  ನೀವಿಬ್ಬರೂ ಒಂದು ಜೀವ, ಎರಡು ದೇಹ , ನಮಗೆಲ್ಲ ಎರಡೂ ಕಣ್ಣುಗಳಿದ್ದಂತೆ. ಅಮ್ಮಂದಿರ ಮುದ್ದಿನ ಕೂಸುಗಳು. ಇಬ್ಬರಿಗೂ ಬೇರೆ ಬೇರೆಯದೇ ಕನಸುಗಳಿವೆ. ಹೊಸ ಕನಸುಗಳ ಹೊಸ್ತಿಲಲ್ಲಿದ್ದೀರಿ ಇವತ್ತು. . ನಿಮ್ಮ ಗುರಿ ನೀವು ತಲುಪಿದರೆ ನಮ್ಮೆಲ್ಲರ ಕನಸುಗಳು ನನಸಾದಂತೆ. ಇಬ್ಬರಿಗೂ ಒಳ್ಳೆಯದಾಗಲಿ ನನ್ನ ಮುದ್ದೂಸ್...

"ಜೀವಂತು ಶರದಾಂ ಶತಮ್ " 

ಹಾಂ ನನ್ನ ಪುಟ್ಟು ನಿನ್ನ ಹುಟ್ಟಿದ ದಿನ ಇವತ್ತು. ಎಷ್ಟು ವರ್ಷವಾಯಿತು ನಿನಗೆ ? ಬೇಕಾಗಿಲ್ಲ ಬಿಡು ತಮ್ಮನಿಗಿಂತ ಅಣ್ಣನಾಗಿ ಬಿಟ್ಟಿದ್ದೀಯ. ಅಣ್ಣಂದಿರಿಗೆ ವಯಸ್ಸಾದಂತೆ ತಂಗಿಯರು ಚಿಕ್ಕವರಾಗುತ್ತಾರಂತೆ. ನಾ ಚಿಕ್ಕವಳಾಗಿಯೇ ಇರ್ತೀನಿ ನಿನ್ನ ಮುಂದೆ. 

ಹ್ಯಾಪಿ ಹ್ಯಾಪಿ ಬರ್ತ್ ಡೆ ಪದ್ದು..  ಲವ್ ಯು ಕಣೋ..

ಮೂರು ದಿಕ್ಕುಗಳಲ್ಲಿ ಮೂವರಿದ್ದರೂ ಪ್ರೀತಿ ಮತ್ತು ನಗು ನಮ್ಮ ನಿರಂತರ ಜೀವಸೆಲೆ..   

8 comments:

 1. ಒಂದೇ ಬಳ್ಳಿಯಲ್ಲಿ ಅರಳಿದ ಹೂವುಗಳು.. ಕೆಲವು ಮೇಲಿನ ಕೊಂಬೆಯಲ್ಲಿ ಅರಳಿ ಹಿರಿಯರಾಗುತ್ತವೆ.. ಕೆಲವು ಕೆಳಗಿನ ಕೊಂಬೆಗಳಲ್ಲಿ ಜನಿಸಿ ಕಿರಿಯರಾಗುತ್ತವೆ. ಏನೇ ಆದರೂ ಸುವಾಸನೆ, ಅರಳುವ ಪರಿ, ರವಿಯ ಕಂಡು ನಗುವ ರೀತಿ ಎಲ್ಲವು ಒಂದೇ.... ರಕ್ತದ ಜೊತೆಯಲ್ಲಿ ಪ್ರೀತಿ ಮಮಕಾರ ವಿಶ್ವಾಸ ಅಂತಃಕರಣ ಎಲ್ಲವನ್ನು ಬೆಸೆದುಕೊಂಡು ಬರುವ ಕಂದಮ್ಮಗಳಲ್ಲಿ ಈ ಪ್ರೀತಿ ತುಸು ಹೆಚ್ಚೇ ಕಾಣುವಷ್ಟು ಸಂತಸ ಧುಮುಕುತ್ತದೆ. ಸುಂದರ ಬರಹ... ಜೊತೆಯಲ್ಲಿ ಮೂಡಿದ ತನುವನ್ನು, ತನುವಿಗಾಗಿ ಮನದಾಳದಿಂದ ಬರೆದ ಶುಭಾಷಯ ಪತ್ರ ಬೊಂಬಾಟ್. ನನ್ನ ಕಡೆಯಿಂದಲೂ ಶುಭಾಶಯಗಳು ಮುದ್ದು ಬೊಮ್ಮಟೆಗೆ!

  ReplyDelete
 2. ಹಳೆಯ ನೆನಪುಗಳು ಸೂಸಿದಷ್ಟು ಗಂಧ ಜಾಸ್ತಿ......
  ಇಂಥಹ ನೆನಪುಗಳನ್ನು ಮೆಲುಕಿಸುವುದೇ ಖುಷಿ.........
  ಚಂದವಾಗಿದೆ....
  "ಮುದ್ದೂಸ್" ಪದ ಇಷ್ಟ ಆಯ್ತು....

  ಖುಷಿಯಾಯ್ತು....

  ReplyDelete
 3. ಸಂಬಂಧಗಳ ನಡುವೆ ಇಂತಹ ಆರ್ದ್ರತೆ ಉಳಿಸಿಕೊಳ್ಳುವುದು ವೈಯಕ್ತಿಕವಾಗಿ ನನ್ನ ಪಾಲಿಗೆ ಮರೀಚಿಕೆ ಅನ್ಸತ್ತೆ .
  ಆದರೂ ಇಂತಹ ಸಾಹಿತ್ಯವನ್ನು ಓದಿದಾಗ.., ಜೊತೆಯಲ್ಲೇ ಇರುವವರು ಒಬ್ಬರಿಗೊಬ್ಬರು ಇಷ್ಟು ಭಾವನಾತ್ಮಕವಾಗಿ ಬೆಸೆದಿರುವುದು ವಿಸ್ಮಯದಂತೆ ಕಾಣುತ್ತದೆ.
  ಒಳ್ಳೆಯ ಓದಿಗಾಗಿ ಧನ್ಯವಾದಗಳು!!

  ReplyDelete
 4. ಪ್ರೀತಿ ತು೦ಬಿದ ಒಡನಾಟಗಳ ನೆನಪೆಲ್ಲವೂ ಚೆ೦ದ.... ಅಣ್ಣನಾದ ತಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು....
  ನಿಮ್ಮಿಬ್ಬರ ಈ ಬಾ೦ಧವ್ಯ ಹೀಗೇ ಇರಲಿ ಎ೦ದು ಆಶಿಸುವೆ ಸ೦ಧ್ಯ.........

  ReplyDelete
 5. ಅವರ ಹುಟ್ಟಿದ ಹಬ್ಬಕ್ಕೆ ನಮ್ಮದೂ ಶುಭಾಶಯ ಕೋರಿರಿ.

  "ಜೀವಂತು ಶರದಾಂ ಶತಮ್ "

  ತುಂಬಾ ಮೆಚ್ಚಿಗೆಯಾಯಿತು. ನನಗೂ ಒಬ್ಬ ತಮ್ಮ ಅಥವಾ ತಂಗಿ ಇರಬೇಕಿತ್ತು ಅನಿಸಿದ್ದಿದೆ.

  http://badari-poems.blogspot.in/

  ReplyDelete
 6. ಇಷ್ಟು ದಿನಗಳಾದ ಮೇಲೆ ನಿನ್ನ ಮುದ್ದು ಬರಹ ಓದುತ್ತಿದ್ದಿನಲ್ಲೇ..? ಬೇಜಾರಿದೆ ನನಗೆ ಈ ಬಗ್ಗೆ... ಕೆಲವು ಬರಹಗಳು ಹೀಗೆ ನೀ ಬರೆವ ಹಾಗೆ... ಹೃದಯ ಕಲಕಿ ಬಿಡುತ್ತೆ.. ಕಣ್ಣಲ್ಲಿ ಒಂದಿಷ್ಟು ಸಂತಸದ ಪೊರೆ ತುಂಬಿಸಿ ಬಿಡುತ್ತೆ.. ಹೇಳಲು ಮಾತಿಲ್ಲ... ಸಿಂಪ್ಲಿ ಸುಪರ್ಬ್... ನಿನ್ನ ತಮ್ಮಂದಿರಿಗೆ ನನ್ನ ಕಡೆಯಿಂದಲೂ ಶುಭಾಶಯ ಹೇಳಿ ಬಿಡು (ತಡ ಮಾಡಿದ್ದಕ್ಕೆ ಬೇಜಾರು ಮಾಡಿಕ್ಕೊಳ್ಳದೆ ಪ್ಲೀಸ್... )...

  ReplyDelete
 7. ಸೂಪರ್ ಸಂಧ್ಯಕ್ಕಾ ...
  ಮುದ್ದಕ್ಕನ ಮುದ್ದು ತಮ್ಮಂದಿರಿಗೆ ನನ್ನ ಕಡೆಯಿಂದಲೂ ತುಂಬಾ ತಡವಾದ ಜನುಮ ದಿನದ ಪ್ರೀತಿಯ ಶುಭಾಶಯಗಳು..

  ಸಂಧ್ಯಕ್ಕನ ಎಲ್ಲಾ ಭಾವಗಳಂತೆ ಪ್ರೀತಿಯ ಜನುಮ ದಿನದ ಶುಭಾಶಯ ಪತ್ರವೂ ಹತ್ತಿರ ಅನ್ನಿಸ್ತು ...
  ಅಕ್ಕ ತಮ್ಮಂದಿರ ಈ ತುಂಟಾಟ ,ಗುದ್ದಾಟ ,ಪ್ರೀತಿ ಸದಾ ಹೀಗೇ ಇರ್ಲಿ ..

  ReplyDelete