Tuesday, 5 February 2013

ಅಕ್ಕಾ ಎಂಬ ಅಮ್ಮನ ಬಗೆಗೊಂಚೂರು....ತಾಯಿಯ ಬಗೆಗೆ ಎಷ್ಟೆಲ್ಲಾ ಬರೆದರೂ ಮುಗಿಯುವುದಿಲ್ಲ ಯಾವಾಗಲೂ. ಬರೆದಷ್ಟೂ ಅಕ್ಷಯವಾಗುತ್ತಾ ಹೋಗುತ್ತಾಳೆ ಈ ಅಮ್ಮ ಎನ್ನುವವಳು. ಥೇಟ್  ಅಮ್ಮಂತಹುದೇ ಇನ್ನೊಂದು ಜೀವವಿರುತ್ತದೆ . ಅವಳು ಎರಡನೇ ತಾಯಿಯಾಗುತ್ತಾಳೆ, ಗೆಳತಿಯಾಗುತ್ತಾಳೆ, ಒಮ್ಮೊಮ್ಮೆ ವೈರಿ ಎನಿಸಿಬಿಡುತ್ತಾಳೆ, ಮುನಿಸಿಕೊಳ್ಳುತ್ತಾಳೆ, ಮಾತು ಬಿಡುತ್ತಾಳೆ. ಮುದ್ದುಗರೆಯುತ್ತಾಳೆ. ನಮಗಿಂತ ದೊಡ್ಡವಳಾಗಿರುತ್ತಾಳೆ. ಹೌದು ಅವಳು "ಅಕ್ಕ"  ಆಗಿರುತ್ತಾಳೆ. 

ಈ ಅಕ್ಕಂದಿರು ಯಾವಾಗಲೂ ಸಾವಿರಕ್ಕೊಬ್ಬರು  ಎನಿಸಿಬಿಡುತ್ತಾರೆ. ತಂಗಿಯರ ಮೊದಲ ಮಾಡೆಲ್ ಅಕ್ಕಂದಿರೇ ಅನಿಸುತ್ತದೆ. ಅಕ್ಕನನ್ನು ನೋಡುತ್ತಾ ತಂಗಿ ಬೆಳೆಯುತ್ತಾಳೆ. ಹಾಗಾಗಿಯೇ ಇರಬೇಕು "ಹಿರಿಯಕ್ಕನ ಚಾಳಿ ಮನೆ ಮಂದಿಗೆ " ಎಂಬ ಗಾದೆ ಹುಟ್ಟಿಕೊಂಡಿದ್ದು.  ಅಕ್ಕನಂತೆ ಎಲ್ಲವೂ ಬೇಕು. ಅಕ್ಕ ಹೇಗೆ ಮಾಡ್ತಾಳೋ ಹಾಗೆ ತಾನೂ ಮಾಡಬೇಕು. ಅಕ್ಕನಿಗೆ ಏನೇ ತಂದು ಕೊಟ್ಟರೂ ಅದು ತನಗೂ ಬೇಕು. ಅಕ್ಕ ಚೂಡಿ ಹಾಕುವಷ್ಟು ದೊಡ್ಡವಳಾಗಿದ್ದಾಳೆಂದು ಚೂಡಿ ತಂದು ಕೊಟ್ಟರೆ, ತನಗೆ ಚೂಡಿ ಹಾಕಲು ಬರದಿದ್ದರೂ ಚಿಂತೆಯಿಲ್ಲ , ತಂಗಿಗೆ ಅದೂ ಬೇಕು. ತಂಗಿಯ ಈ ತರಹದ ಹಠಗಳಿಂದ ಪಾಪ ಅಕ್ಕ ಎನ್ನುವವಳು ಎಷ್ಟೆಲ್ಲಾ ತ್ಯಾಗ ಮಾಡಬೇಕಾಗುತ್ತದೆ. "ನೀ ದೊಡ್ದವಳಲ್ಲವ ಹೊಂದಿಕೊಂಡು ಹೋಗು" ಎಂದು ಹಿರಿಯರ ಉಪದೇಶ ಬೇರೆ. ಎಲ್ಲದರಲ್ಲೂ ಪಾಲು ಕೊಡಬೇಕಿರುತ್ತದೆ. ಮಾಡದ ತಪ್ಪಿಗಾಗಿ ಅದೆಷ್ಟು ಸಲ ಬೈಸಿಕೊಳ್ಳುತ್ತಾರೋ ಏನೋ. ತಂಗಿಯ ತಪ್ಪಿಗಾಗಿ ಎಷ್ಟೋ ಸಲ ಬೈಸಿಕೊಳ್ಳುತ್ತಾಳೆ. ಹೊಡೆತ ಕೂಡಾ ತಿನ್ನುತ್ತಾಳೆ.

ತಂಗಿಯರು ಸುಮಾರು ಪ್ರಾಥಮಿಕ ಶಿಕ್ಷಣ ಮುಗಿಸಿ , ಹತ್ತನೇ ತರಗತಿಯವರೆಗೆ  ಬರುವವರೆಗೂ ಅಕ್ಕಂದಿರು ತಮ್ಮ ಜೊತೆಗೆ ಸೇರಿಸಿಕೊಳ್ಳುವುದಿಲ್ಲ. ಆಗೆಲ್ಲ ಅಕ್ಕ ವೈರಿಯಂತೆ ಕಾಣುತ್ತಾಳೆನೀ ಸಣ್ಣವಳು ನೀ ಬೇಡ ಅಂತ. ಅಮ್ಮಂದಿರು ಅವಳನ್ನೂ ಕರೆದುಕೊಂಡು ಹೋಗೆ ಅಂದ್ರು ಕೂಡಾ "ಹೋಗಮ್ಮ ಅವಳು ನನ್ನ ಜೊತೆ ಬರುವುದು ಬೇಡ" ಅಂತ ಹೇಳಿ ಹೊರಟು ಬಿಡುತ್ತಾರೆ. . ಅಕ್ಕನ ಬಗ್ಗೆ ಚಾಡಿ ಹೇಳಿ ಅಕ್ಕನಿಗೆ ಬೈಸುವುದೆಂದರೆ ಒಂಥರಾ ಖುಷಿ ಇರುತ್ತದೆ.ಆ ವಯಸ್ಸಿನಲ್ಲಿ. ಅಕ್ಕ ತಂಗಿಯರ ನಡುವೆ ವಾಕ್ ಯುದ್ದಗಳು ಸಾಮಾನ್ಯ ಅವಾಗ. ಕೆಲವೊಮ್ಮೆ  ಹೊಡೆದಾಟಗಳೂ  ನಡೆಯುತ್ತವೆ.ಅಕ್ಕನಿಗೆ ಸಣ್ಣದಾಗಿದ್ದೋ ಅಥವಾ ಅವಳು ಕಾಲೇಜಿಗೆ ಹಾಕದ ಡ್ರೆಸ್ ಗಳನ್ನೂ ನೀನು ಹಾಕಿಕೊ ಅಂತ ಅಮ್ಮ ಕೊಟ್ಟರೆ  ತಂಗಿಯೆದೆಯಲ್ಲಿ ಸಣ್ಣ ಅಸಮಾಧಾನ. ಅಕ್ಕನಿಗೆ ಒಂದು ಹೊಸ ಡ್ರೆಸ್ ತಂದುಕೊಟ್ಟರೂ ಅಕ್ಕನ ಬಗೆಗೊಂಚೂರು ಅಸೂಯೆ. 
 
ತಂಗಿ ಕಾಲೇಜ್ ಹೋಗುವಷ್ಟು ದೊಡ್ಡವಳಾದ ತಕ್ಷಣ ಅಕ್ಕ ಗೆಳತಿಯಾಗಿ ಬಿಡುತ್ತಾಳೆ. ಬಹುಶಃ ಆವಾಗೊಂದು ಸಣ್ಣ ಮೆಚುರಿಟಿ ಬಂದಿರುತ್ತದೆ ಎಂಬ ಕಾರಣಕ್ಕಿರಬೇಕು. ಅಕ್ಕಂದಿರು ಮೆಚ್ಯೂರ್ಡ್ ಆಗಿರುತ್ತಾರಲ್ಲ. ಈ ತಂಗಿಯರೂ ಅಷ್ಟೇ ಅಲ್ಲಿವರೆಗೂ ಅಕ್ಕನ ಮಾತುಗಳ ವಿರುದ್ಧವೇ ಹೋಗುತ್ತಾ , ಅಕ್ಕ ಹೇಳಿದ್ದನ್ನು ಕೇಳದೆ ಇದ್ದವರು ಅಕ್ಕನ ಮಾತಿಗೆ ಬೆಲೆ ಕೊಡತೊಡಗುತ್ತಾರೆ. ಅಕ್ಕ ಫಸ್ಟ್ ಅಂಡ್ ಬೆಸ್ಟ್ ಫ್ರೆಂಡ್ ಆಗಿಬಿಡುತ್ತಾಳೆ. ಅಕ್ಕಂದಿರಿಗೂ ತಂಗಿಯರು ಗೆಳತಿಯರಾಗುತ್ತಾರೆ. ಗುಟ್ಟಿನ ವಿಷಯಗಳಿಗೆಲ್ಲ ಕಿವಿಯಾಗುತ್ತಾರೆ. ಅಪ್ಪ ಅಮ್ಮಂದಿರೆದುರು ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುವಂತಾಗುತ್ತಾರೆ. ಎಗ್ಸಾಮ್ಸ್  ಟೈಮ್ ನಲ್ಲಿ ಅವಳೇ ಗುರು . ಎಷ್ಟೋ ಪ್ರಾಬ್ಲೆಮ್ ಗಳಿಗೆಲ್ಲ ಸೊಲ್ಯುಷನ್ ಅವಳು. ಕಾಲೇಜಿನಲ್ಲಿನ ಎಲ್ಲ ವಿಷಯಗಳನ್ನು ಅವಳ ಕಿವಿಗೆ ಹಾಕಲೇಬೇಕು. ಕೆಲವೊಂದು ವಿಷಯಗಳನ್ನು ಹಗುರವಾಗಿ ತೆಗೆದುಕೊಂಡು ನಕ್ಕು ಬಿಡುವ ಅಕ್ಕಂದಿರು, ಕೆಲವೊಮ್ಮೆ ಥೇಟ್ ಅಮ್ಮನ ಚಾರ್ಜ್  ತೆಗೆದುಕೊಂಡು ಬೈಯ್ಯುತ್ತಾರೆ. ಕಾರಣ ಇಷ್ಟೇ ತಂಗಿ ಆಗಷ್ಟೇ ಕಣ್ಣು ಬಿಡುತ್ತಿರುವ ವಯಸ್ಸನ್ನು ಅವರು ದಾಟಿ ಬಂದಿರುತ್ತಾರೆ. ಅನುಭವದ ಆಧಾರದಲ್ಲಿ ಬುದ್ದಿ ಹೇಳುತಾರೆ. ಎಷ್ಟೋ ಸಲ ನನಗಾದಂತೆ ತಂಗಿಗೆ ಆಗಬಾರದು ಎಂಬ ಕಳಕಳಿ ಇರುತ್ತದೆ. 

ಹೀಗೆಯೇ ಅಕ್ಕ ಗೆಳತಿಯಾಗಿ , ಅಮ್ಮನಾಗಿರುವಾಗ, ಅಕ್ಕನ ಮದುವೆಯ ಮಾತುಗಳು ಶುರು. ಮನೆಯಲ್ಲಿ ಮದುವೆ ಸಂಭ್ರವೇನೋ ನಿಜ. ಆದರೆ  ಮಾತು ಮಾತಿಗೂ ಅಕ್ಕ ಅಕ್ಕ ಎಂದು ಕರೆಯುತ್ತಿರುವಾಗ ಇನ್ನು ಅವಳು ಇಲ್ಲಿರುವುದಿಲ್ಲ ಎನ್ನುವ ಬೇಸರ ಶುರು. ತನ್ನೊಂದಿಗೆ ಮಾತು ಸ್ವಲ್ಪ ಕಡಿಮೆ ಮಾಡಿ ಮದುವೆಯಾಗುವವನ ಜೊತೆ ಜಾಸ್ತಿ ಮಾತನಾಡುತ್ತಾಳೆ ಎಂಬ ಕಾರಣಕ್ಕೆ ಭಾವನಾಗಿ ಬರುವವನ ಮೇಲೆ ಅಸೂಯೆ, ತನ್ನ ಜಾಗವನ್ನು ಇಂಚಿಂಚಾಗಿ ಆಕ್ರಮಿಸಿಕೊಳ್ಳುವನನ ಬಗೆಗೆ ಈರ್ಷ್ಯೆ. ಇಷ್ಟಿದ್ದರೂ ಅಕ್ಕನ ಮದುವೆಯಲ್ಲಿ ಹಿರೋಯಿನ್ ಗಳಂತೆ ಮೆರೆದಾಟ. ಆಮೇಲೆ  ತಬ್ಬಿ ಅತ್ತು  ಕಳಿಸಿಕೊಡುವಾಗ ನೋವಾದರೂ ಹೊಸ ಮನೆಯಲ್ಲಿ ಸಂತೋಷವಾಗಿರುತ್ತಾಳಲ್ಲ ಎನ್ನುವ ಭರವಸೆ. ಮದುವೆಯಾದ ಅಕ್ಕ ಮನೆಗೆ ಬರುತ್ತಾಳೆಂದರೆ ಮತ್ತೆ ಮನೆಯಲ್ಲಿ ಸಂಭ್ರಮ. ಅವತ್ತು ರಾತ್ರಿ ಅಕ್ಕನ ಪಕ್ಕದಲ್ಲೇ ಹಾಸಿಗೆ ಹಾಸಿಕೊಂಡು ಗುಟ್ಟಾಗಿ ಪಿಸು ಪಿಸು ಮಾತಾಡುತ್ತಾ, ಸಣ್ಣಗೆ ಮುಸಿ ಮುಸಿ  ನಗುತ್ತಾ , ಅಮ್ಮನೋ, ಅಪ್ಪನೋ , " ಸಾಕು ಮಲಗ್ರೆ ಲೇಟ್ ಆಯ್ತು . ನಾಳೇನು ದಿನ ಇದೆ " ಇದೆ ಎಂದಾಗ ಒಲ್ಲದ ಮನಸ್ಸಿಂದ ಮುಸುಕೆಳೆದುಕೊಳ್ಳುವ ಮಜವೇ ಬೇರೆ.

ಚಾಂದೊಂಕಾ ತಾರೊಂಕಾ ಸಬ್ ಕಾ ಕೆಹನಾ ಹೇ
ಏಕ್ ಹಜಾರೋನ್ ಮೇ ಮೇರಿ ಬೆಹನಾ ಹೇ
"ಸಾರೀ ಊಮಾರ್ ಹಮೆ ಸಂಘ್ ರೆಹನಾ ಹೇ" ಅಂತ ಹಾಡುವುದರಲ್ಲೇ ಏನೋ ಖುಷಿಯಿದೆ.

(ದಿನಾಂಕ ೨೯.೦೧.೨೦೧೩ ರ ಲವಲವಿಕೆಯಲ್ಲಿ ಪ್ರಕಟವಾಗಿತ್ತು )

11 comments:

 1. Good one, read in VK LVK itself :) Write more..

  ReplyDelete
 2. ಅಕ್ಕರೆಯ ಅಕ್ಕಂದಿರು - ಪುಟಾಣಿ ಅಮ್ಮಂದಿರು...ತಮ್ಮಂದಿರ ಪಾಲಿಗೆ ಕೂಡಾ...
  ಚಂದದ ಭಾವ ಬರಹ ಸಂಧ್ಯಾ...

  ReplyDelete
 3. ದೇವರು ತಾಯಿಯನ್ನು ಸೃಷ್ಟಿಸಿದ ಮೇಲೆ ಸವಾಲಾಗಿದ್ದು ತಾಯಿಗೆ ಸಮಾನವಾದ ಇನ್ನೊಂದು ಜೀವ...ತಾಯಿಗಿಂತ ದೇವರಿಲ್ಲ ಅಂತ ಗೊತ್ತಿದ್ದ ದೇವನಿಗೆ ಸುಲಭದ ದಾರಿ ಕಂಡದ್ದು ಅಕ್ಕನ ಸೃಷ್ಟಿ...ಅಪ್ಪನಿಗೆ ಸಮಾನವಾಗಿ ಆದದ್ದು ಅಣ್ಣನ ಸೃಷ್ಟಿ...

  ಎಂಥಹ ಸುಮಧುರ ಲೇಖನ..! ಅಕ್ಕ ಎನ್ನುವ ತಾಯಿಯ ಸ್ವರೂಪದ ಬಗ್ಗೆ ಎಷ್ಟು ಬಗೆದರೂ, ಬರೆದರೂ ಮುಗಿಯದ ಮಮತೆಯ ಕಡಲು ಆ ಪಾತ್ರ...ಬಾಲ್ಯಾವಸ್ಥೆಯಿಂದ ಅರಿವಾಗುವ ತನಕ ನಡೆಯುವ ಮನಸ್ಸಿನ ಸುಕೋಮಲ ಮಾತುಗಳನ್ನು ಚಿತ್ರೀಕರಿಸುವ ರೀತಿ ತುಂಬಾ ಹಿತ ನೀಡುತ್ತದೆ. ಅಂಥಹ ಒಬ್ಬ ಅಕ್ಕಳನ್ನು ಪಡೆದ ನಾನು ಕೂಡ ಭಾಗ್ಯವಂತ..ನನ್ನ ಇವತ್ತಿನ ಸ್ಥಿತಿಗತಿಗೆ ಪ್ರತ್ಯಕ್ಷವಾಗಿ ಅಪ್ಪ ಅಮ್ಮನ ಜೊತೆ ನಿಂತು ಸಲಹಿದ ನನ್ನ ಅಕ್ಕನಿಗೆ ಶುಭಾಶಯಗಳನ್ನು ಹೇಳುತ್ತಾ...ನಿನ್ನ ಲೇಖನದಲ್ಲೂ ಮಿಂಚುತ್ತಿರುವ ಅಕ್ಕನ ಪಾತ್ರಕ್ಕೆ ನನ್ನ ನಮನಗಳು .. . ಸುಂದರ ಲೇಖನ ಎಸ್.ಪಿ.

  ReplyDelete
 4. ಸಂಧ್ಯಾ ಚೆನ್ನಾಗಿ ಬರೆದಿದ್ದಿಯಾ...Congrts..
  ನಿನ್ನ ಲೇಖನ ಮತ್ತೆ ಎಲ್ಲೊ ಹಿಂದಿನ ದಿನಕ್ಕೆ ಎಳೆದುಕೊಂಡು ಹೋಗುತ್ತದೆ..ನನಗೆ ಸ್ವಂತ ಅಕ್ಕ ಇಲ್ಲದೆ ಇದ್ದರೂ ಅಂತಹದೇ ಅಕ್ಕರೆಯ ಅಕ್ಕ ಸಿಕ್ಕಿದ್ದರು.ಮೊದಲು ಗೆಳತಿಯಾಗಿ ಆಮೇಲೆ ಜೀವದ ಗೆಳತಿಯೇ ಆಗಿ ಹೋದರು... ಪ್ರತಿ ದಿನ ಒಂದೆರಡು ಘಂಟೆಯಾದರೂ ಮಾತಾಡಿಲ್ಲವೆಂದರೆ ಮನಸ್ಸಿಗೆ ಸಮಾದಾನವಿಲ್ಲ.. ಇಂತಹ ಅಕ್ಕನಿಗೆ ಮದುವೆ ಎಂದಾಗ ನಾನು ಕುಸಿದಿದ್ದೆ. ಅವಳು ಕೂಡ. ದಿನ ಸಂಜೆ ಸೇರಿ ಹರಟುತ್ತಾ ಇದ್ದವರು, ಅಳುವುದಕ್ಕೆ ಶುರು ಮಾಡಿದ್ದೆವು...
  ನೆನಪಿನ ಸುರುಳಿ ಬಿಚ್ಚಿಕೊಂಡಿತು ನಿನ್ನ ಚಂದದ ಬರಹದಿಂದ...

  ReplyDelete
 5. akkana nenapu tariside sandya...

  ReplyDelete
 6. very lovely... same to same.. my sis doing d same and i too had same feelings..

  "ಹಾಸಿಗೆ ಹಾಸಿಕೊಂಡು ಗುಟ್ಟಾಗಿ ಪಿಸು ಪಿಸು ಮಾತಾಡುತ್ತಾ, ಸಣ್ಣಗೆ ಮುಸಿ ಮುಸಿ ನಗುತ್ತಾ , ಅಮ್ಮನೋ, ಅಪ್ಪನೋ , " ಸಾಕು ಮಲಗ್ರೆ ಲೇಟ್ ಆಯ್ತು . ನಾಳೇನು ದಿನ ಇದೆ " ಇದೆ ಎಂದಾಗ ಒಲ್ಲದ ಮನಸ್ಸಿಂದ ಮುಸುಕೆಳೆದುಕೊಳ್ಳುವ ಮಜವೇ ಬೇರೆ. "---೧೦೦% ಆಗೋದು ಹೀಗೆನೇ.

  ReplyDelete
 7. ಚೆನ್ನಾಗಿದೆ ಲೇಖನ. ಹೌದು, ಇದನ್ನು ಲವಲವಿಕೆಯಲ್ಲ್ಯೂ ಓದಿದ್ದೆ

  ReplyDelete
 8. ಇದನ್ನ ಪೇಪರ್ ನಲ್ಲಿ ಬಂದಾಗಲೇ ಓದಿದ್ದೆ ಸಂಧ್ಯಾ ಜಿ.. ಬಹಳ ಹಿಡಿಸ್ತು.
  ಅರ್ಥಪೂರ್ಣ ಲೇಖನ.

  ReplyDelete
 9. Tumba chennagide..Idannu odidaaga neevu nanna mattu nanna akkana relation nodiye idannu barediddeeri enisuvastu muddagittu.Nannade bhavanegalannu neevu vivarisddeeri/ atava nanna bhavanegalige akshara roopa kottideeri anisuvastu nanage hattiravagide ee lekhana.
  Thank you Sandhya!!! Nimma baraha manassige tumba santosha koduttade. Indu gandana jote munisikondu mood off maadi kulita nanage, ittichegaste parichayavaada nimma blog nenapaayitu. Nimma ee varegina ella lekhanagalannu oodutta kulite. Ee lekhana talupuva varege nanna manassu tumba haguravaagittu. Idanna copy paste maadi nanna akkanige kalisuttiddene(nimma oppige ide endu bhavisi). Eega gandana mele munisilla. Office mugisi baruva avarannu sanje aatmeeyavaagi baramaadikollabeku emba nirdhara maadi kootiddene. Evellavu nimma lekhanada mahime. Tumba Dhanyavaadagalu.. Keep writing..

  ReplyDelete