Friday 12 April 2013

ಹೇಳು ಇದು ಪ್ರೇಮ ಕಥೆಯಾ ??



ಹಾಗೆ ಒಂದು ದಿನ . ಅದೊಂದು ಪ್ರೇಮ ಪುಸ್ತಕ, ಎದೆಗವಚಿ ನಿದ್ದೆ ಹೋದೆ. ಮುಸ್ಸಂಜೆ ಸಮಯ. ಕಿಟಕಿಯಲ್ಲಿ ಯಾರೋ ಇಣುಕಿದಂತಾಯ್ತು .
 ನೋಡಿದರೆ ಸೂರ್ಯ ..!! 
ಚಂದ್ರನ ಕಿಟಕಿಯ ಇಣುಕುವ ಪರಿ ಗೊತ್ತು . ಇದೇನು ಸೂರ್ಯ ಬಂದಿದ್ದು??!! ಎಂದುಕೊಂಡೆ. 
ಹೊತ್ತಲ್ಲದ ಹೊತ್ತಲ್ಲಿ ಮಲಗಿದರೆ ಇನ್ನೇನಾಗುತ್ತೆ ಎಂದು ಮನಸ್ಸು ಹೇಳಿತು. 
ನೋಡು ನೋಡುತ್ತಿದ್ದಂತೆ ಸೂರ್ಯನಿಗೆ ಕಣ್ಣು , ಮೂಗು , ಬಾಯಿ  ಒಂದು ಗಿರಿಜಾ ಮೀಸೆ  ಎಲ್ಲವೂ  ಮೂಡಿದವು . ನಿಧಾನವಾಗಿ ನನ್ನ ಮಾತನಾಡಿಸತೊಡಗಿದ.
 "ಹೋಗು ನನಗೆ ನಿದ್ದೆ ಮಾಡಬೇಕು" ಎಂದು ಕೆನ್ನೆಯುಬ್ಬಿಸಿದೆ.  
"ನೀ ಆರಾಮವಾಗಿ ನಿದ್ದೆ ಮಾಡುವೆಯಂತೆ ಮೊದಲೊಂದು ಕಥೆ ಹೇಳುವೆ ಕೇಳು.. ಇದು ಪ್ರೇಮ ಕಥೆಯಾ ?? ನೀ ಹೇಳು" ಎಂದು ಶುರುವಿಟ್ಟುಕೊಂಡ. 
ಅವ ಹೇಳುತ್ತಿರುವಂತೆ ಕಲ್ಪನೆಯ ಭಿತ್ತಿಗಳಲ್ಲಿ ಚಿತ್ರ ಮೂಡುತ್ತಾ ಹೋಯಿತು .. 

ಅಗೋ ನೋಡು ಆ ನದಿಯಲ್ಲಿ ಒಂದು ಎತ್ತರದ ಅಟ್ಟಣಿಗೆ ಕಾಣುತ್ತಿದೆಯಾ ? ಅಲ್ಲಿ ಕಾಲು ಇಳಿ ಬಿಟ್ಟು ಕುಳಿತರೆ ಪಾದ ಮುಳುಗುವಷ್ಟು ನೀರು ಕಾಲಿಗೆ ತಾಕುತ್ತೆ. ಅಲ್ಲೊಬ್ಬ ಹುಡುಗ , ಪಕ್ಕದಲ್ಲೊಬ್ಬಳು ಹುಡುಗಿ ಪ್ರತಿದಿನ ಕುಳಿತು  ನನ್ನ ನೋಡುತ್ತಿದ್ದರು. ಅವರಿಬ್ಬರೂ  ಸ್ನೇಹಿತರಿರಬಹುದೇನೋ ಗೊತ್ತಿಲ್ಲ, ಪರಿಚಿತರಂತೂ ಹೌದು. ಪ್ರೇಮಿಗಳಂತೆ ಅಂತೂ ಇರಲಿಲ್ಲ.  ಹುಡುಗನೋ ಪಕ್ಕಾ  practical . ಹುಡುಗಿಗೋ ಬದುಕಿನ ವಾಸ್ತವತೆಯ ಜೊತೆಯಲ್ಲೇ ಮಿಳಿತವಾಗುವ ಭಾವುಕತೆಯೂ ಇಷ್ಟ. ಆತನಿಗೆ  ಪ್ರಕೃತಿಯಲ್ಲಿ . ಹಕ್ಕಿಗಳ ಹಾರುವಿಕೆಯಲ್ಲಿ , ನೀರ ಹರಿಯುವಿಕೆಯಲ್ಲಿ , ಮುಳುಗೋ ಸೂರ್ಯನಲ್ಲಿ ಏನೇನೂ ವಿಶೇಷವಿಲ್ಲ. ಆದರೂ ನೋಡುತ್ತಾ ಕೂರುತ್ತಾನೆ. ಅವಳಿಗೋ ಪಕ್ಕದಲ್ಲಿ ಕುಳಿತು ಅವನ ನೋಡುವುದೇ ಖುಷಿ.ಅದು ಪ್ರೀತಿಯಲ್ಲ. ಸ್ನೇಹವನ್ನೂ ಮೀರಿದ ಆ ಭಾವಕ್ಕೆ ಹೆಸರಿಲ್ಲ.ನನ್ನ ಮತ್ತು ಭೂಮಿಯ ಸಂಬಂಧದಂತೆ.   ಅವರಿಬ್ಬರೂ ಮಾತನಾಡಿಕೊಳ್ಳುತ್ತಾರ ? ಗೊತ್ತಿಲ್ಲ .ಭೂಮಿಯನ್ನೇ  ಕೇಳಬೇಕೆನೋ.   ಆದರೆ ನೀ ನನ್ನ ತೋಳು ತಬ್ಬಿದ ದಿನ ನಾನಿಲ್ಲಿಂದ ಎದ್ದು ಹೊರಡುತ್ತೇನೆ ಎಂಬುದು ಹುಡುಗನ ಮನದ ಮಾತಾದರೆ , ನನ್ನದೇ ಆದ ಬದುಕು ನನ್ನ ಕರೆಯುವವರೆಗೂ ನಿನ್ನ ಪಕ್ಕದಲ್ಲಿ  ನಿನ್ನ ತೋಳು ತಬ್ಬದೆ ನಾ ಕೂರಬಲ್ಲೆ  ಎಂಬ ಮೌನ ಪ್ರಮಾಣ ಹುಡುಗಿಯದು.  .ಆದರೂ ನನಗೆ  ಅವರನ್ನು  ನೋಡುವ ಖುಷಿ.  ಅವರಿಗಾಗಿ ಎರಡು ನಿಮಿಷ  ತಡೆದು ಮುಳುಗಲಾ ?? ಎನ್ನುವಷ್ಟು ಇಷ್ಟವಾಗಿಬಿಟ್ಟಿದ್ದರು. ದಿನಗಳು ಹೀಗೆ ಸಾಗುತ್ತಾನೆ ಇದ್ದವು. ಒಂದು ದಿನ ಅದ್ಯಾವ ಕಾರ್ಮೋಡ ನನ್ನ ಕವಿದಿತ್ತೋ ಗೊತ್ತಿಲ್ಲ. ಮೋಡ ಸರಿದು ಬೆಳಕು ಬರುವ ಮೊದಲೇ  ಹುಡುಗಿ  ಏಕಾಂಗಿ. ಯಾವ ಕರಿ ಮೋಡಗಳ ಭಯ ಕಾಡಿತೋ ಏನೋ ಆಕೆ ಆತನ ತೋಳು ತಬ್ಬಿಬಿಟ್ಟಿದ್ದಳು. ಹುಡುಗ ಎದ್ದು ನಡೆದಿದ್ದ ಒಂದು ಮಾತೂ ಹೇಳದೆ. ಕ್ಷಮೆಯ ಇವಳ ಮಾತನ್ನೂ ಆಲಿಸದೆ. 

ಅವಳದೇ ಆದ ಬದುಕಿನ್ನು ಅವಳನ್ನು ಕರೆದಿರಲಿಲ್ಲ. ಅವನ ನೋಡದೆ ಬದುಕುವುದು ಗೊತ್ತಿರಲಿಲ್ಲ .ನದಿ ತೀರದಲ್ಲಿ ಈಗ ಅವಳು ಏಕಾಂಗಿ. ಆದರೂ ಆಕೆಯ ಮೌನ ಒಡೆಯಲೇ ಇಲ್ಲ. ಕಾಯುವ ಮನಸ್ಸು ಕರಗಲೇ ಇಲ್ಲ.  ಅಕೆಯದೋ ಭೂಮಿಯ ತಾಳ್ಮೆ. ಹುಡುಗನೋ ನಿರ್ಧಾರದಲ್ಲಿ ಬಂಡೆ. ಆತನಿಗೆ ಮುಂದೆ ನಡೆಯುವುದೊಂದೇ ಗೊತ್ತು. ಹಿಂದೆ ತಿರುಗಿ ನೋಡಲಾರ . ಮತ್ತೆ ಹಿಂದಿರುಗಿ ಬರಲಾರ. ಆದರೆ ಆಕೆಯ ಕಾಯುವಿಕೆ ಮಾತ್ರ ನಿರಂತರ ನಾನು ಮುಳುಗಿ ಮತ್ತೆ ಹುಟ್ಟುವಂತೆ. ಮತ್ತೆ ಅವನು ಬರಬಹುದೇನೋ ಎರಡು ನಿಮಿಷ ಕಾಯಲಾ??  ಎನಿಸುವುದುಂಟು. ಆದರೆ ನಾನು ಹಾಗೆ ಮಾಡಲಾರೆನಲ್ಲ.ಅವರಲ್ಲಿಯೇ ನಾನು ನನ್ನನ್ನು ಮತ್ತು ಭೂಮಿಯನ್ನು ಕಾಣುತ್ತಿದ್ದೆ. ಅವಳೋ ನನ್ನನ್ನು ಮುತ್ತಿಕ್ಕಲಾರಳು. ನಾನೂ ಅವಳನ್ನು ತಬ್ಬಲಾರೆ. ನಾವಿಬ್ಬರೂ ದೂರವಿದ್ದರೂ ಹತ್ತಿರ.. ಅವರೋ ಹತ್ತಿರವಿದ್ದೂ ದೂರ ದೂರ. ಎಲ್ಲ ಮನಸ್ಸುಗಳೂ ಸಾಗರದಷ್ಟು ನಿಗೂಢವೇ ಎನಿಸುತ್ತಿದೆ. 
 ಹೇಳು ಇದು ಪ್ರೇಮ ಕಥೆಯಾ ?? ಎಂದ. 

ಉತ್ತರವಿರಲಿಲ್ಲ ನನ್ನ ಬಳಿ. ನಾನೂ  ಎಚ್ಚರಗೊಂಡು , ನನಗೂ  ಈ ಪ್ರೀತಿ  ಮಧ್ಯಾಹ್ನದ  ನಿನ್ನಂತೆ ಸುಡು ಬಿಸಿಲಾ ?? ಸಂಜೆ ಬಾನಿನ ರಂಗಿನೋಕುಳಿಯಾ ? ಅಥವಾ ನೀ ಮುಳುಗಿದ ಮೇಲೆ ಬರುವ ತಂಪು ಬೆಳದಿಂಗಳಾ ?? ಎಂದು ಗೊತ್ತಿಲ್ಲ  ಎನ್ನುವಷ್ಟರಲ್ಲಿ ಮಾಯವಾಗಿದ್ದ. ನಾನೂ  ಈಗ ಸೂರ್ಯನನ್ನು ಹುಡುಕಬೇಕಿದೆ. 
   

41 comments:

  1. ವಾಹ್ !!!
    ನಿಜಕ್ಕೂ ಸುಂದರ ....
    ನನಗೂ ಕಾಡೋ ಪ್ರಶ್ನೆ ಇದೇ ಗೆಳತಿ....ಅದ್ಯಾಕೆ ತದ್ವಿರುದ್ದ ಭಾವಗಳೇ ಪ್ರೀತಿಯಾಗಿ ಬೆಸೆಯೋದು ??
    ಅವಳು ಮೌನಿಯಾದರೆ ಅವನಿಗೆ ಮಾತೇ ಬದುಕು....ಅವಳ ಭಾವಗಳ್ಯಾಕೆ ಅವನಿಗೆ ಸಿಲ್ಲಿ ?
    ಅವಳದ್ದು ಚಿಕ್ಕ ಚಿಕ್ಕ ಖುಷಿಗಳನ್ನ ಅನುಭವಿಸೋ ಮನ ಆದ್ರೆ ಅವನದ್ದು ಆಕಾಶವನ್ನೇ ಕೈಗಿತ್ತರೂ ಖುಷಿ ಪಡದ ಮನ :(
    ನಾಳೆಯ ಸೂರ್ಯಾಸ್ತಕ್ಕಾದರೂ ಅವಳ ಅವನು ಅವಳಿಗೆ ಸಿಗಲಿ ...
    ತುಂಬಾ ಇಷ್ಟವಾಯ್ತು ....ಬರೀತಾ ಇರಿ

    ReplyDelete
  2. ತುಂಬಾ ಸುಂದರವಾದ ಬರಹ. ಚೆನ್ನಾಗಿದೆ.

    ReplyDelete
  3. ಸುಂದರವಾಗಿದೆ.

    ReplyDelete
  4. ನಿಜ ಹೇಳ್ಬೇಕು ಅಂದ್ರೆ ಅಂಥಾ ಇಷ್ಟ ಏನು ಆಗ್ಲಿಲ್ಲ ನಂಗೆ...ಈ ಭಾವದ ಮಜಲುಗಳು ನನಗರ್ಥವಾಗದ್ದೇನೋ..
    ಕಥೆಯ ಆರಂಭ ಹೊಸತನದಿಂದ ಕೂಡಿದೆ,ಜೊತೆಗೆ ಸೂರ್ಯನನ್ನು ವಾಚಕನನ್ನಾಗಿಸಿ ಕಥೆ ಹೇಳಿದ್ದು ಇದೇ ಮೊದಲಿರಬೇಕು...ಅದೊಂದು ಪ್ರಯೋಗ ಗಮನ ಸೆಳೆಯಿತು...
    ಬರೆಯುತ್ತಿರಿ..
    ನಮಸ್ತೆ :)

    ReplyDelete
    Replies
    1. Thank you ಚಿನ್ಮಯ್..
      ಪ್ರೀತಿ ಸ್ನೇಹಗಳಲ್ಲದೆ ಇರುವ ಇನ್ನೊಂದು ಭಾವಕ್ಕೂ ಒಂದು ಸ್ಪಷ್ಟ ರೂಪ ಕೊಡುವ ಪ್ರಯತ್ನವಿಷ್ಟೇ ಇದು. ಭಾವ ಸ್ಪಷ್ಟವಾದರೆ ಪ್ರೀತಿಯಲ್ಲಿ ಮುಕ್ತಾಯ. ಅಸ್ಪಷ್ಟವಾಗಿದ್ದರೂ ಸ್ನೇಹಕ್ಕೆನೂ ಧಕ್ಕೆಯಿಲ್ಲ

      Delete
  5. ಲಗಾನ್ ಚಿತ್ರದಲ್ಲಿ ಭುವನ್ ಬ್ರಿಟಿಷ್ ಹುಡುಗಿಗೆ ರಾಧಾಳ ಬಗ್ಗೆ ಹೇಳುತ್ತಾ "ರಾಧ ಕೃಷ್ಣ ಇಬ್ಬರು ತಾವರೆ ಎಲೆ ಹಾಗು ಅದರ ಮೇಲಿನ ನೀರು...ಸೇರಲೂ ಇಲ್ಲ....ದೂರಾಗಲೂ ಇಲ್ಲ..." ಅದೇ ಭಾವ ಈ ಲೇಖನ ಓದಿದಾಗ ಸಿಕ್ಕಿತು...ಪ್ರೇಮ ಕಥೆಗಳಲ್ಲಿ ಪ್ರತಿ ಭಾರಿಯೂ ಪ್ರೇಮಿಗಳು ಒಂದಾಗಲೇ ಬೇಕಿಲ್ಲ...ಮನಸಲ್ಲಿ ಒಂದಾಗಿದ್ದರೆ ಸಾಕು...ನಿನ್ನ ಲೇಖನದ ನಾಯಕ ನಾಯಕಿ ಕೂಡ ಹಾಗೆಯೇ...ಇದೊಂದು ರೀತಿ ಪೂರ್ಣ ಪ್ರಜ್ಞೆ ಬರಿಸುವ ಪ್ರೇಮದಲ್ಲಿನ ಪ್ರೀತಿಯ ಕಥೆ!

    ReplyDelete
    Replies
    1. "ಪ್ರೇಮ ಕಥೆಗಳಲ್ಲಿ ಪ್ರತಿ ಭಾರಿಯೂ ಪ್ರೇಮಿಗಳು ಒಂದಾಗಲೇ ಬೇಕಿಲ್ಲ...ಮನಸಲ್ಲಿ ಒಂದಾಗಿದ್ದರೆ ಸಾಕು." ನಿಜ, ಪ್ರೇಮಿಗಳು ಒಂದಾದರೆ ಮಾತ್ರ ಅದು ಪ್ರೇಮ ಕಥೆಯಾಗಬೇಕೆಂದಿಲ್ಲ. "ಮುಂಗಾರು ಮಳೆ " ಚಿತ್ರ ಇದಕ್ಕೆ ಉತ್ತಮ ಉದಾಹರಣೆಅಲ್ಲವೇ?

      Delete
    2. ಸುಂದರ ವಿಶ್ಲೇಷಣೆ ಗಣೇಶ್ ಸರ್. ಕನ್ನಡ ಚಿತ್ರ ಅನುಪಮದಲ್ಲಿ ಈ ಭಾವವನ್ನು ಇನ್ನಷ್ಟು ಗಾಢವಾಗಿ ತೋರಿಸಿದ್ದಾರೆ. ಅನಂತನಾಗ್, ಮಾಧವಿ ಈ ಈ ನೋವನ್ನು ಮುಖದಲ್ಲಿ ತೋರುವ ಪರಿ ನಿಜಕ್ಕೂ ಸೂಪರ್

      Delete
  6. ತುಂಬಾ ಚೆನ್ನಾಗಿದೆ. ಹೊಸ ಪ್ರಯೋಗ ಹಿಡಿಸಿತು. ಆದರೆ ಅವರಿಬ್ಬರ ನಡುವಿದ್ದದ್ದು ಸ್ನೇಹವೇ, ಪ್ರೀತಿಯೇ ನನಗೂ ತಿಳಿಯಲಿಲ್ಲ.
    ಇದೇ ರೀತಿ ಹೊಸ ಹೊಸ ಪ್ರಯೋಗಗಳು ನಿಮ್ಮಿಂದ ಚೆನ್ನಾಗಿ ಮೂಡಿಬರುತ್ತಿರಲಿ. ಶುಭವಾಗಲಿ.

    ReplyDelete
  7. ತುಂಬಾ ಚೆನ್ನಾಗಿದೆ:)

    ReplyDelete
  8. ಕೆಲ ಪ್ರೇಮ ಕತೆಗಳಿಗೆ ಉತ್ತರವೇ ಇರುವುದಿಲ್ಲ. ಅವು ಒಪ್ಪಿಕೊಳ್ಳಲಾರದ ಅರಗಿಸಿಕೊಳ್ಳಲಾರದ ಸತ್ಯಗಳು. ಒಂದೇ ಗುಕ್ಕಿನಲ್ಲಿ ಓಡಿಸುವ ಮತ್ತು ಪದೇ ಪದೇ ಮೆಲಕು ಹಾಕಿಸುವ ನಿಮ್ಮ ತಂತ್ರಗಾರಿಕೆ ಹೀಗೆ ಮುಂದುವರೆಯಲಿ...

    ReplyDelete
  9. chanda baradde sis.... superb....

    ಅವಳದೇ ಆದ ಬದುಕಿನ್ನು ಅವಳನ್ನು ಕರೆದಿರಲಿಲ್ಲ. ಅವನ ನೋಡದೆ ಬದುಕುವುದು ಗೊತ್ತಿರಲಿಲ್ಲ .ನದಿ ತೀರದಲ್ಲಿ ಈಗ ಅವಳು ಏಕಾಂಗಿ. ಆದರೂ ಆಕೆಯ ಮೌನ ಒಡೆಯಲೇ ಇಲ್ಲ. ಕಾಯುವ ಮನಸ್ಸು ಕರಗಲೇ ಇಲ್ಲ. ಅಕೆಯದೋ ಭೂಮಿಯ ತಾಳ್ಮೆ. ಹುಡುಗನೋ ನಿರ್ಧಾರದಲ್ಲಿ ಬಂಡೆ. I like it.....

    ReplyDelete
  10. Nice.. Sandhya eno baraddu andre , ega odade iple aktille..!! ast cholo irtu:).

    ReplyDelete
  11. ವಾಹ್ ಅನಿಸುವಷ್ಟು ಚಂದ ಬರೆದಿದ್ದಿಯಾ... ಸುಂದರ ಕಲ್ಪನೆ.. ಸೂರ್ಯನನ್ನು ಮಾತಾಡಿಸಿದ್ದು ಖುಷಿಯಾಯಿತು..
    ಚಂದದ ಕತೆಗಾಗಿ ಅಭಿನಂದನೆಗಳು ಡಿಯರ್.. :)

    ReplyDelete
  12. super sandhya "ನೀ ನನ್ನ ತೋಳು ತಬ್ಬಿದ ದಿನ ನಾನಿಲ್ಲಿಂದ ಎದ್ದು ಹೊರಡುತ್ತೇನೆ ಎಂಬುದು ಹುಡುಗನ ಮನದ ಮಾತಾದರೆ , ನನ್ನದೇ ಆದ ಬದುಕು ನನ್ನ ಕರೆಯುವವರೆಗೂ ನಿನ್ನ ಪಕ್ಕದಲ್ಲಿ ನಿನ್ನ ತೋಳು ತಬ್ಬದೆ ನಾ ಕೂರಬಲ್ಲೆ ಎಂಬ ಮೌನ ಪ್ರಮಾಣ ಹುಡುಗಿಯದು " eee lines tumba ista atu.. yakanta gottilla... nice... all d best..

    ReplyDelete
  13. ಮಾತುಗಳಿಲ್ಲ ಕಣೇ ನನ್ನಲ್ಲಿ...ಎಲ್ಲೋ ಕಳೆದು ಹೋಗಿದ್ದೇನೆ...ನಿಜಕ್ಕೂ ಯಾವುದೋ ಮಧುರ ಯಾತನೆ ಕಾಡಿದಂತಿದೆ...ನೀ ನನ್ನ ತೋಳು ತಬ್ಬಿದ ದಿನ ನಾನಿಲ್ಲಿಂದ ಎದ್ದು ಹೊರಡುತ್ತೇನೆ ಎಂದ ಹುಡುಗನ ಮನದ ಒಳ ವೇದನೆ ಏನಿದೆಯೋ...ಅಂಥ ಮುದ್ದು ಹುಡುಗಿಯ ಬಿಟ್ಟು ಎದ್ದು ಹೋಗುವಂಥ ಬಂಡೆ ಮನಸಿನ ಹಿಂದೆ ಅದ್ಯಾವ ಅಸಹಾಯಕತೆ ಇದೆಯೋ...ಚಿರಕಾಲ ಕಾಯುತ್ತೇನೆಂಬ ಹುಡುಗಿಯ ಕಣ್ಣಲ್ಲಿ ಅದೆಷ್ಟು ಒಲವಿದ್ದೀತು...ಸಾವಿನೂರಿನವರೆಗೆ ಕೈಹಿಡಿದು ನಡೆಯಬೇಕಿದ್ದ ಗೆಳೆತನ ಹೆಗಲು ತಬ್ಬಿದ್ದಕ್ಕೇ ಮುರಿದು ಹೋದದ್ದೇಕೆ...
    ಸಂಧ್ಯಾ ಮರೀ ನಿಜಕ್ಕೂ ತುಂಬಾ ತುಂಬಾ ಇಷ್ಟ ಆಗೋತು ಈ ಬರಹ...ಎಲ್ಲೋ ಏನೋ ನನ್ನೀ ಬದುಕಿನ ಭಾವದಂತೆ ಕಾಡುತಿದೆ...ಇನ್ನೇನು ಹೇಳಲಾರೆ...ಮನಸು ಮೌನಿ....

    ReplyDelete
  14. Tumba Chennagi baredidira Sandhya!. Facebook nalli nanna geleya nimma ondu aNkaNavannu post maadidru, aa mulakha nimma kathegaLanu odduva bhagya sikthu! All the very best in all your future endeavours.

    Tumba DhanyavaadagaLu,
    Manjunath Prabhu

    ReplyDelete
  15. ಸಖತ್ತಾಗಿದ್ದು..
    Sorry for late reply :-(

    ReplyDelete