Saturday, 4 April 2015

ನೀ ಕೊಡಿಸಿದ ಅಚ್ಚ ಬಿಳುಪಿನ ಸೀರೆಯ ಮೇಲೆ ಕೈ ಆಡಿಸುತ್ತಿದ್ದರೆ ಬಣ್ಣ ಬಣ್ಣದ ಕನಸುಗಳ ನುಣುಪು ಕೈ ಸೋಕುತ್ತಿದೆ ....


ಖಾಲಿ ಖಾಲಿಯಾಗಿತ್ತು ಹೈವೇ. ಇಳಿಸಂಜೆಯ ನೇಸರ ನೆರಳ ಬೆಳೆಸುತ್ತಿದ್ದ. ಹೊಂಬಣ್ಣದ ಧೂಳಲ್ಲಿ ಪಾದ ತೋಯಿಸಿಕೊಳ್ಳಲು ನೀನಿರಲಿಲ್ಲ. ಹೊತ್ತು ಮುಳುಗುವ ಮುನ್ನ ನಿರ್ಜನ ಹಾದಿಯ ಬದಿಯ ಹಸಿರಲ್ಲೂ ಹೊನ್ನು ತೂಗಿತ್ತು. ಅಲ್ಲಿ ನಿನ್ನ ಉಸಿರಿತ್ತು. 


"Golden dust on the road"-PC: Krishna Bhat

ನಿನ್ನದೇ ನೆನಪಿನಲ್ಲಿ ಹೆಜ್ಜೆಯಿಟ್ಟು ಬಂದವಳು ಈ ಮುಸ್ಸಂಜೆಯಲ್ಲಿ ನಿನ್ನ ಹೆಸರಲ್ಲಿ ದೀಪ ಹಚ್ಚಿದ್ದೇನೆ. ದೀಪವು ನಿನ್ನದೇ .. ಗಾಳಿಯು ನಿನ್ನದೇ ... ಎಂದು ಹಾಡುವ ಬದಲು ಅವನ ಹೆಸರಲ್ಲಿ ಹಚ್ಚಿದ ದೀಪವಾಗಿದ್ದರಿಂದ ಅದು ನನ್ನದೇ... ನೀ ಆರಿಸಬೇಡ ಬೆಳಕನ್ನು ಎಂದು ಗಾಳಿಯನ್ನು ಗದರಿಕೊಂಡಿದ್ದೇನೆ. ಅದೇ ... ಅದೇ ಬೆಳಕಂಥ ಕಣ್ಣುಗಳೇ ನನ್ನನ್ನು ನಿನ್ನ ಬಳಿಗೆ ಸೆಳೆದದ್ದು. ನಿಮ್ಮ ಮನೆಯಲ್ಲಿ ನನ್ನನ್ನೂ ಒಬ್ಬಳಾಗಿ ಮಾಡಿದ್ದು. ಹಾಸ್ಟೆಲ್ ನಲ್ಲಿ ಹೋಮ್ ಸಿಕ್ ಆಗಿ, ಅಳುಬುರುಕಿಯಂತೆ ಇರುತ್ತಿದ್ದವಳಿಗೆ ಮನೆ ಮರೆಸಿ ನಗು ಕಲಿಸಿಕೊಟ್ಟಿದ್ದು. ಅಮ್ಮಾ miss you. ಅಪ್ಪಾ miss you ಅಂತ ಬರೆಯುತ್ತಿದ್ದಲ್ಲೆಲ್ಲ i miss you .. i love you ಅಂತಾ ಬರೆವಂತೆ ಮಾಡಿದ್ದು. ವಿಜ್ಞಾನಿಯೊಬ್ಬ ನನ್ನೆದೆಯಲ್ಲಿ ರಾಜ್ಯಭಾರ ಮಾಡಬಲ್ಲ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಸೂರ್ಯ ,ಚಂದ್ರ , ನಕ್ಷತ್ರಗಳು ಹೇಗೆ ಉಂಟಾದವು ಎಂದು ಪ್ರಾಕ್ಟಿಕಲ್ ಆಗಿ ಹೇಳಬಲ್ಲ ನೀನು "ಆ ಬೆಟ್ಟದಲ್ಲಿ .. ಬೆಳದಿಂಗಳಲ್ಲಿ.... ಸುಳಿದಾಡಬೇಡ ಗೆಳತಿ ... " ಎಂದು ಹಾಡಲೂ ಬಲ್ಲೆ .. 


ನಿನ್ನೊಂದಿಗೆ , ನಿನ್ನವರೊಂದಿಗೆ ಕಳೆದು ಹೋಗಿದ್ದವಳಿಗೆ ಅಪ್ಪನ ಹೆಸರಿದ್ದ ಎರಡು ಟಾಟ ಸುಮೋಗಳು ಎದುರು ಬಂದು ನಿಂತಾಗಲೇ "ದುಗುಡ" ಎನ್ನುವ ಪದ ಮತ್ತೆ ಹುಟ್ಟಿಕೊಂಡಿದ್ದು. ಹತ್ತು ಎನ್ನುವಂತೆ ರಾಮಣ್ಣ ಕಣ್ಣು ಸನ್ನೆ ಮಾಡಿದ್ದ , ಮರು ಮಾತನಾಡದೆ ಹತ್ತಿ ಕುಳಿತಿದ್ದೆ . ರಾಮಣ್ಣ ಅಪ್ಪನ ಬಲಗೈ ಬಂಟ. ಅಪ್ಪ ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಕ್ಕೆ ಇರುವ ಏಕೈಕ ಜೀವಂತ ಸಾಕ್ಷಿ..! ಒಳಗಡೆ ಏನಾಗುತ್ತಿದೆ ಎಂದು ಚೂರು ಹೊರಗಡೆಯ ಪ್ರಪಂಚಕ್ಕೆ ಗೊತ್ತಾಗದಷ್ಟು ಎತ್ತರದ ಗೋಡೆ . ನಾಲ್ಕು ಜನರು ಒತ್ತಿ ಹಾಕಬೇಕಾದಂಥ ದೊಡ್ಡ ಬಾಗಿಲು . ಅದರೊಳಗಿನ ಮೂವತ್ತೆರಡಂಕಣದ ದೊಡ್ಡ ಮನೆ. ಆಚೆ ಇದ್ದವರು ಕಾಣಿಸದಂಥಹ ದೊಡ್ಡ ಮುಂಡಿಗೆ ಕಂಬಗಳು . ಎಡವಿಕೊಂಡರೆ ರಕ್ತ ಕಿತ್ತು ಬರುವಂಥ ಹೊಸಿಲುಗಳು... ಹಳೆ ಕಾಲದ ಕತ್ತಿ ಗುರಾಣಿಗಳಿಂದ ಅಲಂಕಾರಗೊಂಡ ಗೋಡೆಗಳು. ಹೊರಗಡೆಯಿಂದ ಬಂದವರಿಗೆ ಇದು ಮ್ಯುಸಿಯಮ್ ಥರ ಅನಿಸಿದರೆ ನನಗಿದು ಸ್ವರ್ಗ .. ಇದು ನಾನು ಆಡಿ ಬೆಳೆದ ಮನೆ. ಎಂದಿನಂತೆ ಭವ್ಯ ಸ್ವಾಗತವೇನೋ ಇತ್ತು. ಆದರೆ ಸಂತೋಷಿಸುವ ಮನಸ್ಸು ನನ್ನದಾಗಿರಲಿಲ್ಲ . ಯಾವುದೋ ಅವ್ಯಕ್ತ ಭಯ ಮನದಲ್ಲಿ ..

ಊಹೆ ನಿಜವಾಗಿತ್ತು . ಮನೆಯಲ್ಲಿ ಮದುವೆಗೆ ತಯಾರಿ ನಡೆಯುತ್ತಿತ್ತು. ಬಹಳ ಗಾಬರಿಯಲ್ಲಿ ನಿನಗೆ ಫೋನ್ ಮಾಡಿ ವಿಷಯ ತಿಳಿಸಿದ್ದೆ . " ನೋಡು ನೀ ದಾಟಿ ಬರಬೇಕಿರುವುದು ಆ ದೊಡ್ಡ ಮನೆಯ ಹೊಸ್ತಿಲಷ್ಟೇ ಹೊರಗಡೆಯ ಪ್ರಪಂಚ ದೊಡ್ಡದಿದೆ, ಅಲ್ಲಿ ನಾನಿದ್ದೇನೆ . ಮನೆಯವರಿಗೆ ವಿಷಯ ತಿಳಿಸು . ಒಪ್ಪದಿದ್ದರೆ ಹೊರಟು ಬಂದು ಬಿಡು " ಎಂದ ನಿನ್ನ ಮಾತು ಕೇಳಿ ಅವತ್ತು ಎಲ್ಲರೆದುರು ಧೈರ್ಯವಾಗಿ ನಮ್ಮ ಪ್ರೀತಿಯ ವಿಷಯವನ್ನು ತಿಳಿಸಿದ್ದೆ . ಅಷ್ಟೇ .. ... ಅಪ್ಪ ಎಲ್ಲರೂ ಹೋಗಬಹುದು ಎಂಬಂತೆ ಸನ್ನೆ ಮಾಡಿದ್ದರು , ಅದರರ್ಥ ಅವರಿಗೆ ಏಕಾಂತದ ಅವಶ್ಯಕತೆ ಇದೆ ಎಂಬುದು . ಮನೆ ಎಷ್ಟು ನಿಶ್ಯಬ್ದವಾಗಿತ್ತೆಂದರೆ ಅಮ್ಮ ಹಾಲಿನ ಲೋಟವನ್ನು ತಂದಿಟ್ಟ ಟನ್ ಎಂಬ ಶಬ್ದ ಬಿಟ್ಟರೆ , ನಾನು ಕುಡಿದಾದ ಮೇಲೆ ಗಂಟಲಿನಿಂದ ಹೊರಟ ಕುಳರ್ ಎನ್ನುವಂತ ಶಬ್ದ ಮಾತ್ರ ಕೇಳಿಸಿತ್ತು. ಈ ಅಸಹಜ ಮೌನ ಕಿತ್ತು ತಿನ್ನುವಂತಿತ್ತು . ಯಾವ ಭರವಸೆಗಳೂ ಉಳಿದಿರಲಿಲ್ಲ . ಮುಂಜಾವಿನಲ್ಲೇ ಎದ್ದು ಹೊರಟವಳನ್ನು ತಡೆದು ನಿಲ್ಲಿಸಿದ್ದು " ಗೆಜ್ಜೆ ತೆಗೆದಿಟ್ಟು ಹೊರಟಿದ್ದೀಯಾ ? ನಾನು ಎತ್ತಿ ಬೆಳೆಸಿದ ಕಂದ ನೀನು ... ಸದ್ದಾಗಂತೆ ಹೊಸಿಲ ದಾಟಬೇಡ " ಎಂದ ಅಪ್ಪನ ಮಾತುಗಳು. "ಆ ಹುಡುಗನನ್ನು ಕರೆಸು ನಾನು ಮಾತನಾಡಬೇಕಿದೆ " ಎಂದು ಖಡ್ಗದ ಅಲುಗಿನ ಮೇಲೆ ಕೈಯಾಡಿಸುತ್ತಾ ಅಪ್ಪ ಹೇಳುವಾಗ ಅವರ ಮುಖ ನೋಡುವ ಧೈರ್ಯವಾಗದೆ ಫೋನ್ ಕೈಗೆತ್ತಿಕೊಂಡಿದ್ದೆ .

ನಿನಗೆ ಫೋನ್ ಮಾಡಿ ಬಂದವಳಿಗೆ ಕಾಣುತ್ತಿದುದು ಕತ್ತಿಯ ಅಲುಗಿನ ಮೇಲೆ ಆಡಿಸುತ್ತಿದ್ದ ಅಪ್ಪನ ಕೈ ಬೆರಳುಗಳಷ್ಟೇ . "ಕ್ರೋಧಗೊಂಡರೆ ನಿನ್ನಪ್ಪ ಮನುಷ್ಯನೇ ಅಲ್ಲ " ಅಂತ ಅಮ್ಮ ಹೇಳುತ್ತಾಳೆ . ಇಷ್ಟು ವರ್ಷದಲ್ಲಿ ನಾನೂ ಒಂದೋ ಎರಡೋ ಬಾರಿ ಅಪ್ಪನ ಕ್ರೋಧವನ್ನು ಕಂಡಿದ್ದೇನೆ . ಮನದಲ್ಲಿ ಸಾವಿರ ಯೋಚನೆಗಳು . ಏನು ಮಾಡಬಹುದು ಅಪ್ಪ ? ನಿನ್ನನ್ನು ಕೊಂದು ಬಿಡಬಹುದೇ ? ನೀನಂತೂ ರೀಲ್ ನಲ್ಲೂ ರಿಯಲ್ ನಲ್ಲೂ ಹೀರೋ ಅಲ್ಲ , ಆದರೆ ನನ್ನಪ್ಪನ ಕಡೆಯವರು ಮಾತ್ರ ರಿಯಲ್ ವಿಲ್ಲನ್ ಗಳು . " ಎಂಟು ಜನರನ್ನು ಅಡ್ಡಡ್ಡ ಸೀಳಿ ದಿಡ್ಡಿ ಬಾಗಿಲಿಗೆ ನೇತು ಹಾಕಿದ ವಂಶದಲ್ಲಿ ಕತ್ತಿ ಸರಿಯಾಗಿ ಹಿಡಿಯಲು ಬಾರದ ನೀನು ಹೇಗೆ ಹುಟ್ಟಿದೆಯೋ " ಎಂದು ಚಿಕ್ಕಪ್ಪನಿಗೆ ಅಜ್ಜಿ ಬಯ್ಯುತ್ತಿದ್ದ ಮಾತು ಬೇಡವೆಂದರೂ ನೆನಪಾಗುತ್ತಿತ್ತು. ಯಾವುದೋ comedy ಸಿನಿಮಾದ " ರಕ್ತಪಾತದ ವಂಶ ನಮ್ಮದು " ಎಂಬ ಡೈಲಾಗ್ ನಮ್ಮ ವಂಶದ ಸೀರಿಯಸ್ ಟ್ಯಾಗ್ ಲೈನ್ ಆಗಿ ಗೋಚರಿಸತೊಡಗಿತ್ತು ..!! ನಿನ್ನನ್ನು ಇಲ್ಲಿಗೆ ಕರೆದು ಬಹಳ ದೊಡ್ಡ ತಪ್ಪು ಮಾಡಿದೆ ಎಂದು ಪದೇ ಪದೇ ಅನಿಸತೊಡಗಿತ್ತು .

ಆದರೆ ಮರುದಿನದ ಬೆಳಗು ಬೇರೆಯೇ ಆಗಿತ್ತು. ಎಲ್ಲರನ್ನು ಸ್ವಾಗತಿಸುವಂತೆಯೇ ದೊಡ್ಡ ಮನೆ ನಿನ್ನನ್ನೂ ಸ್ವಾಗತಿಸಿತ್ತು. ಹೆಣ್ಣಿನ ತಂದೆಯಾಗಿ ಅಪ್ಪ ಕೊಂಚ ಬಿಗುವಾಗಿಯೇ ಮಾತನಾಡುತ್ತಿದ್ದರೆ ನೀನು ಮಾತ್ರ ಎಲ್ಲ ಬಿಗುಮಾನಗಳನ್ನು ತೊರೆದು ಸಹಜವೆಂಬಂತೆ ಮಾತನಾಡಿದ್ದೆ . ಕಪಟತನವಿಲ್ಲದೆ , ಅತೀ ವಿನಯವಂತಾಗದೆ ಎಲ್ಲವನ್ನೂ ತಿಳಿಸಿ ಹೇಳಿದ್ದೆ . ನೀ ಇದ್ದ ಎರಡು ದಿನಗಳು ನನ್ನೊಂದಿಗೆ ಮಾತನಾಡಿದ್ದು ಕಡಿಮೆಯೇ . ನೀ ಹೊರಟು ನಿಂತಾಗ ಕಳುಹಿಸಿಕೊಟ್ಟು ಬಾ ಎನ್ನುವಂತೆ ಅಪ್ಪ ಸನ್ನೆ ಮಾಡಿದ್ದರು . ನಿನ್ನೊಂದಿಗೆ ದುಗುಡದಿಂದಲೇ ಹೆಜ್ಜೆ ಹಾಕುತ್ತಿದ್ದರೆ ನೀನು ಮಾತ್ರ ನಿರಾಳನಾದವನಂತೆ " ನೀ ದಾಟಬೇಕಿರುವುದು ಈ ದೊಡ್ಡ ಮನೆಯ ಹೊಸಿಲಷ್ಟೇ ಎಂದುಕೊಂಡಿದ್ದೆ , ಆದರೆ ಮನೆಯೊಳಗಡೆ ನಿನಗೆಂದೇ ಒಂದು ಪ್ರಪಂಚವಿದೆ ಎಂದು ಗೊತ್ತಿರಲಿಲ್ಲ. ನಿನ್ನಪ್ಪ ಒಪ್ಪಿದರಷ್ಟೇ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ " ಎಂದು ಹೈವೇ ಎಂದೂ ಕೂಡ ಗಮನಿಸದೆ ಹಣೆಯ ಮೇಲೊಂದು ಮುತ್ತಿಟ್ಟು ಹೊರಟುಬಿಟ್ಟಿದ್ದೆ . ಮಬ್ಬು ಬೆಳಕಿನಲ್ಲಿ ನೀನಿತ್ತ ಮುತ್ತಿಗೆ ದೂರದಲ್ಲಿ ಬರುತ್ತಿದ್ದ ವಾಹನದ ಬೆಳಕೊಂದು ನಾಚಿಕೊಂಡಿತ್ತು .

ಕಣ್ಣಂಚಲ್ಲಿದ್ದ ನೀರನ್ನು ಒರೆಸಿಕೊಳ್ಳುತ್ತಾ ಮನೆಯ ಮೆಟ್ಟಿಲು ಹತ್ತಿದವಳನ್ನು ಕರೆದು ಅಪ್ಪ " ಆ ಹುಡುಗ ಜೀವನವನ್ನು ಬಹಳ ಪ್ರೀತಿಸುತ್ತಾನೆ. ಇಂಥವನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ನನ್ನ ಜೀವನ್ಮುಖಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನ್ನುವ ಭರವಸೆಯಿದೆ . ಒಳ್ಳೆ ದಿನ ನೋಡಿ ಅವನ ಹಿರಿಯರಿಗೆ ಬರಹೆಳ್ತೇನೆ. ನೀ ತೆಗೆದಿಟ್ಟ ಗೆಜ್ಜೆ ಹಾಕಿಕೋ ಹೋಗು " ಎಂದರು . ಅವತ್ತು ಅನಿಸಿದ್ದು " ಹಿರಿಯರ ಭಾವನೆಗಳಿಗೆ ಬೆಲೆಕೊಡುವ ನಿನ್ನಂಥ ಒಳ್ಳೆಯ ಪ್ರೆಮಿಗಳಿರುವಂತೆಯೇ , ಕಿರಿಯರ ಭಾವನೆಗಳನ್ನು ಅರ್ಥೈಸಿಕೊಳ್ಳದಂಥಹ ಕೆಟ್ಟ ತಂದೆಯರೂ ಇರುವುದಿಲ್ಲ ಎಂದು .


ಇದೆಲ್ಲ ನಡೆದು ಸುಮಾರು ಒಂದು ತಿಂಗಳೇ ಕಳೆದಿದೆ. ನಾಳೆ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ. ನಾಳೆಗಾಗಿ ನೀ ಕೊಡಿಸಿದ ಅಚ್ಚ ಬಿಳುಪಿನ ಸೀರೆಯ ಮೇಲೆ ಕೈ ಆಡಿಸುತ್ತಿದ್ದರೆ ಬಣ್ಣ ಬಣ್ಣದ ಕನಸುಗಳ ನುಣುಪು ಕೈ ಸೋಕುತ್ತಿದೆ ....

(ಗೆಳೆಯ ಕೃಷ್ಣ ಭಟ್ ತೆಗೆದ ಈ ಫೋಟೊ ಗೆ ಮೊದಲ ನಾಲ್ಕು ಸಾಲುಗಳನ್ನು ಗೀಚಿದ್ದೆ . ಅದೇ ಮುಂದೆ ಕಥೆಯಾಯ್ತು . ಥ್ಯಾಂಕ್ಯು ಕೃಷ್ಣ ಭಟ್ )

10 comments:

 1. ಒಂದು ಸುಂದರ ಕಥೆಗೆ ಕಾರಣರಾದ ಕೃಷ್ಣ ಭಟ್ಟರಿಗೂ ನಾನು ಥ್ಯಾಂಕ್ಸ್ ಹೇಳಲೇ ಬೇಕು!

  ReplyDelete
 2. ಹಿರಿಯರ ಭಾವನೆಗಳಿಗೆ ಬೆಲೆಕೊಡುವ ನಿನ್ನಂಥ ಒಳ್ಳೆಯ ಪ್ರೆಮಿಗಳಿರುವಂತೆಯೇ , ಕಿರಿಯರ ಭಾವನೆಗಳನ್ನು ಅರ್ಥೈಸಿಕೊಳ್ಳದಂಥಹ ಕೆಟ್ಟ ತಂದೆಯರೂ ಇರುವುದಿಲ್ಲ ಎಂದು, ಎಂಬ ತಮ್ಮ ಮಾತು ತುಂಬಾ ನೆಚ್ಚಿಗೆಯಾಯಿತು.

  ಕೃಷ್ಣ ಭಟ್ ಅವರ ಚಿತ್ರವೂ ಸೂಪರ್...

  ReplyDelete
 3. ಅಬ್ಬೋ ಹುಡುಗೀ..!
  ಪ್ರೀತಿಯನ್ನು ಅದು ಹೇಗೆ.. ಹೀಗೆ ಮುದ್ದು ಮುದ್ದು ಅಕ್ಷರವಾಗಿಸುತ್ತಿ...?

  ಅನುರಾಗ, ತಲ್ಲಣಗಳ ಹದ ಮಿಳಿತದ ಸುಖಾಂತ ಬರಹ.. ನಮ್ಮೊಳಗೆ ಕಿರುನಗು ಮೂಡಿಸುವಂತಾದ್ದು.. ಇಷ್ಟವಾಯಿತು :)

  ReplyDelete
 4. ಪ್ರೀತಿಯ ಭಾವಗಳೆಲ್ಲವೂ ಚಂದವೇ ಅಲ್ವಾ ... ಅದೂ ನೀ ಜೋಡಿಸೋ ಅಕ್ಷರಗಳಲ್ಲಿ ಮತ್ತೂ ಮುದ್ದು ಮುದ್ದು ಅನಿಸುತ್ತೆ .
  ಬದುಕಲ್ಲೊಮ್ಮೆ ರಾಜಕುಮಾರಿಯಾಗೋ ಆ ದಿನದ ಸಂಭ್ರಮದಲ್ಲಿರೋ ಹುಡುಗಿಯ ಜೊತೆ ಜೊತೆಗೆ ಬದುಕ ಪ್ರೀತಿಸೋ,ಹಣೆಯ ಮೇಲೊಂದು ಹೂಮುತ್ತನ್ನಿಟ್ಟು,ಕಣ್ಣಲ್ಲೇ ಭರವಸೆ ತುಂಬೋ ಜೀವನ್ಮುಖಿ ಹುಡುಗ ಜಾಸ್ತಿಯೇ ಇಷ್ಟವಾದ
  ಎಂದಿನಂತೆ ಚಂದದ ಕಥೆ

  ReplyDelete
 5. ಸುಪರ್ ಸಂಧ್ಯಾ.

  ಫ್ರತೀ ಸಲ ಹೀಗೇ. ನಿಮ್ಮ ಬ್ಲಾಗ್ ಓದಿ ಮುಗಿಸಿದಾಗ ಮನಸ್ಸು ಅತಿ ಭಾರವಾಗುತ್ತದೆ, ಇಲ್ಲವೇ ಅತಿ ಹಗುರವಾಗುತ್ತದೆ. ಅತಿ ಭಾರವಾಗಿದ್ದೇ ಹೆಚ್ಚು. ಸುಖಾಂತದ ಕಥೆ ಹೆಚ್ಚೇ ಇಷ್ಟವಾಯ್ತು.

  ಪ್ರೀತಿ, ಪ್ರೇಮ, ವಿರಹದ ಬಗೆಗಿನ ಎಲ್ಲಾ ಭಾವಗಳ ಎಲ್ಲಾ ಛಾಯೆಗಳನ್ನೂ ನಿಮ್ಮ ಬರಹಗಳಲ್ಲಿ ಕಾಣಬಹುದು. ಪ್ರತೀ ಸಲವೂ ಭಾವ ಭಿನ್ನವೇ. ಆದರೂ ಮೊದಲಿನದರಷ್ಟೇ ಆಪ್ತ. ಚಂದದ ಬರಹ ಕೊಟ್ಟಿದ್ದಕ್ಕೊಂದು ಧನ್ಯವಾದ. ಬರೀತಾ ಇರಿ.

  ReplyDelete
 6. Beautiful writing... great work..

  ReplyDelete