Sunday 5 February 2017

ಹಾರ್ಟ್ ಬೀಟ್....:)



ಬಹಳ ದಿನಗಳ ಮೇಲೆ ನಾನು.. ಅವಳು.. ಮತ್ತು ಕಾಫಿ...

ಏನಾದರೂ ಹೇಳು..

ಏನ್ ಹೇಳ್ಲಿ...

ಅವನ ಬಗ್ಗೆ ಹೇಳು...

ಅವನು...

ನಾನು ಕೇಳಿದ ಮೊದಲ ಹಾರ್ಟ್ ಬೀಟ್ ಅವನದ್ದೇ... ಹೌದು ಅವತ್ತು ಅದೇನೋ ಓದುತ್ತಿದ್ದವನು ನನ್ನನ್ನು ಎದೆಗೊರಗಿಸಿಕೊಂಡಿದ್ದ..... ಡಬ್ ಡಬ್.. ಊಮ್ ಮ್ ಮ್.. ಲಬ್ ಡಬ್ ಊಹು ಆ ಸದ್ದೇ ಬೇರೆ.. ಜೀವನದಲ್ಲೇ ಮೊದಲಬಾರಿ ಕೇಳಿದ್ದೆ..!! ಬಹಳ ಖುಷಿಯಾಯ್ತು.,. ಮತ್ತೆ ಮತ್ತೆ ಕೇಳಿದೆ.. ಇದೇನ್ ನೀನು ಚೆಲ್ ಚಲ್ಲಾಗಿ ಆಡಿದ್ದು ಅನ್ನಬೇಡ ಮತ್ತೆ.. ಮೊದಲ ಸಲ ಅದೇನೋ ಹೊಸದನ್ನು ಕಂಡ ಮಗುವಾಗಿತ್ತು ಮನಸ್ಸು. ಕುತೂಹಲಕ್ಕೆ ಮತ್ತೆ ಮತ್ತೆ ಕೇಳಿದ್ದು.. ಅವ ಮಾತ್ರ ನನ್ನ ದುಪ್ಪಟ್ಟಾದ ಅಂಚು ಕೂಡ ಹಿಡಿಯಲಿಲ್ಲ.. ನಸುನಗುತ್ತ ಓದುತ್ತಲೇ ಇದ್ದ.. ಋಷಿಯಂತೆ.. ಅವತ್ತು ಅಷ್ಟುದ್ದದ ಬಟ್ಟಾ ಬಯಲಿನಂಥ ಜಗುಲಿಯಲ್ಲಿ.. ಮಟಮಟ ಮಧ್ಯಾಹ್ನದಲ್ಲಿ ನಮಗಾಗಿ ಅಂಥದೊಂದು ಏಕಾಂತ ಅದ್ಹೇಗೆ ಹುಟ್ಟಿತ್ತೋ ಇಂದಿಗೂ ಕಾಣೆ.. ಮನೆಗೆ ಬಂದ ಮೇಲೂ ಮನಸ್ಸು ಕೇಳುತ್ತಿತ್ತು ಅವನನ್ನು ಏನಂತ ಕರೆಯಲೇ ಎಂದು...


ಬೀದಿಯ ಮಕ್ಕಳೆಲ್ಲ ಅವನಿಗೆ ಅಂಕಲ್ ಎನ್ನುತ್ತಿದ್ದರು. ನಾನೂ ಅವರೊಂದಿಗೆ ಆಡುವಾಗ ಅಂಕಲ್ ಬಾಲ್ ಪ್ಲೀಸ್.,. ಎಂದರೆ ಕಣ್ಣಲ್ಲೊಂದು ಅಸಹನೆ... ಬಾಲ್ ಕೊಡದೆ ಒಳಗೆ ಹೋಗುತ್ತಿದ್ದ.. ಹಿಂಬಾಲಿಸಿ ಹೋದರೆ.. ಕಿವಿ ಹಿಂಡಿ ,ಸಾರಿ ಹೇಳಿಸಿ ಬಾಲ್ ಕೊಡೊಹೊತ್ತಿಗೆ ಮಕ್ಕಳು ಬಾಲ್ ಮರೆತು ಬೇರೆ ಆಟಕ್ಕೆ ತೊಡಗುತ್ತಿದ್ದವು .ನಾನೋ ಮಕ್ಕಳನ್ನೇ ಮರೆತಿರುತ್ತಿದ್ದೆ.


ರಸ್ತೆಯಲ್ಲಿ ಹೋಗುತ್ತಿದ್ದಾಗ ಅದ್ಯಾರೋ ಬೇಕಂತಲೇ ಎಲ್ಲಿಗೋ ಕೈ ತಾಕಿಸಿ, ಕಣ್ಣುಹೊಡೆದು ಹೋಗಿರುತ್ತಾನೆ. ಇದನ್ನೆಲ್ಲ ಅವನಿಗೆ ಹೇಳಿದರೆ " ಕೈ ಹಿಡಿದು ನಿಲ್ಲಿಸಿ ಕಪಾಳಕ್ಕೆರಡು ಬಾರಿಸಿ ಬರಬೇಕಿತ್ತು. ಮುಂದೇನಾದರೂ ಆದರೆ ನಾನ್ ನೋಡಿಕೊಳ್ತಿದ್ದೆ" ಎನ್ನುವಾಗ ಅಣ್ಣ ಅವನು. ಆದರೆ ಹಾಗೆ ಕರೆಯಲು ಮನಸ್ಸೇ ಬಾರದು. ಎದುರುಮನೆಯ ಕಾಲೇಜುಹುಡುಗಿ ಅವನಿಗೆ ಅಣ್ಣಾ ಎಂದರೆ ನನಗೇನೋ ಸಮಾಧಾನ.


ಅದೆಲ್ಲ ಆವಾಗ.. ಈಗಿಂದು ಹೇಳು....


ಈಗ.,.

ಅಮ್ಮ ಅವನನ್ನು ಮಗನೆಂದಾಗ, ಅಪ್ಪ ಅವನನ್ನೇ ಆದರಿಸಿದಾಗ, ತಂಗಿ ಅವನನ್ನೇ ವಿಚಾರಿಸಿದಾಗ ನನ್ನವರನ್ನೇ ನನ್ನಿಂದ ದೂರ ಮಾಡಿದ ದುಷ್ಟ ಅವನು..


ಅವನಮ್ಮ ನನ್ನನ್ನು ಸೊಸೆ ಮುದ್ದು ಎನ್ನುವಾಗ, ಆ ಮನೆಯ ದೊಡ್ಡಪಾಲಿನ ಪ್ರೀತಿ ನನ್ನದಾದಾಗ, ಪ್ರತಿಯೊಂದು ಪ್ರಥಮಗಳೂ ನನಗಾಗೇ ಮೀಸಲಿರುವಾಗ, ಎಲ್ಲರೂ ನನ್ನನ್ನೇ ಮುದ್ದುಗರೆವಾಗ ದೂರ ನಿಂತು ನನ್ನನ್ನೇ ನೋಡೋವಾಗ ಇಷ್ಟ ಅವನು..


ತಿಂಗಳ ನೋವಲ್ಲಿ ಹೊಟ್ಟೆನೋವೆಂದರೆ ಕಷಾಯ ಮಾಡಿ ಕುಡಿಸಿ, ಕಿಪ್ಪೊಟ್ಟೆ ನೀವಿ.. ಅಂಗಾಲಿಗೆ ಎಣ್ಣೆ ಸವರಿ ನೆತ್ತಿ ತಟ್ಟಿ ಮಲಗಿಸುವಾಗ ಅಮ್ಮ ಅವನು...


ಗೊತ್ತಿಲ್ಲದೆ ತಪ್ಪಾದಾಗ, ತಪ್ಪು ಅಂತ ಗೊತ್ತಿದ್ದೂ ಮಾಡಿದ ಹುಂಬತನದ ಕೆಲಸಗಳಿಗೆ ಪಟ್ಟಾಗಿ ಕೂತು ಬುದ್ಧಿ ಹೇಳೊ ಅಪ್ಪ ಅವನು...


ಸೋತು ನಿಂತಾಗ, ನೊಂದಾಗ, ಇನ್ನು ಆಗೊಲ್ಲ ಎಂದು ಕುಸಿದು ಕುಳಿತಾಗ, ಕಣ್ಣಂಚಲ್ಲಿ ನೀರಿದ್ದಾಗ " ನಾನಿದ್ದೇನೆ" ಎನ್ನುವ ಭರವಸೆ ಅವನು...


ಮುಡಿಗಿಷ್ಟು ಹೂವಿಟ್ಟು ಗಲ್ಲ ಸವರಿ ಬೆಲ್ಲ ಕೇಳುವವನು.. ಕತ್ತಿನ ಸುತ್ತ ಮುತ್ತಿನ ಸರ.. ತೋಳಬಂದಿಯಾಗುವವ ನಲ್ಲ ಅವನು..


ಊಮ್ ಇಷ್ಟೆಲ್ಲ ಆಯ್ತು ... ಇನ್ನೇನು ಇಲ್ವಾ ಅಂತ ಕಣ್ಣು ಮಿಟುಕಿಸಿದಳು..


ಅವಳಿಂಗಿತ ಅರ್ಥವಾಗಿ ಅಂಗಾಂಗಗಳಲೆಲ್ಲ ಸಣ್ಣ ಕಂಪನ.. ಬೆನ್ನಹುರಿಯಾಳದಲೆಲ್ಲೋ ಛಳಕು... ನಸು ನಾಚುತ್ತಲೇ ಅದೇನೊ ಹೇಳಲೆಂದು ಬಾಯಿ ತೆರೆದವಳು ಹಿಂದೆ ತಿರುಗಿದೆ.. ಉಸಿರು ತಾಕುವ ಸನಿಹದಲ್ಲಿ ಅವನು.. "ನನ್ನ ನಗು ನೀನು" ಎನ್ನುತ್ತಾ ತೋಳಲ್ಲಿ ಬಳಸಿದ..

ಅವಳು ನಾಚಿ ನೀರಾಗಿ ಮರೆಯಾದಳು...


ಮತ್ತೀಗ,....


ನಾನು... ಅವನು... ಮತ್ತೊಂದು ಏಕಾಂತ....

ತುರ್ತಾಗಿ ಮತ್ತೊಮ್ಮೆ ನಾನು ಹಾರ್ಟ್ ಬೀಟ್ ಕೇಳಬೇಕು...,. :)

5 comments:

  1. ಅನುಬಂಧಗಳು ಬಾಲ್ಯ, ಯೌವ್ವನ, ಪ್ರಬುದ್ಧ ವಯಸ್ಸು ಹೀಗೆ ಹೊಸ ರೂಪ ಹೊಸ ವೇಷ ತೊಟ್ಟುಕೊಳ್ಳುತ್ತಲೇ ಬರುತ್ತಿರುತ್ತದೆ. ಪ್ರತಿ ಹಂತದಲ್ಲೂ ಅದು ತರುವ ಭಾವ, ಅದು ಕೊಡುವ ನೆಮ್ಮದಿ ಅನುಭವಿಸಿದರು ಮಾತ್ರ ಗೊತ್ತು.

    ಜಲಪಾತ ಹಂತಗಳಲ್ಲಿ ಧುಮುಕುವ ಹಾಗೆ, ನಿನ್ನ ಲೇಖನದ ಭಾವ ಧುಮುಕುತ್ತಾ ಸಾಗಿರುವುದು ಸುಂದರ ಅನಿಸುತ್ತದೆ.

    ಧೀರ್ಘಾವಧಿಯ ನಂತರ ಮತ್ತೆ ಲೇಖನಿ ಅರ್ಥಾತ್ ಕೀಲಿ ಮಣೆ ಹಿಡಿದ್ದೀಯ.. ಮುಂದುವರೆಸು ಎಸ್ ಪಿ

    ReplyDelete
  2. ಬರೆಯದೇ ಬಹಳ ಸಮಯವಾಯ್ತು ಇಂದು ಏನಾದರೂ ಬರೆಯಬೇಕೆಂಬ ತುಡಿತ...
    ಅದೇ ಜೋಶ್ ನಲ್ಲಿ ಕಂಪ್ಯೂಟರ್ ಮುಂದೆ ಕುಳಿತಾಗ... ಮನದಲ್ಲಿ ಅದೆಷ್ಟೋ ಕಲ್ಪನೆಗಳು ಒತ್ತೋತ್ತಾಗಿ ಸುಳಿದಾಗ... ಯಾವ ರೀತಿ ಬರೆಯಲಿ, ಏನ ಬರೆಯಲಿ, ಯಾಕೋ ಹೇಳಬೇಕೆಂದಿರುವುದು ಪದಗಳಲ್ಲಿ ಮೂಡುತ್ತಿಲ್ಲ ಅಂತ ಯೋಚಿಸುತ್ತಲೇ ಮೂಡಿದ ಕಥೆ ಇರಬೇಕು ಅಲ್ಲವಾ...???

    ReplyDelete
  3. Glad to visit this blog.I feel very happy visiting here, because I'm getting lots of information from here which is very useful for me in gaining knowledge about many topics of this site.Those information become very valid for preparing papers for my work.For GST Registration checkout this website .Thank you for sharing.

    ReplyDelete
  4. ನೀವು ಇಷ್ಟು ಸುಂದರವಾಗಿ ಪ್ರಣಯವಾಗಿ ಬರೆದರೆ ನನ್ನ ತರ ಯುವಕರ ಪರಿಸ್ಥಿತಿ ಏನು ಅಂತ ಯೋಚನೆ ಮಾಡಿದ್ದೀರಾ? ತುಂಬಾ ಚೆನ್ನಾಗಿದೆ.

    ReplyDelete
  5. ತುಂಬಾ ಚೆನ್ನಾಗಿ ಬರಿತೀರಾ..

    ReplyDelete