ಮಗಳ ಕೂದಲು ತುಂಬಾ ಉದ್ದ ಗಿಡ್ಡ ಬೆಳೆದಿದ್ದರಿಂದ ಕಟ್ ಮಾಡಿಸಬೇಕೆಂದು ನಿನ್ನೆ ಬ್ಯೂಟಿ ಪಾರ್ಲರ್ ಗೆ ಕರೆದುಕೊಂಡು ಹೋಗಿದ್ದೆ. ಒಂದೇ ಅಳತೆ ಕಟ್ ಮಾಡುವಾಗ ತುಸು ಜಾಸ್ತಿಯೇ ಆಯಿತು. ಮೊದಲೆ ಕಟಿಂಗ್ ಬೇಡ ಎನ್ನುತ್ತಿದ್ದ ಅವಳ ಮುಖಭಾವ ಬದಲಾದ ಕೂಡಲೆ ನಾನು ಮತ್ತು ಬ್ಯುಟಿಷಿಯನ್ ಇಬ್ಬರೂ ' ಮತ್ತೆ ಬೆಳೆಯುತ್ತೆ , ಇನ್ನು ದಪ್ಪ ಕೂದಲು ಬರುತ್ತೆ ಎಂದೆಲ್ಲ ಸಮಾಧಾನ ಮಾಡಿದ್ದಾಯ್ತು . ಆದರೆ ಆ ಸಮಾಧಾನವೆಲ್ಲ ಪಾರ್ಲರಿನ ಒಳಗಷ್ಟೆ. ರಸ್ತೆಯಲ್ಲಿ ಬರುವಾಗ ಇವಳದ್ದೊಂದೆ ರಾಗ .. ನಂಗೆ ಇಷ್ಟು ಗಿಡ್ಡ ಕೂದಲು ಬೇಡದಾಗಿತ್ತು .... ನಾನು ಸಮಾಧಾನ ಮಾಡುತ್ತಾ , ಪಾರ್ಲರಿನಲ್ಲಿ ಹೇಳಿದ್ದನ್ನೆ ಮತ್ತೆ ಮತ್ತೆ ಹೇಳುತ್ತಾ ಬಂದೆ. ಮನೆ ಹತ್ತಿರ ಬಂದಂತೆ ಸ್ವರವೂ ದೊಡ್ಡದಾಗಿ ಅಪ್ಪನ ಕಂಡೊಡನೆ ಅಳುವಾಗಿ ಬದಲಾಗಿ ಸ್ವಲ್ಪ ದೊಡ್ಡ ರಾದ್ಧಾಂತವೇ ಅಯ್ತು ! ಅಪ್ಪನೂ ಚಿಕ್ಕದಾಗಿ ಮುದ್ದಾಗಿ ಕಾಣ್ತಾ ಇದ್ದೆ ,ಮತ್ತೆ ಕೂದಲು ಬರ್ತು ಎಂದೆಲ್ಲ ನಂಬಿಸಿದ್ದಾಯ್ತು . ಅಂತೂ ಸಮಾಧಾನವಾಗಿ ಸ್ನಾನಕ್ಕೆ ಹೋದರೆ , ಹಲ್ಲು ತಿಕ್ಕುವಾಗ ಇಷ್ಟು ದಿನ ಅಲುಗಾಡುತ್ತಿದ್ದ ಹಾಲು ಹಲ್ಲು ಕೈ ಗೆ ಬಂತು . ಮೊದಲ ಹಲ್ಲು ..!! ತುದಿಗೊಂಚೂರು ರಕ್ತ ..! ಅಷ್ಟೇ .... ಮತ್ತೆ ಶುರು ರಗಳೆ . ನನ್ನ ಹಲ್ಲು ಬಿದ್ದೋತು ಎಂದು ಜೋರಾಗಿ ಅಳು ...
ಗಿಡ್ಡ ಕೂದಲು ಮರೆತು ಹೋಯ್ತು .. ಅದರ ಜಾಗಕ್ಕೆ ಹಲ್ಲು ..
ಎಲ್ಲಾರಿಗೂ ಬೀಳ್ತು ಹಲ್ಲು , ಹೊಸ ಗಟ್ಟಿ ಹಲ್ಲು ಬರ್ತು .. ಎಲ್ಲ ಮಕ್ಕಳಿಗು ಹಲ್ಲು ಬಿದ್ರೆ ಖುಷಿ ಆಗ್ತು .( ದೇವಾರಾಣೆ ಗೊತ್ತಿಲ್ಲ !) ಅಣ್ಣ ಹಲ್ಲು ಬಿದ್ರೆ ಖುಷಿ ಪಡತ್ನಡ ಎಂದೆಲ್ಲ ಬಾಯಿಗೆ ಬಂದಿದ್ದು ,ನೆನಪಾಗಿದ್ದೆಲ್ಲ ಹೇಳಿ ಸಮಾಧಾನ ಮಡೋ ಹೊತ್ತಿಗೆ ಸಾಕಾಗಿ ಹೋಯ್ತು . ಅಂತೂ ಸ್ನಾನ ಮಾಡಿಸಿ ರೆಡಿ ಮಾಡಿ ಕನ್ನಡಿ ನೋಡ್ಕ ಹೇಳಿ ನಾನು ಸ್ನಾನಕ್ಕೆ ಹೋದೆ . ಕನ್ನಡಿ ನೋಡು ಹೇಳಿ ದೊಡ್ಡ ತಪ್ಪು ಮಾಡಿದ್ದೆ ! ಸ್ವಲ್ಪ ಹೊತ್ತಿಗೆ ಬಾತ್ ರೂಮ್ ಬಾಗಿಲು ಬಡಿಯುತ್ತಾ ದೊಡ್ಡ ಅಳು ... ನಾ ಚಂದನೇ ಕಾಣ್ತಾ ಇಲ್ಲೆ .. ಉದ್ದ ಕೂದಲು ಇದ್ದಿದ್ರಾದ್ರು ಚೊಲೊ ಕಾಣ್ತಿದ್ನೇನೋ ಈಗ ಚಂದಾ ಕಾಣ್ತಾ ಇಲ್ಲೆ ...
ಹಲ್ಲು ಬಿದ್ದ ನೋವು ಹೋಗಿ ಚಂದದ ವಿಷಯವಾಗಿತ್ತು
ಹೊಸ ಹಲ್ಲು ಬಂದಮೇಲೆ ಸರಿ ಆಗ್ತು , ಈಗಲೂ ನೀ ಚಂದ ಇದ್ದೆ ,ಗಿಡ್ಡ ಕೂದಲಾಗಿದ್ದಕ್ಕೆ ಇನ್ನೂ ಚಂದ ಅಂತೆಲ್ಲ ಒಳಗಿಂದಲೆ ಸಮಾಧಾನ ಹೇಳಿದ್ದಾಯ್ತು . ಸ್ನಾನ ಮುಗಿಸಿ ಬರುವ ಹೊತ್ತಿಗೆ ನಿಶ್ಯಬ್ದ . ಮಗಳು ಕಾರ್ಟೂನ್ ನೋಡುತ್ತಿದ್ದಳು . ಸಮಾಧಾನವಾಯ್ತು .
ಅರ್ಧಗಂಟೆಗೆ ಹಾಜರ್" ಅಮ್ಮ ನಂಗೆ ಇವತ್ತು ಮಲಗಲೆ ಪಿಲ್ಲೋ ಬೇಕು" . "ಎಂತಕ್ಕೆ?"." ಹಲ್ಲು ಪಿಲ್ಲೋ ಅಡಿಗೆ ಇಟ್ಗ ಮಲಗಲೆ . ಟೂತ್ ಫ಼ೇರಿ ಬಂದು ತಗಹೋಗ್ತು".
ಟೂತ್ ಫ಼ೇರಿ ಎಂಟ್ರಿ ...
ಈ ಅಭ್ಯಾಸವಿಲ್ಲದ ಕಾರಣ , " ನೋಡು ನಮ್ಮನೆಗೆ ಬಾಲ್ಕನಿ ಇಲ್ಲದ್ದಕ್ಕೆ ಟೂತ್ ಫ಼ೇರಿ ಗೆ ಬರಲಾಗ್ತಿಲ್ಲೆ , ನೀ ಹಂಗಾಗಿ ಎದುರುಗಡೆ ಇರ ತೆಂಗಿರದ ಕೇಳಗೆ ಹಾಕಿಕ್ಕೆ ಬಾ . ಅದು ಅಲ್ಲಿಂದ ತಗಂಡು ಹೋಗ್ತು ಹೇಳಿ ತೆಂಗಿನಮರದಡಿ ಹಾಕಿಸಿದ್ದಾಯ್ತು .
ಅಲ್ಲಿಗೆ ಎಲ್ಲಾ ಮುಗಿಯಿತು ಎಂದುಕೊಂಡರೆ ಅದು ಮುಕ್ತಾಯವಲ್ಲ ಸಷೇಶ ಎಂದು ಗೊತ್ತಾಗಿದ್ದು ರಾತ್ರಿ ಹನ್ನೆರಡೂವರೆಯಲ್ಲಿ ಮಗಳು ಎಬ್ಬಿಸಿ ಅಮ್ಮಾ ಬ್ಯಾಟರಿ ತಗ ಹೊರಗೆ ಹೋಪನ ಎಂದಾಗ ! ಎಂತಕ್ಕೆ ಎಂದೆ ಅರೆಬರೆ ಸಿಟ್ಟಲ್ಲಿ . "ಟೂತ್ ಫ಼ೇರಿ ಹಲ್ಲು ತಗಂಡು ಒಂದು ಕಾಯಿನ್ ಇಟ್ಟಿಕೆ ಹೋಗ್ತು ಅದನ್ನ ಯಾರಾದ್ರು ಕದ್ಕ ನೆಡದ್ರೆ ... ಹೋಗಿ ತಗಬರನ ಬಾ" .. ಇಲ್ಲೆಲ್ಲ ಅದು ಕಾಯಿನ್ ಇಡ್ತಿಲ್ಲೆ ಅದರ ಬದಲು ನಿಂಗೆ ಸ್ಟ್ರಾಂಗ್ , ವೈಟ್ ಹಲ್ಲು ಕೊಡ್ತು ಮಲಗು ಈಗ ಅಂತಾ ಮಲಗಿಸಿದೆ .
ಬೆಳಗ್ಗೆ ಎದ್ದಕೂಡಲೆ "ಅಮ್ಮಾ ಬಾಗ್ಲು ತೆಕ್ಕೊಡು , ಹಲ್ಲು ತಗಂಡು ಹೋಜ ನೋಡವು". ಇಲ್ಲದ ಟೂತ್ ಫ಼ೇರಿ ಹಲ್ಲು ತೆಗೆದುಕೊಂಡು ಹೋಗುವುದಾದರೂ ಹೇಗೆ .?ಇದು ಮತ್ತೊಂದು ಹಟಕ್ಕೆ ನಾಂದಿ ಎಂದುಕೊಂಡು Safer side ಗೆ ನಾನೆ ಕತೆ ಕಟ್ಟಿದೆ .."ಅದೆಂತಾ ಒಂದೆ ಹಲ್ಲಿಗೆ ಹೇಳಿ ಬರಲಾಗ್ತ ?ರಾಶಿ ಮಕ್ಕಳ ಹಲ್ಲು ಬಿದ್ದಾಗ ಬರ್ತನ ಈಗ ಹಲ್ಲು ಅಲ್ಲೇ ಇದ್ರೆ ನೀ ಅಳಲಾಗ , ಬೇಜಾರ್ ಮಾಡ್ಕಳಲಾಗ ,ಅದು ಇನ್ನೊಂದಿನ ಬಂದು ತಗ ಹೋಗ್ತು" ಹೇಳಿ ಸಮಾಧಾನ ಮಾಡುತ್ತಲೆ ಬಾಗಿಲು ತೆಗೆದೆ .
ಹೋಗಿ ನೋಡಿದರೆ ಹಲ್ಲು ಅಲ್ಲಿಲ್ಲ .. ನನ್ನ ಥರಾನೆ ನಿನ್ನೆ ರಾಶಿಜನಕ್ಕೆ ಹಲ್ಲು ಬಿದ್ದಿದ್ದೆ ಎಂದು ಮಗಳು ಸಮಾಧಾನಗೊಂಡಳು ಎಂಬಲ್ಲಿಗೆ ಮೊದಲ ಹಲ್ಲಿನ ಕತೆ ಮುಕ್ತಾಯ ..
-ಸಂಧ್ಯೆ ..
14-12-2021
idannnu toothfairy maaDida maaye ennONave?
ReplyDelete