Monday 14 May 2012

ಎಲ್ಲೆಲ್ಲಿಯ ಮೈತ್ರಿಯ ನಂಟೋ..?? ಯಾರ್ಯಾರಲ್ಲಿ ಪ್ರೀತಿಯ ಋಣದ ಗಂಟೋ..??



 "ಹ್ಮ್ಹ್ ಆ ಚೀಲ ಇಲ್ಲಿ ಕೊಡು. ಏ ನಾಣಿ , ಎಂಕಟ ಆ ಕೂಸಿನ್ ಹಿಡಿರಾ , ಚೀಲ ತುಂಬುವಾ. ನಾಳೆ ಸಂತೆಯಲ್ಲಿ ಮಾರಿ ಬರ್ತೆ". ಹಿಂಗಂತ ನಮ್ಮ ಮನೆಗೆ ಕೊಳೆ ಅಡಿಕೆ ಕೊಳ್ಳಲು ಬರುತ್ತಿದ್ದ ಸಾಬಿಯೊಬ್ಬ ನನ್ನನ್ನು ಹೆದರಿಸುತ್ತಿದ್ದ. ಆಗ ನಾನು ಆರನೇ ತರಗತಿಲ್ಲಿದ್ದೆ. ಅವನ ಕೆಂಪು ಕಣ್ಣು, ಉದ್ದ ಗಡ್ಡ, ಆ ಟೋಪಿ, ದೊಗಲೆ ಶರಾಯಿ, ಎತ್ತರದ ಮೈಕಟ್ಟು ಎಲ್ಲ ನನ್ನನ್ನು ತುಂಬಾ ಹೆದರಿಸಿದ್ದವು. ಅವನು ಬಂದರೆ ನಾ ಮನೆಯಿಂದ ಹೊರಗೆ ಬರುತ್ತಲೇ ಇರಲಿಲ್ಲ. ದೇವರ ಮನೆಯಲ್ಲೇ ಇರುತ್ತಿದ್ದೆ. ಆದರೂ ಹೊರಗೆ ನಿಂತು ಹೀಗೆಲ್ಲ ಮಾತನಾಡಿ ಹೆದರಿಸಿ ಹೋಗುತ್ತಿದ್ದ. ಅವನಿಂದಾಗಿ ನನ್ನಲ್ಲಿ ಮುಸ್ಲಿಮರೆಂದರೆ ಮಕ್ಕಳು ಹಿಡಿಯುವವರು, ಮಾರಾಟ ಮಾಡುತ್ತಾರೆ ಎಂಬ ನಂಬಿಕೆ ಬಂದು ಹೋಗಿತ್ತು. ನಾನು ಮುಸ್ಲಿಮರನ್ನು ಕಂಡರೆ ಹೆದರುತ್ತಿದ್ದೆ. ಓಡುತ್ತಿದ್ದೆ.

ಒಂದು ಶನಿವಾರ ಶಾಲೆಯಿಂದ ಮನೆಗೆ ಬರುತ್ತಿದ್ದೆ. ಮಧ್ಯಾನ್ಹ  ಸುಮಾರು ೧ ಗಂಟೆಯ ಸಮಯ. ಒಂದು ಸೈಕಲ್ ವಾರಸುದಾರರಿಲ್ಲದೆ  ದಾರಿಯಲ್ಲಿ ಬಿದ್ದಿತ್ತು. ಹತ್ತಿರ ಹೋಗಿ ನೋಡಿದರೆ ಪಕ್ಕದಲ್ಲೇ ಒಬ್ಬ ಸಾಬಿ ತುಂಬಾ ಗಾಯವಾಗಿ ಬಿದ್ದಿದ್ದಾನೆ. ಮೊಳಕಾಲಿಗೆ ಗಾಯವಾದದ್ದರಿಂದ ಅವನಿಗೆ ನಿಲ್ಲಲೂ ಆಗುತ್ತಿರಲಿಲ್ಲ. ನಾನು ಅವನು ಮುಸ್ಲಿಂ ಎಂದು ಹೆದರಿ ಓಡಿ ಬಂದೆ. ಒಂದು ಸ್ವಲ್ಪ ಮುಂದೆ ಬಂದಿರಬಹುದು ಅವನನ್ನು ನೆನೆದು ಪಾಪ ಎನ್ನಿಸಿತು. ಮತ್ತೆ ಹಿಂದೆ ಅವನಲ್ಲಿಗೆ ಓಡಿ ಹೋದೆ. ಕುಡಿಯಲು ನೀರು ಕೊಟ್ಟು ಅವನ ಗಾಯವನ್ನು ನೀರಿನಿಂದ ತೊಳೆದು ಅದಕ್ಕೆ ನನ್ನದೇ ಖರ್ಚಿಪ್ಹ್ ಕಟ್ಟಿದೆ. ನಮ್ಮ ಮನೆ ಹತ್ತಿರವೇ ಇದ್ದಿದ್ದರಿಂದ ನಿಧಾನಕ್ಕೆ ಮನೆಗೆ ನಡೆಸಿಕೊಂಡು ಬಂದೆ.ಅಮ್ಮಾ  ಅವನ ಗಾಯಕ್ಕೆ ಔಷಧಿ ನೀಡಿ, ಅವನಿಗೆ ಊಟ ಹಾಕಿದರು. ಅವನು ಊಟ ಮಾಡಿ ನಿಧಾನವಾಗಿ ಸೈಕಲ್ ತಳ್ಳಿಕೊಂಡು ಹೊರಟು ಹೋದ. 

ಮುಂದಿನ ಶನಿವಾರ ಪೊಂವ್.. ಪೊಂವ್.. ಎಂಬ ಶಬ್ದದೊಂದಿಗೆ ಒಂದು ಸೈಕಲ್ ಮನೆ ಮುಂದೆ ಬಂದು ನಿಂತಿತು. ನೋಡಿದರೆ ಅದೇ ಸಾಬಿ. ಅವನೊಬ್ಬ ಐಸ್ ಕ್ಯಾಂಡಿ ಮಾರುವವನಾಗಿದ್ದ. ನನ್ನನ್ನು ಹತ್ತಿರ ಕರೆದ. ಹೆದರುತ್ತಲೇ ಹತ್ತಿರ ಹೋದವಳಿಗೆ, ಇದು ನನಗೆ ನೀರು ಕೊಟ್ಟ ಪುಟ್ಟ ಕೈ ಗೆ ಎಂದು ಐಸ್ ಕ್ಯಾಂಡಿ ಕೊಟ್ಟಿದ್ದ. ಮತ್ತೆ ಈ ಕೈ ಗೆ ಎಂದು ನನ್ನ ಎಡಗೈ ತೋರಿಸಿದ್ದೆ. ಇದು ಈ ಕೈಗೆ ಎಂದು ಅವನು ಮತ್ತೊಂದು ಐಸ್ ಕ್ಯಾಂಡಿ ಕೊಟ್ಟು ಹೋಗಿದ್ದ. ಅವತ್ತಿಂದ ಅದೇ ರೂಢಿಯಾಗಿತ್ತು. 
ಪ್ರತಿ ಶನಿವಾರ ಸೈಕಲ್ ನಿಲ್ಲಿಸಿ ನನ್ನ ಎರಡು ಕೈಗಳಿಗೆ ಒಂದೊಂದು ಐಸ್ ಕ್ಯಾಂಡಿ ನೀಡಿ ಹೋಗುತ್ತಿದ್ದ. ಹಣ ತೆಗೆದು ಕೊಳ್ಳುತ್ತಲೂ ಇರಲಿಲ್ಲ. ನನಗೆ "ಗಿಡ್ಡ ಲಂಗದ ಉದ್ದ ಜಡೆಯ ಪುಟಾಣಿ " ಎನ್ನುತ್ತಿದ್ದ. ಆಮೇಲೆ ನನ್ನ ಶಾಲೆ ಅಲ್ಲಿ ಮುಗಿದು ಹೈಸ್ಕೂಲ್ , ಕಾಲೇಜು, ಕೆಲಸಗಳಲ್ಲಿ ಐಸ್ ಕ್ಯಾಂಡಿಯ ನೆನಪೇ ಮರೆತು ಹೋಗಿತ್ತು. ಇನ್ನು ಕೊಡುತ್ತಿದ್ದವನ ನೆನಪೆಲ್ಲಿರಬೇಕು. 

ಮೊನ್ನೆ ಶನಿವಾರ ಮನೆಗೆ ಹೋಗಿದ್ದೆ. ಅಮ್ಮನೊಂದಿಗೆ ಹಲಸಿನ ಸೊಳೆ ಬಿಡಿಸುತ್ತ ಕುಳಿತವಳಿಗೆ ಪೊಂವ್.. ಪೊಂವ್.. ಎಂಬ ಸೌಂಡ್ ಕೇಳಿಸಿತು. ಅಮ್ಮಾ  ಐಸ್ ಕ್ಯಾಂಡಿ ಬಂತು ಎಂದಳು. ಪ್ರಜ್ಞಾ "ಅಕ್ಕ ಐಸ್ ಕ್ಯಾಂಡಿ ತಿಂಬನ" ಎನ್ನುತ್ತಾ ರಸ್ತೆ ಗೆ ಓಡಿ ಅವನನ್ನು ನಿಲ್ಲಿಸಿದಳು. ನಾನು ಹಣ ತೆಗೆದುಕೊಂಡು ಅವಳ ಹಿಂದೆ ಹೋದೆ. ಐಸ್ ಕ್ಯಾಂಡಿಯವ ನನ್ನನ್ನೇ ಒಂದೆರಡು ನಿಮಿಷ ಗಮನಿಸಿ ನೀನು ನನ್ನ "ಗಿಡ್ಡ ಲಂಗದ ಉದ್ದ ಜಡೆಯ ಪುಟಾಣಿ " ಅಲ್ಲವೇನೇ? ಎಷ್ಟು ದೊಡ್ಡವಳಾಗಿ ಬಿಟ್ಟಿದ್ದಿಯೇ ಎಂದ. ಹೌದು ಅದು ಅವನೇ ಆಗಿದ್ದ. ಸೈಕಲ್ ಬದಲು ಬೈಕ್ ಬಂದಿತ್ತು. ಗಡ್ಡ ನೆರೆತಿತ್ತು.  ನನ್ನ ನೋಡಿ "ಲಂಗ ಉದ್ದವಾಗಿದೆ ಜಡೆ ಗಿಡ್ಡವಾಗಿ ಬಿಟ್ಟಿದೆಯಲ್ಲೇ" ಎಂದು ತಮಾಷೆ ಮಾಡಿದ  . ನಾನು ಕೊಟ್ಟ ಹಣ ಸಹಿತ ತೆಗೆದುಕೊಳ್ಳದೆ  ಒಂದು ಐಸ್ ಕ್ಯಾಂಡಿ ಕೊಟ್ಟವನು "ಆ ಕೈ ಗೆ ಬೇಡವೇನೆ" ಇನ್ನೊಂದು ಕೈಗೂ ಐಸ್ ಕ್ಯಾಂಡಿ ಕೊಟ್ಟು  ನನ್ನ ಹಣೆ ಮುಟ್ಟಿ "ದೇವರು ನಿನ್ನನ್ನೂ ನೂರು ಕಾಲ ಸುಖವಾಗಿಟ್ಟಿರಲಿ ಮಗಳೇ " ಎಂದು ಆಶೀರ್ವದಿಸಿ ಪೊಂವ್.. ಪೊಂವ್.. ಎಂದು ಸದ್ದು ಮಾಡುತ್ತಾ ಹೊರಟು ಹೋದ. ಏನು ಮಾಡಬೇಕು.. ಏನು ಹೇಳಬೇಕು ಎಂದೇ ತಿಳಿಯಲಿಲ್ಲ.

ಅವನು ಕೊಟ್ಟ ಐಸ್ ಕ್ಯಾಂಡಿ ಬಾಯಿ ತಂಪು ಮಾಡುತ್ತಾ ಆ ಬಿಸಿಲಲ್ಲಿ ಕರಗಿ ಕೈ ತೊಯಿಸುತ್ತಿದ್ದರೆ; ಅವನ ಮುಗ್ದ ಮನಸಿನ ಹಾರೈಕೆಗೆ ಮನಸು ತಂಪಾಗಿ ಅವನನ್ನೇ ನೋಡುತ್ತಿದ್ದ ಕಣ್ಣುಗಳಲ್ಲಿ ಬಂದ ನೀರು ಕೆನ್ನೆ ತೋಯಿಸಿತ್ತು...

ಬಹು ದೂರದ ಬದುಕ  ಪಯಣದಲ್ಲಿ ಎಲ್ಲೆಲ್ಲಿಯ  ಮೈತ್ರಿಯ ನಂಟೋ..?? ಯಾರ್ಯಾರಲ್ಲಿ  ಪ್ರೀತಿಯ ಋಣದ ಗಂಟೋ..??

25 comments:

  1. ಹ್ಮ್ಮ್, ಏನೇನೋ ಹಳೆಯದೆಲ್ಲ ನೆನಪಿಸಿದ್ರಿ

    ReplyDelete
    Replies
    1. ಥ್ಯಾಂಕ್ಯು ಅಭಿಜ್ಞ.. ನಾನು ನನ್ನ ಹಳೆಯ ನೆನಪುಗಳನ್ನ ಕೆದಕುತ್ತಲೇ ಬರೆದಿದ್ದು..

      Delete
  2. ನಿರೂಪಣ ಶೈಲಿ ಚನಾಗಿದ್ದು. ಮುಂದುವರೀಲಿ

    ReplyDelete
  3. cholo iddu sandhya.... ninna sabiya kate Odi nanage Aladi veshada nenapu bantu....... mast baradde..

    ReplyDelete
  4. ಚೆನ್ನಾಗಿ ಮೂಡಿ ಬಂದಿದೆ ಸಂಧ್ಯಾ ಅವರೇ... "ನಾಳೆಗಾಗಿ ಒಂದು ಕನಸು ಬೇಕಿದೆ" ಅಂತ ಬರೆದ ನೀವು ಇಂದು ಒಂದು ಒಳ್ಳೆಯ ವಿಷಯವನ್ನ ನಮ್ಮ ಮುಂದೆ ಇಟ್ಟಿದೀರ. ಬರವಣಿಗೆ ಚೆನ್ನಾಗಿದೆ. ಮೊನ್ನೆ ನಾನು ಊರಿಗೆ ಹೋದಾಗ ನನಗೂ ಕೂಡ ಸಾಬಣ್ಣ ಐಸ್ ಕ್ಯಾಂಡಿ ಕೈಗಿಟ್ಟು ಚೆನ್ನಾಗಿದ್ದೀರ ಬಟ್ರೆ , ಆರಾಮಾಗಿರಿ ಅಂತ ಹೇಳಿದ್ದು ನೆನಪಿಗೆ ಬಂತು. ತಮ್ಮೆದುರಿಗೆ ಆಡುತ್ತಿದ್ದ ಮಕ್ಕಳು ಇಂದು ಬೆಳೆದು ದೊಡ್ದವರಾಗಿರನ್ನ ನೋಡೋದಕ್ಕೆ ಅವರಿಗೆಷ್ಟು ಖುಷಿ ಅಲ್ಲವಾ?

    ReplyDelete
    Replies
    1. ಥ್ಯಾಂಕ್ಯು ಗಣೇಶ್.. ನಿಮ್ಮ ಮಾತು ನಿಜ. ಆದರೆ ಎಂದೋ ಮಾಡಿದ ಪುಟ್ಟ ಸಹಾಯವನ್ನು ಇನ್ನು ನೆನಪಿಟ್ಟುಕೊಳ್ಳುವ ಮುಗ್ದ ಮನಸುಗಳು ಇನ್ನು ಇವೆಯಲ್ಲ ಅನ್ನೋದು ಖುಷಿ ಕೊಡುತ್ತೆ..

      Delete
  5. ಸಂಧ್ಯಾ ಆವರೆ,
    ಮನ ಮುಟ್ಟಿತು ನಿಮ್ಮ ಈ ಲೇಖನ, ಬಾಲ್ಯದ ಹಲವಾರು ನೆನಪುಗಳನ್ನು ಮತ್ತೆ ನೆನಪಿಸಿದ ನಿಮಗೆ ಧನ್ಯವಾದಗಳು.

    ReplyDelete
  6. ಸಂಧ್ಯಾರವರೆ: ನಮ್ಮ ಲೇಖನ ತುಂಬಾ ಚೆನ್ನಾಗಿದೆ...ಬಾಲ್ಯದ ನೆನಪುಗಳು ಹಾಗೆ ಮರುಕಳಿಸುತ್ತವೆ...

    ReplyDelete
  7. ಪ್ರವೀಣ್ ಸರ್ ಮತ್ತು ಶಿವೂ ಸರ್ ನನ್ನ ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು.
    ಹಳೆಯ ಬಾಲ್ಯದ ನೆನಪುಗಳೇ ಹಾಗೆ ಐಸ್ ಕ್ಯಾಂಡಿಯಂತೆ ತಂಪು ತಂಪು ಅಲ್ಲವೇ..

    ReplyDelete
  8. ಓ, ಇದು ಯಾವ ಜನ್ಮದ ಮೈತ್ರಿಯೋ ಸರಿ :-)
    ಚೆನ್ನಾಗಿದೆ ನೆನಪುಗಳ ಸಾಗರದಿ ಪಯಣ :-)

    ReplyDelete
  9. ಜೀವನದ ಪಯಣದಲ್ಲಿ ನಮ್ಮ ಬದುಕಿನಲ್ಲಿ ಎಷ್ಟೊಂದು ಬಣ್ಣದ ಛಾಪುಗಳನ್ನ ಒತ್ತಿ ಹೋಗಿರುತ್ತಾರೆ..ಯಾವುದೇ ವಿಧವಾದ ಕಲ್ಮಶವಿಲ್ಲದ ಮನಸುಗಳು ಎಂತಹ ಸುಂದರ ಪ್ರಪಂಚವನ್ನು ಕಟ್ಟಿ ಕೊಡುತ್ತೆ..ತುಂಬಾ ಅಂದದ ಬರವಣಿಗೆ...ಕಾಲ ನಮ್ಮ ಬದುಕನ್ನು ಹೇಗೆ ಬದಲಾಯಿಸುತ್ತೆ ಎನ್ನುವುದು ಒಂದು ಯಕ್ಷ ಪ್ರಶ್ನೆಯೇ ಸರಿ...
    "ಗಿಡ್ಡ ಲಂಗದ ಉದ್ದ ಜಡೆಯ ಪುಟಾಣಿ"....ಬದಲಾದ ರೀತಿ...ಇಷ್ಟವಾಯಿತು.."ಲಂಗ ಉದ್ದವಾಗಿದೆ ಜಡೆ ಗಿಡ್ಡವಾಗಿ ಬಿಟ್ಟಿದೆ"

    ReplyDelete
    Replies
    1. ನನ್ನ ಅಂಗಳಕ್ಕೆ ಸ್ವಾಗತ ಶ್ರೀಕಾಂತ್.. ಲೇಖನವನ್ನು ಮತ್ತು ಪುಟಾಣಿ ಬದಲಾದ ರೀತಿಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.. ನಿಮ್ಮ ಪುಟ್ಟ ಪ್ರೋತ್ಸಾಹ ಬರವಣಿಗೆಗೆ ಉತ್ಸಾಹ ನೀಡುತ್ತದೆ.

      Delete
  10. ಹೃದಯಸ್ಪರ್ಶಿ ಲೇಖನ.. ಬಹಳ ಇಷ್ಟ ಆತು.. ನಿಜವಾಗಿದ್ದ, ಕಲ್ಪಿಸಿ ಬರೆದಿದ್ದ?

    ReplyDelete
  11. ಹೂಂ ನಿಜ...!!!
    ಕೆಲವೊಮ್ಮೆ ಏನೆಂದರೆ ಏನೂ ಕಾರಣವೇ ಇಲ್ಲದೇ
    ಬೆಳೆಯುವ ಸಂಬಂಧಗಳು.. ಆತ್ಮೀಯತೆಗಳು..
    ಜೀವನದ ಕೊನೆಯವರೆಗೂ ಹಚ್ಚ ಹಸಿರಾಗಿದ್ದು ಬಿಡುತ್ವೆ....

    ಗಿಡ್ಡ ಲಂಗದ ಉದ್ದ ಜಡೆಯ ಹುಡುಗಿ
    ಉದ್ದ ಲಂಗದ ಗಿಡ್ಡ ಜಡೆಯ ಹುಡುಗಿಯಾಗುವವರೆಗೂ
    ನೆನಪಲ್ಲಿದ್ದಳೆಂದರೆ...
    ಇದಕ್ಕೆ ಬೇರೆ ಉದಾಹರಣೆ ಬೇಕೆ?

    ReplyDelete
    Replies
    1. ಧನ್ಯವಾದ ರಾಘವ..
      ನಿಮ್ಮ ಬ್ಲಾಗ್ open ಆಗ್ತಾ ಇಲ್ಲ. ನಿಮ್ಮ ಬರಹಗಳನ್ನ miss ಮಾಡಿಕೊಳ್ತಿದಿನಿ

      Delete
  12. ಮಿಡಿಯುವ ಕಥೆ. ತುಂಬ ಇಷ್ಟವಾಗುವ ಆಪ್ತ ಶೈಲಿ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
    Replies
    1. ಧನ್ಯವಾದ ಬರದಿನಾಥ ಸರ್.. ನನ್ನ ಅಂಗಳಕ್ಕೆ ಸ್ವಾಗತ

      Delete
  13. ಯಾರ ಯಾರದೋ ವಿನಾಕಾರಣದ ಪ್ರೀತಿ ಅಕ್ಕರೆಗಳ ಐಸ್ ಕ್ಯಾಂಡಿಯ ತಂಪಿನಿಂದಲೇ ನಮ್ಮೆಲ್ಲರ ಬದುಕೂ ಎಲ್ಲ ಜಂಜಡಗಳ ನಡುವೆಯೂ ಸಹನೀಯವೆನಿಸುವುದು ತಾನೆ...
    :::
    ::
    :
    ಯಾವುದೋ ನೆನಪಿನಾಳಕ್ಕೆ ಕೊಂಡೊಯ್ದ ಬರಹ...

    ReplyDelete
  14. Tumba chennagide, Navu shaalege hogovaga roadli LARI bandaga,maklanna hidiyoke banthu antha pode hinde bachitkota eddiddu nenapaytu!!!

    ReplyDelete