Saturday 3 November 2012

" ಸನ್ನೆಯಲ್ಲಿ ಮಾತನಾಡುವುದನ್ನು ಕಲಿಯಬೇಕಿದೆ ನನಗೆ".





ಮೌನ ಕೊಲ್ಲುತ್ತಿತ್ತು ಅಲ್ಲಿ. ಆದರೆ ಮಾತು ಸತ್ತು ತುಂಬಾ ದಿನಗಳಾಗಿದ್ದವು ಆ ಮನೆಯಲ್ಲಿ. ಮೂರು ಜನ ಅಕ್ಷರಶಃ  ದ್ವೀಪದಂತೆಯೇ ಬದುಕಿದ್ದೆವು ಅಲ್ಲಿ. ಮೂಕ ಅಪ್ಪ. ಮಾತು ಬಂದರೂ ಮೂಕಿಯಂತೆಯೇ ಬದುಕುತ್ತಿದ್ದ ಅಮ್ಮ. ಮತ್ತು ನನ್ನ ಮಾತುಗಳು ಇವರಿಗೆಲ್ಲಿ ತಿಳಿದೀತು ಎಂಬ ಅಹಂಕಾರದಲ್ಲಿ ಮಾತೇ ಆಡದೆ ಇರುತ್ತಿದ್ದ ನಾನು. ನಾಲ್ಕು ಅಕ್ಷರ ಕಲಿತವಳಲ್ಲವೇ , ಕಲಿಸಿದವರ ನೆನಪಿರಲಿಲ್ಲ. ಜಾಣೆ ನಾನು. ಆಟ ಪಾಠಗಳಲ್ಲೆಲ್ಲ ನಾನೇ ಮೊದಲು.ನನ್ನ ಯಶಸ್ಸನ್ನು ಮನೆಯಲ್ಲಿ ಹೇಳಿದರೆ ಅಮ್ಮ ದೇವರ ಮುಂದೆ ತುಪ್ಪದ ದೀಪ ಹಚ್ಚಿ , ಹೀಗೆ ಒಳ್ಳೆದಾಗಲಿ ಎನ್ನುತ್ತಿದ್ದಳು. ಮಾತು ಬಾರದ ಅಪ್ಪ ಕಣ್ಣಲ್ಲಿ ನೀರು ತುಂಬಿಕೊಂಡು ಏನೇನೋ ಅರ್ಥವಾಗದ ಸನ್ನೆ ಮಾಡುತ್ತಿದ್ದ. ನಾನದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ  ಮಾಡಿರಲಿಲ್ಲ. ಅವನ ಕೈ ಸನ್ನೆಗಳು ಅರ್ಥವಾಗದ ಜನ ಅವನನ್ನು ನೋಡಿ ನಗುತ್ತಿದ್ದರು. ನನ್ನನ್ನು ಮೂಗನ ಮಗಳೆಂದು ಊರವರು ಗುರುತಿಸುತ್ತಿದ್ದರೆ ಅಸಹ್ಯವಾಗುತ್ತಿತ್ತು .ಅವಮಾನವಾದಂತಾಗುತ್ತಿತ್ತು. ಅದಕ್ಕೆ ಯಾರೆದುರಿಗೂ ಆತ ನನ್ನ ತಂದೆಯೆಂದು ಹೇಳುತ್ತಲೇ ಇರಲಿಲ್ಲ.  ಯಾರನ್ನು ಮನೆಗೆ ಕರೆಯುತ್ತಿರಲಿಲ್ಲ. ಕಾಲೇಜು ಮತ್ತು ಹಾಸ್ಟೆಲ್ ನಲ್ಲಿ ಅನಾಥೆ ಅಂತ ಹೇಳಿಕೊಂಡೆ ಕಾಲೇಜ್ ಮುಗಿಸಿದ್ದೆ. 

ಒಂದು ಒಳ್ಳೆ ಕಂಪನಿಯಲ್ಲಿ ಕೆಲಸ ಸಿಗುವುದರಲ್ಲಿತ್ತು. ಕೆಲಸ ಸಿಕ್ಕ ತಕ್ಷಣ ಈ ಮುದಿ ಜೀವಗಳನ್ನು ಬಿಟ್ಟು ಎಲ್ಲಾದರೂ ದೂರ ಹೋಗಿ ಬದುಕಬೇಕು . ಸಾಕಿದ್ದರಾದ್ದರಿಂದ ತಿಂಗಳು ತಿಂಗಳು ಅಷ್ಟೋ ಇಷ್ಟೋ ಕಳಿಸಿದರಾಯಿತು ಎಂದುಕೊಂಡು ಒಂದು ವಾರ ಇರುವುದಕ್ಕಾಗಿ ಬಂದಿದ್ದು ಇಲ್ಲಿಗೆ. ಆದರೆ ಇಷ್ಟು ದೊಡ್ಡ ಆಘಾತ ಭರಸಿಡಿಲಿನಂತೆ ಬಡಿದಿತ್ತು. ಆ ಮೂಗ ನನ್ನ ಅಪ್ಪನೇ ಅಲ್ಲ ಎಂಬ ಸತ್ಯ ತಿಳಿದಿತ್ತು. ಒಳ ಮನೆಯ ಗೋಡೆಗಳಿಗೆ ಬಹಳ ಸತ್ಯ ಗೊತ್ತಿರುತ್ತದೆ ಎಂದು ಎಲ್ಲೋ ಓದಿದ್ದೆ. ಆದರೆ ಈ ಗೋಡೆಗಳಲ್ಲಿ ನನ್ನನ್ನು ಅಲ್ಲಾಡಿಸುವ ಸತ್ಯವಿತ್ತು ಎಂದು ಗೊತ್ತಿರಲಿಲ್ಲ. ಅಮ್ಮನ ಬಗೆಗೂ ಅಸಹ್ಯವಾಗ ತೊಡಗಿತ್ತು. ಛೆ ಇದೆಂತ ಜೀವನ ? ಎನಿಸ ತೊಡಗಿತ್ತು. ಈ ಕ್ಷಣದಲ್ಲಿ ಮನೆ ಬಿಟ್ಟು ಹೋಗಬೇಕೆಂದು ನಿರ್ಧರಿಸಿ ಎಲ್ಲವನ್ನು ಪ್ಯಾಕ್ ಮಾಡಿಕೊಂಡು ಹೊರಟಿದ್ದೆ.  

ಯಾಕೋ ಅಮ್ಮನಿಗೆ ಹೇಳೋಣ ಅನಿಸಿತು. ಅಮ್ಮ ಒಳಮನೆಯ ಕಿಟಕಿಗೆ ತಲೆ ಕೊಟ್ಟು, ಈಗಲೋ ಆಗಲೋ ಮಳೆ ಬರುವಂತಿದ್ದ ಕಾರ್ಮುಗಿಲ ದಿಟ್ಟಿಸುತ್ತ ಕುಳಿತಿದ್ದಳು. ಹೆಜ್ಜೆ ಸಪ್ಪಳಕ್ಕೆ ತಿರುಗಿ ನೋಡಿದವಳು "ಹೇಳದೆ ಹೊರಟು ಬಿಟ್ಟೆ ಎಂದುಕೊಂಡೆ. ಹೇಳಿ ಹೋಗಲು ಬಂದೆಯಾ??" ಎಂದಳು. ತಲೆಯಾಡಿಸಿದ್ದೆ. "ನನ್ನ ಮೇಲೆ ಅಸಹ್ಯವಾಗಿರಬೇಕಲ್ಲ ?? ನನ್ನ ಮಾತುಗಳು ಅಸಹ್ಯ ಎನಿಸದಿದ್ದರೆ ನಿನ್ನೊಡನೆ ಸ್ವಲ್ಪ ಮಾತನಾದಬೇಕಿದೆ ಕೇಳುವೆಯಾ" ಎಂದವಳು ನನ್ನ ಮುಖವನ್ನೂ ನೋಡದೆ ತನ್ನಷ್ಟಕ್ಕೆ ತಾನೇ ಎಂಬಂತೆ ಮಾತನಾಡತೊಡಗಿದಳು. ನಿನಗೆ ಅಮ್ಮನಾಗುವ , ಗಂಡನಿಗೆ ಹೆಂಡತಿಯಾಗುವ, ಅತ್ತೆಗೆ ಸೊಸೆಯಾಗುವ ಮೊದಲು ನಾನೂ ನಿನ್ನಂತೆಯೇ ಹೆಣ್ಣಾಗಿದ್ದೆ ಕಣೆ. ನನಗೆ ಅಮ್ಮನ ಕೈ ತುತ್ತಿನ ಸವಿ, ಜೋಕಾಲಿ, ಹಲಪೆಯಾಟದ ನೆನಪುಗಳಿದ್ದವು.. ಹರೆಯದ ವೈಯ್ಯಾರ , ಒನಪು, ಚಂದದಿ ಅರಳಿದ ಕನಸುಗಳಿದ್ದವು.. ಆಗ ತಾನೇ ಅರಳಿದ ಪ್ರೀತಿಯಿತ್ತು ಬದುಕಲ್ಲಿ.. ಆದರೆ ಪ್ರತಿಷ್ಠೆಯ ದಳ್ಳುರಿಯಲ್ಲಿ ನನ್ನ ಪ್ರೀತಿಯನ್ನೂ, ಪ್ರೀತಿಸಿದವನನ್ನೂ ಕೊಂದು ನಿನ್ನ ಅಪ್ಪನೆನಿಸಿಕೊಂಡವನ ತಾಳಿಗೆ ಕೊರಳೊಡ್ಡಿಸಿದರು ಮಾರಿ ಗದ್ದುಗೆಗೆ ಕುರಿ ಕೊರಳಿಡುವಂತೆ. ಅಲ್ಲಿಗೆ ತವರ ಸಂಬಂಧ ಕಡಿದು ಬಿತ್ತು. ಹೆಣ್ಣು ಸಹನಾ ಧರಿತ್ರಿ ಅಲ್ಲವೇ . ಎಲ್ಲವನ್ನು ಮರೆತು ಹೊಸ ಬದುಕು ಕಟ್ಟುತ್ತೇನೆ ಎಂದುಕೊಂಡೆ. ಆದರೆ ಅತ್ತೆ ಎನಿಸಿಕೊಂಡವಳು ನನಗೆಂದೂ ತಾಯಿಯಾಗಲಿಲ್ಲ. ಗಂಡನಾದವನು ಗಂಡನ ದರ್ಪ ತೋರಿದನೆ ವಿನಃ ಗೆಳೆಯನಾಗಲಿಲ್ಲ. ಒಂದು ವರ್ಷದಲ್ಲಿ ನೀನು ಹೊಟ್ಟೆಯಲ್ಲಿದ್ದೆ. ಹೆಣ್ಣು ಮಗುವಾದರೆ ನಿನಗೆ ಈ ಮನೆಯಲ್ಲಿ ಜಾಗವಿಲ್ಲ ಎಂದು  ಮೊದಲೇ  ಅತ್ತೆಯ ತಾಕೀತು. ಹೆಣ್ಣಾದರೆ ಅವಳನ್ನು ಮತ್ತೆ ಕರೆತರುವ ಅವಶ್ಯಕತೆಯಿಲ್ಲ ಎಂದು ಮಾವ ಒಳಮನೆಯಲ್ಲಿ ನಿಂತು ಅಬ್ಬರಿಸಿದ್ದು, ಹೆರಿಗೆ ನೋವಿನಿಂದ ನರಳುತ್ತಿದ್ದರೂ ಕಿವಿಗೆ ತಾಕಿತ್ತು . ಆಸ್ಪತ್ರೆಯಲ್ಲಿ ನಿನ್ನ ಹೆತ್ತು , ನಿನ್ನ ಸ್ಪರ್ಶವನ್ನು ಆನಂದಿಸುತ್ತಿದ್ದವಳಿಗೆ ಕೇಳಿದ್ದು "ಹೆಣ್ಣುಮಗುವಮ್ಮ" ಎಂದ ನಿನ್ನಪ್ಪನ ಕೊನೇ ಮಾತು. ಆಮೇಲೆ ಅವರ ಮಾತು ಕೇಳಲಿಲ್ಲ , ಮುಖ ನೋಡಲಿಲ್ಲ. ಹೆಣ್ಣು ಹೆತ್ತ ಕಾರಣಕ್ಕೆ ಹಸಿ ಬಾಳಂತಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ನಡೆದಿದ್ದರು ನನ್ನ ಗಂಡನ ಮನೆಯವರು. ಗಂಡನ ಮನೆಯ ಸಂಬಂಧವೂ ಹಾಗೆ ಕಡಿದಿತ್ತು.  ಅಲ್ಲಿಂದ ಹೊರಬಿದ್ದ ನನ್ನನ್ನು ಹದ್ದಿನ ಕಣ್ಣಿನ ಸಮಾಜ ಹಸಿ ಮಾಂಸದ ತುಂಡಿನಂತೆ ನೋಡುತ್ತಿತ್ತು. ಆಗ ಜೋತೆಯಾದವನು ಈ ಮೂಗ. ಮನೆಗೆ ಬಾ ಎಂದು ಕರೆದುಕೊಂಡು ಬಂದ. ಒಂದೇ ಸೂರಿನಡಿಯಲ್ಲಿ ಗಂಡು ಹೆಣ್ಣು  ಸಂಬಂಧವಿಲ್ಲದೆ ಬದುಕುವುದನ್ನು ಸಮಾಜ ಒಪ್ಪುವುದಿಲ್ಲ ಅಲ್ಲವೇ? ಅದಕ್ಕೆ ಈ ತಾಳಿ ತಂದು ಕೊಟ್ಟು , ನೀನೆ ಕಟ್ಟಿಕೋ ಎಂದು ಸನ್ನೆ ಮಾಡಿದ. ಅವನ ಸನ್ನೆಯಂತೆ ನಾನೇ  ಕಟ್ಟಿಕೊಂಡೆ. ಅವತ್ತಿನಿಂದ ಮಗಳಲ್ಲದ ನೀನು , ಹೆಂಡತಿಯಲ್ಲದ ನಾನು ಅವನ ಮೂಕ ಪ್ರಪಂಚದ ಭಾಗವಾದೆವು. ನಮಗಾಗಿ ಅವರಿವರ ಮನೆಯ ಜಮೀನಿನಲ್ಲಿ ಗೇಣಿ ಮಾಡಿ ಗಾಣದೆತ್ತಿನಂತೆ ದುಡಿದು ಈ ಮನೆ ಮಾಡಿದರು. ನಿನಗೆ ಯಾವುದಕ್ಕೂ ಕಡಿಮೆಯಾಗದಂತೆ ನಿನ್ನ ಬೆಳೆಸಿದರು. ವಿದ್ಯೆ ಕಲಿಸಿದರು. ಮೂಕ ಮನಸ್ಸಿನಲ್ಲಿ ನಿನ್ನ ಮದುವೆಯ ಕನಸು ಕಂಡರು. ನಿನಗಾಗಿ ಚಿನ್ನ ಮಾಡಿಸಿದರು, ಬ್ಯಾಂಕಿನಲ್ಲಿ ಹಣ ಕೂಡಿಟ್ಟರು. ಅವರು ಬಂದ ತಕ್ಷಣ ಅವರನ್ನು ಕೇಳಿ ಆ ಕಾಗದ ಪತ್ರಗಳನ್ನು ನಿನಗೆ ಒಪ್ಪಿಸುತ್ತೇನೆ ಅಲ್ಲಿವರೆಗೂ ದಯವಿಟ್ಟು ನಿಲ್ಲು. ದೇವರು ನನ್ನಿಂದ ಪ್ರೀತಿಯನ್ನು ಕಿತ್ತುಕೊಂಡ. ತವರನ್ನು ದೂರ ಮಾಡಿದ . ಹೆಣ್ಣು ಹೆತ್ತಿದ್ದಕ್ಕಾಗಿ ಗಂಡನ ಮನೆಯವರನ್ನು ದೂರ ಮಾಡಿದ . ಹೆಣ್ಣು ಮಗಳಾದ ನಿನ್ನನ್ನೂ ದೂರ ಮಾಡುತ್ತಿದ್ದಾನೆ. ಆದರೂ ಬೇಸರವಿಲ್ಲ ,ಕಾರಣ ನನ್ನ ಮೌನ ಪ್ರಪಂಚವನ್ನೂ,ಅದರ ಸುಖವನ್ನು ಅವನು ಕಸಿದುಕೊಳ್ಳಲಾರ ಎಂದವಳು ನನ್ನ ಮುಖ ನೋಡಿ, ಇರು ಎಂದೂ ಒಳಗೆ ಹೋಗಿ ಒಂದು ಮಫ್ಲರ್ ಮತ್ತು ಸ್ವೆಟ್ಟರ್ ತಂದು , ಮೊನ್ನೆ ಸಂತೆಗೆ ಹೋದವರು ಮಳೆಗಾಲಕ್ಕೆ ನಿನಗೆ ಅಂತಾ ಇವರು ತಂದಿದ್ದಾರೆ ತೆಗೆದುಕೋ ಎಂದು ಕೈಗಿತ್ತಳು. ಸತ್ಯವನ್ನು ಮುಚ್ಚಿಡಬೇಕೆಂದುಕೊಂಡಿದ್ದೆ . ಆದರೆ ನಿನಗೆ ಗೊತ್ತಾದ ಅರ್ಧ ಸತ್ಯವನ್ನು ಪೂರ್ತಿಗೊಳಿಸಬೇಕಿತ್ತು ಅದಕ್ಕಾಗಿ ಎಲ್ಲವನ್ನೂ  ಹೇಳಿದೆ. ದಯವಿಟ್ಟು ನನ್ನ ಕಮಿಸು ಎಂದು ಕುಸಿದು ಕುಳಿತಳು.

ಹೊರಗಡೆ ಧೋ ಎಂದು ಮಳೆ ಸುರಿಯುತ್ತಿತ್ತು, ಆದರೆ ಅದರ ಪರಿವಿರಲಿಲ್ಲ. ಅಮ್ಮನ ಮಾತಿನ ಮಳೆ ಮನಸ್ಸಿನ ಎಲ್ಲ ಕೊಳೆಗಳನ್ನು ತೊಳೆದು ಹಾಕಿತ್ತು. ಹುಟ್ಟಿಸಿದ ಅಪ್ಪನೆನಿಸಿಕೊಂಡವ ನನ್ನನ್ನು  ಹೆಣ್ಣೆಂದು ತೊರೆದು ಹೋಗಿದ್ದ. ಆದರೆ ಅಪ್ಪನಲ್ಲದವನು ನನ್ನನ್ನೇ ಬದುಕೆಂದುಕೊಂಡು, ಗಂಧದಂತೆ ತನ್ನನ್ನು ಸವೆಸಿಕೊಂಡು ಅಪ್ಪನ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ್ದ. ಆದರೆ ನಾನು ಯಾವುದನ್ನೂ  ಅರ್ಥ ಮಾಡಿಕೊಂಡಿರಲಿಲ್ಲ. ಬದುಕ ತುಂಬಾ ಮೌನವಾಗಿ ಪ್ರೀತಿಸಿದವನಿಗೆ ನಾನು ಕೊಟ್ಟಿದ್ದು ತಿರಸ್ಕಾರ ಮಾತ್ರ. ಈಗ ಯಾವುದೂ ಬೇಡವಾಗಿತ್ತು. ಓಡಿ ಹೋಗಿ ಅಮ್ಮನನ್ನು ತಬ್ಬಿಕೊಂಡೆ."ನನ್ನನ್ನು ಕ್ಷಮಿಸಿಬಿಡಮ್ಮ . ಇನ್ನು ಯಾವತ್ತೂ ನಿಮ್ಮಿಬ್ಬರನ್ನು ಬಿಟ್ಟು ಎಲ್ಲೂ ಹೋಗಲಾರೆ. ಇಲ್ಲಿಯೇ ಕೆಲಸ ಹಿಡಿಯುತ್ತೇನೆ . ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನ್ನ ಕ್ಷಮಿಸು " ಎಂದು ಬೇಡಿಕೊಂಡೆ. ಬೊಗಸೆಯಲ್ಲಿ ನನ್ನ ಮುಖ ಹಿಡಿದುಕೊಂಡು ಹಣೆಗೆ ಮುತ್ತಿಟ್ಟು ಎದೆಗೆ ಒತ್ತಿಕೊಂಡಳು. ಕ್ಷಮಿಸುತ್ತಿಯಲ್ಲವೇ ? ಅಪ್ಪನು ಕ್ಷಮಿಸುತ್ತಾರೆನಮ್ಮ?? ಎಂದೆ. ತುಸುನಕ್ಕು  ಕಿವಿ ಮುಚ್ಚುವಂತೆ ಮಫ್ಲರ್ ಸುತ್ತಿ , ಸೆಟ್ಟರ್ ತೊಡಿಸಿ "ತುಂಬಾ ಚಳಿಯಿದೆ.ಬೆಚ್ಚಗೆ ಹೊದ್ದುಕೊ. ಇವರು ಬರುವ ಹೊತ್ತಾಯಿತು  ಮಳೆಯಲ್ಲಿ ನೆನೆದು ಬರುತ್ತಾರೆ,   ಬೆಂಕಿ ಮಾಡಿ ಬಿಸಿನೀರು ಕಾಯಿಸಬೇಕು ಎನ್ನುತ್ತಾ ಒಳಗೆ ಹೋದಳು. ಅಪ್ಪ ಬರುವ ದಾರಿ ಕಾಯುತ್ತಾ ಅಲ್ಲೇ ಕುಳಿತೆ. 

ತಡೆದ ಮಳೆ ಜಡಿದು ಹೊಡೆಯುತ್ತದಂತೆ. ಒಂದು ದೊಡ್ಡ ಮಳೆ ಬಂದು ನಿಂತು ಆಕಾಶ ನಿರ್ಮಲವಾಗಿತ್ತು. ಅಂತೆಯೇ ಮನಸ್ಸೂ ಕೂಡ. ಹೊದ್ದುಕೊಂಡಿದ್ದ ಸ್ವೆಟ್ಟರ್ ಮತ್ತು ಮಫ್ಲರ್ ಬೆಚ್ಚ್ಚಗಾಗಿಸುತ್ತಿದ್ದರೆ , ಅದರೊಳಗಿದ್ದ ಪ್ರೀತಿಯ ಭಾವ ಇನ್ನೂ  ಅಪ್ಯಾಯಮಾನವಾಗಿತ್ತು. "ಬೇಗ ಬನ್ನಿ ಅಪ್ಪಾ. ನಿಮ್ಮ ಮೌನ ಪ್ರಪಂಚದ ಭಾಗವಾಗಬೇಕಿದೆ. ಮಡಿಲಲ್ಲಿ ತಲೆಯಿಟ್ಟು ಮಲಗಬೇಕಿದೆ. ನಿಮ್ಮ ಸನ್ನೆಯ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸನ್ನೆಯಲ್ಲೇ ನಿಮ್ಮೊಡನೆ ಮಾತನಾಡಬೇಕಿದೆ. ನನ್ನ ಸನ್ನೆಗಳು ನಿಮಗೆ ಅರ್ಥವಾಗಬಹುದಾ?? ಗೊತ್ತಿಲ್ಲ. ಆದರೆ ಈಗಿನಿಂದಲೇ ಸನ್ನೆಯಲ್ಲಿ ಮಾತನಾಡುವುದನ್ನು ಕಲಿಯಬೇಕಿದೆ ನನಗೆ". 

22 comments:

  1. 2 ಕಾರಣಕ್ಕೆ ಎಸ್.ಪಿ. ನಿನ್ನ ಲೇಖನ ಮನಕಲಕುತ್ತದೆ
    1. ವಿಧ್ಯಾವಂತರೆಂಬ ಹುಂಬರ ಹಣೆಪಟ್ಟಿ ಕಟ್ಟಿಕೊಂಡು ಜನುಮ ನೀಡಿದ ಅಮ್ಮ, ಬಾಳು ನೀಡಿದ ಅಪ್ಪನನ್ನು ಕಡೆಗಣಿಸುವ ಮಂದಿಯ ಕಥಾನಕ
    2. ತಾಯಿಯ ತಂದೆಯ ಮಮತೆ ವಾತ್ಸ್ಯಲಗಳನ್ನು ಬರಿ ಅವರ ಹೊರಗಿನ ಶಾರೀರಗಳಿಂದ, ವೇಷ ಭೂಷಣಗಳಿಂದ ಅಲೆಯುತ್ತ ಜೀವನದ ಅಮೂಲ್ಯ ಸಂಪತನ್ನು ಕಡೆಗಣಿಸುವ ನಾಗರೀಕ ಸಮಾಜ.

    ಎಸ್ .ಪಿ. ಅತಿ ಸುಂದರವಾಗಿದೆ ನಿನ್ನ ಲೇಖನ, ಬಹಳ ಇಷ್ಟವಾಯಿತು ನೀನು ಕೊಟ್ಟಿರುವ ಅಂತ್ಯ. ಅಭಿನಂದನೆಗಳು

    ReplyDelete
  2. ಬಹಳ ಸುಂದರ ಕಥಾನಕ ಸಂಧ್ಯಾ..
    ತುಂಬಾ ಇಷ್ಟವಾಯಿತು.

    ReplyDelete
  3. " ಸನ್ನೆಯಲ್ಲಿ ಮಾತನಾಡುವುದನ್ನು ಕಲಿಯಬೇಕಿದೆ ನನಗೆ".
    ಕುತೂಹಲವಷ್ಟೇ ಅಲ್ಲ... ಕಥೆಯನ್ನು ಓದಿದಾಗ ಈ ಕಥೆಯ ಸಾರಕ್ಕೆ ತಲೆಬರಹ ಆಪ್ಯ
    ಅನಿಸಿಬಿಡುತ್ತೆ.

    ಈವತ್ತು ತಾನೇ ಬೆಳಿಗ್ಗೆ ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ಗುರುಗಳು ಅಂದಿದ್ದ ಮಾತು
    ನೆನಪಾಯಿತು. ಗುರು ಅಂದರೆ ಗುರು.. ತಂದೆ ಅಂದರೆ ತಂದೆ......
    ತಾಯಿ ಅಂದರೆ ತಾಯಿ ಆಕೆ...... ಆ ಜೀವ ನಮಗೆ ಕೇಡು ಬಯಸೀತೇ?
    ಆಕೆಯು ನಮಗಾಗಿ ಮಾಡಿದ ತ್ಯಾಗ... ಕಲಿಸಿದ ವಿದ್ಯೆ.... ಅವಳ ಮಮತೆಗೆ ಗೌರವಿಸಬೇಕೇ ಹೊರತು
    ಅವಳು ಏನು ಮಾಡಿ ಮಗುವಿನ ಹೊಟ್ಟೆ ತುಂಬಿಸಿದಳು ಎಂದಲ್ಲ....
    ನಮಗವಳು ತಾಯಿ... ಅಷ್ಟೇ....
    ಓದುವಾಗ ಏಕೋ ನೆನಪಾಯಿತು..

    ಭಾವುಕ ಬರಹ.... ಇಷ್ಟವಾಯಿತು..
    ನಾವು ಬುದ್ದಿವಂತರು....
    ಆದರೂ ಎಷ್ಟೊಂದು ಕಲಿಯಬೇಕಿದೆ ಅಲ್ವಾ......

    ReplyDelete
    Replies
    1. ಹೆಚ್ಚಾದ ಅತೀ ಬುದ್ಧಿವಂತಿಕೆಯೇ ಕೆಲವೊಮ್ಮೆ ಆಪ್ತರನ್ನು ದೂರವಾಗುವಂತೆ ಮಾದುತ್ತದ್ದೇನೋ

      ಧನ್ಯವಾದ ರಾಘವರವರೆ

      Delete
  4. ತುಂಬಾ ಆಪ್ತ ಬರಹ...

    ಅವತ್ತಿನಿಂದ ಮಗಳಲ್ಲದ ನೀನು, ಹೆಂಡತಿಯಲ್ಲದ ನಾನು ಅವನ ಮೂಕ ಪ್ರಪಂಚದ ಭಾಗವಾದೆವು...

    ಯಾರೂ ಅಲ್ಲದ ನಾವೂ, ಎಲ್ಲವೂ ನಮ್ಮದೇ ಎಂದು ಬದುಕುವ ಜಗದ ಸೋಜಿಗದಲ್ಲಿ ಪ್ರೇಮ ಮಾನವೀಯತೆಯ ಬಂಧ ಸಂಬಂಧಗಳಿಗಿಂತ ಮಿಗಿಲಾಗುವ ಕಾಲಕ್ಕಾಗಿ ಕಾಯುತ್ತ...

    ಮತ್ತಷ್ಟು ಸುಂದರ ಬರಹಗಳ ನಿರೀಕ್ಷೆಯಲ್ಲಿ...

    ReplyDelete
  5. ಅತ್ಯುತ್ತಮ ಸಂವೇದನಾಶೀಲ ಬರಹ. ಉತ್ತಮ ಬರಹಗಾರ್ತಿಯಾಗುವ ಲಕ್ಷಣಗಳು ನನಗೆ ಕಾಣುತ್ತಿದೆ. ಬೆಳಗು ತಂತ್ಯಮ್ಮ ಬೆಳಗು.

    ReplyDelete
  6. ಚಂದದ ಕಥೆ.ಮನಕ್ಕೆ ತಾಕುವಂತ ಪಾತ್ರಗಳಿವೆ.ಕವಯಿತ್ರಿಯೊಬ್ಬಳ ಮಾತು ನೆನಪಾಯ್ತು
    'ಅಪ್ಪಾ ನೀನು ಬರೀ ಜೀನ್ ಕೊಡುವ ಜೊತೆಯಲ್ಲಿ ಒಂದಿಷ್ಟೇ ಇಷ್ಟು ಪ್ರೀತಿಯನ್ನು
    ಕೊಟ್ಟಿದ್ದರೆ ಜೀವನಪೂರ್ತಿ ನಿನ್ನನ್ನು ಹೆಗಲ ಮೇಲೆ ಹೊತ್ತು ತಿರುಗುತ್ತಿದ್ದೆ'ಎಂದು
    ಬರೆಯುತ್ತಾಳವಳು.'ಅವತ್ತಿನಿಂದ ಮಗಳಲ್ಲದ ನೀನು, ಹೆಂಡತಿಯಲ್ಲದ ನಾನು ಅವನ ಮೂಕ
    ಪ್ರಪಂಚದ ಭಾಗವಾದೆವು' ಎನ್ನುತ್ತದೆ ನಿನ್ನ ಈ ಕಥೆ. ನಾವು ಅನುಬಂಧ,ಪ್ರೀತಿ
    ಹಂಚಿಕೊಂಡವರನ್ನು ಸ್ವೀಕರಿಸಲು ಮರೆಯುತ್ತೇವೆ.ಬರೆಯುತ್ತಿರು.....

    -ವೆಂಕಟ್ರಮಣ

    ReplyDelete
  7. ಸಂಧ್ಯಾಅವರೆ, ಇತ್ತೀಚೆಗಷ್ಟೆ ನಿಮ್ಮ ಬ್ಲಾಗ್ನ ಓದುಗಳಾದ ನಾನು ಅವುಗಳ ಅಭಿಮಾನಿಯಾಗಿದ್ದೇನೆ.ಆ ಅಭಿಮಾನ ನಿಮ್ಮ "ಸನ್ನೆಯಲ್ಲಿ ಮಾತನಾಡುವುದನ್ನು ಕಲಿಯಬೇಕಿದೆ ನನಗೆ" ಓದಿ ಇಮ್ಮಡಿಯಾಯಿತು.ನಿಜವಾಗಿ ಎಂಥ ಭಾವನಾತ್ಮಕ ಬರಹ ನಿಮ್ಮದು!ಏನು ಬರೆಯಬೇಕೋ ತೋಚುತ್ತಿಲ್ಲ ಅಷ್ಟು ಭಾವುಕಳಾಗಿದ್ದೇನೆ.

    ರಕ್ತ ಸಂಬಂಧವನ್ನು ಮೀರಿದ ಬಂಧಗಳು ಈಗಿನ ಕಾಲಕ್ಕೆ ಹೊಂದುವುದಿಲ್ಲವೇನೋ ಎಂಬಷ್ಟರ ಮಟ್ಟಿಗೆ ಇಂದು ಸಂಬಂಧಗಳ ಗಂಟು ಸಡಿಲಾಗಿದೆ.ಯಾಕೆಂದರೆ ರಕ್ತ ಸಂಬಂಧಕ್ಕೇ ಇಂದು ಗಟ್ಟಿತನ ುಳಿದಿಲ್ಲ.ಹಾಗಾಗಿ ಈ ರೀತಿಯ ಬರಹಗಳಿಂದಲಾದರೂ ನಮ್ಮ ಮನಸ್ಸಿನಲ್ಲಿ ಕೊಂಚ ಆಶಾಭಾವನೆ ಮೊಳಕೆಯೊಡೆಯಲಿ.ಪ್ರೀತಿಯ ಹಸಿವೆಗೂ ಒಂದಲ್ಲಾ ಒಂದು ಕಡೆ ಆಹಾರ ಲಭ್ಯವಿದೆ ಎಂಬ ಆಸೆಯೊಂದಿಗೆ ಹೊಸ ಹುರುಪಿನಿಂದ ಬದುಕಬಹುದು.

    ReplyDelete
  8. ವಾವ್ .. ಎಸ್ಟು ಅದ್ಭುತವಾಗಿ ಬರದ್ದೆ .. ಮನ ಮುಟ್ಟುವ ಹಾಗಿದ್ದು .. ಪದಗಳು ಸಿಗ್ತಾ ಇಲ್ಲೆ ಹೇಳಕ್ಕೆ .. ಸನ್ನೆಯಲ್ಲೇ ಹೇಳಕ್ಕು ... ಸೂಊಊಊಊಊಊಊಊಒಪರ್ !

    ReplyDelete
  9. ಮೌನವೇ ಭಾಷೆಯಮೂಲ. ಓದಿಮುಗಿದಾಗ ಉಳಿದಿದ್ದು ಮೌನವೇ.

    ReplyDelete
  10. tumba chennagide...
    but i have a doubt about the blog.. will u please tell me how to change the name of the blog from english to kannada.. please..... also my readers are telling they could not read the kannada posts in my blog... do u have any solution for that...????? please help me

    ReplyDelete
    Replies
    1. ಪ್ರೀತಿಯ ವಾಸುಕಿ ,

      ಬ್ಲಾಗ್ ಹೆಸರನ್ನು ಬದಲಾಯಿಸಲು Design ನಲ್ಲಿ customize ಅಂತ option ಇದೆ. ಅಲ್ಲಿ ನಿಮಗೆ layout option ಗೆ ಹೋದರೆ ಅಲ್ಲಿ header edit option ನಲ್ಲಿ ಬದಲಾಯಿಸಬಹುದು. ಇಂಗ್ಲಿಷ್ ನಿಂದ ಕನ್ನಡಕ್ಕೆ ಬದಲಾಯಿಸಬೇಕೆಂದರೆ new post option ನಲ್ಲೆ "ಅ" ಅಂತ symbol ಇದೆ. ಅದನ್ನು click ಮಾಡಿದರೆ ಅಲ್ಲೇ ಕನ್ನಡದಲ್ಲಿ type ಮಾಡಬಹುದು. ಅದಿಲ್ಲವೆಂದರೆ compose mail ನಲ್ಲಿ ಕನ್ನಡದಲ್ಲಿ ಟೈಪ್ ಮಾಡಿ paste ಮಾಡಬಹುದು. --

      Delete
  11. ಸನ್ನೆಯಲ್ಲಿಯೇ ಮಾತನಾಡುವದನ್ನು ಕಲೆಯಬೇಕಿದೆ... ಚೆನ್ನಾಗಿದೆ. ಬ್ಲಾಗ್ ಗಳನ್ನೂ ತಡಕಾಡುತ್ತಿರುವಾಗ ಆಕಾಸ್ಮಿಕವಾಗಿ ಸಿಕ್ಕಿದ್ದು ನಿಮ್ಮ ಬ್ಲಾಗ್ ಸೂಪರ್ ಬರೀತಿರಾ... ಓದಿ ಖುಷಿ ಪಡುತ್ತಿರುವೆ. ಇನ್ನು ಉತ್ತಮ ಸಂವೇದನಾಶೀಲ ಬರಹಗಳು ನಿಮ್ಮಿಂದ ಬರಲಿ ಮೇಡಮ...

    ReplyDelete
  12. ಸಂಧ್ಯಾ... ಬಹಳ ಚೆನ್ನಾಗಿದ್ದು... ತುಂಬಾನೇ ಇಷ್ಟ ಆತು.. :)

    ReplyDelete