Sunday, 29 January 2012

ಯಾವ ಚೈತ್ರದ ವಸಂತ ಋತುವೋ ನೀನು...??


ಕಣ್ಣ ಸನ್ನೆಯಲಿ..
ಹೆಣ್ತನವ ಗೆದ್ದು..
ರೆಪ್ಪೆಯಂಚುಗಳಲ್ಲಿ ...
ಕನಸುಗಳ ಬಲೆ ಹೆಣೆದು...
ಕೆನ್ನೆಗುಳಿಯ ಬೊಗಸೆಗಳಲ್ಲಿ 
ಮುತ್ತಿನ ಮಳೆ ಸುರಿದು..
ಎದೆಯ ಮಾಮರದಿ...
ಒಲವ ಉಯ್ಯಾಲೆಯಲಿ..
ಸವಿನೆನಪುಗಳ ತೂಗುವವ..
ಯಾವ ಚೈತ್ರದ  
ವಸಂತ ಋತುವೋ ನೀನು...??

Friday, 27 January 2012

ಕಿರುಬೆರಳ ಸನಿಹದಲ್ಲಿ ಜೊತೆಯಾಗಿ ನೀನಿರಲು...


ಇಳಿಸಂಜೆಯ ತಂಗಾಳಿ
ಮೈಮನಗಳ ತಾಕುತಿರಲು...
ಕಿರುಬೆರಳ ಸನಿಹದಲ್ಲಿ  
ಜೊತೆಯಾಗಿ ನೀನಿರಲು...
ಪ್ರೀತಿ ಸುಧೆಯಲ್ಲಿ..
ಮನಸು ಬೆರೆತಿರಲು..
ನಿನ್ನೊಲವ ಕಂಡು.. 
ನಸುನಾಚಿ ಕೊಂಡ೦ತಿತ್ತು ...
ಹೊಂಬೆಳಕಿನಲ್ಲಿ ಮುಗಿಲು...



ಜಗಳಕ್ಕೇಕೆ ಜೊತೆಯಾಗಲೇ ಇಲ್ಲ ನೀನು.. ..?

ಇವತ್ತು ನನ್ನ ಅಕ್ಕರೆಯ ಅಕ್ಕನ ಹುಟ್ಟುಹಬ್ಬ... ಅವಳಿಗಾಗಿ.....



 ನನ್ನ ಎಲ್ಲ ಹುಚ್ಚು ಮನಸಿನ 
       ಹತ್ತು ಯೋಚನೆಗಳನ್ನು 
       ಸಹಿಸಿಕೊಂಡವಳು ನೀನು...
      ಎಲ್ಲ ಭಾವಗಳನ್ನು 
      ಹಂಚಿಕೊಂಡವಳು ನೀನು...
      ಅಮ್ಮನಿಗಿಂತ ಮಿಗಿಲಾಗಿ 
      ಪ್ರೀತಿ ಕೊಟ್ಟವಳು ನೀನು..
      ನಿನ್ನೊಂದಿಗಿದ್ದರೆ ನೋವಿಗೆ ಜಾಗವೇ ಇಲ್ಲ
      ನಕ್ಕ ನಗುವಿಗೆ ಲೆಕ್ಕವೇ ಇಲ್ಲ..
     ಇಷ್ಟೆಲ್ಲಾ ಮಾಡಿದವಳು.
     ಜಗಳಕ್ಕೇಕೆ ಜೊತೆಯಾಗಲೇ ಇಲ್ಲ ನೀನು.. ..?

Wednesday, 25 January 2012

ನಗು ಹುಟ್ಟಿದ್ದೇ ನಿನ್ನಿಂದಲಾ..?


 ಕಷ್ಟಗಳೇ ಮೈವೆತ್ತಿದ್ದ  ಬದುಕಿನಲಿ..
    ನಗೆ ದೀಪ ಬೆಳಗಿದವಳು ನೀನು..
     ಮೊದಲು ನಗಿಸಿದ್ದು ನೀನು..
    ನನ್ನೊಳಗೆ ನಗಲು ಕಲಿಸಿದ್ದು  ನೀನು..
    ನಿಜ ಹೇಳು ನಗು ಹುಟ್ಟಿದ್ದೇ ನಿನ್ನಿಂದಲಾ..??!!!

ನೆನಪಾದರೆ ಸಾಕು...


ನಿನ್ನ ನೆನಪಾದರೆ ಸಾಕು...
    ಕಟ್ಟಿದರೂ ನಿಲ್ಲದೆ
 ತಂಟೆ  ಮಾಡುವ
   ತುಂಟ ಕರುವಿನಂತಾಗುವುದು ಮನಸು.. 

ಜಲಧಾರೆ.....




 ಪ್ರಕೃತಿಯ ಸೆರಗಿನ 
ಬೆಳ್ಳಿ ಎಳೆಯ ಚಿತ್ತಾರವಾಗಿ...
ಕಪ್ಪು ಶಿಲೆಗಳ ಬಾಗು ಬಳುಕಿನಲ್ಲಿ..
ನಿಲ್ಲದೆ ನಿರಂತರವಾಗಿ..
ದಟ್ಟ ಕಾನನದ ಮೌನ ಮುರಿಯುತ.
ಹರಿಯುತಿದೆ ಜಲಧಾರೆ..
ಹಾಲುಬಿಳುಪಿನಲಿ  ನೊರೆನೊರೆಯಾಗಿ..

Photo By Digwas Hegde

ನಿನ್ನದೇ ವರ......


ನಿನ್ನದೇ ವರವಾದ
 ಈ ಅಗಲಿಕೆಯ ನೋವಲ್ಲೂ.....
   ಅಳುವ ಮನಸ್ಸಿಗೆ 
   ನಿನ್ನ ಹೆಗಲೇ ಬೇಕಂತೆ....!!!!!


ನೆನಪು ನೀನು...


ಬೆಳಿಗ್ಗೆ ಎದ್ದರೆ ಬೆರಳತುದಿಯ ನೆನಪು ನೀನು...
    ಕಣ್ಣು ಮುಚ್ಚಿದರೆ ರೆಪ್ಪೆಯಂಚಿನ ಕನಸು ನೀನು...
   ಎದೆ ಬಾಗಿಲ ರಂಗವಲ್ಲಿ ನೀನು...
   ಸೆರಗ ತುದಿಯ ನಾಚಿಕೆಯ ಚಿತ್ತಾರ ನೀನು...
   ನೀನು ಮನದ ಮುಗಿಲ ತುಂಬಾ ಬರೀ ನೀನು..  

Tuesday, 24 January 2012

ಬೆಳ್ಳಿ ಮೋಡ........



ಬಿಳಿ ಮುಗಿಲ ಅಂಗಳದಿ..
ಮೈ ಚಾಚಿ ಮಲಗಿರುವ...
ಹಸಿರೊಡಲ ಗಿರಿಶೃಂಗಗಳ...
ಚುಂಬಿಸುವ ಸಂಭ್ರಮ ಬೆಳ್ಳಿ ಮೋಡಗಳಿಗೆ...
Photo by Ganapathi Hegde

ನೀನ್ಯಾರೋ....?


      ನಸುಕಿನಲ್ಲೇ ಮನದ ಮೂಲೆಯಲ್ಲಿ 
       ಅವಿರ್ಭವಿಸಿ ಇಡಿ ದಿನದ ಕೆಲಸಗಳಲ್ಲಿ
       ನೆನಪಾಗಿ ಸುಳಿದು ಬೆರಳ ಅಂಚನ್ನು 
     ತಾಕುವವ ನೀನ್ಯಾರೋ...?

     ಮುಸ್ಸಂಜೆಯ ಏಕಾಂತದಲ್ಲಿ 
     ತಂಗಾಳಿಯೊಂದಿಗೆ ಮುಂಗುರುಳುಗಳು 
     ರಚಿಸುವ ಚಿತ್ತಾರಗಳಲ್ಲಿ ಚಿತ್ರವಾಗಿ 
     ಅರಳುವವ ನೀನ್ಯಾರೋ....?

    ಸುಂದರ ರಾತ್ರಿಗಳಲ್ಲಿ 
    ಸ್ವಪ್ನಕುಂಚವನಿಡಿದು  ಮನದ ಭಿತ್ತಿಗಳಲ್ಲಿ 
    ಚಿತ್ರಗಳ ಮೂಡಿಸುವ 
    ಕಲಾವಿದ ನೀನ್ಯಾರೋ..?    
 

ಅವಳೆಂದರೆ ಹಾಗೆ..



       ಅವಳೆಂದರೆ ಹಾಗೆ..
      ಗುರುವಾಗುತ್ತಾಳೆ...
      ಗುರಿಯೆಡೆಗೆ ನಡೆವಾಗ ದಾರಿದೀಪವಾಗುತ್ತಾಳೆ..
      ಎಡವಿದಾಗ ಕೈ ಹಿಡಿದು ನಡೆಸುತ್ತಾಳೆ..
      ಪ್ರತಿಹೆಜ್ಜೆಗೂ ಹರಕೆ ಹಾರೈಕೆಗಳ ಮಹಾಪೂರ ಹರಿಸುತ್ತಾಳೆ..
       ಪ್ರತಿ ಮೆಟ್ಟಿಲೇರಿದಾಗಲೂ  ಬೆನ್ನು ತಟ್ಟುತ್ತಾಳೆ..

      ಅವಳೆಂದರೆ ಹಾಗೆ...
     ಗೆಳತಿಯಾಗುತ್ತಾಳೆ..
     ನಗುವಿಗೆ ನಗು ಸೇರಿಸುತ್ತಾಳೆ..
     ನೋವಿಗೆ ಹೆಗಲು ನೀಡುತ್ತಾಳೆ...
    ತುಂಟಾಟಗಳಿಗೆ ಕನ್ನಡಿಯಾಗುತ್ತಾಳೆ..
    ಭಾವನೆಗಳಿಗೆ ಕಿವಿಯಾಗುತ್ತಾಳೆ...

    ಅವಳೆಂದರೆ ಹಾಗೆ..
    ಮಮತಾಮೂರ್ತಿಯಾಗುತ್ತಾಳೆ..
    ಸಹನಾ ಧರಿತ್ರಿಯಾಗುತ್ತಾಳೆ..
   ಅತ್ತಾಗ ಅಕ್ಕರೆಯಿಂದ ಸಂತೈಸುತ್ತಾಳೆ..
   ಬೇಸರದಿ ಮೈದಡವಿ  ಮುದ್ದಿಸುತ್ತಾಳೆ..
   ಮಡಿಲು ನೀಡಿ ತಲೆ ನೆವರಿಸುತ್ತಾಳೆ..
   ಕಾರಣ ಅವಳು ಅಮ್ಮನಾಗಿರುತ್ತಾಳೆ...